Monday, November 28, 2011

ನೀರಿನ ಬೆಲೆ

ಶ್ರೀಹರಿ ಎಂಟನೆ ತರಗತಿಯಲ್ಲಿದ್ದಾಗ ನಡೆದ  ಒಂದು ಘಟನೆ .

ಶ್ರೀಹರಿಗೆ ಮನೆಯಲ್ಲಿ ನೀರಿನ ಕೊರತೆ ಇದ್ದದ್ದೇ , ಆ ಸಮಯದಲ್ಲಿ ನೀರು ರಾತ್ರಿಗೆ ಒಂದೇ ಸಮಯ ಬರುತ್ತಿತ್ತು. ಆದರು ಶ್ರೀಹರಿಗೆ ನೀರನ್ನು ತ್ಯಾಜ್ಯ ಮಾಡುವುದು ಹವ್ಯಾಸ ಆಗಿ ಹೋಗಿತ್ತು, ಅವನ ಅಮ್ಮ ಎಷ್ಟು ಸಲ ಹೇಳಿದರು ಅವನು ತನ್ನನ್ನು ಸುಧಾರಿಸುತ್ತಿರಲಿಲ್ಲ.

ಹೀಗೆಯೇ ಶಾಲೆಯಲ್ಲಿ ಕರಾಡ್ಗೆ ಪಿಕ್ನಿಕ್ ಹೋಗಲಿಕ್ಕಿದೆ ಎಂಬ ಸುದ್ದಿ ಬಂತು, ಕರಾಡ್  ಮಹಾರಾಷ್ಟ್ರದ ಸತಾರ ಡಿಸ್ಟ್ರಿಕ್ಟ್ ಲ್ಲಿದ್ದ ಒಂದು ಪಟ್ಟಣ, ಇದು ಕೊಯನ ನದಿ ಮತ್ತು ಕೃಷ್ಣ ನದಿಯ ಸಂಗಮವಾಗುವ ಸ್ಥಾನದಲ್ಲಿ ನೆಲೆಸಿದೆ.

ಶ್ರೀಹರಿ ಹಾಗು ಅವನ ಸಹಪಾಟಿಯವರು ತುಂಬಾ ಉತ್ಸಾಹದಲ್ಲಿದ್ದರು, ಆ ದಿವಸ ಬೆಳ್ಳಿಗೆ ೬ ಗಂಟೆಗೆ ಎಲ್ಲರೂ ಶಾಲೆಗೆ ಮುಟ್ಟಿದರು, ದೊಡ್ಡದೊಂದು ಬಸ್ ಅಲ್ಲಿ ನಿಂತಿತ್ತು,  ಶ್ರೀಹರಿಯ ೩ ಶಿಕ್ಷಕರು ಅಲ್ಲಿಗೆ ಬಂದು ಕೆಲವು ಹಿತ ವಚನ ಕೊಟ್ಟು ಎಲ್ಲರು ಬಸ್ಸಲ್ಲಿ ಹೋಗಲು ಸಿದ್ದರಾಗಿ ಎಂದು ಹೇಳಿದರು, ಎಲ್ಲರು  ಬಸ್ ಹತ್ತಿ ಹೊರಡಲು ಸಿದ್ದರಾದರು.

ಮಧ್ಯಾಹ್ನದ 12 ಗಂಟೆ ಸಮಯ ಆಗುವಾಗ ಬಸ್ ಕರಾಡ್ ಬಂದು ನಿಂತಿತು, ಎಲ್ಲ ಮಕ್ಕಳು ಸೋತು ಹೋಗಿದ್ದರು, ಆದರೂ ಉತ್ಸಾಹದಲ್ಲಿದ್ದರು, ಅಲ್ಲಿ ನೋಡಲು ಏನು ವಿಶೇಷ ಇರಲಿಲ್ಲ, ಮಕ್ಕಳಿಗೆ ಅರ್ಥ ಆಗಲಿಲ್ಲ ಅವರಿಗೆ ಇಲ್ಲಿ ಏನು ತೋರಿಸಲು ಕರೆದು ಕೊಂಡು ಬಂದಿದ್ದಾರೆ ಎಂದು. ಆಗ ಶ್ರೀಹರಿಯ ಗಣಿತ ಟೀಚರ್ ದೇಶಪಾಂಡೆಯವರು ಬಂದು ಎದುರಿನ ಸಣ್ಣ ಬೆಟ್ಟ ತೋರಿಸಿ "ನಾವು ಈಗ ಈ ಬೆಟ್ಟ ಏರಿ ಅಲ್ಲಿ ಇದ್ದ ಒಂದು ಕೋಟೆ ನೋಡಲು ಹೋಗುತ್ತಿದ್ದೇವೆ, ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರವರು ಒಂದು ಸಮಯ ಬಂದು ತಂಗಿದ್ದರು ಎಂದು ಇತಿಹಾಸ ವರ್ಣಿಸಿ  ಎಲ್ಲರು ನಮ್ಮ ಹಿಂದೆ ಸಾಲು ಸಾಲಾಗಿ ಬೆಟ್ಟವನ್ನು ಏರಬೇಕು." ಎಂದು ಹೇಳಿದರು.

ಎಲ್ಲ ಮಕ್ಕಳು ಶಿಕ್ಷಕರ ಹಿಂದೆ ಹಿಂದೆ ಬೆಟ್ಟ ಏರಲು ಪ್ರಾರಂಭಿಸಿದರು, ಮಧ್ಯಾಹ್ನದ ಸಮಯ, ಸೂರ್ಯ ನೆತ್ತಿಯ ಮೇಲೆ ಬಿಸಿಲು ತುಂಬಾ, ಅರ್ಧ ಗಂಟೆ ಬೆಟ್ಟ ಏರಿದ ಮೇಲೆ ಎಲ್ಲರಿಗೂ ಸಾಕು ಸಾಕಾಯಿತು, ಅದರ ಮೇಲೆ ಎಲ್ಲರಿಗೂ ಬಾಯಾರಿಕೆ, ಮಕ್ಕಳಲ್ಲಿದ್ದ ನೀರು ಮುಗಿದಿತ್ತು, ಆದರೂ ಮಕ್ಕಳು ಉತ್ಸಾಹದಿಂದ ಮುಂದೆ ಹೊರಟರು, ಈಗ ಶಿಕ್ಷಕರೆಲ್ಲ ಹಿಂದೆ ಉಳಿದರು, ಅವರ ತ್ರಾಣ ಮುಗಿದಿತ್ತು, ಅವರು ಮೆಲ್ಲ ಮೆಲ್ಲನೆ ಬೆಟ್ಟ ಏರುತ್ತಿದ್ದರು.

ಶ್ರೀಹರಿ ಹಾಗು ಅವನ ಮಿತ್ರ ದಿವಾಕರ್ ಅವರು ತುಂಬಾ ಮುಂದೆ ಇದ್ದರು, ದಿವಾಕರ "ಇನ್ನೂ ನನ್ನಿಂದ ಸಾದ್ಯವಿಲ್ಲ ನಡೆಯಲು" ಎಂದು ಹೇಳಿದ,  ಶ್ರೀಹರಿಯು ಸುಸ್ತಾಗಿದ್ದ, ಅದರ ಮೇಲೆ ಬಾಯಾರಿಕೆ, ಒಣಗಿದ ಕಂಠ, ಏನು ಮಾಡುವುದೆಂದು ಅರ್ಥ ಆಗಲಿಲ್ಲ, ಶಿಕ್ಷಕರ ಮೇಲೆ ಕೋಪವು ಬಂತು "ಏಕೆ ಈ ಸ್ಥಾನದಲ್ಲಿ ಕರೆದು ಕೊಂಡು ಬಂದಿದ್ದಾರೆ ಎಂದು, ಅವರು ಒಂದು ಕಲ್ಲಿನ ಮೇಲೆ ಹೋಗಿ ಕುಳಿತುಕೊಂಡರು, ಸ್ವಲ್ಪ ಸಮಯದ  ನಂತರ ಇನ್ನೂ ಹಲವು ಮಕ್ಕಳು ಬಂದರು, ಎಲ್ಲರೂ ದಣಿದಿದ್ದರು, ಅವರಿಂದ ನಡೆಯಲು ಸಾದ್ಯವಾಗುತ್ತಿರಲಿಲ್ಲ, ಅವರೂ ಅಲ್ಲೇ ಕೆಳಗೆ ಕೂತು ಕೊಂಡರು.

ಆಗ ಒಂದು ಹುಡುಗ ತಾರಾನಾಥ್ ಅಳಲು ಪ್ರಾರಂಭಿಸಿದ, ಎಲ್ಲರೂ ಅವನಿಗೆ "ಏನಾಯಿತು , ಏನಾಯಿತು "ಎಂದು ಕೇಳಿದರು. ಆಗ ಅವನು ಅವನಿಗೆ ಬಾಯಾರಿಕೆ ಆಗುತ್ತಿದೆ ನೀರು ಬೇಕೆಂದು ಹೇಳಿದ, ಯಾರಿಗೂ ಅರ್ಥ ಆಗಲಿಲ್ಲ ಈಗ ಏನೂ ಮಾಡುವುದೆಂದು, ಯಾರ ಹತ್ತಿರ ನೀರು ಇರಲಿಲ್ಲ, ಅವರು ಜೋರಿನಿಂದ ಶಿಕ್ಷಕರನ್ನು ಕರೆದರು ಆದರೆ ಅವರು ಇನ್ನೂ ತುಂಬಾ ದೂರದಲ್ಲಿದ್ದರು.

ಶ್ರೀಹರಿಗೆ ತಾರಾನಾಥನನ್ನು ನೋಡಿ ತುಂಬಾ ಬೇಜಾರವಾಗುತ್ತಿತ್ತು, ಅವನಿಗೂ ಬಾಯಾರಿಕೆ ಆಗುತ್ತಿತ್ತು, ಏನು ಮಾಡುವುದು ಎಂದು ಯೋಚಿಸುತ್ತಲೇ ಅವನಿಗೆ ಅಲ್ಲಿ ಇದ್ದ ಒಂದು ಗುಂಡಿಯಂತ ಸ್ಥಾನ ಕಂಡು ಬಂತು, ಅವನು ಅಲ್ಲಿ ಹೋಗಿ ನೋಡಿದರೆ ಅದರಲ್ಲಿ ನೀರು ಇತ್ತು, ಆದರೆ ಅದು ನಿಂತ ಚರಂಡಿ ನೀರು , ಶ್ರೀಹರಿ "ಇದ್ದನ್ನು ಕುಡಿಯುವುದೇ , ಚಿ ...ಇದನ್ನು ಹೇಗೆ ಕುಡಿಯುವುದು ", ಅವನಿಗೆ ಈಗ ನೀರಿನ ಬೆಲೆ ತಿಳಿದಿತ್ತು, ಅವನು ಎಷ್ಟು ನೀರು ತ್ಯಾಜ್ಯ ಮಾಡುತಿದ್ದ ಎಂದು ನೆನೆದು ಅವನಿಗೆ ಈಗ ಬೇಜಾರಾಯಿತು.

ಶ್ರೀಹರಿ ಜೋರಿನಿಂದ "ಗೆಳೆಯರೇ ಇಲ್ಲಿ ಬನ್ನಿ ಇಲ್ಲಿ ನೋಡಿ " ಎಂದು ಬೊಬ್ಬೆ ಹಾಕಿದ. ಎಲ್ಲರು ಅವನು ಇದ್ದಲ್ಲಿ ಧಾವಿಸಿದರು, ಆ ಚರಂಡಿ ನೀರನ್ನು ನೋಡಿ ಎಲ್ಲರ ಮುಖ ಸಪ್ಪಗಾಯಿತು, ತಾರಾನಾಥ್ "ಶ್ರೀಹರಿ ದಯಮಾಡಿ ಆ ನೀರು ತೆಗೆದು ಕೊಡು, ನನ್ನಿಂದ ಬಾಯಾರಿಕೆ ತಡೆಯಲು ಸಾದ್ಯವಿಲ್ಲ" ಎಂದು ಬೇಡಿದ, ಶ್ರೀಹರಿ ಅವನಲ್ಲಿದ್ದ ಬಾಟಲಿಯಿಂದ ಬಗ್ಗಿ ಆ ಚರಂಡಿ ನೀರನ್ನು ತೆಗೆದ, ಅದರ ಬಣ್ಣ ಕಂದು ಕಪ್ಪಾಗಿತ್ತು, ತಾರಾನಾಥ್ ಏನೂ ಯೋಚನೆ ಮಾಡದೆ ಶ್ರೀಹರಿಯ ಕೈಯಿಂದ ಬಾಟಲಿ ಕಿತ್ತು ಕಣ್ಣು ಮುಚ್ಚಿ ಆ ನೀರನ್ನು ಕುಡಿದ ಹಾಗು "ಅಯಪ್ಪ" ಎಂದು ಸಮಾಧಾನದಿಂದ ಅಲ್ಲೇ ಕೂತು ಕೊಂಡ, ಈಗ ಎಲ್ಲ ಮಕ್ಕಳು ಆ ನೀರು ತೆಗೆದು ತೆಗೆದು ಕಣ್ಣು ಮುಚ್ಚಿ ಆ ನೀರನ್ನು ಕುಡಿದರು, ಶ್ರೀಹರಿಯು ಕುಡಿದ,  ಎಲ್ಲರಿಗೂ ಈಗ ಸಮಾಧಾನವಾಗಿತ್ತು.

ಹೇಗೋ ಸವಾರಿ ಮುಂದೆ ಸಾಗಿತ್ತು, ಕೋಟೆ ನೋಡಿದಾಯಿತು ಹಾಗು ಪಿಕ್ನಿಕ್ ಹೋಗಿ ಬಂದು ಆಯಿತು.

ಆದರೆ ಶ್ರೀಹರಿಯ ಜೀವನದಲ್ಲಿ  ಈ ಪಿಕ್ನಿಕ್  ಒಂದು ಅದ್ಭುತ ಸ್ಮರಣೀಯ ಘಟನೆಯಾಗಿ ಉಳಿಯಿತು .

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...