ನಾನು ಬರೆದ ಹಳೆ ಕವಿತೆಯ ಆ ಕಾಗದದ ಹಾಳೆ
ಮಳೆಯ ನೀರಿನಲ್ಲಿ ದೋಣಿಯಾಗಿ ಸಾಗಿ ಹೋಯಿತು
ಒಟ್ಟಿಗೆ ಅದೆಷ್ಟೋ ಭಾವನೆಗಳೂ ಸಾಗಿ ಹೋದವು
-----
ಕಪಾಟು ತೆರೆದಾಗ
ಬಟ್ಟೆಯ ಅಡಿಯಲ್ಲಿ ಒಂದು ಹಳೆ ಪತ್ರ ಸಿಕ್ಕಿತು,
ತೆರೆದು ನೋಡಿದೆ
ಖಾಲಿ ಹಾಳೆ,
ಅವಳ ಚಹರೆ ಕಣ್ಣ ಮುಂದೆ ಸಾಗಿ ಹೋಯಿತು
-----
ಅಪ್ಪ ತಂದು ಕೊಟ್ಟಿದ್ದ
ಆ ಹಳೆ ಅಂಗಿ ಧರಿಸಿದೆ,
ಅಮ್ಮನ ಕಣ್ಣಲ್ಲಿ ಕಣ್ಣೀರು ತುಂಬಿ ಬಂತು
-----
ಓದಲೆಂದು ಹಳೆ ಪುಸ್ತಕದ ಧೂಳು ಜಾಡಿಸಿದೆ
ಒಣಗಿದ ಗುಲಾಬಿ ಹೂವು ಕೆಳಗೆ ಬಿತ್ತು,
ನೆನಪಿನ ಯಾತ್ರೆ ಆರಂಭವಾಯಿತು
ಒಂದಕ್ಷರ ಸಹ ಓದಲಾಗಲಿಲ್ಲ
-----
ಬಾಲ್ಯ ಮಿತ್ರನೊಬ್ಬ ಹಳೆ ಫೋಟೋ
ವಾಟ್ಸಪ್ಪಲ್ಲಿ ಕಳಿಸಿದ,
ನನ್ನ ಕಣ್ಣು ಗುಂಪಲ್ಲಿ ಅವಳನ್ನು ಹುಡುಕುತ್ತಿತ್ತು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment