Saturday, January 22, 2022

ಆತ್ಮೀಯ ಸಂಬಂಧ

 

Photo courtesy: Google

ಕಾಂವ್, ಕಾಂವ್", 

ಆ ಕಾಗೆಯ ವಿಚಿತ್ರ ಕೂಗು ಇಡೀ ಪರಿಸರದಲ್ಲಿ ಕೇಳಿ ಬರುತಿತ್ತು.

ರವಿವಾರದ ದಿವಸ ಆರಾಮವಾಗಿ ಬೆಳಿಗ್ಗೆ ಚಾ ಕುಡಿಯುತ್ತಾ ದಿನಪತ್ರಿಕೆ ಓದುತ್ತಿದ್ದ ಗಣೇಶ ಆ ಕಾಗೆಯ ಕೂಗಿನಿಂದ ಬೇಸತ್ತು, ಹೆಂಡತಿ ಮಾಲತಿಯನ್ನು ಕರೆದು "ಹೇ ಮಾಲತಿ ಏನಿದು ಆ ಪಕ್ಕದ ಮನೆಯ ಕಿಟಕಿಯಲ್ಲಿ ಆ ಕಾಗೆ ಹೀಗೆ ಕಿರುಚುತ್ತಿದೆ? ಒಮ್ಮೆ ಅಟ್ಟಿಬಿಡು ಆಚೆ ಅದನ್ನು"

ಮಾಲತಿ " ಹೌದ್ರಿ ನಾನು ಸಹ ಕೇಳ್ತ ಇದ್ದೇನೆ, ಅದು ನಮ್ಮ ಪಕ್ಕದ ಗಂಗೂ ಆಂಟಿಯ ಮನೆಗೆ ದಿನನಿತ್ಯ ಬರುವ ಕಾಗೆ, ಗಂಗೂ ಆಂಟಿ ದಿನ ಅದಕ್ಕೆ ತಿಂಡಿ ಕೊಟ್ಟು ಅದರ ಬುದ್ಧಿ ಕೆಡಿಸಿದ್ದಾರೆ, ಇವತ್ತೇನೋ ಅವರಿಗೆ ಎದ್ದೇಳಲು ತಡವಾದಂತೆ ಕಾಣುತ್ತದೆ".

"ಹ್ಮ್, ಜನರಿಗೆ ಏನೇನೋ ಹವ್ಯಾಸ, ಇತರರಿಗೆ ಕಷ್ಟ" ಎಂದು ಗಣೇಶ ಕೋಪದಿಂದ ಮುಖ ತಿರುಚಿ ಪುನಃ ದಿನಪತ್ರಿಕೆ ಓದಲಾರಂಭಿಸಿದ.

ಆದರೆ ಈಗ ಕಾಗೆ ಅವರ ಮನೆ ಕಿಟಕಿಯ ಹತ್ತಿರ ಸಹ ಹಾರಾಡುತ್ತ ಬಂದು ವಿಚಿತ್ರವಾಗಿ ಕೂಗಲಾರಂಭಿಸಿತು.

ಗಣೇಶನಿಗೆ ಸಿಟ್ಟು ನೆತ್ತಿಗೇರಿತು, "ಅಯ್ಯೋ ಮಾಲತಿ ಓಡಿಸೋ ಅದನ್ನು, ಸುಮ್ಮನೆ ರವಿವಾರದ ದಿವಸ ಸಹ ಶಾಂತಿಯಿಂದ ಕೂತುಕೊಳ್ಳುವ ಹಾಗೆ ಇಲ್ಲ.

"ರೀ ತಡೆಯಿರಿ", ನಾನು ನೋಡುತ್ತೇನೆ ಎಂದು ಕಾಗೆಯನ್ನು ಓಡಿಸಲು ಮಾಲತಿ ಕಾಗೆಯತ್ತ ಹೋದಾಗ, ಅವಳಿಗೆ ಕಾಗೆಯ ಕಣ್ಣು ಏನೋ ಹೇಳುತ್ತಿದ್ದಂತೆ ಬಾಸವಾಯಿತು. ಅವಳು ಅಲ್ಲೇ ನಿಂತು ಗಣೇಶನಿಗೆ 'ರೀ ನನಗೆ ಏನೋ ಸರಿ ಕಾಣುತ್ತಿಲ್ಲ, ಈ ಕಾಗೆ ಅಂತಹದಲ್ಲ, ಗಂಗೂ ಆಂಟಿ ಇದರ ಜೊತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ, ದಿನ ಇದಕ್ಕೆ ತಿಂಡಿ ಕೊಟ್ಟು ಇದರ ಜೊತೆ ಒಂದೊಂದು ಗಂಟೆ ಮಾತಾನಾಡುತ್ತಾರೆ. ಗಂಗೂ ಆಂಟಿ ಕಾಗೆಯ ಇಷ್ಟು ಕೂಗು ಕೇಳಿ ನಿದ್ರಿಸಲು ಸಾಧ್ಯನೇ ಇಲ್ಲ. ಪಾಪ.... ಒಬ್ಬರೇ ಇರುವುದು ಅವರು, ಇದ್ದ ಒಬ್ಬ ಮಗ ಸಪರಿವಾರ ಪರದೇಶ ಸೆಟ್ಲ್ ಆದ ಮೇಲೆ ಈಚೆ ಮುಖ ಮಾಡಲಿಲ್ಲ, ಪಾಪ ಇವತ್ತು ಏನೋ ಅವರಿಗೆ ಸೌಖ್ಯವಿಲ್ಲ ಕಾಣುತ್ತದೆ , ನಾನು ಅವರ ಮನೆಗೆ ಹೋಗಿ ನೋಡಿ ಬರುತ್ತೇನೆ" ಎಂದು ಹೇಳಿ ಹೊರಗೆ ಪಕ್ಕದ ಮನೆಯತ್ತ ಹೋದಳು.

ಆದರೆ ಗಂಗೂ ಆಂಟಿಯ ಮನೆಯ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ, ಮಾಲತಿ ಪುನಃ ತನ್ನ ಮನೆಗೆ ಓಡಿ ಬಂದು ಗಣೇಶನಿಗೆ "ರೀ ಸ್ವಲ್ಪ ಬನ್ನಿ, ಏನೋ ಅನಾಹುತ ಆಗಿದಂತೆ ಕಾಣುತ್ತದೆ, ಗಂಗೂ ಆಂಟಿ ಬಾಗಿಲು ತೆರೆಯುತಿಲ್ಲ.


ಈಗ ಗಣೇಶ ಸಹ ಸ್ವಲ್ಪ ಚಿಂತಿತನಾಗಿ ಗಂಗೂ ಆಂಟಿಯ ಮನೆಗೆ ಓಡಿದ ಆದರೆ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಎಲ್ಲಾ ಮನೆಯವರು ಸಹ ಅಲ್ಲಿ ಒಟ್ಟಾದರು, ಗಣೇಶ ಮತ್ತು ಅವರೆಲ್ಲರ ಮಧ್ಯೆ ಈಗ ಏನು ಮಾಡುವುದು ಎಂದು ವಿಚಾರ ವಿಮರ್ಶೆ ನಡೆಯಿತು, ಅಂತಿಮವಾಗಿ ಅವರು ಬಾಗಿಲು ಮುರಿಯುವ ನಿರ್ಧಾರಕ್ಕೆ ಒಪ್ಪಿಕೊಂಡರು, ಕಾಗೆ ಈಗಲೂ ಕೂಗುತ್ತಲೇ ಇತ್ತು.


ಬಾಗಿಲು ಮುರಿಯಲಾಯಿತು, ಒಮ್ಮೆಲೇ ಎಲ್ಲರು ಒಳಗೆ ನುಗ್ಗಿದರು, ಒಳಗೆ ಹಾಸಿಗೆಯ ಮೇಲೆ ಶಾಂತಚಿತ್ತ ಮಲಗಿದರು ಗಂಗೂ ಆಂಟಿ, ಮಲಗಿದಲ್ಲೇ ಅವರು ಮೃತ್ಯುಗೆ ಶರಣಾಗಿದ್ದರು, ಮುಖದ ಮೇಲೆ ವೇದನೆಯ ಭಾವ ಇತ್ತು, ಅವರ ಕೈ ಅವರ ಎದೆಯ ಮೇಲೆ ಇತ್ತು ಹಾಗು ಕೈಯಲ್ಲಿ ಮಗನ ಫೋಟೋ ಹಿಡಿದಿದ್ದರು, ಬದಿಯ ಮೇಜಲ್ಲಿ ಒಂದು ಬಟ್ಟಲಲ್ಲಿ ಧಾನ್ಯ ಇಟ್ಟಿತ್ತು, ಬಹುಶ ಬೆಳಿಗ್ಗೆ ಕಾಗೆಗೆ ಕೊಡಲೆಂದೋ ಏನೋ, ಅದನ್ನು ನೋಡಿ ಮಾಲತಿ ಕಿಟಕಿಯತ್ತ ನೋಡಿದ್ದಳು, ಅಲ್ಲಿ ಒಳಗೆ ಇಣುಕುತ್ತಿದ್ದ ಕಾಗೆಯ ಕಣ್ಣಲ್ಲಿ ಅವಳಿಗೆ ನೀರು ಕಂಡು ಬಂತು, ಕಾಗೆ ಈಗ  ಕೂಗುತ್ತಿರಲಿಲ್ಲ, ಅದು ಮೌನವಾಗಿತ್ತು.



by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...