Showing posts with label ಕವನ. Show all posts
Showing posts with label ಕವನ. Show all posts

Tuesday, January 26, 2021

ಅಷ್ಟು ಸುಲಭ ಅಲ್ಲ ಬದುಕು,

ಅಷ್ಟು ಸುಲಭ ಅಲ್ಲ ಬದುಕು, 

ಹೌದು, 

ಅನಂತ ಕಠಿಣ ತಿರುವುಗಳು, 

ಆದರೆ ಹೆದರಿಕೆ ಯಾಕೆ ಬೇಕಿತ್ತು, 

ಚರ್ಚಿಸಬೇಕಿತ್ತು, 

ಹೇಳಿ ಬಿಡಬೇಕಿತ್ತು ಮನಸ್ಸಲ್ಲಿದ್ದುದನ್ನು,

ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಗಬಹುದಿತ್ತು, 

ಇನ್ನೆಷ್ಟೋ ಪರೀಕ್ಷೆ ಇತ್ತು ಬಾಕಿ!!

-

ಈಗ ತಾನೇ ಬುದ್ಧಿ ಬೆಳೆದಿತ್ತು, 

ಈಗ ತಾನೇ ಸ್ವಲ್ಪ ಸ್ವಲ್ಪ ಬದುಕು ತಿಳಿಯುತ್ತಿತ್ತು, 

ಆದರೆ ಕಲಿತದ್ದು ಪೂರ್ಣ ಪಾಠ ಅಲ್ಲ,

ಬದುಕೆಂಬ ಗುರುವಿನ ಜ್ಞಾನ ತುಂಬಾ ಮಹತ್ವವಾದದ್ದು,

ಇನ್ನೆಷ್ಟೋ ಜೀವನದ ಪಾಠ ಕಲಿಯಲಿತ್ತು ಬಾಕಿ!!

-

ಜೀವನ ಅಂದರೆ ನೂರಾರು ಸವಾಲುಗಳು, 

ಧೈರ್ಯವಾಗಿ ಎದುರಿಸಬೇಕಿತ್ತು, 

ಬದುಕಿನ ಆಟದಲ್ಲಿ ಸೋಲು ಗೆಲುವು, 

ಅದಕ್ಕೇನು, 

ಇಂದಲ್ಲ ನಾಳೆ, 

ಸತತ ಪ್ರಯತ್ನಿಸಬೇಕಿತ್ತು,

ಇನ್ನೆಷ್ಟೋ ಅವಕಾಶ ಸಿಗಲ್ಲಿತ್ತು ಬಾಕಿ!!

-

ಹೋರಾಡಬೇಕಿತ್ತು ಪ್ರತಿಯೊಂದು ಕಷ್ಟದಿಂದ, 

ತೇಲಿ ಬರಬೇಕಿತ್ತು ಈ ಸಾಗರದ ಬಿರುಗಾಳಿಯಿಂದ, 

ಅಸಂಭವ ಕಾಣುತ್ತದೆ ಅಷ್ಟೇ, 

ಆದರೆ ಅಸಂಭವ ಏನಿಲ್ಲ ಈ ಜಗತ್ತಲ್ಲಿ,

ಅದೆಷ್ಟೋ ಕಾರ್ಯ ಸಂಭವವಾಗಲಿಕ್ಕಿತ್ತು ಬಾಕಿ!!

-

ತುಂಬಾ ಶಕ್ತಿ ಇರುತ್ತದೆ ಪಾಲಕರ ಪ್ರೀತಿಯಲಿ, 

ನಂಬಿಕೆ ಇಡಬೇಕಿತ್ತು, 

ಮನಸ್ಸು ಬಿಚ್ಚಿ ಬಿಡಬೇಕಿತ್ತು, 

ಸ್ವಲ್ಪ ತಾಳ್ಮೆ ಇಡುತ್ತಿದ್ದರೆ, 

ಈ ಧರೆ ಅಂಬರ ಎಲ್ಲ ನಿನ್ನದಾಗುತ್ತಿತ್ತು,

ಇನ್ನು ಸ್ವಚ್ಚಂದ ಆಕಾಶದಲ್ಲಿ ಹಾರಲಿಕ್ಕಿತ್ತು ಬಾಕಿ!!

-

by ಹರೀಶ್ ಶೆಟ್ಟಿ ಶಿರ್ವ

Monday, January 25, 2021

ಸಮಯ

ಸಮಯ ಬದಲಾಗುತ್ತಾ ಇರುತ್ತದೆ, 

ಇಂದಿನ ಸಮಯ ನಾಳೆಗಿರುವುದಿಲ್ಲ, 

ನಾಳೆಯ ಸಮಯದಲಿ ಇಂದಿನ ಕೇವಲ ನೆನಪು, ಸಂತಸ ಅಥವಾ ಪಶ್ಚಾತಾಪ ಅಷ್ಟೇ,

ನಾಳೆಯ ಸಮಯ ತನ್ನ ಹೊಸ ಹೂವು ಅರಳಿಸುತ್ತದೆ, 

ಆ ಕಂಪನ್ನು ತನ್ನೊಳಗೆ ಸುಹಾಸಿಸಿ ಮುಂದೆ ಸಾಗುವುದೇ ಜೀವನ!!


by ಹರೀಶ್ ಶೆಟ್ಟಿ, ಶಿರ್ವ

Wednesday, January 20, 2021

ಒಂದು ಸ್ವಲ್ಪ ನನಗೆ ಬದುಕಲು ಕೊಡಿ

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ, 

ನೀರಸ ಜೀವನದಲಿ ಸ್ವಲ್ಪ ಉಲ್ಲಾಸ ತರಲು ಬಿಡಿ, 


ಏಕಾಂಗಿ ಬಿಟ್ಟು ಹೋದಳು ಅವಳು ನಡು ದಾರಿಯಲಿ, 

ಒಂಟಿ ಜೀವನದ ಕಷ್ಟ ಹೇಗೆ ತಿಳಿಸಲಿ, 

ಹರಿ ಬರುವ ಕಣ್ಣೀರು ಕುಡಿಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಐಷಾರಾಮಿಯ ಸುಖ ಈಗ ಹಿತ ನೀಡದು,

ಯಾವುದೇ ಸುಖ ಸೌಲಭ್ಯ ಈಗ ನೆಮ್ಮದಿ ಕೊಡದು,

ಮುಷ್ಠಿ ಅನ್ನ ತಿಂದು ನನಗೆ ತೃಪ್ತಿ ಪಡೆಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ


ನ್ಯಾಯ ಅನ್ಯಾಯ ಬಯಸುವುದು ಯಾರಿಂದ, 

ಇನ್ನು ಯಾವುದೇ ನಿರೀಕ್ಷೆ ಉಳಿಯಲಿಲ್ಲ ಆ ದೇವರಿಂದ, 

ನನಗೆ ನನ್ನದೇ ಸ್ಥಿತಿಯಲ್ಲಿ ಇರಲು ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಶರಾಬಿನಿಂದ ಸ್ಮೃತಿ ಅಳಿಸಲಾಗದು, 

ಹಾದು ಹೋದ ಸಮಯ ಹಿಂತಿರುಗಿ ಬರದು, 

ಸುಂಸುಮ್ಮನೆಯ ಸಾಂತ್ವನೆ ಬೇಡ ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


by ಹರೀಶ್ ಶೆಟ್ಟಿ, ಶಿರ್ವ

Sunday, January 17, 2021

ಕಣ್ಣೀರು ಇರುವುದಲ್ಲ ತೋರಿಸಲಿಕ್ಕೆ


Photo: Google


ಕಣ್ಣೀರು ಇರುವುದಲ್ಲ ತೋರಿಸಲಿಕ್ಕೆ, 

ಇದು ಇರುವುದು ಮನಸ್ಸ ಭಾರ ಅಳಿಸಲಿಕ್ಕೆ,


ನೋವಿನ ಮಿತಿ ಯಾರಿಗೆ ತಿಳಿದದ್ದು, 

ನೋವನ್ನು ಅನುಭವಿಸುವವನಿಗೆ ಕೇಳಿ ನೋಡು, 

ಬೆಚ್ಚನೆಯ ನೀರು ಕಣ್ಣಿಂದ ಸುರಿದಾಗ, 

ವೇದನೆ ಕಡಿಮೆಯಾಗುತ್ತದೆ ಕ್ಷಣಕ್ಕೆ, 

ಕಣ್ಣೀರು....


ನಿಷ್ಠೆ ಮುರಿದು ಮನಸ್ಸು ಬೇಸರಿಸಿದಾಗ, 

ಕನಸು ಹಠಾತ್ತನೆ ಮುರಿದಾಗ, 

ಕಣ್ಣು ಅತ್ತು ಹೃದಯಕ್ಕೇ ಸಾಂತ್ವನೆ ನೀಡುವಾಗ, 

ಸಹಿಸಲಾಗುತ್ತದೆ ಯಾವುದೇ ಅಸಹನೀಯ ಧಕ್ಕೆ, 

ಕಣ್ಣೀರು....


ಮಾತು ಬೆಳೆದು ಸ್ಥೈರ್ಯ ಕಳೆದಾಗ, 

ಅನ್ಯರ ಕೋಪಕ್ಕೆ ಬಲಿಪಶು ಆದಾಗ, 

ನೋವು ಅತಿ ಮಿತಿ ಮೀರಿ ಕಣ್ಣಿಂದ ಭಾಷ್ಪ ಉಕ್ಕಿ ಬಂದಾಗ, 

ಕೊಂಚ ವಿರಾಮ ಸಿಗುವುದು ಈ ಹೃದಯಕ್ಕೇ, 

ಕಣ್ಣೀರು..


by ಹರೀಶ್ ಶೆಟ್ಟಿ, ಶಿರ್ವ

Wednesday, January 6, 2021

ಏನೂ ಬೇಡ ಅನಿಸುತ್ತದೆ

ಕೆಲವೊಮ್ಮೆ ಅಳಬೇಕನಿಸುತ್ತದೆ, 

ಲೋಕದ ತರಹ ತರಹದ ಹೇಳಿಕೆ ಕೇಳಿ, 

ಏನೂ ಬೇಡ ಅನಿಸುತ್ತದೆ!


ಈ ಬದುಕಿನ ಹೋರಾಟ ಕಷ್ಟವೇನಲ್ಲ, 

ಪ್ರೀತಿ ವಿಶ್ವಾಸ ಪರಸ್ಪರ ಇದ್ದರೆ, 

ಆದರೆ ಭಾವನೆ ಮುರಿದ ಪೀಡೆಯಿಂದ ತಾಕತ್ತು ಮುಗಿದು ಹೋರಾಟ ಕಷ್ಟವಾಗುತ್ತದೆ, 

ಏನೂ ಬೇಡ ಅನಿಸುತ್ತದೆ!


ಬೆಸೆದು ಜೀವನ ಸಾಗಿಸುವುದು ಒಳ್ಳೆಯದ್ದು, 

ಹೌದು, 

ಆದರೆ ಭಿನ್ನ ಮತ ದಿಂದ ಅಡಚಣೆ ಉಂಟಾಗುವುದೂ ಸ್ವಾಭಾವಿಕ, 

ಮಾತಿನಿಂದ ಮಾತು ಬೆಳೆದು ಕಲಹ ಉಂಟಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ವಂಶ ಬೆಳೆದು ಸಂಸಾರ ವ್ಯಾಪಕ, 

ಭಿನ್ನ ಭಿನ್ನ ವಿಚಾರಗಳಿಗಿಲ್ಲ ಮಾಪಕ, 

ಪ್ರತ್ಯಕ್ಷ ಅಪ್ರತ್ಯಕ್ಷ ವಾದದಿಂದ ಸಂಬಂಧ ಹಾಳಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ಐದು ಬೆರಳಿಗೆ ಎಲ್ಲಿದೆ ಸಮಾನತೆ, 

ಅಳೆದು ಮಾತಾಡುವ ಪೀಳಿಗೆ ಮುಗಿದಿದೆ, 

ಇಂದಿನ ಪೀಳಿಗೆ ಹಿರಿಯರ ಮಾತಲ್ಲಿ ಆಸಕ್ತಿ ಇಲ್ಲದಂತಾಗಿದೆ, 

ಸುಮ್ಮನೆ ಕೂತುಕೊಳ್ಳುವುದು ಒಳ್ಳೆ ಅನಿಸುತ್ತದೆ,

ಏನೂ ಬೇಡ ಅನಿಸುತ್ತದೆ!


by ಹರೀಶ್ ಶೆಟ್ಟಿ, ಶಿರ್ವ

Saturday, December 26, 2020

ಲಕ್ಷ್ಮಣ ರೇಖೆ



ಎಷ್ಟೋ ಸಮಯ ಉರುಳೊಯೀತು,

ಅದೆಷ್ಟೋ ಬದಲಾವಣೆ, 

ನೀನು ನೀನಾಗಿ ಉಳಿಯಲಿಲ್ಲ, 

ನಾನೂ ನಾನಾಗಿ ಉಳಿಯಲಿಲ್ಲ, 

ನಿನಗೆ ನಿನ್ನ ಸಂಸಾರದ ಬಂಧನ, 

ನನಗೆ ನನ್ನವರೇ ಜೀವನ,

-

ಆನಂದದಲ್ಲಿಯೇ ಇದ್ದೇವೆ ನಾವಿಬ್ಬರೂ, 

ಆದರೆ ಹಳೆ ನೆನಪಿನ ಕಾರವಾಸದಲಿ ಈಗಲೂ, 

ಮುಖಾಮುಖಿ ಅದಾಗ ಅದೇಕೋ ಸಂಕೋಚ ಇಬ್ಬರಲ್ಲಿಯೂ, 

ಆದರೆ ಇಬ್ಬರ ಕಣ್ಣಿನ ಹೊಳಪು ನುಡಿಯುತ್ತದೆ ಎಲ್ಲವೂ,

-

ಇದೇ ನಮ್ಮ ವಿಧಿಯೆಂದು ಸಾಗುತ್ತಿದೆ ಬದುಕು, 

ಆದರೆ ಅನಿಸುತ್ತದೆ ಕೆಲವೊಮ್ಮೆ, 

ಸ್ವಲ್ಪ  ಧೈರ್ಯ ಇರುತ್ತಿದ್ದರೆ ನಮ್ಮಲ್ಲಿ, 

ಇಂದು ಇರುತ್ತಿರಲಿಲ್ಲ ನಮ್ಮಲ್ಲಿ ಈ ಅಳುಕು,

-

ನಮ್ಮ ಮಿಲನದ ಕೊನೆಯ ಸಂಜೆಯಿಂದ, 

ಈ ಹೃದಯ ಎಂತೂ ಕಲ್ಲಾಗಿದೆ, 

ಇನ್ನು ಯಾವುದೇ ಒಲವ ಕಂಪನ ಇದರಲ್ಲಿ ಉಳಿದಿರಲಿಕ್ಕಿಲ್ಲ, 

ಆದರೆ ಯಾಕೆ ನನ್ನಲ್ಲಿ ಇನ್ನೂ ನಿನ್ನ ಬಗ್ಗೆ ಯೋಚನೆ ಇದೆ,

-

ಬಹುಶ ಈ ಕಲ್ಲಲ್ಲಿ ಬರೆದ ನಿನ್ನ ಹೆಸರು ಇನ್ನೂ ಅಳಿಸಿ ಹೋಗಲಿಲ್ಲ, 

ಸರಿ ಬಿಡು, 

ಇರೋಣ ನಮ್ಮ ಪಾಡಿಗೆ ನಾವು, 

ನಮ್ಮ ನಮ್ಮ ಜೀವನದಲ್ಲಿ ಸಂತೋಷವಾಗಿರೋಣ,

-

ಮೊದಲ ಪ್ರೀತಿಯ ನೆನಪನ್ನು ಸ್ಮೃತಿಯಿಂದ ಅಳಿಸುವುದು ಕಷ್ಟ ಎಂದು ತಿಳಿದಿದೆ, 

ಪ್ರೇಮ ಪ್ರಣಯದ ಆ ನೆನಪನ್ನು ನಮ್ಮಲ್ಲಿಯೇ ಜೋಪಾನವಾಗಿಡೋಣ, 

ಇನ್ನು ಮೇಲೆ ನಮ್ಮ ಮಧ್ಯೆ ಒಂದು ಲಕ್ಷ್ಮಣ ರೇಖೆ ಎಳೆಯೋಣ, 

ತನ್ನ ತನ್ನ ಹೊಸ ಸಂಸಾರದ ಜವಾಬ್ಧಾರಿ ವಹಿಸೋಣ.


by ಹರೀಶ್ ಶೆಟ್ಟಿ,ಶಿರ್ವ

Monday, December 7, 2020

ನಿಂದನೆ ಸಹಿಸು ನೀನು



ನಿಂದನೆ ಸಹಿಸು ನೀನು, 

ನಿಂದನೆ ಸ್ವೀಕರಿಸು ನೀನು, 


ನಿರ್ಮಲ ನೀರಿಗೆ ಕಲ್ಲು ಎಸೆದರೆ, 

ಕೊಂಚ ತಳಮಳ ಉಂಟಾಗುವುದು ಸಹಜ, 

ಆದರೆ ಕ್ಷಣಕ್ಕೆ ಶಾಂತತೆ ಆವರಿಸುತ್ತದೆ,

ಇದೂ ನಿಜ,

ಕೋಪವನ್ನು ನಿಯಂತ್ರಿಸು ನೀನು, 

ತನ್ನನ್ನು ತಾನೇ ಗೆಲ್ಲು ನೀನು,

ನಿಂದನೆ ಸಹಿಸು ನೀನು....


ಅಪಮಾನ ಮಾಡುವವರು ನಿನ್ನ ಹಿತೈಷಿಗಳೆಂದು ತಿಳಿ ನೀನು, 

ತಾಳ್ಮೆಯಿಂದ ನಿಂದನೆ ನುಂಗು ನೀನು, 

ನಿನ್ನ ದೋಷವಿದ್ದಲ್ಲಿ ತಿದ್ದಿಕೊಳ್ಳು ನೀನು,

ನಗು ಮುಖ ತೋರಿ ಧನ್ಯವಾದ ಸಲ್ಲಿಸು ನೀನು,  

ನಿಂದನೆ ಸಹಿಸು ನೀನು.....


ಕುಂಬಾರನ ಹೊಡೆತಕ್ಕೆ ಮಣ್ಣು ಮೌನ ಇರುವಂತೆ, 

ಮೌನ ಇದ್ದು ನಿನ್ನ ಸಹನೆ ಶಕ್ತಿಯನ್ನು ಏರಿಸು ನೀನು, 

ಕುಂಬಾರ ಮಾಡಿದ ಸುಂದರ ಮಡಕೆಯಂತೆ ಆಕಾರ ಪಡುವೆ ನೀನು,

ನಿಂದನೆಯ ತಾಪ ಸಹಿಸಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


ನಿಂದಿಸುವವರ ಕ್ರೋಧ ಅವರ ರಕ್ತವನ್ನೇ ಹೀರುತ್ತದೆ, 

ಅನ್ಯರನ್ನು ನಿಂದಿಸುವಾಗ ಇದು ಅವರ ವ್ಯಕ್ತಿತ್ವವನ್ನೇ ದರ್ಶಿಸುತ್ತದೆ, 

ಮೌನವಿದ್ದು ನಿನ್ನ ಒಳ್ಳೆ ಗುಣ ಕಾಪಾಡು ನೀನು,

ನಿನ್ನ ಶಾಂತತೆ ಕಾಪಾಡಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


by ಹರೀಶ್ ಶೆಟ್ಟಿ, ಶಿರ್ವ

Friday, December 4, 2020

ಏಕಾಂಗಿ ಜೀವನ



ಏಕಾಂಗಿ ಜೀವನ,

ನೆನಪು ಸದಾ ನಿನ್ನ, 

ಏಕಾಂಗಿ ಜೀವನ.....


ಏರು ಪೇರು ಸಾಗರದ ಅಲೆಯಲ್ಲಿ, 

ತಳಮಳ ಯಾಕೋ ಮನಸ್ಸಲ್ಲಿ, 

ನೀನೇ ಇರುವೆ ಸ್ಮೃತಿಯಲ್ಲಿ,

ತುಂಬಿರುವೆ ಕಣ್ಣೀರಾಗಿ ನೀನೇ ಕಣ್ಣಲ್ಲಿ, 

ಅಳುತ್ತಿದೆ ಈ ಮನ, 

ಏಕಾಂಗಿ ಜೀವನ.....


ಖಾಲಿ ಖಾಲಿ ಈ ಹಾದಿಯಲಿ,

ಅಪರಿಚಿತ ಈ ಪಥದಲ್ಲಿ, 

ನಡೆಯುತ್ತಿರುವೆ ನಾನು ಹಗಲಲಿ ರಾತ್ರಿಯಲಿ, 

ಹೋಗುತ್ತಿರುವೆ ನನ್ನದೇ ಗುಂಗಿನಲ್ಲಿ, 

ಗೊತ್ತಿಲ್ಲ ಯಾವುದು ತಾಣ ನನ್ನ,

ಏಕಾಂಗಿ ಜೀವನ.....


ಅದೇಕೆ ನೀನು ನನ್ನನ್ನು ಬಿಟ್ಟು ಹೋದೆ, 

ಗಾಜಿನಂತೆ ಹೃದಯ ಮುರಿದು ಹೋದೆ, 

ನೀನಿಲ್ಲದೆ ಜೀವನದಲಿ ಏನಿದೆ?

ಬದುಕು ಅಶ್ರುವಿನ ಸಾಗರದಲ್ಲಿ ತೇಲಿದೆ, 

ಚಡಪಡಿಕೆಯಲ್ಲಿ ನನ್ನ ಪ್ರಾಣ,

ಏಕಾಂಗಿ ಜೀವನ.....


by ಹರೀಶ್ ಶೆಟ್ಟಿ, ಶಿರ್ವ

Thursday, October 15, 2020

ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ

 


ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ,

ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಾನೆ,

ಭೀಕರ ಕಾಡು ಬರಿ ಸಾಧಾರಣ ಕಾಡಾಗಿ ಪರಿವರ್ತಿಸಿದೆಯಲ್ಲ ಎಂದು ಕಣ್ಣೀರು ಬಿಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಈಗ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ,

ಎಷ್ಟೇ ಪ್ರಾಣಿಗಳ ಸಂತಾನವೇ ಮುಗಿದೋಗಿದೆ,

ಬೃಹತ್ ಮೌಲ್ಯವಾನ ಮರಗಳು ಕಡಿದೋಗಿದೆ,

ಕೆಲವೇ ನದಿಗಳು ಉಳಿದಿದೆ,

ನಮ್ಮ ಸುಂದರ ಕಾಡು ಬಂಜರವಾಗುತ್ತಿದೆಯೆಂದು ಚಿಂತಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಜಿಂಕೆಗಳ ಓಡಾಟ ನೋಡಿ ಎಷ್ಟೋ ವರುಷ ಆಗಿದೆ,

ಆನೆಯ ಗುಂಪು ಕಾಣದಂತಾಗಿದೆ,

ಬಲಶಾಲಿ ಸಿಂಹ ನೋಡಿ ಎಷ್ಟೋ ಸಮಯ ಕಳೆದಿದೆ,

ಕಾಗೆಯ ತಂಡ ಸಹ ಆಹಾರಕ್ಕಾಗಿ ಪಟ್ಟಣ ಹೋಗಿದೆ,

ನೀಚ ನರಿಯೂ ಮಾಯವಾಗಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಯಾಕೆ ನಾವು ಪ್ರಾಣಿಗಳ ಮೇಲೆ ಈ ಹಿಂಸೆ?

ಎಲ್ಲಿದೆ ಪ್ರಾಣಿಗಳ ಪರವಾಗಿ ಕೆಲಸ ಮಾಡುವ ಸಂಸ್ಥೆ?

ಇನ್ನೇನು ನಾವು ಪ್ರಾಣಿಗಳು ಕಲಿಸಬೇಕೇ ಮಾನವನಿಗೆ ಅಹಿಂಸೆ?

ಯಾಕೆ ಕೆಡಿಸುವಿರಿ ಕಾಡಿನ ಶಾಂತತೆ?

ಹತಾಶ ವ್ಯಾಘ್ರ ಪ್ರಶ್ನಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಓ ದೇವರೇ ನಮ್ಮ ಕಾಡನ್ನು ಬೆಳೆಸಿ,

ಮಾನವರೇ ನಮ್ಮ ಕಾಡನ್ನು ಉಳಿಸಿ,

ನಿಮ್ಮಿಂದ ಬೇಕು ಕೇವಲ ಒಂದು ಗಿಡದ ಸಸಿ,

ಒಂದು ಗಿಡ ನೆಟ್ಟು ಕಾಡು ಉಳಿಸಿ ಕಾಡು ಬೆಳೆಸಿ,

ನಮ್ಮ ಮನೆಯನ್ನು ಧ್ವಸ್ತ ಮಾಡಬೇಡಿ ಎಂದು ವ್ಯಾಘ್ರ ಬೇಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ.


by ಹರೀಶ್ ಶೆಟ್ಟಿ, ಶಿರ್ವ





Tuesday, October 13, 2020

ಮಧುರ ಮಧುರ ಸುಂದರ



ಮಧುರ ಮಧುರ ಸುಂದರ,

ಎಷ್ಟು ಸುಮಧುರ ನುಡಿ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಕರಂದದ ಸಿಹಿತನ

ಹೃದಯದ ಮಾತಿನಲಿ ನಿನ್ನ,

ನುಡಿಯುವ ಆ ಲಯದಲಿ

ನರ್ತಿಸುತ್ತದೆ ಕಂಗಳು ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಒಲವು ನಮ್ಮ ಬೆಳೆದಿದೆ

ಪ್ರೀತಿಯ ಮಾತಿನಿಂದ ನಿನ್ನ,

ಸಕ್ಕರೆ ಬೆಲ್ಲ ಯಾಕೆ ಬೇಕು

ಸಿಹಿ ಸವಿಯುವೆ ನಾನು ನುಡಿಯಿಂದ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಾತಾಡುವಾಗ ಅದೆಷ್ಟು ಮೋಹಕ 

ಮೊಗದ ಭಾವ ನಿನ್ನ,

ಮುಖದಲ್ಲಿ ಮೂಡುವ 

ಮುದ್ದು ನಗು ಎಷ್ಟು ಚೆನ್ನ

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


ಒಂದು ವೇಳೆ ನೀನು ಮೌನ ಇದ್ದಲ್ಲಿ,

ಮನಸ್ಸ ಸಾಗರದಲ್ಲಿ ಕಳವಳ ನನ್ನ,

ಏನೋ ಬೇಸರ ಮನಸಲಿ,

ಹೃದಯದಲಿ ಅಲೆಗಳು ನೋವಿನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


by ಹರೀಶ್ ಶೆಟ್ಟಿ, ಶಿರ್ವ



Photo : Google


Monday, October 12, 2020

ಹೂ ಕಾಗದದ ಹೂ

 


ಹೂ ಕಾಗದದ ಹೂ,

ನೀ ಕೊಟ್ಟ ಕಾಗದದ ಹೂ,

ಗುಲಾಬಿ ಬಣ್ಣದ ಕಾಗದದ ಹೂ,

ಹೂ ಕಾಗದದ ಹೂ.....


ಹೃದಯ ಮಿಡಿಸಿದ ಕಾಗದದ ಹೂ,

ಮೌನ ಮುರಿದ ಕಾಗದದ ಹೂ,

ಸಂಭಾಷಣೆ ಪ್ರಾರಂಭಿಸಿದ ಕಾಗದದ ಹೂ,

ನಿನ್ನೊಪ್ಪಿಗೆಯ ಕಾಗದದ ಹೂ,

ಹೂ ಕಾಗದದ ಹೂ.....


ಪ್ರಥಮ ಭೇಟಿಯ ಕಾಗದದ ಹೂ,

ನಮ್ಮ ಮಿಲನದ ಕಾಗದದ ಹೂ,

ಆತ್ಮೀಯತೆ ಬೆಳೆಸಿದ ಕಾಗದದ ಹೂ,

ಹಿಂಜರಿಕೆ ಮರೆಸಿದ ಕಾಗದದ ಹೂ,

ಹೂ ಕಾಗದದ ಹೂ.....


ನಿನ್ನೊಲವಿನ ಕಾಗದದ ಹೂ,

ಬಂಧ ಬೆಸೆದ ಕಾಗದದ ಹೂ,

ಖುಷಿ ತಂದ ಕಾಗದದ ಹೂ,

ಹೊಸ ಆರಂಭದ ಕಾಗದದ ಹೂ,

ಹೂ ಕಾಗದದ ಹೂ.....


ನನ್ನನ್ನು ಕವಿ ಮಾಡಿದ ಕಾಗದದ ಹೂ,

ಕವನ ಬರೆಸಿದ ಕಾಗದದ ಹೂ,

ನಿದ್ದೆ ಮರೆಸಿದ ಕಾಗದದ ಹೂ,

ಹಗಲು ಕನಸು ಕೊಟ್ಟ ಕಾಗದದ ಹೂ,

ಹೂ ಕಾಗದದ ಹೂ.....


by ಹರೀಶ್ ಶೆಟ್ಟಿ, ಶಿರ್ವ

Sunday, October 11, 2020

ಮಾನವ ಪರಿಸ್ಥಿತಿಯ ಕೈಗೊಂಬೆ



ಮಾನವ ಪರಿಸ್ಥಿತಿಯ ಕೈಗೊಂಬೆ,

ದಿನನಿತ್ಯ ನೂರಾರು ಸವಾಲುಗಳು ಅವನ ಮುಂದೆ,

ಹುಟ್ಟು ಸಾವಿನ ಮಧ್ಯೆ ಬದುಕೊಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಸ್ಥಿತಿಗಳು ಅವನು ಎನಿಸುವಂತೆ ಒದಗುವುದಿಲ್ಲ,

ಪರಿಶ್ರಮ ತಕ್ಕ ಅವನು ಪಡೆಯುವುದಿಲ್ಲ,

ಯೋಚಿಸಿದ್ದು ಆಗುವುದಿಲ್ಲ, ಆಗುವುದು ಇನ್ನೊಂದೇ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬಾಲ್ಯ ಸಾಗುತ್ತದೆ ಮಮತೆಯಲ್ಲೇ,

ಯೌವನ ಕಳೆದೋಗುತ್ತದೆ ಬದುಕನ್ನು ಅರ್ಥೈಸುವುದಲ್ಲೇ,

ಜೀವನ ಒಂದು ಹೋರಾಟ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಕಲ್ಲು ಮುಳ್ಳು ಅದೆಷ್ಟೋ ಅಡಚಣೆ,

ಇದೇ ಬದುಕಿನಾಟ ಮನೆ ಮನೆ, 

ವಿಧಿಯ ಶರಣ ಮಕ್ಕಳು ತಾಯಿ ತಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನ ಒಂದು ರಂಗಮಂಚ,

ನಟಿಸಿದಂತೆ ಚಿತ್ರ ಬಿಡಿಸುತ್ತಲೇ ಹೋಗುತ್ತದೆ ಕುಂಚ,

ಶರಣು ನಾವು ಆ ಚಿತ್ರಕಾರನ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬದುಕಿನ ಓಡಾಟದಲ್ಲಿ ಸೋಲು ಗೆಲುವು

ಸಾಧನೆ ಮಾಡುವುದು ನಮ್ಮ ಧರ್ಮವು, 

ಮಾಡಿದ ಕರ್ಮ ಹಿಂಬಾಲಿಸುತ್ತದೆ ಹಿಂದೆ ಹಿಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನದ ದೊಂಬರಾಟದಲ್ಲಿ,

ನಮ್ಮ ನಿಯಂತ್ರಣ ಇರುವುದು ಸೃಷ್ಟಿಕರ್ತನ ಕೈಯಲ್ಲಿ,

ಒಂದು ಎಲೆಯೂ ಅಲುಗದು ಅವನ ಅಪ್ಪಣೆಯಿಲ್ಲದೆ,

ಮಾನವ ಪರಿಸ್ಥಿತಿಯ ಕೈಗೊಂಬೆ.


by ಹರೀಶ್ ಶೆಟ್ಟಿ, ಶಿರ್ವ

Saturday, October 10, 2020

ವಿರಹ


ರಾಧೆಯ ವ್ಯಥೆ ನೋಡಿ ನೊಂದುಕೊಳ್ಳುತ್ತಿದ್ದ ಕೃಷ್ಣ,

ಕಣ್ಣೀರು ಅಡಗಿಸಿ ಅಳುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಕೃಷ್ಣ ಅಂದರೆ ಪ್ರೀತಿಯ ಪರಾಕಾಷ್ಠ,

ಕೃಷ್ಣನ ಪ್ರೀತಿಯಲ್ಲೂ ಅವಳಿಗಿತ್ತು ಪೂರ್ಣ ನಿಷ್ಠ,

ರಾಧೆಯ ಭಾವನೆ ಅರಿತು ಅರಿಯದಂತೆ ನಟಿಸುತ್ತಿದ್ದ ಕೃಷ್ಣ

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪಾದದಲ್ಲಿ ರಾಧೆ ಪಡೆಯುತ್ತಿದ್ದಳು ಸ್ವರ್ಗದ ಹಿತ,

ಕೃಷ್ಣನ ಹೆಸರು ಕೇಳುತ್ತಲೆ ಸಂಗೀತಮಯ ಅವಳ ಹೃದಯದ ಮಿಡಿತ,

ರಾಧೆಯ ಪ್ರೀತಿಯ ಜ್ವಾಲೆಯಲಿ ಉರಿಯುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಗೊತ್ತಿತ್ತು ಕೃಷ್ಣನ ಅಸಹಾಯಕತೆ,

ಅವನ ನಟನೆ ನೋಡಿ ಅವಳೂ ನಟಿಸುತ್ತಿದ್ದಳು ಅರಿವಿಲ್ಲದಂತೆ,

ರಾಧೆಯ ವೇದನೆಗೆ ಮುರಳಿ ನಾದದ ಹಿತ ನೀಡುತ್ತ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪ್ರತಿ ಅವಳಿಗೆ ಇತ್ತು ಅಪಾರ ನಂಬಿಕೆ, 

ಅವನ ಎಲ್ಲಾ ಮಾತಿಗೆ ಅವಳ ಇತ್ತು ಸಮ್ಮತೆ,

ರಾಧೆಯ ಮುಗ್ದ ಮನಸ್ಸಿಗೆ ಸೋತು ಹೋಗುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಯಮುನೆಯ ತಟದಲ್ಲಿ ಹರಿದು ಬರುತ್ತಿತ್ತು ರಾಧೆಯ ಕಣ್ಣೀರ ಸಾಗರ,

ವೇದನೆಯಿಂದ ಅವಳ ಆಗುತ್ತಿತ್ತು ಹೃದಯ ಭಾರ ಭಾರ,

ಎಲ್ಲಾ ನೋಡಿಯೂ ಅಸಹಾಯಕನಂತೆ ವರ್ತಿಸುತ್ತಿದ್ದ ತ್ರಿಲೋಕದರ್ಶಿ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಅಲ್ಪ ಸಮಯದ ಭೇಟಿ ರಾಧೆಗೆ ನೀಡುತ್ತಿತ್ತು ತೃಪ್ತಿ ಕಿಂಚಿತ,

ಹಸನ್ಮುಖ ಇರುತ್ತಿದ್ದ ಕೃಷ್ಣ ತನ್ನ ನೋವು ಅಡಗಿಸುತ ಅವಳ ಸಮ್ಮುಖ,

ರಾಧೆಯನ್ನು ನೋಡಿ ಅಯ್ಯಯ್ಯೋ ಎನ್ನುತ್ತಿತ್ತು ಅವನ ಚಿತ್ತ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


by ಹರೀಶ್ ಶೆಟ್ಟಿ, ಶಿರ್ವ


 

Wednesday, October 7, 2020

ಬಾಲ್ಯದ ದಿನ






ಹೇಗೆ ಮರೆಯಲಿ ಆ ದಿನ,

ಸರಳ ಮುಗ್ಧ ಬಾಲ್ಯದ ದಿನ,


ಮಾವಿನ ಮರದ ಅಡಿಯಲ್ಲಿ ಆಡುತ್ತಿದ್ದ ದಿನ,

ಸಮುದ್ರದ ತೀರದಲ್ಲಿ ಮರಳು ಮನೆ ಕಟ್ಟುತ್ತಿದ್ದ ದಿನ,

ಅಳುತ ನಗುತ ಮುನಿಸಿ ಶಾಲೆಗೆ ಹೋಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಸಾಬೂನಿನ ನೀರಿನ ಗುಳ್ಳೆ ಬಿಡುವ ದಿನ,

ಕ್ಲಾಸ್ಸಲ್ಲಿ ಕಾಗದದ ವಿಮಾನ ಮಾಡಿ ಎಸೆಯುವ ದಿನ,

ತೆಂಗಿನ ಮರದ ಎಲೆಯಿಂದ ವಿವಿಧ ಆಟಿಕೆ ಮಾಡುವ ದಿನ,

ಹೇಗೆ ಮರೆಯಲಿ ಆ ದಿನ,


ಸೈಕಲ್ ಟೈಯರ್ ಚಡಿಯಿಂದ ಓಡಿಸುತ್ತಿದ್ದ ದಿನ,

ತೆಂಗಿನ ಕೊಂಬೆಯಲ್ಲಿ ಕುಳಿತು ಸವಾರಿ ಮಾಡಿದ ದಿನ,

ಮರದ ಮೇಲೆ ಹತ್ತಿ ಹಣ್ಣು ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಅಮ್ಮನ ಸೆರಗಿನಲಿ ನಾಚುತ ಅಡಗುತ್ತಿದ್ದ ದಿನ,

ನೆಂಟರನ್ನು ನೋಡಿ ಕೋಣೆಯೊಳಗೆ ಓಡಿ ಹೋಗುತ್ತಿದ್ದ ದಿನ,

ಅಡುಗೆ ಮನೆಯಿಂದ ಬೆಲ್ಲ ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಕಾರಣವಿಲ್ಲದೆ ಮುನಿಸಿ ಕುಳಿಯುತ್ತಿದ್ದ ದಿನ,

ಬಾಡಿಗೆ ಸೈಕಲ್ ಬಿಡಲು ಹಣ ಸೇರಿಸುತ್ತಿದ್ದ ದಿನ,

ಆಡಿ ಓಡಿ ದಣಿದು ಮನೆಗೆ ಬಂದು ಸುಸ್ತಾಗಿ ಮಲಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಖುಷಿ ಪಡುತ್ತಿದ್ದ ದಿನ,

ಮಳೆಯಲ್ಲಿ ನೆನೆದು ನಲಿಯುತ್ತಿದ್ದ ದಿನ,

ಕೆಸರಲ್ಲಿ ಮುಳುಗಿ ಬಂದಾಗ ಅಮ್ಮನ ಬೈಗುಳ ಕೇಳುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮುಗಿಯದ ಅಜ್ಜಿಯ ಕಥೆ ಕೇಳುತ್ತಿದ್ದ ದಿನ,

ಚಂದಮಾಮ, ಬಾಲಮಿತ್ರ, ಪುಟಾಣಿ ಓದುತ್ತಿದ್ದ ದಿನ,

ರಾಮಾಯಣ ಮಹಾಭಾರತ ಪಾತ್ರದ ವೇಷ ಧರಿಸಿ ಆಡುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಬೇಸಿಗೆಯಲ್ಲಿ ಒಟ್ಟುಗೂಡಿ ಟೆರೇಸ್ ಹೋಗಿ ಮಲಗುವ ದಿನ,

ಮಧ್ಯಾಹ್ನ ಪರ್ಯಂತ ಮಲಗುವ ದಿನ,

ಅಮ್ಮ ಎಸೆದ ನೀರಿನಲ್ಲಿ ಒದ್ದೆಯಾಗಿ ಎದ್ದೇಳುವ ದಿನ,

ಹೇಗೆ ಮರೆಯಲಿ ಆ ದಿನ,


ಸುಂದರ, ಅಮೂಲ್ಯ, ಪಾವನ ಆ ದಿನ,

ಮರೆಯಲಾಗದ ಅದ್ಭುತ ದಿನ,

ಸರಳ ಮುಗ್ಧ ಬಾಲ್ಯದ ದಿನ,

ಹೇಗೆ ಮರೆಯಲಿ ಆ ದಿನ


by ಹರೀಶ್ ಶೆಟ್ಟಿ, ಶಿರ್ವ

Photo courtesy:paperboat, google 🙏



Sunday, October 4, 2020

ಸಂಬಂಧ



ಸಂಬಂಧ, 
ಬಂಧುತ್ವ, ಬಾಂಧವ್ಯ 
ಸದಾ ಹಸಿರಾಗಿರಬೇಕು,
ಉಸಿರು 
ಕಟ್ಟುವಂತಾಗಬಾರದು,
ಪ್ರೀತಿ ವಿಶ್ವಾಸ 
ಸ್ಥಿರವಾಗಿರಬೇಕು,
ಪದೇ ಪದೇ 
ವಿಚಲಿಸಬಾರದು,
ಸಹಾಯ, 
ಉಪಕಾರ, ನೆರವು 
ಕೇಳುವುದಕ್ಕೆ 
ಒಂದು ಮಿತಿ ಇರಬೇಕು,
ಇನ್ನೊಬ್ಬರ ಮೇಲೆ 
ಆಶ್ರಿತವಾಗಿರಬಾರದು,
ಸ್ವಾಭಿಮಾನ, ಆತ್ಮ ಗೌರವ 
ತುಂಬಿ ಇರಬೇಕು,
ಅನ್ಯರ ಮೇಲೆ
ಭಾರವಾಗಬಾರದು,
ಸ್ವತಃ
ಕಷ್ಟಪಟ್ಟು ದುಡಿದು,
ತನ್ನ ಜೀವನ 
ಸುಧಾರಿಸಿಕೊಳ್ಳಬೇಕು,
ಬದುಕು 
ಅರ್ಥಪೂರ್ಣವಾಗಿರಬೇಕು,
ಸ್ವತಃ ದುಡಿಯದೇ, 
ಇನ್ನೊಬ್ಬರ ನೆರವಿಗೆ 
ಕಾಯುತ್ತಿರಬಾರದು,
ಬದುಕು
ಅರ್ಥಹೀನವಾಗಿ
ಮಾಡಿಕೊಳ್ಳಬಾರದು

by ಹರೀಶ್ ಶೆಟ್ಟಿ,ಶಿರ್ವ

Saturday, October 3, 2020

ಬಾಡಿದ ಚಹರೆ




ಆ ಇಳಿಸಂಜೆಯಲಿ

ಏಕಾಂಗಿ ನಾನು,

ನದಿಯ ತೀರ,

ಬಂಡೆಯ ಹತ್ತಿರದಿಂದ

ಏನೋ ಯೋಚನೆಯಲಿ,

ಸಾಗುತ್ತಿದ್ದಂತೆ,

ಸ್ಮರಿಸಿತು

ಅವಳ

ಬಾಡಿದ ಚಹರೆ,

ಹೆಜ್ಜೆ ತನ್ನಿಂತಾನೆ

ಮಲ್ಲಿಗೆ ಹೂವಿನ

ಅಂಗಡಿಯತ್ತ

ಸಾಗಿತು.

by ಹರೀಶ್ ಶೆಟ್ಟಿ, ಶಿರ್ವ


Saturday, June 27, 2020

ಗೆಲುವು ಸೋಲು


ಬದುಕಿನ ಸ್ಪರ್ಧೆಯಲಿ 
ಗೆಲುವಾಗಲಿ ಸೋಲಾಗಲಿ
ಎರಡನ್ನು ಸ್ವೀಕರಿಸು
ಒಂದೇ ಮನೋಭಾವದಿಂದಲಿ

ಗೆಲುವಿನ ಸೊಕ್ಕಿನಲಿ
ನೋಡದಿರು ಎದುರಾಳಿಯನ್ನು ತಾತ್ಸಾರದಿಂದಲಿ
ಅಪ್ಪುಗೆ ನೀಡಿ  ಪ್ರೇರಿಸು
ಹುರುಪು ತುಂಬಲಿ ಅವನಲಿ

ಪರಾಜಯದ ಅಳುಕಲಿ
ಖಿನ್ನತೆಗೆ ಒಳಗಾಗದೆ
ಮುಂದೆ ಮರು ಹೆಜ್ಜೆಯಿಡು ಸಾಹಸದಿಂದಲಿ
ತಲುಪುವೆ ನೀನು ಶೀಘ್ರವೇ ಜಯದ ಮಾರ್ಗದಲಿ

by ಹರೀಶ್ ಶೆಟ್ಟಿ, ಶಿರ್ವ


Photo : Google

ಬಾಳು


ಬಾಳೊಂದು ತೇಲುತ್ತಿರುವ ದೋಣಿ
ಸಂಸಾರದ ಕಡಲಲಿ ಸರಿಯುತ್ತಿರಲಿ
ಖಾಲಿ ಖಾಲಿ ಈ ಜೀವನದಲಿ 
ಬಿಡಿಸಿ ಸುಂದರ ಕನಸಿನ ರಂಗೋಲಿ

ಒದಗಿದ ದೆಸೆಯ ಸ್ವೀಕರಿಸಿ
ಹೊಂದಿಸುತ ಹೋಗಿ ಅದೇ ಪಥದಲಿ
ಬರುವ ಸಂಕಟದ ಬಿರುಗಾಳಿಯಲಿ
ಧೈರ್ಯದ ಶಕ್ತಿ ತುಂಬಿರಲಿ

ಸುಖ ದುಃಖದ ಕಿನಾರೆಯಲಿ
ಬದುಕಿನ ಈ ದೋಣಿ ತೇಲುತ್ತಿರಲಿ
ಭರವಸೆಯ ಬೆಳಕಿನೆಡೆ
ಪ್ರಯಾಣ ಸಾಗುತ್ತಿರಲಿ

by ಹರೀಶ್ ಶೆಟ್ಟಿ, ಶಿರ್ವ


Photo : Google 

Thursday, June 25, 2020

ವಯಸ್ಸಿನ ಆಟ


ಬಾಲ್ಯ
ಮುದ್ದು ಮುದ್ದು,
ಆರೈಕೆ ಪಾಲನೆ,
ಅಮ್ಮನ ಆಟಿಕೆ,
ಮುಗ್ದತೆ,
ಪರಿಶುದ್ದ ಮನಸ್ಸು ...

ಯೌವನ, ಬಿಸಿ ರಕ್ತ
ಕುದಿಯುತ್ತದೆ,
ತಾಳ್ಮೆ ಇರಲ್ಲ,
ಸಂಯಮ ಏನಂತ ಗೊತ್ತಿಲ್ಲ,
ಅನುಭವಿಸುತ್ತಾರೆ,
ಸಮಯ ಬೇಕು...

ವಯಸ್ಸಾದಂತೆ
ಸರಿ ತಪ್ಪು ತಿಳಿಯುತ್ತದೆ ,
ತಿಳುವಳಿಕೆ ಬೆಳೆಯುತ್ತದೆ ,
ಸಹನಶೀಲತೆ ನಿರ್ಮಾಣವಾಗುತ್ತದೆ,
ವ್ಯವಹಾರಜ್ಞಾನದ  ಅರಿವಾಗುತ್ತದೆ,
ಸ್ವಭಾವ ಬದಲಾಗುತ್ತದೆ... 

ಇಳಿವಯಸ್ಸಲ್ಲಿ
ನೆನಪು ಗತಕಾಲದ,
ದೈವ ಭಕ್ತಿ,
ನಾನೇ ಜ್ಞಾನಿಯೆಂಬ ಛಲ,
ಇತರರಿಗೆ ಪ್ರವಚನ, 
ಸ್ವಭಾವದಲ್ಲಿ ಕಿರಿಕಿರಿ...

ಅಂತಿಮ ತಾಣ
ಆರೋಗ್ಯ ಪ್ರಜ್ಞೆ,
ಅನ್ಯರ ಗೋಚಾರವಿಲ್ಲ,
ತನ್ನದೇ ಧ್ಯಾನ, 
ಆಸೆಯಲ್ಲಿ ಹೆಚ್ಚಳ,
ಕುಂದುತ್ತಿರುವ  ವಯಸ್ಸು...

by ಹರೀಶ್ ಶೆಟ್ಟಿ, ಶಿರ್ವ

Thursday, June 18, 2020

ಧೀರ


ಮನೆಯಿಂದ ದೂರ
ತನ್ನವರಿಂದ ದೂರ
ನೀಡಲು ದೇಶಕ್ಕೆ ಆಧಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ದುಃಖದಲ್ಲಿ ಬಿಟ್ಟು ಎಲ್ಲರನ್ನು
ಗಟ್ಟಿ ಮಾಡಿ ಹೃದಯವನ್ನು
ಕೇಳಿ ದೇಶದ ಸ್ವರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಅಪ್ಪನಿಗೆ ಧೈರ್ಯ ನೀಡಿ
ಅಮ್ಮನ ಕಣ್ಣೀರನ್ನು ಒರಸಿ
ಮನಸ್ಸು ಮಾಡಿ ಭಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಹೆಂಡತಿಗೆ ಹೇಳಿ ಸಾಂತ್ವನೆ
ಮಕ್ಕಳಿಗೆ ಕೊಟ್ಟು ಪ್ರಲೋಭನೆ
ಹರಸಿ ಪ್ರೇಮ ಅಪಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

by , ಹರೀಶ್ ಶೆಟ್ಟಿ, ಶಿರ್ವ 

ಸಿದ್ಧಿದಾತ್ರಿ