Monday, February 10, 2020

ವೃದ್ಧಾಶ್ರಮ ೧೦

ಮಾರನೇ ದಿನ ಬೆಳಿಗ್ಗೆ ಊರಿಗೆ ಹೊರಡಲು ಸುಮಾ ಮತ್ತು ರಮೇಶ ಅಮ್ಮನ ಸ್ನಾನ ಮುಗಿಸಿ ಅವರಿಗೆ ಡೈಪರ್ ಧರಿಸಲು ಹೋದಾಗ ಅಮ್ಮ ಆಶ್ಚರ್ಯದಿಂದ "ಇದೇನು"? 

ರಮೇಶ "ಅಮ್ಮ ಪ್ರಯಾಣ ಮಾಡುವಾಗ ನಿಮಗೆ ಮಲ ಮೂತ್ರ ಬಂದರೆ, ಅಲ್ಲಿ ಟ್ರೈನಲ್ಲಿ ನಿಮಗೆ ಬೆಡ್ ಪ್ಯಾನ್ ಕೊಡಲು ಸಾಧ್ಯವಿಲ್ಲವಲ್ಲ, ಅದಕ್ಕೆ ಈ ಡೈಪರ್  ಧರಿಸಿದರೆ ನಿಮಗೆ ಟೆನ್ಶನ್ ಫ್ರೀ ಇರಬಹುದು".

ಅದಕ್ಕೆ ಅಮ್ಮ "ಶಿ ... ಅದಕ್ಕೆ ಮಾಡಿ ನಂತರ ಆ ಕೊಳಕಲ್ಲಿ ಕೂತು ಕೊಳ್ಳುವುದು ಹೇಗೆ, ನನ್ನಿಂದ ಆಗದು" ಎಂದು ತೊದಲುತ್ತಾ ಹೇಳಿದರು.

ರಮೇಶ "ಅರೆ...... ಅಮ್ಮ, ಏನಾಗುವುಲ್ಲ ನಾಳೆ ಬೆಳಿಗ್ಗೆ ತನಕ ಅಷ್ಟೇ, ಊರ ಮನೆ ಮುಟ್ಟಿದ ನಂತರ ತೆಗೆದು ಬಿಡುತ್ತೇವೆ, ಆ ತನಕ ಪ್ಲೀಸ್ ಧರಿಸಿ"  ಎಂದು ಅಮ್ಮನನ್ನು ಒತ್ತಾಯಿಸಿದ.

ರಮೇಶ ಮತ್ತು ಸುಮಾಳ ಒತ್ತಾಯಕ್ಕೆ ಅಮ್ಮನಿಗೆ  ತುಂಬಾ ಕಷ್ಟದಿಂದ ಆ ಡೈಪರ್ ಧರಿಸಲಾಯಿತು.

ಅಮ್ಮನಿಗೆ ರೆಡಿ ಮಾಡಿಸಿದ  ನಂತರ ಸುಮಾ ಅತೀಶನನ್ನು ಸ್ನಾನ ಮಾಡಿಸಿ ರೆಡಿ ಮಾಡಿದಳು ಹಾಗು ಸ್ವತಃ ಸ್ನಾನ ಮಾಡಲು ಹೋದಳು.

ರಮೇಶ ಸಾಮಾನಿನ ಬ್ಯಾಗ್ ಎಲ್ಲ ಸಿದ್ಧ ಮಾಡಿದ ಹಾಗು ಸ್ವತಃ ತಯಾರಾದ.

ಎಲ್ಲರು ತಯಾರಾದ ನಂತರ ಅಮ್ಮನನ್ನು ತುಂಬಾ ಕಷ್ಟದಿಂದ ಲಿಫ್ಟ್ ನಿಂದ  ಗ್ರೌಂಡ್ ಫ್ಲೋರ್ ತನಕ ಕರೆದು ಕೊಂಡು ಬಂದರು, ರಮೇಶ ಮೊದಲೇ ಕಾರ್ ಹೇಳಿ ಇಟ್ಟಿದ, ಅಮ್ಮನನ್ನು ಕಾರಲ್ಲಿ ಕೂರಿಸಲು ಸಹ ರಮೇಶ ಮತ್ತು ಸುಮಾಳಿಗೆ ತುಂಬಾ ಕಷ್ಟವಾಯಿತು, ಹೇಗೋ ಎಲ್ಲ ನಿಭಾಯಿಸಿ ಕಾರ್ ರೈಲ್ವೆ ಸ್ಟೇಷನ್ ಗೆ ಹೊರಡಿತು. 

ಸ್ಟೇಷನ್ ತಲುಪಿದ ನಂತರ ಅಮ್ಮನನ್ನು ಕಾರಿನಿಂದ  ಇಳಿಸಿ ಒಬ್ಬ ಕೂಲಿಯ ಸಹಾಯದಿಂದ ಅಮ್ಮನನ್ನು ಪ್ಲಾಟ್ಫಾರ್ಮ್ ಕರೆದು ಕೊಂಡು ಬರುವ ತನಕ ರಮೇಶ ಮತ್ತು ಸುಮಾಳಿಗೆ ಸಾಕು ಸಾಕಾಯಿತು.

ಊರಿಗೆ ಹೋಗುವ ಟ್ರೈನ್ ಬಂದು ನಿಲ್ಲಿದ ಕ್ಷಣ ಜನರೆಲ್ಲಾ ಗಡಿಬಿಡಿಯಿಂದ ಟ್ರೈನ್ ಹತ್ತಲು ಶುರು ಮಾಡಿದರು, ಎಲ್ಲರೂ ಊರಿಗೆ ಹೋಗುವವರು ಸ್ವಾಭಾವಿಕವಾಗಿ ಅವರತ್ತಿರ ಸಾಮಾನು ಸಹ ತುಂಬಾ ಇತ್ತು. ರಮೇಶ ಮತ್ತು ಸುಮಾ ಎಲ್ಲರು ಹತ್ತುವ ತನಕ ಕಾದು ನಂತರ ನಿಧಾನವಾಗಿ ಅಮ್ಮನನ್ನು ಹತ್ತಿಸಿ ಅವರಿಗೆ ರಮೇಶ್ ಮೀಸಲಾತಿ ಮಾಡಿದ ಸೀಟಲ್ಲಿ ಕೂರಿಸಿದ. 

ಈ ಎಲ್ಲ ಪ್ರಕ್ರಿಯೆಯಲ್ಲಿ ಆ ಕೂಲಿ ಅವರ ತುಂಬಾ ಸಹಾಯ ಮಾಡಿದ ಹಾಗು ಅವರ ಸಾಮಾನುಗಳನ್ನು ಸರಿಯಾಗಿ ತಂದು ಇಟ್ಟಿದ. ರಮೇಶ ಮತ್ತು ಸುಮಾಳಿಗೆ ಆ ಸಮಯ ಆ ಕೂಲಿ ದೇವರಂತೆ ಕಂಡು ಬಂದ ಹಾಗು ಖುಷಿಯಿಂದ ರಮೇಶ ಅವನಿಗೆ ೫೦೦ ರೂಪಾಯಿ ಕೊಟ್ಟು ಅವನಿಗೆ ಧನ್ಯವಾದ ಸಲ್ಲಿಸಿದ. 

ನಮ್ಮ ಕಷ್ಟದಲ್ಲಿ ಅಕಸ್ಮಾತ್ ಯಾರಾದರೂ ನಮಗೆ  ಸಹಾಯ ಮಾಡಲು ಬಂದಾಗ, ಆ ಕ್ಷಣದಲ್ಲಿ ನಾವು ಅವರಲ್ಲಿ ದೇವರನ್ನು ನೋಡುತ್ತೇವೆ ಹಾಗು  ತೊಂದರೆಯಲ್ಲಿರುವ ವ್ಯಕ್ತಿಗೆ ನಾವು ಸಹಾಯ ಮಾಡಿದಾಗಲೆಲ್ಲಾ, ಆ ವ್ಯಕ್ತಿಗೆ ನಾವು ಆ ಕ್ಷಣದಲ್ಲಿ ಆತನ ದೇವರಾಗುತ್ತೇವೆ ಹಾಗೆಯೇ  ನಮ್ಮ ಪ್ರತಿ ಸೌಹಾರ್ದತೆ ತೋರಿಸುವ ವ್ಯಕ್ತಿಯಲ್ಲಿ ನಮಗೆ ದೇವರು ಕಂಡು ಬರುತ್ತಾನೆ, ಬಹುಶಃ ಅದಕ್ಕೆ ಪ್ರೀತಿ ದೇವರ ಮತ್ತೊಂದು ರೂಪ ಎಂದು ಹೇಳಲಾಗುತ್ತದೆ.

ಕೂಲಿ ಹೋದ ನಂತರ ಎಲ್ಲರು ತನ್ನ ತನ್ನ ಸೀಟಲ್ಲಿ ಕುಳಿತುಕೊಂಡರು. 

ಅಮ್ಮ ಪಡುತ್ತಿರುವ ಕಷ್ಟ ಹಾಗು ಅಮ್ಮನಿಗೋಸ್ಕರ ರಮೇಶ ಪಡುತ್ತಿರುವ ಕಷ್ಟ ನೋಡಿ ಯಾಕೋ ಕಿಟಕಿಯ ಬದಿಯಲ್ಲಿ ಕುಳಿತ ಸುಮಾಳ ಕಣ್ಣಿಂದ ಕಣ್ಣೀರು ಹರಿದು ಬಿತ್ತು, ಎದುರು ಸೀಟಲ್ಲಿ ಸುಖದಿಂದ ಮಲಗಿದ ಅಮ್ಮನನ್ನು ನೋಡಿ ರಮೇಶ ಒಂದು ಶಾಂತಿಯ ನಿಟ್ಟುಸಿರು ಬಿಟ್ಟ. 

ಕೆಲವೇ ನಿಮಿಷದ ನಂತರ ಟ್ರೈನ್ ಊರಿಗೆ ಹೊರಟಿತು.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...