ಸುನೀತಾ ಮತ್ತು ಜತಿನ್ ಹೋದ ನಂತರ ರಮೇಶ ಒಳಗೆ ಅಮ್ಮನತ್ತಿರ ಬಂದ, ಅಮ್ಮ ಈಗಲೂ ಅಳುತ್ತಿದ್ದರು, ರಮೇಶ "ಯಾಕೆ ನೀವು ಅಳುತ್ತಿದ್ದೀರಿ, ನಾವು ನಿಮ್ಮನ್ನು ಹೀಗೆಯೇ ಬಿಡುವುದಿಲ್ಲ".
ಹೊರಗೆ ರಮೇಶ ಹಾಗು ಸುನೀತಾಳ ಎಲ್ಲ ಸಂಭಾಷಣೆ ಕೇಳಿದ ಅಮ್ಮನಿಗೆ ದುಃಖ ಉಕ್ಕಿ ಬರುತ್ತಿತ್ತು.
ಹೊರಗೆ ರಮೇಶ ಹಾಗು ಸುನೀತಾಳ ಎಲ್ಲ ಸಂಭಾಷಣೆ ಕೇಳಿದ ಅಮ್ಮನಿಗೆ ದುಃಖ ಉಕ್ಕಿ ಬರುತ್ತಿತ್ತು.
ಅಮ್ಮ ಮಾತಾಡುವಾಗ ಸ್ವಲ್ಪ ಸ್ವಲ್ಪ ತೊದಲುತ್ತಿದ್ದರು, ಪಕ್ಷವಾತ ಆದ ನಂತರ ಅವರಿಗೆ ಸ್ಪಷ್ಟ ಮಾತನಾಡಲು ಆಗುತ್ತಿರಲಿಲ್ಲ.
"ನನ್ನಿಂದ ನಿಮಗೆಲ್ಲ ಕಷ್ಟವಾಗುತ್ತಿದೆ" ಎಂದು ತೊದಲುತ್ತಾ ಹೇಳಿ ಪುನಃ ಕಣ್ಣೀರು ಬಿಟ್ಟರು.
ರಮೇಶ "ಹಾಗೇನಿಲ್ಲ, ನೀವು ಸೌಖ್ಯವಾಗುತ್ತೀರಿ, ಚಿಂತೆ ಬಿಟ್ಟು ಬಿಡಿ , ನಾನಿದೇನಲ್ಲ".
ಅಮ್ಮ "ಇಲ್ಲ, ನನಗೆ ಆದದ್ದು ಆಗಿಹೋಯಿತು ಇನ್ನು ನಿನ್ನ ಜೀವನ ಹಾಳಾಗುವುದು ಬೇಡ, ನನ್ನನ್ನು ಊರಿಗೆ ಕಳುಹಿಸು".
ರಮೇಶ "ಊರಲ್ಲಿ ಯಾರು ನೋಡುವುದು ನಿಮ್ಮನ್ನು? ಚಿಕ್ಕಮ್ಮನವರು ಆಗುವುದಿಲ್ಲವೆಂದು ಹೇಳಿದ್ದಾರೆ".
ಅಮ್ಮ "ಯಾಕೆ ಆಗುವುದಿಲ್ಲ, ನನ್ನ ತಂಗಿಯರೂ ತಾನೇ, ಅವರು ಹಾಗೆಯೇ, ಬಿಡು ಅವರದ್ದು, ನಂತರ ಸರಿ ಹೋಗುತ್ತದೆ" ಎಂದು ಕೋಪದಿಂದ ತೊದಲುತ್ತಾ ಹೇಳಿದರು.
ಒಡಹುಟ್ಟಿದವರ ಸಂಬಂಧ ಸ್ವಲ್ಪ ಭಾವನಾತ್ಮಕವಾಗಿರುತ್ತದೆ, ಸಹಜವಾಗಿ ಪ್ರೀತಿ ಕೋಪ ಉಕ್ಕಿ ಬರುತ್ತದೆ, ಆದರೆ ಸಮಯ ಕಳೆದಂತೆ ಅವರವರ ಪರಿವಾರ ಬೆಳೆದಾಗ ಕ್ರಮೇಣ ಆ ಸಂಬಂಧಗಳೆಲ್ಲ ವ್ಯಾವಹಾರಿಕವಾಗಿ ಉಳಿಯುತ್ತದೆ, ಆದರೂ ಅಮ್ಮ ಬೆಳೆದ ಕಾಲದವರಲ್ಲಿ ಸಂಬಂಧದ ಬಗ್ಗೆ ಹೆಚ್ಚು ಮೌಲ್ಯ ಕಂಡು ಬರುತ್ತದೆ, ಇಂದಿನ ಆಧುನಿಕ ಯುಗದವರಿಗೆ ಅದರ ಮಹತ್ವ ತಿಳಿದಿಲ್ಲ.
ಅಮ್ಮನ ತಂಗಿಯರ ಮೇಲೆ ಇದ್ದ ಭಾವನೆ ಅರಿತು ರಮೇಶ " ಆದರೆ ಅಮ್ಮ, ಅಲ್ಲಿ ಮೊದಲೇ ವಿಜಯ ಮಾವ ಹಾಸಿಗೆಯಲ್ಲಿ ಇದ್ದಾರೆ, ಇನ್ನು ನೀವು ಸಹ ಹೋದರೆ ಅವರಿಗೆ ಕಷ್ಟ ಆಗುವುದಿಲ್ಲವೇ"? ಎಂದು ಹೇಳಿದ.
ಅಮ್ಮ "ಅವನನ್ನು ನೋಡುವವರು ನನ್ನನ್ನು ನೋಡುವುದಿಲ್ಲವೇ, ನಾನು ಅವರಿಗೆ ಕಷ್ಟ ಕೊಡಲ್ಲ, ಬಿದ್ದಿರುತ್ತೇನೆ ಒಂದು ಕೋಣೆಯಲ್ಲಿ, ನೀನು ನನ್ನನ್ನು ಊರಿಗೆ ಕರೆದುಕೊಂಡೋಗು, ಅವರೇನು ನನ್ನನ್ನು ಹೊರಗೆ ದೂಡುವುದಿಲ್ಲ ತಾನೇ ".
ರಮೇಶ ಮತ್ತು ಅಮ್ಮನ ಸಂಭಾಷಣೆ ಕೇಳುತ್ತಿದ್ದ ಸುಮಾ "ಅಲ್ಲ ನೀವು ಅಮ್ಮಗೋಸ್ಕರ ಹೋಮ್ ನರ್ಸ್ ಇಟ್ಟರೆ ಮತ್ತೆ ಚಿಕ್ಕಮ್ಮನವರಿಗೆ ಅಷ್ಟೇನೂ ಕೆಲಸವಿಲ್ಲವಲ್ಲ, ಅಮ್ಮನ ಚಾಕರಿಯೆಲ್ಲ ನರ್ಸ್ ಮಾಡಿದರೆ , ಕೇವಲ ಊಟದ್ದು ಸಮಸ್ಯೆ, ಆದರೆ ಅದೇನು ಸಮಸ್ಯೆನೇ ಅಲ್ಲ, ಹೇಗೂ ಅವರು ಅಡುಗೆ ಮಾಡಿದರಲ್ಲಿ ಸ್ವಲ್ಪ ಹೆಚ್ಚು ಮಾಡುತ್ತಾರೆ, ಮತ್ತೆ ಅಮ್ಮನ ಖರ್ಚು ಎಲ್ಲ ನೀವು ಕಳುಹಿಸುತ್ತೀರಿ ತಾನೇ".
ರಮೇಶ "ನಿಜ ಹೇಳಬೇಕೆಂದರೆ ನನಗೂ ಅದೇ ಸರಿಯೆಂದು ಅನಿಸುತ್ತದೆ, ಇಲ್ಲಿ ಮುಂಬೈಯಲ್ಲಿ ಒಂದು ಕೋಣೆಯ ಒಳಗೆ ಇವರ ಕಾಯಿಲೆ ಇನ್ನು ಹೆಚ್ಚಾಗಬಹುದು, ಅಲ್ಲಿ ಊರಲ್ಲಿದ್ದರೆ ದೊಡ್ಡ ಮನೆಯಲ್ಲಿ ಅಮ್ಮ ಅಲ್ಲಿ ಇಲ್ಲಿ ನಡೆದಾಡಬಹುದು, ಸ್ವಲ್ಪ ವ್ಯಾಯಾಮ ಸಹ ಆಗುತ್ತದೆ, ಈ ಕಾಯಿಲೆಗೆ ಮುಖ್ಯ ವ್ಯಾಯಾಮ, ಆದರೆ ಚಿಕ್ಕಮ್ಮನವರಿಗೆ ಹೇಗೆ ಹೇಳುವುದು ಅವರು ಮೊದಲೇ ನಮ್ಮಿಂದ ಆಗದೆಂದು ಹೇಳಿದ್ದಾರೆ".
ಸುಮಾ "ನೀವು ಸ್ವಲ್ಪ ವಿನಂತಿ ಮಾಡಿ ಅವರಿಂದ, ನಿಮ್ಮ ಚಿಕ್ಕಮ್ಮನವರು ತಾನೇ, ಮೇಲಿಂದ ನೀವು ಅಂದರೆ ಅವರಿಗೆ ಇಷ್ಟ, ಸ್ವಲ್ಪ ಕೇಳಿ ನೋಡಿ, ಇದು ನಮ್ಮ ಜೀವನದ ಪ್ರಶ್ನೆ, ನೀವು ವಿದೇಶದಲ್ಲಿ ನಮ್ಮ ವೀಸಾ ಹಾಗು ಆತೀಶನ ಅಲ್ಲಿಯ ಸ್ಕೂಲಲ್ಲಿ ಅಡ್ಮಿಶನ್ ಸಹ ಮಾಡಿ ಬಂದಿದ್ದೀರಿ, ಇಲ್ಲದಿದ್ದರೆ ನಾನು ನಿಮಗೆ ಹೇಳುವುದಿಲ್ಲ ಕೇಳಲಿಕ್ಕೆ, ಅವರು ಇಲ್ಲವೆಂದು ಹೇಳುವುದಿಲ್ಲ ನೋಡಿ".
ಸುಮಾಳ ಮಾತು ಕೇಳಿ ರಮೇಶನಲ್ಲಿ ಸ್ವಲ್ಪ ವಿಶ್ವಾಸ ಮೂಡಿತು.
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment