Saturday, February 1, 2020

ವೃದ್ಧಾಶ್ರಮ ೨


ರಮೇಶ ಜತಿನ್ ಮತ್ತು ಸುನೀತಾಳಿಗೆ  "ಸೌಖ್ಯವಾಗಿದ್ದೀರಾ  ನೀವೆಲ್ಲ, ಏನು ವಿಶೇಷ"?

ಸುನೀತಾ ಅವನ ಮಾತಿಗೆ ಏನೂ ಉತ್ತರ ನೀಡದೆ ನೇರ "ರಮೇಶ್, ನನಗೆ ಇನ್ನು ಅಮ್ಮನನ್ನು ನೋಡಲು ಸಾಧ್ಯವಿಲ್ಲ, ಇನ್ನು ಮುಂದೆ  ನೀನೇ  ನೋಡು". 

ಅಕಸ್ಮಾತ ಸುನೀತಾ ಈ ತರಹ ಹೇಳಿದ್ದು ಕೇಳಿ ರಮೇಶನಿಗೆ ಅವಳಿಗೆ ಏನು ಹೇಳಬೇಕೆಂದು ಅರ್ಥವಾಗಲಿಲ್ಲ. 

ನಿನ್ನೆ ಸಂಜೆ ತಾನೇ ಸುನೀತಾ ಹಾಗು ಅವಳ ಗಂಡ ಜತಿನ್ ಅಮ್ಮನನ್ನು ರಮೇಶನ ಮನೆಗೆ ಬಿಟ್ಟು ಹೋಗಿದ್ದರು , ರಮೇಶ ಅವಳಿಗೆ ಮೊದಲೇ ಹೇಳಿದ್ದ ಅವನು  ಇವತ್ತು ರಾತ್ರಿ ಬರುತ್ತಾನೆಂದು ಹಾಗು ಅಮ್ಮನನ್ನು ಕರೆದುಕೊಂಡು ಬಾ, ಸ್ವಲ್ಪ ದಿವಸ ನಮ್ಮೊಟ್ಟಿಗೆ ಇರಲಿ ನಾವು ವಿದೇಶ ಹೋಗುವ ತನಕ ಎಂದು.  

ಅಮ್ಮ ಕೈ ಹಿಡಿದು ಸ್ವಲ್ಪ ಸ್ವಲ್ಪ ನಡೆಯುತ್ತಿದ್ದರು, ಆದರೆ ಒಂದು ಕೈ ಹಾಗು ಒಂದು ಕಾಲಲ್ಲಿ ಚಲನೆ ಇರಲಿಲ್ಲ, ರಮೇಶನನ್ನು ನೋಡಿ ಅಮ್ಮನಿಗೆ ಅಳುವುದೊಂದೇ ಕೆಲಸವಾಯಿತು, ಎಷ್ಟು ಸಮಾಧಾನ ಹೇಳಿದರೂ ಅವರು ಕಣ್ಣೇರು ಸುರಿಸುತ್ತಲೇ ಇದ್ದರು, ಈ ಪರಿಸ್ಥಿತಿಯಲ್ಲಿ ಅಮ್ಮನನ್ನು ನೋಡಿ ರಮೇಶನಿಗೆ ತುಂಬಾ ಬೇಸರವಾರಯಿತು. 

ಸುನೀತಾ ಹಾಗು ಅವಳ ಗಂಡ ಜತಿನ್ ನಿನ್ನೆ ಬಂದು ಇಂದು ಬೆಳಿಗ್ಗೆ ಇಷ್ಟು ಬೇಗ ಬಂದದ್ದು ಸುಮಾಳಿಗೆ ಸಹ ಸ್ವಲ್ಪ ವಿಚಿತ್ರವೆನಿಸಿತು, ಅವರ ದೇಹದ ಭಾಷೆ ಸಹ ಅವರು ಏನೋ ಅಗತ್ಯದ ಮಾತಾಡಲಿಕ್ಕೆ ಬಂದಿದ್ದಾರೆ ಎಂದು ಸೂಚಿಸುತ್ತಿತ್ತು. 

ಅವನು "ಯಾಕೆ ಸುನೀತಾ, ಏನಾಯಿತು"? 

ಸುನೀತಾ "ಅವರ ಚಾಕರಿ ಮಾಡುವುದು ಎಷ್ಟು ಕಷ್ಟ ಅಂತ ಗೊತ್ತಿದೆಯ ನಿನಗೆ?  ಅವರಿಗೆ ಎಲ್ಲದಕ್ಕೂ ಒಂದು ಜನ ಬೇಕು, ಶೌಚಾಲಯ, ಸ್ನಾನ ಎಲ್ಲ ನಾವೇ ಮಾಡಿಸಬೇಕು, ಅಷ್ಟೇನೂ ಸುಲಭ ಇಲ್ಲ, ಮೇಲಿಂದ ನನ್ನ ಮನೆಯಲ್ಲಿ ಇವರ ತಂದೆ, ಅಕ್ಕ ಅವರು ಸಹ ಇದ್ದಾರೆ, ಅವರಿಗೆ ಎಷ್ಟು ಅಡಚಣೆ ಆಗುತ್ತದೆ ನಿನಗೆ ಗೊತ್ತಾ, ಅವರು ನೇರ ಏನು ಹೇಳುವುದಿಲ್ಲ ಆದರೆ ಪರೋಕ್ಷವಾಗಿ ಏನಾದರೊಂದು ಹೇಳುತ್ತಿರುತ್ತಾರೆ ನನಗೆ,  ಮೇಲಿಂದ ಅಮ್ಮ ಸ್ವಲ್ಪ ಸಹ ಸಹಕಾರ ಮಾಡುವುದಿಲ್ಲ, ಜಡವಾಗಿದ್ದಾಗೆ ಮಾಡುತ್ತಾರೆ". 

ರಮೇಶ "ಪಕ್ಷವಾತ ಆಗಿದೆಯಲ್ಲ, ಅವರ ನೋವು ಅವರಿಗೆ ಗೊತ್ತು ಇಂತಹ ಪರಿಸ್ಥಿತಿಯಲ್ಲಿ ಇದೆಲ್ಲ ಆಗುವುದು ಸಾಮಾನ್ಯ, ಅಕಸ್ಮಾತ ಒದಗಿದ ಕಾಯಿಲೆಯಿಂದ ಅವರಿಗೆ ಆಘಾತವಾಗಿರಬೇಕು, ಸ್ವಲ್ಪ ದಿವಸ ನಂತರ ಅವರ ಮನಸ್ಥಿತಿ ಸರಿಯಾಗುತ್ತದೆ". 

ಸುನೀತಾ "ಹೇಳಲಿಕ್ಕೆ ಸುಲಭ, ನಿನಗೇನು...  ನಾವು ಮಾಡುತ್ತೇವೆ ನಮಗೆ ಗೊತ್ತು ಎಷ್ಟು ಕಷ್ಟ ಇದೆಯೆಂದು, ನಮ್ಮಿಂದ ಇನ್ನು ಸಾಧ್ಯವಿಲ್ಲ ರಮೇಶ್, ನಿನಗೆ ಅಷ್ಟು ಸುಲಭವೆನಿಸುತ್ತಿದ್ದರೆ ನೀನೇ ನೋಡಿಕೊಳ್ಳು".

ರಮೇಶ "ಹಾಗೆ ಹೇಳಬೇಡ ಸುನೀತಾ, ಸುಲಭವೇನಲ್ಲವೆಂದು ಗೊತ್ತು ನನಗೆ, ಆದರೆ ತಾಯಿಯನ್ನು ನೋಡುವುದು ನಮ್ಮ ಕರ್ತವ್ಯ ತಾನೇ, ನೀನಷ್ಟು ಟೆನ್ಶನ್ ಮಾಡಬೇಡ, ಅವರಿಗೋಸ್ಕರ ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ, ಒಂದು ನರ್ಸ್ ಇಡುವ ಅವರನ್ನು ನೋಡಲು, ಅದರ ಎಲ್ಲ ಖರ್ಚು ನಾನು ಪ್ರತಿ ತಿಂಗಳು ನಿನಗೆ ಕಳುಹಿಸುತ್ತೇನೆ, ನೀನು ಪ್ಲೀಸ್ ಸ್ವಲ್ಪ ಸಹಕಾರ ಮಾಡು. ನಾನು ಸುಮಾ ಮತ್ತು ಆತೀಶನನ್ನು ಒಟ್ಟಿಗೆ ವಿದೇಶ ಕರೆದುಕೊಂಡು ಹೋಗಲು ವೀಸಾ ತೆಗೆದ್ದಿದ್ದೇನೆ, ವೀಸಾ ತೆಗೆಯುವ ಮುಂಚೆ ನಾನು ನಿನ್ನೊಂದಿಗೆ ಚರ್ಚೆ ಸಹ ಮಾಡಿದ್ದೆ ಹಾಗು ನಿನಗೆ ಕೇಳಿದೆ ಸಹ ಅಮ್ಮನ ಬಗ್ಗೆ, ನೀನು ಅವಾಗ ಒಪ್ಪಿಕೊಂಡಿದ್ದೆ, ಈಗ ಇದ್ದಕ್ಕಿದ್ದಂತೆ ನೀನು ಹೀಗೆ ನಿರ್ಣಯ ತೆಗೆದುಕೊಂಡರೆ, ನಾನೇನು ಮಾಡುವುದು ಹೇಳು, ಅಲ್ಲಿ ಕೆಲಸ ಬಿಟ್ಟರೆ ಇಲ್ಲಿ ಕೆಲಸ ಪುನಃ ಹುಡುಕಬೇಕು, ಇಲ್ಲಿ ಕೆಲಸ ಸಿಗುವುದು ಅಷ್ಟೇನೂ ಸುಲಭ ಇಲ್ಲ, ಮೇಲಿಂದ ನನಗೆ ಸ್ವಂತ ಮನೆ ಇಲ್ಲ, ಇದು ಬಾಡಿಗೆಯ ಮನೆ, ನನ್ನಲ್ಲಿ ಅಷ್ಟು ಹಣ ಉಳಿತಾಯ ಸಹ ಇಲ್ಲವೆಂದು ನಿನಗೆ ಗೊತ್ತು, ಇದೆಲ್ಲ ನಿನಗೆ ಎಲ್ಲ ತಿಳಿದಿದ್ದ ವಿಷಯ". 

ಸುನೀತಾ " ಅದೇನು ನನಗೆ ಗೊತ್ತಿಲ್ಲ, ಅವಾಗ ಅಮ್ಮ ಸರಿ ಇದ್ದರು, ಅವರ ಕೆಲಸ ಅವರು ಮಾಡುತ್ತಿದ್ದರು, ಕೇವಲ  ಎರಡು ಮೂರು ತಿಂಗಳಿಗೊಮ್ಮೆ ಅವರನ್ನು ಹೋಗಿ ನೋಡಲಿಕ್ಕಿತ್ತು, ಅದಕ್ಕೆ ನಾನು ಒಪ್ಪಿಕೊಂಡಿದ್ದೆ, ಆದರೆ ಈಗ ಹಾಗೇನಿಲ್ಲ ಅವರಿಗೆ ಎಲ್ಲದಕ್ಕೂ ಯಾರಾದರೂ ಅವರ ಹಿಂದೆ ಇರಬೇಕು, ನೀನು ಏನಾದರು ಮಾಡು, ನಿನ್ನ ಜವಾಬ್ದಾರಿ ನನ್ನ ಮೇಲೆ ಹೇರುವುದು ಬೇಡ, ನೀನೊಬ್ಬನೇ  ಹೋಗು ವಿದೇಶಕ್ಕೆ, ಸುಮಾಳಿಗೆ ಹೇಳು ಇಲ್ಲಿದ್ದು  ಅಮ್ಮನನ್ನು ನೋಡಲಿಕ್ಕೆ". 

ರಮೇಶ "ಇವಳು ಒಬ್ಬಳೇ ಹೇಗೆ ಅಮ್ಮನನ್ನು ನೋಡುವುದು, ಅದು ಇವಳಿಂದ ಸಾಧ್ಯವಾಗದು ಮತ್ತೆ ನಾವು ಮಕ್ಕಳು, ಜವಾಬ್ಧಾರಿ ನಮ್ಮದ್ದು, ನಿನಗೆ ನಾನು ಹೇಳಬಹುದು, ನಮ್ಮ ಅಮ್ಮನನ್ನು ನೋಡಲು ಇವಳಿಗೆ ನಾನು ಹೇಗೆ ಒತ್ತಾಯಿಸಲಿ, ನೀನೆ ಹೇಳು".

ಸುನೀತಾ ಕೋಪದಿಂದ "ಒಹ್ ಓ ... ಇವಳಿಂದ ಸಾಧ್ಯವಿಲ್ಲ ಮತ್ತೆ ನನ್ನಿಂದ ಹೇಗೆ ಸಾಧ್ಯ, ನೀನೇದರೂ ಮಾಡು ನನಗೇನು ಗೊತ್ತಿಲ್ಲ, ನನ್ನಿಂದ ಇನ್ನು ಸಾಧ್ಯವಿಲ್ಲ". 

ರಮೇಶ "ಸುನೀತಾ, ಪ್ಲೀಸ್....., ತುಂಬಾ ದಿವಸದ ನಂತರ ನನ್ನ ಜೀವನಕ್ಕೆ ಒಂದು ಹಾದಿ ಸಿಕ್ಕಿದೆ, ಅದನ್ನು ಹಾಳು  ಮಾಡಬೇಡ, ಪ್ಲೀಸ್ ". 

"ಇಲ್ಲ ರಮೇಶ್, ಇದು ಸಾಧ್ಯನೇ ಇಲ್ಲ, ಅಮ್ಮನನ್ನು ನೋಡಲು ನನ್ನಿಂದ ಇನ್ನು ಸಾಧ್ಯವಾಗದು" ಎಂದು ರಮೇಶನ ತಂಗಿ ಸುನೀತಾ ಕೋಪದಿಂದ ನುಡಿದಳು.

ಮಾತಿನಿಂದ ಮಾತು ಬೆಳೆದು ಸುನೀತಾ ತನ್ನ ಮನಸ್ಸಲ್ಲಿದ್ದ ತೀರ್ಮಾನ ಹೇಳಿಯೇ ಬಿಟ್ಟಳು.

ಅವಳ ಮಾತು ಕೇಳಿ ರಮೇಶ ಸ್ತಬ್ಧನಾದ.     

ಅವನಿಗೆ ಇನ್ನು ಸುನೀತಾಳಿಗೆ ಹೇಗೆ ಮನವರಿಕೆ ಮಾಡುವುದು ಎಂದು ಅರ್ಥವಾಗಲಿಲ್ಲ. 

ಅವರ ಸಂಭಾಷಣೆ ಕೇಳಿ ಒಳಗೆ ಕೋಣೆಯಿಂದ ಅಮ್ಮನ ಅಳುವ ಶಬ್ದ ಬರುತ್ತಿತ್ತು. 

ಅಮ್ಮನ ಅಳುವುದನ್ನು ಕೇಳಿ ನಿರ್ಲಕ್ಷಿಸಿ ಹೃದಯಹೀನರಂತೆ  ಸುನೀತಾ ಮತ್ತು ಜತಿನ್ ಹೊರಡಲು ಎದ್ದು ನಿಂತರು ಹಾಗು ಹೇಳದೆ ಕೇಳದೆ ಮನೆಯಿಂದ ತೆರಳಿದರು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...