Thursday, February 27, 2014

ಚಾಯಿವಾಲ

ಮುಂಜಾನೆ ೬.೩೦ ಯ ಸಮಯ, ರಮಾ ಅವಸರದಲ್ಲಿದ್ದಳು.

ಬ್ಯಾಗನ್ನು ಹಿಡಿದು " ಅಮ್ಮ ಬರುತ್ತೇನೆ" ಎಂದು ಹೇಳಿ ಹೊರಟಳು . 

ಹೊಸ ಕೆಲಸ, ತಡವಾಗಿ ಹೋದರೆ ಕಚೇರಿಯಲ್ಲಿದವರು ಏನು ತಿಳಿಯಬಹುದು ಎಂದು ಭಯ ಅವಳಿಗೆ, ಹಾಗೆ ಅವಳ ಕೆಲಸ ಸೇರುವ ಸಮಯ ೮ ಗಂಟೆ, ಅವಳ ಮನೆಯಿಂದ ೧ ಗಂಟೆಯ ಹಾದಿ, ಬಸ್ಸಲ್ಲಿ ಹೋಗಬೇಕು, ಅದಕ್ಕೆ ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ೬.೩೦ ಸರಿಯಾಗಿ ಮನೆಯಿಂದ ಹೊರಡುತ್ತಿದ್ದಳು, ಸ್ವಲ್ಪ ದಿನ ಮುಂಚೆಯೇ ಅವಳು ತನ್ನ ಪದವಿ  ಮುಗಿಸಿ ಈ ಕೆಲಸ ಸೇರಿದ್ದು.

ಮನೆಯಿಂದ ಕೆಳಗೆ ಬಂದಾಗ ಅವಳ ದೃಷ್ಟಿ ಎದುರು ಕಡೆ ಇದ್ದ ಆ ಚಹಾದ ಸ್ಟಾಲ್'ಗೆ (ಸಣ್ಣ ಅಂಗಡಿ) ಹೋಯಿತು, ಚಹಾ ಮಾಡುತ್ತಿದ್ದ ಮನುಷ್ಯ ಅವಳನ್ನೇ ಒಂದು ವಿಚಿತ್ರ ದೃಷ್ಟಿಯಿಂದ ನೋಡುತ್ತಿದ್ದ , ಅವನ ವಯಸ್ಸು ೪೫ ಇರಬೇಕು . 

ರಮಾ ಮನಸ್ಸಲ್ಲಿಯೆ "ಅಯ್ಯೋ, ಹಾಳು ಮನುಷ್ಯ , ಅವನ ಕಣ್ಣು ಹೊಡೆದು ಹಾಕಬೇಕು", ಯಾಕೋ ರಮಾಳಿಗೆ ಆ ಚಹಾ ಮಾಡುವವ ಅವಳನ್ನೊಂದು ವಿಚಿತ್ರ ದೃಷ್ಟಿಯಿಂದ ನೋಡುವುದು ಇಷ್ಟವಾಗುತ್ತಿರಲಿಲ್ಲ, ಆರು ತಿಂಗಳ ಮುಂಚೆಯೇ ಅವನು ಇಲ್ಲಿ ಬಂದು ಈ ಚಹಾದ ಅಂಗಡಿ ಮಾಡಿದ್ದ ಹಾಗು ಎಲ್ಲರೂ ಅವನನ್ನು "ಚಾಯಿವಾಲ" ಎಂದು ಕರೆಯುತ್ತಿದ್ದರು, ಆದರೆ ರಮಾಳಿಗೆ ಅವನು ಈ ದೃಷ್ಟಿಯಿಂದ ನೋಡುವುದರಿಂದ ಅವಳಿಗೆ ಅವನ ಮೇಲೆ ಸಿಟ್ಟು ಹುಟ್ಟಿಸುತ್ತಿತ್ತು, ಮನೆಯಲ್ಲಿ ಸಹ ತಂದೆಯ ಹತ್ರ ಹೇಳಿದಳು, ಆದರೆ ಅವರು ನಗುತ "ನನ್ನ ಮಗಳು ಇಷ್ಟು ಸುಂದರಿ ಇರುವಾಗ ಯಾರು ತಾನೇ ನೋಡಲಾರರು" ಎಂದು ತಮಾಷೆಯಿಂದ ಹೇಳಿ ಮಾತನ್ನು ಹಾರಿಸುತ್ತಿದ್ದರು, ಆದರೆ ನಿಜವಾಗಿ ಅವರು ಎರಡು ಮೂರು ಸಲ ಹೋಗಿ ಆ ಚಾಯಿವಾಲನ ಸ್ಟಾಲ್'ಗೆ ಹೋಗಿ ಹೀಗೆಯೇ ಚಹಾ ಕುಡಿದು ಹಾಗು ಅವನ ಹತ್ತಿರ ಅಲ್ಲಿ ಇಲ್ಲಿಯ ವಿಷಯ ಮಾತಾಡಿ ಬಂದಿದ್ದರು, ಆದರೆ ಅವರಿಗೇನು ಆ ಚಾಯಿವಾಲ ಅಷ್ಟೇನೂ ದುಷ್ಟ ಮನುಷ್ಯನೆಂದು ಅನಿಸಲಿಲ್ಲ. ಆದರೆ ರಮಾಳಿಗೆ ಅವನನ್ನು ನೋಡಿದ್ದರೆ ಆಗುತ್ತಿರಲಿಲ್ಲ.

ಆ ದಿವಸ ಕಚೇರಿಯಲ್ಲಿ ಮೀಟಿಂಗ್ ಇದ್ದ ಕಾರಣ ರಮಾಳಿಗೆ ಕಚೇರಿಯಿಂದ ಹೊರಡುವಾಗ ೮.೩೦ ಆಯಿತು, ಸಾಮಾನ್ಯವಾಗಿ ದಿನನಿತ್ಯ ಅವಳು ೬.೩೦ ತನಕ  ಮನೆಗೆ ತಲುಪುತ್ತಿದ್ದಳು, ಮನೆಗೆ ಫೋನ್ ಮಾಡಿ ತಿಳಿಸಿದರಿಂದ ಅವಳಿಗೆ ಸ್ವಲ್ಪ ಸಮಾಧಾನ ಇತ್ತು, ಬಸ್ ಹತ್ತುವಾಗ ಅವಳ ಹಿಂದೆ ಒಬ್ಬ ಯುವಕ ಅವಳ ಮೈ ಮುಟ್ಟಿದಂತೆ ಆಯಿತು, ಹಿಂತಿರುಗಿ ನೋಡುವಾಗ, ಒಬ್ಬಾತ ಅವಳನ್ನು ನೋಡಿ ನಗುತ್ತಿದ್ದ, ಅಯ್ಯೋ ಅಸಹ್ಯ ನಗು, ಅವನಿಗೆ ಒಂದು ಬಾರಿಸ ಬೇಕೆಂದಾಯಿತು ಅವಳಿಗೆ, ಆದರೆ ಆ ಜನಜಂಗುಳಿ, ಆ ಗರ್ದಿಯಲ್ಲಿ ಅವಳಿಗೆ ಒಳಗೆ ನುಗ್ಗುವಷ್ಟೇ ಸಾಕಾಯಿತು. 

ಹೇಗೋ ಬಸ್ ಒಳಗೆ ಬಂದಳು, ಆ ಯುವಕ ಅವಳ ಹಿಂದೆಯೇ ಇದ್ದ, ಬಸ್ ಒಳಗೆ ಬಂದ ನಂತರ ಅವಳು ತನ್ನನ್ನು ಸ್ವತಃ ಸಮಾಧಾನ ಪಡಿಸಿ ಶಾಂತವಾಗಿ ನಿಂತಳು, ಆ ಯುವಕ ಪದೇ ಪದೇ ಅವಳ ಗರ್ದಿಯ ನೆಪದಿಂದ ಅವಳ ಮೈ ಮುಟ್ಟುತ್ತಿದ್ದ, ಆದರೆ ರಮಾಳಿಗೆ ಏನು ಮಾಡುವುದೆಂದು ತೋಚಲಿಲ್ಲ, ರಮಾಳ ಬಸ್ ಸ್ಟಾಪ್ ಬಂದ ಕೂಡಲೇ ರಮಾ ಬೇಗ ಬೇಗ ಇಳಿದಳು, ಆ ಯುವಕ ಅವನು ಅವಳ ಹಿಂದೆಯೇ ಇಳಿದ, ರಮಾ ಬೇಗ ಬೇಗ ನಡೆಯಲಾರಂಭಿಸಿದರು, ಬಸ್ ಸ್ಟಾಪ್ ಹಾಗು ಅವಳ ಮನೆಯ ಮಧ್ಯೆ ಐದು ನಿಮಿಷದ ಹಾದಿ ಇತ್ತು, ಒಳ ರಸ್ತೆ ಆದ ಕಾರಣ ರಸ್ತೆಯಲ್ಲಿ ಕತ್ತಲೆ ಇತ್ತು, ಆ ಯುವಕ ಅವಳ ಹಿಂದೆಯೇ ಇದ್ದ, ರಮಾಳಿಗೆ ಈಗ ಹೆದರಿಕೆ ಶುರು ಆಯಿತು, ರಸ್ತೆಯಲ್ಲಿ ಯಾರೂ ಇರಲಿಲ್ಲ ,ರಮಾ ಬೇಗ ಬೇಗನೆ ಹೆಜ್ಜೆ ಇಟ್ಟಳು, ಅವಳ ಬಿಲ್ಡಿಂಗ್ ಎದುರೇ  ಕಾಣುತ್ತಿತ್ತು ಅವಾಗಲೇ ಆ ಯುವಕ ಅವಳನ್ನು ಓಡಿ ಬಂದು ಹಿಡಿದು ಒಂದು ಮೂಲೆಗೆ ಎಳೆಯಲು ಆರಂಭಿಸಿದ, ರಮಾ ಜೋರಿನಿಂದ ಕಿರುಚಿದಳು, ಆದರೆ ಈಗ ಆ ಯುವಕ ಅವಳ ಬಾಯಿಗೆ ಕೈ ಇಟ್ಟು ಎಳೆಯಲು ಪ್ರಯತ್ನಿಸಿದ, ಅವಾಗಲೇ ಅಲ್ಲಿ ಆ ಚಾಯಿವಾಲ ಬಂದ, ಅವನು ಬಂದು ಮೊದಲು ಅವಳನ್ನು ಅವನಿಂದ ಬಿಡಿಸಿದ ಹಾಗು ಅವನಿಗೆ ಸರಿ ತುಳಿದು ಹೊಡೆದು ಹದ ಮಾಡಿದ ಹಾಗು ಅಲ್ಲೇ ಕಟ್ಟಿ ಹಾಕಿದ,  ಅಲ್ಲಿ ಜನರೆಲ್ಲಾ ಒಟ್ಟಾದರು, ರಮಾಳ ತಂದೆ ತಾಯಿಗೆ ಸಹ ಸುದ್ಧಿ ತಿಳಿಯಿತು, ಅವರೂ ಅಲ್ಲಿಗೆ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಪೋಲಿಸ್ ಸಹ ಬಂದರು. 

ವಿಷಯ ಎಲ್ಲಾ ತಿಳಿದು ಪೊಲೀಸರು ಚಾಯಿವಾಲನಿಗೆ "ಒಳ್ಳೆಯ ಕೆಲಸ ಮಾಡಿದೆ ನೀನು ಮಹರಾಯ, ಇಂತಹವರನ್ನು ಯಾವಗಲು ಬಿಡಬಾರದು" ಎಂದು ಆ ಯುವಕನಿಗೆ ಎರಡು ಬಾರಿಸಿದ್ದರು. 

ಚಾಯಿವಾಲ ಸ್ವಲ್ಪ ಭಾವುಕನಾಗಿ "ಹೇಗೆ ಬಿಡಲಿ ಸಾಹೇಬರು, ಇವಳ ಪ್ರಾಯದ ನನ್ನ ಸಹ ಒಂದು ಮಗಳಿದ್ದಳು, ಒಂದು ದಿವಸ ಅವಳು ಮನೆಯಲ್ಲಿ ಒಬ್ಬಳೇ ಇರುವಾಗ ಇವನಂತಹ ಒಬ್ಬ ಅಮಾನುಷ ಬಂದು ಅವಳ ಅತ್ಯಾಚಾರ ಮಾಡಿ ಓಡಿ ಹೋದ, ಅವಮಾನ ತಾಳಲಾರದೆ ಆ ಮುದ್ದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು" ಎಂದು ಅಳಲಾರಂಭಿಸಿದ.

ಅವನ ಮಾತು ಕೇಳಿ ರಮಾ ಸ್ತಬ್ಧಳಾದಳು, ಅವಳು ಚಾಯಿವಾಲನನ್ನು ಎಷ್ಟು ತಪ್ಪು ತಿಳಿದಿದ್ದಳು, ಆದರೆ .... ಆಯ್ಯೋ ,  ನನ್ನ ಹಾಳು ವಿಚಾರಗಳೇ.

ಪೊಲೀಸರು ಅವನಿಗೆ "ಸಮಾಧಾನ ಮಾಡಿಕೊಳ್ಳು, ನೀನೊಬ್ಬ ಒಳ್ಳೆ ಮನುಷ್ಯ, ನಿನ್ನ ಒಳ್ಳೆಯದಾಗಲಿ".

ರಮಾ ಚಾಯಿವಾಲನ ಬಳಿ ಬಂದು "ನೀವು ನಿಮಗೆ ಮಗಳಿಲ್ಲ ಎಂದು ತಿಳಿಯಬೇಡಿ, ಇಂದಿನಿಂದ ನಾನೇ ನಿಮ್ಮ ಮಗಳು". 

ಚಾಯಿವಾಲ ತನ್ನ ಕಣ್ಣೀರು ಒರೆಸುತ್ತಾ ಅವಳನ್ನು ಅಕ್ಕರೆಯಿಂದ ನೋಡಲಾರಂಭಿಸಿದ. 

by ಹರೀಶ್ ಶೆಟ್ಟಿ,ಶಿರ್ವ 

1 comment:

  1. ಕಳೆದುಕೊಂಡ ಮಗಳನ್ನು ನಾಯಕಿಯಲ್ಲಿ ಕಂಡ ಚಾಯ್ವಾಲನ ಮನಸು ಮೆಚ್ಚುಗೆಯಾಯಿತು.
    ಎಲ್ಲ ಸ್ಪರ್ಷಗಳ ಭಾವಗಳನ್ನು ಕರಾರುವಕ್ಕಾಗಿ ಗುರುತಿಸಲಾರದು.
    ಕಥನ ಪ್ರಕಾರದಲ್ಲೂ ತಮ್ಮದು ಗೆಲುವೇ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...