Tuesday, February 18, 2020

ವೃದ್ಧಾಶ್ರಮ ೧೪


ರಮೇಶ  ಕಾರಿನಿಂದ  ಹೊರಗೆ ತನ್ನ ಊರಿನ ಸುಂದರ ದೃಶ್ಯ  ನೋಡುತ್ತಿದ್ದ, ಸುತ್ತಲೂ ಗದ್ದೆ, ತೋಟ , ಮಧ್ಯದಲ್ಲಿ ಕಾಡು, ಹಸಿರು ಬೆಟ್ಟ, ಹಸಿರು ಹಸಿರು ಗಿಡಮರಗಳು, ಪ್ರಕೃತಿಯ ಸುಂದರ ವಾತಾವರಣ ಮನಮೋಹಕವಾಗಿತ್ತು, ಊರಿನ ಸೊಬಗನ್ನು ನೋಡಿ ರಮೇಶನ ಮನಸ್ಸು  ಪ್ರಫುಲ್ಲಿತವಾಯಿತು,  ಕೆಲವು ನಿಮಿಷದ ನಂತರ ಕಾರ್ ರಮೇಶನ ಹಳ್ಳಿ ಮನೆ ದುರ್ಗಾಮಂದಿರಕ್ಕೆ ಮುಟ್ಟಿತು. 

ಕಾರ್ ನೋಡಿ ಮನೆಯವರೆಲ್ಲ ಹೊರಗೆ ಬಂದರು, ಮನೆಯಲ್ಲಿ ದೇವರ ಕೆಲಸ ಇದ್ದ ಕಾರಣ ಪರ ಊರಿನಲ್ಲಿದ್ದ ಕುಟುಂಬದ ಹಲುವು ಸದಸ್ಯರು ಬಂದಿದ್ದರು, ಎಲ್ಲರು ಒಟ್ಟು ಕೂಡಿ ಅಮ್ಮನನ್ನು ಕಾರಿನಿಂದ ಇಳಿಸಿ ಮನೆಯ ಒಂದು ಕೋಣೆಗೆ ಸೇರಿಸಿದರು. ಸಾಮಾನೆಲ್ಲ ತೆಗೆದ ನಂತರ ರಮೇಶ ಡ್ರೈವರ್ ಗೆ ಬಾಡಿಗೆ ಎಷ್ಟೆಂದು ಕೇಳಿದ, ಡ್ರೈವರ್ ಸಜ್ಜನನಾಗಿದ್ದ, ಸರಿಯಾದ ಬಾಡಿಗೆನೇ ಹೇಳಿದ, ರಮೇಶ ಹೇಳಿದಷ್ಟು ಬಾಡಿಗೆ ಕೊಟ್ಟು ಅವನಿಗೆ ಧನ್ಯವಾದ  ಸಲ್ಲಿಸಿದ. ರಮೇಶ ಸ್ಟೇಷನಲ್ಲಿ ಬಾಡಿಗೆ ಕೇಳದಕ್ಕೆ  ಸುಮಾ ಅಸಮಾಧಾನದಲ್ಲಿದ್ದಳು, ಈಗ ಡ್ರೈವರ್ ತುಂಬಾ ಹೆಚ್ಚು ಹೇಳುತ್ತಾನೆಂದು ಸುಮಾ ಡ್ರೈವರ್ ಗೆ ಬಾಡಿಗೆ ಕೊಡುವ ತನಕ ಕಾದು ಅವರನ್ನೇ ನೋಡುತ್ತಿದ್ದಳು, ಡ್ರೈವರ್  ಸರಿಯಾದ ಕಡಿಮೆ ಬಾಡಿಗೆ  ಹೇಳಿದ ಕೂಡಲೇ  ರಮೇಶ ಖುಷಿಯಿಂದ ಅವಳನ್ನು ನೋಡಿ ನಗೆ ಬೀರಿದ, ಸುಮಾ ನಗುತ ಅವನಿಗೆ "ಹ್ಮ್ಮ್" ಎಂದು ತೆಪ್ಪಗೆ  ಅಲ್ಲಿಂದ ಮನೆಕಡೆ ಹೋದಳು, ಹೆಂಡತಿ  ಗಂಡನಿಗೆ ಬೈಯುವ ಒಂದು ಅವಕಾಶ ಸಹ ಬಿಡುವುದಿಲ್ಲ, ಆದರೆ ಇಲ್ಲಿ ಸುಮಾಳಿಗೆ ನಿರಾಸೆ ಆಯಿತು, ಡ್ರೈವರ್ ಪ್ರಾಮಾಣಿಕನಾಗಿದ್ದ ಹಾಗು ನಿಯತ್ತಿನ ಬಾಡಿಗೆ ಕೇಳಿದ್ದ.  

ಪ್ರಪಂಚದಲ್ಲಿ ಎಲ್ಲರು ಒಂದೇ ತರಹ ಇರುವುದಿಲ್ಲ,  ಎಲ್ಲರನ್ನು ಒಂದೇ ಮಾನದಂಡದಲ್ಲಿ ಹೋಲಿಸುವುದು ಸರಿಯಲ್ಲ.  ನಾವು  ಜೀವನಕ್ಕೆ ಬರುವಾಗ ಒಂದು ಖಾಲಿ ಪುಸ್ತಕದ ಹಾಗೆ ಇರುತ್ತೇವೆ, ಕ್ರಮೇಣ ಆ ಪುಸ್ತಕ ನಾವು ಮಾಡಿದ ಕರ್ಮದಿಂದ ತುಂಬುತ್ತಲೇ ಹೋಗುತ್ತದೆ, ಅದರ ಕೆಲವು ಪುಟ ನಾವು ಪುನಃ ಪುನಃ ಓದ ಬಯಸುತ್ತೇವೆ, ಕೆಲವು ಪುಟಗಳನ್ನು ನಾವು ಹರಿದು ಬಿಸಾಕ ಬಯಸುತ್ತೇವೆ, ಎಲ್ಲರು ತನ್ನ ಈ ಪುಸ್ತಕವನ್ನು ತನ್ನೊಟ್ಟಿಗೆ ಇಟ್ಟು ತಿರುಗುತ್ತಾರೆ ಹಾಗು ಇತರರೂ ಅದನ್ನು ಓದಬೇಕೆಂದು ಬಯಸುತ್ತಾರೆ, ಆದರೆ ಎಲ್ಲ ಪುಟ ಒಂದೇ ಸಮಾನ ಇರುವುದಿಲ್ಲ, ಕೆಲವು ದಪ್ಪ ಅಕ್ಷರದಲ್ಲಿ  ಬರೆದದ್ದಿರುತ್ತದೆ, ಕೆಲವು  ನಾಜೂಕು ಅಕ್ಷರದಲ್ಲಿ ಬರೆದದ್ದು, ಕೆಲವು ಕಣ್ಣೀರಿನಿಂದ  ಮರೆಯಾಗುತ್ತವೆ, ಕೆಲವು ನಗುವಿನಲ್ಲಿ ಅರಳುತ್ತವೆ, ಕೆಲವು ಕಥೆಗಳನ್ನು ನಾವು  ನೆನಪಿಡಲು ಬಯಸುತ್ತೇವೆ, ಕೆಲವು ಘಟನೆಗಳನ್ನು ನಾವು ಅಳಿಸಬಯಸುತ್ತೇವೆ, ಈ ಪುಸ್ತಕದ ಪ್ರಥಮ ಓದುಗಾರ ನಮ್ಮ ಮನಸ್ಸೇ, ಅದರ ನಂತರ ಕೇವಲ ಕೆಲವೇ ಜನರು ಇದರ ಓದುಗಾರರು ಹಾಗು ನಮ್ಮನ್ನು ಅರ್ಥೈಸುವವರು, ಈ ಪುಸ್ತಕವೇ  ನಮ್ಮ ಜೀವನದ ಕನ್ನಡಿ. 

ಡ್ರೈವರ್ ಹೋದ ನಂತರ ರಮೇಶ ಮನೆಯೊಳಗೇ ಬಂದ, ರಮೇಶನ ಅಮ್ಮನ ಕುಟುಂಬ ಬಹಳ ದೊಡ್ಡದು,ಅದರಲ್ಲಿ ಹೆಚ್ಚಿನವರು ಊರಿನಿಂದ ದೂರ ಪರ ಊರಲ್ಲಿಯೇ ಇರುತ್ತಿದ್ದರು, ಕೆಲವರು ಮುಂಬೈ, ಬೆಂಗಳೂರ್ ಹಾಗು ಕೆಲವರು ವಿದೇಶದಲ್ಲಿದ್ದರು, ಊರಿನಲ್ಲಿ ಕೇವಲ ರಮೇಶನ ಆಶಾ ಮತ್ತು ಉಷಾ ಚಿಕ್ಕಮ, ರಮೇಶನ ಅಣ್ಣನ ಮಗ ಅರ್ಜುನ ಹಾಗು ವಿಜಯ ಮಾಮ ಇರುತ್ತಿದ್ದರು. ಊರಲ್ಲಿ ಏನಾದರೊಂದು ಉತ್ಸವ, ಸಮಾರಂಭ, ಮದುವೆ  ಹಾಗು ದೇವರ ಕಾರ್ಯ ಇದ್ದರೇನೇ ಎಲ್ಲ ಕುಟುಂಬದವರು ಒಟ್ಟಾಗುತ್ತಿದ್ದರು. ಮುಂಬೈಯಿಂದ ರಮೇಶನ ಅಮ್ಮನಿಂದ ಚಿಕ್ಕವರು ಗುಡ್ಡಿ ಚಿಕ್ಕಮ ಅವರ ಮಕ್ಕಳು , ಊರ್ವಶಿ ಚಿಕ್ಕಮ ಮತ್ತು ರಮೇಶನ ದೊಡ್ಡ ಮಾವ ವಿಕ್ರಮ ಬಂದಿದ್ದರು, ರಮೇಶನ ವಿದೇಶದಲ್ಲಿದ್ದ ಚಿಕ್ಕ ಮಾವ ದಿನಕರ ಸಹ ಪರಿವಾರ ಸಹಿತ ಬಂದಿದ್ದರು, ಎಲ್ಲರು ಬಂದಿದ್ದ ಕಾರಣ ಮನೆಯಲ್ಲಿ ಗೌಜಿ ಗಲಾಟೆ ನಡೆಯುತ್ತಿತ್ತು, ಮಕ್ಕಳು ಅಲ್ಲಿಂದಿಲ್ಲಿ ಓಡಾಡುತ್ತಿದ್ದರು.

ಚಾ, ತಿಂಡಿ ಆದ ನಂತರ ಎಲ್ಲರೂ ತನ್ನ ತನ್ನ ಸ್ನಾನ ಮುಗಿಸಿ ತನ್ನ ತನ್ನ ಕೆಲಸದಲ್ಲಿ ನಿರತರಾದರು, ಕೆಲವರು ಪೇಟೆಗೆ ಹೋದರು. ಸುಮಾ ಚಿಕ್ಕಮನವರೊಟ್ಟಿಗೆ ಅಮ್ಮನನ್ನು ಸ್ನಾನ ಮಾಡಿಸಿ, ಅವರಿಗೆ ತಿಂಡಿ, ಚಾ ಕೊಟ್ಟು ನಂತರ ಅವರಿಗೆ ಆರಾಮ ಮಾಡಲು ಹೇಳಿದ್ದಳು,  ಪ್ರಯಾಣದಲ್ಲಿ ಸೋತು ಹೋದ ಕಾರಣ ಅಮ್ಮ ಬೇಗನೆ ನಿದ್ದೆಗೆ ಹೋದರು.

ಮಧ್ಯಾಹ್ನ ರಮೇಶನ ಅಣ್ಣ ದಿರೇಶ ಬಂದ ಕೂಡಲೇ ರಮೇಶ ಅವನಿಂದ ಹೋಮ್ ನರ್ಸ್ ಬಗ್ಗೆ ಕೇಳಿದ, ಅದಕ್ಕೆ ಅವನು "ನಾನು ಕೆಲವರಿಗೆ ಕೇಳಿದೆ ಆದರೆ ಯಾರೂ ಇಷ್ಟು ದೂರ ಒಳಗೆ ಹಳ್ಳಿಗೆ ಬರಲು ಕೇಳುವುದಿಲ್ಲ, ಆದರೆ ನನ್ನ ಪರಿಚಯದವರು ಒಬ್ಬರಿದ್ದಾರೆ, ತುಂಬಾ ಬಡವರು,ಅವರು  ಅವರ ಮಗಳನ್ನು ಕಳಿಸಲು ರೆಡಿ ಇದ್ದಾರೆ, ಅವಳು ನರ್ಸ್ ಅಲ್ಲ, ಆದರೆ ಮನೆಯಲ್ಲಿ ಈ ತರಹ ಕೆಲಸ ಮಾಡಿದ್ದಾಳೆ, ಅಮ್ಮನ ಚಾಕರಿ ಎಲ್ಲ ಮಾಡುತ್ತಾಳೆ, ಊಟ ತಿಂಡಿ ಕೊಟ್ಟು ಸಂಬಳ ೮೦೦೦ ಕೊಡಬೇಕಂತೆ,  ಈಗ ನೀನು ಹೇಳು ಏನು ಮಾಡಬೇಕು, ಒಪ್ಪಿಗೆ ಇದ್ದರೆ ಈಗಲೇ ಫೋನ್ ಮಾಡಿ ಕರೆಸುತ್ತೇನೆ".

ರಮೇಶ "ಎಂಟು ಸಾವಿರ ಹೆಚ್ಚಲ್ಲವೇ"?

ಅದಕ್ಕೆ ದಿರೇಶ "ಅರೆ... ನಿನಗೆ ಈ ಊರಿನ ಕಥೆ ಗೊತ್ತಿಲ್ಲ, ಇಲ್ಲಿ ಯಾರೂ ಕೆಲಸಕ್ಕೆ ಸಿಗುವುದಿಲ್ಲ, ಇದು ನಮ್ಮ ಅದೃಷ್ಟ ಒಳ್ಳೆದಿದೆ ಅದಕ್ಕೆ ಅವರು ಅವರ ಮಗಳನ್ನು ಕಳುಹಿಸುತ್ತಿದ್ದಾರೆ, ಮತ್ತೆ ನೀನೆ ಯೋಚಿಸು" ಎಂದು ಹೇಳಿದ.

ಅದಕ್ಕೆ ಅಲ್ಲೇ ಇದ್ದ ಉಷಾ ಚಿಕ್ಕಮ್ಮನವರು "ಹೌದು ರಮೇಶ, ದಿರೇಶ ಹೇಳುವುದು ಸರಿ, ಇಲ್ಲಿ ಕೆಲಸಕ್ಕೆ ಜನನೇ ಸಿಗುವುದಿಲ್ಲ, ತುಂಬಾ ಕಷ್ಟ, ಅವಳನ್ನೇ ಕರೆಸು ಇಲ್ಲಾದರೆ ಬೇರೆ ಯಾರೂ ನಂತರ ಸಿಗದಿದ್ದರೆ ಕಷ್ಟ ಆಗುತ್ತದೆ".

ಈ ಬಗ್ಗೆ ತುಂಬಾ ಚರ್ಚೆ ಮಾಡಿದ ನಂತರ ರಮೇಶನಿಗೆ ಬೇರೆ ಯಾವುದೇ ಮಾರ್ಗ ಕಾಣದೆ  ಅಮ್ಮನ ಚಾಕರಿ ಮಾಡಲು ದಿರೇಶ ಹೇಳಿದ ಹುಡುಗಿಯನ್ನೇ ಕರೆಯಲು ನಿರ್ಧಾರ ಮಾಡಿದ.

(ಮುಂದುವರಿಯುತ್ತದೆ)


by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...