Wednesday, February 19, 2020

ವೃದ್ಧಾಶ್ರಮ ೧೫


ಮನೆಯಲ್ಲಿ ರಮೇಶನ ಇಡೀ ಕುಟುಂಬ ಒಟ್ಟಾಗಿದ್ದ ಕಾರಣ ಮನೆಯಲ್ಲಿ ಪರಸ್ಪರ  ಹಾಸ್ಯ, ಗಮ್ಮತ್ತು, ವಿಚಾರ ವಿಮರ್ಶೆ ನಡೆಯುತ್ತಲೇ ಇತ್ತು, ತುಂಬಾ ದಿವಸದ ನಂತರ ಒಬ್ಬರನೊಬ್ಬರು ಭೇಟಿಯಾದ ನಂತರ ಆಗುವ ಖುಷಿಯೇ ಬೇರೆ, ಪರಸ್ಪರ ಮನಸ್ಸಲ್ಲಿ ಎಷ್ಟೇ ಭಿನ್ನಾಭಿಪ್ರಾಯ, ಕ್ಲೇಶ, ಕಲ್ಮಶ ಇದ್ದರೂ ಹೀಗೆ  ಎಲ್ಲರು  ಒಟ್ಟಿಗೆ ಸೇರಿದಾಗ ಮನಸ್ಸು ನಿರ್ಮಲವಾಗುತ್ತದೆ ಹಾಗು ಮನಸ್ಸಿನಲ್ಲಿದ್ದ  ಭಾರ ಮನೋಭಾವ ಹಗುರವಾಗುತ್ತ ಹೋಗುತ್ತದೆ,   ಕುಟುಂಬ ಅಂದರೆ ಹೀಗೆಯೇ ಇರುತ್ತದೆ.  

ಹಿಂದಿನ ಕಾಲದಲ್ಲಿ ಜಂಟಿ ಕುಟುಂಬ ಅಸ್ತಿತ್ವದಲ್ಲಿತ್ತು, ಅದರಲ್ಲಿ ಹಲವಾರು ತಲೆಮಾರುಗಳ ಸದಸ್ಯರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಅವರ ಅಡುಗೆಮನೆ, ಪೂಜೆ ಮತ್ತು ಆಸ್ತಿ ಎಲ್ಲ ಸಾಮೂಹಿಕವಾಗಿರುತ್ತಿತ್ತು, ಜಂಟಿ ಕುಟುಂಬದಲ್ಲಿ ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ಪ್ರೇಮ ಹೆಚ್ಚು ಕಂಡು ಬರುತಿತ್ತು, ಅವರು ತಮ್ಮನ್ನು ತುಂಬಾ ಸುರಕ್ಷಿತವಾಗಿದ್ದಂತೆ ಭಾವಿಸುತ್ತಿದ್ದರು, ಅವರಿಗೆ  ಉತ್ತಮ ಮೌಲ್ಯಗಳು  ಪಾರಂಪಾರಿಕವಾಗಿ ಸಿಗುತ್ತಿತ್ತು,  ಮೆಲ್ಲ ಮೆಲ್ಲ ಸಮಯ ಬದಲಾದಂತೆ  ಕುಟುಂಬದ ಸದಸ್ಯರು ದೂರ ದೂರ ಕೆಲಸ ಕಾರ್ಯಕ್ಕೆ ಹೋದಂತೆ ಅಲ್ಲಿಯೇ ಪ್ರತ್ಯೇಕ  ಪರಿವಾರ ಹೂಡಿ ಇರಲಾರಂಭಿಸಿದರು ಹಾಗು ಈ ಚಲನೆ ಮುಂದೆ ನಡೆಯುತ್ತಲೇ ಹೋಯಿತು, ಕ್ರಮೇಣ ಈ  ಜಂಟಿ ಕುಟುಂಬದ ಪದ್ಧತಿ ಮುಗಿಯುತ್ತ ಹೋಯಿತು ಹಾಗು ಒಂದೇ ಕುಟುಂಬ ಅಂದರೆ ಮೂಲ ಕುಟುಂಬದ ಪದ್ಧತಿ ಸ್ಥಾಪಿತವಾಯಿತು, ಇಂದಿನ ಕಾಲದಲ್ಲಿ ಎಲ್ಲಿ ನೋಡಿದರೂ ಇದೇ ಪದ್ಧತಿ  ಕಂಡು ಬರುತ್ತದೆ. 

ಮಧ್ಯಾಹ್ನ ಊಟ ಮುಗಿದ ನಂತರ ಸುಮಾ ಅತೀಶನ ಜೊತೆ ತನ್ನ ತವರು ಮನೆಗೆ ಹೋದಳು, ರಮೇಶ ಹಾಗು ಅವನ ಸೋದರಸಂಬಂಧಿಗಳು ಹಾಗು ಎಲ್ಲ ಮಕ್ಕಳು  ಸೇರಿ ಊರಲ್ಲಿದ್ದ ನದಿಗೆ ಈಜಲೂ ಹೋದರು, ಒಂದೆರಡು ಗಂಟೆ ಅಲ್ಲಿ ಮೋಜು, ಗಮ್ಮತ್ತು ಮಾಡಿ ಮನೆಗೆ ಬಂದಾಗ ರಮೇಶನ ದೊಡ್ಡ ಮಾವ ವಿಕ್ರಮ ಬೊಬ್ಬೆ ಹಾಕುವುದು ಕೇಳಿ ಬಂತು. 

ರಮೇಶ ಮತ್ತು ಎಲ್ಲರು ಮನೆಗೆ ಕಾಲು ಇಟ್ಟಾಗಲೇ ಕೋಪದಲ್ಲಿ ಪ್ರಸಿದ್ಧವಾಗಿದ್ದ ವಿಕ್ರಮ ಮಾಮ ರಮೇಶನಿಗೆ "ನೀನೆಲ್ಲಿಗೆ ಹೋಗಿದ್ದಿಯ?, ಇಲ್ಲಿ ನಿನ್ನ ಅಮ್ಮ ಮಲ ಮೂತ್ರಕ್ಕೆ  ಕರೆಯುವಾಗ ನೀನಿಲ್ಲ ಇಲ್ಲಿ, ನಿನ್ನ ಹೆಂಡತಿಯು ಇಲ್ಲ, ಇಲ್ಲಿದ್ದವರಿಗೆ ಮೊದಲೇ  ತುಂಬಾ ಕೆಲಸ ಇದೆ, ನಾಳೆ *ಭೂತ ಕೋಲ ಇದೆ, ಅದರ ಕೆಲಸ ಬೇರೆ ಇದೆ, ಇನ್ನು ನಿನ್ನಮ್ಮನ ಚಾಕರಿ ಸಹ ಇವರು ಮಾಡುವುದ"? ಎಂದು ಜೋರಿನಿಂದ ಕೇಳಿದರು. 

*ಭೂತ ಕೋಲ (ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ)

ರಮೇಶ "ಸಾರೀ, ಅವರು ಊಟ ಮಾಡಿ ಮಲಗಿದ್ದರು ಅದಕ್ಕೆ ನಾನಸಿದೆ ಇನ್ನು ಅವರು ಬೇಗ ಏಳುವುದಿಲ್ಲ ಮತ್ತೆ ಮನೆಯಲ್ಲಿ ಎಲ್ಲರಿದ್ದರಲ್ಲ  ಅದಕ್ಕೆ ನಾವೆಲ್ಲಾ ನದಿಗೆ ಹೋದದ್ದು". 

ವಿಕ್ರಮ ಮಾಮ "ನೀನು ಮೊದಲು ಅವರ ಚಾಕರಿಗೋಸ್ಕರ ವ್ಯವಸ್ಥೆ ಮಾಡು ಮತ್ತೆ ಎಲ್ಲಿ  ಹೋಗಲಿಕ್ಕಿದೆ ಹೋಗು, ಇಲ್ಲಿ ಅವರ ಕೆಲಸ ಮಾಡಲಿಕ್ಕೆ ಬೇರೆ ಯಾರ ಹತ್ತಿರ ಸಮಯವಿಲ್ಲ" ಎಂದು ಕೋಪದಿಂದ  ಹೇಳಿದರು. 

ಆಗ ಅಲ್ಲೇ ಇದ್ದ ಗುಡ್ಡಿ  ಚಿಕ್ಕಮನವರು"ಇರಲಿ ಆಯಿತಲ್ಲ ಇನ್ನು, ನೀನ್ಯಾಕೆ ಅಷ್ಟು ರೇಗಾಡುತ್ತಿದ್ದಿ" ಎಂದು ವಿಕ್ರಮ ಮಾಮನಿಗೆ ಬೈದರು. 

ರಮೇಶನಿಗೆ ಬೇಜಾರಾಗುತ್ತದೆ ಎಂದು ಉಷಾ ಚಿಕ್ಕಮ್ಮ ಸಹ ವಿಕ್ರಮ ಮಾಮನಿಗೆ "ಅಣ್ಣ, ನಿಮಗೆ ಸುಮ್ಮನೆ ಇರಲಾಗುದಿಲ್ಲವೇ, ನಾವು ಅವರಿಗೆ ಟಾಯ್ಲೆಟ್ ಮಾಡಿಸಿ ಆಗಿದೆಯಲ್ಲ, ಈಗ ಯಾಕೆ ಸುಮ್ಮನೆ ಬೊಬ್ಬೆ ಹಾಕುತ್ತಿದ್ದೀರಿ". 

ವಿಕ್ರಮ ಕೈಕಾಲು ಬಡಿದು ಮನೆಯಿಂದ ಹೊರಗೆ ಹೋದರು. 

ರಮೇಶ ಸುಮ್ಮನೆ ಏನು ಹೇಳದೆ ಒಳಗೆ ಅಮ್ಮನ ಕೋಣೆಗೆ ಹೋದ, ಅಮ್ಮ ಎಚ್ಚರದಲ್ಲಿದ್ದರು. ರಮೇಶ ಅವರಿಗೆ "ಏನು ಟಾಯ್ಲೆಟ್ ಬಂದಿತ್ತಾ"?

ಅಮ್ಮ ಬೇಜಾರದಿಂದ "ಹೌದು, ನನಗೆ ಗೊತ್ತಿರಲಿಲ್ಲ ನೀನಿಲ್ಲ ಅಂತ"

ರಮೇಶ "ದಿರೇಶ  ಎಲ್ಲಿಗೆ ಹೋದ"? 

"ಅವನೆಲ್ಲಿ ನಿಲ್ಲುತ್ತಾನೆ, ಪೇಟೆಗೆ ಹೋಗಿರಬೇಕು ಅಲೆಯಲು" ಎಂದು ದಿರೇಶನ ಕುಡಿಯುವ ಚಟ  ಅರಿತ ಅಮ್ಮ ಕೋಪದಿಂದ ಹೇಳಿದರು. 

ರಮೇಶ ಕೋಣೆಯಿಂದ ಹೊರಗೆ ಬಂದ, ಅವನಿಗೆ ಮನೆಯಲ್ಲಿದ್ದ ಎಲ್ಲರ ಮನಸ್ಥಿತಿ ಅರ್ಥವಾಗುತ್ತಿತ್ತು, ಎಲ್ಲರೂ ಅವರವರ ಜೀವನದಲ್ಲಿ ವ್ಯಸ್ತವಾಗಿರುವಾಗ, ಯಾರು ಯಾಕೆ ಬೇರೆಯವರ ಕೆಲಸ ಮಾಡಲು ಸಿದ್ಧರಿದ್ದಾರೆ, ವಿಕ್ರಮ ಮಾಮನ ಉದ್ದೇಶ ಅವನಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು, ಯಾವಾಗಲೂ ಅವರ ಕೋಪ ಅವರ ಮೂಗಿನಲ್ಲಿ ಇರುತ್ತಿತ್ತು ಮತ್ತೆ ಅದರಿಂದ ಮನೆಯ ವಾತಾವರಣ ಹಾಳಾಗುತ್ತದೆ ಇದೆಲ್ಲದ್ದರ ಬಗ್ಗೆ ಯೋಚನೆ ಮಾಡುವ ಶಕ್ತಿ ಅವರಲ್ಲಿ ಇರಲಿಲ್ಲ, ಅವರ ಸ್ವಭಾವ ಅರಿತು ರಮೇಶ ಅವರಿಂದ ಹೆಚ್ಚು ವಾದ ಮಾಡಲು ಹೋಗಿರಲಿಲ್ಲ, ಮೌನವಾಗಿ ಇರುವುದಲ್ಲದೆ  ಈಗ ಅವನಲ್ಲಿ ಬೇರೆ ಏನು ಊಪಯವಿರಲಿಲ್ಲ. 

ಅವನು ದಿರೇಶನಿಗೆ ಫೋನ್ ಮಾಡಿದ " ಎಲ್ಲಿದ್ದೀಯ"?

ದಿರೇಶ "ಪೇಟೆಯಲ್ಲಿ, ಏನು ಏನಾಯಿತು"?

ರಮೇಶ "ಏನಾಯಿತು ಆ ಹುಡುಗಿಯ, ಹೇಳಿದ್ದೀಯಾ ಬರಲಿಕ್ಕೆ"?

ದಿರೇಶ "ಅವಳ ತಂದೆಗೆ ಫೋನ್ ಮಾಡಿದೆ, ನಾಳೆ ಅವನು ಅವಳನ್ನು ಕರೆದುಕೊಂಡು ಬರುತ್ತಾನೆ"

ರಮೇಶ "ಓ. ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)


by ಹರೀಶ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...