Thursday, February 10, 2022

ನೈತಿಕತೆ

 


ರಘು ಆ ಮಸೀದಿ, ದೇವಾಲಯದ ಬದಿಯಲ್ಲಿ ಹೂ ಹಾರದ ಅಂಗಡಿ ಇಟ್ಟ್ಕೊಂಡಿದ್ದ, ಅವನ ಪಕ್ಕದಲ್ಲಿಯೇ ನಫೀಸಾ ಮತ್ತು ರಾಜು ಇಬ್ಬರು ಭಿಕ್ಷೆ ಬೇಡಲು ಕುಳಿತುಕೊಳ್ಳುತ್ತಿದ್ದರು.

ಈ ಕಡೆ ದೇವಾಲಯ ಆ ಕಡೆ ಮಸೀದಿ, ಒಳ್ಳೆ ಭಿಕ್ಷೆ ಸಿಗುತ್ತಿತ್ತು ಅವರಿಗೆ, ಆದರೆ ಎರಡು ದಿನದಿಂದ ಅವರು ಭಿಕ್ಷೆ ಬೇಡಲು ಬರಲೇ ಇಲ್ಲ, ಅವರು ಕುಳಿತುಕೊಳ್ಳುವ ಜಾಗ ಖಾಲಿ ಇತ್ತು. 

ರಘುಗೆ ಇದು ಸ್ವಲ್ಪ ಆಶ್ಚರ್ಯವೆನಿಸಿತು, ಒಂದು ದಿವಸ ಸಹ ತಪ್ಪದೆ ಬರುವ ಇವರಿಬ್ವರು ಎಲ್ಲಿಗೆ ಹೋಗಿರಬಹುದೆಂದು. 

ಆಗ ಅವನು ಎದುರಿನಿಂದ ರಾಜು ಬರುವುದನ್ನು ನೋಡಿದ, ಅವನ ಕೈಯಲ್ಲಿ ಕೇಸರಿ ಶಾಲು ಇತ್ತು, ರಘು ಅವನಿಗೆ ಕೇಳಬೇಕೆಂದಾಗ, ಅವನು ನಫೀಸಾ ಸಹ ಬರುವುದನ್ನು ಕಂಡ, ಇಬ್ಬರು ಅವರ ಜಾಗಕ್ಕೆ ಬಂದಾಗ "ಏನು ರಾಜು, ನಫೀಸಾ ಎಲ್ಲಿಗೆ ಹೋಗಿದ್ದಿರಿ ಎರಡು ದಿವಸ?". 

ಅದಕ್ಕೆ ರಾಜು "ಐದಾರೂ ಜನ ಬಂದಿದ್ದರು ಅಣ್ಣ, ಹಣದ ಆಸೆ ಕೊಟ್ಟರು ನನಗೆ, ಸ್ವಲ್ಪ ಹಣದ ಆಸೆಗೆ ಅವರು ಕೊಟ್ಟ ಈ ಕೇಸರಿ ಶಾಲು ಧರಿಸಿದ್ದೆ, ಕುತ್ತಿಗೆ ಬಿಗಿದಂತಾಯಿತು ಅಲ್ಲಿಯ ಸ್ಥಿತಿ ನೋಡಿ, ವಾಪಸ್ ಬಂದೆ, ಬೇಡ ಇದೆಲ್ಲ, ನಾನು ಸರಿ, ನನಗಿಲ್ಲಿ ಸಿಗುವ ಭಿಕ್ಷೆ ಸಾಕೆನಿಸಿತು." ಎಂದು ರಾಜು ಆ ಕೇಸರಿ ಶಾಲು ಬದಿಗಿಟ್ಟ. 

ರಘು " ನಫೀಸಾ ನೀನು?" ನಫೀಸಾ "ಅಣ್ಣ, ನನಗೂ ಅವರು ಬುರ್ಖಾ, ಹಿಜಾಬ್ ಕೊಟ್ಟಿದ್ದರು, ಅದನ್ನು ಧರಿಸಿ ಯಾಕೋ ಉಸಿರು ಕಟ್ಟಿದಂತಾಯಿತು ಪರಸ್ಪರ ನಮ್ಮವರ ಮಧ್ಯದಲ್ಲೇ ಜಗಳ ನೋಡಿ, ವಾಪಸ್ ಬಂದೆ, ಅಂತಹ ಹಣ ಬೇಡ, ಇಲ್ಲಿ ಸಿಗುವ ಭಿಕ್ಷೆಯೆ ಒಳಿತೆನಿಸಿತು". 

ಅವರ ಮಾತು ಕೇಳಿ ರಘು ಒಂದು ಉಸಿರೆಳೆದು ಆಕಾಶದತ್ತ ನೋಡಿದ. 


by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...