Tuesday, February 25, 2020

ವೃದ್ಧಾಶ್ರಮ ೧೮


ಸಂಜೆ ಕೋಲ ಇದ್ದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ ಇತ್ತು, ಎಲ್ಲರು ಏನಾದರೊಂದು ಕೆಲಸದಲ್ಲಿದ್ದರು, ರಮೇಶ ಅಮ್ಮನ ಚಾಕರಿಗೆ ಬಂದ ಹುಡುಗಿ ಸುಮ್ಮಿಗೆ  ಅಮ್ಮನ ಏನೇನು ಕೆಲಸ ಇದೆ ಅದನ್ನು ಅವಳಿಗೆ ತಿಳಿಸಿದ ಹಾಗು ಅವಳ ಸಹಾಯದಿಂದ ಅಮ್ಮನ ಸ್ನಾನ ಸಹ ಮುಗಿಸಿದ.   

ಮಧ್ಯಾಹ್ನದ ನಂತರ ಮನೆಗೆ ನೆಂಟರಿಷ್ಟರೆಲ್ಲರ ಆಗಮನ ಶುರುವಾಯಿತು, ಎಲ್ಲರು ಅವರವರ ಸಂಬಂಧಿಕರನ್ನು ಗೌರವದಿಂದ ಸ್ವಾಗತಿಸಿ ಅವರೊಟ್ಟಿಗೆ ಮಾತಾಡುವುದರಲ್ಲಿ ನಿರತರಾದರು. 

ಕೋಲ ಇದ್ದ ಕಾರಣ ಸುಮಾ ಆತೀಶನೊಟ್ಟಿಗೆ ತವರು ಮನೆಯಿಂದ ಹಿಂತಿರುಗಿ  ಮನೆಗೆ ಬಂದಿದ್ದಳು ಒಟ್ಟಿಗೆ ಅವಳ ತಂದೆ ಸಹ ಬಂದಿದ್ದರು, ಕೋಲಕ್ಕೆ  ನೆಂಟರಿಷ್ಟರನ್ನೆಲ್ಲ ಕರೆಯುವುದು ಊರಿನ ಹಳೆ ಪದ್ಧತಿ, ಇದರಿಂದ ಸಂಬಂಧ ಬೆಳೆದು ಸಧೃಡವಾಗುತ್ತಿತ್ತು.  

ಮನೆಗೆ ಬಂದವರೆಲ್ಲ ಅಮ್ಮನನ್ನು ನೋಡಲು ಅವರ ಕೋಣೆಗೆ ಹೋಗುತ್ತಿದ್ದರು, ಅಮ್ಮನ ಮುಖದಲ್ಲಿ ಯಾವುದೇ ಭಾವನೆ ಮೂಡುತ್ತಿರಲಿಲ್ಲ, ಅವರ ಮುಖದಲ್ಲಿ ಒಂತರಹ ಹತಾಶೆ ಕಾಣುತ್ತಿತ್ತು,  ಅವರಿಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ, ಸಂತೋಷದಲ್ಲಿರುವುದನ್ನು ಅವರು ಮರೆತು ಹೋಗಿದ್ದರು, ರಮೇಶನಿಗೆ ತಿಳಿದಿತ್ತು ಅಮ್ಮನ ಮನಸ್ಥಿತಿ ಆದ್ದರಿಂದ ಅವನು ಅವರಿಗೆ ಏನೂ ಹೇಳಲು ಹೋಗುತ್ತಿರಲಿಲ್ಲ.   

ಅಮ್ಮನಿಗೆ ಸ್ಪಷ್ಟ ಹಾಗು ಹೆಚ್ಚು ಮಾತಾಡಲು ಆಗುತ್ತಿರಲಿಲ್ಲ, ತೊದಲುತ್ತ ಉತ್ತರ ಕೊಡುತ್ತಿದ್ದರು, ಬಂದವರು ಹೆಚ್ಚು ಪ್ರಶ್ನೆ ಕೇಳಿದರೂ ಅವರಿಗೆ ಕಿರಿಕಿರಿ ಆಗುತಿತ್ತು. 

ಆರೋಗ್ಯ ಸರಿ ಇರದಿದ್ದಾಗ, ನೋವಿನಿಂದ ದೇಹ ಬಳಲುತ್ತಿದ್ದಾಗ, ಮನಸ್ಸಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತದೆ, ಆ ನೋವಿನಿಂದ ಹೊರ ಬರಲು ಹಾಗು ಆರೋಗ್ಯಕರ ಮತ್ತು ಸುರಕ್ಷಿತವಾಗಿದ್ದೇನೆ ಎಂದು ಅನುಭವಿಸಲು ಸಮಯ ಬೇಕಾಗುತ್ತದೆ, ಈ ಒತ್ತಡದಿಂದ  ಸುರಕ್ಷತೆಯ ಪ್ರಜ್ಞೆ ಚೂರುಚೂರಾಗುತ್ತದೆ, ಈ  ಅಸಹಾಯಕತೆಯ  ಅನುಭವದಿಂದ ಮನಸ್ಸಲ್ಲಿ ಅಸಮಾಧಾನ, ನಿರಾಸೆ, ಆತಂಕ  ಮನೆ ಮಾಡಿಕೊಳ್ಳುತ್ತದೆ, ನೆನಪು ಶಕ್ತಿಯೂ ಕ್ಷೀಣವಾಗುತ್ತದೆ, ಜೀವ ಜಡವೆನಿಸುತ್ತದೆ, ಸಂಬಂಧದಲ್ಲಿ ವಿಶ್ವಾಸ ಉಳಿಯುವುದಿಲ್ಲ.

ಅಮ್ಮ ಈಗ ಇದೇ  ಪರಿಸ್ಥಿತಿಯಲ್ಲಿದ್ದರು, ಅವರಿಗೆ ಯಾವುದು ಬೇಡ ಅನಿಸುತ್ತಿತ್ತು, ಜೀವನ ಕಠಿಣವೆನಿಸುತ್ತಿತ್ತು.     

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...