ಮಾರನೆ ದಿನ ರಮೇಶನಿಗೆ ಮುಂಬೈಯಲ್ಲಿದ್ದ ಅವನ ಇನ್ನೊಂದು ಚಿಕ್ಕಮ್ಮ ಊರ್ವಶಿಯವರ ಕಾಲ್ ಬಂತು.
ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ರಮೇಶನಿಂದ ಮನೆಯಲ್ಲಿ ನಡೆದ ಸುನೀತಾನ ಹಾಗು ಎಲ್ಲ ವಿಷಯ ತಿಳಿದುಕೊಂಡು ರಮೇಶನ ವ್ಯಥೆ ಕೇಳಿ ಅವರು"ನೀನು ಇನ್ನೇನು ನಿರ್ಧರಿಸಿದ್ದಿ"?
ರಮೇಶ "ಊರಿಗೆ ಆಶಾ ಮತ್ತು ಉಷಾ ಚಿಕ್ಕಮ್ಮನವರಿಗೆ ಫೋನ್ ಮಾಡುತ್ತೇನೆ, ನನ್ನಲ್ಲಿ ಇನ್ನೇನು ಬೇರೆ ದಾರಿ ಉಳಿದಿಲ್ಲ"
ಊರ್ವಶಿ ಚಿಕ್ಕಮ್ಮ "ಅಯ್ಯೋ ಅಲ್ಲಿ ಅವರು ಹೇಗೆ ಇವರನ್ನು ನೋಡುವುದು, ಮೊದಲೇ ಅಲ್ಲಿ ವಿಜಯನ ಕೆಲಸ ತುಂಬಾ ಆಗುತ್ತದೆ".
ರಮೇಶ "ನನಗೂ ಅದು ತಿಳಿದಿದೆ, ನಾನು ಅಮ್ಮಗೋಸ್ಕರ ಹೋಮ್ ನರ್ಸ್ ಇಡುತ್ತೇನೆ, ಅಮ್ಮನ ಎಲ್ಲ ಕೆಲಸ ಅವಳು ನೋಡಿಕೊಳ್ಳುತ್ತಾಳೆ, ಚಿಕ್ಕಮ್ಮನವರಿಗೆ ಅಮ್ಮನ ಕೆಲಸ ಮಾಡಬೇಕಂತಿಲ್ಲ, ಕೇವಲ ನೋಡ್ಕೊಂಡಿದ್ದಾರೆ ಸಾಕು, ಇನ್ನು ಹೊಟ್ಟೆಗೆ ಅವರು ತಿಂದದ್ದು ಇವರು ಸಹ ತಿನ್ನುತ್ತಾರೆ, ಊರಿಗೆ ಫೋನ್ ಮಾಡಿ ಕೇಳಿ ನೋಡುತ್ತೇನೆ...ನೋಡುವ.... ದೇವರಿದ್ದಾರೆ".
ಅದಕ್ಕೆ ಅವರು "ಕೇಳಿ ನೋಡು, ಆದರೆ ಅವರು ಒಪ್ಪುತ್ತಾರೆಯೆಂದು ನನಗನಿಸುವುದಿಲ್ಲ".
ಊರ್ವಶಿ ಚಿಕ್ಕಮ್ಮನ ಫೋನ್ ಬಂದ ನಂತರ ರಮೇಶನ ಚಿಂತೆ ಹೆಚ್ಚಾಯಿತು, ಅವನ ಧೈರ್ಯ ಕುಗ್ಗುತ್ತಾ ಹೋಯಿತು.
ಕಾಲ್ ಮುಗಿದ ನಂತರ ಸುಮಾ ಮೌನವಾಗಿ ಕುಳಿತ ರಮೇಶನಿಗೆ "ಏನು ಹೇಳುತ್ತಿದ್ದರು ಊರ್ವಶಿ ಚಿಕ್ಕಮ್ಮ".
ರಮೇಶ "ಏನಿಲ್ಲ, ಅವರಿಗೆ ಸಹ ಅಮ್ಮ ಊರಿಗೆ ಹೋಗುವುದು ಇಷ್ಟವಿಲ್ಲ ಕಾಣುತ್ತದೆ"
ಸುಮಾ "ಯಾಕೆ ನಿಮಗೆ ಹಾಗೆ ಅನಿಸುತ್ತದೆ".
ರಮೇಶ "ಇದೆಲ್ಲ ಸಹಜವಲ್ಲವೇ, ಮಕ್ಕಳಿರುವಾಗ ಎಲ್ಲರಿಗೆ ಹಾಗೆಯೇ ಅನಿಸುತ್ತದೆ, ಪಾಲಕರ ಜವಾಬ್ದಾರಿ ಮಕ್ಕಳದ್ದು, ಮಕ್ಕಳ ಸಮಸ್ಯೆಯಿಂದ ಇತರರಿಗೆ ಏನು ಬಿದ್ದು ಹೋಗಿದೆ"
ಸುಮಾ "ಹ್ಮ್ಮ್, ಹೌದು ಇದೂ ಸರಿಯೇ, ಹಾಗಾದರೆ ಏನು ಡಿಸೈಡ್ ಮಾಡಿದಿರಿ, ಊರಿಗೆ ಫೋನ್ ಮಾಡುದಿಲ್ಲವೇ"?
ರಮೇಶ ಏನು ಉತ್ತರಿಸಲಿಲ್ಲ.
ರಮೇಶ ಉತ್ತರಿಸದಿದ್ದನ್ನು ಕಂಡು ಸುಮಾ ಸ್ವಲ್ಪ ಕೋಪದಿಂದ "ಮಕ್ಕಳದ್ದು ಜವಾಬ್ಧಾರಿ ಹೌದು, ಆದರೆ ಎಲ್ಲ ಮಕ್ಕಳು ಒಟ್ಟಿಗೆ ಅದನ್ನು ನಿರ್ವಹಿಸ ಬೇಕಲ್ಲ, ಹೀಗೆ ನಿಮ್ಮ ತಂಗಿ ಒಮ್ಮೆಲೇ ಬಂದು ಹೀಗೆ ಹೇಳಿದರೆ ಹೇಗೆ, ಅವರಿಗೆ ಇನ್ನು ಅಮ್ಮ ಬೇಡವೇ ? ಅಮ್ಮ ಅವರನ್ನು ಸಾಕಲಿಲ್ಲವೇ ಮತ್ತೆ ಯಾಕೆ ಆವಾಗ ಅವರು ಒಪ್ಪಿಕೊಂಡದ್ದು ಹಾಗು ಊರಿನಿಂದ ಕರೆದುಕೊಂಡು ಬಂದು ಅವರ ಮನೆಯಲ್ಲಿ ಇಟ್ಟದ್ದು, ನಿಮ್ಮ ಅಣ್ಣನಿಗೂ ಯಾವುದೇ ಚಿಂತೆ ಇಲ್ಲ, ನೀವೊಬ್ಬರೇ ಜವಾಬ್ಧಾರಿ ನಿರ್ವಹಿಸಬೇಕು, ಯಾರಿಗೂ ನಿಮ್ಮ ಬಗ್ಗೆ ಯೋಚಿಸುವ ಶಕ್ತಿಯೇ ಇಲ್ಲ"
ರಮೇಶನಿಗೆ ಸುಮಾಳ ಭಾವನೆ ಅರ್ಥವಾಗುತ್ತಿತ್ತು, ರಮೇಶನ ಕಷ್ಟ ಸಮಯದಲ್ಲಿ ಪಾಪ ಅವಳು ಎಷ್ಟು ನೊಂದುಕೊಂಡಿದ್ದಳು, ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಒಂದು ಕ್ಷಣ ಸಹ ಅವಳು ರಮೇಶನ ಕೈ ಬಿಡಲಿಲ್ಲ, ಈಗ ಅವಳ ಜೀವನದಲ್ಲಿ ಸ್ವಲ್ಪ ಒಳ್ಳೆ ಸಮಯ ಬಂದಾಗ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಯಿತು, ಅವಳ ರೋಷ ಸಹಜವೇ ಆಗಿತ್ತು.
ಸುಮಾಳ ರೋಷ ಹಾಗು ಅಮ್ಮನ ನೋವು ಈ ಎಲ್ಲ ಬಗ್ಗೆ ಯೋಚಿಸಿ ರಮೇಶನ ಕಣ್ಣು ತುಂಬಿ ಬಂತು.
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment