Tuesday, July 12, 2011

ಬಾಲ್ಯದ ಮುಗ್ದತನ


ಇದು ನನ್ನ ಬಾಲ್ಯದ ಒಂದು ಮರೆಯಲಾರದ ಘಟನೆ.
ನನ್ನ ವಯಸ್ಸು ೧೦ ವರುಷ ಆಗಿರಬೇಕು.
...
ಆ ಸಮಯದಲ್ಲಿ ನನ್ನ ತಂದೆಯವರ ಒಂದು ಅಂಗಡಿ ಇತ್ತು , ಅದರಲ್ಲಿ ಅವರು ಬ್ರೆಡ್, ಬಿಸ್ಕೆಟ್ ಹಾಗು ಬೇರೆಲ್ಲ ಸಾಮಾನು ಇಡುತ್ತಿದ್ದರು. 



ಒಂದು ದಿವಸ ನನ್ನ ತಂದೆಯವರು ನನ್ನನ್ನು ಕರೆದು ನನಗೆ ೧೪೦ ರೂಪಯಿ ಕೊಟ್ಟು " "ಹರೀಶ ಉಂದು ೧೪೦ ರೂಪಯಿ ಪತ್ಹೊನು ಬೊಕ್ಕ ಕಾಮತ ಸ್ಟೋರ್ ಪೋದು ಪಾರ್ಲೆದ ಮಲ್ಲ ಪ್ಯಾಕೆಟ್ ಕನ" ( ಹರೀಶ, ಈ ಹಣ ಇಡು ಹಾಗು ಕಾಮತ ಸ್ಟೋರ್ ಗೆ ಹೋಗಿ ಪಾರ್ಲೆ ಬಿಸ್ಕೆಟ್ ನ ದೊಡ್ಡ ಪ್ಯಾಕೆಟ್ ತೆಗೆದು ಕೊಂಡು ಬಾ)" ಎಂದು ಹೇಳಿದರು. ನಾನು ಹಣವನ್ನು ಕೈಯಲ್ಲೇ ಇಟ್ಟು ಕಾಮತ ಸ್ಟೋರ್ ಗೆ ಹೋಗಲು ಹೊರಟೆ, ಕಾಮತ್ ಸ್ಟೋರ್ ಸ್ವಲ್ಪ ದೂರದಲ್ಲೇ ಇತ್ತು.



ಸ್ವಲ್ಪ ದೂರ ಹೋದ ಮೇಲೆ ಒಬ್ಬ ಮನುಷ್ಯ ಮುಖದಲ್ಲಿ ನಗು ಬೀರುತ ನನ್ನ ಬಳಿಗೆ ಬಂದ. ಅವನ ನಗೆ ನೋಡಿ ನಾನು ಸಹ ಸ್ಮೈಲ್  ಕೊಟ್ಟೆ. 


"ಎಲ್ಲಿಗೆ ಹೋಗುವುದು ನೀನು " ಎಂದು ಅವನು ಕೇಳಿದ.


ನಾನದಕ್ಕೆ "ಪಪ್ಪಾ ...ಕಾಮತ ಸ್ಟೋರ್ ನಿಂದ ಬಿಸ್ಕೆಟ್ ತರಲು ಹೇಳಿದ್ದಾರೆ , ಅಲ್ಲಿಗೆ ಹೋಗುತ್ತಿದ್ದೇನೆ



ಅದಕ್ಕೆ ಅವನು " ನೀನು ಎಷ್ಟು ಮೂರ್ಖ, ನಿನಗೆ ಬುದ್ದಿ ಇಲ್ಲವೇ, ಹೀಗೆ ಹಣವನ್ನು ಯಾರಾದರು ಕೈಯಲ್ಲಿ ಇಟ್ಟು ಕೊಂಡು ಹೋಗುತ್ತಾರೆಯೇ"



ನಾನು ಅದಕ್ಕೆ "ಮತ್ತೆ ಹೇಗೆ ಇಡುವುದು " ಎಂದು ಕೇಳಿದೆ. 



ಅದಕ್ಕೆ ಅವನು ತನ್ನ ಕೈಯಲ್ಲಿದ್ದ ನ್ಯೂಸ್ ಪೇಪರ್ ಹರಿದು ಅದರ ತುಂಡು ತುಂಡು ಮಾಡಿ "ಬಾ ನಿನಗೆ ಹೇಳುತ್ತೇನೆ " ಎಂದು ಹೇಳಿ, ನನ್ನ ಕೈಯಲ್ಲಿದ್ದ ಹಣವನ್ನು ತೆಗೊಂಡು ನನ್ನ ಪ್ಯಾಂಟಿನ ಕಿಸೆಯಲ್ಲಿ ಹಾಕಿ ಅದರ ಮೇಲೆ ಹರಿದ ಪೇಪರ್ ಇಟ್ಟು ನನ್ನ ಕಿಸೆ ತುಂಬಿಸಿ " ನೋಡು, ಈಗ ಹೆದರಿಕೆ ಇಲ್ಲ, ಈಗ ಸೇಫ್,  ಹೀಗೆ ಇಡಬೇಕು" ಎಂದು ಹೇಳಿದ. 



ನಾನು ತುಂಬಾ ಉಪಕಾರದ ದೃಷ್ಟಿಯಿಂದ ಅವನನ್ನು ನೋಡಿದೆ. 



ಅವನು ನನ್ನನ್ನು ನೋಡಿ ನಗು ನಗುತ ಹೋದ.



ನಾನು ಕಾಮತ ಸ್ಟೋರ್ ಗೆ ಹೋಗಿ ಕಾಮತ ಅಂಕಲ್ ಗೆ "ಅಂಕಲ್ , ಒಂಜಿ ಮಲ್ಲ ಪ್ಯಾಕೆಟ್ ಪಾರ್ಲೆ ಬಿಸ್ಕೆಟ್ ಕೊರ್ಲೆ"(ಅಂಕಲ್ ಒಂದು ದೊಡ್ಡ ಪ್ಯಾಕೆಟ್ ಪಾರ್ಲೆ ಬಿಸ್ಕೆಟ್ ಕೊಡಿ). 



ಅದಕ್ಕೆ ಕಾಮತ್ ಅಂಕಲ್ "ಎತ್ ದೊಡ್ದು ಕಂದಾ" (ಎಷ್ಟು ಹಣ ತಂದಿದಿ) . 



"ನುತ್ತ ನಳಪಾ" (ನೂರ ನಲವತ್ತು) ಎಂದು ಹೇಳಿ ನಾನು ನನ್ನ ಪ್ಯಾಂಟಿನ ಕಿಸೆಯಿಂದ ಪೇಪರ್ ತೆಗೆಯಲು ಶುರು ಮಾಡಿದೆ, ಎಲ್ಲ ಪೇಪರ್ ತೆಗೆದ ನಂತರ ಸಹ ನನಗೆ ಹಣ ಸಿಗಲಿಲ್ಲ. ಈಗ ನನ್ನ ಕಣ್ಣಿನಿಂದ ನೀರು ಹರಿಯ ತೊಡಗಿತು. 


ನನ್ನ ಕಣ್ಣಿನಿಂದ ನೀರು ಬರುವುದನ್ನು ಗಮನಿಸಿದ ಕಾಮತ ಅಂಕಲ್ " ಯಿನಾ ಅಂಡ್ ...ವೋಳುಂಡು ದೊಡ್ದು" (ಏನಾಯಿತು ...ಎಲ್ಲಿದೆ ಹಣ ). 


ನಾನು ಅಳು ಅಳುತ ಆಗಿದೆಲ್ಲ ಅವರಿಗೆ ಹೇಳಿದೆ, ಅದನ್ನು ಕೇಳಿ ಕಾಮತ ಅಂಕಲ್ ನಗು ನಗುತ "ನಿಕ್ಕ್ ಆಯೇ ಮಂಗೆ ಮಲ್ತೆ" (ನಿನಗೆ ಅವನು ಮಂಗ ಮಾಡಿದ ) ಎಂದು ಹೇಳಿದರು.



ನಾನು ಅಳುತ್ತಲೇ ನಮ್ಮ ಅಂಗಡಿಗೆ ಬಂದು ಮುಟ್ಟಿದೆ, ತಂದೆಯವರು ನನ್ನ ಮುಖವನ್ನು ನೋಡಿ, ಏನಾದರೂ ಗಡಬಡ ಮಾಡಿ ಬಂದಿದೆ ಎಂದು ಅರ್ಥ ಮಾಡಿ  ಕೊಂಡರು. 



" ಯಿನಾ ಅಂಡ್ ವೋಳುಂಡು ಬಿಸ್ಕೆಟ್ " ( ಏನಾಯಿತು ಎಲ್ಲಿದೆ ಬಿಸ್ಕೆಟ್)" ಎಂದು ಕೇಳಿದರು. 



ನಾನು ಅಳುತ್ತಲೇ  ಎಲ್ಲವನ್ನು ಹೇಳಿದೆ, ಪಪ್ಪಾ ಸ್ವಲ್ಪ ಸಮಯ ನನ್ನ ಮುಖವನ್ನು ನೋಡುತಾ ಹೇಳಿದರು " ಟೀಕ್ ಹೈ, ಇಲ್ಲಗ್ ಪೋ" (ಟೀಕ್ ಹೈ, ಮನೆಗೆ ಹೋಗು). 



ತಂದೆಯವರಿಗೆ ಬೇಜಾರ ಆಗಿತ್ತು, ನಮ್ಮ ಪರಿಸ್ಥಿತಿ ಆವಾಗ ಅಷ್ಟು ಚೆನ್ನಾಗಿರಲಿಲ್ಲ, ಪಪ್ಪಾನ ಅಂಗಡಿಯೂ ಅಷ್ಟು ನಡೆಯುತ್ತಿರಲಿಲ್ಲ, ತುಂಬಾ ಕಷ್ಟದಿಂದ ತಂದೆಯವರು ಮನೆಯ ಖರ್ಚು ನೋಡುತ್ತಿದ್ದರು. 



ಪಪ್ಪಾ ಇದನ್ನು ಅವರ  ದುರದೃಷ್ಟ ಎಂದು ತಿಳಿದು ನನಗೆ ಏನೂ ಹೇಳಲಿಲ್ಲ, ಆದರೆ ಅಲ್ಲೇ ನಿಂತಿದ ನನ್ನ ಅಣ್ಣನವರು ನನಗೆ ತುಂಬಾ ಬೈದರು. 



ತಂದೆಯವರ ಬೇಜಾರ ಮುಖ ನೋಡಿ ನನಗೆ ಇನ್ನು ದುಃಖವಾಯಿತು.



ಈ ಘಟನೆಯನ್ನು ನನ್ನಿಂದ ಮರೆಯಲು ಸಾದ್ಯವೇ ಇಲ್ಲ, ಯಾಕೆಂದರೆ ಈ ಘಟನೆ ನೆನಪಾದಾಗ ನನಗೆ ತುಂಬಾ ಒಳ್ಳೆಯವರಾಗಿದ್ದ ನನ್ನ ತಂದೆಯವರ ಬೇಜಾರ ತುಂಬಿದ ಮುಖ ನೆನಪಾಗುತ್ತದೆ.


by ಹರೀಶ್ ಶೆಟ್ಟಿ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...