Saturday, March 14, 2020

ವೃದ್ಧಾಶ್ರಮ ೨೪

ದಿರೇಶ ಅಮ್ಮನಿಗೆ ಸಿಕ್ಕಿದ ಹಣದ ಪಾಲಿಗಾಗಿ ರಮೇಶನ ಹಿಂದೆ ಬಿದ್ದಿದ್ದ, ರಮೇಶ ಅವನಿಗೆ ನೇಮ ಪೂಜೆ ಆಗುವ ತನಕ ಸ್ವಲ್ಪ ತಾಳ್ಮೆ ಇಡಲು ಹೇಳಿದ.

ಮನೆಯಲ್ಲಿ ನೇಮ ಪೂಜೆ ಮುಗಿದ ನಂತರ ಕ್ರಮೇಣ ಪರಿವಾರದ ಹೆಚ್ಚಿನಂಶ ಜನ ಹಿಂತಿರುಗಿದರು. 

ಮೋನು ಅಮ್ಮನಿಂದ ಒಂದೂವರೆ ಲಕ್ಷ ತೆಗೊಂಡ ವಿಷಯ ರಮೇಶನಿಗೆ ಈಗಲೂ ಪೀಡಿಸುತ್ತಿತ್ತು, ಅವನಿಂದ ಕೇಳಿಯೇ ಬಿಡೋಣಯೆಂದು ರಮೇಶ ಮೋನುನಿಗೆ ಕರೆದು "ಮೋನು ನೀನು ಅಮ್ಮನಿಂದ ಹಣ ತೆಗೊಂಡಿದ್ದೀಯ"? ಎಂದು ಕೇಳಿದ

ಮೋನು "ಹೌದು".

ರಮೇಶ "ನಿನಗೆ ತಿಳಿದಿದೆಯಲ್ಲ ಅವರಿಗೆ ಸೌಖ್ಯವಿಲ್ಲ ಅಂತ, ಅವರಿಂದ ಹಣ ತೆಗೊಂಡದ್ದು ಸರಿಯ"?

ಮೋನು "ಸರಿ ತಪ್ಪು ನನಗೆ ತಿಳಿದಿಲ್ಲ, ಅವರತ್ತಿರ ಹಣ ಇತ್ತು,  ನನಗೆ ಅರ್ಜೆಂಟ್ ಹಣ ಬೇಕಿತ್ತು, ನಾನು ತೆಗೊಂಡೆ".

ರಮೇಶ "ಆದರೆ ನೀನೊಂದು ಸಲ ನನ್ನತ್ರ ಕೇಳಬೇಕಿತ್ತೇ".  

ಮೋನು "ಇದರಲ್ಲಿ ನಿಮ್ಮತ್ತಿರ ಏನು ಕೇಳುವುದು, ನಾನು ನನ್ನ ದೊಡ್ಡಮ್ಮನಿಂದ ಅವರ  ಹಣ ತೆಗೊಂಡದ್ದು, ನಿಮ್ಮಿಂದ ನಿಮ್ಮ ಹಣ ತೆಗೊಂಡದ್ದು ಅಲ್ಲ, ಮತ್ತೆ ಹೇಗೆ ತೆಗೊಂಡಿದ್ದೆನೋ ಹಾಗೆಯೇ ಅವರಿಗೆ  ವಾಪಾಸ್ ಕೊಡುವೆ" ಎಂದು ಕೋಪದಿಂದ ಉತ್ತರಿಸಿ ಅಲ್ಲಿಂದ ಹೊರಟುಹೋದ.

ಇದಕ್ಕೆ ರಮೇಶ ಏನು ಉತ್ತರಿಸಲಿಲ್ಲ, ಮೋನುನ ಕುಪಿತ ಸ್ವಭಾವ ಅರಿತ  ರಮೇಶ  ಇನ್ನು ಇವನಿಗೆ ಏನು ಕೇಳಿ ಪ್ರಯೋಜನವಿಲ್ಲವೆಂದು ತಿಳಿದು ಮೌನ ಧರಿಸಿದ, ಅಲ್ಲೇ ಇದ್ದ ಉಷಾ ಚಿಕ್ಕಮ್ಮ "ಅವನು ಹಿಂತಿರುಗಿ ಕೊಡುತ್ತಾನೆ ರಮೇಶ, ನೀನು ಚಿಂತಿಸ ಬೇಡ"ಎಂದು ಹೇಳಿದರು.   

ರಮೇಶ ಅವರನ್ನು ನೋಡಿ ನಿಟ್ಟುಸಿರು ಎಳೆದ, ಅವನಿಗೆ ಮೋನು ಸೌಖ್ಯವಿಲ್ಲದ ಅಮ್ಮನಿಂದ ಹಣ ತೆಗೊಂಡದ್ದು ಸರಿ ಅನಿಸಲಿಲ್ಲ, ಆದರೆ ಮಾತನ್ನು ಬೆಳೆಸಿ ಏನು ಪ್ರಯೋಜನ ಎಂದು ಸುಮ್ಮನಾಗಿದ್ದ. 

ರಮೇಶನಿಗೆ ಹಣ ಅಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತು ಸುಳ್ಳಲ್ಲ ಎಂದು ಅನಿಸಿತು, ಈ ಜಗತ್ತಿನಲ್ಲಿ ಎಲ್ಲದರಲ್ಲೂ ಪ್ರಕೃತಿಯ ಸಮತೋಲನವಿದೆ, ರಾತ್ರಿಯ ನಂತರ ಹಗಲು, ಬೇಸಿಗೆಯ ನಂತರ ಶೀತ, ಸೂರ್ಯನ ನೆರಳು, ಮರದ ಸಸ್ಯಗಳು, ನದಿ ಕೊಳಗಳು, ಪ್ರಾಣಿ,  ಪರ್ವತಗಳು, ಎಲ್ಲದರಲ್ಲೂ ಪ್ರಕೃತಿ ತನ್ನ ಸಮತೋಲನವನ್ನು ಉಳಿಸಿಕೊಳ್ಳುತ್ತದೆ, ಆದರೆ  ಮನುಷ್ಯ ಮಾತ್ರ ಎಲ್ಲವನ್ನೂ ಹಣದ ಆಧಾರದ ಮೇಲೆ ಪಡೆಯಲು ಬಯಸುತ್ತಾನೆ, ಅದನ್ನು ಹೇಗೆ ಪಡೆಯಬೇಕು, ಎಲ್ಲಿಂದ ಪಡೆಯಬೇಕು, ಯಾರಿಂದ ಪಡೆಯಬೇಕು ಎಂಬ ಗೋಚರ ಅವನಿಗೆ ಇರುವುದಿಲ್ಲ, ಒಟ್ಟಾರೆ ಅವನ ಕೆಲಸ ಆಗಬೇಕು, ಆದರೆ  ಹಣದಿಂದ ನಾವು ನಮಗೆ ಬೇಕಾದುದನ್ನೆಲ್ಲ ಖರೀದಿಸಬಹುದು, ಆದರೆ ಈ ಹಣದಿಂದ ನಾವು ಎಂದಿಗೂ ಮನಸ್ಸಿನ ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಮಾತು ಸಹ ಸತ್ಯವೆಂದು ಮರೆಯಬಾರದು.  

ಮಾರನೇ ದಿನ ಬೆಳಿಗ್ಗೆ ದಿರೇಶನಿಗೆ ಅವನ ಪಾಲಿನ ಹಣ ತೆಗೆಯಲು ರಮೇಶ ಮತ್ತು ದಿರೇಶ ಅಮ್ಮನ ಬ್ಯಾಂಕ್ ಪಾಸ್ ಬುಕ್ ಹಾಗು ಚೆಕ್ಕು ಬುಕ್ ತೆಗೆದು  ಚೇಕಲ್ಲಿ ಅಮ್ಮನಿಗೆ ಸಹಿ ಮಾಡಲು ಆಗದ ಕಾರಣ ಅಮ್ಮನ ಹೆಬ್ಬೆಟ್ಟು ಹಾಕಿಸಿ ಬ್ಯಾಂಕಿಂಗೆ ಹೋದರು ಆದರೆ ಅಲ್ಲಿ ಅಕೌಂಟಲ್ಲಿ ಅವರ ಸಹಿ ಇದ್ದ ಕಾರಣ ಬ್ಯಾಂಕಲ್ಲಿ ಆ ಚೆಕ್ಕು ಸ್ವೀಕರಿಸಲು ಅವರು ನಿರಾಕರಿಸಿದರು, ಅವರಿಂದ ಸಹಿ ಮಾಡಲು ಸಾಧ್ಯವಿಲ್ಲ ಅದಕ್ಕೆ ಹೆಬ್ಬೆಟ್ಟು ತೆಗೊಂಡದ್ದು ಎಂದು ರಮೇಶ ಮತ್ತು ದಿರೇಶ ಎಷ್ಟು ಹೇಳಿದರೂ ಅವರು ಕೇಳಲಿಲ್ಲ, ಕೊನೆಗೆ ಅಮ್ಮ ಬ್ಯಾಂಕಿಗೆ ಬಂದು ಅವರ ಎದುರು ಹೆಬ್ಬೆಟ್ಟು ಹಾಕಿದರೆ ಸ್ವೀಕರಿಸುತ್ತೇವೆ ಮತ್ತು ಡಾಕ್ಟರ್ ರಿಪೋರ್ಟ್ ಕಾಪಿ ಸಹ ಕೊಡ ಬೇಕೆಂದು  ಹೇಳಿದರು.  

ಬ್ಯಾಂಕಿಂದ ಹೊರಗೆ ಬಂದು ರಮೇಶ ದಿರೇಶನನ್ನು ಮನೆಗೆ ಹೋಗಿ ಅಮ್ಮನನ್ನು ರಿಕ್ಷಾದಲ್ಲಿ ಕರೆದುಕೊಂಡು ಬರಲು ಹಾಗು ಡಾಕ್ಟರ್ ರಿಪೋರ್ಟ್ ಸಹ ತರಲು ಹೇಳಿದ, ಸ್ವಲ್ಪ ಹೊತ್ತು ನಂತರ ದಿರೇಶ ಅಮ್ಮನನ್ನು ರಿಕ್ಷಾದಲ್ಲಿ ಬ್ಯಾಂಕಿಂಗೆ ಕರೆದು ಕೊಂಡು ಬಂದ, ಆದರೆ ಬ್ಯಾಂಕ್ ಮೆಟ್ಟಿಲು ಹತ್ತಲು ಅಮ್ಮನಿಂದ ಸಾಧ್ಯವಾಗದ ಕಾರಣ ರಮೇಶ ಬ್ಯಾಂಕ್  ಮ್ಯಾನೇಜರಿಗೆ ವಿನಂತಿ ಮಾಡಿ ಬ್ಯಾಂಕ್ ಆಫೀಸರ್ ಜೊತೆ ಹೊರಗೆ ರಿಕ್ಷಾದಲ್ಲಿಗೆ ಬಂದು ಅವರ ಹೆಬ್ಬೆಟ್ಟು ತೆಗೊಂಡರು ಹಾಗು ಡಾಕ್ಟರ್ ರಿಪೋರ್ಟ್ ಕಾಪಿ ಮಾಡಿ ತರಲು ಹೇಳಿದರು, ದಿರೇಶ ಜೆರಾಕ್ಸ್ ಅಂಗಡಿ ಹೋಗಿ ಡಾಕ್ಟರ್ ರಿಪೋರ್ಟ್ ಕಾಪಿ  ತಂದು ಕೊಟ್ಟ ನಂತರ ಅವರಿಗೆ ಹಣ ಸಿಕ್ಕಿತು.  

ಹಣ ಸಿಕ್ಕಿದ ನಂತರ ರಮೇಶ ಮ್ಯಾನೇಜರ್ ಕ್ಯಾಬಿನಿಗೆ ಹೋಗಿ ಅವರಿಗೆ ಧನ್ಯವಾದ ಸಲ್ಲಿಸಿದ, ಅಮ್ಮನ ಕಷ್ಟ ಅರಿತ ಮ್ಯಾನೇಜರ್ ಇನ್ನು ಮುಂದೆ ಸಹ ನಿಮಗೆ ಬ್ಯಾಂಕ್ ವ್ಯವಹಾರ ಮಾಡಲು ಅಮ್ಮನಿಗೆ ಕರೆದುಕೊಂಡು ಬರುವುದುದಕ್ಕೆ ಕಷ್ಟ ಆಗಬಹುದು ಅದಕ್ಕೆ ಮುಂದೆ ವ್ಯವಹಾರ ಮಾಡಲು ಈ ಖಾತೆಯಲ್ಲಿ ನೀವು ನಿಮ್ಮ ಹೆಸರು ನೋಂದಿಸಿಕೊಳ್ಳಿ ಹಾಗು ನಿಮ್ಮ ಡಾಕ್ಯುಮೆಂಟ್ಸ್ ಕೊಡಿ ಎಂದು ಒಂದು ಫಾರಂ ತೆಗೆದು ಕೊಟ್ಟರು, ರಮೇಶ ಅದಕ್ಕೆ ಒಪ್ಪಿಗೆ ನೀಡಿ ಫಾರಂ ತುಂಬಿಸಿ ಅದರಲ್ಲಿ ತನ್ನ ಫೋಟೋ ಅಂಟಿಸಿ  ಸಹಿ ಮಾಡಿ ಕೊಟ್ಟ, ಬ್ಯಾಂಕ್ ಮ್ಯಾನೇಜರ್ ಆಫೀಸರನ್ನು ಕರೆದು ಆ ಫಾರಂ ಕೊಟ್ಟು ಅದರಲ್ಲಿ  ಅಮ್ಮನ ಹೆಬ್ಬೆಟ್ಟು ಹಾಕಿ ತರಲು ಹೇಳಿದರು, ಆಫೀಸರ್ ದಿರೇಶನೊಟ್ಟಿಗೆ ರಿಕ್ಷಾದಲ್ಲಿದ್ದ ಅಮ್ಮನಲ್ಲಿಗೆ ಹೋಗಿ ಹೆಬ್ಬೆಟ್ಟು ಹಾಕಿ ತಂದರು, ರಮೇಶ ದಿರೇಶನಿಗೆ ಅವನ ಪಾನ್ ಕಾರ್ಡ ಕಾಪಿ ತರಲು ಹೇಳಿದ, ಎಲ್ಲ ಕಾರ್ಯ ವಿಧಾನ ಮುಗಿದ ನಂತರ ಅವರು ಇನ್ನೊಂದು ಸಲ ಮ್ಯಾನೇಜರಿಗೆ  ಧನ್ಯವಾದ ಸಲ್ಲಿಸಿ ಅಲ್ಲಿಂದ ತೆರಳಿದರು. 

ಹಿಂತಿರುಗಿ ಮನೆಗೆ ಬಂದು ತೆಗೆದ ಹಣದಿಂದ  ರಮೇಶ ಅದರಿಂದ ೭೫ ಸಾವಿರ ದಿರೇಶನಿಗೆ ಕೊಟ್ಟು ಮಿಕ್ಕಿದ ೭೫ ಸಾವಿರ ಸುನೀತಾಳಿಗೆ ಕೊಡಲು ಹೋದ,  ಸುನೀತಾ  ಅವಳಿಗೆ ಅವಳ ಪಾಲು ಬೇಡ ಅದನ್ನು ಅಮ್ಮನ ಚಿಕಿತ್ಸೆಗೆ ಉಪಯೋಗಿಸು ಎಂದು ರಮೇಶನಿಗೆ ಹೇಳಿದಳು, ರಮೇಶ ಮರು ಮಾತನಾಡದೆ ಅದನ್ನು ಇಟ್ಟುಕೊಂಡ.

ಪ್ರತಿ ತಿಂಗಳು ಸಾವಿರಾರು ರೂಪಾಯಿ ಅಮ್ಮಗೋಸ್ಕರ ಊರಿಗೆ ಕಳುಹಿಸುವ ರಮೇಶನಿಗೆ ಹಣದ ಅಗತ್ಯವಿತ್ತು, ಜೀವನದಲ್ಲಿ ಕೇವಲ ಹಣವೇ ಎಲ್ಲ ಅಲ್ಲವೆಂದು ಅವನಿಗೆ ಗೊತ್ತಿತ್ತು, ಆದರೆ ಹಣವಿಲ್ಲದೆ ಏನೂ ಆಗುವುದಿಲ್ಲ ಎಂದೂ ರಮೇಶನಿಗೆ ತಿಳಿದಿತ್ತು, ಅಮ್ಮನ ಕಾಯಿಲೆಯಿಂದ  ಮುಂದೆ ಸಹ ಎಷ್ಟೋ ಅಡಚಣೆ ವಿಪ್ಪತ್ತುಗಳು ಬರಬಹುದು ಹಾಗು ಆ ಸಮಯ ಹಣ ಬೇಕಾಗಬಹುದೆಂಬ ಚಿಂತೆ ಅವನನ್ನು ಸದಾ ಕಾಡುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...