ಇಲ್ಲ, ಅವಳು ಇಂದೂ ಕಾಣಲಿಲ್ಲ, ಮನಸ್ಸಿನಲ್ಲಿ ಕಳವಳ.
ಯಾಕೆ ಬರಲಿಲ್ಲ? ಅವಳಿಗೆ ಏನು ಆಗಲಿಲ್ಲ ತಾನೇ?
ಛೇ ಛೇ, ಬೇಡದ ವಿಷಯ ಯಾಕೆ ಈ ಹಾಳು ಮನಸ್ಸಿನಲ್ಲಿ ಬರುತ್ತದೆ.
ದಿನಾ ಜಾಗಿಂಗ್ ಮಾಡಲು ಬರುತ್ತಿದ ಅವಳು ನಾಲ್ಕು ದಿನದಿಂದ ಯಾಕೆ ಬರಲಿಲ್ಲ, ಚಿಂತೆ ಉಂಟಾಯಿತು, ಯಾಕೆ ಗೊತ್ತಿಲ್ಲ, ಛೇ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲು ಮರೆತು ಹೋದೆ.
ಇದ್ದಕಿದ್ದಂತೆ ಸ್ವಲ್ಪ ದಿವಸ ಮುಂಚೆ ನಡೆದ ಘಟನೆ ಮನಪಟಲದಲ್ಲಿ ಓಡಲಾರಂಭಿಸಿತು.
ಪತ್ನಿ ಸುಮಾಳ ಒತ್ತಾಯಕ್ಕೆ ದಿನಾ ೫ ಗಂಟೆಗೆ ಎದ್ದು ಬದಿಯ ಪಾರ್ಕಿಗೆ ಜಾಗಿಂಗ್ ಹೋಗುತ್ತಿದ್ದ ನಾನು ಒಂದು ದಿನ ಮನಸಿಲ್ಲದ್ದೆ ಓಟ ನಿಲ್ಲಿಸಿ ಹಾಗೆಯೇ ಪಾರ್ಕಲ್ಲಿ ಇದ್ದ ಬೆಂಚಲ್ಲಿ ಸುಸ್ತಾಯಿಸುತ್ತಿದ್ದೆ. ಆಗ ಓಡುತ್ತಿದ್ದ ಅವಳು......
ಅವಳು ೨೦/೨೧ ಹರೆಯದ ಆಫ್ರಿಕನ್ ಹುಡುಗಿ, ದಿನನಿತ್ಯ ಅದೇ ವೇಳೆಗೆ ಜಾಗಿಂಗ್ ಮಾಡಲು ಬರುವ ಅವಳ ಮತ್ತು ನನ್ನ ಸಮಾಗಮವಾಗುತ್ತಿತ್ತು, ಆದರೆ ನಾನಾಗಲಿ, ಅವಳಾಗಲಿ ಯಾವಾಗಲು ಪರಸ್ಪರ ಮಾತನಾಡಲಿಲ್ಲ.
ಆದರೆ ಅಂದು ನಾನು ಕುಳಿತ್ತಿದ್ದುದನ್ನು ನೋಡಿ ಅವಳು ಇಂಗ್ಲಿಷಲ್ಲಿ
"ಹ್ಯೇ ಅಂಕಲ್, ಟೈರ್ಡ್?" (ಹ್ಯೇ ಅಂಕಲ್ ಸುಸ್ತಾಯಿತಾ?).
ನಾನು ನಗು ಬೀರಿ "ನೋ, ಜಸ್ಟ್ ರಿಲೆಕ್ಷಿಂಗ್" (ಇಲ್ಲ, ಸ್ವಲ್ಪ ವಿಶ್ರಮಿಸುತ್ತಿದ್ದೇನೆ).
ಅವಳು ನಕ್ಕು "ಒಹ್, ಒಳ್ಳೆಯದು, ಆದರೆ ನಿಮಗೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಬಹುದಲ್ಲ?"
ನಾನು "ಬೇಗ ಮನೆಗೆ ಹೋದರೆ ಹೆಂಡತಿ ಮನೆಯೊಳಗೆ ನುಗ್ಗಲು ಬಿಡಲ್ಲಿಕ್ಕಿಲ್ಲ" ಎಂದು ತಮಾಷೆಯಿಂದ ಹೇಳಿದೆ.
ಅವಳು "ಒಹ್, ಹಾಗೆಯ" ಎಂದು ನಕ್ಕಳು, ಕರಿ ಬಣ್ಣದ ಆ ಮುದ್ದು ಹುಡುಗಿ ನಕ್ಕಾಗ ನನಗೆ ಸುಂದರ ದೇವದೂತೆಯಂತೆ ಕಂಡು ಬಂದಳು.
ಇದು ನನ್ನ ಮತ್ತು ಅವಳ ಮೊದಲ ಪರಿಚಯ, ಈ ಮೊದಲ ಪರಿಚಯದಲ್ಲಿ ಅವಳು ತನ್ನ ಹೆಸರು "ಮೊನಿಫಾ" ಅಂತ ಹಾಗು ಆಫ್ರಿಕಾದಿಂದ ಬಂದವರು, ಇಲ್ಲಿ ಅವಳು ತನ್ನ ತಂದೆಯ ಜೊತೆ ಇರುವುದು ಎಂದು ತಿಳಿಯಿತು.
ನಾನು ಅವಳ ಹೆಸರ ಅರ್ಥ ಕೇಳಿದಕ್ಕೆ ಅವಳು ಅದರ ಅರ್ಥ "ನಾನು ತುಂಬಾ ಭಾಗ್ಯಶಾಲಿ" ಎಂದು ಹೇಳಿ ನಕ್ಕಳು.
ಇದರ ನಂತರ ಹೀಗೆಯೇ ಏನಾದರು ಒಂದು ವಿಷಯದ ಬಗ್ಗೆ ನಾವು ಜಾಗಿಂಗ್ ಮಾಡುವ ಮಧ್ಯೆ ಸ್ವಲ್ಪ ಕುಳಿತು ಮಾತನಾಡುತ್ತಿದ್ದೆವು.
ಒಂದು ದಿನ ನನಗೆ ಅವಳು ಸ್ವಲ್ಪ ಬೇಸರದಲ್ಲಿ ಇದ್ದಂತೆ ಕಂಡು ಬಂತು, ನಾನು ಕೇಳಿದಕ್ಕೆ....
ಅವಳು " ನಿಮಗೆ ತಿಳಿದಿದೆಯ ಅಂಕಲ್, ನನಗೆ ನನ್ನ ಅಪ್ಪನ ಬಗ್ಗೆ ತುಂಬಾ ಬೇಜಾರಾಗುತ್ತಿದೆ."
ನಾನು "ಯಾಕೆ, ಏನಾಯಿತು, ಯಾಕೆ ನೀನಿಷ್ಟು ಅಸಮಾಧಾನದಲ್ಲಿ ಇರುವೆ?"
ಅವಳು "ನನ್ನ ಅಪ್ಪ ಏಕಾಂತದಲ್ಲಿ ತುಂಬಾ ಅಳುತ್ತಾರೆ, ನಾನು ಹಲವು ಸಲ ನೋಡಿದೆ ಅವರನ್ನು ಅವರ ಬೆಡ್ರೂಮಿನಲ್ಲಿ ಅಳುವುದನ್ನು".
ನಾನು ಆಶ್ಚರ್ಯದಿಂದ " ಆದರೆ ಯಾಕೆ? ಯಾಕೆ ಅವರು ಅಳುತ್ತಾರೆ?"
ಅವಳು ಸಹಜವಾಗಿ "ನನಗೆ ಕ್ಯಾನ್ಸರ್ ಕಾಯಿಲೆ ಇದೆಯಲ್ಲ, ಅದಕ್ಕೆ...."
ನನಗೆ ತೀವ್ರ ಆಘಾತವಾಯಿತು "ಏನು?"
ಅವಳು ನಿರಾಸೆಯಲ್ಲಿ "ಹೌದು ಅಂಕಲ್, ನನಗೆ ಕ್ಯಾನ್ಸರ್ ಆಗಿದೆ ಹಾಗು ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಡಾಕ್ಟರ ಹೇಳಿದ್ದಾರೆ."
ನಾನು ಸ್ತಬ್ದಗೊಂಡು ಅವಳನ್ನು ನೋಡಿದೆ.
ಅವಳು ಮುಂದುವರಿಸಿದಳು "ನನ್ನ ಮುಂದೆ ನನ್ನಪ್ಪ ತುಂಬಾ ಖುಷಿಯಲ್ಲಿರುತ್ತಾರೆ, ನನ್ನನ್ನು ಸಂತೋಷಗೊಳಿಸಲು ಯಾವಗಲು ನನ್ನ ಮುಂದೆ ನಗುತ್ತಲೇ ಇರುತ್ತಾರೆ, ಆದರೆ ಅವರು ಏಕಾಂತದಲ್ಲಿ ತುಂಬಾ ಅಳುತ್ತಾರೆ, ಅವರನ್ನು ನೋಡಿ ನನ್ನ ಹೃದಯಕ್ಕೆ ತುಂಬಾ ನೋವಾಗುತ್ತದೆ, ಪಾಪ, ಅಮ್ಮ ತೀರಿ ಹೋದ ನಂತರ ಎಷ್ಟು ಕಾಳಜಿಯಿಂದ ನನ್ನನ್ನು ಸಾಕಿದರು, ಆದರೆ ಈಗ ನಾನು ಕೇವಲ ಸ್ವಲ್ಪ ದಿನವೇ ಈ ಜಗದಲ್ಲಿ ಇರುವೆ ಎಂದು ಗೊತ್ತಾದ ನಂತರ ಅವರು ತುಂಬಾ ಅಶಕ್ತರಾಗಿದ್ದಾರೆ, ಕೇವಲ ನನ್ನ ಮುಂದೆ ನಗುತ ಇರುತ್ತಾರೆ, ಆದರೆ...."
ಇದನ್ನು ಕೇಳಿ ನನ್ನ ಅವಸ್ಥೆ ಹಾಳಾಯಿತು, ನನಗೆ ಅವಳಿಗೆ ಹೇಗೆ ಸಮಾಧಾನ ನೀಡುವುದು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಆಘಾತದಲ್ಲಿ ಕುಳಿತು ನಾನು ಅವಳಿಗೆ "ಚಿಂತಿಸ ಬೇಡ, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಅವಳ ಹತ್ತಿರ ಬೇರೆ ವಿಷಯ ಮಾತಾಡಿ ಅವಳನ್ನು ಸ್ವಲ್ಪ ನಗಿಸಿ ಅಂದು ಕಳಿಸಿದೆ.
ಮಾರನೆ ದಿವಸ ನಾನು ಅವಳಿಗೆ "ಡಿಯರ್, ನನ್ನ ಹೆಂಡತಿಯ ಊರಿನಲ್ಲಿ ಒಂದು ಸ್ವಾಮೀಜಿ ಇದ್ದಾರಂತೆ, ಅವರು ಈ ಕ್ಯಾನ್ಸರ್ ಕಾಯಿಲೆಗೆ ಮದ್ದು ಕೊಡುತ್ತಾರಂತೆ, ಆ ಮದ್ದಿನಿಂದ ತುಂಬಾ ಜನರ ಕಾಯಿಲೆ ನಿವಾರಣ ಆಗಿದೆಯಂತೆ".
ಅವಳು ಕ್ಷೀಣ ನಗು ಬೀರಿ "ನಿಜವಾಗಿಯೂ."
ನಾನು " ಎಸ್ ಡಿಯರ್, ಬಹುಶಃ ಆ ಮದ್ದಿನಲ್ಲಿ ದೈವಿಕ ಶಕ್ತಿ ಇರಬೇಕು, ನಾನು ನಾಳೆ ಇಂಡಿಯಾ ಹೋಗಿ ಊರಿನಿಂದ ನಿನಗೋಸ್ಕರ ಆ ಮದ್ದು ತರುತ್ತೇನೆ".
ಅವಳು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
ನಾನು ಕೋಪದಿಂದ "ನೋ, ನಥಿಂಗ್ ವಿಲ್ ಹ್ಯಾಪ್ಪೆನ್ ಟು ಯು" ("ಇಲ್ಲ, ನಿನಗೆ ಏನ್ ಆಗಲ್ಲ"), ನೀನು ಒಂದು ವಾರ ನನ್ನ ವೇಟ್ ಮಾಡು, ನಾನು ಬೇಗನೆ ಇಂಡಿಯಾ ಹೋಗಿ ಬರುತ್ತೇನೆ".
ಅವಳು "ನೋ ಅಂಕಲ್, ಯಾಕೆ ನೀವು ಇಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದಿರಿ, ಪ್ಲೀಸ್ ಡೊಂಟ್ ಗೋ"
ನಾನು " ನೋ , ಐ ವಿಲ್ ಗೋ, ಈ ವಾಂಟ್ ಯು ಟು ಬಿ ಪರ್ಫೆಕ್ಟ್" (ಇಲ್ಲ, ನಾನು ಹೋಗುವೆ, ನನಗೆ ನೀನು ಸರಿಯಾಗಬೇಕು)".
ಅವಳ ಕಣ್ಣಿಂದ ಕಣ್ಣೀರು ಹರಿಯಿತು "ಯು ಆರ್ ಲೈಕ್ ಏಂಜಲ್ ಫಾರ್ ಮಿ ಅಂಕಲ್" ( ನೀವು ನನಗೆ ದೇವದೂತರಂತೆ ಅಂಕಲ್").
ನಾನು "ನೋ ಡಿಯರ್, ಯು ಆರ್ ಅ ಏಂಜಲ್ ಬೇಬಿ, ವೇಟ್ ಫಾರ್ ಮಿ " (ಇಲ್ಲ ಡಿಯರ್, ನೀನು ದೇವದೂತೆ ಮಗು, ನನ್ನನ್ನು ಕಾಯು).
ಅಂದು ಅವಳು ಕಣ್ಣಲ್ಲಿ ಕಣ್ಣೀರು ತುಂಬಿ ನನಗೆ ವಿದಾಯ ಹೇಳಿದಳು.
ಆದರೆ ನಾನು ಹಿಂತಿರುಗಿ ನಾಲ್ಕು ದಿನವಾದರೂ ಅವಳು ಕಾಣದ ಕಾರಣ ನನಗೆ ಅವಳ ಬಗ್ಗೆ ಚಿಂತೆ ಮೂಡಿತು. ಅವಳಿಗೋಸ್ಕರ ತಂದ ಮದ್ದು ಕೈಯಲ್ಲಿ ಹಿಡಿದು ದಿನಾ ಬೆಳಿಗ್ಗೆ ಹುಚ್ಚನಂತೆ ಪಾರ್ಕಲ್ಲಿ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳು ಸಿಗಲಿಲ್ಲ. ಮನಸ್ಸಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿತು.
ಎಲ್ಲಿ ಹೋದಳು? ಮರಳಿ ಆಫ್ರಿಕಾ ಹೋದಳ? ಅಯ್ಯೋ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲಿಲ್ಲ.
ಹೇಗೋ ತನ್ನನು ತಾನು ಸಾವರಿಸಿದೆ, ಆದರೆ ದಿನನಿತ್ಯದ ಕೆಲಸದ ಮಧ್ಯೆ ಸಹ ಅವಳ ಯೋಚನೆ ಬರುತ್ತಿತ್ತು.
ಆ ದಿನ ಬೆಳಿಗ್ಗೆ ಆಫೀಸ್ ಬಂದು ಕೂತು ದಿನಪತ್ರಿಕೆ ನೋಡುತ್ತಿದ್ದಾಗ, ಹೀಗೆಯೇ ಒಂದು ಕಡೆ ನನ್ನ ಗಮನ ಹೋಯಿತು.
Sad demise (ದುಖಃ)
ಕೆಳಗೆ ಆ ಮುದ್ದು ಹುಡುಗಿಯ ಚಿತ್ರ ಇತ್ತು.
ನನ್ನ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿದು ಅವಳ ಚಿತ್ರದ ಮೇಲೆ ಬೀಳಲಾರಂಭಿಸಿತು, ದಿನಪತ್ರಿಕೆ ಹಿಡಿದು ಬ್ಯಾಗಲ್ಲಿ ಇಟ್ಟಿದ ಅವಳ ಮದ್ದು ಕಟ್ಟು ಕೈಯಿಂದ ತೆಗೆದೆ, ಅವಳು ಹೇಳಿದ ಮಾತು ನೆನಪಾಯಿತು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
by ಹರೀಶ್ ಶೆಟ್ಟಿ, ಶಿರ್ವ