Monday, 16 December, 2013

ನೂರು ರೂಪಾಯಿ


ಮಗ ಚಳಿಗಾಲದ ರಜೆಯಲ್ಲಿ ಮನೆಯಲ್ಲಿದ್ದ, ದಿನಾ ನಾನು ಕೆಲಸದಿಂದ ಬಂದ ಕೂಡಲೇ "ಪಪ್ಪಾ, ಬನ್ನಿ ಹೊರಗೆ ಹೋಗಿ ಬರುವ" ಎಂದು ಹಿಂದೆ ಬೀಳುತ್ತಿದ, ಆದರೆ ನಾನು ಏನಾದರೂ ನೆಪ ಮಾಡಿ ಮುಂದೂಡುತ್ತಿದ್ದೆ. ಒಂದು ದಿವಸ ಕೆಲಸದಿಂದ ಬಂದ ನಂತರ ಏನೋ ನನಗೆ ಸಹ ಸ್ವಲ್ಪ ತಿರುಗಿ ಬರುವ ಎಂದು ಮನಸ್ಸಾಯಿತು, ನಾನು ಕೆಲಸದಿಂದ ಬಂದ ಕೂಡಲೇ ಸುಮಾಳಿಗೆ "ಬೇಗ ರೆಡಿ ಆಗಿ, ನಾವು ಇಂದು ಸ್ವಲ್ಪ ಮಾಲ್ ತಿರುಗಿ ಬರುವ" ಎಂದು ಹೇಳಿದೆ. ಮಗ  ಖುಷಿಯಿಂದ "ಹುರಾ" ಎಂದ, ಸುಮಾಳಿಗೆ ಆಶ್ಚರ್ಯವಾದರೂ ಕಿರುನಗೆ ಬೀರಿ ಇಬ್ಬರು ರೆಡಿ ಆಗಲು ಹೋದರು.

ನಾವು ಹೀಗೆಯೇ ಮಾಲ್'ಲ್ಲಿ ತಿರುಗುವಾಗ, ಒಬ್ಬಾತ ನನ್ನನ್ನು ಧ್ಯಾನದಿಂದ  ನೋಡುತ್ತಿದಂತೆ ನನಗೆ ಭಾಸವಾಯಿತು. ಆದರೆ ನಾನು ಅವನನ್ನು ನೋಡದಂತೆ ಮಾಡಿ ಮುಂದೆ ನಡೆದೆ, ಸ್ವಲ್ಪ ಮುಂದೆ ಹೋದ ನಂತರ ಹಠಾತ್  ನನಗೆ ಏನೋ ಹೊಳೆದಂತಾಯಿತು, ನಾನು ಹಿಂತಿರುಗಿ ಅವನನ್ನು ನೋಡಿದೆ, ಅವನು ನನ್ನನ್ನು ನೋಡಿ ನಗೆ ಬೀರಿದ. "ಹೌದು ಇದು ಅವನೇ ಬಷೀರ್ " ಎಂದು ನಾನು ಮನಸ್ಸಲ್ಲೇ ನುಡಿದೆ.
                          ***
ನನಗೆ ಬಾಲ್ಯದ ಶಾಲೆಯ ನೆನಪಿನ ಪುಟ ತೆರೆದಂತಾಯಿತು.

ಬಷೀರ್ ಮತ್ತು ನಾನು ಒಂದೇ ಶಾಲೆಯಲ್ಲಿ ,ಒಂದೇ ಕ್ಲಾಸ್ಸಲ್ಲಿ ಓದುತ್ತಿದ್ದೆವು. ಬಷೀರ್ ಕ್ಲಾಸ್ಸಲ್ಲಿ ತುಂಬಾ ಮೌನವಾಗಿರುತ್ತಿದ್ದ, ಯಾರ ಹತ್ತಿರ ಸಹ ಅವನು ಹೆಚ್ಚು ಮಾತನಾಡುತ್ತಿರಲಿಲ್ಲ. ನನ್ನ ಹತ್ತಿರ ಸಹ ಬೇಕಾದಷ್ಟೇ ಮಾತನಾಡುತ್ತಿದ್ದ.
ಆದರೆ ನಮ್ಮಲ್ಲಿ ಒಳ್ಳೆ ಸ್ನೇಹ ಇತ್ತು.
ಆದರೆ ಒಂದು ದಿವಸ.....
ನಾವು ಏಳನೇ ಕ್ಲಾಸ್ಸಲ್ಲಿರುವಾಗ ಒಂದು ದಿನ ನಮ್ಮ ಕಬಡ್ಡಿ  ಪಂದ್ಯ  ಇತ್ತು, ನಾನು ಮತ್ತು ಬಷೀರ್ ಬೇರೆ ಬೇರೆ ಟೀಮ್'ಲ್ಲಿ ಇದ್ದೆವು, ಆಟದ ಮಧ್ಯೆ ಬಷೀರ್'ನ ಕೈ ನನ್ನ ಮುಖಕ್ಕೆ ಜೋರಿನಿಂದ ತಾಗಿತು, ಆ ಸಮಯ ನನಗೆ ಅವನು ಬೇಕೆಂದೇ ಹೊಡೆದ ಎಂದು ತಿಳಿದು ನಾನು ಸಹ ಅವನಿಗೆ ಹೊಡೆದೆ, ಅ ನಂತರ ನಾವಿಬ್ಬರು ಹೊಡೆದಾಡಲು ಶುರು ಮಾಡಿದೆವು, ಹೊಡೆದಾಡುವಾಗ ನನ್ನಿಂದ ಅವನ ಅಂಗಿಯ ಕಿಸೆ ಹರಿದು, ಅವನ ಕಿಸೆಯಲ್ಲಿದ ಕಾಗದದ ತುಂಡು ಸಹ ಹರಿದು ಕೆಳಗೆ ಬಿತ್ತು. ನಮ್ಮ ಹೊಡೆದಾಟ ಕಂಡು ಟೀಚರ್ ಬಂದು ನಮ್ಮಿಬ್ಬರಿಗೂ ಒಂದೊಂದು ಹೊಡೆದು ಬಿಡಿಸಿದರು. ಆ ನಂತರ ನಮ್ಮ ಮಾತುಕತೆ ನಿಂತು ಹೋಯಿತು, ನಾನು ಅವನತ್ರ ಒಂದೆರಡು ಸಲ ಮಾತನಾಡಲು ಪ್ರಯತ್ನಿಸಿದೆ, ಆದರೆ ಅವನು ಪ್ರತಿಕ್ರಿಯಸಲಿಲ್ಲ.  ಅವನಿಗೆ ತುಂಬಾ ನೋವಾಗಿರಬೇಕು ಏನೋ ಎಂದು ನಾನು ಸಹ ನಂತರ ನನ್ನ ಪ್ರಯತ್ನ ನಿಲ್ಲಿಸಿದೆ, ಆದರೆ  ಅದರ ನಂತರ ಮೂರು ವರ್ಷ ಒಟ್ಟಿಗೆ ಒಂದೇ ಕ್ಲಾಸ್ಸಲ್ಲಿದ್ದು ಸಹ ನಮ್ಮ ಮಧ್ಯೆ ಮಾತಿರಲಿಲ್ಲ, ಇದರ ನನಗೆ ಎಲ್ಲೊ ಒಂದು ಮನಸ್ಸಲ್ಲಿ ಬೇಸರವಿತ್ತು. ಹತ್ತನೇ ಕ್ಲಾಸ್ ಮುಗಿದ ನಂತರ ನಾವೆಲ್ಲಾ ಮಕ್ಕಳು ಬೇರೆ ಬೇರೆ ಕಾಲೇಜ್ ಸೇರಿ ನಂತರ ಯಾರೆಲ್ಲಿ , ಯಾರೆಲ್ಲಿ. ಬಷೀರ್ ಸಹ ಆ ನಂತರ ಎಲ್ಲಿ ಯಾವ ಕಾಲೇಜ್ ಸೇರಿದ ಎಂದು ನನಗೆ ತಿಳಿಯಲಿಲ್ಲ .
                          ***
ನೆನಪಿನಂಗಳದಿಂದ ಹೊರ ಬಂದೆ.

ನಾನು ಸ್ವಲ್ಪ ಅನುಮಾನವಿದ್ದರೂ ಏನೋ ಖುಷಿಯಿಂದ ನಾನು ಅವನತ್ತ ಸಾಗಿದೆ. ನಾನು ಅವನ ಬಳಿ ಹೋಗಿ " ಬಷೀರ್" ಎಂದೆ, ಅವನು ಸಂತೋಷದಿಂದ "ಗುರುತಿಸಿದೆ ಅಲ್ಲ ನನ್ನನ್ನು" ಎಂದು ಹೇಳಿದ. ತುಂಬಾ ಅತ್ಮಿಯತೆಯಿಂದ ನಾವಿಬ್ಬರು ಒಬ್ಬರನೊಬ್ಬರನ್ನು ಅಪ್ಪಿಕೊಂಡೆವು. ಸುಮಾ ಹಾಗು ಮಗ ಸಹ ನಮ್ಮನ್ನು ನೋಡಿ ಬಳಿ ಬಂದರು. ನಾನು ಅವರಿಗೆ "ಸುಮಾ, ಇದು ನನ್ನ ಶಾಲೆಯ ಸಹಪಾಠಿ "ಬಷೀರ್" , ಹತ್ತನೇ ಕ್ಲಾಸ್ ತನಕ ನಾವಿಬ್ಬರು ಒಂದೇ ಕ್ಲಾಸ್'ಲ್ಲಿ ಕಲಿತದ್ದು"ಎಂದು ಅವನನ್ನು ಪರಿಚಯಿಸಿದೆ.
ನಾವು ಅಲ್ಲಿಯೇ ಫುಡ್ ಕೋರ್ಟ್'ಲ್ಲಿ ತುಂಬಾ ಸಮಯ ತನಕ ಮಾತನಾಡಿ, ಒಬ್ಬರನೊಬ್ಬರ ವಿಷಯ ತಿಳಿದುಕೊಂಡೆವು. ಅವನ ಸಹ ಮದುವೆ ಆಗಿ ಕೆಲವು ವರ್ಷ ಆಗಿತ್ತು, ಆದರೆ ಅವನ ಫ್ಯಾಮಿಲಿ ಇಂಡಿಯಾದಲ್ಲಿ ಇದ್ದರು, ಅವನಿಗೆ ಎರಡು ಮುದ್ದು ಮಕ್ಕಳು ಸಹ ಇದ್ದರೆಂದು ಹೇಳಿದ. ಇಲ್ಲಿ ದುಬೈಯಲ್ಲಿ ಅವನು ಕೆಲಸ ಸೇರಿ ಒಂದೇ ವರ್ಷ ಆದದ್ದು ಹಾಗು ಇಲ್ಲಿ ಶೇರಿಂಗ್ ರೂಮಲ್ಲಿ ಇರುತ್ತಿದ್ದ. ನಾನು  ನನ್ನ  ಫೋನ್ ನಂಬರ್, ಮನೆ ವಿಳಾಸ ಅವನಿಗೆ ಕೊಟ್ಟು, ಅವನಿಗೆ ಇನ್ನೊಂದು ಶುಕ್ರವಾರ ಮನೆಗೆ ಬರಲು ಆಹ್ವಾನಿಸಿದೆ, ಅವನು ಖಂಡಿತ ಬರುತ್ತೇನೆ ಎಂದು ಹೇಳಿದ .
                     
ಮನೆಗೆ ಹಿಂತಿರುಗುವಾಗ ನಾನು ಶಾಲೆಯ ನೆನಪೆಲ್ಲ ಸುಮಾಳಿಗೆ ಹೇಳಿದೆ, ಅವಳು ತುಂಬಾ ಉತ್ಸುಕತೆಯಿಂದ ಎಲ್ಲ ಕೇಳಿದಳು.
                           ***
ಶುಕ್ರವಾರದ ದಿವಸ ಬಷೀರ್ ಫೋನ್ ಮಾಡಿ ಮನೆಗೆ ಬಂದ, ಊಟ ಎಲ್ಲ ಆದ ನಂತರಹೀಗೆಯೇ  ನಾವು ಹರಟೆ ಹೊಡೆಯುತ ಕುಳಿತೆವು, ಆಗ ಸುಮಾ ಬಂದು  ಹಣ್ಣು ತಂದಿಟ್ಟು ಅಲ್ಲೇ ಕುಳಿತಳು.

ಸುಮಾ "ಬಷೀರ್'ಣ್ಣ ನಿಮ್ಮ  ಮಕ್ಕಳ ಹೆಸರೇನು?"

ಬಷೀರ್ " ಮಗನ ಆಫ್ನಾನ್ ಹಾಗು ಮಗಳ ಸಾರಾ" ಎಂದು ಹೇಳಿದ.

ಸುಮಾ "ವಾವ್ ಒಳ್ಳೆ ಹೆಸರು, ಬಷೀರ್'ಣ್ಣ  ಇವರು ನಿಮ್ಮ ಶಾಲೆಯ ಜಗಳದ ವಿಷಯವೆಲ್ಲ ಹೇಳಿದರು, ಆದರೆ ನೀವು ಅಷ್ಟು ಕೋಪ ಯಾಕೆ ಇಟ್ಟದ್ದು ನಂತರ ಮಾತನಾಡಲೇ ಇಲ್ಲಂತೆ" ಎಂದು ನಗು ನಗುತ ಕೇಳಿದಳು.

ಬಷೀರ್ ನಗುತ "ಅದೆಲ್ಲ ಬಾಲ್ಯದ ವಿಷಯ, ಬಿಡು ಸುಮಾ"
.
ಸುಮಾ "ಇಲ್ಲ ಬಷೀರ್'ಣ್ಣ ಹೇಳಿ ಪ್ಲೀಸ್, ನನಗೆ ಯಾಕೆ ಎಂದು ತಿಳಿಯಬೇಕು".

ಬಷೀರ್ " ಸುಮಾ, ನನ್ನ ಕೋಪದ ವಿಷಯ ನಿನಗೆ ಹೇಗೆ ಹೇಳುವುದು, ಇದರ ಹಿಂದೆ ಒಂದು ದೊಡ್ಡ ಕಥೆ ಇದೆ.

ಸುಮಾ " ಹೇಳಿ, ಪ್ಲೀಸ್ " .

ನಾನು ಸಹ ಅವನಿಗೆ " ಏನೋ ಹೇಳು , ನನಗೆ ಸಹ ತಿಳಿಯಬೇಕು, ನಾನು ಅಂಥದೇನು ಮಹಾ  ಮಾಡಿದೆ ಎಂದು , ಜಗಳದಲ್ಲಿ ನಿನ್ನ ಸಹ ಅಷ್ಟೇ ತಪ್ಪಿತ್ತು".


ತುಂಬಾ ಒತ್ತಾಯದ ನಂತರ ಬಷೀರ್ ಹೇಳಲಾರಂಭಿಸಿದ.

ಸುಮಾ, ನನ್ನ ಬಾಲ್ಯ ತುಂಬಾ ಕಷ್ಟದಲ್ಲಿ ಕಳೆದದ್ದು, ನಾವು ಎಂಟು ಜನ ಮಕ್ಕಳು, ನಾನು ಅವರಲ್ಲಿ ದೊಡ್ಡವನು ಬೇರೆ ನನಗೆ ೪ ತಮ್ಮಂದಿರು ಹಾಗು ೩ ತಂಗಿಯರಿದ್ದರು. ನನ್ನ ಅಬ್ಬು ರೈಲ್ವೆ'ಯಲ್ಲಿ ಹಮಾಲ್ ಆಗಿದ್ದರು. ಅವರ ಒಂದು ನಾಲ್ಕು ಚಕ್ರದ ಸಾಮಾನು ಸಾಗಿಸುವ ಗಾಡಿ ಇತ್ತು, ಅದರಲ್ಲಿ ಪ್ರವಾಸಿಯರ ಸಾಮಾನು ಇಟ್ಟು , ಅದನ್ನು ಎಳೆದು ಅಲ್ಲಿಂದ ಇಲ್ಲಿ ಸಾಗಿಸುತ್ತಿದರು. ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ನಂತರ  ರಾತ್ರಿ ಮನೆಗೆ ಬರುವಾಗ ಹನ್ನೊಂದು ಗಂಟೆ ಆಗುತ್ತಿತ್ತು. ಇಷ್ಟು ಕಷ್ಟಪಟ್ಟು ದುಡಿದರು ಅವರಿಗೆ ಸಿಗುವುದು ಕೇವಲ ೪೦/೫೦ ರೂಪಾಯಿ, ಅದು  ಮನೆಖರ್ಚಿಗೆ ಪೂರ್ಣವಾಗುತ್ತಿರಲಿಲ್ಲ, ದಿನಾ ಅಮ್ಮಿ ಹಾಗು ಅಬ್ಬು ಇವರ ಮಧ್ಯೆ ಈ ವಿಷಯದಲ್ಲಿ ಜಗಳವಾಗುತ್ತಿತ್ತು, ಆದರೆ ಅಬ್ಬು ಪ್ರತಿಕ್ರಿಯುಸುವುದು ಕಡಿಮೆ. ನನ್ನ ಅಬ್ಬು ತುಂಬಾ ಒಳ್ಳೆಯವರು ಅವರಯ್ತು ಅವರ ಕೆಲಸ ಆಯಿತು, ಬೇರೆ ಯಾವುದು ಆಸಕ್ತಿ ಅಲ್ಲದೆ ಯಾವುದೇ ದುರಭ್ಯಾಸವೂ ಅವರಿಗೆ ಇರಲಿಲ್ಲ. ಅಮ್ಮಿ ಪ್ರೀತಿಯ ಸಾಗರ  ಆದರೆ ತಂದೆಯ ಕಷ್ಟ ನೋಡಲಾರದೆ ತಾಳ್ಮೆ ಕಳೆದು ಅವರಿಂದ ಜಗಳ ಮಾಡುತ್ತಿದ್ದಳು. ಒಂದು ದಿನ ಶಾಲೆಯಲ್ಲಿ ಪಿಕ್ನಿಕ್ ಹೋಗಲಿದೆ ಹಾಗು ಎಲ್ಲ ಮಕ್ಕಳಿಗೆ ೧೦೦ ರೂಪಾಯಿ ತಂದು ಜಮಾ ಮಾಡಲ್ಲಿಕ್ಕಿದೆ ಎಂದು ಟೀಚರ್ ಹೇಳಿದರು. ಈ ವಿಷಯ ಈಗ ಅಬ್ಬುಗೆ ಹೇಗೆ ಹೇಳುವುದು ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ನಮಗೆ  ಶಾಲೆಗೆ ಹೋಗಲಿಕ್ಕೆ ಏನು ಖರ್ಚು ಇರಲಿಲ್ಲ, ಆ ಸಮಯದಲ್ಲಿ ನಮಗೆ ಶಾಲೆಯ ಫೀಸ್ ಇರಲಿಲ್ಲ, ನಮ್ಮ ಸರಕಾರಿ ಶಾಲೆ, ಆದುದರಿಂದ  ಈ ಎಲ್ಲ ವಿಷಯಗಳಿಗೆ ಹಣ ಒಟ್ಟು ಮಾಡುವುದು ಸಹಜವಾಗಿತ್ತು. ನಾನು ಆ ದಿನ ಮಲಗದೇ ಅಬ್ಬು ಬರುವ ಸಮಯ ತನಕ ಕಾದು ಕುಳಿತೆ. ರಾತ್ರಿ ಅಬ್ಬು ಬಂದು ಊಟ ಮಾಡಿದ ನಂತರ ನನ್ನಿಂದ "ಏನೋ , ಇನ್ನೂ ಮಲಗಲಿಲ್ಲ , ನಾಳೆ ಶಾಲೆ ಇಲ್ಲವ " ಎಂದು ಕೇಳಿದರು .

ನಾನು "ಇಲ್ಲ ಅಬ್ಬು, ಶಾಲೆ ಇದೆ,ಆದರೆ ನಿಮ್ಮಿಂದ ಒಂದು ವಿಷಯ ಹೇಳಲಿಕ್ಕಿತ್ತು" .

ಅಬ್ಬು " ಏನದು ಹೇಳು".

ನಾನು ಅವರಿಗೆ ಪಿಕ್ನಿಕ್ ವಿಷಯಯೆಲ್ಲ ತಿಳಿಸಿದೆ.

ಅವರು ಒಮ್ಮೆ ನನ್ನ ಮುಖ ನೋಡಿ " ನಾಳೆ  ರಾತ್ರಿ ಬರುವಾಗ  ತರುತ್ತೇನೆ, ಆಗಬಹುದಲ್ಲ?" ಎಂದು ಕೇಳಿದರು.

ನಾನು " ಆಗಬಹುದು ಅಬ್ಬು" ಎಂದು ಹೇಳಿದೆ.

ಮಾರನೆ ದಿನ ಶಾಲೆಯಿಂದ ಹಿಂತಿರುಗಿ ಬಂದು ನಾನು ರಾತ್ರಿ ತನಕ ಅಬ್ಬು ಯಾವಾಗ ಬರುತ್ತಾರೆ ಎಂದು ಕಾದು ಕುಳಿತೆ. ಅಬ್ಬು ಆ ದಿವಸ ತುಂಬಾ ತಡವಾಗಿಯೇ ಮನೆಗೆ ಬಂದರು, ಯಾಕೋ ತುಂಬಾ ಸೋತು ಹೋದಂತೆ ಕಾಣುತ್ತಿದ್ದರು.

ಅವರು ನನ್ನನ್ನು ನೋಡಿ " ಒಹ್ ಕಾದೆ ಕುಳಿತಿರುವೇಯಾ" ಎಂದು ಹೇಳಿ ನಗುತ ಕಿಸೆಯಿಂದ ೧೦೦ ರೂಪಾಯಿ ತೆಗೆದು ನನಗೆ ಕೊಟ್ಟರು. ನನ್ನ ಖುಷಿಗೆ ಮಿತಿಯೇ ಇರಲಿಲ್ಲ, ಆದರೆ ನನ್ನ ತಂದೆ ಪಾಪ ಇದಕ್ಕಾಗಿ ಎಷ್ಟು ಕಷ್ಟಪಟ್ಟಿರಬೇಕು ಎಂದು ಯೋಚಿಸಿ ನನ್ನ ಕಣ್ಣು ತುಂಬಿ ಬಂತು.

ಮಾರನೆ ದಿನ ಶಾಲೆಗೆ ಹೋಗುವಾಗ ಸ್ವಲ್ಪ ತಡವಾಯಿತು, ಕ್ಲಾಸ್ಸಲ್ಲಿ ಯಾರೂ ಇರಲಿಲ್ಲ, ಅವಾಗ ನನಗೆ ಜ್ಞಾಪಕ ಬಂತು "ಅರೆ, ಇವತ್ತು ಕಬಡ್ಡಿ  ಪಂದ್ಯ  ಇದೆ ". ನಾನು ಬೇಗ ಬೇಗ ಗ್ರೌಂಡ್'ಗೆ ಓಡಿದೆ, ಅಲ್ಲಿ ಎಲ್ಲ ಮಕ್ಕಳು ನನ್ನನ್ನು ಕಾಯುತ್ತಿದ್ದರು, ತಡವಾಗಿ ಬಂದುದಕ್ಕೆ ನನ್ನ ಕ್ಯಾಪ್ಟನ್ ನನಗೆ ಬೈದ. ಹೇಗೋ ಕಬಡ್ಡಿ ಪಂದ್ಯ ಶುರುವಾಯಿತು. ಪಂದ್ಯದ ಮಧ್ಯದಲ್ಲಿ ನಮ್ಮಲ್ಲಿ ಆದ ಜಗಳದಲ್ಲಿ ಅಬ್ಬು ಕಷ್ಟಪಟ್ಟು ತಂದು ಕೊಟ್ಟ ೧೦೦ ರೂಪಾಯಿ ನನ್ನ ಕಿಸೆ ಹರಿದಾಗ ಹರಿದು ಚೂರು ಚೂರು ಆಗಿತ್ತು.

ಆದರೆ ಸುಮಾ, ಆ ನೂರು ರೂಪಾಯಿ ವಿಷಯ ಇವನಿಗೆ ತಿಳಿದಿರಲಿಲ್ಲ. ಆದರೆ ಯಾಕೋ ಆ ನಂತರ ನನಗೆ ಇವನ ಮೇಲೆ ತುಂಬಾ ಕೋಪ ನಿರ್ಮಾಣವಾಯಿತು ಹಾಗು ನಾನು ಇವನತ್ರ ಮಾತನಾಡುವುದನ್ನು  ನಿಲ್ಲಿಸಿದೆ, ಇವನು ಎರಡು ಮೂರು ಸಲ ಪ್ರಯತ್ನಿಸಿದ್ದರೂ ನಾನು ಮಾತನಾಡಲಿಲ್ಲ. ಕ್ರಮೇಣ ನನ್ನ ಕೋಪ ಸಹ ಇಳಿಯಿತು, ಆದರೆ ನಂತರ ನಮ್ಮಲ್ಲಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಬಷೀರ್ ಮಾತು ಮುಗಿಸಿದ ನಂತರ ಸುಮಾ ನನ್ನ ಕಡೆ ತಿರುಗಿ ನೋಡಿದಳು, ನನ್ನ ಕಣ್ಣಿಂದ ದಳದಳ ಕಣ್ಣೀರು ಉದುರುತ್ತಿತ್ತು, ಬಷೀರ್ ನನ್ನನ್ನು ನೋಡಿ ನಗುತ್ತಿದ್ದ.

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment