ಈ ಬದುಕ ಪಯಣದಲ್ಲಿ ನಮಗೆ ಕಾಕತಾಳೀಯವಾಗಿ ಅದೆಷ್ಟೋ ಅಪರಿಚಿತ ಜನರು ಸಿಗುತ್ತಾರೆ. ಅದರಲ್ಲಿ
ಕೆಲವರು ಸದಾ ನೆನಪಿನಲ್ಲಿ ಉಳಿದು ಹೋಗುತ್ತಾರೆ, ಕೆಲವರು ಮರೆತು ಹೋಗುತ್ತಾರೆ.
ಹೀಗೆಯೇ ಬಾಲ್ಯದ ಒಂದು ಮರೆಯಲಾರದ ಘಟನೆ, ಚಿಕ್ಕವನಿದ್ದಾಗ ನನಗೆ ಹಿಂದಿ ಸಿನಿಮಾ ನೋಡುವುದೆಂದರೆ
ತುಂಬಾ ಇಷ್ಟ, ದೊಡ್ಡವರು ಯಾರಾದರು ಸಿನಿಮಾದ ವಿಷಯ ಮಾತನಾಡಿದರೆ, ನಾನು ಅವರನ್ನು ತುಂಬ ಧ್ಯಾನದಿಂದ ಕೇಳುತ್ತಿದ್ದೆ. ಈ ಹುಚ್ಚು ದಿವಸ ದಿವಸ ಹೆಚ್ಚಾಗುತ್ತಲೇ
ಹೋಯಿತು, ಮೇಲಿಂದ ನಮ್ಮ ವಸತಿಗೃಹದ ಬದಿಯಲ್ಲಿಯೇ ಮೂರು ಹೊಸ ಚಿತ್ರಮಂದಿರ ಪ್ರಾರಂಭವಾಯಿತು, ಹೆಸರು ಸಹ ಆಕಷಿ೯ತವಾಗಿತ್ತು, ಬಾದಲ್, ಬಿಜಲಿ, ಬರ್ಖಾ.
ನನ್ನ ಈ ಸಿನಿಮಾ ಹುಚ್ಚುವಿನ ಬಗ್ಗೆ ನಮ್ಮ ಎಲ್ಲ ನೆರೆಹೊರೆಯವರಿಗೆ ತಿಳಿದಿತ್ತು, ಅದಕ್ಕೆ ನನ್ನ ನೆರೆಯವರು ಯಾವಗಲೊಮ್ಮೆ ಅವರ ಜೊತೆ ನನ್ನನ್ನು ಸಹ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು, ನನ್ನ ಈ ಸಿನಿಮಾ ಹುಚ್ಚು ಹೀಗೆಯೇ ಏರುತ್ತ ಹೋಯಿತು. ಚಿತ್ರಮಂದಿರ ಬದಿಯಲ್ಲಿಯೇ ನನ್ನ ತಂದೆಯ ಹೋಟೆಲ್ ಸಹ ಇತ್ತು, ಚಿತ್ರಮಂದಿರದಲ್ಲಿ ಟಿಕೆಟ್ ಬ್ಲಾಕ್ ಮಾಡುವವರು ಯಾವಗಲು ನನ್ನ ತಂದೆಯ ಹೋಟೆಲಿಗೆ ಬಂದು ಪಟ್ಟಂಗ ಹೊಡೆಯೋಕೆ ಬರುತ್ತಿದ್ದರು, ಅವರಲ್ಲಿ ಒಬ್ಬ ಬಂಡ್ಯ ಯಾವಗಲು ಬಂದು ನನ್ನನ್ನು ಮುದ್ದಿಸುತ್ತಿದ್ದ, ಹೀಗೆಯೇ ಅವನ ಪರಿಚಯ ನನ್ನ ಹತ್ತಿರ ಗಾಡವಾಯಿತು, ನಾನು ಅವನ ಹತ್ತಿರ ಒಂದೊಂದು ಗಂಟೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೆ.
ನನ್ನ ಈ ಸಿನಿಮಾ ಹುಚ್ಚುವಿನ ಬಗ್ಗೆ ನಮ್ಮ ಎಲ್ಲ ನೆರೆಹೊರೆಯವರಿಗೆ ತಿಳಿದಿತ್ತು, ಅದಕ್ಕೆ ನನ್ನ ನೆರೆಯವರು ಯಾವಗಲೊಮ್ಮೆ ಅವರ ಜೊತೆ ನನ್ನನ್ನು ಸಹ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು, ನನ್ನ ಈ ಸಿನಿಮಾ ಹುಚ್ಚು ಹೀಗೆಯೇ ಏರುತ್ತ ಹೋಯಿತು. ಚಿತ್ರಮಂದಿರ ಬದಿಯಲ್ಲಿಯೇ ನನ್ನ ತಂದೆಯ ಹೋಟೆಲ್ ಸಹ ಇತ್ತು, ಚಿತ್ರಮಂದಿರದಲ್ಲಿ ಟಿಕೆಟ್ ಬ್ಲಾಕ್ ಮಾಡುವವರು ಯಾವಗಲು ನನ್ನ ತಂದೆಯ ಹೋಟೆಲಿಗೆ ಬಂದು ಪಟ್ಟಂಗ ಹೊಡೆಯೋಕೆ ಬರುತ್ತಿದ್ದರು, ಅವರಲ್ಲಿ ಒಬ್ಬ ಬಂಡ್ಯ ಯಾವಗಲು ಬಂದು ನನ್ನನ್ನು ಮುದ್ದಿಸುತ್ತಿದ್ದ, ಹೀಗೆಯೇ ಅವನ ಪರಿಚಯ ನನ್ನ ಹತ್ತಿರ ಗಾಡವಾಯಿತು, ನಾನು ಅವನ ಹತ್ತಿರ ಒಂದೊಂದು ಗಂಟೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೆ.
ಒಂದು ದಿವಸ ಬಂಡ್ಯ ಹಾಗು ಇತರ ಎರಡು ಮೂರು ಜನ ( ಎಲ್ಲಾ ಟಿಕೆಟ್ ಬ್ಲಾಕ್ ಮಾಡುವವರೇ) ತುಂಬಾ
ಉದ್ವೇಗ ಹಾಗು ಬೇಸರದಿಂದ ಪಪ್ಪಾನ ಹೋಟೆಲಿಗೆ ಬಂದರು.
ಪಪ್ಪಾ ಅವರನ್ನು ನೋಡಿ "ಕಾಯ್ ಆಜ್ ಸರ್ವ ಖುಪ್ ವೈತಾಗ್ಲ ಸಾರ್ಕ ವಾಟತಯ್"(ಏನು
ಎಲ್ಲರು ತುಂಬಾ ಬೇಸರದಲ್ಲಿದ್ದಂತೆ ಕಾಣುತ್ತದೆ).
ಅವರಲ್ಲಿ ಒಬ್ಬಾತ "ಕಾಯ್ ಸಾಂಗು ಸೆಟ್, ಯೇ ಬಗಾ ಕಿತಿ ಟಿಕೆಟ್ ಉರ್ಲಯ್" (ಏನು ಹೇಳಲಿ ಶೆಟ್ರೆ, ಎಷ್ಟು ಟಿಕೆಟ್ ಉಳಿದಿದ್ದೆ ನೋಡಿ) ಎಂದು ಅದೆಷ್ಟೋ ಟಿಕೆಟ್ ತೋರಿಸಿದ, ಅದು ಆ ಶೋವಿನ ಬಿಕ್ರಿ ಆಗದೆ ಉಳಿದ ಟಿಕೆಟ್.
ಪಪ್ಪಾ ನಗುತ "ಒಹ್ ಅಸಾ ಕಾಯ್" (ಒಹ್ ಹಾಗೇಯ) ಎಂದರು.
ಆಗ ಬಂಡ್ಯ ನನ್ನನ್ನು ಕುರಿತು "ಹೇ ಬಾರ್ಕಿಯ, ಪಿಕ್ಚರ್ ಬಗ್ನಾರ್" (ಹೇ ಪುಟ್ಟ, ಚಲನಚಿತ್ರ ನೋಡುತ್ತಿಯ).
ನಾನು ಪಪ್ಪಾನ ಕಡೆ ನೋಡಿದೆ, ನನ್ನ ತಂದೆಗೆ ನನ್ನ ಸಿನಿಮಾ ಹುಚ್ಚಿನ
ಬಗ್ಗೆ ತಿಳಿದಿತ್ತು, ಆದರೆ ಅವರು ಅವರಿಗೆ "ನಕೊ ನಕೊ ಕಶಾಲ, ಏಕಟ ಕುಟೆ ಜಾನಾರ್" (ಬೇಡ ಬೇಡ, ಒಬ್ಬನೇ ಎಲ್ಲಿಗೆ ಹೋಗುವುದು).
ಬಂಡ್ಯ "ಜಾವು ದ್ಯ ಹೊ ಸೆಟ್, ಬಾಜುಲಚ್ ತರ್ ಹಯ್" (ಹೋಗಲಿ ಶೆಟ್ರೆ, ಬದಿಯಲ್ಲಿ ತಾನೇ ಇದೆ).
ಅವರೆಲ್ಲ ತುಂಬಾ ಹೇಳಿದ ನಂತರ, ಪಪ್ಪಾ ಒಪ್ಪಿಗೆ ನೀಡಿದರು. ನಾನು ಅವರಿಂದ
ಟಿಕೆಟ್ ಪಡೆದು ಓಡಿದೆ, ಚಿತ್ರಮಂದಿರಕ್ಕೆ, ಶೋ ಶುರುವಾಗಿತ್ತು, ಆದರೆ ನನಗೆ ಎಲ್ಲಿಲ್ಲದ ಖುಷಿಯೇ ಖುಷಿ, ಬಹುಶಃ ಒಬ್ಬನೇ ನೋಡುತ್ತಿದ್ದೇನೆ ಅದಕ್ಕೆ
ಏನೋ.
ಮೆಲ್ಲ ಮೆಲ್ಲ ಯಾವಾಗಲೊಮ್ಮೆ ಅಮ್ಮನಿಂದ ಬೇಡಿ ಬೇಡಿ ನಾನು ಒಬ್ಬನೇ ಸಹ ಸಿನಿಮಾ ನೋಡಲು ಪ್ರಾರಂಭಿಸಿದೆ.
ಆ ಸಮಯ ಮನೋಜ್ ಕುಮಾರ್ ಅವರ ‘ಕ್ರಾಂತಿ’ ಪಿಕ್ಚರ್ ರಿಲೀಸ್ ಆಯಿತು, ಬರ್ಖಾ ಚಿತ್ರಮಂದಿರದಲ್ಲಿ ಅದರ ಭವ್ಯ ಪೋಸ್ಟರ್ ನೋಡಿ ನಾನು ಮನಸ್ಸಲ್ಲಿ ಈ ಚಲನಚಿತ್ರ ನೋಡಲೇ
ಬೇಕೆಂದು ಖಚಿತ ಮಾಡಿಕೊಂಡೆ.
ಮಧ್ಯಾಹ್ನ ನಾನು ಅಮ್ಮನಿಗೆ ಹೇಗಾದರೂ ಪುಸಲಾಯಿಸಿ ಹಣ ಪಡೆದು ಪಿಕ್ಚರ್ ನೋಡಲು ಹೊರಟೆ, ಆದರೆ
ಅಲ್ಲಿ ಹೋಗಿ ಮನಸ್ಸಲ್ಲಿ ನಿರಾಸೆ ಮೂಡಿತು, ಶೋ ಹೌಸ್ ಫುಲ್ ಆಗಿತ್ತು, ನಾನು ಬಂಡ್ಯನನ್ನು
ಹುಡುಕಿದೆ, ಆದರೆ ಅವನು ಎಲ್ಲಿಯೂ ಕಾಣಲಿಲ್ಲ.
ಹೀಗೆಯೇ ನಿರಾಸೆಯಲ್ಲಿ ನಿಂತಾಗ ಒಬ್ಬಾತ ನನ್ನಲ್ಲಿ ಬಂದು "ಟಿಕೆಟ್ ಬೇಕಾ?"
ನಾನು ಅತಿ ಉತ್ಸಾಹದಿಂದ "ಹೌದು ಬೇಕು, ಬೇಕು."
ಅವನು ಮೆಲ್ಲನೆ "ಬಾ ನನ್ನ ಹಿಂದೆ, ಇಲ್ಲಿ ಪೊಲೀಸರು ಇದ್ದಾರೆ."
ನಾನು ಕೂಡಲೇ ಅವನ ಹಿಂದೆ ಹೋದೆ, ಒಂದು ಮೂಲೆಯಲ್ಲಿ ಅವನು ನನಗೆ ಟಿಕೆಟ್
ಕೊಟ್ಟು "ತೆಗೋ, ಬೇಗ ಹಣ ಕೊಡು", ನಾನು ಕೂಡಲೇ ಅಮ್ಮನಿಂದ
ಪಡೆದ ಹಣ ತೆಗೆದು ಅವನಿಗೆ ಕೊಟ್ಟೆ, ಅವನು ಒಂದು ವಿಚಿತ್ರ ನಗು ಬೀರಿ ನನ್ನತ್ತ ನೋಡಿದ, ಸಂತೋಷದಿಂದ
ನನ್ನ ಹೃದಯ ದಡ ದಡ ಬಡಿಯುತ್ತಿತ್ತು.
ಶೋ ಶುರುವಾಗುವ ಸಮಯ ಆಯಿತು, ಎಲ್ಲರು ಚಿತ್ರಮಂದಿರದ ಒಳಗೆ ಹೋಗಲಾರಂಭಿಸಿದರು, ಗೇಟಿನಲ್ಲಿ ನಿಂತಿದ ಮನುಷ್ಯ ಎಲ್ಲರಿಗೆ ಟಿಕೆಟ್ ಹರಿದು ಅರ್ಧ ತುಂಡು ಅವರಿಗೆ ಕೊಡುತ್ತಿದ್ದ, ನಾನು ಟಿಕೆಟ್ ಕೊಟ್ಟೆ, ಅವನು ಗಡಿಬಿಡಿಯಲ್ಲಿ ಹರಿದು ಕೊಟ್ಟ, ನಾನು ಒಳಗೆ ನುಗ್ಗಿದೆ.
ಚಿತ್ರಮಂದಿರದ ಒಳಗೆ ಕತ್ತಲೆ ಇತ್ತು, ಒಬ್ಬ ಬ್ಯಾಟರಿಯಿಂದ ಟಿಕೆಟ್ ಚೆಕ್ ಮಾಡಿ
ಜನರಿಗೆ ಅವರ ಸ್ಥಾನ ತೋರಿಸುತ್ತಿದ್ದ, ನಾನು ಅವನ ಬಳಿ ಹೋದೆ, ಅವನು ನನ್ನಿಂದ ಟಿಕೆಟ್ ಪಡೆದು ನೋಡಲಾರಂಭಿಸಿದ, ನೋಡಿದಂತೆ ಅವನು "ಎಲ್ಲಿಂದ ಪಡೆದೆ ಈ ಟಿಕೆಟ್?"
ನಾನು "ಒಂದು ಅಂಕಲ್ ಕೊಟ್ಟರು, ನಾನು ಅವರಿಗೆ ಹಣ ಕೊಟ್ಟೆ."
ಅವನು "ಅರೆ ಮೂರ್ಖ, ಅವನು ನಿನ್ನಿಂದ ಮೋಸ ಮಾಡಿದ್ದಾನೆ, ಇದು ಹಳೆಯ ಟಿಕೆಟ್, ಈಗ ನಿನಗೆ ಪಿಕ್ಚರ್ ನೋಡಲು ಸಾಧ್ಯವಿಲ್ಲ, ಹೋಗು ಇನ್ನು."
ನಾನು ಮೂಕವಿಸ್ಮಿತನಾಗಿ ಅವನನ್ನು ನೋಡಿದೆ, ಕಣ್ಣೀರು ರಭಸದಿಂದ ನನ್ನ ಕಣ್ಣಿಂದ ಹರಿಯಲಾರಂಭಿಸಿತು.
ನಾನು ಅಲ್ಲೇ ನಿಂತೇ, ಟಿಕೆಟ್ ಚೆಕ್ ಮಾಡುತ್ತಿದ್ದವ ಇತರರ ಟಿಕೆಟ್
ಚೆಕ್ ಮಾಡುತ್ತಿದ್ದ, ನನ್ನನ್ನು ಈಗಲೂ ನಿಂತಿದನ್ನು ನೋಡಿ "ಏನು ಇನ್ನು ಹೋಗಲಿಲ್ಲ, ಮತ್ತೆ ಯಾಕೆ ಹೀಗೆ ಟಿಕೆಟ್ ತೆಗೆದು ಕೊಂಡೆ, ಮೂರ್ಖ."
ನಾನು ಸ್ವಲ್ಪ ಹೊತ್ತು ಹೀಗೆಯೇ ಕಣ್ಣೀರಿಡುತ್ತಾ ನಿಂತುಕೊಂಡೆ, ಕೊನೆಗೆ ಹಿಂತಿರುಗಿ ಹೋಗುವೆ ಎಂದಾಗ, ಟಿಕೆಟ್ ಚೆಕ್ ಮಾಡುವವ "ಹೇ ನಿಲ್ಲು."
ನಾನು ನಿಂತೇ, ಅವನು ಮೆಲ್ಲನೆ "ನೋಡು, ನಿನ್ನನ್ನು ನೋಡಿ ಬೇಸರವಾಗುತ್ತದೆ, ಈಗ ಹೋಗಿ ಆ ಮೂಲೆಯಲ್ಲಿ ನಿಲ್ಲು, ನಂತರ ನಾನು ನಿನಗೆ ಕುರ್ಚಿ ತಂದು ಕೊಡುತ್ತೇನೆ" ಎಂದ, ನನಗೆ ದೇವರು ಒಲಿದಂತೆ ಆಯಿತು
"ಆಯಿತು, ತೊಂದರೆ ಇಲ್ಲ, ನಾನು ನಿಂತುಕೊಂಡೆ ನೋಡುತ್ತೇನೆ."
ಅವನು "ನಿಂತುಕೊಂಡು! ನನ್ನ ಕೆಲಸದಿಂದ ಹೊರ ದೂಡಲಿಕ್ಕೆ ಇದೆಯೇನು ನಿನಗೆ, ಮೆಲ್ಲನೆ ಹೋಗಿ ನಿಲ್ಲು, ನಾನು ನಂತರ ಬರುತ್ತೇನೆ." ಎಂದ ಆ
ದೇವತಾ ಮನುಷ್ಯ.
ಆ ಭವ್ಯ ಚಲನಚಿತ್ರ ‘ಕ್ರಾಂತಿ’ ನೋಡುವಾಗ ನಾನು ಎಲ್ಲವನ್ನು ಮರೆತು ಹೋದೆ, ಚಲನಚಿತ್ರ ಶುರು ಆದ ಸ್ವಲ್ಪ ಸಮಯದ ನಂತರ, ಆ ದೇವತಾ ಮನುಷ್ಯ ಎರಡು ಸಣ್ಣ ಕುರ್ಚಿ ತಂದ. ನಾವಿಬ್ಬರು ಅಲ್ಲೇ ಕುಳಿತುಕೊಂಡು ಆ ಪಿಕ್ಚರ್
ನೋಡಿದ್ದೆವು, ಆ ಒಳ್ಳೆಯ ಮನುಷ್ಯ ಇಂಟರ್ವಲ್ ಆದಾಗ ನನಗೆ ತಿನ್ನಲು ಸಮೋಸ ಹಾಗು ಐಸ್ ಕ್ರೀಂ ಸಹ ತಂದು
ಕೊಟ್ಟ.
ಚಲನಚಿತ್ರ ಮುಗಿದ ನಂತರ ಅವನು ವ್ಯಸ್ತನಾದ, ನಾನು ಅವನಿಗೆ 'ತುಂಬಾ ಧನ್ಯವಾದ' ಹೇಳಿದೆ, ಅವನು ನಗುತ್ತಲೇ ನನ್ನ ಗಲ್ಲ ಹಿಡಿದ, ನಾನು ಭಾವುಕನಾಗಿ ಖುಷಿಯಿಂದ ಅಲ್ಲಿಂದ ಮನೆಗೆ ತೆರಳಿದೆ.
ಇಂದಿಗೂ ಸಹ ಆ ಅಪರಿಚಿತ ದೇವತಾ ಮನುಷ್ಯನ ನೆನಪಾಗುತ್ತದೆ.
by ಹರೀಶ್ ಶೆಟ್ಟಿ,ಶಿರ್ವ
Harish , very beautifully written .......liked it .
ReplyDeleteThank you very much.
ReplyDelete