Showing posts with label ಸಣ್ಣ ಕಥೆಗಳು. Show all posts
Showing posts with label ಸಣ್ಣ ಕಥೆಗಳು. Show all posts

Thursday, February 10, 2022

ನೈತಿಕತೆ

 


ರಘು ಆ ಮಸೀದಿ, ದೇವಾಲಯದ ಬದಿಯಲ್ಲಿ ಹೂ ಹಾರದ ಅಂಗಡಿ ಇಟ್ಟ್ಕೊಂಡಿದ್ದ, ಅವನ ಪಕ್ಕದಲ್ಲಿಯೇ ನಫೀಸಾ ಮತ್ತು ರಾಜು ಇಬ್ಬರು ಭಿಕ್ಷೆ ಬೇಡಲು ಕುಳಿತುಕೊಳ್ಳುತ್ತಿದ್ದರು.

ಈ ಕಡೆ ದೇವಾಲಯ ಆ ಕಡೆ ಮಸೀದಿ, ಒಳ್ಳೆ ಭಿಕ್ಷೆ ಸಿಗುತ್ತಿತ್ತು ಅವರಿಗೆ, ಆದರೆ ಎರಡು ದಿನದಿಂದ ಅವರು ಭಿಕ್ಷೆ ಬೇಡಲು ಬರಲೇ ಇಲ್ಲ, ಅವರು ಕುಳಿತುಕೊಳ್ಳುವ ಜಾಗ ಖಾಲಿ ಇತ್ತು. 

ರಘುಗೆ ಇದು ಸ್ವಲ್ಪ ಆಶ್ಚರ್ಯವೆನಿಸಿತು, ಒಂದು ದಿವಸ ಸಹ ತಪ್ಪದೆ ಬರುವ ಇವರಿಬ್ವರು ಎಲ್ಲಿಗೆ ಹೋಗಿರಬಹುದೆಂದು. 

ಆಗ ಅವನು ಎದುರಿನಿಂದ ರಾಜು ಬರುವುದನ್ನು ನೋಡಿದ, ಅವನ ಕೈಯಲ್ಲಿ ಕೇಸರಿ ಶಾಲು ಇತ್ತು, ರಘು ಅವನಿಗೆ ಕೇಳಬೇಕೆಂದಾಗ, ಅವನು ನಫೀಸಾ ಸಹ ಬರುವುದನ್ನು ಕಂಡ, ಇಬ್ಬರು ಅವರ ಜಾಗಕ್ಕೆ ಬಂದಾಗ "ಏನು ರಾಜು, ನಫೀಸಾ ಎಲ್ಲಿಗೆ ಹೋಗಿದ್ದಿರಿ ಎರಡು ದಿವಸ?". 

ಅದಕ್ಕೆ ರಾಜು "ಐದಾರೂ ಜನ ಬಂದಿದ್ದರು ಅಣ್ಣ, ಹಣದ ಆಸೆ ಕೊಟ್ಟರು ನನಗೆ, ಸ್ವಲ್ಪ ಹಣದ ಆಸೆಗೆ ಅವರು ಕೊಟ್ಟ ಈ ಕೇಸರಿ ಶಾಲು ಧರಿಸಿದ್ದೆ, ಕುತ್ತಿಗೆ ಬಿಗಿದಂತಾಯಿತು ಅಲ್ಲಿಯ ಸ್ಥಿತಿ ನೋಡಿ, ವಾಪಸ್ ಬಂದೆ, ಬೇಡ ಇದೆಲ್ಲ, ನಾನು ಸರಿ, ನನಗಿಲ್ಲಿ ಸಿಗುವ ಭಿಕ್ಷೆ ಸಾಕೆನಿಸಿತು." ಎಂದು ರಾಜು ಆ ಕೇಸರಿ ಶಾಲು ಬದಿಗಿಟ್ಟ. 

ರಘು " ನಫೀಸಾ ನೀನು?" ನಫೀಸಾ "ಅಣ್ಣ, ನನಗೂ ಅವರು ಬುರ್ಖಾ, ಹಿಜಾಬ್ ಕೊಟ್ಟಿದ್ದರು, ಅದನ್ನು ಧರಿಸಿ ಯಾಕೋ ಉಸಿರು ಕಟ್ಟಿದಂತಾಯಿತು ಪರಸ್ಪರ ನಮ್ಮವರ ಮಧ್ಯದಲ್ಲೇ ಜಗಳ ನೋಡಿ, ವಾಪಸ್ ಬಂದೆ, ಅಂತಹ ಹಣ ಬೇಡ, ಇಲ್ಲಿ ಸಿಗುವ ಭಿಕ್ಷೆಯೆ ಒಳಿತೆನಿಸಿತು". 

ಅವರ ಮಾತು ಕೇಳಿ ರಘು ಒಂದು ಉಸಿರೆಳೆದು ಆಕಾಶದತ್ತ ನೋಡಿದ. 


by ಹರೀಶ್ ಶೆಟ್ಟಿ, ಶಿರ್ವ


Tuesday, January 25, 2022

ಭಿಕ್ಷುಕ

photo courtesy: Google


ಆ ಮುದಿ ಭಿಕ್ಷುಕ ಪ್ರತಿ ಗುರುವಾರ ರವಿಯ ಅಂಗಡಿಯ ಎದುರು ಬಂದು ಭಿಕ್ಷೆಗೆ ನಿಲ್ಲುತ್ತಿದ್ದ, ಉಪಕಾರಬುದ್ಧಿಯುಳ್ಳ ರವಿಗೆ ಯಾಕೋ ಅವನನ್ನು ನೋಡಿ ಕರುಣೆ ಮೂಡುತ್ತಿತ್ತು ಹಾಗು ಅವನು ಬದಿಯ ಹೋಟೆಲಿನಿಂದ ಅವನಿಗೆ ಊಟ ಆರ್ಡರ್ ಮಾಡಿ ತಿನಿಸುತ್ತಿದ್ದ, ಅವರ ಮಧ್ಯೆ ಯಾವುದೇ ಸಂಭಾಷಣೆ ಇರುತ್ತಿರಲಿಲ್ಲ ಆದರೆ ಪ್ರತಿ ಗುರುವಾರ ಇದೆ ಒಂದು ರೂಢಿಯಾಗಿ ಹೋಯಿತು, ಆ ಭಿಕ್ಷುಕ ಬರುತ್ತಿದ್ದ ರವಿ ಬದಿಯ ಹೋಟೆಲಿನಿಂದ ಊಟ ತರಿಸಿ ಅವನಿಗೆ ಕೊಡುತ್ತಿದ್ದ.

ಕೋವಿಡ್‌ ಸಮಯದಲ್ಲಿ ರವಿ ವ್ಯಾಪಾರ ಇಲ್ಲದೆ ವ್ಯಾಪಾರದಲ್ಲಿ ತುಂಬಾ ನಷ್ಟ ಅಬುಭಾವಿಸಿದ, ಅಂಗಡಿಯ ಬಾಡಿಗೆ ಕೊಡಲು ಸಹ ಅವನಿಂದ ಅಸಾಧ್ಯವಾಯಿತು.

ಬಾಡಿಗೆ ಕೊಡದೆ ಅಂಗಡಿ ಮಾಲೀಕ ಅವನಿಗೆ ನೋಟೀಸ್ ಕೊಟ್ಟು ಅಂಗಡಿ ಖಾಲಿ ಮಾಡಲು ಒಂದು ತಿಂಗಳ ಸಮಯ ಕೊಟ್ಟ, ರವಿಗೆ ಇನ್ನು ಅಂಗಡಿ ಬಿಡುವುದಲ್ಲದೆ ಬೇರೆ ದಾರಿ ಇರಲಿಲ್ಲ.

ಆ ಗುರುವಾರ ಸಹ ಆ ಮುದಿ ಭಿಕ್ಷುಕ ಬಂದು ರವಿಯ ಅಂಗಡಿಯ ಎದುರು ನಿಂತ, ರವಿ ಆ ಕಷ್ಟದಲ್ಲಿಯೂ ಬದಿಯ ಹೋಟೆಲಿನಿಂದ ಆತನಿಗೆ ಊಟ ತಂದು ಕೊಟ್ಟು "ಅಜ್ಜ ಇದು ನನ್ನಿಂದ ನಿಮಗೆ ಅಂತಿಮ ಊಟ, ಬರುವ ಗುರುವಾರ ಈ ಅಂಗಡಿಯಲ್ಲಿ ನಾನು ಇರಲ್ಲ, ರವಿಯಿಂದ ಊಟ ತೆಗೆದುಕೊಂಡು ಮುದುಕ ಕಣ್ಣೆತ್ತಿ ರವಿಯನ್ನು ನೋಡಿ ಕೇಳಿದ "ಸಾರ್ ನಿಮಗೆ ಒಂದು ಕೇಳಲ?" 

ರವಿ "ಏನು? ಹಣ ಒಂದು ಕೇಳ್ಬೇಡಿ, ನನ್ನ ಪರಿಸ್ಥಿತಿ ಮೊದಲೇ ಗಂಭೀರವಾಗಿದೆ, ಅಂಗಡಿ ಖಾಲಿ ಮಾಡುತ್ತಿದ್ದೇನೆ, ತುಂಬಾ ನಷ್ಟ ಅನುಭವಿಸಿದೆ ಈ ಕೋವಿಡ್‌ ಬಂದು, ಇದ್ದ ಹಣವೆಲ್ಲಾ ನೀರಾಯಿತು, ಈಗ ಈ ಅಂಗಡಿಗೆ ಇನ್ನು ಬಂಡವಾಳ ಮಾಡಲಿಕ್ಕೆ ಹಣ ಇಲ್ಲ, ಮೇಲಿಂದ ಆರು ತಿಂಗಳ ಬಾಡಿಗೆ ಬಾಕಿ ಉಂಟು" ಎಂದು ರವಿ ತನ್ನ ಮನಸ್ಸಲ್ಲಿದ್ದ ಗೋಳು ಹೇಳಿಯೇ ಬಿಟ್ಟ ಆ ಭಿಕ್ಷುಕನ ಮುಂದೆ.

ರವಿಯ ಮಾತು ಕೇಳಿ ಭಿಕ್ಷುಕ ತನ್ನ ಚೀಲಕ್ಕೆ ಕೈ ಹಾಕಿ ಒಂದು ಗಂಟು ತೆಗೆದು ರವಿಯ ಕೈಯಲ್ಲಿಟ್ಟ. 

ರವಿ ಆಶ್ಚರ್ಯದಿಂದ "ಏನಿದು?"

ಭಿಕ್ಷುಕ "ಇದರಲ್ಲಿ ಒಂದೂವರೆ ಲಕ್ಷ ಹಣ ಇದೆ, ಇದು ನಿಮಗೆ, ನನ್ನ ಹೆಸರು ವೆಂಕಟೇಶ, ಮೂರು ವರುಷದಿಂದ ಮನೆಯಿಂದ ಹೊರ ಬಿದ್ದ ನಂತರ ನಾನು ಅಲ್ಲಿ ಇಲ್ಲಿ ನಲಿಯುತ್ತಿದ್ದೇನೆ, ಇದ್ದ ಒಬ್ಬನೇ ಒಬ್ಬ ಮಗನಿಗೆ ಅವನ ಸಂಸಾರದಲ್ಲಿ ನಾನು ಅವನಿಗೆ ಬೇಡವಾದೆ, ಒಂದು ದಿನ ತಾಳ್ಮೆ ಕಳೆದು ನನಗೆ ಹೇಳಿಯೇ ಬಿಟ್ಟ ಇನ್ನು ನಿಮ್ಮ ಭಾರ ಹೊಯ್ಯಲು ನನ್ನಿಂದಾಗದು ಎಂದು, ತುಂಬಾ ದುಃಖಿತನಾದೆ, ಅವನ ಅಮ್ಮ ಮೊದಲೇ ನನ್ನನ್ನು ಬಿಟ್ಟು ದೇವರ ಮನೆ ಸೇರಿಬಿಟ್ಟಿದಳು, ಈ ಆಘಾತದಿಂದ ಏನೂ ತೋಚದೆ ಅಲ್ಲಿ ಇಲ್ಲಿ ನಲಿದೆ, ಈಗ ಅಭ್ಯಾಸ ಆಗಿಹೋಯಿತು, ಒಬ್ಬರಿಗೆ ನಾವು ಬೇಡವೆಂದ ಮೇಲೆ ಅವರೊಟ್ಟಿಗೆ ಇದ್ದು ಸಹ ಏನು ಪ್ರಯೋಜನ, ಬಿಡಿ ಆ ವಿಷಯ, ನಾನು ಕೆಲಸದಲ್ಲಿದ್ದಾಗ ಕಷ್ಟ ಸಮಯಕ್ಕೆಂದು ಯಾರಿಗೂ ಹೇಳದೆ ಒಂದು ಲಕ್ಷ ರೂಪಾಯಿ ಫಿಕ್ಸೆಡ್ ಡೆಪೋಸಿಟಲ್ಲಿ ಇಟ್ಟಿದೆ, ಮನೆ ಬಿಟ್ಟ ಮೇಲೆ ಯಾವುದರಲ್ಲೂ ಆಸಕ್ತಿ ಇಲ್ಲದೇ ಈ ವಿಷಯ ಗೊತ್ತಿದ್ದೂ ಸಹ ನಾನು ಹೋಗಲೇ ಇಲ್ಲ ತೆಗಯಲಿಕ್ಕೆ, ಮಗನಿಗೆ ಅದರ ಬಗ್ಗೆ ಹೇಳುತ್ತಿದ್ದಾರೆ, ಅದನ್ನೂ ನುಂಗಿ ಬಿಡುತ್ತಿದ್ದ, ಕಳೆದ ಗುರುವಾರ ನಾನು ಬಂದಾಗ ನಿಮ್ಮ ಮತ್ತು ನಿಮ್ಮ ಮಾಲಕರ ಸಂಭಾಷಣೆ ಕೇಳಿದೆ, ಕೂಡಲೇ ಬ್ಯಾಂಕ್ ಹೋಗಿ ಆ ಹಣ ಕೊಂಡು ಬಂದೆ, ಇದು ಅದೇ ಹಣ, ಇದರಿಂದ ನೀವು ನಿಮ್ಮ ವ್ಯಾಪಾರ ಸರಿ ಮಾಡಿಕೊಳ್ಳಿ, ನನಗೆ ಈಗ ಈ ಹಣ ವ್ಯರ್ಥ. 

ರವಿ "ಆದರೆ ಅಜ್ಜ ಈ ಹಣ ನಿಮ್ಮದು ಹಾಗು ನಿಮ್ಮ ಮಗ ಇದರ ಹಕ್ಕುದಾರ".

"ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ಗುರುವಾರ ಕೇಳದೆ ನನಗೆ ಅನ್ನ ನೀಡಿದ ನೀವೇ ನನ್ನ ನಿಜವಾದ ಮಗ, ನನ್ನ ನಿರ್ಧಾರ ಸರಿಯಾಗಿದೆ, ಬರುವ ಗುರುವಾರ ಬರುತ್ತೇನೆ" ಎಂದು ಹೇಳಿ ಹೊರಟೇಬಿಟ್ಟರು ವೆಂಕಟೇಶ್ ಎಂಬ ಮಹಾನುಭಾವ. ರವಿ ವಿಸ್ಮಯದಿಂದ ಅವರು ಹೋಗುವುನೋದನ್ನು ನೋಡಿತ್ತಿದ್ದ, ಹಿಂದಿಂದ ಅವನಿಗೆ ಅವನ ಇಷ್ಟ ದೇವರು ಸಾಯಿಬಾಬ ಹೋಗುತ್ತಿರುವಂತೆ ಕಂಡು ಬಂತು. 


by ಹರೀಶ್ ಶೆಟ್ಟಿ, ಶಿರ್ವ

Sunday, January 23, 2022

ಭಾವನಾತ್ಮಕ ವಂಚನೆ

 "ನಾನು ಸುಮಾ, ನನ್ನ ವಯಸ್ಸು ೨೨, ನನ್ನ ಅಪ್ಪ ಕೆಲವು ದಿನದಿಂದ ಅರೋಗ್ಯ ಸರಿ ಇಲ್ಲದೆ ನರಳುತ್ತಿದ್ದಾರೆ, ಮನೆಯಲ್ಲಿ ಅಪ್ಪ ಒಬ್ಬರೇ ದುಡಿಯುತ್ತಿದ್ದ ಕಾರಣ ಮನೆಯ ಖರ್ಚು ಹೇಗೋ ಸಾಗುತಿತ್ತು, ಆದರೆ ಈಗ ಅವರು ಹಾಸಿಗೆ ಹಿಡಿದ ನಂತರ ಮನೆಯ ಪರಿಸ್ಥಿತಿ ಗಂಭೀರವಾಗಿದೆ, ನಾನು ಕಾಲೇಜ್ ಮುಗಿಸಿ ಕೆಲಸ ಸಿಗದೇ ಮನೆಯಲ್ಲೇ ಇದ್ದೇನೆ, ಸದ್ಯ ಯಾವುದೇ ಆದಾಯ ಇಲ್ಲದೆ ನಾವು ತುಂಬಾ ಕಷ್ಟದಲ್ಲಿದ್ದೇವೆ, ಆ ಕಾರಣ ನಾವು ಅವರನ್ನು ಆಸ್ಪತ್ರೆ ಸೇರಿಸುವ ಸ್ಥಿತಿಯಲ್ಲೂ ಇಲ್ಲ, ಅಪ್ಪನ ಚಿಕೆತ್ಸೆಗೆ ಸುಮಾರು ಮೂರು ಲಕ್ಷ ಖರ್ಚು ಆಗುತ್ತದೆಯೆಂದು ಡಾಕ್ಟರ್ ತಿಳಿಸಿದ್ದಾರೆ, ದಯಮಾಡಿ ತಾವೆಲ್ಲರೂ ನನಗೆ ಸಹಾಯ ಮಾಡಿ  ಈ ಸಂಕಟದಿಂದ ಪಾರು ಮಾಡಬೇಕೆಂದು ನಿಮ್ಮೆಲ್ಲರಿಂದ ಬೇಡಿಕೊಳ್ಳುವೆ, ನನ್ನ ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ವಿವರಗಳನ್ನು ಈ ವಿಡಿಯೋದಲ್ಲಿ ಹಾಕಿದ್ದೇನೆ ಹಾಗು ಅಪ್ಪನ ರಿಪೋರ್ಟ್ ಕಾಪಿ, ಫೋಟೋ ಸಹ ಹಾಕಿದ್ದೇನೆ, ದಯಮಾಡಿ ಸಹಕರಿಸಿ" ಎಂದು ಕಣ್ಣೀರು ಬಿಡುತ್ತಿದ್ದ ಆ ಸುಮಾ ಎಂಬ ಹುಡುಗಿಯ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ನೋಡಿ ರವಿಗೆ ತುಂಬಾ ಬೇಸರವಾಯಿತು ಹಾಗು ಇವಳಿಗೆ ಸಹಾಯ ಮಾಡಲೇಬೇಕೆಂಬ ನಿರ್ಧಾರಕ್ಕೆ ಬಂದ.

ರವಿ ಕೂಡಲೇ ಬ್ಯಾಂಕಿಂಗೆ ಹೋಗಿ ಹುಡುಗಿ ವಿಡಿಯೋದಲ್ಲಿ ತಿಳಿಸಿದ ಅಕೌಂಟಿಗೆ ೫೦೦೦ ರೂಪಾಯಿ ರವಾನಿಸಿದ ಹಾಗು ತಾನು ಒಂದು ಒಳ್ಳೆ ಕೆಲಸ ಮಾಡಿದೆಯೆಂದು ತೃಪ್ತಿ ಪಡೆದ.

ರವಿ ಬ್ಯಾಂಕಿನ ಬದಿಯಲ್ಲಿದ್ದ ಚಾ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದಾಗ ಹಠಾತ್ತಾಗಿ ಕಾಕತಾಳೀಯವಾಗಿ ಏನೋ ಅವನಿಗೆ ವಿಡಿಯೋದಲ್ಲಿದ್ದ ಆ ಹುಡುಗಿ ಸುಮಾ ಕಂಡು ಬಂದಳು, ಅವಳು ಒಂದು ರಿಕ್ಷಾದಿಂದ ಇಳಿದು ಬ್ಯಾಂಕಿನ ಎಟಿಎಂ ಕಡೆ ಹೋಗುತ್ತಿದ್ದಳು, ರವಿ ಅವಳನ್ನು ಮಾತನಾಡಿಸಿ ತಾನು ಮಾಡಿದ ಸಹಾಯದ ಬಗ್ಗೆ ಹೇಳಬೇಕೆಂದು ಯೋಚಿಸುವಷ್ಟರಲ್ಲಿ ಆ ಹುಡುಗಿ ಬ್ಯಾಂಕ್ ಎಟಿಎಂನಿಂದ ಹೊರ ಬಂದು ಪುನಃ ಆ ರಿಕ್ಷಾದಲ್ಲಿ ಕುಳಿತು ಹೊರಟುಬಿಟ್ಟಳು. ರವಿ ಅವಸರ ಅವಸರದಲ್ಲಿ ಒಂದು ರಿಕ್ಷಾ ಮಾಡಿ ಅವಳನ್ನು ಹಿಂಬಾಲಿಸಿದ, ಒಂದು ೧೫ ನಿಮಿಷದ ನಂತರ ಅವಳ ರಿಕ್ಷಾದವ ತನ್ನ ರಿಕ್ಷಾ ಒಂದು ಹಳೆಯ ಮನ ಎದುರು ನಿಲ್ಲಿಸಿದ, ಹುಡುಗಿ ರಿಕ್ಷಾದವನಿಗೆ ಹಣ ಪಾವತಿಸಿ ಮನೆಯೊಳಗೇ ಹೋದಳು, ರವಿ ಸಹ ಬೇಗ ಬೇಗ ತನ್ನ ರಿಕ್ಷಾದವನಿಗೆ ಹಣ ಪಾವತಿಸಿ ಅವಳನ್ನು ಹಿಂಬಾಲಿಸಿದ, 

ರವಿ ಗೇಟ್ ಬಳಿ ಹೋದಾಗ ಹುಡುಗಿ ಮನೆಯೊಳಗೇ ಹೋಗಿಬಿಟ್ಟಿದ್ದಳು, ಮನೆ ಬಾಗಿಲು ತೆರೆದಿತ್ತು, ರವಿ ಮನೆಯೊಳಗೇ ಹೋಗಲೆಂದು ಯೋಚಿಸುವಾಗ ಒಳಗಿನಿಂದ ಮಾತನಾಡುವ ಸ್ವರ ಕೇಳಿ ಅಲ್ಲೇ ನಿಂತು ಬಿಟ್ಟ, ಒಳಗಿನಿಂದ ಅವಳ ಮಾತು ಕೇಳಿ ಬಂತು "ಮೂವತ್ತು ಸಾವಿರ ಬಂದಿತ್ತು, ೨೫ ಸಾವಿರ ಏಟಿಎಂನಿಂದ ತೆಗೆದೆ"

ನಂತರ ಒಂದು ಗಂಡಸಿನ ಸ್ವರ ಕೇಳಿ ಬಂತು"ಗುಡ್, ನಿನ್ನೆಯ ಹಣ ಸೇರಿಸಿ ಮೂರು ಲಕ್ಷ ಮೂವತೈದು ಸಾವಿರ ಈ ತನಕ ಒಟ್ಟಾಗಿದೆ, ನೋಡಿದೀಯ ನನ್ನ ಪ್ಲಾನಿನ ಮ್ಯಾಜಿಕ್" ಎಂದು ನಕ್ಕ ಸ್ವರ.

ಪುನಃ ಅವಳ ಸ್ವರ ಕೇಳಿ ಬಂತು "ಹೌದು, ಎರಡೇ ದಿನದಲ್ಲಿ ಇಷ್ಟು ಹಣ ಬಂತಲ್ಲ, ನಾವು ಎರಡು ವರ್ಷ ದುಡಿದರೂ ಇಷ್ಟು ಹಣ ಸಿಗಲಿಕ್ಕಿಲ್ಲ, ಆದರೆ ರಾಜು, ಯಾರಿಗಾದರೂ ಗೊತ್ತಾದರೆ ನಾವು ವಿಡಿಯೋದಲ್ಲಿ ಹಾಕಿದ ಅಪ್ಪನ ಫೋಟೋ ನೀನೆ ಎಂದು, ನೀನು ಮುದುಕನ ವೇಷ ಬದಲಾಯಿಸಿ ಹಾಕಿದದ್ದೆಂದು, ಯಾರದರೂ ನಾವು ಕೊಟ್ಟ ಮೊಬೈಲ್ ನಂಬರಿಗೆ ಕಾಲ್ ಮಾಡಿ ಅದು ಇದು ಎಂದು ಹಲವು ಪ್ರಶ್ನೆ ಕೇಳಿದರೆ, ಮತ್ತೆ ಬ್ಯಾಂಕಿಂಗೆ ಹೋಗಿ ಅಕೌಂಟ್ ಬಗ್ಗೆ ವಿಚಾರಿಸಿದರೆ"

ಅದಕ್ಕೆ ರಾಜು ಎಂಬ ಗಂಡಸು "ನೀನು ಟೆನ್ಶನ್ ಮಾಡಬೇಡ ಪ್ರಿಯೆ, ಕೇವಲ ಇನ್ನು ಎರಡೇ ದಿವಸ ಸಂಭಾಳಿಸು, ಕಾಲ್ ಬಂದರೆ ಬೇಸರದ ಸ್ವರದಲ್ಲಿ ಮಾತನಾಡು, ಯಾರಾದರೂ ಹೆಚ್ಚು ವಿಚಾರಿಸಿದರೆ ಬುದ್ಧಿವಂತಿಕೆಯಿಂದ ಉತ್ತರಿಸು, ಇಲ್ಲದೆ ಕಾಲ್ ಡಿಸ್ಕನೆಕ್ಟ್ ಮಾಡಿಬಿಡು, ಎರಡು ದಿನದಲ್ಲಿ ಇನ್ನು ಹಣ ಒಟ್ಟಾಗುತ್ತದೆ, 

ಆ ನಂತರ ಈ ಮೊಬೈಲ್ ನಂಬರ್ ಡಿಸ್ಕನೆಕ್ಟ್ ಮಾಡಿಬಿಡುವ ಹಾಗು ಬ್ಯಾಂಕ್ ಅಕೌಂಟ್ ಖಾಲಿ ಮಾಡಿ ಕ್ಲೋಸ್ ಮಾಡಿಬಿಡುವ, ನಂತರ ಬೇರೆ ಊರು ಬೇರೆ ಪ್ಲಾನು, ಹಹಹಹ" 

ಹುಡುಗಿ " ಹಹಹಹ, ನೀನು ಜೀನಿಯಸ್ ರಾಜು"ಎಂದು ಇಬ್ಬರ ಜೋರು ಜೋರು ನಗುವ ಸ್ವರ ಕೇಳಿ ಬಂತು.

ಹೊರಗೆ ನಿಂತ ರವಿ ಕಕ್ಕಾಬಿಕ್ಕಿಯಾಗಿ ಅವರ ಸಂಭಾಷಣೆ ಕೇಳುತ್ತಿದ್ದ. 


by ಹರೀಶ್ ಶೆಟ್ಟಿ,ಶಿರ್ವ

Saturday, January 22, 2022

ಆತ್ಮೀಯ ಸಂಬಂಧ

 

Photo courtesy: Google

ಕಾಂವ್, ಕಾಂವ್", 

ಆ ಕಾಗೆಯ ವಿಚಿತ್ರ ಕೂಗು ಇಡೀ ಪರಿಸರದಲ್ಲಿ ಕೇಳಿ ಬರುತಿತ್ತು.

ರವಿವಾರದ ದಿವಸ ಆರಾಮವಾಗಿ ಬೆಳಿಗ್ಗೆ ಚಾ ಕುಡಿಯುತ್ತಾ ದಿನಪತ್ರಿಕೆ ಓದುತ್ತಿದ್ದ ಗಣೇಶ ಆ ಕಾಗೆಯ ಕೂಗಿನಿಂದ ಬೇಸತ್ತು, ಹೆಂಡತಿ ಮಾಲತಿಯನ್ನು ಕರೆದು "ಹೇ ಮಾಲತಿ ಏನಿದು ಆ ಪಕ್ಕದ ಮನೆಯ ಕಿಟಕಿಯಲ್ಲಿ ಆ ಕಾಗೆ ಹೀಗೆ ಕಿರುಚುತ್ತಿದೆ? ಒಮ್ಮೆ ಅಟ್ಟಿಬಿಡು ಆಚೆ ಅದನ್ನು"

ಮಾಲತಿ " ಹೌದ್ರಿ ನಾನು ಸಹ ಕೇಳ್ತ ಇದ್ದೇನೆ, ಅದು ನಮ್ಮ ಪಕ್ಕದ ಗಂಗೂ ಆಂಟಿಯ ಮನೆಗೆ ದಿನನಿತ್ಯ ಬರುವ ಕಾಗೆ, ಗಂಗೂ ಆಂಟಿ ದಿನ ಅದಕ್ಕೆ ತಿಂಡಿ ಕೊಟ್ಟು ಅದರ ಬುದ್ಧಿ ಕೆಡಿಸಿದ್ದಾರೆ, ಇವತ್ತೇನೋ ಅವರಿಗೆ ಎದ್ದೇಳಲು ತಡವಾದಂತೆ ಕಾಣುತ್ತದೆ".

"ಹ್ಮ್, ಜನರಿಗೆ ಏನೇನೋ ಹವ್ಯಾಸ, ಇತರರಿಗೆ ಕಷ್ಟ" ಎಂದು ಗಣೇಶ ಕೋಪದಿಂದ ಮುಖ ತಿರುಚಿ ಪುನಃ ದಿನಪತ್ರಿಕೆ ಓದಲಾರಂಭಿಸಿದ.

ಆದರೆ ಈಗ ಕಾಗೆ ಅವರ ಮನೆ ಕಿಟಕಿಯ ಹತ್ತಿರ ಸಹ ಹಾರಾಡುತ್ತ ಬಂದು ವಿಚಿತ್ರವಾಗಿ ಕೂಗಲಾರಂಭಿಸಿತು.

ಗಣೇಶನಿಗೆ ಸಿಟ್ಟು ನೆತ್ತಿಗೇರಿತು, "ಅಯ್ಯೋ ಮಾಲತಿ ಓಡಿಸೋ ಅದನ್ನು, ಸುಮ್ಮನೆ ರವಿವಾರದ ದಿವಸ ಸಹ ಶಾಂತಿಯಿಂದ ಕೂತುಕೊಳ್ಳುವ ಹಾಗೆ ಇಲ್ಲ.

"ರೀ ತಡೆಯಿರಿ", ನಾನು ನೋಡುತ್ತೇನೆ ಎಂದು ಕಾಗೆಯನ್ನು ಓಡಿಸಲು ಮಾಲತಿ ಕಾಗೆಯತ್ತ ಹೋದಾಗ, ಅವಳಿಗೆ ಕಾಗೆಯ ಕಣ್ಣು ಏನೋ ಹೇಳುತ್ತಿದ್ದಂತೆ ಬಾಸವಾಯಿತು. ಅವಳು ಅಲ್ಲೇ ನಿಂತು ಗಣೇಶನಿಗೆ 'ರೀ ನನಗೆ ಏನೋ ಸರಿ ಕಾಣುತ್ತಿಲ್ಲ, ಈ ಕಾಗೆ ಅಂತಹದಲ್ಲ, ಗಂಗೂ ಆಂಟಿ ಇದರ ಜೊತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ, ದಿನ ಇದಕ್ಕೆ ತಿಂಡಿ ಕೊಟ್ಟು ಇದರ ಜೊತೆ ಒಂದೊಂದು ಗಂಟೆ ಮಾತಾನಾಡುತ್ತಾರೆ. ಗಂಗೂ ಆಂಟಿ ಕಾಗೆಯ ಇಷ್ಟು ಕೂಗು ಕೇಳಿ ನಿದ್ರಿಸಲು ಸಾಧ್ಯನೇ ಇಲ್ಲ. ಪಾಪ.... ಒಬ್ಬರೇ ಇರುವುದು ಅವರು, ಇದ್ದ ಒಬ್ಬ ಮಗ ಸಪರಿವಾರ ಪರದೇಶ ಸೆಟ್ಲ್ ಆದ ಮೇಲೆ ಈಚೆ ಮುಖ ಮಾಡಲಿಲ್ಲ, ಪಾಪ ಇವತ್ತು ಏನೋ ಅವರಿಗೆ ಸೌಖ್ಯವಿಲ್ಲ ಕಾಣುತ್ತದೆ , ನಾನು ಅವರ ಮನೆಗೆ ಹೋಗಿ ನೋಡಿ ಬರುತ್ತೇನೆ" ಎಂದು ಹೇಳಿ ಹೊರಗೆ ಪಕ್ಕದ ಮನೆಯತ್ತ ಹೋದಳು.

ಆದರೆ ಗಂಗೂ ಆಂಟಿಯ ಮನೆಯ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ, ಮಾಲತಿ ಪುನಃ ತನ್ನ ಮನೆಗೆ ಓಡಿ ಬಂದು ಗಣೇಶನಿಗೆ "ರೀ ಸ್ವಲ್ಪ ಬನ್ನಿ, ಏನೋ ಅನಾಹುತ ಆಗಿದಂತೆ ಕಾಣುತ್ತದೆ, ಗಂಗೂ ಆಂಟಿ ಬಾಗಿಲು ತೆರೆಯುತಿಲ್ಲ.


ಈಗ ಗಣೇಶ ಸಹ ಸ್ವಲ್ಪ ಚಿಂತಿತನಾಗಿ ಗಂಗೂ ಆಂಟಿಯ ಮನೆಗೆ ಓಡಿದ ಆದರೆ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಎಲ್ಲಾ ಮನೆಯವರು ಸಹ ಅಲ್ಲಿ ಒಟ್ಟಾದರು, ಗಣೇಶ ಮತ್ತು ಅವರೆಲ್ಲರ ಮಧ್ಯೆ ಈಗ ಏನು ಮಾಡುವುದು ಎಂದು ವಿಚಾರ ವಿಮರ್ಶೆ ನಡೆಯಿತು, ಅಂತಿಮವಾಗಿ ಅವರು ಬಾಗಿಲು ಮುರಿಯುವ ನಿರ್ಧಾರಕ್ಕೆ ಒಪ್ಪಿಕೊಂಡರು, ಕಾಗೆ ಈಗಲೂ ಕೂಗುತ್ತಲೇ ಇತ್ತು.


ಬಾಗಿಲು ಮುರಿಯಲಾಯಿತು, ಒಮ್ಮೆಲೇ ಎಲ್ಲರು ಒಳಗೆ ನುಗ್ಗಿದರು, ಒಳಗೆ ಹಾಸಿಗೆಯ ಮೇಲೆ ಶಾಂತಚಿತ್ತ ಮಲಗಿದರು ಗಂಗೂ ಆಂಟಿ, ಮಲಗಿದಲ್ಲೇ ಅವರು ಮೃತ್ಯುಗೆ ಶರಣಾಗಿದ್ದರು, ಮುಖದ ಮೇಲೆ ವೇದನೆಯ ಭಾವ ಇತ್ತು, ಅವರ ಕೈ ಅವರ ಎದೆಯ ಮೇಲೆ ಇತ್ತು ಹಾಗು ಕೈಯಲ್ಲಿ ಮಗನ ಫೋಟೋ ಹಿಡಿದಿದ್ದರು, ಬದಿಯ ಮೇಜಲ್ಲಿ ಒಂದು ಬಟ್ಟಲಲ್ಲಿ ಧಾನ್ಯ ಇಟ್ಟಿತ್ತು, ಬಹುಶ ಬೆಳಿಗ್ಗೆ ಕಾಗೆಗೆ ಕೊಡಲೆಂದೋ ಏನೋ, ಅದನ್ನು ನೋಡಿ ಮಾಲತಿ ಕಿಟಕಿಯತ್ತ ನೋಡಿದ್ದಳು, ಅಲ್ಲಿ ಒಳಗೆ ಇಣುಕುತ್ತಿದ್ದ ಕಾಗೆಯ ಕಣ್ಣಲ್ಲಿ ಅವಳಿಗೆ ನೀರು ಕಂಡು ಬಂತು, ಕಾಗೆ ಈಗ  ಕೂಗುತ್ತಿರಲಿಲ್ಲ, ಅದು ಮೌನವಾಗಿತ್ತು.



by ಹರೀಶ್ ಶೆಟ್ಟಿ, ಶಿರ್ವ

Saturday, January 24, 2015

ಮೊನಿಫಾ

ಮೊನಿಫಾ
-------------
ಇಲ್ಲ, ಅವಳು ಇಂದೂ ಕಾಣಲಿಲ್ಲ, ಮನಸ್ಸಿನಲ್ಲಿ ಕಳವಳ.
ಯಾಕೆ ಬರಲಿಲ್ಲ? ಅವಳಿಗೆ ಏನು ಆಗಲಿಲ್ಲ ತಾನೇ?
ಛೇ ಛೇ, ಬೇಡದ ವಿಷಯ ಯಾಕೆ ಈ ಹಾಳು ಮನಸ್ಸಿನಲ್ಲಿ ಬರುತ್ತದೆ.
ದಿನಾ ಜಾಗಿಂಗ್ ಮಾಡಲು ಬರುತ್ತಿದ ಅವಳು ನಾಲ್ಕು ದಿನದಿಂದ ಯಾಕೆ ಬರಲಿಲ್ಲ, ಚಿಂತೆ ಉಂಟಾಯಿತು, ಯಾಕೆ ಗೊತ್ತಿಲ್ಲ, ಛೇ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲು ಮರೆತು ಹೋದೆ.
ಇದ್ದಕಿದ್ದಂತೆ ಸ್ವಲ್ಪ ದಿವಸ ಮುಂಚೆ ನಡೆದ ಘಟನೆ ಮನಪಟಲದಲ್ಲಿ ಓಡಲಾರಂಭಿಸಿತು.
ಪತ್ನಿ ಸುಮಾಳ ಒತ್ತಾಯಕ್ಕೆ ದಿನಾ ೫ ಗಂಟೆಗೆ ಎದ್ದು ಬದಿಯ ಪಾರ್ಕಿಗೆ ಜಾಗಿಂಗ್ ಹೋಗುತ್ತಿದ್ದ ನಾನು ಒಂದು ದಿನ ಮನಸಿಲ್ಲದ್ದೆ ಓಟ ನಿಲ್ಲಿಸಿ ಹಾಗೆಯೇ ಪಾರ್ಕಲ್ಲಿ ಇದ್ದ ಬೆಂಚಲ್ಲಿ ಸುಸ್ತಾಯಿಸುತ್ತಿದ್ದೆ. ಆಗ ಓಡುತ್ತಿದ್ದ ಅವಳು......
ಅವಳು ೨೦/೨೧ ಹರೆಯದ ಆಫ್ರಿಕನ್ ಹುಡುಗಿ, ದಿನನಿತ್ಯ ಅದೇ ವೇಳೆಗೆ ಜಾಗಿಂಗ್ ಮಾಡಲು ಬರುವ ಅವಳ ಮತ್ತು ನನ್ನ ಸಮಾಗಮವಾಗುತ್ತಿತ್ತು, ಆದರೆ ನಾನಾಗಲಿ, ಅವಳಾಗಲಿ ಯಾವಾಗಲು ಪರಸ್ಪರ ಮಾತನಾಡಲಿಲ್ಲ.
ಆದರೆ ಅಂದು ನಾನು ಕುಳಿತ್ತಿದ್ದುದನ್ನು ನೋಡಿ ಅವಳು ಇಂಗ್ಲಿಷಲ್ಲಿ
"ಹ್ಯೇ ಅಂಕಲ್, ಟೈರ್ಡ್?" (ಹ್ಯೇ ಅಂಕಲ್ ಸುಸ್ತಾಯಿತಾ?).
ನಾನು ನಗು ಬೀರಿ "ನೋ, ಜಸ್ಟ್ ರಿಲೆಕ್ಷಿಂಗ್" (ಇಲ್ಲ, ಸ್ವಲ್ಪ ವಿಶ್ರಮಿಸುತ್ತಿದ್ದೇನೆ).
ಅವಳು ನಕ್ಕು "ಒಹ್, ಒಳ್ಳೆಯದು, ಆದರೆ ನಿಮಗೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಬಹುದಲ್ಲ?"
ನಾನು "ಬೇಗ ಮನೆಗೆ ಹೋದರೆ ಹೆಂಡತಿ ಮನೆಯೊಳಗೆ ನುಗ್ಗಲು ಬಿಡಲ್ಲಿಕ್ಕಿಲ್ಲ" ಎಂದು ತಮಾಷೆಯಿಂದ ಹೇಳಿದೆ.
ಅವಳು "ಒಹ್, ಹಾಗೆಯ" ಎಂದು ನಕ್ಕಳು, ಕರಿ ಬಣ್ಣದ ಆ ಮುದ್ದು ಹುಡುಗಿ ನಕ್ಕಾಗ ನನಗೆ ಸುಂದರ ದೇವದೂತೆಯಂತೆ ಕಂಡು ಬಂದಳು.
ಇದು ನನ್ನ ಮತ್ತು ಅವಳ ಮೊದಲ ಪರಿಚಯ, ಈ ಮೊದಲ ಪರಿಚಯದಲ್ಲಿ ಅವಳು ತನ್ನ ಹೆಸರು "ಮೊನಿಫಾ" ಅಂತ ಹಾಗು ಆಫ್ರಿಕಾದಿಂದ ಬಂದವರು, ಇಲ್ಲಿ ಅವಳು ತನ್ನ ತಂದೆಯ ಜೊತೆ ಇರುವುದು ಎಂದು ತಿಳಿಯಿತು.

ನಾನು ಅವಳ ಹೆಸರ ಅರ್ಥ ಕೇಳಿದಕ್ಕೆ ಅವಳು ಅದರ ಅರ್ಥ "ನಾನು ತುಂಬಾ ಭಾಗ್ಯಶಾಲಿ" ಎಂದು ಹೇಳಿ ನಕ್ಕಳು.
ಇದರ ನಂತರ ಹೀಗೆಯೇ ಏನಾದರು ಒಂದು ವಿಷಯದ ಬಗ್ಗೆ ನಾವು ಜಾಗಿಂಗ್ ಮಾಡುವ ಮಧ್ಯೆ ಸ್ವಲ್ಪ ಕುಳಿತು ಮಾತನಾಡುತ್ತಿದ್ದೆವು.
ಒಂದು ದಿನ ನನಗೆ ಅವಳು ಸ್ವಲ್ಪ ಬೇಸರದಲ್ಲಿ ಇದ್ದಂತೆ ಕಂಡು ಬಂತು, ನಾನು ಕೇಳಿದಕ್ಕೆ....
ಅವಳು " ನಿಮಗೆ ತಿಳಿದಿದೆಯ ಅಂಕಲ್, ನನಗೆ ನನ್ನ ಅಪ್ಪನ ಬಗ್ಗೆ ತುಂಬಾ ಬೇಜಾರಾಗುತ್ತಿದೆ."
ನಾನು "ಯಾಕೆ, ಏನಾಯಿತು, ಯಾಕೆ ನೀನಿಷ್ಟು ಅಸಮಾಧಾನದಲ್ಲಿ ಇರುವೆ?"
ಅವಳು "ನನ್ನ ಅಪ್ಪ ಏಕಾಂತದಲ್ಲಿ ತುಂಬಾ ಅಳುತ್ತಾರೆ, ನಾನು ಹಲವು ಸಲ ನೋಡಿದೆ ಅವರನ್ನು ಅವರ ಬೆಡ್ರೂಮಿನಲ್ಲಿ ಅಳುವುದನ್ನು".
ನಾನು ಆಶ್ಚರ್ಯದಿಂದ " ಆದರೆ ಯಾಕೆ? ಯಾಕೆ ಅವರು ಅಳುತ್ತಾರೆ?"
ಅವಳು ಸಹಜವಾಗಿ "ನನಗೆ ಕ್ಯಾನ್ಸರ್ ಕಾಯಿಲೆ ಇದೆಯಲ್ಲ, ಅದಕ್ಕೆ...."
ನನಗೆ ತೀವ್ರ ಆಘಾತವಾಯಿತು "ಏನು?"
ಅವಳು ನಿರಾಸೆಯಲ್ಲಿ "ಹೌದು ಅಂಕಲ್, ನನಗೆ ಕ್ಯಾನ್ಸರ್ ಆಗಿದೆ ಹಾಗು ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಡಾಕ್ಟರ ಹೇಳಿದ್ದಾರೆ."
ನಾನು ಸ್ತಬ್ದಗೊಂಡು ಅವಳನ್ನು ನೋಡಿದೆ.
ಅವಳು ಮುಂದುವರಿಸಿದಳು "ನನ್ನ ಮುಂದೆ ನನ್ನಪ್ಪ ತುಂಬಾ ಖುಷಿಯಲ್ಲಿರುತ್ತಾರೆ, ನನ್ನನ್ನು ಸಂತೋಷಗೊಳಿಸಲು ಯಾವಗಲು ನನ್ನ ಮುಂದೆ ನಗುತ್ತಲೇ ಇರುತ್ತಾರೆ, ಆದರೆ ಅವರು ಏಕಾಂತದಲ್ಲಿ ತುಂಬಾ ಅಳುತ್ತಾರೆ, ಅವರನ್ನು ನೋಡಿ ನನ್ನ ಹೃದಯಕ್ಕೆ ತುಂಬಾ ನೋವಾಗುತ್ತದೆ, ಪಾಪ, ಅಮ್ಮ ತೀರಿ ಹೋದ ನಂತರ ಎಷ್ಟು ಕಾಳಜಿಯಿಂದ ನನ್ನನ್ನು ಸಾಕಿದರು, ಆದರೆ ಈಗ ನಾನು ಕೇವಲ ಸ್ವಲ್ಪ ದಿನವೇ ಈ ಜಗದಲ್ಲಿ ಇರುವೆ ಎಂದು ಗೊತ್ತಾದ ನಂತರ ಅವರು ತುಂಬಾ ಅಶಕ್ತರಾಗಿದ್ದಾರೆ, ಕೇವಲ ನನ್ನ ಮುಂದೆ ನಗುತ ಇರುತ್ತಾರೆ, ಆದರೆ...."
ಇದನ್ನು ಕೇಳಿ ನನ್ನ ಅವಸ್ಥೆ ಹಾಳಾಯಿತು, ನನಗೆ ಅವಳಿಗೆ ಹೇಗೆ ಸಮಾಧಾನ ನೀಡುವುದು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಆಘಾತದಲ್ಲಿ ಕುಳಿತು ನಾನು ಅವಳಿಗೆ "ಚಿಂತಿಸ ಬೇಡ, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಅವಳ ಹತ್ತಿರ ಬೇರೆ ವಿಷಯ ಮಾತಾಡಿ ಅವಳನ್ನು ಸ್ವಲ್ಪ ನಗಿಸಿ ಅಂದು ಕಳಿಸಿದೆ.
ಮಾರನೆ ದಿವಸ ನಾನು ಅವಳಿಗೆ "ಡಿಯರ್, ನನ್ನ ಹೆಂಡತಿಯ ಊರಿನಲ್ಲಿ ಒಂದು ಸ್ವಾಮೀಜಿ ಇದ್ದಾರಂತೆ, ಅವರು ಈ ಕ್ಯಾನ್ಸರ್ ಕಾಯಿಲೆಗೆ ಮದ್ದು ಕೊಡುತ್ತಾರಂತೆ, ಆ ಮದ್ದಿನಿಂದ ತುಂಬಾ ಜನರ ಕಾಯಿಲೆ ನಿವಾರಣ ಆಗಿದೆಯಂತೆ".
ಅವಳು ಕ್ಷೀಣ ನಗು ಬೀರಿ "ನಿಜವಾಗಿಯೂ."
ನಾನು " ಎಸ್ ಡಿಯರ್, ಬಹುಶಃ ಆ ಮದ್ದಿನಲ್ಲಿ ದೈವಿಕ ಶಕ್ತಿ ಇರಬೇಕು, ನಾನು ನಾಳೆ ಇಂಡಿಯಾ ಹೋಗಿ ಊರಿನಿಂದ ನಿನಗೋಸ್ಕರ ಆ ಮದ್ದು ತರುತ್ತೇನೆ".
ಅವಳು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
ನಾನು ಕೋಪದಿಂದ "ನೋ, ನಥಿಂಗ್ ವಿಲ್ ಹ್ಯಾಪ್ಪೆನ್ ಟು ಯು" ("ಇಲ್ಲ, ನಿನಗೆ ಏನ್ ಆಗಲ್ಲ"), ನೀನು ಒಂದು ವಾರ ನನ್ನ ವೇಟ್ ಮಾಡು, ನಾನು ಬೇಗನೆ ಇಂಡಿಯಾ ಹೋಗಿ ಬರುತ್ತೇನೆ".
ಅವಳು "ನೋ ಅಂಕಲ್, ಯಾಕೆ ನೀವು ಇಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದಿರಿ, ಪ್ಲೀಸ್ ಡೊಂಟ್ ಗೋ"
ನಾನು " ನೋ , ಐ ವಿಲ್ ಗೋ, ಈ ವಾಂಟ್ ಯು ಟು ಬಿ ಪರ್ಫೆಕ್ಟ್" (ಇಲ್ಲ, ನಾನು ಹೋಗುವೆ, ನನಗೆ ನೀನು ಸರಿಯಾಗಬೇಕು)".
ಅವಳ ಕಣ್ಣಿಂದ ಕಣ್ಣೀರು ಹರಿಯಿತು "ಯು ಆರ್ ಲೈಕ್ ಏಂಜಲ್ ಫಾರ್ ಮಿ ಅಂಕಲ್" ( ನೀವು ನನಗೆ ದೇವದೂತರಂತೆ ಅಂಕಲ್").
ನಾನು "ನೋ ಡಿಯರ್, ಯು ಆರ್ ಅ ಏಂಜಲ್ ಬೇಬಿ, ವೇಟ್ ಫಾರ್ ಮಿ " (ಇಲ್ಲ ಡಿಯರ್, ನೀನು ದೇವದೂತೆ ಮಗು, ನನ್ನನ್ನು ಕಾಯು).
ಅಂದು ಅವಳು ಕಣ್ಣಲ್ಲಿ ಕಣ್ಣೀರು ತುಂಬಿ ನನಗೆ ವಿದಾಯ ಹೇಳಿದಳು.
ಆದರೆ ನಾನು ಹಿಂತಿರುಗಿ ನಾಲ್ಕು ದಿನವಾದರೂ ಅವಳು ಕಾಣದ ಕಾರಣ ನನಗೆ ಅವಳ ಬಗ್ಗೆ ಚಿಂತೆ ಮೂಡಿತು. ಅವಳಿಗೋಸ್ಕರ ತಂದ ಮದ್ದು ಕೈಯಲ್ಲಿ ಹಿಡಿದು ದಿನಾ ಬೆಳಿಗ್ಗೆ ಹುಚ್ಚನಂತೆ ಪಾರ್ಕಲ್ಲಿ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳು ಸಿಗಲಿಲ್ಲ. ಮನಸ್ಸಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿತು.
ಎಲ್ಲಿ ಹೋದಳು? ಮರಳಿ ಆಫ್ರಿಕಾ ಹೋದಳ? ಅಯ್ಯೋ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲಿಲ್ಲ.
ಹೇಗೋ ತನ್ನನು ತಾನು ಸಾವರಿಸಿದೆ, ಆದರೆ ದಿನನಿತ್ಯದ ಕೆಲಸದ ಮಧ್ಯೆ ಸಹ ಅವಳ ಯೋಚನೆ ಬರುತ್ತಿತ್ತು.
ಆ ದಿನ ಬೆಳಿಗ್ಗೆ ಆಫೀಸ್ ಬಂದು ಕೂತು ದಿನಪತ್ರಿಕೆ ನೋಡುತ್ತಿದ್ದಾಗ, ಹೀಗೆಯೇ ಒಂದು ಕಡೆ ನನ್ನ ಗಮನ ಹೋಯಿತು.
Sad demise (ದುಖಃ)
ಕೆಳಗೆ ಆ ಮುದ್ದು ಹುಡುಗಿಯ ಚಿತ್ರ ಇತ್ತು.
ನನ್ನ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿದು ಅವಳ ಚಿತ್ರದ ಮೇಲೆ ಬೀಳಲಾರಂಭಿಸಿತು, ದಿನಪತ್ರಿಕೆ ಹಿಡಿದು ಬ್ಯಾಗಲ್ಲಿ ಇಟ್ಟಿದ ಅವಳ ಮದ್ದು ಕಟ್ಟು ಕೈಯಿಂದ ತೆಗೆದೆ, ಅವಳು ಹೇಳಿದ ಮಾತು ನೆನಪಾಯಿತು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
by ಹರೀಶ್ ಶೆಟ್ಟಿ, ಶಿರ್ವ

Wednesday, January 21, 2015

ಜೀವನದ ತಿರುವು

ಜೀವನದ ತಿರುವು
------------------

ಯಾವಾಗಲೊಮ್ಮೆ ಈಗಲೂ ನಗುತ್ತಿದ್ದ ಅವನು, ಆದರೆ ಹೆಚ್ಚಾಗಿ ಈಗ ಅವನ ಮುಖದಲ್ಲಿ ಗಂಭೀರತೆ ಕಂಡು ಬರುತಿತ್ತು.  

ಗತಕಾಲವನ್ನು ನೆನೆದು ದುಖಃ ಉಮ್ಮಳಿಸಿ ಬರುತಿತ್ತು ಅವನಿಗೆ, ಜೀವನದ ಸ್ವರ್ಣಕಾಲವನ್ನು ಹೀಗೆಯೇ ವ್ಯರ್ಥ ಅಲೆದು ಕಳೆದದ್ದಕ್ಕೆ. 

ಅಮ್ಮ ತಮ್ಮ, ಅವರ ಇವರ ಸಹಾಯದಿಂದ ಹೇಗೋ ತನ್ನ ಕುಟುಂಬದ ಭಾರವನ್ನು ವಹಿಸಿಕೊಂಡಿದ್ದ ಅವನ ಮಕ್ಕಳೂ ದೊಡ್ಡವರಾಗಿದ್ದರು, ಹೇಗೋ ಜೀವನದ ಬಂಡಿ ಮೆಲ್ಲ ಮೆಲ್ಲನೆ ನಡೆಯುತ್ತಿತ್ತು. 

"ಆದರೆ ಇನ್ನೆನು......ಈ ಹಾಳು ರೋಗ ಹೇಗೆ ನನಗೆ ಬಂತು" ಎಂದು ಯೋಚಿಸಿ ಯೋಚಿಸಿ ಅವನಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು.

ತುಂಬಾ ಯೋಚಿಸಿ ತಮ್ಮನನ್ನು ಸಂಪರ್ಕಿಸಿದ, ಎಲ್ಲವನ್ನು ಬೇಗನೆ ಹೇಳಿ ಮುಗಿಸಿ ಬಿಟ್ಟ. ತಮ್ಮ ಇವನಿಂದ ಕೋಪಗೊಂಡಿದ್ದರೂ, ವಿಷಯ ಕೇಳಿ ತಮ್ಮನಿಗೆ ತೀವ್ರ ಆಘಾತವಾಯಿತು. 

ಯಾವಾಗಲು ಅವನಿಗೆ ಬುದ್ದಿ ಹೇಳಿ ಬೈಯ್ಯುತ್ತಿದ್ದ ತಮ್ಮ ಅವನ ಕಾಯಿಲೆಯ ಬಗ್ಗೆ ಕೇಳಿ ಸ್ತಬ್ದನಾದ, ಒಂದು ಧೀರ್ಘ ಉಸಿರೆಳೆದು ಅವನಿಗೆ ಸಮಾಧಾನದಿಂದ ಧೈರ್ಯ ಇಟ್ಟುಕೊಳ್ಳಲು ಹೇಳಿದ.

"ನಾನೀಗ ಎಲ್ಲ ಹಾಳು ಅಭ್ಯಾಸ ಬಿಟ್ಟು ಬಿಟ್ಟಿದ್ದೇನೆ" ಎಂದು ಹೇಳಿ ಅತ್ತ ಅವನು.

ತಮ್ಮ "ಏನು ಪ್ರಯೋಜನ, ಈಗ ತಡವಾಯಿತಲ್ಲ" ಎಂದು ಹೇಳಬೇಕೆಂದು ಬಯಸಿದ ಆದರೆ ಹೇಳಲಿಲ್ಲ.

"ಅಯ್ಯೋ, ಯಾಕೆ ಇಂತಹ ಕಾಯಿಲೆ ಅವನಿಗೆ ಬಂತು!"

"ಇನ್ನು ಆಯಿತಲ್ಲ ಬಿಡು, ಆಗುವುದೆಲ್ಲ ಆಗಿ ಹೋಯಿತು, ಇನ್ನು ಉಳಿದ ಜೀವನ ವ್ಯರ್ಥ ಮಾಡಬೇಡ, ಎಲ್ಲಾದರೂ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಳ್ಳು,ಆದಷ್ಟು ಸಹಾಯ ನಾನು ಮಾಡುವೆ, ಹೇಗಾದರೂ  ಕಷ್ಟಪಟ್ಟು ಇನ್ನಾದರು ನಿನ್ನ ಕುಟುಂಬವನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳು, ಧೈರ್ಯ ಇಡು, ನಾನಿದ್ದೇನೆ" ಎಂದು ಹೇಳಿ ಅಳು ತಾಳಲಾರದೆ ತಮ್ಮ ಫೋನ್ ಇಟ್ಟು ಬಿಟ್ಟ.

ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದ ಅವನು ಧೈರ್ಯ ಇಟ್ಟುಕೊಂಡು ನಡೆದ ಜೀವನದ ಹೊಸ ಹಾದಿಯನ್ನು ಹುಡುಕಲು, ತನ್ನ ಜೀವನಕ್ಕೆ ಒಂದು ಅರ್ಥ ಕೊಡಲು, ಒಂದು ಹೊಸ ಅಧ್ಯಾಯ ಬರೆಯಲು.

by ಹರೀಶ್ ಶೆಟ್ಟಿ, ಶಿರ್ವ 

Wednesday, September 17, 2014

ಕ್ರಾಂತಿ


ಈ ಬದುಕ ಪಯಣದಲ್ಲಿ ನಮಗೆ ಕಾಕತಾಳೀಯವಾಗಿ ಅದೆಷ್ಟೋ ಅಪರಿಚಿತ ಜನರು ಸಿಗುತ್ತಾರೆ. ಅದರಲ್ಲಿ ಕೆಲವರು ಸದಾ ನೆನಪಿನಲ್ಲಿ ಉಳಿದು ಹೋಗುತ್ತಾರೆ, ಕೆಲವರು ಮರೆತು ಹೋಗುತ್ತಾರೆ.

ಹೀಗೆಯೇ ಬಾಲ್ಯದ ಒಂದು ಮರೆಯಲಾರದ ಘಟನೆ, ಚಿಕ್ಕವನಿದ್ದಾಗ ನನಗೆ ಹಿಂದಿ ಸಿನಿಮಾ ನೋಡುವುದೆಂದರೆ ತುಂಬಾ ಇಷ್ಟ, ದೊಡ್ಡವರು ಯಾರಾದರು ಸಿನಿಮಾದ ವಿಷಯ ಮಾತನಾಡಿದರೆ, ನಾನು ಅವರನ್ನು ತುಂಬ ಧ್ಯಾನದಿಂದ ಕೇಳುತ್ತಿದ್ದೆ. ಈ ಹುಚ್ಚು ದಿವಸ ದಿವಸ ಹೆಚ್ಚಾಗುತ್ತಲೇ ಹೋಯಿತು, ಮೇಲಿಂದ ನಮ್ಮ ವಸತಿಗೃಹದ ಬದಿಯಲ್ಲಿಯೇ ಮೂರು ಹೊಸ ಚಿತ್ರಮಂದಿರ ಪ್ರಾರಂಭವಾಯಿತು, ಹೆಸರು ಸಹ ಆಕಷಿ೯ತವಾಗಿತ್ತು, ಬಾದಲ್, ಬಿಜಲಿ, ಬರ್ಖಾ. 

ನನ್ನ ಈ ಸಿನಿಮಾ ಹುಚ್ಚುವಿನ ಬಗ್ಗೆ ನಮ್ಮ ಎಲ್ಲ ನೆರೆಹೊರೆಯವರಿಗೆ ತಿಳಿದಿತ್ತು, ಅದಕ್ಕೆ ನನ್ನ ನೆರೆಯವರು ಯಾವಗಲೊಮ್ಮೆ ಅವರ ಜೊತೆ ನನ್ನನ್ನು ಸಹ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು, ನನ್ನ ಈ ಸಿನಿಮಾ ಹುಚ್ಚು ಹೀಗೆಯೇ ಏರುತ್ತ ಹೋಯಿತು. ಚಿತ್ರಮಂದಿರ ಬದಿಯಲ್ಲಿಯೇ ನನ್ನ ತಂದೆಯ ಹೋಟೆಲ್ ಸಹ ಇತ್ತು, ಚಿತ್ರಮಂದಿರದಲ್ಲಿ ಟಿಕೆಟ್ ಬ್ಲಾಕ್ ಮಾಡುವವರು ಯಾವಗಲು ನನ್ನ ತಂದೆಯ ಹೋಟೆಲಿಗೆ ಬಂದು ಪಟ್ಟಂಗ ಹೊಡೆಯೋಕೆ ಬರುತ್ತಿದ್ದರು, ಅವರಲ್ಲಿ ಒಬ್ಬ ಬಂಡ್ಯ ಯಾವಗಲು ಬಂದು ನನ್ನನ್ನು ಮುದ್ದಿಸುತ್ತಿದ್ದ, ಹೀಗೆಯೇ ಅವನ ಪರಿಚಯ ನನ್ನ ಹತ್ತಿರ ಗಾಡವಾಯಿತು, ನಾನು ಅವನ ಹತ್ತಿರ ಒಂದೊಂದು ಗಂಟೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೆ.

ಒಂದು ದಿವಸ ಬಂಡ್ಯ ಹಾಗು ಇತರ ಎರಡು ಮೂರು ಜನ ( ಎಲ್ಲಾ ಟಿಕೆಟ್ ಬ್ಲಾಕ್ ಮಾಡುವವರೇ) ತುಂಬಾ ಉದ್ವೇಗ ಹಾಗು ಬೇಸರದಿಂದ ಪಪ್ಪಾನ ಹೋಟೆಲಿಗೆ ಬಂದರು.

ಪಪ್ಪಾ ಅವರನ್ನು ನೋಡಿ "ಕಾಯ್ ಆಜ್ ಸರ್ವ ಖುಪ್ ವೈತಾಗ್ಲ ಸಾರ್ಕ ವಾಟತಯ್"(ಏನು ಎಲ್ಲರು ತುಂಬಾ ಬೇಸರದಲ್ಲಿದ್ದಂತೆ ಕಾಣುತ್ತದೆ).

ಅವರಲ್ಲಿ ಒಬ್ಬಾತ "ಕಾಯ್ ಸಾಂಗು ಸೆಟ್, ಯೇ ಬಗಾ ಕಿತಿ ಟಿಕೆಟ್ ಉರ್ಲಯ್" (ಏನು ಹೇಳಲಿ ಶೆಟ್ರೆ, ಎಷ್ಟು ಟಿಕೆಟ್ ಉಳಿದಿದ್ದೆ ನೋಡಿ) ಎಂದು ಅದೆಷ್ಟೋ ಟಿಕೆಟ್ ತೋರಿಸಿದ, ಅದು ಆ ಶೋವಿನ ಬಿಕ್ರಿ ಆಗದೆ ಉಳಿದ ಟಿಕೆಟ್.

ಪಪ್ಪಾ ನಗುತ "ಒಹ್ ಅಸಾ ಕಾಯ್" (ಒಹ್ ಹಾಗೇಯ) ಎಂದರು.

ಆಗ ಬಂಡ್ಯ ನನ್ನನ್ನು ಕುರಿತು "ಹೇ ಬಾರ್ಕಿಯ, ಪಿಕ್ಚರ್ ಬಗ್ನಾರ್" (ಹೇ ಪುಟ್ಟ, ಚಲನಚಿತ್ರ ನೋಡುತ್ತಿಯ).

ನಾನು ಪಪ್ಪಾನ ಕಡೆ ನೋಡಿದೆ, ನನ್ನ ತಂದೆಗೆ ನನ್ನ ಸಿನಿಮಾ ಹುಚ್ಚಿನ ಬಗ್ಗೆ ತಿಳಿದಿತ್ತು, ಆದರೆ ಅವರು ಅವರಿಗೆ "ನಕೊ ನಕೊ ಕಶಾಲ, ಏಕಟ ಕುಟೆ ಜಾನಾರ್" (ಬೇಡ ಬೇಡ, ಒಬ್ಬನೇ ಎಲ್ಲಿಗೆ ಹೋಗುವುದು).

ಬಂಡ್ಯ "ಜಾವು ದ್ಯ ಹೊ ಸೆಟ್, ಬಾಜುಲಚ್ ತರ್ ಹಯ್" (ಹೋಗಲಿ ಶೆಟ್ರೆ, ಬದಿಯಲ್ಲಿ ತಾನೇ ಇದೆ).

ಅವರೆಲ್ಲ ತುಂಬಾ ಹೇಳಿದ ನಂತರ, ಪಪ್ಪಾ ಒಪ್ಪಿಗೆ ನೀಡಿದರು. ನಾನು ಅವರಿಂದ ಟಿಕೆಟ್ ಪಡೆದು ಓಡಿದೆ, ಚಿತ್ರಮಂದಿರಕ್ಕೆ, ಶೋ ಶುರುವಾಗಿತ್ತು, ಆದರೆ ನನಗೆ ಎಲ್ಲಿಲ್ಲದ ಖುಷಿಯೇ ಖುಷಿ, ಬಹುಶಃ ಒಬ್ಬನೇ ನೋಡುತ್ತಿದ್ದೇನೆ ಅದಕ್ಕೆ ಏನೋ.

ಮೆಲ್ಲ ಮೆಲ್ಲ ಯಾವಾಗಲೊಮ್ಮೆ ಅಮ್ಮನಿಂದ ಬೇಡಿ ಬೇಡಿ ನಾನು ಒಬ್ಬನೇ ಸಹ ಸಿನಿಮಾ ನೋಡಲು ಪ್ರಾರಂಭಿಸಿದೆ.

ಆ ಸಮಯ ಮನೋಜ್ ಕುಮಾರ್ ಅವರ ‘ಕ್ರಾಂತಿ’ ಪಿಕ್ಚರ್ ರಿಲೀಸ್ ಆಯಿತು, ಬರ್ಖಾ ಚಿತ್ರಮಂದಿರದಲ್ಲಿ ಅದರ ಭವ್ಯ ಪೋಸ್ಟರ್ ನೋಡಿ ನಾನು ಮನಸ್ಸಲ್ಲಿ ಈ ಚಲನಚಿತ್ರ ನೋಡಲೇ ಬೇಕೆಂದು ಖಚಿತ ಮಾಡಿಕೊಂಡೆ.

ಮಧ್ಯಾಹ್ನ ನಾನು ಅಮ್ಮನಿಗೆ ಹೇಗಾದರೂ ಪುಸಲಾಯಿಸಿ ಹಣ ಪಡೆದು ಪಿಕ್ಚರ್ ನೋಡಲು ಹೊರಟೆ, ಆದರೆ ಅಲ್ಲಿ ಹೋಗಿ ಮನಸ್ಸಲ್ಲಿ ನಿರಾಸೆ ಮೂಡಿತು, ಶೋ ಹೌಸ್ ಫುಲ್ ಆಗಿತ್ತು, ನಾನು ಬಂಡ್ಯನನ್ನು ಹುಡುಕಿದೆ, ಆದರೆ ಅವನು ಎಲ್ಲಿಯೂ ಕಾಣಲಿಲ್ಲ.

ಹೀಗೆಯೇ ನಿರಾಸೆಯಲ್ಲಿ ನಿಂತಾಗ ಒಬ್ಬಾತ ನನ್ನಲ್ಲಿ ಬಂದು "ಟಿಕೆಟ್ ಬೇಕಾ?"

ನಾನು ಅತಿ ಉತ್ಸಾಹದಿಂದ "ಹೌದು ಬೇಕು, ಬೇಕು."

ಅವನು ಮೆಲ್ಲನೆ "ಬಾ ನನ್ನ ಹಿಂದೆ, ಇಲ್ಲಿ ಪೊಲೀಸರು ಇದ್ದಾರೆ."

ನಾನು ಕೂಡಲೇ ಅವನ ಹಿಂದೆ ಹೋದೆ, ಒಂದು ಮೂಲೆಯಲ್ಲಿ ಅವನು ನನಗೆ ಟಿಕೆಟ್ ಕೊಟ್ಟು "ತೆಗೋ, ಬೇಗ ಹಣ ಕೊಡು", ನಾನು ಕೂಡಲೇ ಅಮ್ಮನಿಂದ ಪಡೆದ ಹಣ ತೆಗೆದು ಅವನಿಗೆ ಕೊಟ್ಟೆ, ಅವನು ಒಂದು ವಿಚಿತ್ರ ನಗು ಬೀರಿ ನನ್ನತ್ತ ನೋಡಿದ, ಸಂತೋಷದಿಂದ ನನ್ನ ಹೃದಯ ದಡ ದಡ ಬಡಿಯುತ್ತಿತ್ತು.

ಶೋ ಶುರುವಾಗುವ ಸಮಯ ಆಯಿತು, ಎಲ್ಲರು ಚಿತ್ರಮಂದಿರದ ಒಳಗೆ ಹೋಗಲಾರಂಭಿಸಿದರು, ಗೇಟಿನಲ್ಲಿ ನಿಂತಿದ ಮನುಷ್ಯ ಎಲ್ಲರಿಗೆ ಟಿಕೆಟ್ ಹರಿದು ಅರ್ಧ ತುಂಡು ಅವರಿಗೆ ಕೊಡುತ್ತಿದ್ದ, ನಾನು ಟಿಕೆಟ್ ಕೊಟ್ಟೆ, ಅವನು ಗಡಿಬಿಡಿಯಲ್ಲಿ ಹರಿದು ಕೊಟ್ಟ, ನಾನು ಒಳಗೆ ನುಗ್ಗಿದೆ.

ಚಿತ್ರಮಂದಿರದ ಒಳಗೆ ಕತ್ತಲೆ ಇತ್ತು, ಒಬ್ಬ ಬ್ಯಾಟರಿಯಿಂದ ಟಿಕೆಟ್ ಚೆಕ್ ಮಾಡಿ ಜನರಿಗೆ ಅವರ ಸ್ಥಾನ ತೋರಿಸುತ್ತಿದ್ದ, ನಾನು ಅವನ ಬಳಿ ಹೋದೆ, ಅವನು ನನ್ನಿಂದ ಟಿಕೆಟ್ ಪಡೆದು ನೋಡಲಾರಂಭಿಸಿದ, ನೋಡಿದಂತೆ ಅವನು "ಎಲ್ಲಿಂದ ಪಡೆದೆ ಈ ಟಿಕೆಟ್?"

ನಾನು "ಒಂದು ಅಂಕಲ್ ಕೊಟ್ಟರು, ನಾನು ಅವರಿಗೆ ಹಣ ಕೊಟ್ಟೆ."

ಅವನು "ಅರೆ ಮೂರ್ಖ, ಅವನು ನಿನ್ನಿಂದ ಮೋಸ ಮಾಡಿದ್ದಾನೆ, ಇದು ಹಳೆಯ ಟಿಕೆಟ್, ಈಗ ನಿನಗೆ ಪಿಕ್ಚರ್ ನೋಡಲು ಸಾಧ್ಯವಿಲ್ಲ, ಹೋಗು ಇನ್ನು."

ನಾನು ಮೂಕವಿಸ್ಮಿತನಾಗಿ ಅವನನ್ನು ನೋಡಿದೆ, ಕಣ್ಣೀರು ರಭಸದಿಂದ ನನ್ನ ಕಣ್ಣಿಂದ ಹರಿಯಲಾರಂಭಿಸಿತು.

ನಾನು ಅಲ್ಲೇ ನಿಂತೇ, ಟಿಕೆಟ್ ಚೆಕ್ ಮಾಡುತ್ತಿದ್ದವ ಇತರರ ಟಿಕೆಟ್ ಚೆಕ್ ಮಾಡುತ್ತಿದ್ದ, ನನ್ನನ್ನು ಈಗಲೂ ನಿಂತಿದನ್ನು ನೋಡಿ "ಏನು ಇನ್ನು ಹೋಗಲಿಲ್ಲ, ಮತ್ತೆ ಯಾಕೆ ಹೀಗೆ ಟಿಕೆಟ್ ತೆಗೆದು ಕೊಂಡೆ, ಮೂರ್ಖ."

ನಾನು ಸ್ವಲ್ಪ ಹೊತ್ತು ಹೀಗೆಯೇ ಕಣ್ಣೀರಿಡುತ್ತಾ ನಿಂತುಕೊಂಡೆ, ಕೊನೆಗೆ ಹಿಂತಿರುಗಿ ಹೋಗುವೆ ಎಂದಾಗ, ಟಿಕೆಟ್ ಚೆಕ್ ಮಾಡುವವ "ಹೇ ನಿಲ್ಲು."

ನಾನು ನಿಂತೇ, ಅವನು ಮೆಲ್ಲನೆ "ನೋಡು, ನಿನ್ನನ್ನು ನೋಡಿ ಬೇಸರವಾಗುತ್ತದೆ, ಈಗ ಹೋಗಿ ಆ ಮೂಲೆಯಲ್ಲಿ ನಿಲ್ಲು, ನಂತರ ನಾನು ನಿನಗೆ ಕುರ್ಚಿ ತಂದು ಕೊಡುತ್ತೇನೆ" ಎಂದ, ನನಗೆ ದೇವರು ಒಲಿದಂತೆ ಆಯಿತು "ಆಯಿತು, ತೊಂದರೆ ಇಲ್ಲ, ನಾನು ನಿಂತುಕೊಂಡೆ ನೋಡುತ್ತೇನೆ."

ಅವನು "ನಿಂತುಕೊಂಡು! ನನ್ನ ಕೆಲಸದಿಂದ ಹೊರ ದೂಡಲಿಕ್ಕೆ ಇದೆಯೇನು ನಿನಗೆ, ಮೆಲ್ಲನೆ ಹೋಗಿ ನಿಲ್ಲು, ನಾನು ನಂತರ ಬರುತ್ತೇನೆ." ಎಂದ ಆ ದೇವತಾ ಮನುಷ್ಯ.

ಆ ಭವ್ಯ  ಚಲನಚಿತ್ರ ‘ಕ್ರಾಂತಿ’ ನೋಡುವಾಗ ನಾನು ಎಲ್ಲವನ್ನು ಮರೆತು ಹೋದೆ ಚಲನಚಿತ್ರ ಶುರು ಆದ ಸ್ವಲ್ಪ ಸಮಯದ ನಂತರ, ಆ ದೇವತಾ ಮನುಷ್ಯ ಎರಡು ಸಣ್ಣ ಕುರ್ಚಿ ತಂದ. ನಾವಿಬ್ಬರು ಅಲ್ಲೇ ಕುಳಿತುಕೊಂಡು ಆ ಪಿಕ್ಚರ್ ನೋಡಿದ್ದೆವು, ಆ ಒಳ್ಳೆಯ ಮನುಷ್ಯ ಇಂಟರ್ವಲ್ ಆದಾಗ ನನಗೆ ತಿನ್ನಲು ಸಮೋಸ ಹಾಗು ಐಸ್ ಕ್ರೀಂ ಸಹ ತಂದು ಕೊಟ್ಟ.

ಚಲನಚಿತ್ರ ಮುಗಿದ ನಂತರ ಅವನು ವ್ಯಸ್ತನಾದ, ನಾನು ಅವನಿಗೆ 'ತುಂಬಾ ಧನ್ಯವಾದ' ಹೇಳಿದೆ, ಅವನು ನಗುತ್ತಲೇ ನನ್ನ ಗಲ್ಲ ಹಿಡಿದ, ನಾನು ಭಾವುಕನಾಗಿ ಖುಷಿಯಿಂದ ಅಲ್ಲಿಂದ ಮನೆಗೆ ತೆರಳಿದೆ.

ಇಂದಿಗೂ ಸಹ ಆ ಅಪರಿಚಿತ ದೇವತಾ ಮನುಷ್ಯನ ನೆನಪಾಗುತ್ತದೆ.


by ಹರೀಶ್ ಶೆಟ್ಟಿ,ಶಿರ್ವ

Tuesday, August 5, 2014

ಲೋಕೆಟ್ ಚೈನ್

ಲೋಕೆಟ್ ಚೈನ್
------------------

ಕಣ್ಣು ತುಂಬಿ ಬಂತು ಪುನಃ ಅಲ್ಲಿಗೆ ಬಂದು, ಸ್ಮೃತಿಯಲ್ಲಿ ಬಾಲ್ಯದ ಕೆಲವು ಘಟನೆಗಳು ಚಲಚಿತ್ರದ ಹಾಗೆ   ಓಡಲಾರಂಭಿಸಿತು.

ಮೂರು ಮಹಡಿಯ ನಮ್ಮ ಆ ಬಿಲ್ಡಿಂಗ್ ಈಗ ಒಂದು ವಿಶಾಲ ಮಾಲಿನ ರೂಪದಲ್ಲಿ ನನ್ನ ಕಣ್ಣ ಮುಂದೆ ಇತ್ತು. ಯಾಕೋ ಹೃದಯ ವೇದನೆಯಿಂದ ಅಳಲಾರಂಭಿಸಿತು, ಎಷ್ಟೋ ಸುಂದರ ನೆನಪುಗಳು ಸುಟ್ಟು ಹೋದಂತೆ ಬಾಸವಾಯಿತು, ಆದರೆ ನೆನಪುಗಳು ಅಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ.

ಅಲ್ಲಿ ಈಗ ರಹಿಮ್ ಚಾಚನ ಜೀನಸ ಅಂಗಡಿ ಇರಲಿಲ್ಲ, ಬ್ರೆಡ್ ಬಿಸ್ಕೆಟ್ ಮಾರುತ್ತಿದ್ದ  ಶರ್ಮ ಅಂಕಲ್ ಅವರ ಅಂಗಡಿಯೂ ಇರಲಿಲ್ಲ, ಕಾಯಿ ಪಲ್ಯ, ತರಕಾರಿ ಮಾರುವ ಕುಶಾಬಾಯಿ ಸಹ ಇರಲಿಲ್ಲ.

ಕಣ್ಣಿಂದ ಕಣ್ಣೀರ ಧಾರೆ ಹರಿಯಿತು, ರಹಿಮ್ ಚಾಚನ ನೆನಪಾಗಿ ನನಗೆ ನೆನಪಾಯಿತು ಸಂತೆಯಿಂದ 
ಖರೀದಿಸಿದ ಆ ಲೋಕೆಟ್ ಚೈನ್, ಆಗ ಮಕ್ಕಳಲ್ಲಿ ಕುತ್ತಿಗೆಗೆ ದೊಡ್ಡ ದೊಡ್ಡ ಚೈನ್ ಧರಿಸುವ ಫ್ಯಾಷನ್ ಇತ್ತು, ನನಗೂ ಅಂತಹದೊಂದು ಚೈನ್ ಧರಿಸ ಬೇಕೆಂದು ಆಸೆಯಾಗಿತ್ತು, ಹೇಗೋ ಅಮ್ಮನಿಂದ ಹಣ ಪಡೆದು ಸಂತೆಯಿಂದ ಒಂದು ಲೋಕೆಟ್ ಚೈನ್ ಖರೀದಿ ಮಾಡಿ ತಂದೆ, ಲೋಕೆಟ್ ಮೇಲೆ ಒಂದು ಮಸೀದಿಯ ಚಿತ್ರವಿತ್ತು,  ಆ ಸಮಯ ನನಗೆ ದೇವಾಲಯ, ಮಸಿದಿ, ಚರ್ಚ್ ಇದರ ವ್ಯತ್ಯಾಸ ತಿಳಿದಿರಲಿಲ್ಲ, ನಮ್ಮ ಚಾಲ್ ಟೈಪ್ ಬಿಲ್ಡಿಂಗ'ಲ್ಲಿ ಎಲ್ಲ ಧರ್ಮದವರು ಇರುತ್ತಿದ್ದರು, ಆ ಸಮಯ ನನಗೆ ಅವರು ಇವರು ಹಿಂದೂ, ಇವರು ಮುಸ್ಲಿಂ, ಇವರು ಸಿಖ್ ಎಂಬ ಪಾಠ ಯಾರು ಕಲಿಸಿರಲಿಲ್ಲ, ಮನೆಯವರು ಆಗಲಿ, ನೆರೆಯವರು ಆಗಲಿ, ಯಾವಾಗಲೂ ಅವರಿಗೆ ಈ ಭೇದ ನಮಗೆ ತಿಳಿಸುವ ಸಂದರ್ಭವೇ ಬರಲಿಲ್ಲ, ಬಾಲ್ಯದಿಂದ ಅಲ್ಲೇ ಇದ್ದ ಕಾರಣ ನೆರೆಹೊರೆಯವರು ಎಲ್ಲ ನಮ್ಮವರೇ ಎಂಬ ಭಾವನೆ ಮನಸ್ಸಲ್ಲಿ ಗಟ್ಟಿಯಾಗಿತ್ತು. ಧರ್ಮ ಜಾತಿ ಇದರ ವ್ಯತ್ಯಾಸ ನನಗೆ ಹಾಗು ನನ್ನ ಪ್ರಾಯದ ಮಕ್ಕಳಿಗೆ ತಿಳಿದಿರಲಿಲ್ಲ, ಎಲ್ಲರೂ ಒಟ್ಟಿಗೆ ಸಂತೋಷದಿಂದ ಇರುತ್ತಿದ್ದರು.

ತುಂಬಾ ಖುಷಿಯಿಂದ ಆ ಲೋಕೆಟ್ ಚೈನ್ ಧರಿಸಿ ನಾನು ಮನೆಯಲ್ಲಿ ತೋರಿಸಿದೆ, ಮನೆಯಲ್ಲಿ ಅಮ್ಮ "ಉಂದು ವೋಲ್ತು ಈ ಬ್ಯಾರ್ಲೆನ ಲೋಕೆಟ್ ಕಂತಿನಿ, ಲಾಯಕ್ ಉಂಡು "(ಇದು ಎಲ್ಲಿಂದ ನೀನು ಮುಸ್ಲಿಮರ ಲೋಕೆಟ್ ತಂದೆ, ಚೆನ್ನಾಗಿದೆ) ಎಂದು ನಕ್ಕಿದರು.

ನಾನು ಅದನ್ನು ಧರಿಸಿ ಶರ್ಮ ಅಂಕಲ್ ಅವರ ಅಂಗಡಿಗೆ ಬಂದೆ " ಶರ್ಮ ಅಂಕಲ್  "ದೇಖೋ ಮೇರ ಚೈನ್" (ಶರ್ಮ ಅಂಕಲ್ "ನೋಡು ನನ್ನ ಚೈನ್").

ಶರ್ಮ ಅಂಕಲ್ " ಅರೆ , ಕಿದರ್ ಸೆ ಲಾಯ ಯೇ, ಯೇ ಮುಸ್ಲಿಂ ಲೋಗೋ ಕ ಹಯ್"(ಎಲ್ಲಿಂದ ತಂದೆ ಇದನ್ನು, ಇದು ಮುಸ್ಲಿಮರ).

ನಾನು "ಮತ್ಲಬ್"(ಇದರ ಅರ್ಥ).

ಶರ್ಮ ಅಂಕಲ್ "ಕುಚ್ ನಹಿನ್ ಅಚ್ಚಾ ಹಯ್" (ಏನಿಲ್ಲ, ಚೆನ್ನಾಗಿದೆ) ಎಂದು ಹೇಳಿ ಸುಮ್ಮನಾದರು.

ನಾನು ಸಂತೋಷ ಪಟ್ಟೆ.

ನಾನು ರಹಿಮ್ ಚಾಚನ ಅಂಗಡಿಗೆ ಬಂದು ಅವರಿಗೆ ನನ್ನ ಹೊಸ ಚೈನ್ ತೋರಿಸಿದೆ. 

ರಹಿಮ್ ಚಾಚ " ಬೇಟಾ ಕಾಹ ಸೆ ಲಾಯ ಯೇ" (ಮಗ, ಎಲ್ಲಿಂದ ತಂದೆ ಇದನ್ನು).

"ವೋ ಮಾರ್ಕೆಟ್ ಸೆ, ಅಚ್ಚಾ ಹಾಯ್ ನಾ" (ಆ ಮಾರ್ಕೆಟಿಂದ, ಒಳ್ಳೆಯದಿದೆ ಅಲ್ಲ).

ರಹಿಮ್ ಚಾಚ ನನ್ನನ್ನು ನೋಡಿ " ಅಚ್ಚಾ ತೋ ಹಾಯ್ ಬೇಟಾ, ಇಸ್ಮೆ ಖುದಾ ಕಿ ರೆಹಮತ್ ಹಯ್, ಪರ್ ಬೇಟಾ, ಯೇ ಹುಮಾರೆ ಮಜ್ಹಬ್ ಕ ಹಯ್" (ಚೆನ್ನಾಗಿದೆ, ಇದರಲ್ಲಿ ದೇವರ ಆಶೀರ್ವಾದ ಇದೆ, ಆದರೆ ಮಗ ಇದು ನಮ್ಮ ಧರ್ಮದವರ".

ನಾನು " ಇಸ್ಕ ಕ್ಯಾ ಮತ್ಲಬ್ ಚಾಚ" (ಇದರ ಏನು ಅರ್ಥ ಚಾಚ).

ಚಾಚ ನನ್ನನ್ನು ನೋಡಿ "ಕುಚ್ ನಹಿ ಬೇಟಾ , ಬಹುತ್ ಅಚ್ಚಾ ಹಯ್"( ಏನಿಲ್ಲ ಬೇಟಾ, ತುಂಬಾ ಚೆನ್ನಾಗಿದೆ) ಎಂದು ಹೇಳಿ ನನ್ನನ್ನು ಮುದ್ದಿಸಿದರು.

ಆ ಸಮಯ ನನಗೆ ಅಮ್ಮ ಆಗಲಿ , ಶರ್ಮಅಂಕಲ್ ಆಗಲಿ, ರಹಿಮ್ ಚಾಚ ಆಗಲಿ ಯಾರೂ ನನಗೆ ಹಿಂದೂ ಮುಸ್ಲಿಂ ಎಂಬ ಭೇದ ತಿಳಿಸಲು ಪ್ರಯತ್ನಿಸಲಿಲ್ಲ. ಇಂದು ಇದನ್ನು ಯೋಚಿಸುವಾಗ ನನಗೆ ಧರ್ಮ ಜಾತಿಯ ಭೇದ ತಿಳಿಸದೆ ಅವರು ನನ್ನ ಮೇಲೆ ಎಷ್ಟೊಂದು ದೊಡ್ಡ ಉಪಾಕಾರ ಮಾಡಿದ್ದರು, ಆವಾಗ ಅವರು ಈ ಜಾತಿ ಧರ್ಮದ ವ್ಯತ್ಯಾಸದ ವಿಷ ಬೀಜ ನನ್ನಲ್ಲಿ ಬಿತ್ತುತ್ತಿದ್ದರೆ  ಇಂದು ನಾನು ನಾನಾಗಿ ಉಳಿಯುತ್ತಿರಲಿಲ್ಲ, ಬಹುಶ ಒಂದು ಬೇರೇನೆ ಮನುಷ್ಯನಾಗಿ ಬೆಳೆಯುತ್ತಿದ್ದೆ, ಕೇವಲ ನನ್ನದೇ ಧರ್ಮ ಉಪಸಕನಾಗಿ ಉಳಿಯುತ್ತಿದ್ದೆ, ಆದರೆ ಅವರ ಬಹು ದೊಡ್ಡ ಉಪಕಾರ ನನ್ನ ಮೇಲೆ, ಇಂದು ನನಗೆ ಎಲ್ಲ ಧರ್ಮದ ಬಗ್ಗೆ ಗೌರವ, ಮರ್ಯಾದೆ ಇದೆ, ಇದು ಅವರು ನನಗೆ ನೀಡಿದ ಅತಿ ಬಹುಮೂಲ್ಯ ಸಂಪತ್ತು.

by ಹರೀಶ್ ಶೆಟ್ಟಿ, ಶಿರ್ವ 

Wednesday, April 2, 2014

ಅನ್ನ

ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿತ್ತು. ಭೀಷ್ಮ ಪಿತಾಮಹ ಅರ್ಜುನನ ಬಾಣದಿಂದ ಗಾಯಗೊಂಡು ಬಾಣದಿಂದ ನಿರ್ಮಿತ ಶಯ್ಯೆಯಲ್ಲಿ ಬಿದ್ದಿದ್ದರು. ಕೌರವರು ಹಾಗು ಪಾಂಡವರು ಪ್ರತಿ ದಿನ ಅವರನ್ನು ಕಾಣಲು ಬರುತ್ತಿದ್ದರು.

ಒಂದು ದಿನದ ಪ್ರಸಂಗ. 


ಪಾಂಡವರು ಮತ್ತು ದ್ರೌಪದಿ ಅವರ ಸುತ್ತ ಕುಳಿತುಕೊಂಡಿದ್ದರು ಹಾಗು ಭೀಷ್ಮ ಪಿತಾಮಹ ಅವರಿಗೆ ಉಪದೇಶ ನೀಡುತ್ತಿದ್ದರು. ಎಲ್ಲರು ಶ್ರದ್ಧೆಯಿಂದ ಅವರ ಉಪದೇಶ ಕೇಳುತ್ತಿದ್ದರು. ಇದ್ದಕ್ಕಿದಂತೆ ದ್ರೌಪದಿ ಜೋರಾಗಿ ನಗಲಾರಂಭಿಸಿದಳು. ಭೀಷ್ಮರಿಗೆ ಇದನ್ನು ನೋಡಿ ತುಂಬಾ ವೇದನೆ ಉಂಟಾಯಿತು ಹಾಗು ಅವರು ಉಪದೇಶ ಕೊಡುವುದನ್ನು ನಿಲ್ಲಿಸಿದರು. ಪಾಂಡವರು ಸಹ ಆಶ್ಚರ್ಯಚಕಿತರಾಗಿದ್ದರು, ಎಲ್ಲರೂ ಶಾಂತವಾದರು. ಸ್ವಲ್ಪ ಕ್ಷಣದ ನಂತರ ಪಿತಾಮಹ ಕೇಳಿದರು "ಮಗಳೇ , ನೀನೊಂದು ಉತ್ಕೃಷ್ಟ ಕುಲದ ಹೆಣ್ಣು, ನಿನ್ನ ಈ ನಗುವಿನ ಕಾರಣ ನಾನು ತಿಳಿಯಬಹುದೇ?"


ದ್ರೌಪದಿ "ಪಿತಾಮಹ, ಇಂದು ನೀವು ನಮಗೆ ಅನ್ಯಾಯದ ವಿರುದ್ಧ ಹೋರಾಡಲು ಉಪದೇಶ ನೀಡುತ್ತಿದ್ದಿರಿ, ಆದರೆ ತುಂಬು ಸಭೆಯಲ್ಲಿ ನನ್ನನ್ನು ನಿರ್ವಸ್ತ್ರ ಮಾಡುವ ಕೇಡುತನ ಮಾಡುತ್ತಿದ್ದಾಗ, ನಿಮ್ಮ ಈ ಎಲ್ಲ ಉಪದೇಶ ಎಲ್ಲಿ ಹೋಗಿತ್ತು, ಆ ಸಮಯ ನೀವೇಕೆ ಮೌನ ಧಾರಣೆ ಮಾಡಿದ್ದಿರಿ?

ಇದನ್ನು ಕೇಳಿ ಭೀಷ್ಮ ಪಿತಾಮಹರ ಕಣ್ಣಿಂದ ಕಣ್ಣೀರು ಸುರಿಯಲಾರಂಭಿಸಿತು. ಮೆಲ್ಲ ಸ್ವರದಿಂದ ಅವರು ಹೇಳಿದರು "ಪುತ್ರಿ, ನಿನಗೆ ಗೊತ್ತಿದೆ ಆ ಸಮಯ ನಾನು ದುರ್ಯೋಧನನ ಅನ್ನ ತಿನ್ನುತ್ತಿದ್ದೆ, ಆ ಅನ್ನ ಸಮಸ್ತ ಪ್ರಜೆಗೆ ದುಃಖ ನೀಡಿ ಸಂಪಾದಿಸಿದ್ದು, ಅಂತಹ ಅನ್ನ ತಿಂದು ನನ್ನ ಸಂಸ್ಕೃತಿ ಸಹ ಕ್ಷೀಣವಾಗಿತ್ತು, ಫಲಸ್ವರೂಪ ಆ ಸಮಯ ನನ್ನ ವಾಣಿ ನಿರ್ಬಂಧಿತವಾಯಿತು, ಆದರೆ ಈಗ ಆ ಅನ್ನದಿಂದ ನಿರ್ಮಿತ ರಕ್ತ ಈ ದೇಹದಿಂದ ಹರಿದು ಹೋಗಿ ನನ್ನ ಸ್ವಾಭಾವಿಕ ಸಂಸ್ಕೃತಿ ಪುನಃ ಹಿಂತಿರುಗಿ ಬಂದಿದೆ ಹಾಗು ತಾನಾಗಿಯೇ ನನ್ನ ಮುಖದಿಂದ ಉಪದೇಶ ಹೊರ ಬರುತ್ತಿದೆ, ಪುತ್ರಿ  ಯಾರೆಂತಹ ಅನ್ನ ತಿನ್ನುತ್ತಾರೋ ಅವರ ಮನಸ್ಸು ಸಹ ಹಾಗೆಯೇ ಆಗುತ್ತದೆ".

(ಮಹಾಭಾರತದಿಂದ)

Thursday, February 27, 2014

ಚಾಯಿವಾಲ

ಮುಂಜಾನೆ ೬.೩೦ ಯ ಸಮಯ, ರಮಾ ಅವಸರದಲ್ಲಿದ್ದಳು.

ಬ್ಯಾಗನ್ನು ಹಿಡಿದು " ಅಮ್ಮ ಬರುತ್ತೇನೆ" ಎಂದು ಹೇಳಿ ಹೊರಟಳು . 

ಹೊಸ ಕೆಲಸ, ತಡವಾಗಿ ಹೋದರೆ ಕಚೇರಿಯಲ್ಲಿದವರು ಏನು ತಿಳಿಯಬಹುದು ಎಂದು ಭಯ ಅವಳಿಗೆ, ಹಾಗೆ ಅವಳ ಕೆಲಸ ಸೇರುವ ಸಮಯ ೮ ಗಂಟೆ, ಅವಳ ಮನೆಯಿಂದ ೧ ಗಂಟೆಯ ಹಾದಿ, ಬಸ್ಸಲ್ಲಿ ಹೋಗಬೇಕು, ಅದಕ್ಕೆ ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ೬.೩೦ ಸರಿಯಾಗಿ ಮನೆಯಿಂದ ಹೊರಡುತ್ತಿದ್ದಳು, ಸ್ವಲ್ಪ ದಿನ ಮುಂಚೆಯೇ ಅವಳು ತನ್ನ ಪದವಿ  ಮುಗಿಸಿ ಈ ಕೆಲಸ ಸೇರಿದ್ದು.

ಮನೆಯಿಂದ ಕೆಳಗೆ ಬಂದಾಗ ಅವಳ ದೃಷ್ಟಿ ಎದುರು ಕಡೆ ಇದ್ದ ಆ ಚಹಾದ ಸ್ಟಾಲ್'ಗೆ (ಸಣ್ಣ ಅಂಗಡಿ) ಹೋಯಿತು, ಚಹಾ ಮಾಡುತ್ತಿದ್ದ ಮನುಷ್ಯ ಅವಳನ್ನೇ ಒಂದು ವಿಚಿತ್ರ ದೃಷ್ಟಿಯಿಂದ ನೋಡುತ್ತಿದ್ದ , ಅವನ ವಯಸ್ಸು ೪೫ ಇರಬೇಕು . 

ರಮಾ ಮನಸ್ಸಲ್ಲಿಯೆ "ಅಯ್ಯೋ, ಹಾಳು ಮನುಷ್ಯ , ಅವನ ಕಣ್ಣು ಹೊಡೆದು ಹಾಕಬೇಕು", ಯಾಕೋ ರಮಾಳಿಗೆ ಆ ಚಹಾ ಮಾಡುವವ ಅವಳನ್ನೊಂದು ವಿಚಿತ್ರ ದೃಷ್ಟಿಯಿಂದ ನೋಡುವುದು ಇಷ್ಟವಾಗುತ್ತಿರಲಿಲ್ಲ, ಆರು ತಿಂಗಳ ಮುಂಚೆಯೇ ಅವನು ಇಲ್ಲಿ ಬಂದು ಈ ಚಹಾದ ಅಂಗಡಿ ಮಾಡಿದ್ದ ಹಾಗು ಎಲ್ಲರೂ ಅವನನ್ನು "ಚಾಯಿವಾಲ" ಎಂದು ಕರೆಯುತ್ತಿದ್ದರು, ಆದರೆ ರಮಾಳಿಗೆ ಅವನು ಈ ದೃಷ್ಟಿಯಿಂದ ನೋಡುವುದರಿಂದ ಅವಳಿಗೆ ಅವನ ಮೇಲೆ ಸಿಟ್ಟು ಹುಟ್ಟಿಸುತ್ತಿತ್ತು, ಮನೆಯಲ್ಲಿ ಸಹ ತಂದೆಯ ಹತ್ರ ಹೇಳಿದಳು, ಆದರೆ ಅವರು ನಗುತ "ನನ್ನ ಮಗಳು ಇಷ್ಟು ಸುಂದರಿ ಇರುವಾಗ ಯಾರು ತಾನೇ ನೋಡಲಾರರು" ಎಂದು ತಮಾಷೆಯಿಂದ ಹೇಳಿ ಮಾತನ್ನು ಹಾರಿಸುತ್ತಿದ್ದರು, ಆದರೆ ನಿಜವಾಗಿ ಅವರು ಎರಡು ಮೂರು ಸಲ ಹೋಗಿ ಆ ಚಾಯಿವಾಲನ ಸ್ಟಾಲ್'ಗೆ ಹೋಗಿ ಹೀಗೆಯೇ ಚಹಾ ಕುಡಿದು ಹಾಗು ಅವನ ಹತ್ತಿರ ಅಲ್ಲಿ ಇಲ್ಲಿಯ ವಿಷಯ ಮಾತಾಡಿ ಬಂದಿದ್ದರು, ಆದರೆ ಅವರಿಗೇನು ಆ ಚಾಯಿವಾಲ ಅಷ್ಟೇನೂ ದುಷ್ಟ ಮನುಷ್ಯನೆಂದು ಅನಿಸಲಿಲ್ಲ. ಆದರೆ ರಮಾಳಿಗೆ ಅವನನ್ನು ನೋಡಿದ್ದರೆ ಆಗುತ್ತಿರಲಿಲ್ಲ.

ಆ ದಿವಸ ಕಚೇರಿಯಲ್ಲಿ ಮೀಟಿಂಗ್ ಇದ್ದ ಕಾರಣ ರಮಾಳಿಗೆ ಕಚೇರಿಯಿಂದ ಹೊರಡುವಾಗ ೮.೩೦ ಆಯಿತು, ಸಾಮಾನ್ಯವಾಗಿ ದಿನನಿತ್ಯ ಅವಳು ೬.೩೦ ತನಕ  ಮನೆಗೆ ತಲುಪುತ್ತಿದ್ದಳು, ಮನೆಗೆ ಫೋನ್ ಮಾಡಿ ತಿಳಿಸಿದರಿಂದ ಅವಳಿಗೆ ಸ್ವಲ್ಪ ಸಮಾಧಾನ ಇತ್ತು, ಬಸ್ ಹತ್ತುವಾಗ ಅವಳ ಹಿಂದೆ ಒಬ್ಬ ಯುವಕ ಅವಳ ಮೈ ಮುಟ್ಟಿದಂತೆ ಆಯಿತು, ಹಿಂತಿರುಗಿ ನೋಡುವಾಗ, ಒಬ್ಬಾತ ಅವಳನ್ನು ನೋಡಿ ನಗುತ್ತಿದ್ದ, ಅಯ್ಯೋ ಅಸಹ್ಯ ನಗು, ಅವನಿಗೆ ಒಂದು ಬಾರಿಸ ಬೇಕೆಂದಾಯಿತು ಅವಳಿಗೆ, ಆದರೆ ಆ ಜನಜಂಗುಳಿ, ಆ ಗರ್ದಿಯಲ್ಲಿ ಅವಳಿಗೆ ಒಳಗೆ ನುಗ್ಗುವಷ್ಟೇ ಸಾಕಾಯಿತು. 

ಹೇಗೋ ಬಸ್ ಒಳಗೆ ಬಂದಳು, ಆ ಯುವಕ ಅವಳ ಹಿಂದೆಯೇ ಇದ್ದ, ಬಸ್ ಒಳಗೆ ಬಂದ ನಂತರ ಅವಳು ತನ್ನನ್ನು ಸ್ವತಃ ಸಮಾಧಾನ ಪಡಿಸಿ ಶಾಂತವಾಗಿ ನಿಂತಳು, ಆ ಯುವಕ ಪದೇ ಪದೇ ಅವಳ ಗರ್ದಿಯ ನೆಪದಿಂದ ಅವಳ ಮೈ ಮುಟ್ಟುತ್ತಿದ್ದ, ಆದರೆ ರಮಾಳಿಗೆ ಏನು ಮಾಡುವುದೆಂದು ತೋಚಲಿಲ್ಲ, ರಮಾಳ ಬಸ್ ಸ್ಟಾಪ್ ಬಂದ ಕೂಡಲೇ ರಮಾ ಬೇಗ ಬೇಗ ಇಳಿದಳು, ಆ ಯುವಕ ಅವನು ಅವಳ ಹಿಂದೆಯೇ ಇಳಿದ, ರಮಾ ಬೇಗ ಬೇಗ ನಡೆಯಲಾರಂಭಿಸಿದರು, ಬಸ್ ಸ್ಟಾಪ್ ಹಾಗು ಅವಳ ಮನೆಯ ಮಧ್ಯೆ ಐದು ನಿಮಿಷದ ಹಾದಿ ಇತ್ತು, ಒಳ ರಸ್ತೆ ಆದ ಕಾರಣ ರಸ್ತೆಯಲ್ಲಿ ಕತ್ತಲೆ ಇತ್ತು, ಆ ಯುವಕ ಅವಳ ಹಿಂದೆಯೇ ಇದ್ದ, ರಮಾಳಿಗೆ ಈಗ ಹೆದರಿಕೆ ಶುರು ಆಯಿತು, ರಸ್ತೆಯಲ್ಲಿ ಯಾರೂ ಇರಲಿಲ್ಲ ,ರಮಾ ಬೇಗ ಬೇಗನೆ ಹೆಜ್ಜೆ ಇಟ್ಟಳು, ಅವಳ ಬಿಲ್ಡಿಂಗ್ ಎದುರೇ  ಕಾಣುತ್ತಿತ್ತು ಅವಾಗಲೇ ಆ ಯುವಕ ಅವಳನ್ನು ಓಡಿ ಬಂದು ಹಿಡಿದು ಒಂದು ಮೂಲೆಗೆ ಎಳೆಯಲು ಆರಂಭಿಸಿದ, ರಮಾ ಜೋರಿನಿಂದ ಕಿರುಚಿದಳು, ಆದರೆ ಈಗ ಆ ಯುವಕ ಅವಳ ಬಾಯಿಗೆ ಕೈ ಇಟ್ಟು ಎಳೆಯಲು ಪ್ರಯತ್ನಿಸಿದ, ಅವಾಗಲೇ ಅಲ್ಲಿ ಆ ಚಾಯಿವಾಲ ಬಂದ, ಅವನು ಬಂದು ಮೊದಲು ಅವಳನ್ನು ಅವನಿಂದ ಬಿಡಿಸಿದ ಹಾಗು ಅವನಿಗೆ ಸರಿ ತುಳಿದು ಹೊಡೆದು ಹದ ಮಾಡಿದ ಹಾಗು ಅಲ್ಲೇ ಕಟ್ಟಿ ಹಾಕಿದ,  ಅಲ್ಲಿ ಜನರೆಲ್ಲಾ ಒಟ್ಟಾದರು, ರಮಾಳ ತಂದೆ ತಾಯಿಗೆ ಸಹ ಸುದ್ಧಿ ತಿಳಿಯಿತು, ಅವರೂ ಅಲ್ಲಿಗೆ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಪೋಲಿಸ್ ಸಹ ಬಂದರು. 

ವಿಷಯ ಎಲ್ಲಾ ತಿಳಿದು ಪೊಲೀಸರು ಚಾಯಿವಾಲನಿಗೆ "ಒಳ್ಳೆಯ ಕೆಲಸ ಮಾಡಿದೆ ನೀನು ಮಹರಾಯ, ಇಂತಹವರನ್ನು ಯಾವಗಲು ಬಿಡಬಾರದು" ಎಂದು ಆ ಯುವಕನಿಗೆ ಎರಡು ಬಾರಿಸಿದ್ದರು. 

ಚಾಯಿವಾಲ ಸ್ವಲ್ಪ ಭಾವುಕನಾಗಿ "ಹೇಗೆ ಬಿಡಲಿ ಸಾಹೇಬರು, ಇವಳ ಪ್ರಾಯದ ನನ್ನ ಸಹ ಒಂದು ಮಗಳಿದ್ದಳು, ಒಂದು ದಿವಸ ಅವಳು ಮನೆಯಲ್ಲಿ ಒಬ್ಬಳೇ ಇರುವಾಗ ಇವನಂತಹ ಒಬ್ಬ ಅಮಾನುಷ ಬಂದು ಅವಳ ಅತ್ಯಾಚಾರ ಮಾಡಿ ಓಡಿ ಹೋದ, ಅವಮಾನ ತಾಳಲಾರದೆ ಆ ಮುದ್ದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು" ಎಂದು ಅಳಲಾರಂಭಿಸಿದ.

ಅವನ ಮಾತು ಕೇಳಿ ರಮಾ ಸ್ತಬ್ಧಳಾದಳು, ಅವಳು ಚಾಯಿವಾಲನನ್ನು ಎಷ್ಟು ತಪ್ಪು ತಿಳಿದಿದ್ದಳು, ಆದರೆ .... ಆಯ್ಯೋ ,  ನನ್ನ ಹಾಳು ವಿಚಾರಗಳೇ.

ಪೊಲೀಸರು ಅವನಿಗೆ "ಸಮಾಧಾನ ಮಾಡಿಕೊಳ್ಳು, ನೀನೊಬ್ಬ ಒಳ್ಳೆ ಮನುಷ್ಯ, ನಿನ್ನ ಒಳ್ಳೆಯದಾಗಲಿ".

ರಮಾ ಚಾಯಿವಾಲನ ಬಳಿ ಬಂದು "ನೀವು ನಿಮಗೆ ಮಗಳಿಲ್ಲ ಎಂದು ತಿಳಿಯಬೇಡಿ, ಇಂದಿನಿಂದ ನಾನೇ ನಿಮ್ಮ ಮಗಳು". 

ಚಾಯಿವಾಲ ತನ್ನ ಕಣ್ಣೀರು ಒರೆಸುತ್ತಾ ಅವಳನ್ನು ಅಕ್ಕರೆಯಿಂದ ನೋಡಲಾರಂಭಿಸಿದ. 

by ಹರೀಶ್ ಶೆಟ್ಟಿ,ಶಿರ್ವ 

Tuesday, February 18, 2014

ಪುನರ್ಮಿಲನ


ಕೊಂಚ ಅನುಮಾನ ಅವನಿಗೆ, ಅದರೂ ಅವನ ಮನಸ್ಸು ಹೇಳಿತು "ಅಲ್ಲ, ಇದು ಅವಳೇ ಎಂದು",ಆದರೆ ಇದೇನು?

ಇಷ್ಟು ಕೃಶವಾಗಿದ್ದಾಳೆ, ಹೃದಯ ವೇದನೆಯಿಂದ ಕಿರುಚಿತು ಅವನ "ಇದಕ್ಕೆ ಕಾರಣ ನೀನೆಯೆಂದು".

"ಹೋಗಿ ಭೇಟಿ ಮಾಡಿ ಬರಲೇ, ಬೇಡ,  ಸುಮ್ಮನೆ ಇನ್ಯಾಕೆ, ಅವಳ ಪ್ರಪಂಚದಲ್ಲಿ ನುಗ್ಗುವುದು, ಹೇಗೋ ಪ್ರತ್ಯೇಕವಾಗಿ ನಾಲ್ಕು ವರ್ಷ ಆಗಿದೆ" ಎಂದು ಅವನು ಮನಸ್ಸಲ್ಲೇ ಯೋಚಿಸಿದ.

"ಪುನಃ ಮದುವೆ ಆಗಲಿಲ್ಲ ಕಾಣುತ್ತದೆ, ಕುತ್ತಿಗೆಯಲ್ಲಿ ತಾಳಿ ಕಾಣುವುದಿಲ್ಲ, ಧೈರ್ಯ ಇಟ್ಟು ಹೋಗಿ ಮಾತನಾಡಿ ಬರುವೆ, ಏನೇ ಆದರೂ ಐಫ಼ು ವರ್ಷ ಒಟ್ಟಿಗೆ ಸಂಸಾರ ಹೂಡಿದವರು ನಾವಿಬ್ಬರು" ಎಂದು ಅವನ ಮನಸ್ಸು ನುಡಿಯಿತು.

"ಸುಮಾ" ಎಂದು ಅವನು ಅವಳ ಹೆಸರು ಕೂಗಿ ಕರೆದ.

ಹಿಂತಿರುಗಿ ನೋಡಿದಳು ಅವಳು, ಮುಖದಲ್ಲಿ ಆಶ್ಚರ್ಯದ ಒಟ್ಟಿಗೆ ಸ್ವಲ್ಪ ಸಂತಸ ಸಹ ಕಂಡು ಬಂತು.

"ಹೇಗಿದ್ದೀರಾ"

"ಸೌಖ್ಯ, ನೀನು "?

"ಸೌಖ್ಯವಾಗಿದ್ದೇನೆ" ಎಂದು ಉತ್ತರಿಸಿದ್ದಳು.

"ನಿಮ್ಮ ಹೆಂಡತಿ ಎಲ್ಲಿ"? ಎಂದು ಕೇಳಿದಳು ಅವಳು.

ಅವನಿಗೆ ಮದುವೆ ಆಗಲಿಲ್ಲ ಎಂದು ಹೇಳಲಾಗಲಿಲ್ಲ ಸುಳ್ಳು ಹೇಳಿದ  "ಅವಳು ಮನೆಯಲ್ಲಿಯೇ ಇದ್ದಾಳೆ, ಬರಲಿಲ್ಲ"

ಅವಳು "ಏನು ಅವರ ಹೆಸರು, ಮನೆಯಲ್ಲೇ ಇರುತ್ತಾರೆಯೇ,  ಹೆಂಗಸು ಕೆಲಸ ಮಾಡುವುದು ನಿಮಗೆ ಇಷ್ಟವಿರಲಿಲ್ಲವಲ್ಲ" ಎಂದು ಅವರು ಪ್ರತ್ಯೇಕವಾದ ಕಾರಣವನ್ನು ಅವಳು ಸ್ವಲ್ಪ ಒತ್ತಿಯೆ ಹೇಳಿದಳು.

ಹೌದು ಅವಳು ಕೆಲಸ ಮಾಡುವುದು ಆವನಿಗೆ ಇಷ್ಟವಿರಲಿಲ್ಲ, ಆದರೆ ಮೊದಲಿನಿಂದಲೂ ಅವನಿಗೆ ಇಷ್ಟವಿರಲಿಲ್ಲ  ವೆಂದೆನಿಲ್ಲ, ಅವಳು ಕೆಲಸದಿಂದ ರಾತ್ರಿ ತಡಾವಾಗಿ ಬಂದು, ಸೋತು ಮನೆಯ ಕೆಲಸದಲ್ಲಿ ಏರು ಪೇರು ಆಗುವಾಗ, ದಿನ ನಿತ್ಯ ಚಿಕ್ಕ ಪುಟ್ಟ ವಿಷಯಕ್ಕೆ ಅವರ ಮಧ್ಯೆ ಜಗಳವಾಗುತ್ತಿತ್ತು, ಆ ನಂತರ ಆ ಜಗಳಗಳೆಲ್ಲ ವಿಕೃತ ರೂಪದಿಂದ ಬೆಳೆದು ಅವರಿಗೆ ಪ್ರತ್ಯೇಕವಾಗ ಬೇಕಾಯಿತು.

"ಏನು , ಎಲ್ಲಿ ನಿಮ್ಮ ಗಮನ ಎಲ್ಲಿದೆ ? ಎಂದು ಅವಳು ಪುನಃ ಕೇಳಿದಳು.

"ಏನಿಲ್ಲ,  ಮತ್ತೇನು ವಿಶೇಷ, ಎಲ್ಲಿ ನಿನ್ನ ಗಂಡ? ಎಂದು ಅವನು ಕೇಳಿದ.

ಅವಳು ಮೌನವಾದಳು, ಸ್ವಲ್ಪ ತಡೆದು "ಯಾಕೆ ಸುಳ್ಳು ಹೇಳುತ್ತಿರಿ , ನೀವು ಸಹ ಮದುವೆಯಾಗಲಿಲ್ಲವೆಂದು ನನಗೆ ತಿಳಿದಿದೆ, ಸುಮ್ಮನೆ ಬೇಕೆಂದೇ ಕೇಳಿದೆ ನಿಮಗೆ".

ಯಾಕೋ ಕಣ್ಣಿಂದ ಕಣ್ಣೀರು ಹರಿಯಿತು, ಮೆಲ್ಲನೆ ಕೇಳಿದೆ "ನಾವಿಬ್ಬರೂ ಯಾಕೆ ಪುನಃ ಒಂದಾಗಬಾರದು ?

ಅವಳೂ ಅಳುತ್ತಲೇ " ನಾಲ್ಕು ವರುಷ ಬೇಕಾಯಿತೆ ನಿಮಗೆ ಈ ಪ್ರಶ್ನೆ ಕೇಳಲು".

"ನನಗೆ ನನ್ನ ತಪ್ಪು ತಿಳಿದಿತ್ತು, ಆದರೆ ಪುನಃ ನಿನ್ನಲ್ಲಿಗೆ ಬರಲು ಧೈರ್ಯವಾಗಲಿಲ್ಲ".

"ನಾನೇನು ರಾಕ್ಷಸಿಯೇ " ಎಂದು ಅಳುತ್ತಲೇ ನಕ್ಕಳು.

"ಆದರೆ ನಿನಗೆ ಸಹ ಬರಬಹುದಿತ್ತಲ್ಲ" ಎಂದು ಕೇಳಿದ ಅವನು.

"ನಾನು ಈ ನಗರದಲ್ಲೇ ಇರಲಿಲ್ಲ ,ಕೆಲಸ ಬಿಟ್ಟು ಊರಿಗೆ ಹೋದೆ, ಊರಲ್ಲಿಯೇ ಇದ್ದೆ, ನೀವು ಬರುವಿರಿ ಎಂದು ಮನಸ್ಸಲ್ಲಿ ವಿಶ್ವಾಸ ಇತ್ತು, ಆದರೆ ನೀವು ಬರಲೇ ಇಲ್ಲ, ಮೊನ್ನೆ ನಿಮ್ಮ ಮಿತ್ರ ಆನಂದ ಸಿಕ್ಕಿದರು ಅವರು ನೀವಿನ್ನು ಮದುವೆ ಆಗಲಿಲ್ಲ ಎಂದು ತಿಳಿಸಿದರು, ನೀವು ಹೇಗೋ ಬರಲಿಲ್ಲ , ಕೊನೆಗೆ ಸೋತು ನಾನೇ ನಗರಕ್ಕೆ ಬಂದೆ, ಆದರೆ ಈ ರೀತಿ ನಿಮ್ಮ ಭೇಟಿಯಾಗಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿ ನಕ್ಕಳು.

ಅವನೂ ನಕ್ಕು ಅವಳನ್ನು ಅಪ್ಪಿಕೊಂಡ.

by ಹರೀಶ್ ಶೆಟ್ಟಿ, ಶಿರ್ವ 

Monday, December 16, 2013

ನೂರು ರೂಪಾಯಿ


ಮಗ ಚಳಿಗಾಲದ ರಜೆಯಲ್ಲಿ ಮನೆಯಲ್ಲಿದ್ದ, ದಿನಾ ನಾನು ಕೆಲಸದಿಂದ ಬಂದ ಕೂಡಲೇ "ಪಪ್ಪಾ, ಬನ್ನಿ ಹೊರಗೆ ಹೋಗಿ ಬರುವ" ಎಂದು ಹಿಂದೆ ಬೀಳುತ್ತಿದ, ಆದರೆ ನಾನು ಏನಾದರೂ ನೆಪ ಮಾಡಿ ಮುಂದೂಡುತ್ತಿದ್ದೆ. 

ಒಂದು ದಿನ  ಕೆಲಸದಿಂದ ಬಂದ ನಂತರ ಏನೋ ನನಗೆ ಸಹ ಸ್ವಲ್ಪ ತಿರುಗಿ ಬರುವ ಎಂದು ಮನಸ್ಸಾಯಿತು, ನಾನು ಕೆಲಸದಿಂದ ಬಂದ ಕೂಡಲೇ ಸುಮಾಳಿಗೆ "ಬೇಗ ರೆಡಿ ಆಗಿ, ನಾವು ಇಂದು ಸ್ವಲ್ಪ ಮಾಲ್ ತಿರುಗಿ ಬರುವ" ಎಂದು ಹೇಳಿದೆ. ಮಗ  ಖುಷಿಯಿಂದ "ಹುರೇ" ಎಂದ, ಸುಮಾಳಿಗೆ ಆಶ್ಚರ್ಯವಾದರೂ ಕಿರುನಗೆ ಬೀರಿ ಇಬ್ಬರು ರೆಡಿ ಆಗಲು ಹೋದರು.

ನಾವು ಹೀಗೆಯೇ ದುಬೈಯ ಬಹು ದೊಡ್ಡ ಮಾಲ್'ಲ್ಲಿ ತಿರುಗುವಾಗ, ಒಬ್ಬಾತ ನನ್ನನ್ನು ಧ್ಯಾನದಿಂದ  ನೋಡುತ್ತಿದಂತೆ ನನಗೆ ಭಾಸವಾಯಿತು, ಆದರೆ ನಾನು ಅವನನ್ನು ನೋಡದಂತೆ ಮಾಡಿ ಮುಂದೆ ನಡೆದೆ, ಸ್ವಲ್ಪ ಮುಂದೆ ಹೋದ ನಂತರ ಹಠಾತ್  ನನಗೆ ಏನೋ ಹೊಳೆದಂತಾಯಿತು, ನಾನು ಹಿಂತಿರುಗಿ ಅವನನ್ನು ನೋಡಿದೆ, ಅವನು ನನ್ನನ್ನು ನೋಡಿ ನಗೆ ಬೀರಿದ. "ಹೌದು ಇದು ಅವನೇ ಬಷೀರ್ " ಎಂದು ನಾನು ಮನಸ್ಸಲ್ಲೇ ನುಡಿದೆ.
                          ***
ನನಗೆ ಬಾಲ್ಯದ ಶಾಲೆಯ ನೆನಪಿನ ಪುಟ ತೆರೆದಂತಾಯಿತು.

ಬಷೀರ್ ಮತ್ತು ನಾನು ಒಂದೇ ಶಾಲೆಯಲ್ಲಿ ಒಂದೇ ಕ್ಲಾಸ್ಸಲ್ಲಿ ಓದುತ್ತಿದ್ದೆವು. ಬಷೀರ್ ಕ್ಲಾಸ್ಸಲ್ಲಿ ತುಂಬಾ ಮೌನವಾಗಿರುತ್ತಿದ್ದ, ಯಾರ ಹತ್ತಿರ ಸಹ ಅವನು ಹೆಚ್ಚು ಮಾತನಾಡುತ್ತಿರಲಿಲ್ಲ, ನನ್ನ ಹತ್ತಿರ ಸಹ ಬೇಕಾದಷ್ಟೇ ಮಾತನಾಡುತ್ತಿದ್ದ.

ಆದರೆ ನಮ್ಮಲ್ಲಿ ಒಳ್ಳೆ ಸ್ನೇಹ ಇತ್ತು.

ಆದರೆ ಒಂದು ದಿವಸ.....
ನಾವು ಏಳನೇ ಕ್ಲಾಸ್ಸಲ್ಲಿರುವಾಗ ಒಂದು ದಿನ ನಮ್ಮ ಕಬಡ್ಡಿ  ಪಂದ್ಯ  ಇತ್ತು, ನಾನು ಮತ್ತು ಬಷೀರ್ ಬೇರೆ ಬೇರೆ ಟೀಮ್'ಲ್ಲಿ ಇದ್ದೆವು, ಆಟದ ಮಧ್ಯೆ ಬಷೀರ್'ನ ಕೈ ನನ್ನ ಮುಖಕ್ಕೆ ಜೋರಿನಿಂದ ತಾಗಿತು, ಆ ಸಮಯ ನನಗೆ ಅವನು ಬೇಕೆಂದೇ ಹೊಡೆದ ಎಂದು ತಿಳಿದು ನಾನು ಸಹ ಅವನಿಗೆ ಹೊಡೆದೆ, ಅ ನಂತರ ನಾವಿಬ್ಬರು ಹೊಡೆದಾಡಲು ಶುರು ಮಾಡಿದೆವು, ಹೊಡೆದಾಡುವಾಗ ನನ್ನಿಂದ ಅವನ ಅಂಗಿಯ ಕಿಸೆ ಹರಿದು, ಅವನ ಕಿಸೆಯಲ್ಲಿದ ಕಾಗದದ ತುಂಡು ಸಹ ಹರಿದು ಕೆಳಗೆ ಬಿತ್ತು, ನಮ್ಮ ಹೊಡೆದಾಟ ಕಂಡು ಟೀಚರ್ ಬಂದು ನಮ್ಮಿಬ್ಬರಿಗೂ ಒಂದೊಂದು ಹೊಡೆದು ಬಿಡಿಸಿದರು. 

ಆ ನಂತರ ನಮ್ಮ ಮಾತುಕತೆ ನಿಂತು ಹೋಯಿತು, ನಾನು ಅವನತ್ರ ಒಂದೆರಡು ಸಲ ಮಾತನಾಡಲು ಪ್ರಯತ್ನಿಸಿದೆ, ಆದರೆ ಅವನು ಪ್ರತಿಕ್ರಿಯಸಲಿಲ್ಲ. ಅವನಿಗೆ ತುಂಬಾ ನೋವಾಗಿರಬೇಕು ಏನೋ ಎಂದು ನಾನು ಸಹ ನಂತರ ನನ್ನ ಪ್ರಯತ್ನ ನಿಲ್ಲಿಸಿದೆ, ಆದರೆ  ಅದರ ನಂತರ ಮೂರು ವರ್ಷ ಒಟ್ಟಿಗೆ ಒಂದೇ ಕ್ಲಾಸ್ಸಲ್ಲಿದ್ದು ಸಹ ನಮ್ಮ ಮಧ್ಯೆ ಮಾತಿರಲಿಲ್ಲ, ಇದರ ನನಗೆ ಎಲ್ಲೊ ಒಂದು ಮನಸ್ಸಲ್ಲಿ ಬೇಸರವಿತ್ತು, ಹತ್ತನೇ ಕ್ಲಾಸ್ ಮುಗಿದ ನಂತರ ನಾವೆಲ್ಲಾ ಮಕ್ಕಳು ಬೇರೆ ಬೇರೆ ಕಾಲೇಜ್ ಸೇರಿ ನಂತರ.....  ಯಾರೆಲ್ಲಿ..... ಯಾರೆಲ್ಲಿ, ಬಷೀರ್ ಸಹ ಆ ನಂತರ ಎಲ್ಲಿ ಯಾವ ಕಾಲೇಜ್ ಸೇರಿದ ಎಂದು ನನಗೆ ತಿಳಿಯಲಿಲ್ಲ .
                          ***
ನೆನಪಿನಂಗಳದಿಂದ ಹೊರ ಬಂದೆ.

ನಾನು ಸ್ವಲ್ಪ ಅನುಮಾನವಿದ್ದರೂ ಏನೋ ಖುಷಿಯಿಂದ ನಾನು ಅವನತ್ತ ಸಾಗಿದೆ, ನಾನು ಅವನ ಬಳಿ ಹೋಗಿ "ಬಷೀರ್" ಎಂದೆ, ಅವನು ಸಂತೋಷದಿಂದ "ಗುರುತಿಸಿದೆ ಅಲ್ಲ ನನ್ನನ್ನು" ಎಂದು ಹೇಳಿದ, ತುಂಬಾ ಅತ್ಮಿಯತೆಯಿಂದ ನಾವಿಬ್ಬರು ಒಬ್ಬರನೊಬ್ಬರನ್ನು ಅಪ್ಪಿಕೊಂಡೆವು. ಸುಮಾ ಹಾಗು ಮಗ ಸಹ ನಮ್ಮನ್ನು ನೋಡಿ ಬಳಿ ಬಂದರು, ನಾನು ಅವರಿಗೆ "ಸುಮಾ, ಇದು ನನ್ನ ಶಾಲೆಯ ಸಹಪಾಠಿ "ಬಷೀರ್", ಹತ್ತನೇ ಕ್ಲಾಸ್ ತನಕ ನಾವಿಬ್ಬರು ಒಂದೇ ಕ್ಲಾಸ್'ಲ್ಲಿ ಕಲಿತದ್ದ"ಎಂದು ಅವನನ್ನು ಪರಿಚಯಿಸಿದೆ.

ನಾವು ಅಲ್ಲಿಯೇ ಫುಡ್ ಕೋರ್ಟ್'ಲ್ಲಿ ತುಂಬಾ ಸಮಯ ತನಕ ಮಾತನಾಡಿ, ಒಬ್ಬರನೊಬ್ಬರ ವಿಷಯ ತಿಳಿದುಕೊಂಡೆವು, ಅವನ ಸಹ ಮದುವೆ ಆಗಿ ಕೆಲವು ವರ್ಷ ಆಗಿತ್ತು, ಆದರೆ ಅವನ ಫ್ಯಾಮಿಲಿ ಇಂಡಿಯಾದಲ್ಲಿದ್ದರು, ಅವನಿಗೆ ಎರಡು ಮುದ್ದು ಮಕ್ಕಳು ಸಹ ಇದ್ದರೆಂದು ಹೇಳಿದ. ಇಲ್ಲಿ ದುಬೈಯಲ್ಲಿ ಅವನು ಕೆಲಸ ಸೇರಿ ಒಂದೇ ವರ್ಷ ಆದದ್ದು ಹಾಗು ಇಲ್ಲಿ ಶೇರಿಂಗ್ ರೂಮಲ್ಲಿ ಇರುತ್ತಿದ್ದ, ನಾನು  ನನ್ನ  ಫೋನ್ ನಂಬರ್, ಮನೆ ವಿಳಾಸ ಅವನಿಗೆ ಕೊಟ್ಟು, ಅವನಿಗೆ ಇನ್ನೊಂದು ಶುಕ್ರವಾರ ಮನೆಗೆ ಬರಲು ಆಹ್ವಾನಿಸಿದೆ, ಅವನು ಖಂಡಿತ ಬರುತ್ತೇನೆ ಎಂದು ಹೇಳಿದ .
                     
ಮನೆಗೆ ಹಿಂತಿರುಗುವಾಗ ನಾನು ಶಾಲೆಯ ನೆನಪೆಲ್ಲ ಸುಮಾಳಿಗೆ ಹೇಳಿದೆ, ಅವಳು ತುಂಬಾ ಉತ್ಸುಕತೆಯಿಂದ ಎಲ್ಲ ಕೇಳಿದಳು.
                           ***
ಶುಕ್ರವಾರದ ದಿವಸ ಬಷೀರ್ ಫೋನ್ ಮಾಡಿ ಮನೆಗೆ ಬಂದ, ಊಟ ಎಲ್ಲ ಆದ ನಂತರಹೀಗೆಯೇ  ನಾವು ಹರಟೆ ಹೊಡೆಯುತ ಕುಳಿತೆವು, ಆಗ ಸುಮಾ ಬಂದು  ಹಣ್ಣು ತಂದಿಟ್ಟು ಅಲ್ಲೇ ಕುಳಿತಳು.

ಸುಮಾ "ಬಷೀರ್'ಣ್ಣ ನಿಮ್ಮ  ಮಕ್ಕಳ ಹೆಸರೇನು?"

ಬಷೀರ್ " ಮಗನ ಆಫ್ನಾನ್ ಹಾಗು ಮಗಳ ಸಾರಾ" ಎಂದು ಹೇಳಿದ.

ಸುಮಾ "ವಾವ್ ಒಳ್ಳೆ ಹೆಸರು, ಬಷೀರ್ಣ್ಣ  ಇವರು ನಿಮ್ಮ ಶಾಲೆಯ ಜಗಳದ ವಿಷಯವೆಲ್ಲ ಹೇಳಿದರು, ಆದರೆ ನೀವು ಅಷ್ಟು ಕೋಪ ಯಾಕೆ ಇಟ್ಟದ್ದು ನಂತರ ಮಾತನಾಡಲೇ ಇಲ್ಲಂತೆ" ಎಂದು ನಗು ನಗುತ ಕೇಳಿದಳು.

ಬಷೀರ್ ನಗುತ "ಅದೆಲ್ಲ ಬಾಲ್ಯದ ವಿಷಯ, ಬಿಡು ಸುಮಾ"
.
ಸುಮಾ "ಇಲ್ಲ ಬಷೀರ್ಣ್ಣ ಹೇಳಿ ಪ್ಲೀಸ್, ನನಗೆ ಯಾಕೆ ಎಂದು ತಿಳಿಯಬೇಕು".

ಬಷೀರ್ " ಸುಮಾ, ನನ್ನ ಕೋಪದ ವಿಷಯ ನಿನಗೆ ಹೇಗೆ ಹೇಳುವುದು, ಇದರ ಹಿಂದೆ ಒಂದು ದೊಡ್ಡ ಕಥೆ ಇದೆ.

ಸುಮಾ " ಹೇಳಿ, ಪ್ಲೀಸ್ " .

ನಾನು ಸಹ ಅವನಿಗೆ "ಏನೋ ಹೇಳು, ನನಗೆ ಸಹ ತಿಳಿಯಬೇಕು, ನಾನು ಅಂಥದೇನು ಮಹಾ  ಪಾಪ ಮಾಡಿದೆಯೆಂದು , ಜಗಳದಲ್ಲಿ ನಿನ್ನ ಸಹ ಅಷ್ಟೇ ತಪ್ಪಿತ್ತು".


ತುಂಬಾ ಒತ್ತಾಯದ ನಂತರ ಬಷೀರ್ ಹೇಳಲಾರಂಭಿಸಿದ.

ಸುಮಾ, ನನ್ನ ಬಾಲ್ಯ ತುಂಬಾ ಕಷ್ಟದಲ್ಲಿ ಕಳೆದದ್ದು, ನಾವು ಎಂಟು ಜನ ಮಕ್ಕಳು, ನಾನು ಅವರಲ್ಲಿ ದೊಡ್ಡವನು ಬೇರೆ ನನಗೆ ೪ ತಮ್ಮಂದಿರು ಹಾಗು ೩ ತಂಗಿಯರಿದ್ದರು, ನನ್ನ ಅಬ್ಬು ರೈಲ್ವೆಯಲ್ಲಿ ಹಮಾಲ್ ಆಗಿದ್ದರು, ಅವರ ಒಂದು ನಾಲ್ಕು ಚಕ್ರದ ಸಾಮಾನು ಸಾಗಿಸುವ ಗಾಡಿ ಇತ್ತು, ಅದರಲ್ಲಿ ಪ್ರವಾಸಿಯರ ಸಾಮಾನು ಇಟ್ಟು ಅದನ್ನು ಎಳೆದು ಅಲ್ಲಿಂದ ಇಲ್ಲಿ ಸಾಗಿಸುತ್ತಿದರು, ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ನಂತರ  ರಾತ್ರಿ ಮನೆಗೆ ಬರುವಾಗ ಹನ್ನೊಂದು ಗಂಟೆ ಆಗುತ್ತಿತ್ತು, ಇಷ್ಟು ಕಷ್ಟಪಟ್ಟು ದುಡಿದರು ಅವರಿಗೆ ಸಿಗುವುದು ಕೇವಲ ೪೦/೫೦ ರೂಪಾಯಿ, ಅದು  ಮನೆಖರ್ಚಿಗೆ ಪೂರ್ಣವಾಗುತ್ತಿರಲಿಲ್ಲ, ದಿನಾ ಅಮ್ಮಿ ಹಾಗು ಅಬ್ಬು ಇವರ ಮಧ್ಯೆ ಈ ವಿಷಯದಲ್ಲಿ ಜಗಳವಾಗುತ್ತಿತ್ತು, ಆದರೆ ಅಬ್ಬು ಪ್ರತಿಕ್ರಿಯುಸುವುದು ಕಡಿಮೆ. ನನ್ನ ಅಬ್ಬು ತುಂಬಾ ಒಳ್ಳೆಯವರು ಅವರಯ್ತು ಅವರ ಕೆಲಸ ಆಯಿತು, ಬೇರೆ ಯಾವುದು ಆಸಕ್ತಿ ಅಲ್ಲದೆ ಯಾವುದೇ ದುರಭ್ಯಾಸವೂ ಅವರಿಗೆ ಇರಲಿಲ್ಲ. ಅಮ್ಮಿ ಪ್ರೀತಿಯ ಸಾಗರ  ಆದರೆ ತಂದೆಯ ಕಷ್ಟ ನೋಡಲಾರದೆ ತಾಳ್ಮೆ ಕಳೆದು ಅವರಿಂದ ಜಗಳ ಮಾಡುತ್ತಿದ್ದಳು. 

ಒಂದು ದಿನ ಶಾಲೆಯಲ್ಲಿ ಪಿಕ್ನಿಕ್ ಹೋಗಲಿದೆ ಹಾಗು ಎಲ್ಲ ಮಕ್ಕಳಿಗೆ ೧೦೦ ರೂಪಾಯಿ ತಂದು ಜಮಾ ಮಾಡಲ್ಲಿಕ್ಕಿದೆ ಎಂದು ಟೀಚರ್ ಹೇಳಿದರು. ಈ ವಿಷಯ ಈಗ ಅಬ್ಬುಗೆ ಹೇಗೆ ಹೇಳುವುದು ಎಂದು ನನಗೆ ಅರ್ಥವಾಗುತ್ತಿರಲಿಲ್ಲ, ನಮಗೆ  ಶಾಲೆಗೆ ಹೋಗಲಿಕ್ಕೆ ಏನು ಖರ್ಚು ಇರಲಿಲ್ಲ, ಆ ಸಮಯದಲ್ಲಿ ನಮಗೆ ಶಾಲೆಯ ಫೀಸ್ ಇರಲಿಲ್ಲ, ನಮ್ಮ ಸರಕಾರಿ ಶಾಲೆ, ಆದುದರಿಂದ  ಈ ಎಲ್ಲ ವಿಷಯಗಳಿಗೆ ಹಣ ಒಟ್ಟು ಮಾಡುವುದು ಸಹಜವಾಗಿತ್ತು, ನಾನು ಆ ದಿನ ಮಲಗದೇ ಅಬ್ಬು ಬರುವ ಸಮಯ ತನಕ ಕಾದು ಕುಳಿತೆ. ರಾತ್ರಿ ಅಬ್ಬು ಬಂದು ಊಟ ಮಾಡಿದ ನಂತರ ನನ್ನಿಂದ "ಏನೋ , ಇನ್ನೂ ಮಲಗಲಿಲ್ಲ , ನಾಳೆ ಶಾಲೆ ಇಲ್ಲವ " ಎಂದು ಕೇಳಿದರು .

ನಾನು "ಇಲ್ಲ ಅಬ್ಬು, ಶಾಲೆ ಇದೆ,ಆದರೆ ನಿಮ್ಮಿಂದ ಒಂದು ವಿಷಯ ಹೇಳಲಿಕ್ಕಿತ್ತು" .

ಅಬ್ಬು " ಏನದು ಹೇಳು".

ನಾನು ಅವರಿಗೆ ಪಿಕ್ನಿಕ್ ವಿಷಯಯೆಲ್ಲ ತಿಳಿಸಿದೆ.

ಅವರು ಒಮ್ಮೆ ನನ್ನ ಮುಖ ನೋಡಿ " ನಾಳೆ  ರಾತ್ರಿ ಬರುವಾಗ  ತರುತ್ತೇನೆ, ಆಗಬಹುದಲ್ಲ?" ಎಂದು ಕೇಳಿದರು.

ನಾನು " ಆಗಬಹುದು ಅಬ್ಬು" ಎಂದು ಹೇಳಿದೆ.

ಮಾರನೆ ದಿನ ಶಾಲೆಯಿಂದ ಹಿಂತಿರುಗಿ ಬಂದು ನಾನು ರಾತ್ರಿ ತನಕ ಅಬ್ಬು ಯಾವಾಗ ಬರುತ್ತಾರೆ ಎಂದು ಕಾದು ಕುಳಿತೆ. ಅಬ್ಬು ಆ ದಿವಸ ತುಂಬಾ ತಡವಾಗಿಯೇ ಮನೆಗೆ ಬಂದರು, ಯಾಕೋ ತುಂಬಾ ಸೋತು ಹೋದಂತೆ ಕಾಣುತ್ತಿದ್ದರು.

ಅವರು ನನ್ನನ್ನು ನೋಡಿ "ಒಹ್!!! ಕಾದೆ ಕುಳಿತಿರುವೇಯಾ" ಎಂದು ಹೇಳಿ ನಗುತ ಕಿಸೆಯಿಂದ ೧೦೦ ರೂಪಾಯಿ ತೆಗೆದು ನನಗೆ ಕೊಟ್ಟರು. ನನ್ನ ಖುಷಿಗೆ ಮಿತಿಯೇ ಇರಲಿಲ್ಲ, ಆದರೆ ನನ್ನ ತಂದೆ ಪಾಪ ಇದಕ್ಕಾಗಿ ಎಷ್ಟು ಕಷ್ಟಪಟ್ಟಿರಬೇಕು ಎಂದು ಯೋಚಿಸಿ ನನ್ನ ಕಣ್ಣು ತುಂಬಿ ಬಂತು.

ಮಾರನೆ ದಿನ ಶಾಲೆಗೆ ಹೋಗುವಾಗ ಸ್ವಲ್ಪ ತಡವಾಯಿತು, ಕ್ಲಾಸ್ಸಲ್ಲಿ ಯಾರೂ ಇರಲಿಲ್ಲ, ಅವಾಗ ನನಗೆ ಜ್ಞಾಪಕ ಬಂತು "ಅರೆ, ಇವತ್ತು ಕಬಡ್ಡಿ  ಪಂದ್ಯ  ಇದೆಯೆಂದು ",  ನಾನು ಬೇಗ ಬೇಗ ಗ್ರೌಂಡ್'ಗೆ ಓಡಿದೆ, ಅಲ್ಲಿ ಎಲ್ಲ ಮಕ್ಕಳು ನನ್ನನ್ನು ಕಾಯುತ್ತಿದ್ದರು, ತಡವಾಗಿ ಬಂದುದಕ್ಕೆ ನನ್ನ ಕ್ಯಾಪ್ಟನ್ ನನಗೆ ಬೈದ. ಹೇಗೋ ಕಬಡ್ಡಿ ಪಂದ್ಯ ಶುರುವಾಯಿತು. ಪಂದ್ಯದ ಮಧ್ಯದಲ್ಲಿ ನಮ್ಮಲ್ಲಿ ಆದ ಜಗಳದಲ್ಲಿ ಅಬ್ಬು ಕಷ್ಟಪಟ್ಟು ತಂದು ಕೊಟ್ಟ ೧೦೦ ರೂಪಾಯಿ ನನ್ನ ಕಿಸೆ ಹರಿದಾಗ ಹರಿದು ಚೂರು ಚೂರು ಆಗಿತ್ತು.

ಆದರೆ ಸುಮಾ, ಆ ನೂರು ರೂಪಾಯಿ ವಿಷಯ ಇವನಿಗೆ ತಿಳಿದಿರಲಿಲ್ಲ, ಆದರೆ ಯಾಕೋ ಆ ನಂತರ ನನಗೆ ಇವನ ಮೇಲೆ ತುಂಬಾ ಕೋಪ ನಿರ್ಮಾಣವಾಯಿತು ಹಾಗು ನಾನು ಇವನತ್ರ ಮಾತನಾಡುವುದನ್ನು ನಿಲ್ಲಿಸಿದೆ, ಇವನು ಎರಡು ಮೂರು ಸಲ ಪ್ರಯತ್ನಿಸಿದ್ದರೂ ನಾನು ಮಾತನಾಡಲಿಲ್ಲ, ಕ್ರಮೇಣ ನನ್ನ ಕೋಪ ಸಹ ಇಳಿಯಿತು, ಆದರೆ ನಂತರ ನಮ್ಮಲ್ಲಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.

ಬಷೀರ್ ಮಾತು ಮುಗಿಸಿದ ನಂತರ ಸುಮಾ ನನ್ನ ಕಡೆ ತಿರುಗಿ ನೋಡಿದಳು, ನನ್ನ ಕಣ್ಣಿಂದ ದಳದಳ ಕಣ್ಣೀರು ಉದುರುತ್ತಿತ್ತು, ಬಷೀರ್ ನನ್ನನ್ನು ನೋಡಿ ನಗುತ್ತಿದ್ದ.

by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ