ಸಂಜೆ ಮನೆಯಲ್ಲಿ ಕೋಲಕ್ಕಾಗಿ ಸೇರಿದ ಅತಿಥಿಗಳ ಊಟ ಉಪಚಾರ ಆದ ನಂತರ ಸುಮಾರು ರಾತ್ರಿ ೮ ಗಂಟೆಗೆ ಕೋಲ ಶುರುವಾಯಿತು, ತುಳು ನಾಡಿನ ಸಂಸ್ಕೃತಿ ವಿಶಾಲವಾದದ್ದು, ದೈವಾರಾಧನೆ ತುಳು ನಾಡಿನ ಮೂಲ ಸಂಸ್ಕೃತಿ, ಈಗಲೂ ತುಳು ನಾಡಿನ ಜನರು ಈ ಸಂಸ್ಕೃತಿಯನ್ನು ಉಳಿಸಿ ಕಾಪಾಡಿದ್ದಾರೆ ಅಂದರೆ ತುಳುನಾಡಿನ ಜನರಲ್ಲಿ ಇದರ ಮಹತ್ವ ಎಷ್ಟಿದೆಯೆಂದು ತಿಳಿಯಬಹುದು, ತುಂಬಾ ಭಕ್ತಿ ಭಾವದಿಂದ ತುಳು ನಾಡಿನ ಜನರು ಇದನ್ನು ಏರ್ಪಡಿಸುತ್ತಾರೆ.
ತುಂಬಾ ವರುಷದ ನಂತರ ರಮೇಶ ಕೋಲ ನೋಡುತ್ತಿದ್ದ, ಸುಂದರ ವೇಷಭೂಷಣ, ಅದ್ಭುತ ನೃತ್ಯ, ಸಂವಾದ, ವಿವಿಧ ಭೂತಗಳ ವಿವಿಧ ಶೈಲಿ, ಭೂತ ವೇಷಧಾರಿಯರ ಮನಮೋಹಕ ನೃತ್ಯದ ಸೊಬಗು ಕಣ್ಣಿಗೆ ತಂಪು ನೀಡುತ್ತಿತ್ತು, ಸಮ್ಮೋಹನಗೊಳಿಸುವಂತ್ತಿತ್ತು, ಅಮ್ಮ ಒಳಗೆ ಕಿಟಕಿಯಿಂದ ಸ್ವಲ್ಪ ಹೊತ್ತು ಕೋಲ ನೋಡಿ ನಿದ್ದೆಗೆ ಹೋಗಿದ್ದರು, ತಡರಾತ್ರಿ ದೈವಗಳ ದರ್ಶನ, ಮಧ್ಯದಲ್ಲಿ ಸ್ವಲ್ಪ ವಿರಾಮ, ಅದ್ಭುತ ಶಹನಾಯಿ ವಾದನ, ಈ ಕೋಲದ ಸೊಬಗನ್ನು ನೋಡುವುದೇ ಒಂದು ಭಾಗ್ಯ ಎಂದು ರಮೇಶನಿಗೆ ಅನಿಸಿತು, ಮುಂಜಾನೆ ೫ ಗಂಟೆ ತನಕ ಕೋಲ ನಡೆಯಿತು.
ಕೋಲದ ನಂತರ ಮನೆಯಿಂದ ಎಲ್ಲರು ಹೋದ ನಂತರ ಹೆಚ್ಚಿನಂಶ ಎಲ್ಲರು ನಿದ್ದೆ ಮಾಡಲು ಹೋದರು, ಮಕ್ಕಳೆಲ್ಲ ಮತ್ತು ಕೆಲವರು ಕೋಲದ ನಡೆಯುತ್ತಿದ್ದಂತೆ ಅರ್ಧದಲ್ಲೇ ಮಧ್ಯೆಗೆ ಬಂದು ಮಲಗಿದ್ದರು, ಸುಮಾ ಹಾಗು ಆತೀಶ ಸಹ ಮಧ್ಯ ರಾತ್ರಿ ತನಕ ಕೋಲಾ ನೋಡಿ ನಿದ್ದೆ ತಡೆಯಲಾರದೆ ಬಂದು ಮಲಗಿದ್ದರು.
ರಮೇಶ ಒಂದೆರಡು ಗಂಟೆ ನಿದ್ದೆ ಮಾಡಿ ಎಚ್ಚರವಾದಾಗ ಎಲ್ಲರು ಮಲಗಿದ್ದನ್ನು ನೋಡಿ ಪೇಟೆಗೆ ಹೋಗಿ ಏನಾದರೂ ಬೆಳಿಗ್ಗೆಯ ಉಪಹಾರಕ್ಕೆ ತರುವಯೆಂದು ಪೇಟೆಗೆ ಹೋದ.
ಪೇಟೆಯ ಭಟ್ರು ಹೋಟೆಲಲ್ಲಿ ದೋಸೆ, ವಡೆ ತಿಂದು ಚಹಾ ಕುಡಿದು ನಂತರ ಅವನು ಮನೆಗೋಸ್ಕರ ಬಿಸಿ ಬಿಸಿ ಬಟಾಟೆ ವಡೆ, ಗೋಲಿ ಬಜೆ ಕಟ್ಟಿಸಿಕೊಂಡು ಮನೆಗೆ ಬಂದ.
ವಡೆ, ಗೋಲಿ ಬಜೆಯ ಪರಿಮಳ ಮನೆಯವರನ್ನು ಎಬ್ಬಿಸಿತು ಹಾಗು ವಡೆ, ಗೋಲಿ ಬಜೆ ತಂದಿದಕ್ಕೆ ಎಲ್ಲರು ರಮೇಶನನ್ನು ಕೊಂಡಾಡಿದರು, ಪರ ಊರಿನಿಂದ ಊರಿಗೆ ಬಂದವರಿಗೆ ಗೋಲಿ ಬಜೆ ತಿನ್ನದೆ ಊರಿಗೆ ಬಂದ ಹಾಗೆ ಅನಿಸುವುದಿಲ್ಲ, ಅಷ್ಟು ರುಚಿಕಾರವಾಗಿರುತ್ತದೆ ಈ ಗೋಲಿ ಬಜೆ, ಎಲ್ಲರ ಬಾಯಿ ಚಪ್ಪರಿಸುವ ರುಚಿಕಾರ ಗೋಲಿ ಬಜೆಗೆ ಈ ತುಳು ನಾಡಿನ ಜನರ ಹೃದಯದಲ್ಲಿ ಒಂದು ವಿಶೇಷ ಸ್ಥಾನ ಒದಗಿದೆ.
ಉಪಹಾರ ಎಲ್ಲ ಆದ ನಂತರ ಕೆಲಸದ ಹುಡುಗಿ ಸುಮ್ಮಿ ರಮೆಶನಲ್ಲಿಗೆ ಬಂದು "ಅಣ್ಣ, ನನ್ನ ಮೊಬೈಳಿಗೆ ೧೦೦ ರೂಪಾಯಿ ರಿಚಾರ್ಜ್ ಮಾಡಿ ಪ್ಲೀಸ್, ನನ್ನ ರಿಚಾರ್ಜ್ ಮುಗಿದಿದೆ" ಎಂದಳು.
ರಮೇಶ "ಓ. ಕೆ, ಈಗ ತಾನೇ ಪೇಟೆಯಿಂದ ಬಂದೆ, ಮೊದಲು ಹೇಳಬೇಕಿತ್ತು, ಈಗ ಪುನಃ ಪೇಟೆಗೆ ಹೋದರೆ ಮಾಡುತ್ತೇನೆ, ನಿನ್ನ ನಂಬರ್ ಕೊಟ್ಟಿಡು" ಎಂದ.
"ಇನ್ನು ಯಾವಾಗ ಹೋಗುವಿರಿ ಅಣ್ಣ, ನನಗೆ ಸ್ವಲ್ಪ ಅರ್ಜೆಂಟ್ ಮಾತಾಡಲಿಕ್ಕಿತ್ತು" ಎಂದು ಕೇಳಿದಳು ಸುಮ್ಮಿ.
"ನಾನಿಲ್ಲದಿದ್ದರೆ ಬೇರೆ ಯಾರಾದರೂ ಹೋಗಬಹುದು, ಅಷ್ಟು ಅರ್ಜೆಂಟ್ ಮಾತಾಡಲಿಕಿದ್ದರೆ ನನ್ನ ಮೊಬೈಲಿಂದ ಮಾಡು" ಎಂದ ರಮೇಶ.
"ಓ ಕೆ " ಎಂದು ಸುಮ್ಮಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೋದಳು.
ಇದನ್ನು ನೋಡಿ ಊರ್ವಶಿ ಚಿಕ್ಕಮ್ಮ ರಮೇಶನಿಗೆ "ಇವಳಿಗೆ ಏನಷ್ಟು ಅರ್ಜೆಂಟ್? ಯಾರ ಹತ್ತಿರ ಮಾತಾಡಲಿಕ್ಕೆ, ನೀನಷ್ಟು ತಲೆಗೆ ಇಡಬೇಡ ಇವಳನ್ನು"
ರಮೇಶ "ನಮಗೇನು ಮಾತಾಡಲಿ, ಸಂಬಳದಿಂದ ಕಡಿತ ಮಾಡಿ ಕೊಟ್ಟರಾಯಿತು"
ಸಂಜೆ ಮನೆಯಲ್ಲಿ ತಂಬಿಲ ಇತ್ತು,ತಂಬಿಲ ಅಂದರೆ ಇದನ್ನು ಭೂತಾರಾಧನೆಯ ನಂತರ ಭೂತಗಳಿಗೆ ಕೊಡುವ ನೈವೇದ್ಯ ಎನ್ನಬಹುದು, ತುಳುನಾಡಿನ ಸಂಸ್ಕೃತಿ ಪ್ರಕಾರ ಕೋಲ ಆದ ನಂತರ ಈ ಭವ್ಯ ಔತಣಕೂಟ ಏರ್ಪಡಿಸುತ್ತಾರೆ ಹಾಗು ಮೊದಲು ಭೂತಗಳಿಗೆ ಊಟ ಬಡಿಸಿದ ನಂತರವೇ ಬಂದ ನೆಂಟರಿಷ್ಟರಿಗೆ ಊಟ ಬಡಿಸುತ್ತಾರೆ.
ವಿಕ್ರಮ ಮಾವ ರಮೇಶ ಹಾಗು ಅವನ ಕಸಿನ್ ಆನಂದನನ್ನು ಕರೆದು ಒಂದು ಪಟ್ಟಿ ಕೊಟ್ಟು "ರಮೇಶ ನೀವಿಬ್ಬರು ಪೇಟೆಗೆ ಹೋಗಿ ಈ ಸಾಮಾನು ಖರೀದಿ ಮಾಡಿಕೊಂಡು ಬನ್ನಿ, ನಾನು ಇಲ್ಲಿಯ ಬೇರೆ ಕೆಲಸ ನೋಡುತ್ತೇನೆ " ಎಂದರು.
ರಮೇಶ "ಓ ಕೆ " ಎಂದು ಅವರಿಂದ ಸಾಮಾನಿನ ಪಟ್ಟಿ ತೆಗೆದುಕೊಂಡ.
ಸ್ನಾನ ಎಲ್ಲ ಮುಗಿಸಿ ರಮೇಶ ಮತ್ತು ಆನಂದ ಪೇಟೆಗೆ ತೆರಳಿದರು.
By ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್
No comments:
Post a Comment