Thursday, January 30, 2020

ವೃದ್ಧಾಶ್ರಮ ೧


"ಇಲ್ಲ ರಮೇಶ್, ಇದು ಸಾಧ್ಯನೇ ಇಲ್ಲ, ಅಮ್ಮನನ್ನು ನೋಡಲು ನನ್ನಿಂದ ಇನ್ನು ಸಾಧ್ಯವಾಗದು" ಎಂದು ರಮೇಶನ ತಂಗಿ ಸುನೀತಾ ಕೋಪದಿಂದ ನುಡಿದಳು.

ಮಾತಿನಿಂದ ಮಾತು ಬೆಳೆದು ಸುನೀತಾ ತನ್ನ ಮನಸ್ಸಲ್ಲಿದ್ದ ತೀರ್ಮಾನ ಹೇಳಿಯೇ ಬಿಟ್ಟಳು.

ಅವಳ ಮಾತು ಕೇಳಿ ರಮೇಶ ಸ್ತಬ್ಧನಾದ. 

ಅಂದು ಮುಂಜಾನೆ ಆರು ಗಂಟೆಗೆ ಸುನೀತಾ ಮತ್ತು ಅವಳ ಗಂಡ ಜತಿನ್ ರಮೇಶನ ಮನೆಗೆ ಬಂದಿದ್ದರು, ಕಳೆದ ಒಂದೂವರೆ ತಿಂಗಳಿನಿಂದ  ಅಮ್ಮ ಸುನೀತಾಳ  ಮನೆಯಲ್ಲಿ ಇರುತ್ತಿದ್ದರು. 

ರಮೇಶ ವಿದೇಶದಿಂದ ಆ ರಾತ್ರಿಗೆ ತಾನೇ ಬಂದದ್ದು, ಬಹುಶ ಇವರು ವಿದೇಶದಿಂದ ಬಂದ ನನ್ನನ್ನು ಸಿಗಲು ಬಂದಿರ ಬೇಕು ಎಂದು ಎನಿಸಿದ, ಆದರೆ ಮಾತು ಅಮ್ಮನ ಬಗ್ಗೆ ಇತ್ತು. 

------------------

ನಾಲ್ಕು ಐದು ವರುಷ ಜೀವನದಲ್ಲಿ ಕಷ್ಟ ಕಾಲವನ್ನು ಎದುರಿಸಿ ಹೇಗೋ ಮಾವನ ಸಹಾಯದಿಂದ ವಿದೇಶಕ್ಕೆ ಹೋದ ನಂತರ ರಮೇಶನ ಜೀವನಕ್ಕೆ ಒಂದು ಹೊಸ ತಿರುವು ಬಂದಿತ್ತು. ಕಷ್ಟ ಸಮಯದಲ್ಲಿ ಮುಂಬೈಯಲ್ಲಿದ ಸ್ವಂತ ಮನೆ ಮಾರಿದ ಕಾರಣ ಈಗ ಅವನ ಪತ್ನಿ ಹಾಗು ಮಗ ಬಾಡಿಗೆಯ ಮನೆಯಲ್ಲಿ ಇರುತ್ತಿದ್ದರು. ಈ ಸಲ ರಜೆಗೆ ಭಾರತಕ್ಕೆ ಬಂದು ನಂತರ ಹೋಗುವಾಗ ಬಾಡಿಗೆ ಮನೆ ಬಿಟ್ಟು ಪತ್ನಿ ಸುಮಾ ಮತ್ತು  ಐದು ವರುಷದ  ಮಗ ಆತೀಶನನ್ನು ಒಟ್ಟಿಗೆ ವಿದೇಶಕ್ಕೆ ಕರೆದುಕೊಂಡು ಹೋಗಬೇಕೆಂದು ಹಾಗು ಅಲ್ಲಿಯೇ ನೆಲೆಸಬೇಕೆಂದು ರಮೇಶ  ನಿಶ್ಚಯ ಮಾಡಿದ್ದ,  ಆ ಕಾರಣ ರಮೇಶ ಇಬ್ಬರ ವಿದೇಶದ ರೆಸಿಡೆನ್ಸ್ ವೀಸಾ ತೆಗೆದಿದ್ದ. 

ಈ ವಿಷಯದಲ್ಲಿ ಅವನು  ತಂಗಿ ಸುನೀತಾ ಜೊತೆ ಚರ್ಚೆ ಸಹ ಮಾಡಿದ್ದ ಹಾಗು ಅವಳು ರಮೇಶನಿಗೆ "ನೀನು ಊರಲ್ಲಿದ್ದ ಅಮ್ಮನ ಚಿಂತೆ ಮಾಡಬೇಡ, ಅವರನ್ನು ಮೂರು ತಿಂಗಳಿಗೊಮ್ಮೆ ಊರಿಗೆ ಹೋಗಿ ನಾನು ನೋಡಿಕೊಳ್ಳುತ್ತೇನೆ" ಎಂದು ತನ್ನ ಒಪ್ಪಿಗೆ ನೀಡಿದ್ದಳು. 

ಆದರೆ ದುರ್ದೈವದಿಂದ ಈ ಮಧ್ಯೆ ಊರಿನಲ್ಲಿದ್ದ ರಮೇಶನ ಅಮ್ಮನಿಗೆ ಬ್ಲಡ್ ಪ್ರೆಷರ್ ಏರಿ ಶರೀರದ ಒಂದು ಭಾಗದಲ್ಲಿ ಪಕ್ಷವಾತ ಆಯಿತು, ಅವರ ಅರ್ಧ ಅಂಗ ಕೆಲಸ ಮಾಡುವುದು ನಿಲ್ಲಿಸಿತು,ಅಕಸ್ಮಾತಾಗಿ ಆದ ಈ ಘಟನೆಯಿಂದ ಎಲ್ಲರಿಗೂ ಆಘಾತವಾಗಿತ್ತು. ಈ ಘಟನೆ ಆದಾಗ ರಮೇಶ ವಿದೇಶದಲ್ಲಿದ್ದ, ಕಂಪನಿಯ ಪ್ರಮುಖ ಪದದಲ್ಲಿದ್ದ ಕಾರಣ  ಅವನಿಗೆ ಎಲ್ಲ ಬಿಟ್ಟು ಹೀಗೆ ಅಕಸ್ಮಾತ್ ಭಾರತ ಹೋಗುವುದು ಸಹ ಸಾಧ್ಯವಾಗಿರಲಿಲ್ಲ. ಕಂಪನಿಯ ನಿಯಮದ ಪ್ರಕಾರ ಅವನ  ರಜೆ ಎರಡು ತಿಂಗಳ ನಂತರ ಡ್ಯೂ ಆಗುತ್ತಿತ್ತು ಹಾಗು ಅದೇ ಕಾರಣದಿಂದ ಅವನು ಪತ್ನಿ ಹಾಗು ಮಗನ ವೀಸಾ ತೆಗೆದಿಟ್ಟದ್ದ.  ಆದರೆ ಈ ತುರ್ತುಪರಿಸ್ಥತಿಯಲ್ಲಿ ಅವನಿಗೆ ಏನೂ ತೋಚದೆ ಅವನು ಪತ್ನಿ ಸುಮಾಳನ್ನು ಊರಿಗೆ ಹೋಗಲು ಹೇಳಿ  ಅಮ್ಮನನ್ನು ನೋಡಿಕೊಳ್ಳಲು ಹೇಳದ್ದ, ಅವನ ತಂಗಿ ಸುನೀತಾ  ಸಹ ಅಮ್ಮನ ಸುದ್ಧಿ ಕೇಳಿ ಊರಿಗೆ ಹೋಗಿದ್ದಳು. 

ಒಂದು ವಾರ ಆಸ್ಪತ್ರೆಯಲ್ಲಿದ್ದು ಅಲ್ಲಿಯ ಉಪಚಾರದ ನಂತರ ಅಮ್ಮನನ್ನು ಆಸ್ಪತ್ರೆಯಿಂದ ವೀಲ್ ಚೇರಲ್ಲಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಊರಿನ ಮನೆಯಲ್ಲಿ ಇನ್ನು ಅಮ್ಮನ ಚಾಕರಿ ಮಾಡುವುದು ಯಾರು? ಎಂಬ ಪ್ರಶ್ನೆ ನಿರ್ಮಾಣವಾಯಿತು. ಊರಲ್ಲಿ ಇದ್ದ ರಮೇಶನ ಇಬ್ಬರು ಚಿಕ್ನಮ್ಮನವರು ಅವರಿಂದ ಇದು ಸಾಧ್ಯವಾಗದು ಎಂದು ಮೊದಲೇ ತಿಳಿಸಿದರು, ಅವರ ಮಾತು ಸಹ ಸರಿಯಾಗಿತ್ತು, ಮೊದಲೇ ಊರಲ್ಲಿ ರಮೇಶನ ಒಂದು ಮಾವ ಸಹ ಪಕ್ಷವಾತ ಆಗಿ ಹಾಸಿಗೆ ಹಿಡಿದಿದ್ದರು ಹಾಗು ಅವರ ಚಾಕರಿಯ ಭಾರ ಸಹ ಚಿಕ್ಕಮ್ಮನವರ ಮೇಲೆ ಇತ್ತು, ಮೇಲಿಂದ ಚಿಕ್ಕಮ್ಮನವರಿಗೂ ಈಗ ವಯಸ್ಸಾದ ಕಾರಣ ಆ ಕಾಯಿಲೆ, ಈ ಕಾಯಿಲೆ ಎಂಬ ದಿನನಿತ್ಯದ ಗೋಳು, ಅವರು ಯಾವುದೇ ಪರಿಸ್ಥಿತಿಯಲ್ಲಿ ಈ  ಜವಾಬ್ದಾರಿ  ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಬಡ ಪರಿಸ್ಥಿತಿಯಲ್ಲಿದ್ದ ರಮೇಶನ ಅಣ್ಣ ದಿರೇಶ  ತನ್ನ ಸಂಸಾರದಲ್ಲಿ ಮಗ್ನನಾಗಿದ್ದ ಹಾಗು ಅವನಿಂದ ಅಮ್ಮನ ಚಾಕರಿ ಮಾಡುವ ಶಕ್ತಿ ಸಾಮರ್ಥ್ಯ ಇರಲಿಲ್ಲ.  

ಒಬ್ಬನೇ ವಿದೇಶದಲ್ಲಿದ್ದ ರಮೇಶ ತುಂಬಾ ಚಿಂತೆಯಲ್ಲಿದ್ದ  ಹಾಗು ಅಮ್ಮನ ಬಗ್ಗೆ ಯೋಚಿಸಿ ಅಳುತ್ತಿದ್ದ, ಅದರ ಮೇಲೆ ಪತ್ನಿ ಸುಮಾ ಹಾಗು ಮಗನ ಬಗ್ಗೆ ಯೋಚಿಸಿ ಅವನ ಚಿಂತೆ ಹೆಚ್ಚಾಗುತ್ತಿತ್ತು, ಅವರ ವೀಸಾ ಮಾಡಿ ಆಗಿದೆ ಇನ್ನು ಹೇಗೆ ಇಲ್ಲಿ ವಿದೇಶಕ್ಕೆ ಕರೆದುಕೊಂಡು  ಬರುವುದು? ಅಮ್ಮನನ್ನು ಯಾರು ನೋಡುವುದು? ನಾನು ಇಲ್ಲಿ ಕೆಲಸ ಬಿಟ್ಟು ಹೋಗುವ ಹಾಗೆ ಸಹ ಇಲ್ಲ. ಕೆಲಸ ಬಿಟ್ಟರೆ ಭಾರತದಲ್ಲಿ ಜೀವನೋಪಾಯಗೋಸ್ಕರ ಏನು ಮಾಡುವುದು? ಸ್ವಂತ ಮನೆ ಸಹ ಇಲ್ಲ, ಹಣ ಇಲ್ಲದೆ ಅಮ್ಮನ ಚಿಕೆತ್ಸೆಯ ಖರ್ಚು ಎಲ್ಲಿಂದ ತರುವುದು? ಎಂಬ ನೂರಾರು ಪ್ರಶ್ನೆ ಅವನನ್ನು ಕಾಡುತ್ತಿತ್ತು.  

ದುಃಖಿತ ರಮೇಶ  ತನ್ನ  ತಂಗಿ ಸುನೀತಾ ಜೊತೆ ಫೋನಲ್ಲಿ ಮಾತನಾಡಿ ನೀನು  ಈಗ ಅಮ್ಮನನ್ನು  ಮುಂಬೈಗೆ  ಕರೆದುಕೊಂಡು ಹೋಗು, ಅಮ್ಮನ ಚಿಕೆತ್ಸೆಗೆ ಹಾಗು ಅವರ ಎಲ್ಲ ಖರ್ಚು ನಾನು ನಿನಗೆ ಕಳುಹಿಸುತ್ತೇನೆ ಎಂದು ಅತ್ತು ಬೇಡಿದ, ಭಾವಪರವಶವಾಗಿ ಅವನ ಮಾತಿಗೆ ಅವಾಗ ತಂಗಿ ಸುನೀತಾ ಒಪ್ಪಿಗೆ ಸೂಚಿಸಿದಳು  ಹಾಗು  ಯಾವುದೇ  ಹಾದಿ ಇಲ್ಲದೆ ಸುನೀತಾ ಅಮ್ಮನನ್ನು ಮುಂಬೈಗೆ ಕರೆದುಕೊಂಡು ಬಂದಿದ್ದಳು ಹಾಗು ಅಲ್ಲಿ ಅಮ್ಮನ ಉಪಚಾರ ಮಾಡುತ್ತಿದ್ದಳು.

ಆದರೆ ಇಂದು ತಂಗಿ ಸುನೀತಾಳ ಮಾತು ಕೇಳಿ ರಮೇಶ ಪುನಃ ಜೀವನದ ವಿಚಿತ್ರ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿದ. 


(ಮುಂದುವರಿಯುತ್ತದೆ) 

by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...