ಪ್ರಾತಃಕಾಲ ೪.೩೦ ಕ್ಕೆ ಟ್ರೈನ್ ರಮೇಶನ ಊರು ದುರ್ಗಾಪುರಕ್ಕೆ ತಲುಪಿತು, ಸೂರ್ಯೋದಯ ಆಗಲು ಇನ್ನು ಸ್ವಲ್ಪ ಸಮಯ ಬಾಕಿ ಇತ್ತು, ರಾತ್ರಿಯ ಕತ್ತಲೆ ಇನ್ನೂ ಮುಸುಕು ಸರಿಸಿರಲಿಲ್ಲ.
ಟ್ರೈನ್ ದುರ್ಗಾಪುರ ನಿಲ್ದಾಣದಲ್ಲಿ ಐದೇ ನಿಮಿಷ ನಿಲ್ಲುವ ಕಾರಣ ಎಲ್ಲರು ಗಡಿಬಿಡಿಯಿಂದ ಇಳಿಯುತ್ತಿದ್ದರು, ರಮೇಶ ಸಹ ಅವಸರ ಮಾಡಿ ತುಂಬಾ ಕಷ್ಟದಿಂದ ಅಮ್ಮನನ್ನು ಮೆಲ್ಲ ಮೆಲ್ಲನೇ ಇಳಿಸಿದ, ಸುಮಾ ಅತೀಶನನ್ನು ಇಳಿಸಿ ಬೇಗ ಬೇಗ ಸಾಮಾನು ಇಳಿಸಿ ಕೆಳಗಿಟ್ಟಳು.
ದುರ್ಗಾಪುರ ರೈಲ್ವೆ ನಿಲ್ದಾಣ ಚಿಕ್ಕ ನಿಲ್ದಾಣವಾಗಿದ್ದರಿಂದ ಬೆಳಿಗ್ಗೆಯ ಸಮಯ ಅಲ್ಲಿ ಹೆಚ್ಚು ಜನರಿರಲಿಲ್ಲ, ಎಲ್ಲರಿಂದ ನಂತರ ಇಳಿದ ಕಾರಣ ಕೂಲಿಯವರು ಸಹ ಕಾಣುತ್ತಿರಲಿಲ್ಲ, ಬಹುಶಃ ಮೊದಲು ಇಳಿದವರೆಲ್ಲ ಕೂಲಿ ಮಾಡಿ ಅವಸರದಿಂದ ಹೋಗಿಬಿಟ್ಟಿದ್ದರು.
ರಮೇಶ ಅಮ್ಮನನ್ನು ಇಳಿಸಿ ಎರಡೇ ಹೆಜ್ಜೆ ಹಾಕಿರಬೇಕು ಅಮ್ಮ ಅಲ್ಲಿಯೇ ನಿಂತು ಬಿಟ್ಟರು, ಎಷ್ಟು ಪ್ರಯತ್ನ ಮಾಡಿದ್ದರೂ ಅವರಿಂದ ಮುಂದೆ ಹೆಜ್ಜೆ ಇಡಲಾಗಲಿಲ್ಲ, ಬಹುಶಃ ರಾತ್ರಿಯೆಲ್ಲ ರೈಲುಗಾಡಿಯ ಸೀಟಲ್ಲಿ ಮಲಗಿ ಅವರ ಜೀವ ಜಡವಾಗಿತ್ತು. ರಮೇಶನಿಗೆ ಈಗ ಏನು ಮಾಡುವುದು, ಹೇಗೆ ಇಲ್ಲಿಂದ ಹೋಗುವುದು ಎಂದು ಅರ್ಥನೇ ಆಗುತ್ತಿರಲಿಲ್ಲ. ಅಮ್ಮನನ್ನು ಹಿಡಿದು ನಿಂತ ಚಿಂತಿತ ರಮೇಶ ಸುಮಾಳಿಗೆ "ಸುಮಾ..... ನೀನು ಸ್ಟೇಷನ್ ಮಾಸ್ಟರ್ ರೂಮಿಗೆ ಹೋಗಿ ಅವರ ಹತ್ತಿರ ವೀಲ್ ಚೇರ್ ಇದ್ದರೆ ಕೊಂಡು ಬಾ ಮತ್ತೆ ಅಲ್ಲಿ ಕೂಲಿ ಸಹ ಸಿಕ್ಕಿದರೆ ಅವನನ್ನು ಕರೆದುಕೊಂಡು ಬಾ" ಎಂದ.
ಅವರು ಬಂದಿದ್ದ ಟ್ರೈನ್ ಹೊರಟಾಗಿತ್ತು, ಸ್ಟೇಷನಲ್ಲಿ ಅಲ್ಲಿ ಇಲ್ಲಿ ಒಂದೆರಡೇ ಜನ ಕಾಣುತ್ತಿದ್ದರು. ಸುಮಾ ಅಲ್ಲಿದ್ದ ಒಂದು ಸೀಟಲ್ಲಿ ಆತೀಶನನ್ನು ಕುಳಿಸಿ, ಬ್ರಿಜ್ ಹತ್ತಿ ಬೇರೆ ಪ್ಲಾಟ್ಫಾರ್ಮ್ ನಲ್ಲಿದ್ದ ಸ್ಟೇಷನ್ ಮಾಸ್ಟರ್ ರೂಮಿಗೆ ಹೋದಳು, ಅಲ್ಲಿ ಯಾರೂ ಇರಲಿಲ್ಲ, ಹೊರಗೆ ಬಂದು ಅವಳು ಆಚೆ ಈಚೆ ನೋಡುವಾಗ ಸ್ಟೇಷನ್ ಮಾಸ್ಟರ್ ಅಲ್ಲಿಂದ ಹೋಗುತ್ತಿದ್ದರು.
ಅವಳು ಅವರನ್ನು ನಿಲ್ಲಿಸಿ "ಸರ್, ಇಲ್ಲಿ ವೀಲ್ ಚೇರ್ ವ್ಯವಸ್ಥೆ ಇದೆಯಾ? ನಮ್ಮ ಅಮ್ಮನಿಗೆ ಪಕ್ಷವಾತ ಆಗಿದ್ದ ಕಾರಣ ಅವರಿಗೆ ಸರಿ ನಡೆಯಲಾಗುವುದಿಲ್ಲ, ಅದಕ್ಕೆ......."
ಅವಳ ಮಾತು ಕಡಿದು ಸ್ಟೇಷನ್ ಮಾಸ್ಟರ್ "ಇಲ್ಲಮ್ಮ, ನಾವು ಅರ್ಜಿ ಕೊಟ್ಟಿದ್ದೇವೆ, ಆದರೆ ಇನ್ನು ಸರಕಾರ ಅದರ ವ್ಯವಸ್ಥೆ ಏನು ಮಾಡಿ ಕೊಡಲಿಲ್ಲ , ಸಾರೀ".
ಸುಮಾ"ಒಹ್ !!!!, ಸರ್ ಇಲ್ಲಿ ಕೂಲಿಯವರು ಎಲ್ಲಿ ಸಿಗುತ್ತಾರೆ".
ಸ್ಟೇಷನ್ ಮಾಸ್ಟರ್ " ಕೂಲಿ ತುಂಬಾ ಇದ್ದಾರೆ, ನೀವು ಅಲ್ಲಿ ಟಿಕೆಟ್ ಕೌಂಟರ್ ಇದೆ ಅಲ್ಲಿಗೆ ಹೋಗಿ, ಅಲ್ಲಿ ಅವರ ಗುಂಪು ಇದೆ".
ಸುಮಾ ಅವರಿಗೆ "ಥ್ಯಾಂಕ್ಸ್ ಸರ್"ಎಂದು ಹೇಳಿ ಅಲ್ಲಿಂದ ಟಿಕೆಟ್ ಕೌಂಟರ್ ಬಂದಳು, ನಿಜವಾಗಿಯೂ ಅಲ್ಲಿ ತುಂಬಾ ಕೂಲಿಯವರು ಇದ್ದರು.
ಸುಮಾ ಆಚೆ ಈಚೆ ನೋಡುವಾಗ ಅವಳಿಗೆ ಅಲ್ಲಿ ಕೂಲಿಯವರು ಸಾಮಾನು ಹೊರೆಯುವ ಬಂಡಿ ಕಂಡು ಬಂತು, ಆಗ ಒಬ್ಬ ಕೂಲಿ ಅವಳಲ್ಲಿ ಬಂದು "ಹೇಳಿ ಮೇಡಂ".
ಅವಳು ಅವನಿಗೆ ಆ ಬಂಡಿ ತೋರಿಸಿ "ನೋಡಿ, ಈ ಬಂಡಿ ಸ್ವಲ್ಪ ಆ ಪ್ಲಾಟ್ಫಾರ್ಮ್ ಗೆ ತರಬಹುದ"?
ಅವನು "ಯಾಕೆ ಈ ಬಂಡಿ ಮೇಡಂ, ಇದು ಸಾಮಾನ್ಯ ಉಪಯೋಗಕ್ಕೆ ಅಲ್ಲ, ಈ ಬಂಡಿ ಕೇವಲ ಮಾಲು ಗಾಡಿಯಿಂದ ಬರುವ ಸಾಮಾನುಗೋಸ್ಕರ, ಇದಕ್ಕೆ ಸ್ಟೇಷನ ಮಾಸ್ಟರ್ ಪರ್ಮಿಷನ್ ಬೇಕು, ಆದರೆ ನೀವು ಚಿಂತಿಸಬೇಡಿ..... ನಾನಿದ್ದೇನಲ್ಲ ಎಲ್ಲ ಸಾಮಾನು ಎತ್ತಲಿಕ್ಕೆ, ಹೆಚ್ಚು ಸಾಮಾನಿದ್ದರೆ ಎರಡು ಕೂಲಿ ಮಾಡಿ".
ಸುಮಾ "ಹಾಗೇನಿಲ್ಲ, ನಮ್ಮ ಅಮ್ಮನಿಗೆ ನಡೆಯಲಿಕ್ಕೆ ಸರಿ ಆಗುವುದಿಲ್ಲ, ಇಲ್ಲಿ ವೀಲ್ ಚೇರ್ ಸಹ ಇಲ್ಲ, ಅದಕ್ಕೆ ಅವರನ್ನು ಇದರಲ್ಲಿ ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಬಿಟ್ಟರೆ.....".
ಕೂಲಿ "ಅದು ಆಗಲಿಕ್ಕಿಲ್ಲ ಮೇಡಂ, ಸ್ಟೇಷನ್ ಮಾಸ್ಟರ್ ನಮಗೆ ತಾಕಿದು ಮಾಡಿದ್ದಾರೆ, ಈ ಬಂಡಿ ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸಬಾರದೆಂದು".
ಅದಕ್ಕೆ ಸುಮಾ "ನಾನು ಸ್ಟೇಷನ್ ಮಾಸ್ಟರ್ ಹತ್ತಿರ ಹೋಗಿ ಪರ್ಮಿಷನ್ ತೆಕೊಳುತ್ತೇನೆ".
ಕೂಲಿ ಇವಳಿಂದ ಹಣ ಗಳಿಸುವ ಇದು ಒಳ್ಳೆ ಅವಕಾಶ ಎಂದು "ಬೇಡ ಮೇಡಂ, ಅವರೇನು ಪರ್ಮಿಷನ್ ಕೊಡಲಿಕ್ಕಿಲ್ಲ, ಮೇಲಿಂದ ಈ ಟ್ರೈನ್ ಹೋದ ನಂತರ ಅವರ ಡ್ಯೂಟಿ ಮುಗಿದು ಅವರು ಹೋಗಿ ಬಿಟ್ಟಿರಬಹುದು, ಬೇರೆ ಸ್ಟೇಷನ್ ಮಾಸ್ಟರ್ ನವರು ಬರುವುದಕ್ಕೆ ಇನ್ನೊಂದು ಗಂಟೆ ಇದೆ, ನೀವು ಒಂದು ಸಾವಿರ ಕೊಟ್ಟರೆ ನಾನು ಇಂತದೊಂದು ಬೇರೆ ಬಂಡಿ ನನ್ನ ಜೊತೆಗಾರನತ್ತಿರ ಇದೆ, ನಿಮ್ಮ ಒಪ್ಪಿಗೆ ಇದ್ದರೆ ತರುತ್ತೇನೆ"
ಆಶ್ಚರ್ಯದಿಂದ ಸುಮಾ "ಒಂದು ಸಾವಿರನ!!!, ಸ್ಟೇಷನ್ ಮಾಸ್ಟರ್ ಈಗ ತಾನೇ ಇದ್ದರು, ಅವರೇ ನನ್ನನ್ನು ಇಲ್ಲಿ ಕಳಿಸಿದ್ದು, ಇಷ್ಟು ಬೇಗ ಹೋಗಿ ಆಯಿತಾ"? ಸುಮಾಳಿಗೆ ಕೂಲಿಯ ಹಕ್ಕಿನ ಹಣ ಕೊಡಲು ಯಾವುದೇ ಅಭ್ಯಂತರವಿರಲಿಲ್ಲ, ಆದರೆ ಈ ಕೂಲಿ ಹತ್ತು ಪಾಲು ಹೆಚ್ಚು ಹಣ ಕೇಳುವುದನ್ನು ನೋಡಿ ಅವಳಿಗೆ ಸ್ವಲ್ಪ ಕೋಪ ಸಹ ಬಂತು.
ಈ ಜಗತ್ತಿನಲ್ಲಿ ವಿವಿಧ ವಿವಿಧ ತರಹದ ಜನರಿದ್ದಾರೆ, ಅಲ್ಲಿ ಮುಂಬೈಯಲ್ಲಿ ರಮೇಶನವರಿಗೆ ಸಿಕ್ಕಿದ್ದ ಕೂಲಿ ಎಷ್ಟು ಪಾವನ ಹೃದಯದವನಾಗಿದ್ದ, ಆದರೆ ಇಲ್ಲಿ ಈ ಕೂಲಿ ಅವನಿಂದ ವಿಪರೀತ ಜನರ ಅಸಹಾಯಕತೆಯ ಲಾಭ ತೆಗೊಂಡು ಅವರಿಂದ ಹಣ ದೋಚುವ ಕಪಟನಾಗಿದ್ದ, ಜನರ ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದು ನಿಜಕ್ಕೂ ಬಹಳ ದೊಡ್ಡ ತಪ್ಪು ಹಾಗು ಇದು ನೈತಿಕತೆಗೆ ವಿರುದ್ಧವಾಗಿದೆ, ಯಾರಿಗೂ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಮಾಡಬೇಡಿ, ಆದರೆ ಅವರ ಅಸಹಾಯಕತೆಯಿಂದ ನಿಮ್ಮ ಸೌಲಭ್ಯ ಪಡೆದುಕೊಳ್ಳಬೇಡಿ.
ಕೂಲಿ "ಈ ಟ್ರೈನ್ ತೆರಳಿದ ನಂತರವೇ ಸ್ಟೇಷನ ಮಾಸ್ಟರ್ ಹೋಗಿ ಬಿಡುತ್ತಾರೆ ಮೇಡಂ, ಬೇರೆ ಸ್ಟೇಷನ ಮಾಸ್ಟರ್ ಡ್ಯೂಟಿಗೆ ಬರುವ ತನಕ ಏನಾದರು ತುರ್ತುಪರಿಸ್ಥತಿ ಒದಗಿದರೆ ಇಲ್ಲಿಯ ಟಿಕೆಟ್ ಕೌಂಟರಲ್ಲಿದ್ದವರು ನೋಡಿಕೊಳ್ಳುತ್ತಾರೆ, ಆದರೆ ಬೆಳಿಗ್ಗೆ ಹಾಗೇನು ಪರಿಸ್ಥಿತಿ ಒದಗುವುದಿಲ್ಲ ಮತ್ತೆ ಈ ಬಂಡಿ ತರುವುದರಲ್ಲಿ ನನಗೇನು ಸಿಗುದಿಲ್ಲ ಮೇಡಂ, ನೀವು ಕಷ್ಟದಲ್ಲಿದ್ದೀರಿ ಎಂದು ಹೇಳಿದೆ ಅಷ್ಟೇ, ಆದರೆ ನನ್ನ ಜೊತೆಗಾರನಿಗೆ ಬಂಡಿಯ ಹಣ ಕೊಡಬೇಕಲ್ಲ, ಬೇಕಾದರೆ ಹೇಳಿ ಬಂಡಿ ತರುತ್ತೇನೆ, ಇಲ್ಲಾದರೆ ನನಗೇನು".
ಅವನ ಮಾತು ಕೇಳಿ ಸುಮಾ "ಆದರೆ ಇಷ್ಟು ಹಣ, ಕೇವಲ ಅಲ್ಲಿಂದ ರಿಕ್ಷಾ ಸ್ಟಾಂಡ್ ತನಕ ಹೋಗಲು, ಇಷ್ಟು ಹಣ ನಮ್ಮ ಹಳ್ಳಿಗೆ ಹೋಗಲು ಸಹ ಆಗುವುದಿಲ್ಲ, ನಾನು ಟಿಕೆಟ್ ಕೌಂಟರಲ್ಲಿ ಹೋಗಿ ಕೇಳಿ ನೋಡಲೇ"?
ಕೂಲಿ ಹಣ ಗಳಿಸುವ ಅವಸರ ಹೋಗುವುದನ್ನು ನೋಡಿ "ನೋಡಿ ಮೇಡಂ, ಸುಮ್ಮನೆ ಟೈಮ್ ವೇಸ್ಟ್ ಆಗುತ್ತದೆ, ಮತ್ತೆ ನನ್ನ ಜೊತೆಗಾರ ಹೋದರೆ ಬಂಡಿ ಸಹ ಸಿಗಲಿಕ್ಕಿಲ್ಲ, ಬೇಕಾದರೆ ಹೇಳಿ, ಇಲ್ಲಾದರೆ ನಾನು ಹೊರಟೆ".
ಸುಮಾ ಏನೂ ತೋಚದೆ ದಿಕ್ಕಿಲ್ಲದೆ "ಓ.ಕೆ, ನೀವು ಆ ಬಂಡಿ ತನ್ನಿ".
ಕೂಲಿ "ಈಗ ಬರುತ್ತೇನೆ ಮೇಡಂ" ಎಂದು ಕೆಲವು ನಿಮಿಷದಲ್ಲಿ ಎಲ್ಲಿಂದಲೋ ನಾಲ್ಕು ಚಕ್ರದ ಸಾಮಾನು ಹೊರೆಯುವ ಬಂಡಿ ತಂದ "ಬನ್ನಿ ಮೇಡಂ ಹೋಗುವ, ಎಲ್ಲಿಗೆ ಹೋಗಬೇಕು" ಎಂದು ಕೇಳಿದ, ಸುಮಾ ದಾರಿ ತೋರಿಸಲು ಮುಂದೆ ನಡೆದಳು, ಅವನು ಸುಮಾಳ ಹಿಂದೆ ಹಿಂದೆ ಬಂಡಿ ಎಳೆಯುತ್ತ ಹೋದ.
ಅಲ್ಲಿ ರಮೇಶ ಎಷ್ಟು ಪ್ರಯತ್ನ ಮಾಡಿದರೂ ಅವನಿಂದ ಅಮ್ಮನನ್ನು ಒಂದು ಹೆಜ್ಜೆ ಸಹ ಸರಿಸಲಾಗಲಿಲ್ಲ, ಮೇಲಿಂದ ಸುಮಾ ಎಲ್ಲಿಗೆ ಹೋದಳು ಎಂಬ ಚಿಂತೆಯಲ್ಲಿಯೂ ಇದ್ದ, ಆತೀಶ ಕೂತುಕೊಂಡಲ್ಲಿಯೇ ಮಲಗಿದ್ದ, ಆಚೆ ಈಚೆ ಹೋಗುವರು ಅವನು ಅಮ್ಮನನ್ನು ಹಿಡಿದು ನಿಂತಿದ್ದನ್ನು ಕೇವಲ ಆಶ್ಚರ್ಯದಿಂದ ನೋಡಿ ಅವರ ಪಾಡಿಗೆ ಹೋಗುತ್ತಿದ್ದರು, ಯಾರಿಗೂ ಅವನ ಸಹಾಯ ಮಾಡಬೇಕೆಂಬ ವಿಚಾರ ಬರಲಿಲ್ಲ, ರಮೇಶನಿಗೆ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ, ಅವನನ್ನು ನೋಡಿ ಅಮ್ಮನ ಕಣ್ಣೀರು ಹರಿಯುತ್ತಿತ್ತು, ಅಮ್ಮನ ಅಸಹಾಯಕತೆ ನೋಡಿ ಅವನ ಕಣ್ಣಿನಿಂದಲೂ ಕಣ್ಣೀರು ಹರಿಯಲಾರಂಭಿಸಿತು.
ಸ್ವಲ್ಪ ಹೊತ್ತಲ್ಲಿ ಅವನಿಗೆ ಸುಮಾ ಬರುವುದು ಹಾಗು ಅವಳ ಹಿಂದೆ ಒಬ್ಬ ಕೂಲಿ ನಾಲ್ಕು ಚಕ್ರದ ಬಂಡಿ ತಳ್ಳಿ ಬರುವುದು ಕಂಡು ಬಂತು.
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment