Friday, October 23, 2020

ಕಂಡೆ ನಾನು ಕಂಡೆ



ಕಂಡೆ ನಾನು ಕಂಡೆ,

ಸ್ವಪ್ನದಲಿ ಅಮ್ಮನ ನವ ಸ್ವರೂಪ ಕಂಡೆ,

ಕಂಡೆ ನಾನು ಕಂಡೆ....


ಪ್ರಥಮ ಸ್ವರೂಪ ಶೈಲಪುತ್ರಿ,

ಈಶ್ವರ ಪತ್ನಿ, ಪರ್ವತ ಪುತ್ರಿ,

ಕಮಲ ಧಾರಿಣಿ ಪಾರ್ವತಿ ಮಾತೆಯೇ,

ಕಂಡೆ ನಾನು ಕಂಡೆ....


ದ್ವಿತೀಯ ಸ್ವರೂಪ ಬ್ರಹ್ಮಚಾರಿಣಿ,

ಒಂದು ಹಸ್ತೇ ಅಕ್ಷಮಾಲೆ, ಇನ್ನೊಂದು ಹಸ್ತೇ ಕಮಂಡಲೇ,

ನಿರಾಹಾರಿ ತಪ್ಪಸ್ವಿನಿ ಮಾತೆಯೇ,

ಕಂಡೆ ನಾನು ಕಂಡೆ....


ತೃತೀಯ ಸ್ವರೂಪ ದೇವಿ ಚಂದ್ರಘಂಟ,

ಅರ್ಧಚಂದ್ರ ಮಸ್ತಕ, ದಶ ಕೈ ವಿಭಿನ್ನ ಅಸ್ತ್ರ, ಖಡ್ಗ,

ಶಾಂತರೂಪಿ ಮಾತೆಯೇ,

ಕಂಡೆ ನಾನು ಕಂಡೆ....


ನಾಲ್ಕನೇ ಸ್ವರೂಪ ಅಮ್ಮ ಕುಶ್ಮಂಡಾ,

ರಚಿಸಿದಳು ಅವಳು ಬ್ರಹ್ಮಾಂಡ,

ದೇವಿ ಆಧಿಶಕ್ತಿ, ಸಿಂಹ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ....


ಐದನೇ ಸ್ವರೂಪ ಸ್ಕಂದಮಾತೆ,

ಶ್ವೇತ ಕಮಲ ಒಂದು ಹಸ್ತೇ, ಮಗ ಕಾರ್ತಿಕೇಯ ಇನ್ನೊಂದು ಹಸ್ತೇ,

ಯಶಶ್ವಿನಿ ತೇಜೋಮಯಿ ದೇವಿ ಮಾತೆಯೇ,

ಕಂಡೆ ನಾನು ಕಂಡೆ....


ಆರನೇ ಸ್ವರೂಪ ಅಮ್ಮ ಕಾತ್ಯಾಯನಿ,

ಉಜ್ಜ್ವಲ ಕಾಂತಿ ರೂಪಿಣಿ, ಸ್ವರ್ಣ ವರ್ಣಿ,

ದಾನವ ವಿನಾಶಿನಿ ಮಾತೆಯೇ,

ಕಂಡೆ ನಾನು ಕಂಡೆ....


ಏಳನೇ ಸ್ವರೂಪ ಅಮ್ಮ ಕಾಲರಾತ್ರಿ, 

ಕರಿ ವರ್ಣಿ,ಆನಂದಮಯಿ, ಸರ್ವ ರಾಕ್ಷಸ ಶಕ್ತಿ ವಿನಾಶಿನಿ, ತ್ರಿನೇತ್ರಿ, 

ಕಾಲರಾತ್ರಿ ಭಯಂಕರೀ ಮಾತೆಯೇ,

ಕಂಡೆ ನಾನು ಕಂಡೆ....


ಎಂಟನೇ ಸ್ವರೂಪ ಅಮ್ಮ ಮಹಾಗೌರಿ,

ಶ್ವೇತ ವರ್ಣಿ, ಶ್ವೇತ ವಸ್ತ್ರ ಧಾರಿಣಿ, ಮಹಾ ತಪಸ್ವಿನಿ,

ವೃಷಭ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ....


ಒಂಬತ್ತನೇ ಸ್ವರೂಪ ಅಮ್ಮ ಸಿದ್ಧಿದಾತ್ರಿ,

ಶಂಖ ಚಕ್ರ ಗದ ಹಸ್ತೇ, ಅಷ್ಟಸಿದ್ಧಿ ಪ್ರಧಾಯಿನೀ,

ಸಿಂಹ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ......


by ಹರೀಶ್ ಶೆಟ್ಟಿ,  ಶಿರ್ವ






Thursday, October 22, 2020

ಭಕ್ತಿರಸ



ಮುಂಜಾನೆ ಮುಂಜಾನೆ ಬೇಗನೆ ಎದ್ದು ವನಕ್ಕೆ ಓಡಿದ,   

ಅಮ್ಮ ಅಮ್ಮ ಜಪಿಸುತ ಸ್ಮರಿಸಿದ,

ವನ ವನ ಸುತ್ತುತಾ ಮಲ್ಲಿಗೆ ಹೂವ ಹುಡುಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಮಲ್ಲಿಗೆ ಮಲ್ಲಿಗೆ ಮುಟ್ಟಿ ಮುಟ್ಟಿ ನೋಡಿದ,

ಶ್ರದ್ಧೆಯಿಂದ ಮೂಸಿ ಮೂಸಿ ನೋಡಿದ,

ಹುಡುಕಿ ಹುಡುಕಿ ಒಳ್ಳೆ ಹೂವ ಹೆಕ್ಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಬೇಗ ಬೇಗ ಮನೆಗೆ ಬಂದು ಹೂವ ಮಾಲೆ ಕಟ್ಟಿದ,

ಸುಂದರ ಸುಂದರ ಮಾಲೆ ತಯ್ಯಾರಿಸಿದ,

ಪದೇ ಪದೇ ಅದನ್ನು ನೋಡಿ ತನ್ನನ್ನು ಹೊಗಳಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಸ್ನಾನ ಪಾನ ಶೀಘ್ರವೇ ಮುಗಿಸಿದ,

ಶುಭ್ರ ಶುಭ್ರ ವಸ್ತ್ರವ ಧರಿಸಿದ,

ಹೂ ಹಣ್ಣು ಹರಿವಾಣದಲ್ಲಿಟ್ಟು ಮನೆಯಿಂದ ತೆರಳಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಎಷ್ಟೋ ದೂರ ನಡೆದು ಅಮ್ಮನ ಮಂದಿರಕ್ಕೆ ಮುಟ್ಟಿದ,

ಅಮ್ಮನ ಗುಡಿ ಸ್ಥಾನ ಶುಚಿಯಾಗಿ ಸ್ವಚ್ಛ ಮಾಡಿದ,

ಅಮ್ಮನ ಮೂರ್ತಿಗೆ ಸ್ನಾನವ ಮಾಡಿಸಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಚಂದನದ ಲೇಪವನ್ನು ಅಮ್ಮನ ಮೂರ್ತಿಗೆ ಹಚ್ಚಿದ,

ಭಕ್ತಿಭಾವದಿಂದ ಗುಡಿಯನ್ನು ಅಲಂಕರಿಸಿದ,

ತಾನು ತಂದ ಮಲ್ಲಿಗೆಯ ಹೂವ ಮಾಲೆ ಶ್ರದ್ದೆಯಿಂದ ಅಮ್ಮನ ಕೊರಳಿಗೆ ಹಾಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ದೀಪ ಧೂಪ ಹಚ್ಚಿ ಗುಡಿ ಬೆಳಗಿಸಿದ,

ತೀರ್ಥ ಮತ್ತು ಹಣ್ಣಿನ ಪ್ರಸಾದ ತಯ್ಯಾರಿಸಿದ,

ಮಂತ್ರ ಪಠನೆ ಮಾಡುತ ಪೂಜೆ ಆರಂಭಿಸಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಹಲವು ಅನ್ಯ ಭಕ್ತರೂ ಬಂದು ಸೇರಿದರು,

ಗಂಟೆ ಚೆಂಡೆಯ ಭಾರಿಸಿ ಭಕ್ತಿಯಲಿ ಮುಳುಗಿದರು,

ಪೂಜೆಯ ಮುಗಿಸಿ ಭಕ್ತ ತೃಪ್ತಿಯ ಉಸಿರೆಳೆದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಕೈ ಮುಗಿದು ಭಕ್ತ ಎಲ್ಲರಿಗೂ ದೇವರಿಂದ ಸುಖ ಬೇಡಿದ,

ಸಾಷ್ಟಾಂಗ ಬಿದ್ದು ಅಮ್ಮನ ಆಶೀರ್ವಾದ ಪಡೆದ,

ಎಲ್ಲರಿಗೆ ತೀರ್ಥ ಪ್ರಸಾದ ಹಂಚಿದ, 

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ.


ಹರೀಶ್ ಶೆಟ್ಟಿ, ಶಿರ್ವ




Wednesday, October 21, 2020

ಎಷ್ಟು ಸುಂದರ ಕಾಣುವೆ ಅಮ್ಮ

 


ಎಷ್ಟು ಸುಂದರ ಕಾಣುವೆ ಅಮ್ಮ,

ನೋಡುವುದು ನನ್ನ ಪುಣ್ಯ,

ಹೆತ್ತ ತಾಯಿ ನೀವೇ ಎಂದು,

ಅಪ್ಪಿಕೊಳ್ಳಲು ಆಸೆ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ಎಷ್ಟು ಜನ್ಮದ ಒಳ್ಳೆತನದ ಫಲವೋ ನಿಮ್ಮನ್ನು ನೋಡುವುದೊಂದು,

ನಿಮ್ಮ ಸಮ್ಮುಖ ಕುಳಿತುಕೊಳ್ಳುವುದು ಮಗುವಾಗಿವೊಂದು,

ನಿಮ್ಮ ಮುಖವನ್ನೇ ನೋಡುತ್ತಿರಬೇಕೆಂಬ ಆಸೆ ನನಗೊಂದು,

ದೂರ ಮಾಡದಿರು ನನ್ನನ್ನು ನೀವು,

ಪಾದದ ಅಡಿಯಲ್ಲಿ ಕುಳಿತುಕೊಳ್ಳಿರುವೆ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ಮಲ್ಲಿಗೆ ಅರಳುವ ಸುಂದರ ನಗುವು ಹೊಟ್ಟೆ ತುಂಬಿಸುತ್ತದೆ, 

ಹುಣ್ಣಿಮೆ ಚಂದ್ರನಂತಹ ಮುಖದ ಕಾಂತಿಯೂ ಭಕ್ತಿ ಏರಿಸುತ್ತದೆ,

ಹಿಂತಿರುಗಿ ನನ್ನನ್ನು ಕಳುಹಿಸದಿರು ನೋಡಿ,

ಅಳುವೇ ನಾನು ನಂತರ,

ಬಿದ್ದಿರುವೆ ನಿಮ್ಮ ಕಾಲ ಅಡಿಯಲಿ, 

ಹೋಗುವುದಿಲ್ಲ ಬಿಟ್ಟು ನಿಮ್ಮನ್ನು,

ಎಷ್ಟು ಸುಂದರ ಕಾಣುವೆ ಅಮ್ಮ....


ಸುಮ್ಮನೆ ಇರುವೆ, ಮಾತಾಡುವುದಿಲ್ಲ ನಾನು, ಆದರೆ ನೋಡುವುದು ಕೇವಲ ನಿಮ್ಮನ್ನು,

ಬೈಯಬೇಡಿ ನನಗೆ, ಕೋಪಿಸದಿರಿ, ಮುಗ್ಧ ಬಾಲೆ ನಾನು,

ನಿಮ್ಮನ್ನೇ ನಂಬಿದ ಮಗು ನಾನು,

ಗತಿಯೇ ನೀವೇ ಅಮ್ಮ,

ನಿಮ್ಮದೊಂದು ಕರುಣೆ ಸಿಕ್ಕಿದರೆ ಸಾಕು, 

ಬೇರೆ ಏನೂ ಬೇಡ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ತುಳು ಸಾಂಗ್ 'ಯೇತ್ ಪೊರ್ಲು ತೋಜುವರಮ್ಮ'

ಅದರ ಕನ್ನಡ ಅನುವಾದ ಮಾಡಿದ್ದೇನೆ.

ತುಳು ಸಾಂಗ್ ರೈಟರ್ : ಗೊತ್ತಿಲ್ಲ, ಕ್ಷಮಿಸಿ 

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Listen Tulu song:

https://youtu.be/8BJ8w8-gtBQ


yeth porlu tojuvaramma

toopinenna punya,

peddi appene eere pand

arant patthare aase yenna,

yeth porlu tojuvaramma,


yeth janmada edendi phalana iren tupinonji,

irena edurude incha kullare baale aad onji,

irena monene tuvondu kullare aase yenk onji,

doora malpa de enaan eer, 

paadada adit kulluve amma,

yeth porlu tojuvaramma....


mallige araluna muguru telkene banjin jinjavundu,

punneme chandrana bolpuda mone bhaktin urkavundu,

kadapudade pira ir enan bulpuve tule bokka

uraluve irena kaardadi,

povayya bokka iren budd yaan,

yeth porlu tojuvaramma...


manpande kulluve

pateruji yaan,

aanda tupini maatra Irene,

nerade eer, kopa malpade, paapadal yaan

iren nambina baale yaan,

gatiye ir amma,

irena onji karune tikknda yaavoo,

bethe daala bodchi amma

yeth porlu tojuvaramma...

------

ಯೇತ್ ಪೊರ್ಲು ತೋಜುವರಮ್ಮ

ತೂಪಿನೆನ್ನ ಪುಣ್ಯ,

ಪೆದ್ದಿ ಅಪ್ಪೆನ್ ಈರೇ ಪಂದ್

ಅರಂಟ್ ಪತ್ಥರ್ ಆಸೆ ಎನ್ನ,

ಯೇತ್ ಪೊರ್ಲು ತೋಜುವರಮ್ಮ,


ಯೇತ್ ಜನ್ಮದ ಎಡ್ಡೆoದಿ ಫಲನ ಇರೆನ್ ತುಪಿನೊಂಜಿ,

ಈರೆನ ಎದುರುದೇ ಇಂಚ ಕುಲ್ಲರೆ ಬಾಲೆ ಆದ್ ಒಂಜಿ,

ಈರೆನ ಮೊನೆನೆ ತುವೊಂದು ಕುಲ್ಲರೆ ಆಸೆ ಎಂಕ್ ಒಂಜಿ

ದೂರ ಮಲ್ಪಡೇ ಏನಾನ್ ಇರ್, 

ಪಾದದ ಅಡಿಟ್ ಕುಲ್ಲುವೆ ಅಮ್ಮ,

ಯೇತ್ ಪೊರ್ಲು ತೋಜುವರಮ್ಮ,


ಮಲ್ಲಿಗೆ ಅರಳುನ ಮೂಗೂರು ತೆಳ್ಕೆನ್ ಬಂಜಿನ್ ಜಿಂಜವುಂಡು,

ಪುನ್ನೆಮ್ ಚಂದ್ರನ ಬೊಲ್ಪುದ ಮೊನೆ ಭಕ್ತಿನ್ ಉರ್ಕವುಂಡು,

ಕಡಪುಡದೆ ಪಿರ ಇರ್ ಏನನ್, ಬಲ್ಪುವೆ ತೂಲೆ ಬೊಕ್ಕ,

ಉರಳುವೆ ಈರೆನ ಕಾರ್ ದಡಿ,

ಪೋವಯ್ಯಾ ಬೊಕ್ಕ ಇರೆನ್ ಬುಡ್ದ್ ಯಾನ್,

ಯೇತ್ ಪೊರ್ಲು ತೋಜುವರಮ್ಮ,


ಮನಿಪಂದೆ ಕುಲ್ಲುವೆ

ಪಾತೆರುಜಿ ಯಾನ್,

ಆಂಡ ತೂಪಿನಿ ಮಾತ್ರ ಇರೆನ್,

ನೆರಡೇ ಇರ್, ಕೋಪ ಮಲ್ಪಡೇ, ಪಾಪದಲ್ ಯಾನ್,

ಇರೆನ್ ನಂಬಿನಾ ಬಾಲೆ ಯಾನ್,

ಗತಿಯೇ ಇರ್ ಅಮ್ಮ,

ಈರೆನ ಒಂಜಿ ಕರುನ್ ತಿಕಂಡ ಯಾವೂ,

ಬೇತೆ ದಾಲ ಬೋಡಚಿ ಅಮ್ಮ,

ಯೇತ್ ಪೊರ್ಲು ತೋಜುವರಮ್ಮ.....

Tuesday, October 20, 2020

ಹಾಡುವೆ ನಾ ಹಾಡುವೆ


 

ಹಾಡುವೆ ನಾ ಹಾಡುವೆ,

ಅಮ್ಮ ನಿನ್ನ ಭಕ್ತಿ ಗೀತೆ ಹಾಡುವೆ,

ನಿನ್ನ ಹೊಗಳುತ್ತ ನಮಿಸುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನನ್ನು ಸ್ಮರಿಸದೆ ಕಣ್ಣುತೆರಯಲಾಗುವುದಿಲ್ಲ,

ನಿನ್ನನ್ನು ನೋಡುವ ತನಕ ಮನಸ್ಸಿಗೆ ನೆಮ್ಮದಿ ಇಲ್ಲ,

ಪ್ರಾತಃಕಾಲ ಸ್ನಾನ ಮುಗಿಸಿ ನಿನ್ನ ಮಂದಿರಕ್ಕೆ ಓಡುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನನ್ನು ಸಿಂಗಾರಿಸುವುದರಲ್ಲಿ ಅಯ್ಯೋ ನಾನು ಪಡೆಯುವೆ ಸಂತೋಷ ಎಷ್ಟು,

ದೀಪ ಬೆಳೆಗಿಸಿದ ನಂತರ ಅಯ್ಯೋ ನಿನ್ನ ರೂಪ ಕಾಣುವುದು ಸುಂದರ ಎಷ್ಟು,

ಹೂ ಹಣ್ಣು ಅರ್ಪಿಸಿ ಪೂಜೆಯ ಮಾಡುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನ ದಾಸ ನಾನು ನನ್ನ ತಪ್ಪನ್ನು ಕ್ಷಮಿಸು ನೀನು,

ನಿನ್ನ ಸಾನಿಧ್ಯ ಕೇವಲ ಸಿಗಲಿ ಬೇಡ ನನಗೆ ಹಾಲು ಜೇನು,

ನನ್ನ ಸರ್ವಸ್ವ ಅರ್ಪಿಸಿ ನಿನ್ನ ಪಾದ ಸೇವೆ ಮಾಡುವೆ,

ಹಾಡುವೆ ನಾ ಹಾಡುವೆ....


ನಿನ್ನ ಭಕ್ತಿ ಗೀತೆ ಹಾಡದೆ ಮನಸ್ಸಿಗೆ ತೃಪ್ತಿ ಸಿಗದು,

ದಿನನಿತ್ಯ ಹಾಡುವುದು ಎಂಥ ಅದ್ಭುತ ಯೋಗ ನನ್ನದು,

ನಿನ್ನ ಕರುಣೆಯಿಂದಲಿ ನಾನು ಬದುಕಿರುವೆ,

ಹಾಡುವೆ ನಾ ಹಾಡುವೆ....


ಸಂಸಾರದಲ್ಲಿ ಇದ್ದಲ್ಲಿ ಕಷ್ಟ ಸುಖಗಳು ಬರುವುದು ಸಹಜ,

ನಿನ್ನ ಕೃಪೆಯಿಂದಲಿ ಸಾಗುತ್ತಿದೆ ಬದುಕು ಸಹಜ,

ಏನೋ ಪುಣ್ಯ ಮಾಡಿರುವೆ,

ಹಾಡುವೆ ನಾ ಹಾಡುವೆ....


by ಹರೀಶ್ ಶೆಟ್ಟಿ, ಶಿರ್ವ


Monday, October 19, 2020

ಅಮ್ಮ ನೀ ಇಳಿದು ಬಾ ಧರೆಗೆ


 

ಅಮ್ಮ ನೀ ಇಳಿದು ಬಾ ಧರೆಗೆ,

ನಿನ್ನ ಪ್ರೀತಿಯ ಭಕ್ತರ ಕೋರಿಕೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಭೂಮಿಯಲಿ ದುಷ್ಟರ ಹಾವಳಿ ಹೆಚ್ಚಾಗುತ್ತಿದೆ,

ಸತ್ಯವಂತರಿಗೆ ಬದುಕು ಕಷ್ಟವಾಗುತ್ತಿದೆ,

ಸ್ಪಂದಿಸು ನಮ್ಮ ಈ ಮೊರೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ದುರ್ಜನರು ತಿಂದು ಉಂಡು ತೇಗುತ್ತಿದ್ದಾರೆ,

ಸಜ್ಜನರು ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ,

ಬೆಲೆ ಇಲ್ಲ ಈ ಕಲಿಯುಗದಲ್ಲಿ ಅವರ ಸತ್ಯ ಮಾತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾಲೆಯರ ಮೇಲೆ ಅತ್ಯಾಚಾರ ನಡೆಯುವುದು ಮಾಮೂಲಿಯಾಗಿದೆ,

ನ್ಯಾಯದ ಕಣ್ಣು ಕುರುಡಾಗಿದೆ,

ಸ್ಪಂದಿಸು ಹೆಣ್ಣು ಮಕ್ಕಳ ಈ ಕೂಗಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ನ್ಯಾಯ ಸಿಗದೇ ಮನುಜ ಚಡಪಡಿಕೆಯಲಿ,

ನ್ಯಾಯ ಮಾಡುವವರು ನೀಚರ ಒತ್ತಡದಲ್ಲಿ,

ಮನುಜ ಇನ್ನೆಲ್ಲಿಗೆ ಹೋಗುವುದು ಫಿರ್ಯಾದು ನೀಡೋಕ್ಕೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾ ಬೇಗ ದುಷ್ಟರ ನೀ ಸಂಹಾರ ಮಾಡು,

ಸಜ್ಜನರ ಸಂಕಟ ದೂರ ಮಾಡಿ ಉದ್ಧಾರ ಮಾಡು,

ಕೃಪೆ ತೋರು ನೀತಿವಂತರ ಈ ವಿನಂತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


by ಹರೀಶ್ ಶೆಟ್ಟಿ, ಶಿರ್ವ


Photo : Google





Sunday, October 18, 2020

ಶರಣು ನಾನು ಅಮ್ಮ

 


ಶರಣು ನಾನು ಅಮ್ಮ,

ನಿನ್ನ ಶರಣು ನಾನಮ್ಮ,

ನಿನ್ನ ಪಾದದಲ್ಲಿ ನನ್ನ ಶಿರವನು ಇಟ್ಟು ವಂದಿಸುವೆ ನಾನಮ್ಮ,

ನಿನ್ನ ಶರಣು ನಾನಮ್ಮ,


ನಿನ್ನ ಸ್ವರೂಪದಿ ತಾಯಿಯನ್ನು ನೀಡಿದೆ,

ಭೂಮಿಗೆ ತಂದು ಕಣ್ಣನು ತೆರೆಸಿದೆ,

ಪ್ರಥಮ ನೋಟದಲ್ಲಿಯೇ ನೀನು ಹೃದಯದಲಿ ನೆಲೆಸಿದೆ ಅಮ್ಮ,

ನಿನ್ನ ಶರಣು ನಾನಮ್ಮ,


ಬಾಲ್ಯದ ಕೃಷ್ಣ ತುಂಟಾಟದಲಿ ಅಮ್ಮನನು ನೋಡಿ ನಾನೂ ಕೈ ಮುಗಿದೇ,

ಪಾದಕ್ಕೆ ನಿನ್ನ ಅಡ್ಡವ ಬಿದ್ದೆ,

ನಿನ್ನ ಪ್ರಸಾದ ಕದ್ದು ತಿಂದೇ ಅಮ್ಮ,

ನಿನ್ನ ಶರಣು ನಾನಮ್ಮ,


ಯೌವನದಲ್ಲಿ ನಿನ್ನ ಆಶೀರ್ವಾದದಿಂದ ಜ್ಞಾನ, ಬುದ್ದಿಯ ಪಡೆದೆ,

ಸತ್ಯ ಸುಳ್ಳಿನ ಭೇದವ ತಿಳಿದೇ,

ನಿನ್ನ ದಯೆಯಿಂದಲೇ ಸಂಸಾರ ಕಟ್ಟಿದೆ ಅಮ್ಮ,

ನಿನ್ನ ಶರಣು ನಾನಮ್ಮ


ದುಃಖದ ಸಮಯದಲ್ಲಿ ನೀನಿದ್ದೆ ಹಿಂದೆ,

ಸುಖದಲ್ಲಿ ನೀನಿನ್ನೂ ಬಳಿ ಬಂದೆ,

ನಿನ್ನ ಭಕ್ತಿಯಿಂದಲೇ ಬದುಕ ಬಂಡಿ ಸಾಗಿತಮ್ಮ,

ನಿನ್ನ ಶರಣು ನಾನಮ್ಮ,


ಕಷ್ಟದಲಿ ತಾಳ್ಮೆ ಧೈರ್ಯ ನಿನ್ನಿಂದಲೇ ಕಲಿತೆ,

ಜೀವನದ ಸಂತೋಷ ನಿನ್ನಿಂದಲೇ ಪಡೆದೆ,

ನಿನ್ನ ಸ್ಮರಣೆಯಿಂದಲೇ ಕಷ್ಟ ಓಡುತ್ತದೆ ಅಮ್ಮ,

ನಿನ್ನ ಶರಣು ನಾನಮ್ಮ,


by ಹರೀಶ್ ಶೆಟ್ಟಿ, ಶಿರ್ವ

Saturday, October 17, 2020

ನಂಬಿದೆ ಅಮ್ಮ ನಿನ್ನ ನಂಬಿದೆ


 

ನಂಬಿದೆ ಅಮ್ಮ ನಿನ್ನ ನಂಬಿದೆ,

ದುರ್ಗಾ ಪರಮೇಶ್ವರಿ ಅಮ್ಮ ನಿನ್ನ ನಂಬಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಮಮತೆಯ ರೂಪ ನೀನು ಅಂಬಿಕೆ,

ಸತ್ಯದ ಸ್ವರೂಪ ನೀನು ಅಂಬಿಕೆ,

ವರ ನೀಡುವ ಶಕ್ತಿ ನಿನ್ನಲ್ಲಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ನವರಾತ್ರಿಯ ಈ ಒಂಬತ್ತು ದಿನವೂ,

ಭಕ್ತರ ಪಾಲಿಗೆ ಇದು ಉತ್ಸಾಹದ ಸಂಭ್ರಮವೂ, 

ಮನೆ ಮನೆಯಲಿ ನಿನ್ನ ಪೂಜೆ ನಡೆಯುತ್ತದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಲೋಕದ ಏಳಿಗೆ ಕೇವಲ ನಿನ್ನಿಂದಲೇ,

ದುಷ್ಟ ಶಕ್ತಿಯ ನಾಶ ಕೇವಲ ನಿನ್ನಿಂದಲೇ,

ಭಕ್ತರ ಶ್ರದ್ಧೆ ನಿನ್ನಲ್ಲಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಕಲ್ಯಾಣಕಾರಿ ನೀನು ಜಗದಂಬಿಕೆ,

ಮಾರ್ಗದರ್ಶಿನಿ ನೀನು ಜಗದಂಬಿಕೆ,

ಅಪ್ರತಿಮ ತೇಜಸ್ಸು ನಿನ್ನ ಮುಖದಲ್ಲಿದೆ

ನಂಬಿದೆ ಅಮ್ಮ ನಿನ್ನ ನಂಬಿದೆ


by ಹರೀಶ್ ಶೆಟ್ಟಿ, ಶಿರ್ವ



Friday, October 16, 2020

ಅಮ್ಮ ನಿನ್ನ


ಅಮ್ಮ ನಿನ್ನ ಮನೆಗೆ ಬಂದು,

ಅದೆಷ್ಟು ಸಂತೋಷ ಎನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಕೋಟಿ ಸಂಪತ್ತು ಇದ್ದರೂ 

ಮಿತಿಯಿಲ್ಲ ಯಾಕೆ ಆಸೆಗೆ,

ಎಷ್ಟು ಪಡೆದರೂ 

ಇನ್ನು ಬೇಕು ಎಂಬ ಯಾಕೆ ಬಯಕೆ,

ತೃಪ್ತಿ ಇಲ್ಲ ಯಾಕೆ ಈ ಮನಸ್ಸಿಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಸಂಬಂಧ, ಬಂಧ, ಅನುಬಂಧ 

ಬರಿ ಒಂದು ಮಾಯೆ ಮೋಹ,

ಕಷ್ಟ ಬಂದಾಗ 

ಯಾರೂ ಬರುವುದಿಲ್ಲ ಸನಿಹ,

ನಿನ್ನ ಹೆಸರು ಜಪಿಸುವುತ್ತಲೇ 

ಸಿಗುತ್ತದೆ ಮಾರ್ಗ ನನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಜೀವನದಲ್ಲಿ ಎಲ್ಲಾ ಪಡೆದದ್ದು 

ಆಶೀರ್ವಾದದಿಂದ ನಿನ್ನ,

ಸದಾ ಸತ್ಯದ ಪಥದಲ್ಲಿ ನಡೆಯುವೆ 

ಎಂಬ ಸಂಕಲ್ಪ ನನ್ನ,

ನಿನ್ನ ದಯೆ ಇಲ್ಲದೆ 

ಏನು ಬೆಲೆ ನನ್ನ ಬದುಕಿಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಸುಖ ಕಷ್ಟದಲ್ಲಿ 

ಕೇವಲ ನಿನ್ನದೇ ಆಸರೆ,

ಆಪತ್ತು ವಿಪತ್ತಿನಲ್ಲಿ 

ಶರಣು ನಿನ್ನ ಮೊರೆ,

ಸಂಕಟದಲ್ಲಿ ನೀನಲ್ಲದೆ 

ಬೇರೆ ಯಾರ ನೆನಪು ಬರುವುದಿಲ್ಲ ನನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


by ಹರೀಶ್ ಶೆಟ್ಟಿ, ಶಿರ್ವ



Thursday, October 15, 2020

ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ

 


ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ,

ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಾನೆ,

ಭೀಕರ ಕಾಡು ಬರಿ ಸಾಧಾರಣ ಕಾಡಾಗಿ ಪರಿವರ್ತಿಸಿದೆಯಲ್ಲ ಎಂದು ಕಣ್ಣೀರು ಬಿಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಈಗ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ,

ಎಷ್ಟೇ ಪ್ರಾಣಿಗಳ ಸಂತಾನವೇ ಮುಗಿದೋಗಿದೆ,

ಬೃಹತ್ ಮೌಲ್ಯವಾನ ಮರಗಳು ಕಡಿದೋಗಿದೆ,

ಕೆಲವೇ ನದಿಗಳು ಉಳಿದಿದೆ,

ನಮ್ಮ ಸುಂದರ ಕಾಡು ಬಂಜರವಾಗುತ್ತಿದೆಯೆಂದು ಚಿಂತಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಜಿಂಕೆಗಳ ಓಡಾಟ ನೋಡಿ ಎಷ್ಟೋ ವರುಷ ಆಗಿದೆ,

ಆನೆಯ ಗುಂಪು ಕಾಣದಂತಾಗಿದೆ,

ಬಲಶಾಲಿ ಸಿಂಹ ನೋಡಿ ಎಷ್ಟೋ ಸಮಯ ಕಳೆದಿದೆ,

ಕಾಗೆಯ ತಂಡ ಸಹ ಆಹಾರಕ್ಕಾಗಿ ಪಟ್ಟಣ ಹೋಗಿದೆ,

ನೀಚ ನರಿಯೂ ಮಾಯವಾಗಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಯಾಕೆ ನಾವು ಪ್ರಾಣಿಗಳ ಮೇಲೆ ಈ ಹಿಂಸೆ?

ಎಲ್ಲಿದೆ ಪ್ರಾಣಿಗಳ ಪರವಾಗಿ ಕೆಲಸ ಮಾಡುವ ಸಂಸ್ಥೆ?

ಇನ್ನೇನು ನಾವು ಪ್ರಾಣಿಗಳು ಕಲಿಸಬೇಕೇ ಮಾನವನಿಗೆ ಅಹಿಂಸೆ?

ಯಾಕೆ ಕೆಡಿಸುವಿರಿ ಕಾಡಿನ ಶಾಂತತೆ?

ಹತಾಶ ವ್ಯಾಘ್ರ ಪ್ರಶ್ನಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಓ ದೇವರೇ ನಮ್ಮ ಕಾಡನ್ನು ಬೆಳೆಸಿ,

ಮಾನವರೇ ನಮ್ಮ ಕಾಡನ್ನು ಉಳಿಸಿ,

ನಿಮ್ಮಿಂದ ಬೇಕು ಕೇವಲ ಒಂದು ಗಿಡದ ಸಸಿ,

ಒಂದು ಗಿಡ ನೆಟ್ಟು ಕಾಡು ಉಳಿಸಿ ಕಾಡು ಬೆಳೆಸಿ,

ನಮ್ಮ ಮನೆಯನ್ನು ಧ್ವಸ್ತ ಮಾಡಬೇಡಿ ಎಂದು ವ್ಯಾಘ್ರ ಬೇಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ.


by ಹರೀಶ್ ಶೆಟ್ಟಿ, ಶಿರ್ವ





Wednesday, October 14, 2020

ಶಕ್ತಿ ಕೊಡು ಅಮ್ಮ

 





ಈ ನವರಾತ್ರಿಯಲ್ಲಿ 

ಭಕ್ತಿಭಾವದಿಂದ ಪೂಜಿಸುವೆ ನಿನ್ನನ್ನು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಅಜ್ಞಾತ ದುಷ್ಟ ಶಕ್ತಿ ಪೀಡಿಸುತ್ತಿದೆ, 

ನಮ್ಮ ಮೈಮನಸ್ಸು ಕೆಡಿಸಿದೆ, 

ಇದರ ಸಂಹಾರ ಮಾಡಿ ನವ ಚೈತನ್ಯ ನೀಡು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ವಿಕಟ ಪರಿಸ್ಥಿತಿ ಬಂದು ಒದಗಿದೆ,

ಬದುಕು ನೀರಸ ಆಗಿದೆ,

ಜೀವನಕ್ಕೆ ಅರ್ಥ ಕೊಟ್ಟು ನವರಸ ನೀಡು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಖಾಲಿ ಹಾಳೆಯಂತೆ ಈಗ ಮನಸ್ಸು,

ರಂಗಹೀನ ಈಗ ಬದುಕು,

ರಂಗಮಯ ಮಾಡು ಜೀವನ ನವರಂಗ ಸುರಿಸಿ ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಬೇಡುವೆ ನಾನಮ್ಮ,

ವರದಾನ ನೀಡಮ್ಮ,

ಈ ನವ ದಿನದಲಿ ನವ ಸ್ವರೂಪ ತೋರಿಸಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ.


by ಹರೀಶ್ ಶೆಟ್ಟಿ,  ಶಿರ್ವ


Photo courtesy:kateel.in

Tuesday, October 13, 2020

ಮಧುರ ಮಧುರ ಸುಂದರ



ಮಧುರ ಮಧುರ ಸುಂದರ,

ಎಷ್ಟು ಸುಮಧುರ ನುಡಿ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಕರಂದದ ಸಿಹಿತನ

ಹೃದಯದ ಮಾತಿನಲಿ ನಿನ್ನ,

ನುಡಿಯುವ ಆ ಲಯದಲಿ

ನರ್ತಿಸುತ್ತದೆ ಕಂಗಳು ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಒಲವು ನಮ್ಮ ಬೆಳೆದಿದೆ

ಪ್ರೀತಿಯ ಮಾತಿನಿಂದ ನಿನ್ನ,

ಸಕ್ಕರೆ ಬೆಲ್ಲ ಯಾಕೆ ಬೇಕು

ಸಿಹಿ ಸವಿಯುವೆ ನಾನು ನುಡಿಯಿಂದ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಾತಾಡುವಾಗ ಅದೆಷ್ಟು ಮೋಹಕ 

ಮೊಗದ ಭಾವ ನಿನ್ನ,

ಮುಖದಲ್ಲಿ ಮೂಡುವ 

ಮುದ್ದು ನಗು ಎಷ್ಟು ಚೆನ್ನ

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


ಒಂದು ವೇಳೆ ನೀನು ಮೌನ ಇದ್ದಲ್ಲಿ,

ಮನಸ್ಸ ಸಾಗರದಲ್ಲಿ ಕಳವಳ ನನ್ನ,

ಏನೋ ಬೇಸರ ಮನಸಲಿ,

ಹೃದಯದಲಿ ಅಲೆಗಳು ನೋವಿನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


by ಹರೀಶ್ ಶೆಟ್ಟಿ, ಶಿರ್ವ



Photo : Google


Monday, October 12, 2020

ಹೂ ಕಾಗದದ ಹೂ

 


ಹೂ ಕಾಗದದ ಹೂ,

ನೀ ಕೊಟ್ಟ ಕಾಗದದ ಹೂ,

ಗುಲಾಬಿ ಬಣ್ಣದ ಕಾಗದದ ಹೂ,

ಹೂ ಕಾಗದದ ಹೂ.....


ಹೃದಯ ಮಿಡಿಸಿದ ಕಾಗದದ ಹೂ,

ಮೌನ ಮುರಿದ ಕಾಗದದ ಹೂ,

ಸಂಭಾಷಣೆ ಪ್ರಾರಂಭಿಸಿದ ಕಾಗದದ ಹೂ,

ನಿನ್ನೊಪ್ಪಿಗೆಯ ಕಾಗದದ ಹೂ,

ಹೂ ಕಾಗದದ ಹೂ.....


ಪ್ರಥಮ ಭೇಟಿಯ ಕಾಗದದ ಹೂ,

ನಮ್ಮ ಮಿಲನದ ಕಾಗದದ ಹೂ,

ಆತ್ಮೀಯತೆ ಬೆಳೆಸಿದ ಕಾಗದದ ಹೂ,

ಹಿಂಜರಿಕೆ ಮರೆಸಿದ ಕಾಗದದ ಹೂ,

ಹೂ ಕಾಗದದ ಹೂ.....


ನಿನ್ನೊಲವಿನ ಕಾಗದದ ಹೂ,

ಬಂಧ ಬೆಸೆದ ಕಾಗದದ ಹೂ,

ಖುಷಿ ತಂದ ಕಾಗದದ ಹೂ,

ಹೊಸ ಆರಂಭದ ಕಾಗದದ ಹೂ,

ಹೂ ಕಾಗದದ ಹೂ.....


ನನ್ನನ್ನು ಕವಿ ಮಾಡಿದ ಕಾಗದದ ಹೂ,

ಕವನ ಬರೆಸಿದ ಕಾಗದದ ಹೂ,

ನಿದ್ದೆ ಮರೆಸಿದ ಕಾಗದದ ಹೂ,

ಹಗಲು ಕನಸು ಕೊಟ್ಟ ಕಾಗದದ ಹೂ,

ಹೂ ಕಾಗದದ ಹೂ.....


by ಹರೀಶ್ ಶೆಟ್ಟಿ, ಶಿರ್ವ

Sunday, October 11, 2020

ಮಾನವ ಪರಿಸ್ಥಿತಿಯ ಕೈಗೊಂಬೆ



ಮಾನವ ಪರಿಸ್ಥಿತಿಯ ಕೈಗೊಂಬೆ,

ದಿನನಿತ್ಯ ನೂರಾರು ಸವಾಲುಗಳು ಅವನ ಮುಂದೆ,

ಹುಟ್ಟು ಸಾವಿನ ಮಧ್ಯೆ ಬದುಕೊಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಸ್ಥಿತಿಗಳು ಅವನು ಎನಿಸುವಂತೆ ಒದಗುವುದಿಲ್ಲ,

ಪರಿಶ್ರಮ ತಕ್ಕ ಅವನು ಪಡೆಯುವುದಿಲ್ಲ,

ಯೋಚಿಸಿದ್ದು ಆಗುವುದಿಲ್ಲ, ಆಗುವುದು ಇನ್ನೊಂದೇ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬಾಲ್ಯ ಸಾಗುತ್ತದೆ ಮಮತೆಯಲ್ಲೇ,

ಯೌವನ ಕಳೆದೋಗುತ್ತದೆ ಬದುಕನ್ನು ಅರ್ಥೈಸುವುದಲ್ಲೇ,

ಜೀವನ ಒಂದು ಹೋರಾಟ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಕಲ್ಲು ಮುಳ್ಳು ಅದೆಷ್ಟೋ ಅಡಚಣೆ,

ಇದೇ ಬದುಕಿನಾಟ ಮನೆ ಮನೆ, 

ವಿಧಿಯ ಶರಣ ಮಕ್ಕಳು ತಾಯಿ ತಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನ ಒಂದು ರಂಗಮಂಚ,

ನಟಿಸಿದಂತೆ ಚಿತ್ರ ಬಿಡಿಸುತ್ತಲೇ ಹೋಗುತ್ತದೆ ಕುಂಚ,

ಶರಣು ನಾವು ಆ ಚಿತ್ರಕಾರನ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬದುಕಿನ ಓಡಾಟದಲ್ಲಿ ಸೋಲು ಗೆಲುವು

ಸಾಧನೆ ಮಾಡುವುದು ನಮ್ಮ ಧರ್ಮವು, 

ಮಾಡಿದ ಕರ್ಮ ಹಿಂಬಾಲಿಸುತ್ತದೆ ಹಿಂದೆ ಹಿಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನದ ದೊಂಬರಾಟದಲ್ಲಿ,

ನಮ್ಮ ನಿಯಂತ್ರಣ ಇರುವುದು ಸೃಷ್ಟಿಕರ್ತನ ಕೈಯಲ್ಲಿ,

ಒಂದು ಎಲೆಯೂ ಅಲುಗದು ಅವನ ಅಪ್ಪಣೆಯಿಲ್ಲದೆ,

ಮಾನವ ಪರಿಸ್ಥಿತಿಯ ಕೈಗೊಂಬೆ.


by ಹರೀಶ್ ಶೆಟ್ಟಿ, ಶಿರ್ವ

Saturday, October 10, 2020

ವಿರಹ


ರಾಧೆಯ ವ್ಯಥೆ ನೋಡಿ ನೊಂದುಕೊಳ್ಳುತ್ತಿದ್ದ ಕೃಷ್ಣ,

ಕಣ್ಣೀರು ಅಡಗಿಸಿ ಅಳುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಕೃಷ್ಣ ಅಂದರೆ ಪ್ರೀತಿಯ ಪರಾಕಾಷ್ಠ,

ಕೃಷ್ಣನ ಪ್ರೀತಿಯಲ್ಲೂ ಅವಳಿಗಿತ್ತು ಪೂರ್ಣ ನಿಷ್ಠ,

ರಾಧೆಯ ಭಾವನೆ ಅರಿತು ಅರಿಯದಂತೆ ನಟಿಸುತ್ತಿದ್ದ ಕೃಷ್ಣ

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪಾದದಲ್ಲಿ ರಾಧೆ ಪಡೆಯುತ್ತಿದ್ದಳು ಸ್ವರ್ಗದ ಹಿತ,

ಕೃಷ್ಣನ ಹೆಸರು ಕೇಳುತ್ತಲೆ ಸಂಗೀತಮಯ ಅವಳ ಹೃದಯದ ಮಿಡಿತ,

ರಾಧೆಯ ಪ್ರೀತಿಯ ಜ್ವಾಲೆಯಲಿ ಉರಿಯುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಗೊತ್ತಿತ್ತು ಕೃಷ್ಣನ ಅಸಹಾಯಕತೆ,

ಅವನ ನಟನೆ ನೋಡಿ ಅವಳೂ ನಟಿಸುತ್ತಿದ್ದಳು ಅರಿವಿಲ್ಲದಂತೆ,

ರಾಧೆಯ ವೇದನೆಗೆ ಮುರಳಿ ನಾದದ ಹಿತ ನೀಡುತ್ತ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪ್ರತಿ ಅವಳಿಗೆ ಇತ್ತು ಅಪಾರ ನಂಬಿಕೆ, 

ಅವನ ಎಲ್ಲಾ ಮಾತಿಗೆ ಅವಳ ಇತ್ತು ಸಮ್ಮತೆ,

ರಾಧೆಯ ಮುಗ್ದ ಮನಸ್ಸಿಗೆ ಸೋತು ಹೋಗುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಯಮುನೆಯ ತಟದಲ್ಲಿ ಹರಿದು ಬರುತ್ತಿತ್ತು ರಾಧೆಯ ಕಣ್ಣೀರ ಸಾಗರ,

ವೇದನೆಯಿಂದ ಅವಳ ಆಗುತ್ತಿತ್ತು ಹೃದಯ ಭಾರ ಭಾರ,

ಎಲ್ಲಾ ನೋಡಿಯೂ ಅಸಹಾಯಕನಂತೆ ವರ್ತಿಸುತ್ತಿದ್ದ ತ್ರಿಲೋಕದರ್ಶಿ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಅಲ್ಪ ಸಮಯದ ಭೇಟಿ ರಾಧೆಗೆ ನೀಡುತ್ತಿತ್ತು ತೃಪ್ತಿ ಕಿಂಚಿತ,

ಹಸನ್ಮುಖ ಇರುತ್ತಿದ್ದ ಕೃಷ್ಣ ತನ್ನ ನೋವು ಅಡಗಿಸುತ ಅವಳ ಸಮ್ಮುಖ,

ರಾಧೆಯನ್ನು ನೋಡಿ ಅಯ್ಯಯ್ಯೋ ಎನ್ನುತ್ತಿತ್ತು ಅವನ ಚಿತ್ತ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


by ಹರೀಶ್ ಶೆಟ್ಟಿ, ಶಿರ್ವ


 

Friday, October 9, 2020

ಅಮ್ಮ ನೀನು


ಅಮ್ಮ ನೀನು ಕಣ್ಣು ತೆರೆದು ನೋಡು,

ಬದುಕನ್ನು ಪುನಃ ಸಾಮಾನ್ಯವಾಗಿ ಸಾಗಿಸುವಂತೆ ಮಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಜೀವನದಲಿ ತಿಳಿಯದ ಸಂಕಟ ಬಂದು ಒದಗಿದೆ,

ಬದುಕು ನಿಂತೋಗಿದಂತೆ ಆಗಿದೆ,

ಯಾರು ಹೊಣೆಗಾರ ಗೊತ್ತಿಲ್ಲ ಎನಗೆ,

ಜನರ ಅವಸ್ಥೆ ತಿಳಿದಿದ್ದೆ ನಿನಗೆ, 

ಕ್ಷಮಿಸಿ ನಮ್ಮ ತಪ್ಪನ್ನು ದಯವನ್ನು ತೋರು,

ಅಮ್ಮ ನೀನು ಕಣ್ಣು ತೆರೆದು ನೋಡು,


ಕಷ್ಟದಲ್ಲಿ ನೀನೆ ನಮ್ಮ ಆಧಾರ,

ಪೂಜಿಸಿವರು ನಿನ್ನನ್ನು ದಿನ ನಿತ್ಯ ನೀನೆ ಮಾಡು ನಮ್ಮ ಉದ್ಧಾರ,

ಭಕ್ತರು ಮಾಡುವರು ನಿನಗೆ ವಿಶೇಷ ಪೂಜೆ ಪ್ರತಿ ಶುಕ್ರವಾರ,

ಕೈ ಮುಗಿದು ಮಾಡುವರು ನಿನ್ನ ಸಾಕ್ಷಾತ್ಕಾರ,

ನಂಬಿಕೆಯನ್ನು ನಮ್ಮ ನೀನೆ ಇನ್ನು ಕಾಪಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಹೂ ಹಣ್ಣು ನಿನಗೆ ಅರ್ಪಣೆ,

ಅಮ್ಮ ನಿನಗೆ ಮಲ್ಲಿಗೆ ಹೂವಿನ ಸಿಂಗಾರ ಸಮರ್ಪಣೆ,

ನಿನ್ನ ದೀಪದಿಂದ ಬೆಳಗಲಿ ಮನೆ ಮನೆ,

ಭಕ್ತಿ ಭಾವದಿಂದ ಬೇಡುವರು ಸುಖ ಶಾಂತಿಯನ್ನೇ,

ನಿನ್ನ ಒಲವಿನ ಆಸೆಯಲ್ಲಿದ್ದೇವೆ ನಾವು ನೋಡು,

ಅಮ್ಮ ನೀನು ಕಣ್ಣು ತೆರೆದು ನೋಡು.


by ಹರೀಶ್ ಶೆಟ್ಟಿ,ಶಿರ್ವ


Wednesday, October 7, 2020

ಬಾಲ್ಯದ ದಿನ






ಹೇಗೆ ಮರೆಯಲಿ ಆ ದಿನ,

ಸರಳ ಮುಗ್ಧ ಬಾಲ್ಯದ ದಿನ,


ಮಾವಿನ ಮರದ ಅಡಿಯಲ್ಲಿ ಆಡುತ್ತಿದ್ದ ದಿನ,

ಸಮುದ್ರದ ತೀರದಲ್ಲಿ ಮರಳು ಮನೆ ಕಟ್ಟುತ್ತಿದ್ದ ದಿನ,

ಅಳುತ ನಗುತ ಮುನಿಸಿ ಶಾಲೆಗೆ ಹೋಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಸಾಬೂನಿನ ನೀರಿನ ಗುಳ್ಳೆ ಬಿಡುವ ದಿನ,

ಕ್ಲಾಸ್ಸಲ್ಲಿ ಕಾಗದದ ವಿಮಾನ ಮಾಡಿ ಎಸೆಯುವ ದಿನ,

ತೆಂಗಿನ ಮರದ ಎಲೆಯಿಂದ ವಿವಿಧ ಆಟಿಕೆ ಮಾಡುವ ದಿನ,

ಹೇಗೆ ಮರೆಯಲಿ ಆ ದಿನ,


ಸೈಕಲ್ ಟೈಯರ್ ಚಡಿಯಿಂದ ಓಡಿಸುತ್ತಿದ್ದ ದಿನ,

ತೆಂಗಿನ ಕೊಂಬೆಯಲ್ಲಿ ಕುಳಿತು ಸವಾರಿ ಮಾಡಿದ ದಿನ,

ಮರದ ಮೇಲೆ ಹತ್ತಿ ಹಣ್ಣು ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಅಮ್ಮನ ಸೆರಗಿನಲಿ ನಾಚುತ ಅಡಗುತ್ತಿದ್ದ ದಿನ,

ನೆಂಟರನ್ನು ನೋಡಿ ಕೋಣೆಯೊಳಗೆ ಓಡಿ ಹೋಗುತ್ತಿದ್ದ ದಿನ,

ಅಡುಗೆ ಮನೆಯಿಂದ ಬೆಲ್ಲ ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಕಾರಣವಿಲ್ಲದೆ ಮುನಿಸಿ ಕುಳಿಯುತ್ತಿದ್ದ ದಿನ,

ಬಾಡಿಗೆ ಸೈಕಲ್ ಬಿಡಲು ಹಣ ಸೇರಿಸುತ್ತಿದ್ದ ದಿನ,

ಆಡಿ ಓಡಿ ದಣಿದು ಮನೆಗೆ ಬಂದು ಸುಸ್ತಾಗಿ ಮಲಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಖುಷಿ ಪಡುತ್ತಿದ್ದ ದಿನ,

ಮಳೆಯಲ್ಲಿ ನೆನೆದು ನಲಿಯುತ್ತಿದ್ದ ದಿನ,

ಕೆಸರಲ್ಲಿ ಮುಳುಗಿ ಬಂದಾಗ ಅಮ್ಮನ ಬೈಗುಳ ಕೇಳುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮುಗಿಯದ ಅಜ್ಜಿಯ ಕಥೆ ಕೇಳುತ್ತಿದ್ದ ದಿನ,

ಚಂದಮಾಮ, ಬಾಲಮಿತ್ರ, ಪುಟಾಣಿ ಓದುತ್ತಿದ್ದ ದಿನ,

ರಾಮಾಯಣ ಮಹಾಭಾರತ ಪಾತ್ರದ ವೇಷ ಧರಿಸಿ ಆಡುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಬೇಸಿಗೆಯಲ್ಲಿ ಒಟ್ಟುಗೂಡಿ ಟೆರೇಸ್ ಹೋಗಿ ಮಲಗುವ ದಿನ,

ಮಧ್ಯಾಹ್ನ ಪರ್ಯಂತ ಮಲಗುವ ದಿನ,

ಅಮ್ಮ ಎಸೆದ ನೀರಿನಲ್ಲಿ ಒದ್ದೆಯಾಗಿ ಎದ್ದೇಳುವ ದಿನ,

ಹೇಗೆ ಮರೆಯಲಿ ಆ ದಿನ,


ಸುಂದರ, ಅಮೂಲ್ಯ, ಪಾವನ ಆ ದಿನ,

ಮರೆಯಲಾಗದ ಅದ್ಭುತ ದಿನ,

ಸರಳ ಮುಗ್ಧ ಬಾಲ್ಯದ ದಿನ,

ಹೇಗೆ ಮರೆಯಲಿ ಆ ದಿನ


by ಹರೀಶ್ ಶೆಟ್ಟಿ, ಶಿರ್ವ

Photo courtesy:paperboat, google 🙏



Tuesday, October 6, 2020

ಬದುಕು ಬಣ್ಣ

 


ಬದುಕಿನಲ್ಲಿ 
ಎಷ್ಟೊಂದು ಬಣ್ಣಗಳು,

ಪ್ರತಿಯೊಂದು ಬಣ್ಣದ 

ಅದರದ್ದೇ ವಿಶಿಷ್ಟತೆ,

ಪ್ರತಿಯೊಂದು ಬಣ್ಣದ 

ವಿವಿಧ ಮಹತ್ವ,

ಒಂದೊಂದಂತೆ 

ಎಲ್ಲಾ ಬಣ್ಣಗಳು ನಮ್ಮ

ಜೀವನದಲ್ಲಿ ಬರುತ್ತವೆ,

ಆದರೆ ಮುಖ್ಯವಾಗಿ 

ಎರಡು ಬಣ್ಣದ 

ನಮ್ಮ ಜೀವನದಲ್ಲಿ 

ವಿಶಿಷ್ಟ ಮಹತ್ವ ಇದೆ,

ಒಂದು ಸುಖದ ಬಣ್ಣ,

ಇನ್ನೊಂದು ದುಃಖದ ಬಣ್ಣ,

ಈ ಎರಡು ಬಣ್ಣಗಳು 

ನಮ್ಮ ಜೀವನದಲ್ಲಿ  

ಒಟ್ಟೊಟ್ಟಿಗೇ ಸಾಗುತ್ತವೆ,

ಸುಖದ ಬಣ್ಣ ಬಂದಂತೆ 

ನಾವು ಸಂತೋಷದ 

ಕಡಲಲ್ಲಿ ತೇಲುತ್ತೇವೆ,

ಆದರೆ ದುಃಖದ ಬಣ್ಣ ಬಂದಾಗ

ನಾವು ಕಣ್ಣೀರ ಸಾಗರದಲ್ಲಿ ಮುಳುಗುತ್ತೇವೆ.

ಸುಖದ ಬಣ್ಣ ಬದುಕಲ್ಲಿ 

ನಮಗೆ ವಿವಿಧ  ಸೌಲಭ್ಯ 

ನೀಡುತ್ತದೆ,

ಸುಖದ ಬಣ್ಣದ 

ಎಲ್ಲಾ ಕೊಡುಗೆ 

ನಮಗೆ ಆನಂದ ನೀಡುತ್ತದೆ,

ದುಃಖದ ಬಣ್ಣ 

ನಮ್ಮನ್ನು ಪೀಡಿಸುತ್ತದೆ, 

ನಮಗೆ ತುಂಬಾ ವ್ಯಥೆ ನೀಡುತ್ತದೆ, 

ಆದರೆ ಈ ಬಣ್ಣ ನಮಗೆ 

ಸತ್ಯದ ಅರಿವು ನೀಡಿ ಹೋಗುತ್ತದೆ, 

ನಮ್ಮನ್ನು ಗಟ್ಟಿಗನಾಗಿ ಮಾಡುತ್ತದೆ,

ನಮ್ಮ ಶಕ್ತಿ ಪ್ರಭಲ ಮಾಡುತ್ತದೆ, 

ಪ್ರತಿಯೊಂದು ಬಣ್ಣ 

ನಮಗೆ ಒಂದು 

ಹೊಸ ಪಾಠ 

ಕಲಿಸಿ ಹೋಗುತ್ತದೆ, 

ಹೊಸ ಪ್ರೇರಣೆ 

ನೀಡಿ ಹೋಗುತ್ತದೆ.

ನಾವು ಬದುಕಲ್ಲಿ 

ಎಲ್ಲಾ ಬಣ್ಣದ ಸ್ವಾಗತ 

ಆಧಾರ ಸತ್ಕಾರ, 

ಧೈರ್ಯದಿಂದ ಮಾಡಿದರೆ, 

ನಮ್ಮ ಜೀವನ 

ವಿವಿಧ ಸುಂದರ ಬಣ್ಣದಿಂದ 

ವರ್ಣಮಯವಾಗಬಹುದು.


by ಹರೀಶ್ ಶೆಟ್ಟಿ, ಶಿರ್ವ

Monday, October 5, 2020

ಪಾದ ಸೇರುವೆ ನಿನ್ನ


ಪಾದ ಸೇರುವೆ ನಿನ್ನ,

ಭಕ್ತನನ್ನು ಕಳಿಸು,

ಪಾದ ಸೇರುವೆ ನಿನ್ನ,


ಅಂದವಾಗಿ ಅರಳಿದ್ದೇನೆ ನಾನು,

ಎಲ್ಲರ  ಸೆಳೆಯುತ್ತಿದ್ದೇನೆ ಮನವನ್ನು,

ನಿನ್ನನ್ನು ಸೌಂದರಿಯಿಸಲು ಕಾಯುತ್ತಿದ್ದೆ ಮನ,

ಕೃಪೆ ತೋರು ದೇವಾ ನನ್ನ,

ಪಾದ ಸೇರುವೆ ನಿನ್ನ...


ಸುಂದರಿ ಮುಡಿಯಬೇಕಂತ ಆಸೆ ಇಲ್ಲ,

ಕಿತ್ತು ಬಿಳಲು ಮನ ಇಲ್ಲ,

ಹಂಬಲಿಸುವೆ ಕೊರಳ ಮಾಲೆ ಆಗಲು ನಿನ್ನ,

ಪಾದ ಸೇರುವೆ ನಿನ್ನ...


ಅಲ್ಪ ದಿನದ ಈ ಬದುಕು,

ಸೌಂದರ್ಯದ ಮಾಡುವುದಿಲ್ಲ ನಾನು ಸೊಕ್ಕು,

ನಿನ್ನ ಪಾದ ಸೇರಿ ಈ ಜೀವನ ಮಾಡುವೆ ಧನ್ಯ,

ಪಾದ ಸೇರುವೆ ನಿನ್ನ...


by ಹರೀಶ್ ಶೆಟ್ಟಿ, ಶಿರ್ವ

Sunday, October 4, 2020

ಸಂಬಂಧ



ಸಂಬಂಧ, 
ಬಂಧುತ್ವ, ಬಾಂಧವ್ಯ 
ಸದಾ ಹಸಿರಾಗಿರಬೇಕು,
ಉಸಿರು 
ಕಟ್ಟುವಂತಾಗಬಾರದು,
ಪ್ರೀತಿ ವಿಶ್ವಾಸ 
ಸ್ಥಿರವಾಗಿರಬೇಕು,
ಪದೇ ಪದೇ 
ವಿಚಲಿಸಬಾರದು,
ಸಹಾಯ, 
ಉಪಕಾರ, ನೆರವು 
ಕೇಳುವುದಕ್ಕೆ 
ಒಂದು ಮಿತಿ ಇರಬೇಕು,
ಇನ್ನೊಬ್ಬರ ಮೇಲೆ 
ಆಶ್ರಿತವಾಗಿರಬಾರದು,
ಸ್ವಾಭಿಮಾನ, ಆತ್ಮ ಗೌರವ 
ತುಂಬಿ ಇರಬೇಕು,
ಅನ್ಯರ ಮೇಲೆ
ಭಾರವಾಗಬಾರದು,
ಸ್ವತಃ
ಕಷ್ಟಪಟ್ಟು ದುಡಿದು,
ತನ್ನ ಜೀವನ 
ಸುಧಾರಿಸಿಕೊಳ್ಳಬೇಕು,
ಬದುಕು 
ಅರ್ಥಪೂರ್ಣವಾಗಿರಬೇಕು,
ಸ್ವತಃ ದುಡಿಯದೇ, 
ಇನ್ನೊಬ್ಬರ ನೆರವಿಗೆ 
ಕಾಯುತ್ತಿರಬಾರದು,
ಬದುಕು
ಅರ್ಥಹೀನವಾಗಿ
ಮಾಡಿಕೊಳ್ಳಬಾರದು

by ಹರೀಶ್ ಶೆಟ್ಟಿ,ಶಿರ್ವ

Saturday, October 3, 2020

ಬಾಡಿದ ಚಹರೆ




ಆ ಇಳಿಸಂಜೆಯಲಿ

ಏಕಾಂಗಿ ನಾನು,

ನದಿಯ ತೀರ,

ಬಂಡೆಯ ಹತ್ತಿರದಿಂದ

ಏನೋ ಯೋಚನೆಯಲಿ,

ಸಾಗುತ್ತಿದ್ದಂತೆ,

ಸ್ಮರಿಸಿತು

ಅವಳ

ಬಾಡಿದ ಚಹರೆ,

ಹೆಜ್ಜೆ ತನ್ನಿಂತಾನೆ

ಮಲ್ಲಿಗೆ ಹೂವಿನ

ಅಂಗಡಿಯತ್ತ

ಸಾಗಿತು.

by ಹರೀಶ್ ಶೆಟ್ಟಿ, ಶಿರ್ವ


Friday, October 2, 2020

ಗಾಂಧೀಜಿ ಮತ್ತು ಶಾಸ್ತ್ರೀಜಿ

 



ಗಾಂಧೀಜಿಯವರ

ಆದರ್ಶ,

ಶಾಸ್ತ್ರೀಜಿಯವರ 

ಸರಳ ವ್ಯಕ್ತಿತ್ವ,

ಗಾಂಧೀಜಿಯವರ

ಅಹಿಂಸಾ ಪರಮ ಧರ್ಮ,

ಶಾಸ್ತ್ರೀಜಿಯವರ

ಸೌಮ್ಯ ನಡೆ ನುಡಿ,

ಇಬ್ಬರೂ ನಮಗೆ ಮಾದರಿಯಾಗಿ

ದಾರಿ ತೋರಿಸಿದವರು, 

ಆದರೆ,

ಇಂದಿನ ಸಾಮಾಜಿಕ ಸಬಲೀಕರಣ 

ಹಾಗೂ 

ಜಗತ್ತಿನ ವೇಗದ ಬೆಳವಣಿಗೆಯ 

ಸಂದರ್ಭದಲ್ಲಿ 

ಇವರ ಬೋಧನೆಗಳ ಬಗ್ಗೆ ಯೋಚಿಸಿದರೆ,

ವಿರೋಧಾಭಾಸವಾಗಿ 

ಮಾನವೀಯ ಮೌಲ್ಯಗಳು 

ಕ್ರಮೇಣ 

ಲುಪ್ತವಾಗುತ್ತಿದ್ದಂತೆ 

ಭಾಸವಾಗುತ್ತಿದೆ.


ಮತ್ತೊಮ್ಮೆ ಗಾಂಧೀಜಿ ಹಾಗು ಶಾಸ್ತ್ರೀಜಿಯವರಿಗೆ

ನಮನ ಸಲ್ಲಿಸೋಣ🙏


ಜೈ ಹಿಂದ್🙏


by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...