ಕೊಂಚ ಅನುಮಾನ ಅವನಿಗೆ, ಅದರೂ ಅವನ ಮನಸ್ಸು ಹೇಳಿತು "ಅಲ್ಲ, ಇದು ಅವಳೇ ಎಂದು",ಆದರೆ ಇದೇನು?
ಇಷ್ಟು ಕೃಶವಾಗಿದ್ದಾಳೆ, ಹೃದಯ ವೇದನೆಯಿಂದ ಕಿರುಚಿತು ಅವನ "ಇದಕ್ಕೆ ಕಾರಣ ನೀನೆಯೆಂದು".
"ಹೋಗಿ ಭೇಟಿ ಮಾಡಿ ಬರಲೇ, ಬೇಡ, ಸುಮ್ಮನೆ ಇನ್ಯಾಕೆ, ಅವಳ ಪ್ರಪಂಚದಲ್ಲಿ ನುಗ್ಗುವುದು, ಹೇಗೋ ಪ್ರತ್ಯೇಕವಾಗಿ ನಾಲ್ಕು ವರ್ಷ ಆಗಿದೆ" ಎಂದು ಅವನು ಮನಸ್ಸಲ್ಲೇ ಯೋಚಿಸಿದ.
"ಪುನಃ ಮದುವೆ ಆಗಲಿಲ್ಲ ಕಾಣುತ್ತದೆ, ಕುತ್ತಿಗೆಯಲ್ಲಿ ತಾಳಿ ಕಾಣುವುದಿಲ್ಲ, ಧೈರ್ಯ ಇಟ್ಟು ಹೋಗಿ ಮಾತನಾಡಿ ಬರುವೆ, ಏನೇ ಆದರೂ ಐಫ಼ು ವರ್ಷ ಒಟ್ಟಿಗೆ ಸಂಸಾರ ಹೂಡಿದವರು ನಾವಿಬ್ಬರು" ಎಂದು ಅವನ ಮನಸ್ಸು ನುಡಿಯಿತು.
"ಸುಮಾ" ಎಂದು ಅವನು ಅವಳ ಹೆಸರು ಕೂಗಿ ಕರೆದ.
ಹಿಂತಿರುಗಿ ನೋಡಿದಳು ಅವಳು, ಮುಖದಲ್ಲಿ ಆಶ್ಚರ್ಯದ ಒಟ್ಟಿಗೆ ಸ್ವಲ್ಪ ಸಂತಸ ಸಹ ಕಂಡು ಬಂತು.
"ಹೇಗಿದ್ದೀರಾ"
"ಸೌಖ್ಯ, ನೀನು "?
"ಸೌಖ್ಯವಾಗಿದ್ದೇನೆ" ಎಂದು ಉತ್ತರಿಸಿದ್ದಳು.
"ನಿಮ್ಮ ಹೆಂಡತಿ ಎಲ್ಲಿ"? ಎಂದು ಕೇಳಿದಳು ಅವಳು.
ಅವನಿಗೆ ಮದುವೆ ಆಗಲಿಲ್ಲ ಎಂದು ಹೇಳಲಾಗಲಿಲ್ಲ ಸುಳ್ಳು ಹೇಳಿದ "ಅವಳು ಮನೆಯಲ್ಲಿಯೇ ಇದ್ದಾಳೆ, ಬರಲಿಲ್ಲ"
ಅವಳು "ಏನು ಅವರ ಹೆಸರು, ಮನೆಯಲ್ಲೇ ಇರುತ್ತಾರೆಯೇ, ಹೆಂಗಸು ಕೆಲಸ ಮಾಡುವುದು ನಿಮಗೆ ಇಷ್ಟವಿರಲಿಲ್ಲವಲ್ಲ" ಎಂದು ಅವರು ಪ್ರತ್ಯೇಕವಾದ ಕಾರಣವನ್ನು ಅವಳು ಸ್ವಲ್ಪ ಒತ್ತಿಯೆ ಹೇಳಿದಳು.
ಹೌದು ಅವಳು ಕೆಲಸ ಮಾಡುವುದು ಆವನಿಗೆ ಇಷ್ಟವಿರಲಿಲ್ಲ, ಆದರೆ ಮೊದಲಿನಿಂದಲೂ ಅವನಿಗೆ ಇಷ್ಟವಿರಲಿಲ್ಲ ವೆಂದೆನಿಲ್ಲ, ಅವಳು ಕೆಲಸದಿಂದ ರಾತ್ರಿ ತಡಾವಾಗಿ ಬಂದು, ಸೋತು ಮನೆಯ ಕೆಲಸದಲ್ಲಿ ಏರು ಪೇರು ಆಗುವಾಗ, ದಿನ ನಿತ್ಯ ಚಿಕ್ಕ ಪುಟ್ಟ ವಿಷಯಕ್ಕೆ ಅವರ ಮಧ್ಯೆ ಜಗಳವಾಗುತ್ತಿತ್ತು, ಆ ನಂತರ ಆ ಜಗಳಗಳೆಲ್ಲ ವಿಕೃತ ರೂಪದಿಂದ ಬೆಳೆದು ಅವರಿಗೆ ಪ್ರತ್ಯೇಕವಾಗ ಬೇಕಾಯಿತು.
"ಏನು , ಎಲ್ಲಿ ನಿಮ್ಮ ಗಮನ ಎಲ್ಲಿದೆ ? ಎಂದು ಅವಳು ಪುನಃ ಕೇಳಿದಳು.
"ಏನಿಲ್ಲ, ಮತ್ತೇನು ವಿಶೇಷ, ಎಲ್ಲಿ ನಿನ್ನ ಗಂಡ? ಎಂದು ಅವನು ಕೇಳಿದ.
ಅವಳು ಮೌನವಾದಳು, ಸ್ವಲ್ಪ ತಡೆದು "ಯಾಕೆ ಸುಳ್ಳು ಹೇಳುತ್ತಿರಿ , ನೀವು ಸಹ ಮದುವೆಯಾಗಲಿಲ್ಲವೆಂದು ನನಗೆ ತಿಳಿದಿದೆ, ಸುಮ್ಮನೆ ಬೇಕೆಂದೇ ಕೇಳಿದೆ ನಿಮಗೆ".
ಯಾಕೋ ಕಣ್ಣಿಂದ ಕಣ್ಣೀರು ಹರಿಯಿತು, ಮೆಲ್ಲನೆ ಕೇಳಿದೆ "ನಾವಿಬ್ಬರೂ ಯಾಕೆ ಪುನಃ ಒಂದಾಗಬಾರದು ?
ಅವಳೂ ಅಳುತ್ತಲೇ " ನಾಲ್ಕು ವರುಷ ಬೇಕಾಯಿತೆ ನಿಮಗೆ ಈ ಪ್ರಶ್ನೆ ಕೇಳಲು".
"ನನಗೆ ನನ್ನ ತಪ್ಪು ತಿಳಿದಿತ್ತು, ಆದರೆ ಪುನಃ ನಿನ್ನಲ್ಲಿಗೆ ಬರಲು ಧೈರ್ಯವಾಗಲಿಲ್ಲ".
"ನಾನೇನು ರಾಕ್ಷಸಿಯೇ " ಎಂದು ಅಳುತ್ತಲೇ ನಕ್ಕಳು.
"ಆದರೆ ನಿನಗೆ ಸಹ ಬರಬಹುದಿತ್ತಲ್ಲ" ಎಂದು ಕೇಳಿದ ಅವನು.
"ನಾನು ಈ ನಗರದಲ್ಲೇ ಇರಲಿಲ್ಲ ,ಕೆಲಸ ಬಿಟ್ಟು ಊರಿಗೆ ಹೋದೆ, ಊರಲ್ಲಿಯೇ ಇದ್ದೆ, ನೀವು ಬರುವಿರಿ ಎಂದು ಮನಸ್ಸಲ್ಲಿ ವಿಶ್ವಾಸ ಇತ್ತು, ಆದರೆ ನೀವು ಬರಲೇ ಇಲ್ಲ, ಮೊನ್ನೆ ನಿಮ್ಮ ಮಿತ್ರ ಆನಂದ ಸಿಕ್ಕಿದರು ಅವರು ನೀವಿನ್ನು ಮದುವೆ ಆಗಲಿಲ್ಲ ಎಂದು ತಿಳಿಸಿದರು, ನೀವು ಹೇಗೋ ಬರಲಿಲ್ಲ , ಕೊನೆಗೆ ಸೋತು ನಾನೇ ನಗರಕ್ಕೆ ಬಂದೆ, ಆದರೆ ಈ ರೀತಿ ನಿಮ್ಮ ಭೇಟಿಯಾಗಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿ ನಕ್ಕಳು.
ಅವನೂ ನಕ್ಕು ಅವಳನ್ನು ಅಪ್ಪಿಕೊಂಡ.
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment