Showing posts with label ಮಹಾಭಾರತದಿಂದ. Show all posts
Showing posts with label ಮಹಾಭಾರತದಿಂದ. Show all posts

Monday, August 11, 2014

ವೀರ ಬರ್ಬರಿಕ


ವೀರ ಬರ್ಬರಿಕ
-------------------
ಭೀಮನ ಮೊಮ್ಮಗ ಹಾಗು ಘಟೋತ್ಕಚನ ಮಗ ಬರ್ಬರಿಕನ ತಾಯಿಯ ಹೆಸರು  ಕಾಮಕಟಂಕಟಿ ಎಂದಿತ್ತು. ಅವರನ್ನು ಮೊರ್ವಿ ಎಂದು ಕರೆಯಲಾಗುತ್ತಿತ್ತು.  ಬರ್ಬರಿಕನನ್ನು ಮೊರ್ವಿನಂದನ್ ಎಂದೂ ಕರೆಯಲಾಗುತ್ತಿತ್ತು. ಅವನು ಯುದ್ಧ ಕಲೆ ತನ್ನ ತಾಯಿಯಿಂದ ಕಲಿತುಕೊಂಡಿದ್ದ. ಕಠಿನ ತಪಸ್ಸು ಮಾಡಿ ಬರ್ಬರಿಕ ದೇವ ಶಿವನನ್ನು ಒಲಿಸಿ ಅವರಿಂದ ಮೂರು ಅಮೋಘ ಬಾಣ ಪಡೆದಿದ್ದ, ಈ ಕಾರಣ ಅವನನ್ನು ಮೂರು ಬಾಣಧಾರಿ ಎಂದೂ ಕರೆಯಲಾಗುತ್ತಿತ್ತು. ಅಗ್ನಿ ದೇವರು ಪ್ರಸನ್ನವಾಗಿ ಅವನಿಗೆ ಬಿಲ್ಲು ನೀಡಿದ್ದರು. ಬರ್ಬರಿಕನಲ್ಲಿ ಮೂರು ಲೋಕ ಗೆಲ್ಲುವ ಸಾಮರ್ಥ್ಯ ಇತ್ತು.

ಕೌರವ ಮತ್ತು ಪಾಂಡವರ ಮಧ್ಯೆ ಯುದ್ಧದ ತಯಾರಿ ಜೋರಲ್ಲಿ ನಡೆದಿತ್ತು. ಎಲ್ಲ ಕಡೆ ಯುದ್ಧದ ಚರ್ಚೆ ನಡೆದಿತ್ತು. ಈ ಸುದ್ಧಿ ಬರ್ಬರಿಕನಿಗೆ ಸಿಕ್ಕಿದಾಗ ಅವನಿಗೂ ಯುದ್ಧದಲ್ಲಿ ಪಾಲ್ಗೊಳ್ಳುವ ಮನಸ್ಸಾಯಿತು. ಅವರು ತಾಯಿಯಿಂದ ಯುದ್ಧದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆಯಲು ಹೋದ. ಅವನು ತಾಯಿಯಿಂದ ಆಶೀರ್ವಾದ ಪಡೆದ ಹಾಗು ಕೇವಲ ದುರ್ಬಲ ಪಕ್ಷದವರ ಕಡೆಯಿಂದಲೇ ಯುದ್ಧ ಮಾಡುವೆಯೆಂದು ಅವರಿಗೆ ವಚನ ನೀಡಿದ.

ಬರ್ಬರಿಕ ತನ್ನ ನೀಲವರ್ಣ ಕುದುರೆಯ ಮೇಲೆ ಕುಳಿತು ಮೂರು ಬಾಣ ಹಾಗು ಬಿಲ್ಲು ಒಟ್ಟಿಗೆ ಇಟ್ಟು ಹೊರಟ. ಮಾರ್ಗದಲ್ಲಿ ಅವನನ್ನು ಒಬ್ಬ ಬ್ರಾಹ್ಮಣ ತಡೆದು ಅವರ ಪರಿಚಯ ಕೇಳಿದ. ಈ ಬ್ರಾಹ್ಮಣ ಬೇರೆ ಯಾರೂ ಅಲ್ಲ, ನಮ್ಮ ಲೀಲಾಧರ ಶ್ರೀಕೃಷ್ಣನೆ ಆಗಿದ್ದ. ಕೇವಲ ಮೂರು ಬಾಣ ಜೊತೆಯಲ್ಲಿಟ್ಟು ಯುದ್ಧ ಮಾಡಲು ಹೊರಟೆಯಲ್ಲವೇ ಎಂದು ಶ್ರೀಕೃಷ್ಣ ಅವನಿಂದ ವ್ಯಂಗದಿಂದ ಕೇಳಿದ. ಇದನ್ನು ಕೇಳಿ ಬರ್ಬರಿಕ "ಶತ್ರು ಸೇನವನ್ನು ನೆಲಸಮಗೊಳಿಸಲು ನನಗೆ ನನ್ನ ಈ ಮೂರು ಬಾಣವೇ ಸಾಕು" ಎಂದು ಉತ್ತರಿಸಿದ ಹಾಗು "ಒಂದು ವೇಳೆ ನಾನು ಈ ಮೂರು ಬಾಣಗಳ ಪ್ರಯೋಗ ಮಾಡಿದ್ದರೆ ತ್ರಿಲೋಕದಲ್ಲಿ ಹಾಹಕಾರ ಉಂಟಾಗಬಹುದು" ಎಂದು ಹೇಳಿದ.

ಇದನ್ನು ಕೇಳಿ ಕೃಷ್ಣ ತನ್ನ ಮೋಹಕ ನಗು ಬೀರಿ ಎದುರಿದ್ದ ಅರಳೀ ಮರದ ಕಡೆ ಸಂಕೇತ ಮಾಡಿ ಅವನಿಗೆ  "ಹೌದೆ, ಹಾಗಾದರೆ ಈ ಮರದ ಎಲ್ಲಾ ಎಳೆಗಳ ಮೇಲೆ ತೂತು ಮಾಡಿ ತೋರಿಸಿದರೆ ನಾನು ನಂಬುವೆ ಇಲ್ಲಾದರೆ ಹೇಗೆ ನಂಬುವುದು" ಎಂದು ಸವಾಲೆಸೆದ. ಬರ್ಬರಿಕ ಸವಾಲನ್ನು ಸ್ವೀಕರಿಸಿ ತನ್ನ ಬತ್ತಳಿಕೆಯಿಂದ ಒಂದು ಬಾಣ ತೆಗೆದು ಎಳೆಗಳ ಮೇಲೆ ಬಿಟ್ಟ. ಒಂದೇ ಕ್ಷಣದಲ್ಲಿ ಬಿಟ್ಟ ಬಾಣ ಎಲ್ಲಾ ಎಳೆಗಳ ಮೇಲೆ ರಂಧ್ರ ಮಾಡಿ ಕೃಷ್ಣನ ಹಿಂದೆ ಮುಂದೆ ಸುಳಿಯಲಾರಂಭಿಸಿತು. ಯಾಕೆಂದರೆ ಲೀಲಾಧರ ಶ್ರೀಕೃಷ್ಣ ಒಂದು ಎಳೆಯನ್ನು ತನ್ನ ಪಾದದ ಅಡಿಯಲ್ಲಿ ಅಡಗಿಸಿಟ್ಟಿದ್ದ.

ಬರ್ಬರಿಕ ಶ್ರೀಕ್ರಷ್ಣನಿಗೆ "ನಿಮ್ಮ ಕಾಲು ತೆಗೆಯಿರಿ ಇಲ್ಲಾದರೆ ಈ ಬಾಣ ನಿಮಗೂ ಗಾಯಗೊಳಿಸಬಹುದು" ಎಂದು ಹೇಳಿದ. ಎಲ್ಲ ಸ್ಥಿತಿ ಪರೀಕ್ಷಿಸಿ ಶ್ರೀಕೃಷ್ಣ ತನ್ನ ವಾಣಿಯ ಬಾಣ ಬಿಟ್ಟು ಬರ್ಬರಿಕನಿಗೆ ಕೇಳಿದ "ನೀನು ಯಾರ ಪಕ್ಷದಿಂದ ಯುದ್ಧ ಮಾಡುವೆ". ಬರ್ಬರಿಕ ತನ್ನ ತಾಯಿಗೆ ನೀಡಿದ ವಚನದ ಬಗ್ಗೆ ತಿಳಿಸಿ "ಯಾರು ಈ ಯುದ್ಧದಲ್ಲಿ ದುರ್ಬಲವಾಗಿರುವರೋ ನಾನು ಅವರ ಪರವಾಗಿ ಯುದ್ಧ ಮಾಡುವೆ" ಎಂದು ಹೇಳಿದ.
ಕೃಷ್ಣನಿಗೆ ತಿಳಿದಿತ್ತು ಒಂದು ವೇಳೆ ಬರ್ಬರಿಕ ಕೌರವರ ಪರವಾಗಿ ಯುದ್ಧ ಮಾಡಿದರೆ ಗೆದ್ದ ಬಾಜಿ ಸಹ ಅವನ ಕೈಯಿಂದ ಕಸಿಯಬಹುದು. ಬ್ರಾಹ್ಮಣ ವೇಷದಲ್ಲಿದ್ದ ಶ್ರೀಕೃಷ್ಣ ಬರ್ಬರಿಕನಿಂದ ವಚನ ಕೇಳಿ ಪಡೆದ ಹಾಗು ದಾನದಲ್ಲಿ ಅವನ ಶಿರ ಬೇಕೆಂದು ಕೇಳಿಕೊಂಡ. ಕ್ಷಣಕ್ಕಾಗಿ ಬರ್ಬರಿಕನಿಗೆ ಆಘಾತವಾಯಿತು, ಆದರೆ ಅವನು ವಚನ ಕೊಟ್ಟು ಬಿಟ್ಟಿದ್ದ. ವಚನದಿಂದ ನಿರಾಕರಿಸಲು ಅವನಿಗೆ ಇಷ್ಟವಿರಲಿಲ್ಲ. ಬರ್ಬರಿಕ ಯೋಚಿಸಿದ ಇವರು ಸಾಧಾರಣ ಬ್ರಾಹ್ಮಣ ಅಲ್ಲ, ಅದಕ್ಕೆ ಅವನು ಬ್ರಾಹ್ಮಣನಿಂದ ತನ್ನ ವಾಸ್ತವ ರೂಪಕ್ಕೆ ಬರಲು ವಿನಂತಿಸಿದ. ಶ್ರೀಕೃಷ್ಣ ಕೇವಲ ತನ್ನ ವಾಸ್ತವ ರೂಪವನ್ನೇ ಅಲ್ಲ ತನ್ನ ವಿರಾಟ ರೂಪದ ದರ್ಶನವನ್ನು ಬರ್ಬರಿಕನಿಗೆ ನೀಡಿದ.

ಬರ್ಬರಿಕ ಕೃಷ್ಣನಿಂದ ಅವನಿಗೆ ಕೊನೆ ತನಕ ಯುದ್ಧ ನೋಡಲ್ಲಿಕ್ಕೆ ಇದೆ ಎಂದು ಮನವಿ ಮಾಡಿದ. ಕೃಷ್ಣ ಅವನ ಈ ಮಾತನ್ನು ಸ್ವೀಕರಿಸಿದ. ಫಾಲ್ಗುಣ ಮಾಸದ ದ್ವಾದಶಿಯಂದು ಅವನು ತನ್ನ ಶಿರ ದಾನ ಮಾಡಿದ. ಶ್ರೀಕೃಷ್ಣ ಅವನ ಶಿರವನ್ನು ಅಮೃತದಿಂದ ತೊಯ್ದು ಯುದ್ಧದ ಸಮೀಪ ಒಂದು ಪರ್ವತದಲ್ಲಿ ಸ್ಥಾಪಿಸಿದ. ಅಲ್ಲಿಂದ ಬರ್ಬರಿಕ ಸಂಪೂರ್ಣ ಯುದ್ಧವನ್ನು ನೋಡಬಹುದಿತ್ತು.

ಯುದ್ಧ ಮುಗಿದಿತ್ತು. ಪಾಂಡವರಲ್ಲಿ ಯುದ್ಧದ ಗೆಲುವಿನ ಶ್ರೇಯ ಯಾರಿಗೆ ಸಲ್ಲಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಶ್ರೀಕೃಷ್ಣ "ಬರ್ಬರಿಕನ ಶಿರ ಸಂಪೂರ್ಣ ಯುದ್ಧದ ಸಾಕ್ಷಿ, ಅದಕ್ಕೆ ಅವನಿಂದ ಒಳ್ಳೆ ನಿರ್ಣಯಕ ಬೇರೆ ಯಾರೂ ಇಲ್ಲ" ಎಂದ. ಇದಕ್ಕೆ ಬರ್ಬರಿಕ ಶಿರ  "ನನಗೆ ಮಹಾಭಾರತದ ಯುದ್ಧದಲ್ಲಿ ಎಲ್ಲ ಕಡೆ ಕೇವಲ ಶ್ರೀಕೃಷ್ಣ ಕಂಡು ಬಂದರು, ಕೇವಲ ಅವರ ಸುದರ್ಶನ ಚಕ್ರ ತಿರುಗುವುದು ಕಂಡು ಬಂತು ಹಾಗು ಅವರ ಆದೇಶಕ್ಕೆ ದೇವಿ ಮಹಾಕಾಳಿ ಶತ್ರು ಸೇನೆಯ ರಕ್ತ ಸೇವನೆ ಮಾಡುವುದು ಕಂಡು ಬಂತು" ಎಂದು ಉತ್ತರಿಸಿತು.

ಶ್ರೀಕೃಷ್ಣ ಬರ್ಬರಿಕನ ಬಲಿದಾನದಿಂದ ತುಂಬಾ ಪ್ರಸನ್ನವಾಗಿದ್ದ ಹಾಗು ಅವನಿಗೆ "ಕಲಿಯುಗದಲ್ಲಿ ನಿನ್ನನ್ನು ಶ್ಯಾಮ ಎಂಬ ಹೆಸರಿನಿಂದ ಕರೆಯುವರು ಹಾಗು ಖಾಟು ಎಂಬ ನಗರದಲ್ಲಿ ನಿನ್ನ ಧಾಮ ನಿರ್ಮಾಣವಾಗುವುದು " ಎಂದು ವರದಾನ ನೀಡಿದ. ಅವನ ಶಿರ ಅಲ್ಲಿಯೇ ಧಫನ ಮಾಡಲಾಯಿತು.

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಖಾಟು ಎಂಬ ಊರಲ್ಲಿ  "ಖಾಟು ಶ್ಯಾಮ" ನವರ ಮುಖ್ಯ ದೇವಾಲಯ ಇದೆ.

ಆಧಾರ : ಮಹಾಭಾರತದಿಂದ


by ಹರೀಶ್ ಶೆಟ್ಟಿ ,ಶಿರ್ವ

Saturday, April 12, 2014

ದಾನವೀರ ಕರ್ಣ


ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಸೂರ್ಯಾಸ್ತದ ನಂತರ ಎಲ್ಲರು ತಮ್ಮ ತಮ್ಮ ಶಿಬಿರದಲ್ಲಿ ಇದ್ದರು. ಆ ದಿವಸ ಅರ್ಜುನ ಕರ್ಣನನ್ನು ಸೋಲಿಸಿ ತುಂಬಾ ಅಹಂಕಾರದಲ್ಲಿದ್ದ. ಅವನು ತನ್ನ ಶೌರ್ಯದ ಪ್ರಶಂಸೆ ಮಾಡುತ ಕರ್ಣನನ್ನು ತೆಗಳತೊಡಗಿದ. ಇದನ್ನು ನೋಡಿ ಕೃಷ್ಣ "ಪಾರ್ಥ, ಕರ್ಣ ಸೂರ್ಯ ಪುತ್ರ, ಅವನ ಕವಚ ಹಾಗು ಕುಂಡಲ ಪಡೆದ ನಂತರವೇ ನಿನಗೆ ವಿಜಯ ಪಡೆಯಲು ಸಾಧ್ಯವಾಯಿತು ಇಲ್ಲಾದರೆ ಅವನನ್ನು ಪರಾಜಿತ ಮಾಡಲು ಯಾರಿಂದಲೂ ಸಾಧ್ಯವಿರಲಿಲ್ಲ, ವೀರೋಚಿತ ಜೊತೆಗೆ ಅವನು ದೊಡ್ಡ ದಾನವೀರ ಸಹ." ಕರ್ಣನ ದಾನವೀರತದ ಮಾತು ಕೇಳಿ ಅರ್ಜುನ ಕೆಲವು ಉದಾಹರಣೆ ನೀಡಿ ಕರ್ಣನ ಉಪೇಕ್ಷೆ ಮಾಡಲಾರಂಭಿಸಿದ. ಶ್ರೀಕೃಷನಿಗೆ ಅರ್ಜುನನ ಮನಸ್ಥಿತಿ ಅರ್ಥವಾಯಿತು. ಅವರು ಶಾಂತ ಸ್ವರದಲ್ಲಿ ಹೇಳಿದರು "ಪಾರ್ಥ, ಕರ್ಣ ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದಾನೆ. ನೀನು ಬೇಕಾದರೆ ಕರ್ಣನ ದಾನವೀರತೆಯ ಪರೀಕ್ಷೆ ತೆಗೆದುಕೊಳ್ಳಬಹುದು." ಅರ್ಜುನ ಶ್ರೀಕೃಷ್ಣನ ಮಾತು ಒಪ್ಪಿದ. 


ಇಬ್ಬರು ಬ್ರಾಹ್ಮಣರ ವೇಷ ಧರಿಸಿ ಕರ್ಣನಲ್ಲಿಗೆ ಬಂದರು. ಗಾಯಗೊಂಡಿದರೂ ಕರ್ಣ ಅವರಿಗೆ ಪ್ರಣಾಮ ಮಾಡಿ ಅವರು ಬರುವ ಉದ್ದೇಶ ಕೇಳಿದ. ಬ್ರಾಹ್ಮಣ ವೇಷದಲ್ಲಿದ ಶ್ರೀಕೃಷ್ಣ " ರಾಜನೇ, ನಿಮ್ಮ ಜಯವಾಗಲಿ,ನಾವು ಇಲ್ಲಿ ದಾನ ಪಡೆಯಲು ಬಂದಿದ್ದೇವೆ. ಕೃಪೆ ಮಾಡಿ ನಮ್ಮ ಇಚ್ಛೆ ಪೂರ್ಣಗೊಳಿಸಿ." ಕರ್ಣ ಸ್ವಲ್ಪ ಲಜ್ಜಿತನಾಗಿ "ಬ್ರಾಹ್ಮಣ ದೇವ, ನಾನು ರಣಕ್ಷೇತ್ರದಲ್ಲಿ ಗಾಯಗೊಂಡು ಬಿದ್ದಿದ್ದೇನೆ, ನನ್ನೆಲ್ಲ ಸೈನಿಕರು ಸಾವನ್ನಪ್ಪಿದ್ದಾರೆ, ಮೃತ್ಯು ನನ್ನನ್ನು ಕಾಯುತ್ತಿದೆ, ಈ ಅವಸ್ಥೆಯಲ್ಲಿ ನಾನು ಏನನ್ನು ನಿಮಗೆ ನೀಡಲಿ."

"ರಾಜನೇ, ಇದರ ಅರ್ಥ ನಾವು ಹೀಗೆಯೇ ಖಾಲಿ ಕೈ ಹೋಗಬೇಕೆಂದೇ? ಆದರೆ ಇದರಿಂದ ನಿಮ್ಮ ಕೀರ್ತಿಗೆ ಹಾನಿಯಾಗುತ್ತದೆ, ವಿಶ್ವ ನಿಮ್ಮನ್ನು ಧರ್ಮವಿಹೀನ ರಾಜನ ರೂಪದಲ್ಲಿ ನೆನಪಿಡುವರು." ಇದನ್ನು ಹೇಳಿ ಅವರು ಹಿಂತಿರುಗಿ ಹೋಗಲಾರಂಭಿಸಿದರು. ಆಗ ಕರ್ಣ ಹೇಳಿದ "ನಿಲ್ಲಿ ಬ್ರಾಹ್ಮಣ ದೇವ, ನನಗೆ ಯಶಸ್ಸು,ಕೀರ್ತಿಯ ಆಸೆ ಇಲ್ಲ, ಆದರೆ ನಾನು ಧರ್ಮದಿಂದ ವಿಮುಖವಾಗಿ ಸಾಯಲು ಬಯಸುವುದಿಲ್ಲ, ನಾನು ನಿಮ್ಮ ಇಚ್ಛೆ ಖಂಡಿತ ಪೂರ್ಣಗೊಳಿಸುವೆ." ಕರ್ಣನ ಎರಡು ಹಲ್ಲು ಚಿನ್ನದ ಇತ್ತು, ಅವನು ಬಳಿ ಬಿದ್ದ ಕಲ್ಲಿನಿಂದ ಆ ಚಿನ್ನದ ಹಲ್ಲನ್ನು ತುಂಡು ಮಾಡಿದ ಹಾಗು ಹೇಳಿದ "ಬ್ರಾಹ್ಮಣ ದೇವ, ನಾನು ಸದಾ ಚಿನ್ನದ ದಾನವೇ ಮಾಡಿದ್ದೇನೆ, ನೀವು ಈ ಚಿನ್ನದ ಹಲ್ಲನ್ನು ಸ್ವೀಕರಿಸಿ." ಶ್ರೀಕೃಷ್ಣ ದಾನ ಅಸ್ವೀಕರಿಸಿ "ರಾಜನೇ, ಈ ಹಲ್ಲುಗಳಲ್ಲಿ ರಕ್ತ ತಾಗಿದೆ ಹಾಗು ಇದನ್ನು ನೀವು ತನ್ನ ಮುಖದಿಂದ ತೆಗೆದಿದರಿಂದ ಇದು ಅಶುದ್ಧವಾಗಿದೆ, ನಾವು ಅಶುದ್ಧ ಸ್ವರ್ಣ ಸ್ವೀಕರಿಸಲಾರೆವು." ಆಗ ಕರ್ಣ ತನ್ನ ದೇಹವನ್ನು ಎಳೆದುಕೊಂಡು ಹೋಗಿ ತನ್ನ ಧನುಸ್ಸು ಇದ್ದಲ್ಲಿ ಹೋದ ಹಾಗು ಬಾಣ ಏರಿಸಿ ಗಂಗೆಯ ಸ್ಮರಣೆ ಮಾಡಿದ ನಂತರ ಬಾಣವನ್ನು ಭೂಮಿಗೆ ಬಿಟ್ಟ. ಭೂಮಿಗೆ ಬಾಣ ತಾಗಿದಂತೆ ಭೂಮಿಯಿಂದ ಗಂಗೆಯ ಜಲಧಾರೆ ಹರಿಯಲಾರಂಭಿಸಿತು, ಕರ್ಣ ಅದರಲ್ಲಿ ಆ ಹಲ್ಲುಗಳನ್ನು ತೊಳೆದು ಅವರಿಗೆ ಕೊಟ್ಟು "ಬ್ರಾಹ್ಮಣ ದೇವ, ಈಗ ಇದು ಶುದ್ಧವಾಗಿದೆ, ದಯಮಾಡಿ ಇದನ್ನು ಸ್ವೀಕರಿಸಿ." 

ಆಗ ಕರ್ಣನ ಮೇಲೆ ಪುಷ್ಪದ ವರ್ಷ ಬೀಳಲಾರಂಭಿಸಿತು ಹಾಗು ದೇವ ಶ್ರೀಕೃಷ್ಣ ಮತ್ತು ಅರ್ಜುನ ತನ್ನ ವಾಸ್ತವಿಕ ರೂಪದಲ್ಲಿ ಪ್ರಕಟವಾದರು. ವಿಸ್ಮಿತಗೊಂಡ ಕರ್ಣ ದೇವ ಶ್ರೀಕೃಷ್ಣನ ಮುಂದೆ ಶ್ರದ್ಧೆಯಿಂದ ಕೈ ಮುಗಿದು "ದೇವ, ನಿಮ್ಮ ದರ್ಶನ ಪಡೆದು ನಾನು ಧನ್ಯನಾದೆ, ನನ್ನ ಎಲ್ಲ ಪಾಪ ನಷ್ಟವಾಯಿತು ಪ್ರಭು, ನೀವು ಭಕ್ತರ ಕ್ಷೇಮ ಬಯಸುವವರು, ನನ್ನ ಮೇಲೆಯೂ ಕೃಪೆ ಮಾಡಿ." ಶ್ರೀಕೃಷ್ಣ ಕರ್ಣನಿಗೆ ಆಶಿರ್ವಾದ ನೀಡಿ ಹೇಳಿದರು "ಕರ್ಣ, ಸೂರ್ಯ, ಚಂದ್ರ, ತಾರೆ, ಪೃಥ್ವಿ ಇದ್ದ ತನಕ ನಿನ್ನ ದಾನವೀರತೆಯ ಗುಣಗಾನ ಮೂರು ಲೋಕದಲ್ಲಿಯೂ ನಡೆಯಲಿದೆ, ವಿಶ್ವದಲ್ಲಿ ನಿನ್ನಂತಹ ಮಹಾನ ದಾನವೀರ ಹುಟ್ಟಲಿಲ್ಲ , ಹುಟ್ಟಲಿಕ್ಕಿಲ್ಲ. ನಿನ್ನ ಈ ಬಾಣ ಗಂಗೆ ಯುಗ ಯುಗ ತನಕ ನಿನ್ನ ಗುಣಗಾನ ಮಾಡುತ್ತಿರುತ್ತದೆ. ಈಗ ನಿನಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಕರ್ಣ ದಾನವೀರತೆ ಹಾಗು ಧರ್ಮನಿಷ್ಠೆ ನೋಡಿ ಅರ್ಜುನ ಸಹ ಅವನ ಮುಂದೆ ಶರಣಾಗತನಾದ.

(ಮಹಾಭಾರತದಿಂದ)
ವ್ಯಾಖ್ಯಾನ : ಹರೀಶ್ ಶೆಟ್ಟಿ, ಶಿರ್ವ

Thursday, April 10, 2014

ಕರ್ಣ

ಮಹಾಭಾರತದ ಯುದ್ಧ ನಿಶ್ಚಿತವಾಗಿತ್ತು, ಇದನ್ನು ಕೇಳಿ ಕುಂತಿ ಚಿಂತಿತಳಾದಳು. ಅವಳಿಗೆ ಕರ್ಣ ಪಾಂಡವರ ಜೊತೆ ಯುದ್ಧ ಮಾಡುವುದು ಇಷ್ಟವಾಗಿರಲಿಲ್ಲ. ಅವಳು ಕರ್ಣನನ್ನು ಭೇಟಿಯಾಗಲು ಅವನಲ್ಲಿ ಹೋದಳು. ಕುಂತಿಯನ್ನು ನೋಡಿ ಕರ್ಣ ಗೌರವದಿಂದ ಎದ್ದು ಅವಳನ್ನು ಸ್ವಾಗತಿಸಿ ಹೇಳಿದ "ನೀವು ಪ್ರಥಮವಾಗಿ ಇಲ್ಲಿ ಬರುತ್ತಿದ್ದಿರಿ, ಈ ರಾಧೇಯನ ಪ್ರಣಾಮ ಸ್ವೀಕರಿಸಿ." ಕರ್ಣನ ಮಾತು ಕೇಳಿ ಕುಂತಿಯ ಮನಸ್ಸಿಗೆ ನೋವಾಯಿತು ಹಾಗು ಅವಳು "ಪುತ್ರ, ನೀನು "ರಾಧೇಯ" ಅಲ್ಲ ನೀನು "ಕೌಂತೇಯ", ನಾನು ನಿನ್ನ ತಾಯಿ ಆದರೆ ಲೋಕಾಚಾರದ ಭಯದಿಂದ ನಾನು ನಿನ್ನ ತ್ಯಾಗ ಮಾಡಿದೆ. ನೀನು ಪಾಂಡವರ ಹಿರಿಯಣ್ಣ, ಅದಕ್ಕೆ ಈ ಯುದ್ಧದಲ್ಲಿ ನೀನು ಕೌರವರ ಜೊತೆ ಅಲ್ಲ ತನ್ನ ಸಹೋದರರ ಜೊತೆ ಇರಬೇಕು. ಅಣ್ಣ ತಮ್ಮಂದಿರ ಮಧ್ಯೆ ಪರಸ್ಪರ ಯುದ್ಧವಾಗುವುದು ನಾನು ಬಯಸುವುದಿಲ್ಲ. ನೀನು ಪಾಂಡವರ ಪಕ್ಷದಲ್ಲಿರಬೇಕೆಂದು ನಾನು ಬಯಸುವೆ. ಹಿರಿಯನಾದ ಕಾರಣ ಪಾಂಡವರ ರಾಜ್ಯದ ಮೇಲೆ ನಿನ್ನ ಅಧಿಕಾರವಿದೆ. ನೀನು ಯುದ್ಧದಲ್ಲಿ ವಿಜಯಿಯಾಗಿ ರಾಜನಾಗಬೇಕೆಂದು ನನ್ನ ಇಚ್ಛೆ."
ಕುಂತಿಯ ಮಾತು ಕೇಳಿ ಕರ್ಣ ಉತ್ತರಿಸಿದ "ಮಾತೆ, ನೀನು ನನ್ನನ್ನು ತ್ಯಜಿಸಿದೆ, ಕ್ಷತ್ರಿಯರ ಉತ್ತಮ ಕುಲದಲ್ಲಿ ನಾನು ಹುಟ್ಟಿ ಸಹ ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ನಾನು. ಕ್ಷತ್ರಿಯನಾಗಿಯೂ ಸೂತಪುತ್ರ ಎಂದು ಕರೆಸಿಕೊಂಡಿದಕ್ಕೆ ನನ್ನನ್ನು ದ್ರೋಣಚಾರ್ಯ ಸಹ ತನ್ನ ಶಿಷ್ಯನಾಗಿ ಸ್ವೀಕರಿಸಲಿಲ್ಲ. ಯುವರಾಜ ದುರ್ಯೋಧನ ನನ್ನ ನಿಜವಾದ ಗೆಳೆಯ, ನಾನು ಅವನ ಉಪಕಾರ ಮರೆತು ಕೃತಘ್ನ ಆಗಲಾರೆ. ಆದರೆ ನನ್ನ ಬಳಿ ಬಂದದ್ದು ವ್ಯರ್ಥವಾಗದು ಯಾಕೆಂದರೆ ಇಂದಿನ ತನಕ ಕರ್ಣನಲ್ಲಿಗೆ ಬಂದು ಎಂದೂ ಖಾಲಿ ಕೈ ಯಾರೂ ಹೋಗಲಿಲ್ಲ. ನಾನು ನಿಮಗೆ ವಚನ ನೀಡುತ್ತೇನೆ ನಾನು ಅರ್ಜುನನ ಹೊರತು ನಿಮ್ಮ ಯಾವುದೇ ಪುತ್ರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಲಾರೆ. ನನ್ನ ಮತ್ತು ಅರ್ಜುನನ ಯುದ್ಧ ಅನಿವಾರ್ಯವಾಗಿದೆ ಹಾಗು ಆ ಯುದ್ಧದಲ್ಲಿ ನಮ್ಮಿಬ್ಬರಲ್ಲಿ ಒಬ್ಬನ ಮೃತ್ಯು ನಿಶ್ಚಿತವಾಗಿದೆ. ನೀವು ಐದು ಪುತ್ರರ ತಾಯಿಯಾಗಿ ಉಳಿಯುವಿರಿ ಎಂಬ ಪ್ರತಿಜ್ಞೆಯನ್ನು ನಾನು ಮಾಡುತ್ತೇನೆ."
ಕರ್ಣನ ಮಾತು ಕೇಳಿ ಕುಂತಿ ಅವನಿಗೆ ಆಶಿರ್ವಾದ ಕೊಟ್ಟು ದುಃಖಿತ ಮನಸ್ಸಿಂದ ಹಿಂತಿರುಗಿದಳು.
(ಮಹಾಭಾರತದಿಂದ)


ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

Saturday, April 5, 2014

ಅಶ್ವಥಾಮ


ದುರ್ಯೋಧನನ ತೊಡೆ ಭೀಮ ಮುರಿದಿದ್ದ. ಅಸಹನೀಯ ಶಾರೀರಿಕ ಹಾಗು ಮಾನಸಿಕ ಪೀಡೆಯಿಂದ ಬಳಲುತ್ತಿದ್ದ ದುರ್ಯೋಧನನಿಗೆ ಒಂದು ಯಕ್ಷಿಣಿ ಸಹಾನುಭೂತಿ ತೋರಿಸಿದ್ದರೂ, ಆ ಸಮಯ ಮೃತ್ಯು ಮುಖದಲ್ಲಿದ್ದ ದುರ್ಯೋಧನ ಅವಳ ಪ್ರೇಮ ನಿವೇದನೆ ತಿರಸ್ಕರಿಸಿದ್ದ. ಇದು ಆ ಯಕ್ಷಿಣಿಯ ತಪ್ಪಾಗಿತ್ತು, ಮೃತ್ಯು ಮುಖದಲ್ಲಿದ್ದವ ಹೇಗೆ ತಾನೇ ಪ್ರೀತಿ ಪ್ರೇಮ ಮಾಡುವನು.

ದುರ್ಯೋಧನನ ಪರಾಜಯದ ನಂತರ ಪಾಂಡವರ ವಿಜಯ ನಿಶ್ಚಿತವಾಗಿತ್ತು. ಎಲ್ಲ ಪಾಂಡವರು ವಿಜಯದ ಹರ್ಷದಲ್ಲಿದ್ದರು. ಯಾಕೆ ಇರಬಾರದು, ಕೊನೆಗೆ ಗೆಲುವು ಅಂದರೆ ಗೆಲುವೆ.

ಆಗ ದುರ್ಯೋಧನನ ಬಳಿ ಅಶ್ವಥಾಮ ಬರುತ್ತಾನೆ ಹಾಗು ಹೇಳುತ್ತಾನೆ "ಕುರು ಶ್ರೇಷ್ಠ , ನೀವು ಯುದ್ಧ ನಾವು ಸೋತೆವೆಂದು ತಿಳಿಯಬೇಡಿ, ನಾನು ಜೀವಂತ ಇರುವ ತನಕ ಇದು ಅಸಂಭವ, ನೀವು ನನ್ನನ್ನು ಸೇನಾಪತಿ ನಿಯುಕ್ತ ಮಾಡಿ, ನನಗೆ ಅಮರತ್ವದ ವರದಾನ ಪ್ರಾಪ್ತಿ ಇದೆ, ಈಗ ಯುದ್ಧದ ಸಂಚಲನೆ ನಾನು ಮಾಡುವೆ ಹಾಗು ನಿಮಗೆ ಜಯ ಗಳಿಸಿ ಕೊಡುವೆ."

ದುರ್ಯೋಧನನ ಕಣ್ಣಲ್ಲಿ ಕಾಂತಿ ಕಂಡು ಬಂತು ಹಾಗು ಅವನು ತನ್ನ ರಕ್ತದಿಂದ ಅಶ್ವಥಾಮನ ಲಲಾಟಕ್ಕೆ ತಿಲಕ ಮಾಡಿ ಅವನನ್ನು ಸೇನಾಪತಿ ನಿಯುಕ್ತ ಮಾಡುತ್ತಾನೆ. 

ಈಗ ಕೌರವರ ಸೇನಾಪತಿ ಅಶ್ವಥಾಮನಾಗಿದ್ದ, ಅವನು ಹೇಳಿದ " ಕುರು ರಾಜ, ಇಂದೇ ಐದು ಪಾಂಡವರ ಶಿರ ಕತ್ತರಿಸಿ ನಿಮ್ಮ ಕಾಲಿಗೆ ಅರ್ಪಿಸುವೆ." ದುರ್ಯೋಧನನ ಕಣ್ಣಲ್ಲಿ ಪುನಃ ಹೊಳಪು ಕಂಡು ಬಂತು.

ಅಶ್ವಥಾಮ ದ್ರೌಪದಿಯ ಶಿಬಿರಕ್ಕೆ ಬರುತ್ತಾನೆ, ರಾತ್ರಿಯಾಗಿತ್ತು ,ಶಿಬಿರದಲ್ಲಿ ವಿಜಯೋಲ್ಲಾಸ ನಡೆಯುತ್ತಿತ್ತು, ಅವನನ್ನು ಯಾರೂ ತಡೆಯಲಿಲ್ಲ, ಯಾಕೆಂದರೆ ಪಾಂಡವರ ಪ್ರಕಾರ ಯುದ್ಧ ಮುಗಿದಿತ್ತು ಹಾಗು ಕಾವಲು ನೀಡುವವರು ಸಹ ಅನಂದೊತ್ಸವದಲ್ಲಿ ಮಗ್ನರಾಗಿದ್ದರು. ಶಿಬಿರದ ಒಳಗೆ ದ್ರೌಪದಿಯ ಐದು ಕುಮಾರರು ಮಲಗಿದ್ದರು.

ದ್ರೌಪದಿಗೆ ಪ್ರತ್ಯೇಕ ಪಾಂಡವರಿಂದ ಒಂದೊಂದು ಪುತ್ರ ಸಂತಾನ ಪ್ರಾಪ್ತಿಯಾಗಿತ್ತು, ಅವರ ಹೆಸರು ಪ್ರತಿವಿಂಧ್ಯಾ(ಯುಧಿಷ್ಟರ ),ಶ್ರುತುಸೋಮ್ (ಭೀಮ ), ಶ್ರುತುಕರ್ಮ (ಅರ್ಜುನ ), ಶತಾನಿಕ್(ನಕುಲ್ ) ಹಾಗು ಶ್ರುತುಸೇನ್ (ಸಹದೇವ್) ಎಂದಿತ್ತು. ಪ್ರತಿಯೊಂದು ಪುತ್ರ ತನ್ನ ತಂದೆಯ ಹಾಗೆಯೇ ಕಾಣುತ್ತಿದ್ದರು. ಐದು ಪುತ್ರರು ಸಹ ಐದು ಪಾಂಡವರೇ ಎಂದು ಭ್ರಮೆ ಮೂಡುತ್ತಿತ್ತು, ಅಷ್ಟೊಂದು ಹೋಲಿಕೆ ಇತ್ತು. ತಂದೆ, ಪುತ್ರರನ್ನು ಗುರುತಿಸಲು ಕಷ್ಟವಾಗುತ್ತಿತ್ತು.

ಪ್ರತಿಕಾರದ ಅಗ್ನಿಯಲ್ಲಿ ಬೇಯ್ಯುತ್ತಿದ್ದ ಅಶ್ವಥಾಮ ಆ ಮಲಗಿದ್ದ ಕುಮಾರರ ಶಿರ ಕತ್ತರಿಸಿದ ಹಾಗು ಅಲ್ಲಿಂದ ಪಲಾಯನ ಮಾಡಿದ. ದ್ರೌಪದಿಯ ಶಿಬಿರದಲ್ಲಿ ಯಾರಿಗೂ ಇದರ ವಿಷಯ ತಿಳಿಯಲಿಲ್ಲ. ಅಶ್ವಥಾಮ ಆ ಐದು ಶಿರಗಳ ಸಮೇತ ತಳದಲ್ಲಿ ಅಡಗಿದ ದುರ್ಯೋಧನನ ಬಳಿಗೆ ಬಂದ.

ಅಶ್ವಥಾಮ ದುರ್ಯೋಧನನಿಗೆ "ಮಿತ್ರ, ಇಂದು ನನ್ನ ಹೃದಯಕ್ಕೆ ಶಾಂತಿ ಸಿಕ್ಕಿದೆ, ನಾನು ನನ್ನ ತಂದೆಯ ಹತ್ಯೆಯ ಸೇಡು ತಿರಿಸಿದೆ ಹಾಗು ನಿನ್ನ ಋಣ ಸಹ ತಿರಿಸಿದೆ" ಎಂದು ಹೇಳಿ ಆ ಐದು ಶಿರಗಳನ್ನು ದುರ್ಯೋಧನನ ಕಾಲಿಗೆ ಎಸೆದ.

ಅತ್ಯಂತ ಹರ್ಷದಿಂದ ದುರ್ಯೋಧನ ಭೀಮನ ಮಗನ ಶಿರವನ್ನು ಭೀಮನೆಂದು ಭಾವಿಸಿ ಎತ್ತಿ ಅಟ್ಟಹಾಸ ಮಾಡಲಾರಂಭಿಸಿದ. ಆವೇಶದಿಂದ ಅವನು ಆ ಶಿರವನ್ನು ತನ್ನ ಎರಡು ಕೈಯಿಂದ ಒತ್ತಿದ. ಆದರೆ ಇದೇನಾಯಿತು? ಆ ಶಿರ ಸ್ವಲ್ಪ ಒತ್ತಿದಾಗಲೇ ಹೊಡೆದೋಯಿತು, ಒಂದೇ ಕ್ಷಣದಲ್ಲಿ ಅವನಿಗೆ ಎಲ್ಲ ವಿಷಯ ತಿಳಿದು ಬಂತು.

ಶಿರ ಹೊಡೆದು ಹೋದಂತೆಯೇ ದುರ್ಯೋಧನ ಕೋಪದಿಂದ ಕಿರುಚಿದ "ದುಷ್ಟ ಅಶ್ವಥಾಮ , ಇದೇನು ನೀನು ಮಾಡಿದೆ, ಇದು ಭೀಮನ ಶಿರ ಅಲ್ಲ , ಭೀಮನಾದರೆ ಹೀಗೆ ನನ್ನ ಕೈಯಿಂದ ಅವನ ಶಿರ ಇಷ್ಟು ಸುಲಭದಲ್ಲಿ ಹೊಡೆಯುತ್ತದೆಯೇ? ಇವನು ಭೀಮನಲ್ಲ , ಸತ್ಯ ಹೇಳು, ಇವನು ಭೀಮ ಹಾಗು ದ್ರೌಪದಿಯ ಕುಮಾರನಾಗಿರಬೇಕು."

ಈಗ ಅಶ್ವಥಾಮ ಹೇಳಿದ "ನಾನು ದ್ರೌಪದಿಯ ಶಿಬಿರಕ್ಕೆ ಹೋದೆ ಹಾಗು ಇವರನ್ನು ಪಾಂಡವರೆಂದು ತಿಳಿದು ಇವರ ಶಿರ ಕತ್ತರಿಸಿ ತಂದೆ."

ಈಗ ದುರ್ಯೋಧನ ಅಸಹನೀಯ ಪೀಡೆಯಿಂದ "ಅಯ್ಯೋ ,ದುಷ್ಟ ಅಶ್ವಥಾಮನೆ, ಇದೇನು ಮಾಡಿದೆ ನೀನು, ನಮ್ಮ ವಂಶವನ್ನೇ ನೀನು ಮುಗಿಸಿ ಬಿಟ್ಟೆಯಲ್ಲ, ಇವರು ನಮ್ಮ ವಂಶದ ಕೊನೆ ಚಿಹ್ನೆಯಾಗಿದ್ದರು ಹಾಗು ನಮ್ಮ ವಂಶವನ್ನು ಮುಂದೆ ಕೊಂಡೋಗಿ ಬೆಳೆಸಿಳಕ್ಕಿದ್ದರು, ನೀನು ಎಲ್ಲವನ್ನೂ ನಾಶಗೊಳಿಸಿ ಬಿಟ್ಟೆ."

"ಅಯ್ಯೋ ದುಷ್ಟ, ದೂರವಾಗು ನನ್ನ ಕಣ್ಣ ಮುಂದೆಯಿಂದ" ಎಂದು ಹೇಳಿದ ನಂತರ ತುಂಬಾ ಪೀಡೆಯಿಂದ ಮಹಾಶಕ್ತಿಶಾಲಿ ದುರ್ಯೋಧನ ತನ್ನ ಪ್ರಾಣ ಬಿಟ್ಟ.

ಅಲ್ಲಿ ದ್ರೌಪದಿಯ ಶಿಬಿರದಲ್ಲಿ ಶಿರವಿಲ್ಲದ ಐದು ಕುಮಾರರ ಶವವನ್ನು ಕಂಡು ಕೂಗಾಟ ನಡೆದಿತ್ತು, ದ್ರೌಪದಿ ವಿಲಾಪಿಸುತ್ತಿದ್ದಳು, ಕೃಷ್ಣ ಹಾಗು ಪಾಂಡವರು ಸ್ತಬ್ದರಾಗಿ ನಿಂತಿದ್ದರು.

ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ "ಇದನ್ನು ಮಾಡಿದವರು ಯಾರಿರಬಹುದೆಂದು?" 

(ಮಹಾಭಾರತದಿಂದ)

ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ

Wednesday, April 2, 2014

ದ್ರೌಪದಿ

ದ್ರೌಪದಿಯನ್ನು ಜೂಜಲ್ಲಿ ಸೋಲುವ ಪಾಪ ಕರ್ಮ ಮಾಡಿದ ನಂತರ ಕ್ಷೋಬೆ ಹಾಗು ನಾಚಿಗೆಯಿಂದ ಯುಧಿಷ್ಟರ ಮೌನವಾಗಿದ್ದ. ಧೃತರಾಷ್ಟ್ರ ಮತ್ತು ದುರ್ಯೋಧನರ ಸೇವೆಯ ವಚನದಲ್ಲಿ ಬಂದಿತ ಭೀಷ್ಮ ಹಾಗು ಗುರು ದ್ರೋಣ  ವ್ಯಾಕುಲ ಹಾಗು ಲಜ್ಜೆಯಿಂದ ತಲೆ ತಗ್ಗಿಸಿ ಮೌನ ಕುಳಿತ್ತಿದ್ದರು. 

ದ್ರೌಪದಿಯನ್ನು ಗೆದ್ದ ಮದದಲ್ಲಿ ದುರ್ಯೋಧನ ಮಹಾಮಂತ್ರಿ ವಿಧುರರಿಗೆ ದ್ರೌಪದಿಯನ್ನು ರಾಜ ಸಭೆಗೆ ಕರೆದುಕೊಂಡು ಬರಲು ಆದೇಶ ನೀಡಿದ. 

ಮಹಾತ್ಮ ವಿಧುರರಿಗೆ ಈ ಸ್ಥಿತಿ ಸಹಿಸಲಾಗಲಿಲ್ಲ, ಅವರು ಸಭೆಯನ್ನು ಕುರಿತು  "ಯುಧಿಷ್ಟರ ಸ್ವತಃ ತನ್ನನ್ನೆ ಜೂಜಲ್ಲಿ ಸೋತ ನಂತರ ದ್ರೌಪದಿಯನ್ನು ಪಣಕ್ಕಿಟ್ಟಿದ್ದ, ಸೋತ ಮನುಷ್ಯ ಬೇರೆ ಯಾರನ್ನು ಹೀಗೆ ಪಣಕ್ಕೆ ಇಡಬಹುದೇ?" ಎಂಬ ಸವಾಲೆಸೆದರು. ಅವರ ಸವಾಲಿಗೆ ಉತ್ತರವಿಲ್ಲದೆ ಎಲ್ಲರೂ ಮೌನವಾಗಿದ್ದರು.

ಆಗ ದುರ್ಯೋಧನ ಗಹಗಹಿಸಿ ನಕ್ಕ ಹಾಗು "ಮಹಾಮಂತ್ರಿ, ನೀವು ಹೇಳಿದಷ್ಟು ಕೆಲಸ ಮಾಡಿ, ನಿಮ್ಮ ಧರ್ಮ ಪಾಲನೆ ಮಾಡಿ". ವಿಧುರರು ಕೋಪದಿಂದ  ದುರ್ಯೋಧನನಿಗೆ  "ಅಧರ್ಮಿ ದುಷ್ಟನೇ ,ನಿನ್ನ ಪಾಪದ ಬಿಂದಿಗೆ ತುಂಬಿದೆ, ನಿನ್ನ ಕೊನೆ ನಿಶ್ಚಿತ" ಎಂದು ಹೇಳಿ ಸಭೆಯಿಂದ ತೆರಳಿದರು.

ವಿಧುರರು ಹೋದ ನಂತರ ದುರ್ಯೋಧನ ತನ್ನ ಧೂತ ಪ್ರತಿಕಾಮಿಯನ್ನು ದ್ರೌಪದಿಯನ್ನು ಕರೆದುಕೊಂಡು ಬರಲು ಹೇಳಿದ. ಪ್ರತಿಕಾಮಿ ಮೂರು ಸಲ ಹೋದ, ಆ ಮೂರು ಸಲ ಸಹ ದ್ರೌಪದಿ ಅವನಿಗೆ ಒಂದೊಂದೇ ಪ್ರಶ್ನೆ ಕೇಳಿ ಕಳಿಸಿದಳು.

ದ್ರೌಪದಿಗೆ ವಿಧುರ ಕೇಳಿದ ಪ್ರಶ್ನೆಯ ಅರಿವಿರಲಿಲ್ಲ, ಆದರೂ ಅವಳ ಸಹ ಮೊದಲ ಪ್ರಶ್ನೆ ಅದೇ ಆಗಿತ್ತು "ಹೋಗು, ಆ ಜೂಜುಗಾರ ಮಹಾರಾಜರಿಗೆ ಕೇಳು ಮೊದಲು ಅವರು ತನ್ನನ್ನು ಸೋತದ್ದ ಅಥವಾ ಮೊದಲು ನನ್ನನ್ನು ಸೋತದ್ದ?"

ಯುದಿಷ್ಟರನಿಗೆ ಉತ್ತರಿಸಲಾಗಲಿಲ್ಲ.

ಪ್ರತಿಕಾಮಿ ಎರಡನೆ ಸಲ ಬಂದಾಗ ಅವಳು  "ಕುರು ವಂಶದವರಿಗೆ ಹೋಗಿ ಕೇಳು,ನಾನು ಏನು ಮಾಡಲಿ ಎಂದು, ಅವರ ಆದೇಶ ನನಗೆ ಮಾನ್ಯ?" ಅವಳ ಈ ಪ್ರಶ್ನೆ ನೇರ ಭೀಷ್ಮ ಹಾಗು ಧೃತರಾಷ್ಟ್ರರಿಗೆ ಇತ್ತು.  

ಮೂರನೇ ಸಲ ಪ್ರತಿಕಾಮಿ ಹೋದಾಗ ದುರ್ಯೋಧನ ಅವಸರದಿಂದ ದುಃಶಾಸನನನ್ನು ಅವಳನ್ನು ಕರೆದುಕೊಂಡು ಬರಲು ಹೇಳಿದ. ಅದರ ನಂತರ ಆದ ಘಟನೆ ಎಲ್ಲರಿಗೆ ತಿಳಿದದ್ದು.

ಇಲ್ಲಿ ಗಮನ ಕೊಡುವ ವಿಷಯವೆಂದರೆ ದ್ರೌಪದಿಯ ಧರ್ಮಾಚರಣೆ, ದುಃಶಾಸನ ಅವಳನ್ನು ಎಳೆದುಕೊಂಡು ಹೋಗುವಾಗ ತನ್ನ ಆ ದುರಾವಸ್ಥೆಯ ಮಧ್ಯೆ ಸಹ ಅವಳ ಪ್ರಶ್ನೆಗಳು ಧರ್ಮದ ಆಧಾರಿತವಾಗಿತ್ತು ಹಾಗು ಅದರ ಉತ್ತರ ಕೊಡುವ ಸಾಹಸ ಆ ಸಭೆಯಲ್ಲಿ ಯಾರಲ್ಲೂ ಇರಲಿಲ್ಲ. ಮಹಾಭಾರತದಲ್ಲಿ ಧರ್ಮರಾಜನೆಂದು ಹೆಸರು ಯುಧಿಷ್ಟರನಿಗೆ ನೀಡಿದ್ದಾರೆ, ಆದರೆ ಆಜೀವನ ನಿಷ್ಠೆಯಿಂದ ಧರ್ಮದ ನಿಖರವಾಗಿ ಪಾಲನೆ ಮಾಡಿದ ದ್ರೌಪದಿಯಂತ ಉದಾಹರಣೆ ನಮಗೆ ಇಡಿ ಮಹಾಭಾರತದಲ್ಲಿ  ಬೇರೆ ಯಾವುದೇ ಸಿಗುವುದಿಲ್ಲ.

ಐದು ಪಾಂಡವರ ಜೊತೆ ಮದುವೆ ಆಗಿ ಸಹ ಅವಳ ಪತ್ನಿ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆ, ಅದೆಷ್ಟೋ ಕಷ್ಟ ಸಹಿಸಿ ಸಹ ಧರ್ಮದ ಮಾರ್ಗ ಬಿಡದ ಈ ನಾರಿಯ ಚರಿತ್ರ ಅದೆಷ್ಟು ಪಾವನ. ಸಹನಶೀಲತೆ ಧೈರ್ಯ , ಸಾಹಸ  ತುಂಬಿದ ಈ ಅಸಾಧಾರಣ ಹೆಣ್ಣಿನ ಮೇಲೆ ಮನಸ್ಸಲ್ಲಿ  ಭಕ್ತಿ, ಗೌರವ, ಶ್ರದ್ಧೆ  ತುಂಬಿ ಬರುತ್ತದೆ.

(ಮಹಾಭಾರತದಿಂದ)

ವ್ಯಾಖ್ಯಾನ : ಹರೀಶ್ ಶೆಟ್ಟಿ,ಶಿರ್ವ

ಅನ್ನ

ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಭೀಷ್ಮ ಪಿತಾಮಹ ಅರ್ಜುನನ ಬಾಣದಿಂದ ಗಾಯಗೊಂಡು ಬಾಣದಿಂದ ನಿರ್ಮಿತ ಶಯ್ಯೆಯಲ್ಲಿ ಬಿದ್ದಿದ್ದರು. ಕೌರವರು ಹಾಗು ಪಾಂಡವರು ಪ್ರತಿ ದಿನ ಅವರನ್ನು ಕಾಣಲು ಬರುತ್ತಿದ್ದರು.

ಒಂದು ದಿನದ ಪ್ರಸಂಗ. 


ಪಾಂಡವರು ಮತ್ತು ದ್ರೌಪದಿ ಅವರ ಸುತ್ತ ಕುಳಿತುಕೊಂಡಿದ್ದರು ಹಾಗು ಭೀಷ್ಮ ಪಿತಾಮಹ ಅವರಿಗೆ ಉಪದೇಶ ನೀಡುತ್ತಿದ್ದರು. ಎಲ್ಲರು ಶ್ರದ್ಧೆಯಿಂದ ಅವರ ಉಪದೇಶ ಕೇಳುತ್ತಿದ್ದರು. ಇದ್ದಕ್ಕಿದಂತೆ ದ್ರೌಪದಿ ಜೋರಾಗಿ ನಗಲಾರಂಭಿಸಿದಳು. ಭೀಷ್ಮರಿಗೆ ಇದನ್ನು ನೋಡಿ ತುಂಬಾ ವೇದನೆ ಉಂಟಾಯಿತು ಹಾಗು ಅವರು ಉಪದೇಶ ಕೊಡುವುದನ್ನು ನಿಲ್ಲಿಸಿದರು. ಪಾಂಡವರು ಸಹ ಆಶ್ಚರ್ಯಚಕಿತರಾಗಿದ್ದರು, ಎಲ್ಲರೂ ಶಾಂತವಾದರು. ಸ್ವಲ್ಪ ಕ್ಷಣದ ನಂತರ ಪಿತಾಮಹ ಕೇಳಿದರು "ಮಗಳೇ , ನೀನೊಂದು ಉತ್ಕೃಷ್ಟ ಕುಲದ ಹೆಣ್ಣು, ನಿನ್ನ ಈ ನಗುವಿನ ಕಾರಣ ನಾನು ತಿಳಿಯಬಹುದೇ?"


ದ್ರೌಪದಿ "ಪಿತಾಮಹ, ಇಂದು ನೀವು ನಮಗೆ ಅನ್ಯಾಯದ ವಿರುದ್ಧ ಹೋರಾಡಲು ಉಪದೇಶ ನೀಡುತ್ತಿದ್ದಿರಿ, ಆದರೆ ತುಂಬು ಸಭೆಯಲ್ಲಿ ನನ್ನನ್ನು ನಿರ್ವಸ್ತ್ರ ಮಾಡುವ ಕೇಡುತನ ಮಾಡುತ್ತಿದ್ದಾಗ, ನಿಮ್ಮ ಈ ಎಲ್ಲ ಉಪದೇಶ ಎಲ್ಲಿ ಹೋಗಿತ್ತು, ಆ ಸಮಯ ನೀವೇಕೆ ಮೌನ ಧಾರಣೆ ಮಾಡಿದ್ದಿರಿ?

ಇದನ್ನು ಕೇಳಿ ಭೀಷ್ಮ ಪಿತಾಮಹರ ಕಣ್ಣಿಂದ ಕಣ್ಣೀರು ಸುರಿಯಲಾರಂಭಿಸಿತು. ಮೆಲ್ಲ ಸ್ವರದಿಂದ ಅವರು ಹೇಳಿದರು "ಪುತ್ರಿ, ನಿನಗೆ ಗೊತ್ತಿದೆ ಆ ಸಮಯ ನಾನು ದುರ್ಯೋಧನನ ಅನ್ನ ತಿನ್ನುತ್ತಿದ್ದೆ, ಆ ಅನ್ನ ಸಮಸ್ತ ಪ್ರಜೆಗೆ ದುಃಖ ನೀಡಿ ಸಂಪಾದಿಸಿದ್ದು, ಅಂತಹ ಅನ್ನ ತಿಂದು ನನ್ನ ಸಂಸ್ಕೃತಿ ಸಹ ಕ್ಷೀಣವಾಗಿತ್ತು, ಫಲಸ್ವರೂಪ ಆ ಸಮಯ ನನ್ನ ವಾಣಿ ನಿರ್ಬಂಧಿತವಾಯಿತು, ಆದರೆ ಈಗ ಆ ಅನ್ನದಿಂದ ನಿರ್ಮಿತ ರಕ್ತ ಈ ದೇಹದಿಂದ ಹರಿದು ಹೋಗಿ ನನ್ನ ಸ್ವಾಭಾವಿಕ ಸಂಸ್ಕೃತಿ ಪುನಃ ಹಿಂತಿರುಗಿ ಬಂದಿದೆ ಹಾಗು ತಾನಾಗಿಯೇ ನನ್ನ ಮುಖದಿಂದ ಉಪದೇಶ ಹೊರ ಬರುತ್ತಿದೆ, ಪುತ್ರಿ  ಯಾರೆಂತಹ ಅನ್ನ ತಿನ್ನುತ್ತಾರೋ ಅವರ ಮನಸ್ಸು ಸಹ ಹಾಗೆಯೇ ಆಗುತ್ತದೆ".

(ಮಹಾಭಾರತದಿಂದ)

ಸಿದ್ಧಿದಾತ್ರಿ