Sunday, February 16, 2020

ವೃದ್ಧಾಶ್ರಮ ೧೩


ಸುಮಾ ಮತ್ತು ಕೂಲಿ ತಳ್ಳಿ ಬರುತ್ತಿದ್ದ ಬಂಡಿಯನ್ನು ನೋಡಿ ರಮೇಶ ಆಶ್ಚರ್ಯದಿಂದ "ಇದೇನು"?

ಸುಮಾ "ಇಲ್ಲಿಯ ಸ್ಟೇಷನಲ್ಲಿ ವೀಲ್ ಚೇರ್ ಇಲ್ಲ, ಅದಕ್ಕೆ ಬೇರೆ ದಾರಿ ಇಲ್ಲದೆ ಈ ಕೂಲಿಗೆ  ಬಂಡಿ  ತರಲಿಕ್ಕೆ ಹೇಳಿದೆ, ಇದರಲ್ಲಿ ಅಮ್ಮನನ್ನು ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಹೋಗುವ"

ರಮೇಶ "ಒಹ್!!!....ಆದರೆ ಇದರಲ್ಲಿ ಹೇಗೆ"?

ಸುಮಾ "ಮತ್ತೇನು ಮಾಡುವುದು, ಹೇಗೂ ಅಮ್ಮನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕಲ್ಲ".

ರಮೇಶ "ಓ.ಕೆ.. ಕೆ".

ತುಂಬಾ ಪ್ರಯತ್ನದ ನಂತರ ಅಮ್ಮನನ್ನು ಆ ಬಂಡಿಯ ಮೇಲೆ ಕೂರಿಸಲಾಯಿತು ಹಾಗು ಅದೇ ಬಂಡಿಯಲ್ಲಿ ಸಾಮಾನು ಸಹ ಇಟ್ಟಾಯಿತು. ರಮೇಶ ಬಂಡಿಯಲ್ಲಿ ಕೂತಿದ ಅಮ್ಮನನ್ನು ಹಿಡಿದಿಟ್ಟಿದ್ದ ಹಾಗು ಸುಮಾ ನಿದ್ದೆಯಲ್ಲಿದ್ದ ಆತೀಶನನ್ನು ಎತ್ತಿ ಹಿಡಿದುಕೊಂಡಳು.

ಕೂಲಿ ನಿಧಾನವಾಗಿ ಬಂಡಿ ತಳ್ಳಿಕೊಂಡು ಹೋದ, ಆದರೂ ಅಮ್ಮ ಅಲ್ಲಾಡುತ್ತಿದ್ದರು, ರಮೇಶ ಬೀಳಬಾರದೆಂದು ಅವರನ್ನು ಹಿಡಿದಿಟ್ಟಿದ್ದ, ಹೇಗೋ ಅವರು ರಿಕ್ಷಾ ಸ್ಟಾಂಡ್ ತನಕ ಮುಟ್ಟಿದರು. 

ಅಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯದಿಂದ ಅವರನ್ನು ನೋಡಲಾರಂಭಿಸಿದರು, ರಿಕ್ಷಾದವರು "ರಿಕ್ಷಾ ಬೇಕಾ, ರಿಕ್ಷಾ ಬೇಕಾ" ಎಂದು ಹಿಂದೆ ಬಿದ್ದರು, ರಮೇಶ ಅವರಿಗೆ "ಇಲ್ಲ ರಿಕ್ಷಾದಲ್ಲಿ ಇವರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಕಾರ್ ಬೇಕು" ಎಂದ. ಆಗ ಒಬ್ಬಾತ "ಸಾರ್, ನನ್ನ ಹತ್ತಿರ ಕಾರ್ ಇದೆ, ಈಗ ತರುತ್ತೇನೆ" ಎಂದ.

ರಮೇಶ್ ಸಮಯದ ಅವಶ್ಯಕತೆ ಅರಿತು ಏನೂ ಚರ್ಚೆ ಮಾಡದೆ  ಅವನಿಗೆ  "ಹ್ಮ್ಮ್" ಎಂದ.

ಆಗ ಸುಮಾ ರಮೇಶನಿಗೆ "ಕೇಳಿತಾ, ಇವರ ಒಂದು ಸಾವಿರ ಕೊಡಿ".

ರಮೇಶ  "ಯಾರದ್ದು"?

ಸುಮಾ "ಈ ಕೂಲಿಯ ಬಂಡಿಯ ಬಾಡಿಗೆ".

ಅದಕ್ಕೆ ರಮೇಶ "ಏನು, ಒಂದು ಸಾವಿರನ".

ಸುಮಾ ಮುಖ ಚಿಕ್ಕ ಮಾಡಿ "ಕೊಡಿ, ನಾನು ಒಪ್ಪಿಕೊಂಡಿದ್ದೇನೆ" ಎಂದಳು.

ರಮೇಶ ಆ ಕೂಲಿಗೆ "ಏನಣ್ಣ, ಇಷ್ಟೊಂದು ಹಣನ"?

ಕೂಲಿ " ನಾನು ಮೊದಲೇ ಹೇಳಿದ್ದೇನೆ ಸಾರ್" ಎಂದ.

ಉಪಾಯವಿಲ್ಲದೆ ರಮೇಶ ಅವನಿಗೆ ಒಂದು ಸಾವಿರ ರೂಪಾಯಿ ಕೊಟ್ಟ ಮತ್ತು ಕಾರ್ ಬರುವ ತನಕ ಕಾಯಲಿಕ್ಕೆ ಹೇಳಿದ.

ಸುಮಾ ರಮೇಶನಿಗೆ "ಕಾರ್ ಬಾಡಿಗೆ ಎಷ್ಟು ಕೇಳಿದ್ದೀರಾ?, ಇಲ್ಲಾದರೆ ಅವನು ಸಹ ಇವನಂತೆ ಬಾಯಿಗೆ ಬಂದ ಬಾಡಿಗೆ ಹೇಳಬಹುದು" 

ರಮೇಶ ಸೋತು ಹೋಗಿದ್ದ ಹಾಗೆ "ಇರಲಿ.....  ನೀನು ಮೊದಲು ಕೇಳಿ ಸಹ ಏನಾಯಿತು, ಕಡೆಗೆ ಒಂದು ಸಾವಿರ ಕೊಡಬೇಕಾಯಿತಲ್ಲ". 

ಸುಮಾ ಕೋಪದಿಂದ ರಮೇಶನನ್ನು ದುರುಗುಟ್ಟಿ ನೋಡಿದಳು, ಅದನ್ನು ನೋಡಿ  ರಮೇಶ ಆಚೆ ಈಚೆ ನೋಡಲಾರಂಭಿಸಿದ. 

ಕಾರ್ ಬಂದ ಕೂಡಲೇ ಎಲ್ಲರು ಸೇರಿ ಅಮ್ಮನನ್ನು ಬಂಡಿಯಿಂದ ಮೆಲ್ಲನೇ ಇಳಿಸಿ ಕಾರಲ್ಲಿ ಕೂರಿಸಿದರು, ನಂತರ ಸುಮಾ ಅತೀಶನೊಟ್ಟಿಗೆ ಅಮ್ಮನ ಬದಿಯಲ್ಲಿ ಕುಳಿತಳು,  ರಮೇಶ  ಕಾರಲ್ಲಿ ಸಾಮಾನು ಇಟ್ಟು ಸ್ವತಃ ಕುಳಿತ ನಂತರ ರಮೇಶ್ ಡ್ರೈವರ್ ನಿಗೆ ತನ್ನ ಹಳ್ಳಿಯ ಹೆಸರೇಳಿದ ಹಾಗು  ಕಾರ್ ರಮೇಶ ಹಳ್ಳಿಯ ಮನೆಯತ್ತ ಸಾಗಿತು.

ಜೀವನ ಅಂದರೆ ಹೀಗೆಯೇ ಸುಖ ದುಃಖ, ಕಷ್ಟ ನಷ್ಟ, ಹತಾಶೆ  ನಿರಾಶೆ, ನೋವು ನಲಿವು......., ಕತ್ತಲೆ ಕವಿದು ಬೆಳಕಾಗುತ ಬಂದಿತು, ಸೂರ್ಯ ಉದಯಿಸಿ ತನ್ನ ಬೆಳಕು ಹೊರಸೂಸುತ್ತಿದ್ದ, ಕಾರಿನ ರೇಡಿಯೋದಲ್ಲಿ ಹಿಂದಿ ಹಾಡು ಬರುತ್ತಿತ್ತು "ಯೇ  ಜೀವನ್ ಹೈ , ಇಸ್  ಜೀವನ್ ಕ ಯಹಿ ಹೈ.... ಯಹಿ ಹೈ ರಂಗ್ ರೂಪ್ , ಥೊಡೆ  ಘಮ್ ಹೈ.....  ಥೊಡೆ  ಖುಷಿಯಾ...... ಯಹಿ ಹೈ....  ಯಹಿ ಹೈ ಚಾವ್ ಧೂಪ್....... ".  

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...