Thursday, March 5, 2020

ವೃದ್ಧಾಶ್ರಮ ೨೩

ರಮೇಶ ತನ್ನ ಕಚೇರಿಯಿಂದ ಸಾಲ ಪಡೆದು ದಿರೇಶ ಹೇಳಿದ ಹಾಗೆ ಆಶಾ ಚಿಕ್ಕಮ್ಮನ ಬ್ಯಾಂಕ್ ಅಕೌಂಟಿಗೆ ೫೦ ಸಾವಿರ ಕಳುಹಿಸಿದ ಹಾಗು ಫೋನ್ ಮಾಡಿ ದಿರೇಶನಿಗೆ ತಿಳಿಸಿದ. 

ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದಾಯಿತು, ದಿರೇಶ ಹೋಮ್ ನರ್ಸನ ವ್ಯವಸ್ಥೆ ಮಾಡಿದ್ದ, ಹೇಗೋ ಸಮಯ ಕಳೆಯುತ್ತಾ ಹೋಯಿತು, ದಿವಸ ತಿಂಗಳಲ್ಲಿ ಹಾಗು ತಿಂಗಳು ವರ್ಷದಲ್ಲಿ, ರಮೇಶ ಪ್ರತಿ ತಿಂಗಳು ಹೋಮ್ ನರ್ಸಿನ ಸಂಬಳ ಹಾಗು ಮನೆ ಖರ್ಚಿಗೆ ನಿಯಮಿತವಾಗಿ ಆಶಾ ಚಿಕ್ಕಮನ ಅಕೌಂಟಿಗೆ ಹಣ ಕಳುಹಿಸುತ್ತಿದ್ದ, ಈ ಮಧ್ಯೆ ಹಲವು ಸರಿ ಹೋಮ್  ನರ್ಸ್ ಬದಲಾದರು, ಕೆಲವು ಸಮಯ ಹೋಮ್ ನರ್ಸ್ ಇಲ್ಲದೆ ಸಹ ಚಿಕ್ಕಮ್ಮನವರಿಗೆ ಅಮ್ಮನನ್ನು ನೋಡಬೇಕಾಯಿತು, ಅದಕ್ಕೆ ರಮೇಶನಿಗೆ ಚಿಕ್ಕಮ್ಮನವರ  ತುಂಬಾ ಮಾತು ಸಹ ಕೇಳಬೇಕಾಯಿತು, ರಮೇಶನ ಆ ಸಮಯ   ಚಡಪಡಿಕೆ ಹಾಗು ಒತ್ತಡದಲ್ಲಿ ಕಳೆಯಿತು, ರಮೇಶನಿಗೆ ದಿರೇಶನಿಗೆ ಫೋನ್ ಮಾಡಿ  ಹೋಮ್ ನರ್ಸ್ ಹುಡುಕಲು ಬೇಡಬೇಕಾಯಿತು ಮತ್ತು ದಿರೇಶನ ಬೇಡಿಕೆಯಂತೆ ಅವನ ಖರ್ಚಿಗೂ ಹಣ ಕಳುಹಿಸಬೇಕಾಯಿತು, ಅಮ್ಮಗೋಸ್ಕರ ಎಲ್ಲರ ಅಪಮಾನ, ಹಿಯ್ಯಾಳಿಕೆ ಸಹಿಸಿ ರಮೇಶನಿಗೆ ಹೇಗೋ ಚಿಕ್ಕಮನವರೊಟ್ಟಿಗೆ ಹಾಗು ದಿರೇಶನೊಟ್ಟಿಗೆ  ಹೊಂದಿಸಿಕೊಂಡು ಹೋಗಬೇಕಾಯಿತು.     

ನೋಡ್ತಾ ನೋಡ್ತಾ ೨ ವರ್ಷ ಕಳೆದೋಯಿತು, ರಮೇಶ ಪರಿವಾರ ಜತೆ ರಜೆಯಲ್ಲಿ ಭಾರತ ಬಂದ,  ಮುಂಬೈಯಲ್ಲಿ ಮನೆ ಇಲ್ಲದ ಕಾರಣ ಅವರು ಸುಮಾಳ ತಂಗಿಯ ಮನೆಯಲ್ಲಿ ಬಂದು ತಂಗಿದರು, ಎರಡು ದಿನ ಅಲ್ಲಿದ್ದು ರೈಲುಗಾಡಿಯಲ್ಲಿ ಊರಿಗೆ ಬಂದರು. 

ಊರಿನ ಮನೆಯಲ್ಲಿ ಪುನಃ ಕೋಲ ಇತ್ತು, ಈ ಕೋಲ  ರಮೇಶನ ನಾಲ್ಕು ವರುಷ ಮುಂಚೆ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದ ಸೌಮ್ಯ ಚಿಕ್ಕಮ್ಮನವರ ಗಂಡ ಹಾಗು ಅವರ ಮಕ್ಕಳ ಪರವಾಗಿತ್ತು, ಮನೆಯಲ್ಲಿ ಕುಟುಂಬದ ಹೆಚ್ಚಾಗಿ ಎಲ್ಲ ಸದಸ್ಯರು ಬಂದಿದ್ದರು, ರಮೇಶನ ತಂಗಿ ಸುನೀತಾ ಸಹ ಬಂದಿದ್ದಳು, ರಮೇಶ ಬಂದು ಅಮ್ಮನಿಗೆ ಸಿಕ್ಕಿದಾಗ, ಅಮ್ಮ ಸ್ವಾಭಾವಿಕವಾಗಿ ರಮೇಶನನ್ನು ನೋಡಿ ಅತ್ತರು, ಈಗ ಒಂದು ಹೋಮ್ ನರ್ಸ್ ಇದ್ದಳು ಅಮ್ಮನ ಚಾಕರಿ ಮಾಡಲಿಕ್ಕೆ,ಅಮ್ಮ ಈಗಲೂ ಮಾತಾಡುವಾಗ ತೊದಲುತ್ತಿದ್ದರು.  

ಊರಿನ ಸ್ವಲ್ಪ ಜಮೀನು ಮಾರಿದ ಕಾರಣ ಎಲ್ಲರ ಪಾಲಿಗೆ ಮೂರು ಮೂರು ಲಕ್ಷ ರೂಪಾಯಿ ಬಂದಿತ್ತು, ಅಮ್ಮನ ಪಾಲಿಗೆ ಸಹ ಮೂರು ಲಕ್ಷ ರೂಪಾಯಿ ಬಂದಿತ್ತು, ಆದರೆ ಈ ವಿಷಯ ದಿನಕರ ಮಾಮನಿಂದ ರಮೇಶನಿಗೆ ತಿಳಿಯಿತು,ವಿಕ್ರಮ ಮಾವನವರು ಅಮ್ಮನ ಪಾಲು ಅವರ ಅಕೌಂಟಿಗೆ ಹಾಕಿದ್ದರು, ಇದರ ಬಗ್ಗೆ ಯಾಕೋ ಅಮ್ಮ ರಮೇಶನಿಗೆ ಹೇಳಿರಲಿಲ್ಲ, ರಮೇಶನಿಗೆ ಸ್ವಲ್ಪ ಬೇಜಾರವೂ ಆಯಿತು, ಆದರೆ ಅಮ್ಮನಿಗೆ ಸ್ವತಹದ್ದು ಸಹ ಗೋಚಾರವಿರುವುದಿಲ್ಲ, ಇದರ ಎಲ್ಲಿ ಅವರಿಗೆ ನೆನಪಿರಬಹುದೆಂದು ಎನಿಸಿ ಅವನು ಹೆಚ್ಚು ಯೋಚಿಸಲಿಕ್ಕೆ ಹೋಗಲಿಲ್ಲ, ಆದರೆ ಇದರ ಬಗ್ಗೆ ಅವನು ಅಮ್ಮನಿಗೆ ಕೇಳಿದಾಗ ಅಮ್ಮ "ಹೌದು ಬ್ಯಾಂಕಿಗೆ ಹಾಕಿದ್ದಾರೆ, ಅದರಲ್ಲಿ ಒಂದೂವರೆ ಲಕ್ಷ ನಾನು ಮೋನುನಿಗೆ (ಉಷಾ ಚಿಕ್ಕಮ್ಮನ ಮಗ ) ಕೊಟ್ಟಿದ್ದೇನೆ". 

ರಮೇಶ ಆಶ್ಚರ್ಯದಿಂದ "ಯಾಕೆ"?

ಅಮ್ಮ "ಅವನು ಕೇಳಿದ ನಾನೇಗೆ ಇಲ್ಲ ಹೇಳಲಿ, ಅವನಿಗೆ ಅರ್ಜೆಂಟ್ ಬೇಕಿತ್ತು, ವಾಪಾಸ್ ಕೊಡುತ್ತಾನೆ"

ರಮೇಶನಿಗೆ ಅಮ್ಮನಿಗೆ ಏನು ಹೇಳಬೇಕಂತ ಅರ್ಥವಾಗಲಿಲ್ಲ. 

ಅಮ್ಮ ತೊದಲುತ್ತ "ದಿರೇಶ ಸಹ ಹಣ ಕೇಳುತ್ತಿದ್ದ,ಅವನಿಗೆ ಅವನ ಪಾಲು ಕೊಡು, ಸುನೀತಾನ  ಪಾಲೂ ಕೊಟ್ಟು ಬಿಡು, ಮೋನು ಹಣ ವಾಪಾಸ್ ಕೊಟ್ಟ ನಂತರ ನೀನು ನೋಡು ಏನು ಮಾಡಬೇಕಂತ, ನೀನು ವಿದೇಶದಲ್ಲಿದ್ದಿ ನಿನಗೇನೂ ಅಷ್ಟು ಹಣದ ಅಗತ್ಯವಿರಲಿಕ್ಕಿಲ್ಲ, ಅರ್ಜುನನನ್ನು ನೀನೆ ನೋಡಬೇಕಲ್ಲ ಅದಕ್ಕೆ ಅವನ ಯೋಚಿಸು". 

ರಮೇಶ ಅಮ್ಮನನ್ನು ನೋಡುತ್ತಾ ಯೋಚಿಸಿದ "ವಿದೇಶ ಅಂದರೆ ಜನರು ಏನು ಅನಿಸುತ್ತಾರೋ ಏನೋ?  ಅಲ್ಲಿ ಹಣ ಮರದಲ್ಲಿ ಸಿಗುತ್ತದೆ ಎಂದು ಅನಿಸುತ್ತಾರೋ ಏನೋ? ಈಗ ಅಮ್ಮನನ್ನೆ ನೋಡಿ ಅವರಿಗೆ ಎಲ್ಲರ ಚಿಂತೆ ಇದೆ, ಕೇವಲ ನನ್ನದ್ದೇ ಚಿಂತೆಯಿಲ್ಲ, ವಿದೇಶದಲ್ಲಿ ನಾವು ಯಾವ ಪರಿಸ್ಥಿತಿಯಲ್ಲಿ ಇರುತ್ತೇವೆ ಅವರಿಗೇನು ತಿಳಿದಿದೆ, ತನ್ನ ದೇಶದಿಂದ ದೂರ ಅಲ್ಲಿ ದುಡಿದು ಬದುಕುವುದು ಎಷ್ಟು ಕಷ್ಟ ಎಂದು ಅವರಿಗೇನು ಗೊತ್ತು,  ನಾನೆಷ್ಟು ಕಷ್ಟಪಟ್ಟು ಇಲ್ಲಿ ಹಣ ಕಳುಹಿಸುತ್ತೇನೆಂದು ಅವರಿಗೇನು ಗೊತ್ತು, ಸುಲಭವಾಗಿ ಸಿಗುವ ಹಣಕ್ಕೆ ಎಲ್ಲಿ ಮೌಲ್ಯವಿದೆ, ಆದರೆ ಇದ್ದಕ್ಕೆಲ್ಲ ಅಮ್ಮನಿಗೆ ದೂರುವ ಹಾಗೆ ಇರಲಿಲ್ಲ, ಅವರ ಯೋಚಿಸುವ ಶಕ್ತಿ ಸೀಮಿತವಾಗಿತ್ತು, ಅವರಲ್ಲಿ  ಅಷ್ಟೆಲ್ಲ ಯೋಚನೆ ಮಾಡುವ ಶಕ್ತಿ ಉಳಿದಿರಲಿಲ್ಲ".  

ಇನ್ನು ಮೋನು ಹಣ ವಾಪಸ್ ಯಾವಾಗ ಕೊಡುತ್ತಾನೋ? ಇಷ್ಟು ದೊಡ್ಡ ಮೊತ್ತ ತೆಗೊಂಡವರು ಅಷ್ಟು ಬೇಗ ಹಿಂತಿರುಗಿಸುವುದು ಕಷ್ಟನೇ ಎಂದು ರಮೇಶನಿಗೆ ಅನಿಸಿತು. 

ರಮೇಶ "ಮೋನು ಯಾವಾಗ ಹಣ ವಾಪಸ ಕೊಡುತ್ತಾನೆ"?

ಅಮ್ಮ "ಕೊಡುತ್ತಾನೆ, ಬೇಗ ಕೊಡುತ್ತಾನೆ". 

ರಮೇಶ ಆಶ್ಚರ್ಯದಿಂದ ಅಮ್ಮನನ್ನು ನೋಡುತ್ತಿದ್ದ, ಅಮ್ಮನಿಂದ ನಡೆದ ಈ ಕರಾಮತ್ತು ಅವನಿಗೆ ಅರ್ಥವಾಗಲಿಲ್ಲ, ಇದಕ್ಕೆ ನಗಬೇಕೋ ಅಳಬೇಕೋ  ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. 



(ಮುಂದುವರಿಯುತ್ತದೆ )


by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...