ಸಂಜೆಗೆ ರಮೇಶ ಚಹಾ ಕುಡಿಯುತ್ತ ಹೊರಗೆ ಅಂಗಳಕ್ಕೆ ಬಂದಾಗ, ಅಲ್ಲಿ ವಿಕ್ರಮ ಮಾಮ ಗಂಭೀರ ಮುದ್ರೆಯಲ್ಲಿ ಕೂತು ಚಹಾ ಕುಡಿಯುತ್ತಿದ್ದರು, ರಮೇಶನನ್ನು ನೋಡಿ ಅವರು "ರಮೇಶ ಇಲ್ಲಿ ಬಾ" ಎಂದು ಕರೆದರು.
ರಮೇಶ ಅವರತ್ತಿರ ಹೋಗಿ ಒಂದು ಚೇರ್ ಎಳೆದು ಕೂತುಕೊಂಡ.
ವಿಕ್ರಮ ಮಾಮ ರಮೇಶನಿಗೆ "ನೋಡು ರಮೇಶ, ನನ್ನ ಮಾತಿಗೆ ಬೇಸರಿಸಬೇಡ, ಆದರೆ ಈ ಹೆಂಗಸರು ಕಿರಿಕಿರಿ ಮಾಡಿ ಕೆಲಸ ಮಾಡುವುದನ್ನು ನೋಡಿ ನನಗೆ ಕೋಪ ಏರಿ ಹೋಯಿತು, ಇವರಿಗೆ ಈಗ ಯಾರೂ ಬೇಡವಾಗಿದ್ದಾರೆ, ಅವರಿಗೆ ಅವರ ಶರೀರವೇ ಭಾರವಾಗಿದೆ, ಮೇಲಿಂದ ಮನೆ ಕೆಲಸ ಅದು ಇದು, ಅವರಿಗೆ ಈ ಸಮಯ ಏನು ಹೇಳಿದರೆ ಮತ್ತೆ ಇನ್ನು ಸ್ಥಿತಿ ಇಲ್ಲಿ ಹಾಳಾಗಬಹುದು ಆದ್ದರಿಂದ ನಾನು ಬೇಕಂತೆ ನಿನ್ನ ಮೇಲೆ ರೋಷ ತೋರಿಸಿದೆ, ಅಕ್ಕನ ಚಿಂತೆ ನನಗೂ ಇದೆ ಹಾಗು ನಿನ್ನ ಅಸಹಾಯಕತೆ ಬಗ್ಗೆಯೂ ನನಗೆ ಅರಿವಿದೆ, ಆದರೆ ನೀನು ದಯಮಾಡಿ ಅವರ ಕಾಳಜಿ ಇಡಲು ಯಾರನ್ನಾದರೂ ಇಟ್ಟು ಹೋಗು, ಇಲ್ಲಾದರೆ ಇವರು ನನ್ನ ಜೀವ ತಿಂದು ಬಿಡುತ್ತಾರೆ, ಹೇಗೂ ವಿಜಯನ ಕಾರಣ ಇವರಿಗೆ ಎಲ್ಲೂ ಹೋಗಲಿಕ್ಕೆ ಬರಲಿಕ್ಕೆ ಇಲ್ಲ".
ರಮೇಶ " ಓ ಕೆ ಮಾಮ, ನನಗೆ ಇದರೆಲ್ಲದರ ಅರಿವಿದೆ, ನಾನು ದಿರೇಶನಿಗೆ ಹೇಳಿದ್ದೇನೆ, ನಾಳೆ ಒಂದು ಹುಡುಗಿ ಬರುತ್ತಾಳೆ ಮತ್ತೆ ನಿಮ್ಮ ಬೈಗುಳದಿಂದ ನನಗೇನು ಬೇಜಾರವಾಗಿಲ್ಲ, ಈ ಮನೆಯ ಗುರಿಕಾರ ಆಗಿದ್ದರಿಂದ ಎಲ್ಲ ನಿಮಗೆ ಕೇಳಬೇಕಾಗುತ್ತದೆ, ಬಿಡಿ...........ಅವರವರ ಸ್ವಭಾವ, ಅವರಿಗೂ ಕಷ್ಟವಾಗುತ್ತಿರಬೇಕು, ಇಲ್ಲಾದರೆ ಅವರೇನು ಅಷ್ಟು ಕಠೋರ ಮನಸ್ಸಿನವರಲ್ಲ".
ವಿಕ್ರಮ ಮಾಮ ಪುನಃ "ಬೇಸರಿಸಬೇಡ ಪ್ಲೀಸ್, ಕೋಲದ್ದು ತುಂಬಾ ಕೆಲಸವಿದೆ, ನಾನು ಸ್ವಲ್ಪ ತಯಾರಿ ನೋಡಿ ಬರುತ್ತೇನೆ" ಎಂದೇಳಿ ಅಲ್ಲಿಂದ ಎದ್ದು ಹೋದರು.
ದಕ್ಷಿಣ ಕನ್ನಡದ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ "ಭೂತ ಕೋಲ" ಅಂದರೆ ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ, ಕೋಲ ಹೆಚ್ಚಾಗಿ ರಾತ್ರಿ ಶುರುವಾಗಿ ಪ್ರಾತಃ ೫ ಗಂಟೆ ತನಕ ನಡೆಯುತ್ತದೆ, ಮನೆಯ ಅಂಗಳದಲ್ಲಿ ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸುತ್ತಾರೆ, ರಾತ್ರಿಗೆ ನೆಂಟ ಮಿತ್ರರ ಹಾಗು ಊರವರೆಲ್ಲರ ಆಗಮನದ ನಂತರ ಮನೆಯ ಯಜಮಾನ ಹಾಗು ಮನೆಯ ಸದಸ್ಯರು ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರ ಜೊತೆ ವಾದ್ಯ ವೃಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ.
ಕೋಲ ಅಂದರೆ ಭೂತಾರಾಧನೆ ಶುರುವಾಗುವ ಸಮಯದಲ್ಲಿ ಭೂತದ ವೇಷ ಹಾಕುವ ಪಾತ್ರದಾರಿ ತನ್ನ ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ಧರಿಸುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ, ಎಲ್ಲ ಭೂತಕ್ಕೆ ಒಂದೇ ರೀತಿಯ ವೇಷಭೂಷಣಗಳು ಇರುವುದಿಲ್ಲ, ಪ್ರತ್ಯೇಕ ದೈವಗಳ ವೇಷ ವಿಭಿನ್ನವಾಗಿರುತ್ತದೆ ಅದರಲ್ಲಿ ಪಾತ್ರದಾರಿಗಳು ತೆಂಗಿನ ಗರಿಯಿಂದ ಮಾಡಿದ ಹೊದಿಕೆ ಹಾಗು ರಂಗು ರಂಗಿನ ವಸ್ತ್ರಗಳುನ್ನು ಧರಿಸುತ್ತಾರೆ ಹಾಗು ಮುಖಕ್ಕೆ ಸಿಂಗಾರ ಮಾಡುವಾಗ ಕೇವಲ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ. ಭೂತಾರಾಧನೆಯಲ್ಲಿ ವಾದ್ಯಗಳ ತುಂಬಾ ಮಹತ್ವವಿರುತ್ತದೆ, ಭೂತಾರಾಧನೆಯಲ್ಲಿ ವಾದ್ಯಗಳ ಉಚ್ಚ ಸ್ವರದ ಧ್ವನಿಯಿಂದ ಪಾತ್ರದಾರಿಯ ಮೈಮೇಲೆ ದೈವ ಬಂದಾಗ ಅವರ ಸುಂದರ ನೃತ್ಯದ ಮೂಲಕ ದೈವದ ಕಾರ್ಣಿಕ ತೋರಿಸುತ್ತದೆ.
ಹಲವು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬಂದಿದುದರಿಂದ ತುಳುನಾಡಿನ ಸಂಸ್ಕೃತಿಗಳು, ಆಚರಣೆಗಳು ಇಂದು ಜೀವಂತವಾಗಿದೆ.
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment