Tuesday, December 18, 2012

ಶೇರು ಮಾರ್ಕೆಟ್

ಮುಂಜಾನೆಯ ೯ ಗಂಟೆಯ ಸಮಯ, ಟೀವಿಯಲ್ಲಿ ಸಿ.ಏನ್.ಬಿ .ಸಿ ಚಾನೆಲಲ್ಲಿ ಶೇರು ಮಾರ್ಕೆಟಿನ ಸುದ್ದಿ ನಡೆಯುತ್ತಿತ್ತು,

ಆಗ ಮೊಬೈಲ್ ಫೋನ್ ರಿಂಗಾಯಿಸಿತು, ನಾನು ಆತುರದಿಂದ "ಹೇಳಿ ಶಾಹ್ ಸಾಬ್ ಏನಾಯಿತು?"

ಶಾಹ್ "ಗುಡ್ ನ್ಯೂಸ್ ಸಾಹೇಬರೇ,ನಿಮಗೆ ೨೦ ಸಾವಿರ ಲಾಭ ಬಂದಿದೆ."

ನಾನು ಸಂತೋಷದಿಂದ  "ತುಂಬಾ ಧನ್ಯವಾದಗಳು ಶಾಹ್ ಸಾಬ್."

ಮೊಬೈಲ್ ಕಟ್ ಮಾಡಿ ನಾನು ಆನಂದದಿಂದ "ಸುಮಾ, ನೋಡಿದಿಯ ನನ್ನ ಕಮಾಲ್, ಏನೂ ಬಂಡವಾಳ ಮಾಡದೆ ನನಗೆ ಇಂದು ೨೦ ಸಾವಿರ ಲಾಭ ಆಯಿತು."

ಸುಮಾ ಅಡುಗೆ ಮನೆಯಿಂದ ಹೊರ ಬಂದು  "ಅದು ಹೇಗೆ ??"

"ನಿನಗೆ ಗೊತ್ತುಂಟಲ್ಲ ನನ್ನ ಮಿತ್ರ ಜೆಥಾನಿ ಹೇಗೆ ಶೇರ್ ಟ್ರೇಡಿಂಗ್ (ವ್ಯಾಪಾರ ) ಮಾಡುತ್ತೇನೆ ಹಾಗು ದಿನ ಎಷ್ಟು ಸಂಪಾದನೆ ಮಾಡುತ್ತಾನೆ ಎಂದು, ನಾನೂ ಇಂದು ಹಾಗೆ ಮಾಡಿದೆ."

"ಹಾಗೆ ಅಂದರೆ ಹೇಗೆ?" ಸುಮಾ ಪುನಃ ಆಶ್ಚರ್ಯದಿಂದ ಕೇಳಿದಳು.

"ಅರೆ,  ಇಂದು ಹೊಸ ಒಂದು ಶೇರ್ ಲಿಸ್ಟಿಂಗ್ ಆಗಿದೆ, ಲಿಸ್ಟ್ ಆದ ದಿನ ಏನಾಗುತ್ತದೆ ಗೊತ್ತ, ಒಮ್ಮೆಲೇ ಅದರ ರೇಟ್ ಏರುತ್ತದೆ, ಅಂದರೆ ೨೦೦ ರೂಪಾಯಿಗೆ ಲಿಸ್ಟ್ ಆದದ್ದು ಒಮ್ಮೆಲೇ ಸಾವಿರ ತನಕ ಆಗುದೂ ಉಂಟೂ, ಆಗ ನಾವು ಆ ಶೇರ್ ಮಾರಬೇಕು ಹಾಗು ಅದರ ರೇಟ್ ಕಮ್ಮಿ ಆದ ಕೂಡಲೇ ಪುನಃ ಆ ಶೇರ್ ಖರೀದಿ ಮಾಡಬೇಕು, ನಾನು ಇಂದು ಹೀಗೆಯೇ ಮಾಡಿದೆ."

"ಆದರೆ ಇಂದು ಲಿಸ್ಟ್ ಆದದ್ದು ಶೇರ್ ನಿಮ್ಮ ಡಿಮೇಟ್ ಅಕೌಂಟ್'ಲ್ಲಿ (ಶೇರ್ ಇಡುವ ಖಾತೆ) ಹೇಗೆ ಬಂತು?" ಎಂದು ಆಶ್ಚರ್ಯದಿಂದ ಕೇಳಿದ್ದಳು.

"ಇಂಟ್ರ ಡೇ ಶೇರ್ ಟ್ರೇಡಿಂಗ್ ಮಾಡಲು ನಮ್ಮ ಡಿಮೇಟ್ ಅಕೌಂಟ್'ಲ್ಲಿ ಶೇರ್ ಇರುವ ಅಗತ್ಯ ಇಲ್ಲ, ನೀನು ಇರದೇ ಖರೀದಿ ಹಾಗು ಮಾರ ಬಹುದು, ಆದರೆ ಅದೇ ದಿವಸ ಶೇರ್ ಮಾರ್ಕೆಟ್ ಮುಚ್ಚುವ ಮುಂಚೆ ನೀನು ಮಾರಿದ ಶೇರ್ ಪುನಃ ಖರೀದಿ ಮಾಡಬೇಕು.

ನಾನಿಂದು ಹೀಗೆಯೇ ಮಾಡಿದ್ದು,  ಲಿಸ್ಟ್ ಆದ ೧೦೦೦ ಶೇರ್ ರೂಪಾಯಿ ೬೦೦ ಇರುವಾಗ ಮಾರಿದೆ ಹಾಗು ರೂಪಾಯಿ ೫೮೦ ಇರುವಾಗ ಪುನಃ ಖರೀದಿ ಮಾಡಿದೆ, ಸಿಕ್ಕಿತ್ತಲ್ಲ ೨೦ ಸಾವಿರ ಲಾಭ"ಎಂದು ಜಂಬ ಕೊಚ್ಚಿಕೊಂಡೆ.

ಇದನ್ನು ಕೇಳಿ ಸುಮಾ " ಹಾಗಾದರೆ ಇವತ್ತು ೨೦ ಸಾವಿರ ಲಾಭ ಆಯಿತಲ್ಲ, ಇನ್ನು ಏನು ಬೇರೆ ಶೇರ್ ಟ್ರೇಡಿಂಗ್ ಮಾಡಲು ಹೋಗ ಬೇಡಿ, ಆಸೆಗೆ ಒಳಗಾಗಬೇಡಿ" ಎಂದು ಹೇಳಿದಳು .

ನಾನು "ಓಕೆ ಡಾರ್ಲಿಂಗ್, ಈಗ ನಾನು ಕೆಲಸಕ್ಕೆ ಹೊರಡುತ್ತೇನೆ, ಇವತ್ತು ಲೇಟ್ ಆಯಿತು" ಎಂದು ಖುಷಿಯಲ್ಲಿ ಹೇಳಿ ಮನೆಯಿಂದ ಹೊರಡಿದೆ .

೨೦ ಸಾವಿರ ಲಾಭ ಸಿಕ್ಕಿದ ಖುಷಿಯಲ್ಲಿ ಆ ದಿವಸ ನಾನು ಟ್ಯಾಕ್ಸಿಯಲ್ಲಿ ಆಫೀಸ್ ಬಂದೆ.

ಆಫೀಸ್ ಬಂದ ಕೂಡಲೇ ಮೊಬೈಲ್ ರಿಂಗಾಯಿಸಿತು, ಶಾಹ್ ಇದ್ದ "ಸಾಹೇಬರೇ , ಈಗ ಆ ಶೇರ್ ದರ  ೧೧೦೦ ನಡೆಯುತ್ತಿದೆ,  ಏನ್ ಮಾಡ್ಲಿಕ್ಕಿದೆ, ಇಂದು ನಿಮ್ಮ ದಿನ ಒಳ್ಳೆಯದಿದೆ " ಎಂದು ಕೇಳಿದ .

ನನ್ನ ಕಣ್ಣು ಅಗಲವಾಯಿತು, ಆಸೆ ತಲೆ ಏರಿತು, ಯೋಚಿಸ ತೊಡಗಿದೆ ಇಂದು ನನ್ನ ಅದೃಷ್ಟದ ದಿನ, ಇನ್ನೂ ಹೆಚ್ಚು ಲಾಭ ಪಡೆಯ ಬೇಕು ಎಂದು ಆತುರದಿಂದ   "ಶಾಹ್ ಸಾಬ್ ೫೦೦೦ ಶೇರ್ ಮಾರಿ ಬಿಡಿ " ಎಂದು ಹೇಳಿದೆ.

ಶಾಹ್ "ಎಷ್ಟು ?"

"೫೦೦೦"

ಶಾಹ್ " ಯೋಚಿಸಿ "

"ಇಲ್ಲ ಇಲ್ಲ ನೀವು ಮಾರಿ ಬಿಡಿ, ಆದದ್ದು ಆಗುತ್ತದೆ " ಎಂದು ಗತ್ತಿನಿಂದ ಹೇಳಿದೆ.

ಶಾಹ್ " ಓಕೆ , ೫೦೦೦ ಶೇರ್ ನಿಮ್ಮ ಸೇಲ್ ಆಯಿತು " ಎಂದು ಹೇಳಿ ಮೊಬೈಲ್ ಕಟ್ ಮಾಡಿದ .

ಸ್ವಲ್ಪ ಹೊತ್ತು ನಂತರ ಶಾಹ್ ಪುನಃ ಫೋನ್ ಮಾಡಿದ , ಅವನ ಸ್ವರದಲ್ಲಿ ವ್ಯಥೆ ಇತ್ತು "ಸಾಹೇಬರೇ ಶೇರ್ ದರ ಇನ್ನು ಏರಿದೆ ೧೨೫೦ ನಡೆಯುತ ಇದೆ , ನೀವು ಏಳೂವರೆ ಲಕ್ಷ ಲುಕ್ಸಾನಲ್ಲಿ ಇದ್ದೀರಿ ,ಏನ್ ಮಾಡುವುದು ಈಗ ಬೇಗ ಹೇಳಿ".

ನನ್ನ ಹೃದಯ ಒಮ್ಮೆ ನಿಂತು ಹೋಯಿತು , ಆದರೂ ತನ್ನನ್ನು ಸಾವರಿಸಿ " ಈಗ ಏನು ಮಾಡ ಬೇಡಿ,ಇನ್ನು ಶೇರ್ ಮಾರ್ಕೆಟ್ ಮುಚ್ಚುವ ಟೈಮ್ ಆಗಲಿಲ್ಲ , ಕಡಿಮೆ ಆಗಬಹುದು " ಎಂದು ಹೇಳಿದೆ.

ಶಾಹ್ ಫೋನ್ ಇಟ್ಟ ನಂತರ ನನ್ನ ತಲೆ ತಿರುಗಲು ಶುರು ಆಯಿತು,  ಈಗ ಏನು ಮಾಡುವುದು ಎಂದು.

ಆಗ ಶಾಹ್ ಪುನಃ ಫೋನ್ ಮಾಡಿದ " ೧೧೫೦ ಆಗಿದೆ , ಎರಡುವರೆ ಲಕ್ಷ  ಲುಕ್ಸಾನಲ್ಲಿ ಇದ್ದೀರಿ , ಏನ್ ಮಾಡ ಬೇಕು "

"ಇಲ್ಲ ಇಲ್ಲ ನಿಲ್ಲಿ , ನಾನು ಹೇಳುತ್ತೇನೆ " ಎಂದು ಚಿಂತೆಯಲ್ಲಿ ಹೇಳಿದೆ .

ಈಗ ಏನು ಮಾಡುವುದು ಎಲ್ಲಿಂದ ಲುಕ್ಸಾನ ಪೂರ್ಣ ಮಾಡುವುದು, ಬೆಳ್ಳಿಗೆ ಬಂದ ಲಾಭವೂ ಹೋಯಿತು, ಪುನಃ ತಲೆ ತಿರುಗಲು ಶುರು ಆಯಿತು. ಆಗ ಪುನಃ ಶಾಹ್ ಫೋನ್ ಮಾಡಿದ "ಸಾಹೇಬರೇ ೧೨೨೫, ಏನು ಮಾಡಬೇಕು, ಬೇಗ ಹೇಳಿ ಮಾರ್ಕೆಟ್ ಕ್ಲೋಸ್ ಆಗಲು ೧೫ ನಿಮಿಷ ಇರುವುದು "

"ಇಲ್ಲ ಶಾಹ್ ಸಾಹೇಬ್ ಕಡಿಮೆ ಆಗ ಬಹುದು, ನಾನು ಹೇಳುತ್ತೇನೆ " ಎಂದು ಹೇಳಿ ಫೋನ್ ಇಟ್ಟೆ.

ಆಗ ಜಥಾನಿಯ ಫೋನ್ ಬಂತು " ಏನು ಮಿತ್ರ , ಇದೇನು ನೀನು ಮಾಡಿದೆ, ಶಾಹ್ ನನಗೆ ಹೇಳಿದ , ಇದು ನಿನ್ನ ಕೆಲಸ ಅಲ್ಲ, ಯಾಕೆ ಹೀಗೆ ಮಾಡಿದೆ, ಬೇಗ ಖರೀದಿ ಮಾಡು ಆ ಶೇರ್, ಇಲ್ಲದ್ರೆ ಇನ್ನು ಹೆಚ್ಚು ಲುಕ್ಸಾನ ಆಗಬಹುದು "

ನಾನು " ಜಥಾನಿ ಸಾಹಬ್, ನಾನು ನಿಮಗೆ ಫೋನ್ ಮಾಡುತ್ತೇನೆ " ಎಂದು ಹೇಳಿ ಫೋನ್ ಇಟ್ಟೆ.

ನನಗೆ ಜ್ವರ ಏರಿತು, ಏನು ಮಾಡುವುದು, ಶಾಹ್ ಫೋನ್ ಪುನಃ ಬಂತು " ಸಾಹೇಬರೇ , ೧೨೧೫, ಐದು  ಲಕ್ಷ ೭೫ ಸಾವಿರ ಲುಕ್ಸಾನಲ್ಲಿ ಇದ್ದೀರಿ, ಟೈಮ್ ಮುಗಿಯುತ ಬಂತು ಈಗ ಖರೀದಿ ಮಾಡ ಬೇಕಾಗುತ್ತದೆ, ಇಲ್ಲದ್ರೆ ಸ್ಕ್ವೇರ್ ಅಪ್ ಆಗುತ್ತದೆ, ಆಗ ಇನ್ನು ಹೆಚ್ಚು ಲುಕ್ಸಾನ ಆಗುತ್ತದೆ, ಖರೀದಿ ಮಾಡುತ್ತೇನೆ ".

ನಾನು ಸತ್ತ ಸ್ವರದಲ್ಲಿ " ಮಾಡಿ ... ಮಾಡಿ  ಶಾಹ್ ಸಾಹಬ್ " ಎಂದು ಹೇಳಿ ಕುರ್ಚಿಯಲ್ಲಿ ಕುಸಿದು ಬಿದ್ದೆ .

ಅಂದು ಊಟ ಸಹ ಮಾಡಲಿಲ್ಲ, ಟಿಫನ್ ತಂದದ್ದು ಹಾಗೆಯೇ ಇತ್ತು, ಈಗ ಏನು ಮಾಡುವುದು, ಎಲ್ಲಿಂದ ಹಣ ತರುವುದು, ಕಣ್ಣಿನಿಂದ ಕಣ್ಣೀರು ಹರಿಯಲಾರಂಭಿಸಿತು.

ಅರ್ಧ ಗಂಟೆಯ ನಂತರ ಶಾಹ್ ಸಾಹೇಬರ ಫೋನ್ ಬಂತು " ಸಾಹೇಬರೇ , ನಿಮ್ಮ ಶೇರ್ ೧೨೨೦  ಕ್ಕೆ ಖರೀದಿ ಆಯಿತು, ನಿಮ್ಮ ಲುಕ್ಸಾನ ಆರು ಲಕ್ಷ, ೨೦ ಸಾವಿರ ಲಾಭ ಕಟ್ ಮಾಡಿ ಚಾರ್ಜ್ ಎಲ್ಲ ಸೇರಿ ಐದು  ಲಕ್ಷ,  ೮೭ ಸಾವಿರ ನಾಳೆ ತನಕ ಕಳಿಸಿ ಕೊಡಿ ನನಗೆ".

ನಾನು "ಓಕೆ " ಎಂದು ಹೇಳಿ ಫೋನ್ ಇಟ್ಟೆ.

ಏನೂ ತೋಚುತ್ತಿರಲಿಲ್ಲ, ಏನು ಮಾಡಬೇಕೆಂದು, ಹಣದ ವ್ಯವಸ್ಥೆ ಹೇಗೆ ಮಾಡಬೇಕೆಂದು , ಸುಮಾಳಿಗೆ ಹೇಗೆ ಹೇಳಲಿ? ಅವಳ ಅವಸ್ಥೆ ಏನಾಗಬಹುದು? ಪಾಪ ಮುಂಜಾನೆ ಎಷ್ಟು ಖುಷಿಯಲ್ಲಿದ್ದಳು, ಈಗ ಹೇಗೆ ಹೇಳುವುದು, ತಲೆ ನೋವು ಶುರು ಆಯಿತು.

ಸ್ವಲ್ಪ ಸಮಯ ನಂತರ ಜಥಾನಿಯ ಫೋನ್ ಬಂತು "ಮಿತ್ರ ಏನು ಮಾಡಿದೆ ನೀನು, ನಾವು ವ್ಯಾಪಾರೀ ನಮಗೆ ಲಾಭ ಲುಕ್ಸಾನು ಎಲ್ಲ ತಿಳಿದಿದೆ, ನೀನು ಯಾಕೆ ಇದರಲ್ಲಿ ಕೈ ಹಾಕಿದೆ, ನಿನ್ನ ಚಿಕ್ಕ ಪುಟ್ಟ ಶೇರ್ ಡೀಲಿಂಗ್ ಒಳ್ಳೆಯದಿತ್ತಲ್ಲವೇ".

ನನ್ನ ಮೌನ ಕಂಡು ಅವನು ಕೇಳಿದ "ಮಿತ್ರ ಹಣ ಇದೆಯಲ್ಲ ನಿನ್ನ ಹತ್ತಿರ ಶಾಹ್ ನಿಗೆ ಕೊಡಲು, ಅವನಿಗೆ ಹೇಗಾದರೂ ಕೊಡಲೇ ಬೇಕು, ಅವನು ಈ ವ್ಯಾಪಾರದಲ್ಲಿ ತುಂಬಾ ಸ್ಟ್ರಿಕ್ಟ್, ಕೊಡದಿದ್ದರೆ ಗುಂಡಾನವರಿಗೆ ಕಳಿಸುತ್ತಾನೆ ".

ನನಗೆ ಅವನಿಗೆ ಏನು ಹೇಳ ಬೇಕೆಂದು ತಿಳಿಯಲಿಲ್ಲ, ಫೋನ್ ಇಟ್ಟೆ ಹಾಗು ಮೊಬೈಲ್ ಸ್ವಿಚ್ ಆಫ್ ಮಾಡಿದೆ  .

ಒಂದೇ ಕ್ಷಣದಲ್ಲಿ ಎಲ್ಲವನ್ನು ಕಳೆದೆ ಕೊಂಡೆ  ಅಲ್ಲವೇ, ಈಗ ನನ್ನ ಹಾಗು ನನ್ನ ಪರಿವಾರದ ಗತಿ ಏನು, ಯಾಕೆ ಹೀಗೆ ಮಾಡಿದೆ, ಅಯ್ಯೋ!  ಜೋರು ಜೋರಿನಿಂದ ಅಳಲು ಶುರು ಮಾಡಿದೆ, ಆದರೆ ಅಲ್ಲಿ ನನ್ನನ್ನು ಸಾವರಿಸುವವರು ಯಾರೂ ಇರಲಿಲ್ಲ .

ಸಂಜೆ ಹೇಗೋ ಮನೆಗೆ ಬಂದೆ, ಬಂದ  ಕೂಡಲೇ ಸುಮಾ "ನಿಮ್ಮ ಮೊಬೈಲ್ ಯಾಕೆ ಸ್ವಿಚ್ನ್ನ ಆಫ್ ಇದೆ, ನಾನೆಷ್ಟು ಫೋನ್ ಮಾಡಿದೆ ಗೊತ್ತ " ಎಂದು ಕೋಪದಿಂದ ಕೇಳಿದಳು, ನಂತರ ನನ್ನ  ಪೆಚ್ಚಾದ ಮುಖ ಕಂಡು ಸುಮಾಳಿಗೆ ಏನೋ ಆಗಿದೆ ಎಂದು ತಿಳಿಯಿತು.

"ಏನಾಯಿತು ನಿಮಗೆ ???" ಎಂದು ಚಿಂತೆಯಿಂದ ಕೇಳಿದಳು .

"ಸುಮಾ ....,ಸುಮಾ " ಅಳು ಬಂದು ಬಾಯಿಯಿಂದ ಶಬ್ದ ಹೊರಡಲಿಲ್ಲ .

" ಏನ್ರೀ ಏನಾಯಿತು, ಬೇಗ ಹೇಳಿ?"

ನಾನು ಜೋರಾಗಿ ಅತ್ತೆ  " ಸುಮಾ, ನಮ್ಮ ಎಲ್ಲವೂ ಹೋಯಿತು".

" ಏನು ಏನಾಯಿತು , ಹೇಳಿ ?", ನಾನು ಅಳುತ ಅಳುತ ಎಲ್ಲ ವಿಷಯ ಅವಳಿಗೆ ಹೇಳಿದೆ.

ಅವಳು ಮೌನವಾದಳು.

"ಈಗ ಏನು ಮಾಡುವುದು ಸುಮಾ ,ಅವನಿಗೆ ನಾಳೆ ತನಕ ಹಣ ಕೊಡಲಿಕ್ಕೆ ಇದೆ ".

ಸುಮಾಳ ಕಣ್ಣಿನಿಂದ ಕಣ್ಣೀರು ಹೊರ ಬಂತು "ಮಾಡುವ ಮುಂಚೆ ಯೋಚಿಸಲಿಲ್ಲವೇ, ಈಗ ನನ್ನಿಂದ ಏನು ಕೇಳುವುದು , ಅತಿ ಆಸೆಗೆ ಹೋಗಿ ನೋಡಿದ್ದೀರಾ ಏನಾಯಿತೆಂದು".

ಅವಳು ಎದ್ದು ಒಳ ಕೋಣೆಗೆ ಹೋದಳು. 

ನಾನು ಹಾಗೆಯೇ ಕೂತು ಕೊಂಡೆ, ಕತ್ತಲಾಗುತ ಬಂತು, ಆದರೆ ನಾನಾಗಲಿ, ಸುಮಾ ಆಗಲಿ ಲೈಟ್  ಆನ್ ಮಾಡಲು ಹೋಗಲಿಲ್ಲ .

ಆಗ ಯಾರೋ ಬೆಲ್ ಬಾರಿಸಿದ್ದರು, ನಾನು ಎದ್ದು ಲೈಟ್ ಆನ್ ಮಾಡಿ ಬಾಗಿಲು ತೆರೆದೇ, ಜಥಾನಿ ಬಂದಿದ್ದ.

"ಏನು ಆಯ್ತಾ ಹಣದ ವ್ಯವಸ್ಥೆ , ಏನು ಮಾಡುವೆ ಈಗ ?"

ನಾನು ಮೆಲ್ಲನೆ " ನಾಳೆ ತನಕ ನೋಡುವ."

"ವ್ಯವಸ್ಥೆ ಮಾಡು ಮಹರಾಯ, ಇಲ್ಲಾದರೆ ಶಾಹ್ ಹೀಗೆಯೇ ಬಿಡೋಲ್ಲ" ಎಂದು ಹೆದರಿಸಿದ.

ನಾನು " ನಾಳೆ ಕೊಡುತ್ತೇನೆ " ಎಂದು ಹೇಳಿದೆ, ಸ್ವಲ್ಪ ಹೊತ್ತು ಹೀಗೆಯೇ ನನ್ನನ್ನು ಹೆದರಿಸಿ ಜಥಾನಿ ಹೋದ.

ಮಗ ಆಟ ಆಡಿ ಬಂದ, ನನ್ನನ್ನು ಮೌನ ಕಂಡು ಒಳಗೆ ಹೋದ. ಒಳಗೆ ಮೌನ ಕೂತು ಕೊಂಡ ಸುಮಾಳಿಗೆ ಅವನ ದಿನಚರ್ಯ ಹೇಳ ತೊಡಗಿದ, ಅವಳು ಕೇವಲ "ಹ... ಹೂ" ಎಂದು ಹೇಳುತ್ತಿದ್ದಳು.

ರಾತ್ರಿ ಎಂಟು ಗಂಟೆ ಆಯಿತು, ನಾನು ಅಲ್ಲಿಯೇ ಕೂತು ಕೊಂಡಿದೆ, ಆಗ ಸುಮಾ ಹೊರಗೆ ಬಂದಳು, ಅವಳ ಕೈಯಲ್ಲಿ ಏನೋ ಇತ್ತು, ಅದನ್ನು ನನ್ನ ಕೈಗೆ ಕೊಟ್ಟು "ಇದು ನನ್ನ ಚಿನ್ನದ ಒಡವೆ, ಇದನ್ನು ಅಡವು ಇಟ್ಟು ಶಾಹನ ಹಣ ಕೊಟ್ಟು ಬಿಡಿ, ದಯಾ ಮಾಡಿ ಪುನಃ ಹೀಗೆ ಮಾಡಬೇಡಿ " ಎಂದು ಹೇಳಿ ಕಣ್ಣೀರು ಒರೆಸುತ ಪುನಃ ಒಳಗೆ ಹೋದಳು.

ಕೈಯಲ್ಲಿ ಆಭರಣದ ಪೆಟ್ಟಿಗೆ ಹಿಡಿದು ನಾನು ಪುನಃ ಅಳಲು ಶುರು ಮಾಡಿದೆ.

by ಹರೀಶ್ ಶೆಟ್ಟಿ, ಶಿರ್ವ  


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...