Tuesday, January 25, 2022

ಭಿಕ್ಷುಕ

photo courtesy: Google


ಆ ಮುದಿ ಭಿಕ್ಷುಕ ಪ್ರತಿ ಗುರುವಾರ ರವಿಯ ಅಂಗಡಿಯ ಎದುರು ಬಂದು ಭಿಕ್ಷೆಗೆ ನಿಲ್ಲುತ್ತಿದ್ದ, ಉಪಕಾರಬುದ್ಧಿಯುಳ್ಳ ರವಿಗೆ ಯಾಕೋ ಅವನನ್ನು ನೋಡಿ ಕರುಣೆ ಮೂಡುತ್ತಿತ್ತು ಹಾಗು ಅವನು ಬದಿಯ ಹೋಟೆಲಿನಿಂದ ಅವನಿಗೆ ಊಟ ಆರ್ಡರ್ ಮಾಡಿ ತಿನಿಸುತ್ತಿದ್ದ, ಅವರ ಮಧ್ಯೆ ಯಾವುದೇ ಸಂಭಾಷಣೆ ಇರುತ್ತಿರಲಿಲ್ಲ ಆದರೆ ಪ್ರತಿ ಗುರುವಾರ ಇದೆ ಒಂದು ರೂಢಿಯಾಗಿ ಹೋಯಿತು, ಆ ಭಿಕ್ಷುಕ ಬರುತ್ತಿದ್ದ ರವಿ ಬದಿಯ ಹೋಟೆಲಿನಿಂದ ಊಟ ತರಿಸಿ ಅವನಿಗೆ ಕೊಡುತ್ತಿದ್ದ.

ಕೋವಿಡ್‌ ಸಮಯದಲ್ಲಿ ರವಿ ವ್ಯಾಪಾರ ಇಲ್ಲದೆ ವ್ಯಾಪಾರದಲ್ಲಿ ತುಂಬಾ ನಷ್ಟ ಅಬುಭಾವಿಸಿದ, ಅಂಗಡಿಯ ಬಾಡಿಗೆ ಕೊಡಲು ಸಹ ಅವನಿಂದ ಅಸಾಧ್ಯವಾಯಿತು.

ಬಾಡಿಗೆ ಕೊಡದೆ ಅಂಗಡಿ ಮಾಲೀಕ ಅವನಿಗೆ ನೋಟೀಸ್ ಕೊಟ್ಟು ಅಂಗಡಿ ಖಾಲಿ ಮಾಡಲು ಒಂದು ತಿಂಗಳ ಸಮಯ ಕೊಟ್ಟ, ರವಿಗೆ ಇನ್ನು ಅಂಗಡಿ ಬಿಡುವುದಲ್ಲದೆ ಬೇರೆ ದಾರಿ ಇರಲಿಲ್ಲ.

ಆ ಗುರುವಾರ ಸಹ ಆ ಮುದಿ ಭಿಕ್ಷುಕ ಬಂದು ರವಿಯ ಅಂಗಡಿಯ ಎದುರು ನಿಂತ, ರವಿ ಆ ಕಷ್ಟದಲ್ಲಿಯೂ ಬದಿಯ ಹೋಟೆಲಿನಿಂದ ಆತನಿಗೆ ಊಟ ತಂದು ಕೊಟ್ಟು "ಅಜ್ಜ ಇದು ನನ್ನಿಂದ ನಿಮಗೆ ಅಂತಿಮ ಊಟ, ಬರುವ ಗುರುವಾರ ಈ ಅಂಗಡಿಯಲ್ಲಿ ನಾನು ಇರಲ್ಲ, ರವಿಯಿಂದ ಊಟ ತೆಗೆದುಕೊಂಡು ಮುದುಕ ಕಣ್ಣೆತ್ತಿ ರವಿಯನ್ನು ನೋಡಿ ಕೇಳಿದ "ಸಾರ್ ನಿಮಗೆ ಒಂದು ಕೇಳಲ?" 

ರವಿ "ಏನು? ಹಣ ಒಂದು ಕೇಳ್ಬೇಡಿ, ನನ್ನ ಪರಿಸ್ಥಿತಿ ಮೊದಲೇ ಗಂಭೀರವಾಗಿದೆ, ಅಂಗಡಿ ಖಾಲಿ ಮಾಡುತ್ತಿದ್ದೇನೆ, ತುಂಬಾ ನಷ್ಟ ಅನುಭವಿಸಿದೆ ಈ ಕೋವಿಡ್‌ ಬಂದು, ಇದ್ದ ಹಣವೆಲ್ಲಾ ನೀರಾಯಿತು, ಈಗ ಈ ಅಂಗಡಿಗೆ ಇನ್ನು ಬಂಡವಾಳ ಮಾಡಲಿಕ್ಕೆ ಹಣ ಇಲ್ಲ, ಮೇಲಿಂದ ಆರು ತಿಂಗಳ ಬಾಡಿಗೆ ಬಾಕಿ ಉಂಟು" ಎಂದು ರವಿ ತನ್ನ ಮನಸ್ಸಲ್ಲಿದ್ದ ಗೋಳು ಹೇಳಿಯೇ ಬಿಟ್ಟ ಆ ಭಿಕ್ಷುಕನ ಮುಂದೆ.

ರವಿಯ ಮಾತು ಕೇಳಿ ಭಿಕ್ಷುಕ ತನ್ನ ಚೀಲಕ್ಕೆ ಕೈ ಹಾಕಿ ಒಂದು ಗಂಟು ತೆಗೆದು ರವಿಯ ಕೈಯಲ್ಲಿಟ್ಟ. 

ರವಿ ಆಶ್ಚರ್ಯದಿಂದ "ಏನಿದು?"

ಭಿಕ್ಷುಕ "ಇದರಲ್ಲಿ ಒಂದೂವರೆ ಲಕ್ಷ ಹಣ ಇದೆ, ಇದು ನಿಮಗೆ, ನನ್ನ ಹೆಸರು ವೆಂಕಟೇಶ, ಮೂರು ವರುಷದಿಂದ ಮನೆಯಿಂದ ಹೊರ ಬಿದ್ದ ನಂತರ ನಾನು ಅಲ್ಲಿ ಇಲ್ಲಿ ನಲಿಯುತ್ತಿದ್ದೇನೆ, ಇದ್ದ ಒಬ್ಬನೇ ಒಬ್ಬ ಮಗನಿಗೆ ಅವನ ಸಂಸಾರದಲ್ಲಿ ನಾನು ಅವನಿಗೆ ಬೇಡವಾದೆ, ಒಂದು ದಿನ ತಾಳ್ಮೆ ಕಳೆದು ನನಗೆ ಹೇಳಿಯೇ ಬಿಟ್ಟ ಇನ್ನು ನಿಮ್ಮ ಭಾರ ಹೊಯ್ಯಲು ನನ್ನಿಂದಾಗದು ಎಂದು, ತುಂಬಾ ದುಃಖಿತನಾದೆ, ಅವನ ಅಮ್ಮ ಮೊದಲೇ ನನ್ನನ್ನು ಬಿಟ್ಟು ದೇವರ ಮನೆ ಸೇರಿಬಿಟ್ಟಿದಳು, ಈ ಆಘಾತದಿಂದ ಏನೂ ತೋಚದೆ ಅಲ್ಲಿ ಇಲ್ಲಿ ನಲಿದೆ, ಈಗ ಅಭ್ಯಾಸ ಆಗಿಹೋಯಿತು, ಒಬ್ಬರಿಗೆ ನಾವು ಬೇಡವೆಂದ ಮೇಲೆ ಅವರೊಟ್ಟಿಗೆ ಇದ್ದು ಸಹ ಏನು ಪ್ರಯೋಜನ, ಬಿಡಿ ಆ ವಿಷಯ, ನಾನು ಕೆಲಸದಲ್ಲಿದ್ದಾಗ ಕಷ್ಟ ಸಮಯಕ್ಕೆಂದು ಯಾರಿಗೂ ಹೇಳದೆ ಒಂದು ಲಕ್ಷ ರೂಪಾಯಿ ಫಿಕ್ಸೆಡ್ ಡೆಪೋಸಿಟಲ್ಲಿ ಇಟ್ಟಿದೆ, ಮನೆ ಬಿಟ್ಟ ಮೇಲೆ ಯಾವುದರಲ್ಲೂ ಆಸಕ್ತಿ ಇಲ್ಲದೇ ಈ ವಿಷಯ ಗೊತ್ತಿದ್ದೂ ಸಹ ನಾನು ಹೋಗಲೇ ಇಲ್ಲ ತೆಗಯಲಿಕ್ಕೆ, ಮಗನಿಗೆ ಅದರ ಬಗ್ಗೆ ಹೇಳುತ್ತಿದ್ದಾರೆ, ಅದನ್ನೂ ನುಂಗಿ ಬಿಡುತ್ತಿದ್ದ, ಕಳೆದ ಗುರುವಾರ ನಾನು ಬಂದಾಗ ನಿಮ್ಮ ಮತ್ತು ನಿಮ್ಮ ಮಾಲಕರ ಸಂಭಾಷಣೆ ಕೇಳಿದೆ, ಕೂಡಲೇ ಬ್ಯಾಂಕ್ ಹೋಗಿ ಆ ಹಣ ಕೊಂಡು ಬಂದೆ, ಇದು ಅದೇ ಹಣ, ಇದರಿಂದ ನೀವು ನಿಮ್ಮ ವ್ಯಾಪಾರ ಸರಿ ಮಾಡಿಕೊಳ್ಳಿ, ನನಗೆ ಈಗ ಈ ಹಣ ವ್ಯರ್ಥ. 

ರವಿ "ಆದರೆ ಅಜ್ಜ ಈ ಹಣ ನಿಮ್ಮದು ಹಾಗು ನಿಮ್ಮ ಮಗ ಇದರ ಹಕ್ಕುದಾರ".

"ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ಗುರುವಾರ ಕೇಳದೆ ನನಗೆ ಅನ್ನ ನೀಡಿದ ನೀವೇ ನನ್ನ ನಿಜವಾದ ಮಗ, ನನ್ನ ನಿರ್ಧಾರ ಸರಿಯಾಗಿದೆ, ಬರುವ ಗುರುವಾರ ಬರುತ್ತೇನೆ" ಎಂದು ಹೇಳಿ ಹೊರಟೇಬಿಟ್ಟರು ವೆಂಕಟೇಶ್ ಎಂಬ ಮಹಾನುಭಾವ. ರವಿ ವಿಸ್ಮಯದಿಂದ ಅವರು ಹೋಗುವುನೋದನ್ನು ನೋಡಿತ್ತಿದ್ದ, ಹಿಂದಿಂದ ಅವನಿಗೆ ಅವನ ಇಷ್ಟ ದೇವರು ಸಾಯಿಬಾಬ ಹೋಗುತ್ತಿರುವಂತೆ ಕಂಡು ಬಂತು. 


by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...