Thursday, February 27, 2020

ವೃದ್ಧಾಶ್ರಮ ೧೯


ಸಂಜೆ ಮನೆಯಲ್ಲಿ ಕೋಲಕ್ಕಾಗಿ ಸೇರಿದ ಅತಿಥಿಗಳ ಊಟ ಉಪಚಾರ ಆದ ನಂತರ ಸುಮಾರು ರಾತ್ರಿ ೮ ಗಂಟೆಗೆ ಕೋಲ ಶುರುವಾಯಿತು, ತುಳು ನಾಡಿನ ಸಂಸ್ಕೃತಿ ವಿಶಾಲವಾದದ್ದು, ದೈವಾರಾಧನೆ ತುಳು ನಾಡಿನ ಮೂಲ ಸಂಸ್ಕೃತಿ, ಈಗಲೂ ತುಳು ನಾಡಿನ ಜನರು ಈ ಸಂಸ್ಕೃತಿಯನ್ನು  ಉಳಿಸಿ ಕಾಪಾಡಿದ್ದಾರೆ ಅಂದರೆ ತುಳುನಾಡಿನ ಜನರಲ್ಲಿ ಇದರ  ಮಹತ್ವ ಎಷ್ಟಿದೆಯೆಂದು ತಿಳಿಯಬಹುದು, ತುಂಬಾ ಭಕ್ತಿ ಭಾವದಿಂದ ತುಳು ನಾಡಿನ ಜನರು ಇದನ್ನು ಏರ್ಪಡಿಸುತ್ತಾರೆ. 

ತುಂಬಾ ವರುಷದ ನಂತರ ರಮೇಶ ಕೋಲ ನೋಡುತ್ತಿದ್ದ, ಸುಂದರ ವೇಷಭೂಷಣ, ಅದ್ಭುತ ನೃತ್ಯ, ಸಂವಾದ, ವಿವಿಧ ಭೂತಗಳ ವಿವಿಧ ಶೈಲಿ, ಭೂತ ವೇಷಧಾರಿಯರ ಮನಮೋಹಕ ನೃತ್ಯದ   ಸೊಬಗು ಕಣ್ಣಿಗೆ ತಂಪು ನೀಡುತ್ತಿತ್ತು, ಸಮ್ಮೋಹನಗೊಳಿಸುವಂತ್ತಿತ್ತು, ಅಮ್ಮ ಒಳಗೆ ಕಿಟಕಿಯಿಂದ ಸ್ವಲ್ಪ ಹೊತ್ತು ಕೋಲ ನೋಡಿ ನಿದ್ದೆಗೆ ಹೋಗಿದ್ದರು, ತಡರಾತ್ರಿ ದೈವಗಳ ದರ್ಶನ, ಮಧ್ಯದಲ್ಲಿ ಸ್ವಲ್ಪ ವಿರಾಮ, ಅದ್ಭುತ ಶಹನಾಯಿ ವಾದನ,  ಈ ಕೋಲದ ಸೊಬಗನ್ನು ನೋಡುವುದೇ ಒಂದು ಭಾಗ್ಯ ಎಂದು ರಮೇಶನಿಗೆ ಅನಿಸಿತು,  ಮುಂಜಾನೆ ೫ ಗಂಟೆ ತನಕ ಕೋಲ ನಡೆಯಿತು. 

ಕೋಲದ ನಂತರ  ಮನೆಯಿಂದ ಎಲ್ಲರು ಹೋದ ನಂತರ ಹೆಚ್ಚಿನಂಶ ಎಲ್ಲರು ನಿದ್ದೆ ಮಾಡಲು ಹೋದರು, ಮಕ್ಕಳೆಲ್ಲ ಮತ್ತು ಕೆಲವರು ಕೋಲದ ನಡೆಯುತ್ತಿದ್ದಂತೆ ಅರ್ಧದಲ್ಲೇ  ಮಧ್ಯೆಗೆ  ಬಂದು ಮಲಗಿದ್ದರು, ಸುಮಾ ಹಾಗು ಆತೀಶ ಸಹ ಮಧ್ಯ ರಾತ್ರಿ ತನಕ ಕೋಲಾ ನೋಡಿ ನಿದ್ದೆ ತಡೆಯಲಾರದೆ ಬಂದು ಮಲಗಿದ್ದರು. 

ರಮೇಶ ಒಂದೆರಡು ಗಂಟೆ ನಿದ್ದೆ ಮಾಡಿ ಎಚ್ಚರವಾದಾಗ ಎಲ್ಲರು ಮಲಗಿದ್ದನ್ನು ನೋಡಿ ಪೇಟೆಗೆ ಹೋಗಿ ಏನಾದರೂ ಬೆಳಿಗ್ಗೆಯ ಉಪಹಾರಕ್ಕೆ ತರುವಯೆಂದು ಪೇಟೆಗೆ ಹೋದ. 

ಪೇಟೆಯ ಭಟ್ರು ಹೋಟೆಲಲ್ಲಿ ದೋಸೆ, ವಡೆ ತಿಂದು ಚಹಾ ಕುಡಿದು ನಂತರ ಅವನು ಮನೆಗೋಸ್ಕರ ಬಿಸಿ ಬಿಸಿ ಬಟಾಟೆ ವಡೆ, ಗೋಲಿ ಬಜೆ ಕಟ್ಟಿಸಿಕೊಂಡು ಮನೆಗೆ ಬಂದ. 

ವಡೆ, ಗೋಲಿ ಬಜೆಯ ಪರಿಮಳ ಮನೆಯವರನ್ನು ಎಬ್ಬಿಸಿತು ಹಾಗು ವಡೆ, ಗೋಲಿ ಬಜೆ ತಂದಿದಕ್ಕೆ ಎಲ್ಲರು ರಮೇಶನನ್ನು ಕೊಂಡಾಡಿದರು, ಪರ ಊರಿನಿಂದ ಊರಿಗೆ ಬಂದವರಿಗೆ ಗೋಲಿ ಬಜೆ ತಿನ್ನದೆ ಊರಿಗೆ ಬಂದ ಹಾಗೆ ಅನಿಸುವುದಿಲ್ಲ, ಅಷ್ಟು ರುಚಿಕಾರವಾಗಿರುತ್ತದೆ ಈ ಗೋಲಿ ಬಜೆ, ಎಲ್ಲರ ಬಾಯಿ ಚಪ್ಪರಿಸುವ ರುಚಿಕಾರ ಗೋಲಿ ಬಜೆಗೆ  ಈ ತುಳು ನಾಡಿನ  ಜನರ  ಹೃದಯದಲ್ಲಿ ಒಂದು ವಿಶೇಷ ಸ್ಥಾನ ಒದಗಿದೆ.  

ಉಪಹಾರ ಎಲ್ಲ ಆದ ನಂತರ ಕೆಲಸದ ಹುಡುಗಿ ಸುಮ್ಮಿ ರಮೆಶನಲ್ಲಿಗೆ ಬಂದು "ಅಣ್ಣ, ನನ್ನ ಮೊಬೈಳಿಗೆ ೧೦೦ ರೂಪಾಯಿ ರಿಚಾರ್ಜ್  ಮಾಡಿ ಪ್ಲೀಸ್, ನನ್ನ ರಿಚಾರ್ಜ್ ಮುಗಿದಿದೆ" ಎಂದಳು.  

ರಮೇಶ "ಓ. ಕೆ, ಈಗ ತಾನೇ ಪೇಟೆಯಿಂದ ಬಂದೆ, ಮೊದಲು ಹೇಳಬೇಕಿತ್ತು, ಈಗ ಪುನಃ ಪೇಟೆಗೆ  ಹೋದರೆ ಮಾಡುತ್ತೇನೆ, ನಿನ್ನ ನಂಬರ್ ಕೊಟ್ಟಿಡು" ಎಂದ. 

"ಇನ್ನು ಯಾವಾಗ ಹೋಗುವಿರಿ ಅಣ್ಣ, ನನಗೆ ಸ್ವಲ್ಪ ಅರ್ಜೆಂಟ್ ಮಾತಾಡಲಿಕ್ಕಿತ್ತು" ಎಂದು ಕೇಳಿದಳು  ಸುಮ್ಮಿ. 

"ನಾನಿಲ್ಲದಿದ್ದರೆ ಬೇರೆ ಯಾರಾದರೂ ಹೋಗಬಹುದು, ಅಷ್ಟು ಅರ್ಜೆಂಟ್ ಮಾತಾಡಲಿಕಿದ್ದರೆ ನನ್ನ ಮೊಬೈಲಿಂದ ಮಾಡು" ಎಂದ ರಮೇಶ. 

"ಓ ಕೆ " ಎಂದು ಸುಮ್ಮಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೋದಳು. 

ಇದನ್ನು ನೋಡಿ ಊರ್ವಶಿ ಚಿಕ್ಕಮ್ಮ ರಮೇಶನಿಗೆ  "ಇವಳಿಗೆ ಏನಷ್ಟು ಅರ್ಜೆಂಟ್? ಯಾರ ಹತ್ತಿರ ಮಾತಾಡಲಿಕ್ಕೆ, ನೀನಷ್ಟು ತಲೆಗೆ ಇಡಬೇಡ ಇವಳನ್ನು"

ರಮೇಶ "ನಮಗೇನು ಮಾತಾಡಲಿ, ಸಂಬಳದಿಂದ ಕಡಿತ ಮಾಡಿ ಕೊಟ್ಟರಾಯಿತು"

ಸಂಜೆ ಮನೆಯಲ್ಲಿ ತಂಬಿಲ ಇತ್ತು,ತಂಬಿಲ ಅಂದರೆ ಇದನ್ನು ಭೂತಾರಾಧನೆಯ ನಂತರ ಭೂತಗಳಿಗೆ ಕೊಡುವ  ನೈವೇದ್ಯ ಎನ್ನಬಹುದು, ತುಳುನಾಡಿನ ಸಂಸ್ಕೃತಿ  ಪ್ರಕಾರ  ಕೋಲ ಆದ ನಂತರ ಈ ಭವ್ಯ ಔತಣಕೂಟ ಏರ್ಪಡಿಸುತ್ತಾರೆ ಹಾಗು ಮೊದಲು ಭೂತಗಳಿಗೆ ಊಟ ಬಡಿಸಿದ  ನಂತರವೇ  ಬಂದ  ನೆಂಟರಿಷ್ಟರಿಗೆ  ಊಟ ಬಡಿಸುತ್ತಾರೆ.   

ವಿಕ್ರಮ ಮಾವ ರಮೇಶ ಹಾಗು ಅವನ ಕಸಿನ್ ಆನಂದನನ್ನು ಕರೆದು ಒಂದು ಪಟ್ಟಿ ಕೊಟ್ಟು "ರಮೇಶ ನೀವಿಬ್ಬರು ಪೇಟೆಗೆ ಹೋಗಿ ಈ ಸಾಮಾನು ಖರೀದಿ ಮಾಡಿಕೊಂಡು ಬನ್ನಿ, ನಾನು ಇಲ್ಲಿಯ ಬೇರೆ ಕೆಲಸ ನೋಡುತ್ತೇನೆ " ಎಂದರು. 

ರಮೇಶ "ಓ ಕೆ " ಎಂದು ಅವರಿಂದ ಸಾಮಾನಿನ ಪಟ್ಟಿ ತೆಗೆದುಕೊಂಡ. 

ಸ್ನಾನ ಎಲ್ಲ ಮುಗಿಸಿ ರಮೇಶ ಮತ್ತು ಆನಂದ ಪೇಟೆಗೆ ತೆರಳಿದರು. 


(ಮುಂದುವರಿಯುತ್ತದೆ)


By ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 25, 2020

ವೃದ್ಧಾಶ್ರಮ ೧೮


ಸಂಜೆ ಕೋಲ ಇದ್ದ ಕಾರಣ ಮನೆಯಲ್ಲಿ ಹಬ್ಬದ ವಾತಾವರಣ ಇತ್ತು, ಎಲ್ಲರು ಏನಾದರೊಂದು ಕೆಲಸದಲ್ಲಿದ್ದರು, ರಮೇಶ ಅಮ್ಮನ ಚಾಕರಿಗೆ ಬಂದ ಹುಡುಗಿ ಸುಮ್ಮಿಗೆ  ಅಮ್ಮನ ಏನೇನು ಕೆಲಸ ಇದೆ ಅದನ್ನು ಅವಳಿಗೆ ತಿಳಿಸಿದ ಹಾಗು ಅವಳ ಸಹಾಯದಿಂದ ಅಮ್ಮನ ಸ್ನಾನ ಸಹ ಮುಗಿಸಿದ.   

ಮಧ್ಯಾಹ್ನದ ನಂತರ ಮನೆಗೆ ನೆಂಟರಿಷ್ಟರೆಲ್ಲರ ಆಗಮನ ಶುರುವಾಯಿತು, ಎಲ್ಲರು ಅವರವರ ಸಂಬಂಧಿಕರನ್ನು ಗೌರವದಿಂದ ಸ್ವಾಗತಿಸಿ ಅವರೊಟ್ಟಿಗೆ ಮಾತಾಡುವುದರಲ್ಲಿ ನಿರತರಾದರು. 

ಕೋಲ ಇದ್ದ ಕಾರಣ ಸುಮಾ ಆತೀಶನೊಟ್ಟಿಗೆ ತವರು ಮನೆಯಿಂದ ಹಿಂತಿರುಗಿ  ಮನೆಗೆ ಬಂದಿದ್ದಳು ಒಟ್ಟಿಗೆ ಅವಳ ತಂದೆ ಸಹ ಬಂದಿದ್ದರು, ಕೋಲಕ್ಕೆ  ನೆಂಟರಿಷ್ಟರನ್ನೆಲ್ಲ ಕರೆಯುವುದು ಊರಿನ ಹಳೆ ಪದ್ಧತಿ, ಇದರಿಂದ ಸಂಬಂಧ ಬೆಳೆದು ಸಧೃಡವಾಗುತ್ತಿತ್ತು.  

ಮನೆಗೆ ಬಂದವರೆಲ್ಲ ಅಮ್ಮನನ್ನು ನೋಡಲು ಅವರ ಕೋಣೆಗೆ ಹೋಗುತ್ತಿದ್ದರು, ಅಮ್ಮನ ಮುಖದಲ್ಲಿ ಯಾವುದೇ ಭಾವನೆ ಮೂಡುತ್ತಿರಲಿಲ್ಲ, ಅವರ ಮುಖದಲ್ಲಿ ಒಂತರಹ ಹತಾಶೆ ಕಾಣುತ್ತಿತ್ತು,  ಅವರಿಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ, ಸಂತೋಷದಲ್ಲಿರುವುದನ್ನು ಅವರು ಮರೆತು ಹೋಗಿದ್ದರು, ರಮೇಶನಿಗೆ ತಿಳಿದಿತ್ತು ಅಮ್ಮನ ಮನಸ್ಥಿತಿ ಆದ್ದರಿಂದ ಅವನು ಅವರಿಗೆ ಏನೂ ಹೇಳಲು ಹೋಗುತ್ತಿರಲಿಲ್ಲ.   

ಅಮ್ಮನಿಗೆ ಸ್ಪಷ್ಟ ಹಾಗು ಹೆಚ್ಚು ಮಾತಾಡಲು ಆಗುತ್ತಿರಲಿಲ್ಲ, ತೊದಲುತ್ತ ಉತ್ತರ ಕೊಡುತ್ತಿದ್ದರು, ಬಂದವರು ಹೆಚ್ಚು ಪ್ರಶ್ನೆ ಕೇಳಿದರೂ ಅವರಿಗೆ ಕಿರಿಕಿರಿ ಆಗುತಿತ್ತು. 

ಆರೋಗ್ಯ ಸರಿ ಇರದಿದ್ದಾಗ, ನೋವಿನಿಂದ ದೇಹ ಬಳಲುತ್ತಿದ್ದಾಗ, ಮನಸ್ಸಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತದೆ, ಆ ನೋವಿನಿಂದ ಹೊರ ಬರಲು ಹಾಗು ಆರೋಗ್ಯಕರ ಮತ್ತು ಸುರಕ್ಷಿತವಾಗಿದ್ದೇನೆ ಎಂದು ಅನುಭವಿಸಲು ಸಮಯ ಬೇಕಾಗುತ್ತದೆ, ಈ ಒತ್ತಡದಿಂದ  ಸುರಕ್ಷತೆಯ ಪ್ರಜ್ಞೆ ಚೂರುಚೂರಾಗುತ್ತದೆ, ಈ  ಅಸಹಾಯಕತೆಯ  ಅನುಭವದಿಂದ ಮನಸ್ಸಲ್ಲಿ ಅಸಮಾಧಾನ, ನಿರಾಸೆ, ಆತಂಕ  ಮನೆ ಮಾಡಿಕೊಳ್ಳುತ್ತದೆ, ನೆನಪು ಶಕ್ತಿಯೂ ಕ್ಷೀಣವಾಗುತ್ತದೆ, ಜೀವ ಜಡವೆನಿಸುತ್ತದೆ, ಸಂಬಂಧದಲ್ಲಿ ವಿಶ್ವಾಸ ಉಳಿಯುವುದಿಲ್ಲ.

ಅಮ್ಮ ಈಗ ಇದೇ  ಪರಿಸ್ಥಿತಿಯಲ್ಲಿದ್ದರು, ಅವರಿಗೆ ಯಾವುದು ಬೇಡ ಅನಿಸುತ್ತಿತ್ತು, ಜೀವನ ಕಠಿಣವೆನಿಸುತ್ತಿತ್ತು.     

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Monday, February 24, 2020

ವೃದ್ಧಾಶ್ರಮ ೧೭


ಮಾರನೇ ದಿನ ಬೆಳಿಗ್ಗೆ ಮನೆಯಲ್ಲಿ ಒಟ್ಟಿಗೆ ಎಲ್ಲರು ಕೂತು ಚಹಾ ಉಪಹಾರ ಮಾಡುವಾಗ  ಮನೆಗೆ ದಿರೇಶನನ್ನು ಕೇಳಿ ಒಬ್ಬ ವಯಸ್ಕ ಮನುಷ್ಯ ಒಂದು ಚಿಕ್ಕ ಹುಡುಗಿಯ ಜತೆ ಬಂದ, ಹುಡುಗಿಗೆ  ಸಾಧಾರಣ ೧೬, ೧೭ ವಯಸ್ಸಾಗಿರಬೇಕು ಅವಳೊಟ್ಟಿಗೆ ಒಂದು ಹ್ಯಾಂಡ್ ಬ್ಯಾಗ್ ಸಹ ಇತ್ತು, ಎಲ್ಲರಿಗೆ ಅಂದಾಜಾಯಿತು ಇದು ಅಮ್ಮಗೋಸ್ಕರ ಕೆಲಸಕ್ಕೆ ಹೇಳಿದ ಹುಡುಗಿಯೇ ಇರಬೇಕೆಂದು, ದಿರೇಶ ಅವರನ್ನು ನೋಡಿ ಅವರಿಗೆ ಒಳಗೆ ಬರಲು ಹೇಳಿ ರಮೇಶನನ್ನು ಕರೆದು "ರಮೇಶ ಇವರೇ, ಈ ಹುಡುಗಿಯೇ ಅಮ್ಮಗೋಸ್ಕರ ಹೇಳಿದ್ದು".

ರಮೇಶ ಅವಳನ್ನು ನೋಡಿ "ಆದರೆ ಇವಳು ತೀರಾ ಚಿಕ್ಕ ಹುಡುಗಿ ಇವಳಿಂದ ಅಮ್ಮನ ಕೆಲಸ ಆಗಬಹುದ"?

ಹುಡುಗಿಯ ತಂದೆ "ಚಿಕ್ಕ ಏನಿಲ್ಲ ಸಾರ್, ೧೯ ವರುಷ ಆಗಿದೆ ಇವಳಿಗೆ, ಮೈ ಬೆಳೆಯಲಿಲ್ಲ ಅಷ್ಟೇ  ಎಲ್ಲ ಕೆಲಸ ಮಾಡುತ್ತಾಳೆ ಸಾರ್,  ಈ ತರಹದ ಕೆಲಸ ಮಾಡಿದ್ದಾಳೆ, ನಿಮಗೆ ಏನೂ ತೊಂದರೆ ಆಗದು".

ಅದಕ್ಕೆ ಆಶಾ ಚಿಕ್ಕಮ "ನೀವು ನಮ್ಮ ಅಕ್ಕನವರನ್ನು ನೋಡಿದ್ದೀರಾ, ಅವರನ್ನು ಎತ್ತಲು ಎರಡು ಮೂರು ಜನ ಬೇಕು, ಇವಳಿಂದ ಅದೆಲ್ಲ ಹೇಗೆ ಸಾಧ್ಯ".

ಆಗ ಆ ಹುಡುಗಿ "ಇಲ್ಲಕ್ಕ, ನನಗೆ ಗೊತ್ತು ಕೆಲಸ,ನಾನು ಮಾಡಿದ್ದೇನೆ ವಯಸ್ಕರ ಸೇವೆ ಜೊತೆಗೆ ನಾನು ಮನೆಯ ಕೆಲಸದಲ್ಲೂ ನಿಮ್ಮ ಸಹಾಯ  ಮಾಡುತ್ತೇನೆ" ಎಂದಳು.

ಆಶಾ ಚಿಕ್ಕಮ್ಮ "ನಂತರ ನೀನು ಅದಾಗುದಿಲ್ಲ, ಇದಾಗುದಿಲ್ಲ ಎಂದು ಹೇಳ ಬಾರದು".

ಹುಡುಗಿಯ ತಂದೆ "ಇಲ್ಲಮ್ಮ, ನೀವು ಏನೂ ಚಿಂತೆ ಮಾಡಬೇಡಿ, ಇವಳೆಲ್ಲ ಮಾಡುತ್ತಾಳೆ ಮತ್ತೆ ಇಲ್ಲೆ ಇರುತ್ತಾಳೆ, ಅವಳ ಬಟ್ಟೆ ಎಲ್ಲ ತಂದಿದ್ದೇನೆ, ಕೇವಲ ತಿಂಗಳಿಗೊಮ್ಮೆ ಮನೆಗೆ ಹೋಗಿ ಬರುತ್ತಾಳೆ ಅಷ್ಟೇ".

ರಮೇಶ ಎಲ್ಲರೊಟ್ಟಿಗೆ ವಿಚಾರ ವಿಮರ್ಶೆ ಮಾಡಿದ ನಂತರ ಆ ಹುಡಿಗಿಯನ್ನು ಕೆಲಸಕ್ಕೆ ಇಡಬೇಕೆಂದು ನಿರ್ಧಾರ ಆಯಿತು.

ರಮೇಶ ದಿರೇಶನಿಗೆ "ಸಂಬಳ ಎಷ್ಟು ಎಂಟು ಸಾವಿರನೇನ"?

ದಿರೇಶ "ಹೌದು, ಇವರು ಕಡಿಮೆ ಆಗಲ್ಲ ಅಂತ ಹೇಳಿದ್ದಾರೆ"

ಹುಡುಗಿಯ ತಂದೆ " ಸಾರ್, ಇದು ಕಡಿಮೇನೆ, ಎಲ್ಲೂ ಕೇಳಿ ನೋಡಿ"

ರಮೇಶ "ಓ ಕೆ, ಹಾಗಾದರೆ, ಬ್ಯಾಗ್ ತಂದಿದ್ದಿ ತಾನೇ, ಹೋಗು ಒಳಗೆ "ಎಂದು ಹುಡುಗಿಗೆ ಅಮ್ಮನ ಕೋಣೆ ತೋರಿಸಿದ. 

ಹುಡುಗಿಯ ತಂದೆ "ಸಾರ್, ನನ್ನ ಒಂದು ಕಂಡೀಶನ್ ಸಾರ್, ಸಂಬಳ ವಾರೊಕ್ಕೊಮ್ಮೆ ಕೊಡಬೇಕೆಂದು, ಮತ್ತೆ ಈಗ ಸ್ವಲ್ಪ  ಅಡ್ವಾನ್ಸ್ ಸಿಕ್ಕಿದರೆ ಒಳ್ಳೆಯದಿತ್ತು"

ಇದನ್ನು ಕೇಳಿ ರಮೇಶ ದಿರೇಶನ ಮುಖ ನೋಡಿದ.

ದಿರೇಶ ಹುಡುಗಿಯ ತಂದೆಗೆ "ಏನು ನೀವು ಇದನೆಲ್ಲ ಮೊದಲು ಹೇಳಬೇಕಲ್ಲ, ರಮೇಶ ಕೊಡು ಇವರಿಗೆ ಒಂದು ಸಾವಿರ"

ಹುಡುಗಿಯ ತಂದೆ "ಅಷ್ಟು ಕಡಿಮೇನಾ, ಒಂದು ಎರಡು ಸಾವಿರ ಆದರೂ ಕೊಡಿ"

ಆಗ ಉಷಾ ಚಿಕ್ಕಮ್ಮ " ನಿಮ್ಮದು ಒಳ್ಳೆಯದು ಇನ್ನು ಕೆಲಸ ಶುರುವಾಗಲಿಲ್ಲ ನಿಮಗೆ ಅಡ್ವಾನ್ಸ್ ಬೇಕಾ, ಯಾವ ಊರು ನಿಮ್ಮದು".

ಹುಡುಗಿಯ ತಂದೆ "ನಮ್ಮದ್ದು ಹಳೆ ಊರು ಅಲ್ಲಿಯ ದೇವಸ್ಥಾನದ ಬದಿಯಲ್ಲಿ ಗೂಡು ಮನೆ ಇದೆಯಲ್ಲ, ಅದೇ ನಮ್ಮ ಮನೆ".

ಉಷಾ ಚಿಕ್ಕಮ್ಮ "ಓಹ್, ಅದು ಮನೆಯ!!! ಹಾಗಾದರೆ, ಇವಳೇ ಸುಮ್ಮಿಯ , ನಿಮ್ಮ ಮಗಳ ಹೆಸರು ಸುಮ್ಮಿ ತಾನೇ"

ಊರಿನಲ್ಲಿದ್ದವರಿಗೆ ವಿಶೇಷವಾಗಿ ಹೆಂಗಸರಿಗೆ ಹೀಗೆ ದೂರ ದೂರದವರ ಪರಿಚಯ ಇರುವುದು ಸಾಮಾನ್ಯ ಸಂಗತಿ, ಊರಿನಲ್ಲಿ ಹೆಂಗಸರ ಗುಂಪು  ಅಲ್ಲಿ ಇಲ್ಲಿಯ ಮಾತಾಡಿ ಹೀಗೆ ಎಲ್ಲೆಲ್ಲಿಯ ಸುದ್ಧಿ ಗೊತ್ತು ಮಾಡುತ್ತಾರೆ ಹಾಗು ಈ ಎಲ್ಲ ಸುದ್ಧಿ ಬಿ. ಬಿ. ಸಿ ದವರ ಸುದ್ದಿಕ್ಕಿಂತಲೂ ಹೆಚ್ಚು ಬೇಗ ಇಡೀ ಊರಲ್ಲಿ ಹರಡುತ್ತದೆ. 

ಹುಡುಗಿಯ ತಂದೆ "ಹೌದು, ನಿಮಗೆ ಪರಿಚಯ ಇದೆಯಾ ನಮ್ಮ".

ಉಷಾ ಚಿಕ್ಕಮ್ಮ "ಹ್ಮ್ಮ್, ಕೇಳಿದ್ದೇನೆ ನಿಮ್ಮ ಬಗ್ಗೆ"

ದಿರೇಶ " ಇರಲಿ ಚಿಕ್ಕಮ್ಮ, ಬಿಡಿ ......ರಮೇಶ  ಎರಡು ಸಾವಿರ ಕೊಡು ಇವರಿಗೆ" ಎಂದು ಹೇಳಿದ.

ರಮೇಶ ಒಳಗಿನಿಂದ ತಂದು ಅವನಿಗೆ ಎರಡು ಸಾವಿರ ಕೊಟ್ಟ.

ಹುಡುಗಿಯ ತಂದೆ ಹೋದ ನಂತರ ಹುಡುಗಿ ಅಮ್ಮನ ಕೋಣೆಗೆ ಹೋದಳು.

ಉಷಾ ಚಿಕ್ಕಮ್ಮ ರಮೇಶನಿಗೆ" ಅಡ್ವಾನ್ಸ್ ಕೊಡಬಾರದಿತ್ತು ರಮೇಶ, ನಿನಗೆ ಗೊತ್ತಿಲ್ಲ ಇಲ್ಲಿ ಎಂತ ಎಂತ ತರಹದ ಜನರಿದ್ದಾರೆಂದು, ನಾನು ಇವನ ಬಗ್ಗೆ ಕೇಳಿದ್ದೇನೆ ಇವನು ದೊಡ್ಡ ಕುಡುಕನಂತೆ,  ಇಷ್ಟು ಚಿಕ್ಕ ಹುಡುಗಿ ಕೆಲಸ ಮಾಡಿ ಇವನು ಅವಳ ಸಂಬಳ ತಿನ್ನುವುದ?, ಈ ದಿರೇಶನಿಗೆ ಅವಸರ ಇಲ್ಲಾದರೆ ಈಗಲೇ ಅವನಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೆ"

ದಿರೇಶ "ನಮಗೇನು ಮಾಡಲಿಕ್ಕಿದೆ ಚಿಕ್ಕಮ್ಮ, ಹುಡುಗಿ ಕೆಲಸ ಮಾಡಿದರೆ ಸಾಕು, ಇವನು ಹೀಗೆಯೇ ಹಣ ಸಿಕ್ಕಿದ ಕೂಡಲೇ ಗಡಂಗಿಗೆ ಹೋಗಿ ಕುಡಿಯುತ್ತಾನೆ, ಈಗ ಇಲ್ಲಿಂದ ಸೀದಾ ಗಡಂಗಿಗೆ ಕುಡಿಲಿಕ್ಕೆ ಹೋಗುತ್ತಾನೆ " ಎಂದು ನಕ್ಕ. 

ಉಷಾ ಚಿಕ್ಕಮ್ಮ ದಿರೇಶನಿಗೆ "ಮತ್ತೇನು, ನಿನಗೆ ನಗು ಬರಬಹುದು, ನಿನಗೆ ಕುಡುಕನಲ್ಲದೆ ಬೇರೆ ದೋಸ್ತಿ ಇಲ್ಲವ" ಎಂದು ಬೈದರು.   

ದಿರೇಶ "ಅವನು ಕುಡುಕನಾದರೆ ನಮಗೇನು, ನಮ್ಮ ಕೆಲಸ ಆಯಿತಲ್ಲ".

ಉಷಾ ಚಿಕ್ಕಮ್ಮ "ಇನ್ನು ಎರಡು ದಿವಸಕ್ಕೊಮ್ಮೆ ಹಣಕ್ಕಾಗಿ ಬರುತ್ತಾನೆ ಇಲ್ಲವ ನೋಡು ಅವನು ಇಲ್ಲಿಗೆ".

ದಿರೇಶ "ಹಾಗೆ ಬಂದರೆ, ಅವನನ್ನು ಒದೆದು ಹೊರಗೆ ಹಾಕಿದರೆ ಸಾಕು" ಎಂದು ಹೇಳಿ ನಕ್ಕು ಒಳಗೆ ಹೋದ.

ಉಷಾ ಚಿಕ್ಕಮ ದಿರೇಶನ ಈ ಕಚ್ಚಾಟದಿಂದ ಮನೆಯಲ್ಲಿ ಎಲ್ಲರ ಮುಖದಲ್ಲೂ ನಗು ಹರಿದು ಬಂತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Sunday, February 23, 2020

ವೃದ್ಧಾಶ್ರಮ ೧೬

ಸಂಜೆಗೆ  ರಮೇಶ ಚಹಾ ಕುಡಿಯುತ್ತ ಹೊರಗೆ ಅಂಗಳಕ್ಕೆ ಬಂದಾಗ, ಅಲ್ಲಿ ವಿಕ್ರಮ ಮಾಮ ಗಂಭೀರ ಮುದ್ರೆಯಲ್ಲಿ ಕೂತು ಚಹಾ ಕುಡಿಯುತ್ತಿದ್ದರು, ರಮೇಶನನ್ನು ನೋಡಿ ಅವರು "ರಮೇಶ ಇಲ್ಲಿ ಬಾ" ಎಂದು ಕರೆದರು.

ರಮೇಶ ಅವರತ್ತಿರ ಹೋಗಿ ಒಂದು ಚೇರ್ ಎಳೆದು ಕೂತುಕೊಂಡ.

ವಿಕ್ರಮ ಮಾಮ ರಮೇಶನಿಗೆ "ನೋಡು ರಮೇಶ, ನನ್ನ ಮಾತಿಗೆ ಬೇಸರಿಸಬೇಡ, ಆದರೆ ಈ ಹೆಂಗಸರು ಕಿರಿಕಿರಿ ಮಾಡಿ ಕೆಲಸ ಮಾಡುವುದನ್ನು ನೋಡಿ ನನಗೆ ಕೋಪ ಏರಿ ಹೋಯಿತು, ಇವರಿಗೆ ಈಗ ಯಾರೂ ಬೇಡವಾಗಿದ್ದಾರೆ, ಅವರಿಗೆ ಅವರ ಶರೀರವೇ ಭಾರವಾಗಿದೆ,  ಮೇಲಿಂದ ಮನೆ ಕೆಲಸ ಅದು ಇದು, ಅವರಿಗೆ ಈ ಸಮಯ ಏನು ಹೇಳಿದರೆ ಮತ್ತೆ ಇನ್ನು ಸ್ಥಿತಿ ಇಲ್ಲಿ ಹಾಳಾಗಬಹುದು ಆದ್ದರಿಂದ  ನಾನು ಬೇಕಂತೆ ನಿನ್ನ ಮೇಲೆ ರೋಷ ತೋರಿಸಿದೆ, ಅಕ್ಕನ ಚಿಂತೆ ನನಗೂ ಇದೆ ಹಾಗು ನಿನ್ನ ಅಸಹಾಯಕತೆ ಬಗ್ಗೆಯೂ ನನಗೆ ಅರಿವಿದೆ,  ಆದರೆ ನೀನು ದಯಮಾಡಿ ಅವರ ಕಾಳಜಿ  ಇಡಲು ಯಾರನ್ನಾದರೂ ಇಟ್ಟು ಹೋಗು, ಇಲ್ಲಾದರೆ ಇವರು ನನ್ನ ಜೀವ ತಿಂದು ಬಿಡುತ್ತಾರೆ, ಹೇಗೂ ವಿಜಯನ ಕಾರಣ ಇವರಿಗೆ ಎಲ್ಲೂ ಹೋಗಲಿಕ್ಕೆ ಬರಲಿಕ್ಕೆ ಇಲ್ಲ".

ರಮೇಶ " ಓ ಕೆ ಮಾಮ, ನನಗೆ ಇದರೆಲ್ಲದರ ಅರಿವಿದೆ, ನಾನು ದಿರೇಶನಿಗೆ ಹೇಳಿದ್ದೇನೆ, ನಾಳೆ ಒಂದು ಹುಡುಗಿ ಬರುತ್ತಾಳೆ ಮತ್ತೆ ನಿಮ್ಮ ಬೈಗುಳದಿಂದ ನನಗೇನು ಬೇಜಾರವಾಗಿಲ್ಲ, ಈ ಮನೆಯ ಗುರಿಕಾರ ಆಗಿದ್ದರಿಂದ ಎಲ್ಲ ನಿಮಗೆ ಕೇಳಬೇಕಾಗುತ್ತದೆ, ಬಿಡಿ...........ಅವರವರ ಸ್ವಭಾವ, ಅವರಿಗೂ ಕಷ್ಟವಾಗುತ್ತಿರಬೇಕು, ಇಲ್ಲಾದರೆ  ಅವರೇನು ಅಷ್ಟು ಕಠೋರ ಮನಸ್ಸಿನವರಲ್ಲ". 

ವಿಕ್ರಮ ಮಾಮ ಪುನಃ "ಬೇಸರಿಸಬೇಡ ಪ್ಲೀಸ್, ಕೋಲದ್ದು ತುಂಬಾ ಕೆಲಸವಿದೆ, ನಾನು ಸ್ವಲ್ಪ ತಯಾರಿ ನೋಡಿ ಬರುತ್ತೇನೆ" ಎಂದೇಳಿ ಅಲ್ಲಿಂದ ಎದ್ದು ಹೋದರು. 

ದಕ್ಷಿಣ ಕನ್ನಡದ  ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ "ಭೂತ ಕೋಲ" ಅಂದರೆ ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ, ಕೋಲ ಹೆಚ್ಚಾಗಿ ರಾತ್ರಿ  ಶುರುವಾಗಿ ಪ್ರಾತಃ  ೫ ಗಂಟೆ ತನಕ  ನಡೆಯುತ್ತದೆ,  ಮನೆಯ ಅಂಗಳದಲ್ಲಿ ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸುತ್ತಾರೆ, ರಾತ್ರಿಗೆ  ನೆಂಟ ಮಿತ್ರರ  ಹಾಗು ಊರವರೆಲ್ಲರ ಆಗಮನದ ನಂತರ ಮನೆಯ ಯಜಮಾನ ಹಾಗು ಮನೆಯ ಸದಸ್ಯರು ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರ ಜೊತೆ  ವಾದ್ಯ ವೃಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ.
ಕೋಲ ಅಂದರೆ  ಭೂತಾರಾಧನೆ  ಶುರುವಾಗುವ ಸಮಯದಲ್ಲಿ ಭೂತದ ವೇಷ ಹಾಕುವ ಪಾತ್ರದಾರಿ  ತನ್ನ ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ಧರಿಸುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ, ಎಲ್ಲ ಭೂತಕ್ಕೆ ಒಂದೇ ರೀತಿಯ ವೇಷಭೂಷಣಗಳು ಇರುವುದಿಲ್ಲ, ಪ್ರತ್ಯೇಕ ದೈವಗಳ ವೇಷ ವಿಭಿನ್ನವಾಗಿರುತ್ತದೆ ಅದರಲ್ಲಿ ಪಾತ್ರದಾರಿಗಳು  ತೆಂಗಿನ ಗರಿಯಿಂದ ಮಾಡಿದ ಹೊದಿಕೆ ಹಾಗು ರಂಗು ರಂಗಿನ ವಸ್ತ್ರಗಳುನ್ನು ಧರಿಸುತ್ತಾರೆ ಹಾಗು ಮುಖಕ್ಕೆ ಸಿಂಗಾರ ಮಾಡುವಾಗ ಕೇವಲ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ.   ಭೂತಾರಾಧನೆಯಲ್ಲಿ ವಾದ್ಯಗಳ ತುಂಬಾ ಮಹತ್ವವಿರುತ್ತದೆ, ಭೂತಾರಾಧನೆಯಲ್ಲಿ ವಾದ್ಯಗಳ ಉಚ್ಚ ಸ್ವರದ ಧ್ವನಿಯಿಂದ ಪಾತ್ರದಾರಿಯ ಮೈಮೇಲೆ ದೈವ ಬಂದಾಗ  ಅವರ   ಸುಂದರ ನೃತ್ಯದ ಮೂಲಕ  ದೈವದ  ಕಾರ್ಣಿಕ ತೋರಿಸುತ್ತದೆ. 

ಹಲವು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು  ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬಂದಿದುದರಿಂದ  ತುಳುನಾಡಿನ ಸಂಸ್ಕೃತಿಗಳು, ಆಚರಣೆಗಳು ಇಂದು ಜೀವಂತವಾಗಿದೆ.

(ಭೂತ ಕೋಲದ ಬಗ್ಗೆ ಹೆಚ್ಚು ಮಾಹಿತಿಗಾಗಿ  ಇಲ್ಲಿ ಕ್ಲಿಕ್ಕಿಸಿ https://kn.wikipedia.org/s/16oj )

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Wednesday, February 19, 2020

ವೃದ್ಧಾಶ್ರಮ ೧೫


ಮನೆಯಲ್ಲಿ ರಮೇಶನ ಇಡೀ ಕುಟುಂಬ ಒಟ್ಟಾಗಿದ್ದ ಕಾರಣ ಮನೆಯಲ್ಲಿ ಪರಸ್ಪರ  ಹಾಸ್ಯ, ಗಮ್ಮತ್ತು, ವಿಚಾರ ವಿಮರ್ಶೆ ನಡೆಯುತ್ತಲೇ ಇತ್ತು, ತುಂಬಾ ದಿವಸದ ನಂತರ ಒಬ್ಬರನೊಬ್ಬರು ಭೇಟಿಯಾದ ನಂತರ ಆಗುವ ಖುಷಿಯೇ ಬೇರೆ, ಪರಸ್ಪರ ಮನಸ್ಸಲ್ಲಿ ಎಷ್ಟೇ ಭಿನ್ನಾಭಿಪ್ರಾಯ, ಕ್ಲೇಶ, ಕಲ್ಮಶ ಇದ್ದರೂ ಹೀಗೆ  ಎಲ್ಲರು  ಒಟ್ಟಿಗೆ ಸೇರಿದಾಗ ಮನಸ್ಸು ನಿರ್ಮಲವಾಗುತ್ತದೆ ಹಾಗು ಮನಸ್ಸಿನಲ್ಲಿದ್ದ  ಭಾರ ಮನೋಭಾವ ಹಗುರವಾಗುತ್ತ ಹೋಗುತ್ತದೆ,   ಕುಟುಂಬ ಅಂದರೆ ಹೀಗೆಯೇ ಇರುತ್ತದೆ.  

ಹಿಂದಿನ ಕಾಲದಲ್ಲಿ ಜಂಟಿ ಕುಟುಂಬ ಅಸ್ತಿತ್ವದಲ್ಲಿತ್ತು, ಅದರಲ್ಲಿ ಹಲವಾರು ತಲೆಮಾರುಗಳ ಸದಸ್ಯರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಅವರ ಅಡುಗೆಮನೆ, ಪೂಜೆ ಮತ್ತು ಆಸ್ತಿ ಎಲ್ಲ ಸಾಮೂಹಿಕವಾಗಿರುತ್ತಿತ್ತು, ಜಂಟಿ ಕುಟುಂಬದಲ್ಲಿ ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ಪ್ರೇಮ ಹೆಚ್ಚು ಕಂಡು ಬರುತಿತ್ತು, ಅವರು ತಮ್ಮನ್ನು ತುಂಬಾ ಸುರಕ್ಷಿತವಾಗಿದ್ದಂತೆ ಭಾವಿಸುತ್ತಿದ್ದರು, ಅವರಿಗೆ  ಉತ್ತಮ ಮೌಲ್ಯಗಳು  ಪಾರಂಪಾರಿಕವಾಗಿ ಸಿಗುತ್ತಿತ್ತು,  ಮೆಲ್ಲ ಮೆಲ್ಲ ಸಮಯ ಬದಲಾದಂತೆ  ಕುಟುಂಬದ ಸದಸ್ಯರು ದೂರ ದೂರ ಕೆಲಸ ಕಾರ್ಯಕ್ಕೆ ಹೋದಂತೆ ಅಲ್ಲಿಯೇ ಪ್ರತ್ಯೇಕ  ಪರಿವಾರ ಹೂಡಿ ಇರಲಾರಂಭಿಸಿದರು ಹಾಗು ಈ ಚಲನೆ ಮುಂದೆ ನಡೆಯುತ್ತಲೇ ಹೋಯಿತು, ಕ್ರಮೇಣ ಈ  ಜಂಟಿ ಕುಟುಂಬದ ಪದ್ಧತಿ ಮುಗಿಯುತ್ತ ಹೋಯಿತು ಹಾಗು ಒಂದೇ ಕುಟುಂಬ ಅಂದರೆ ಮೂಲ ಕುಟುಂಬದ ಪದ್ಧತಿ ಸ್ಥಾಪಿತವಾಯಿತು, ಇಂದಿನ ಕಾಲದಲ್ಲಿ ಎಲ್ಲಿ ನೋಡಿದರೂ ಇದೇ ಪದ್ಧತಿ  ಕಂಡು ಬರುತ್ತದೆ. 

ಮಧ್ಯಾಹ್ನ ಊಟ ಮುಗಿದ ನಂತರ ಸುಮಾ ಅತೀಶನ ಜೊತೆ ತನ್ನ ತವರು ಮನೆಗೆ ಹೋದಳು, ರಮೇಶ ಹಾಗು ಅವನ ಸೋದರಸಂಬಂಧಿಗಳು ಹಾಗು ಎಲ್ಲ ಮಕ್ಕಳು  ಸೇರಿ ಊರಲ್ಲಿದ್ದ ನದಿಗೆ ಈಜಲೂ ಹೋದರು, ಒಂದೆರಡು ಗಂಟೆ ಅಲ್ಲಿ ಮೋಜು, ಗಮ್ಮತ್ತು ಮಾಡಿ ಮನೆಗೆ ಬಂದಾಗ ರಮೇಶನ ದೊಡ್ಡ ಮಾವ ವಿಕ್ರಮ ಬೊಬ್ಬೆ ಹಾಕುವುದು ಕೇಳಿ ಬಂತು. 

ರಮೇಶ ಮತ್ತು ಎಲ್ಲರು ಮನೆಗೆ ಕಾಲು ಇಟ್ಟಾಗಲೇ ಕೋಪದಲ್ಲಿ ಪ್ರಸಿದ್ಧವಾಗಿದ್ದ ವಿಕ್ರಮ ಮಾಮ ರಮೇಶನಿಗೆ "ನೀನೆಲ್ಲಿಗೆ ಹೋಗಿದ್ದಿಯ?, ಇಲ್ಲಿ ನಿನ್ನ ಅಮ್ಮ ಮಲ ಮೂತ್ರಕ್ಕೆ  ಕರೆಯುವಾಗ ನೀನಿಲ್ಲ ಇಲ್ಲಿ, ನಿನ್ನ ಹೆಂಡತಿಯು ಇಲ್ಲ, ಇಲ್ಲಿದ್ದವರಿಗೆ ಮೊದಲೇ  ತುಂಬಾ ಕೆಲಸ ಇದೆ, ನಾಳೆ *ಭೂತ ಕೋಲ ಇದೆ, ಅದರ ಕೆಲಸ ಬೇರೆ ಇದೆ, ಇನ್ನು ನಿನ್ನಮ್ಮನ ಚಾಕರಿ ಸಹ ಇವರು ಮಾಡುವುದ"? ಎಂದು ಜೋರಿನಿಂದ ಕೇಳಿದರು. 

*ಭೂತ ಕೋಲ (ತುಳುನಾಡಿನಲ್ಲಿ ಭೂತ ದೈವಗಳಿಗೆ ಮಾಡುವ ಆರಾಧನೆ)

ರಮೇಶ "ಸಾರೀ, ಅವರು ಊಟ ಮಾಡಿ ಮಲಗಿದ್ದರು ಅದಕ್ಕೆ ನಾನಸಿದೆ ಇನ್ನು ಅವರು ಬೇಗ ಏಳುವುದಿಲ್ಲ ಮತ್ತೆ ಮನೆಯಲ್ಲಿ ಎಲ್ಲರಿದ್ದರಲ್ಲ  ಅದಕ್ಕೆ ನಾವೆಲ್ಲಾ ನದಿಗೆ ಹೋದದ್ದು". 

ವಿಕ್ರಮ ಮಾಮ "ನೀನು ಮೊದಲು ಅವರ ಚಾಕರಿಗೋಸ್ಕರ ವ್ಯವಸ್ಥೆ ಮಾಡು ಮತ್ತೆ ಎಲ್ಲಿ  ಹೋಗಲಿಕ್ಕಿದೆ ಹೋಗು, ಇಲ್ಲಿ ಅವರ ಕೆಲಸ ಮಾಡಲಿಕ್ಕೆ ಬೇರೆ ಯಾರ ಹತ್ತಿರ ಸಮಯವಿಲ್ಲ" ಎಂದು ಕೋಪದಿಂದ  ಹೇಳಿದರು. 

ಆಗ ಅಲ್ಲೇ ಇದ್ದ ಗುಡ್ಡಿ  ಚಿಕ್ಕಮನವರು"ಇರಲಿ ಆಯಿತಲ್ಲ ಇನ್ನು, ನೀನ್ಯಾಕೆ ಅಷ್ಟು ರೇಗಾಡುತ್ತಿದ್ದಿ" ಎಂದು ವಿಕ್ರಮ ಮಾಮನಿಗೆ ಬೈದರು. 

ರಮೇಶನಿಗೆ ಬೇಜಾರಾಗುತ್ತದೆ ಎಂದು ಉಷಾ ಚಿಕ್ಕಮ್ಮ ಸಹ ವಿಕ್ರಮ ಮಾಮನಿಗೆ "ಅಣ್ಣ, ನಿಮಗೆ ಸುಮ್ಮನೆ ಇರಲಾಗುದಿಲ್ಲವೇ, ನಾವು ಅವರಿಗೆ ಟಾಯ್ಲೆಟ್ ಮಾಡಿಸಿ ಆಗಿದೆಯಲ್ಲ, ಈಗ ಯಾಕೆ ಸುಮ್ಮನೆ ಬೊಬ್ಬೆ ಹಾಕುತ್ತಿದ್ದೀರಿ". 

ವಿಕ್ರಮ ಕೈಕಾಲು ಬಡಿದು ಮನೆಯಿಂದ ಹೊರಗೆ ಹೋದರು. 

ರಮೇಶ ಸುಮ್ಮನೆ ಏನು ಹೇಳದೆ ಒಳಗೆ ಅಮ್ಮನ ಕೋಣೆಗೆ ಹೋದ, ಅಮ್ಮ ಎಚ್ಚರದಲ್ಲಿದ್ದರು. ರಮೇಶ ಅವರಿಗೆ "ಏನು ಟಾಯ್ಲೆಟ್ ಬಂದಿತ್ತಾ"?

ಅಮ್ಮ ಬೇಜಾರದಿಂದ "ಹೌದು, ನನಗೆ ಗೊತ್ತಿರಲಿಲ್ಲ ನೀನಿಲ್ಲ ಅಂತ"

ರಮೇಶ "ದಿರೇಶ  ಎಲ್ಲಿಗೆ ಹೋದ"? 

"ಅವನೆಲ್ಲಿ ನಿಲ್ಲುತ್ತಾನೆ, ಪೇಟೆಗೆ ಹೋಗಿರಬೇಕು ಅಲೆಯಲು" ಎಂದು ದಿರೇಶನ ಕುಡಿಯುವ ಚಟ  ಅರಿತ ಅಮ್ಮ ಕೋಪದಿಂದ ಹೇಳಿದರು. 

ರಮೇಶ ಕೋಣೆಯಿಂದ ಹೊರಗೆ ಬಂದ, ಅವನಿಗೆ ಮನೆಯಲ್ಲಿದ್ದ ಎಲ್ಲರ ಮನಸ್ಥಿತಿ ಅರ್ಥವಾಗುತ್ತಿತ್ತು, ಎಲ್ಲರೂ ಅವರವರ ಜೀವನದಲ್ಲಿ ವ್ಯಸ್ತವಾಗಿರುವಾಗ, ಯಾರು ಯಾಕೆ ಬೇರೆಯವರ ಕೆಲಸ ಮಾಡಲು ಸಿದ್ಧರಿದ್ದಾರೆ, ವಿಕ್ರಮ ಮಾಮನ ಉದ್ದೇಶ ಅವನಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು, ಯಾವಾಗಲೂ ಅವರ ಕೋಪ ಅವರ ಮೂಗಿನಲ್ಲಿ ಇರುತ್ತಿತ್ತು ಮತ್ತೆ ಅದರಿಂದ ಮನೆಯ ವಾತಾವರಣ ಹಾಳಾಗುತ್ತದೆ ಇದೆಲ್ಲದ್ದರ ಬಗ್ಗೆ ಯೋಚನೆ ಮಾಡುವ ಶಕ್ತಿ ಅವರಲ್ಲಿ ಇರಲಿಲ್ಲ, ಅವರ ಸ್ವಭಾವ ಅರಿತು ರಮೇಶ ಅವರಿಂದ ಹೆಚ್ಚು ವಾದ ಮಾಡಲು ಹೋಗಿರಲಿಲ್ಲ, ಮೌನವಾಗಿ ಇರುವುದಲ್ಲದೆ  ಈಗ ಅವನಲ್ಲಿ ಬೇರೆ ಏನು ಊಪಯವಿರಲಿಲ್ಲ. 

ಅವನು ದಿರೇಶನಿಗೆ ಫೋನ್ ಮಾಡಿದ " ಎಲ್ಲಿದ್ದೀಯ"?

ದಿರೇಶ "ಪೇಟೆಯಲ್ಲಿ, ಏನು ಏನಾಯಿತು"?

ರಮೇಶ "ಏನಾಯಿತು ಆ ಹುಡುಗಿಯ, ಹೇಳಿದ್ದೀಯಾ ಬರಲಿಕ್ಕೆ"?

ದಿರೇಶ "ಅವಳ ತಂದೆಗೆ ಫೋನ್ ಮಾಡಿದೆ, ನಾಳೆ ಅವನು ಅವಳನ್ನು ಕರೆದುಕೊಂಡು ಬರುತ್ತಾನೆ"

ರಮೇಶ "ಓ. ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)


by ಹರೀಶ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Tuesday, February 18, 2020

ವೃದ್ಧಾಶ್ರಮ ೧೪


ರಮೇಶ  ಕಾರಿನಿಂದ  ಹೊರಗೆ ತನ್ನ ಊರಿನ ಸುಂದರ ದೃಶ್ಯ  ನೋಡುತ್ತಿದ್ದ, ಸುತ್ತಲೂ ಗದ್ದೆ, ತೋಟ , ಮಧ್ಯದಲ್ಲಿ ಕಾಡು, ಹಸಿರು ಬೆಟ್ಟ, ಹಸಿರು ಹಸಿರು ಗಿಡಮರಗಳು, ಪ್ರಕೃತಿಯ ಸುಂದರ ವಾತಾವರಣ ಮನಮೋಹಕವಾಗಿತ್ತು, ಊರಿನ ಸೊಬಗನ್ನು ನೋಡಿ ರಮೇಶನ ಮನಸ್ಸು  ಪ್ರಫುಲ್ಲಿತವಾಯಿತು,  ಕೆಲವು ನಿಮಿಷದ ನಂತರ ಕಾರ್ ರಮೇಶನ ಹಳ್ಳಿ ಮನೆ ದುರ್ಗಾಮಂದಿರಕ್ಕೆ ಮುಟ್ಟಿತು. 

ಕಾರ್ ನೋಡಿ ಮನೆಯವರೆಲ್ಲ ಹೊರಗೆ ಬಂದರು, ಮನೆಯಲ್ಲಿ ದೇವರ ಕೆಲಸ ಇದ್ದ ಕಾರಣ ಪರ ಊರಿನಲ್ಲಿದ್ದ ಕುಟುಂಬದ ಹಲುವು ಸದಸ್ಯರು ಬಂದಿದ್ದರು, ಎಲ್ಲರು ಒಟ್ಟು ಕೂಡಿ ಅಮ್ಮನನ್ನು ಕಾರಿನಿಂದ ಇಳಿಸಿ ಮನೆಯ ಒಂದು ಕೋಣೆಗೆ ಸೇರಿಸಿದರು. ಸಾಮಾನೆಲ್ಲ ತೆಗೆದ ನಂತರ ರಮೇಶ ಡ್ರೈವರ್ ಗೆ ಬಾಡಿಗೆ ಎಷ್ಟೆಂದು ಕೇಳಿದ, ಡ್ರೈವರ್ ಸಜ್ಜನನಾಗಿದ್ದ, ಸರಿಯಾದ ಬಾಡಿಗೆನೇ ಹೇಳಿದ, ರಮೇಶ ಹೇಳಿದಷ್ಟು ಬಾಡಿಗೆ ಕೊಟ್ಟು ಅವನಿಗೆ ಧನ್ಯವಾದ  ಸಲ್ಲಿಸಿದ. ರಮೇಶ ಸ್ಟೇಷನಲ್ಲಿ ಬಾಡಿಗೆ ಕೇಳದಕ್ಕೆ  ಸುಮಾ ಅಸಮಾಧಾನದಲ್ಲಿದ್ದಳು, ಈಗ ಡ್ರೈವರ್ ತುಂಬಾ ಹೆಚ್ಚು ಹೇಳುತ್ತಾನೆಂದು ಸುಮಾ ಡ್ರೈವರ್ ಗೆ ಬಾಡಿಗೆ ಕೊಡುವ ತನಕ ಕಾದು ಅವರನ್ನೇ ನೋಡುತ್ತಿದ್ದಳು, ಡ್ರೈವರ್  ಸರಿಯಾದ ಕಡಿಮೆ ಬಾಡಿಗೆ  ಹೇಳಿದ ಕೂಡಲೇ  ರಮೇಶ ಖುಷಿಯಿಂದ ಅವಳನ್ನು ನೋಡಿ ನಗೆ ಬೀರಿದ, ಸುಮಾ ನಗುತ ಅವನಿಗೆ "ಹ್ಮ್ಮ್" ಎಂದು ತೆಪ್ಪಗೆ  ಅಲ್ಲಿಂದ ಮನೆಕಡೆ ಹೋದಳು, ಹೆಂಡತಿ  ಗಂಡನಿಗೆ ಬೈಯುವ ಒಂದು ಅವಕಾಶ ಸಹ ಬಿಡುವುದಿಲ್ಲ, ಆದರೆ ಇಲ್ಲಿ ಸುಮಾಳಿಗೆ ನಿರಾಸೆ ಆಯಿತು, ಡ್ರೈವರ್ ಪ್ರಾಮಾಣಿಕನಾಗಿದ್ದ ಹಾಗು ನಿಯತ್ತಿನ ಬಾಡಿಗೆ ಕೇಳಿದ್ದ.  

ಪ್ರಪಂಚದಲ್ಲಿ ಎಲ್ಲರು ಒಂದೇ ತರಹ ಇರುವುದಿಲ್ಲ,  ಎಲ್ಲರನ್ನು ಒಂದೇ ಮಾನದಂಡದಲ್ಲಿ ಹೋಲಿಸುವುದು ಸರಿಯಲ್ಲ.  ನಾವು  ಜೀವನಕ್ಕೆ ಬರುವಾಗ ಒಂದು ಖಾಲಿ ಪುಸ್ತಕದ ಹಾಗೆ ಇರುತ್ತೇವೆ, ಕ್ರಮೇಣ ಆ ಪುಸ್ತಕ ನಾವು ಮಾಡಿದ ಕರ್ಮದಿಂದ ತುಂಬುತ್ತಲೇ ಹೋಗುತ್ತದೆ, ಅದರ ಕೆಲವು ಪುಟ ನಾವು ಪುನಃ ಪುನಃ ಓದ ಬಯಸುತ್ತೇವೆ, ಕೆಲವು ಪುಟಗಳನ್ನು ನಾವು ಹರಿದು ಬಿಸಾಕ ಬಯಸುತ್ತೇವೆ, ಎಲ್ಲರು ತನ್ನ ಈ ಪುಸ್ತಕವನ್ನು ತನ್ನೊಟ್ಟಿಗೆ ಇಟ್ಟು ತಿರುಗುತ್ತಾರೆ ಹಾಗು ಇತರರೂ ಅದನ್ನು ಓದಬೇಕೆಂದು ಬಯಸುತ್ತಾರೆ, ಆದರೆ ಎಲ್ಲ ಪುಟ ಒಂದೇ ಸಮಾನ ಇರುವುದಿಲ್ಲ, ಕೆಲವು ದಪ್ಪ ಅಕ್ಷರದಲ್ಲಿ  ಬರೆದದ್ದಿರುತ್ತದೆ, ಕೆಲವು  ನಾಜೂಕು ಅಕ್ಷರದಲ್ಲಿ ಬರೆದದ್ದು, ಕೆಲವು ಕಣ್ಣೀರಿನಿಂದ  ಮರೆಯಾಗುತ್ತವೆ, ಕೆಲವು ನಗುವಿನಲ್ಲಿ ಅರಳುತ್ತವೆ, ಕೆಲವು ಕಥೆಗಳನ್ನು ನಾವು  ನೆನಪಿಡಲು ಬಯಸುತ್ತೇವೆ, ಕೆಲವು ಘಟನೆಗಳನ್ನು ನಾವು ಅಳಿಸಬಯಸುತ್ತೇವೆ, ಈ ಪುಸ್ತಕದ ಪ್ರಥಮ ಓದುಗಾರ ನಮ್ಮ ಮನಸ್ಸೇ, ಅದರ ನಂತರ ಕೇವಲ ಕೆಲವೇ ಜನರು ಇದರ ಓದುಗಾರರು ಹಾಗು ನಮ್ಮನ್ನು ಅರ್ಥೈಸುವವರು, ಈ ಪುಸ್ತಕವೇ  ನಮ್ಮ ಜೀವನದ ಕನ್ನಡಿ. 

ಡ್ರೈವರ್ ಹೋದ ನಂತರ ರಮೇಶ ಮನೆಯೊಳಗೇ ಬಂದ, ರಮೇಶನ ಅಮ್ಮನ ಕುಟುಂಬ ಬಹಳ ದೊಡ್ಡದು,ಅದರಲ್ಲಿ ಹೆಚ್ಚಿನವರು ಊರಿನಿಂದ ದೂರ ಪರ ಊರಲ್ಲಿಯೇ ಇರುತ್ತಿದ್ದರು, ಕೆಲವರು ಮುಂಬೈ, ಬೆಂಗಳೂರ್ ಹಾಗು ಕೆಲವರು ವಿದೇಶದಲ್ಲಿದ್ದರು, ಊರಿನಲ್ಲಿ ಕೇವಲ ರಮೇಶನ ಆಶಾ ಮತ್ತು ಉಷಾ ಚಿಕ್ಕಮ, ರಮೇಶನ ಅಣ್ಣನ ಮಗ ಅರ್ಜುನ ಹಾಗು ವಿಜಯ ಮಾಮ ಇರುತ್ತಿದ್ದರು. ಊರಲ್ಲಿ ಏನಾದರೊಂದು ಉತ್ಸವ, ಸಮಾರಂಭ, ಮದುವೆ  ಹಾಗು ದೇವರ ಕಾರ್ಯ ಇದ್ದರೇನೇ ಎಲ್ಲ ಕುಟುಂಬದವರು ಒಟ್ಟಾಗುತ್ತಿದ್ದರು. ಮುಂಬೈಯಿಂದ ರಮೇಶನ ಅಮ್ಮನಿಂದ ಚಿಕ್ಕವರು ಗುಡ್ಡಿ ಚಿಕ್ಕಮ ಅವರ ಮಕ್ಕಳು , ಊರ್ವಶಿ ಚಿಕ್ಕಮ ಮತ್ತು ರಮೇಶನ ದೊಡ್ಡ ಮಾವ ವಿಕ್ರಮ ಬಂದಿದ್ದರು, ರಮೇಶನ ವಿದೇಶದಲ್ಲಿದ್ದ ಚಿಕ್ಕ ಮಾವ ದಿನಕರ ಸಹ ಪರಿವಾರ ಸಹಿತ ಬಂದಿದ್ದರು, ಎಲ್ಲರು ಬಂದಿದ್ದ ಕಾರಣ ಮನೆಯಲ್ಲಿ ಗೌಜಿ ಗಲಾಟೆ ನಡೆಯುತ್ತಿತ್ತು, ಮಕ್ಕಳು ಅಲ್ಲಿಂದಿಲ್ಲಿ ಓಡಾಡುತ್ತಿದ್ದರು.

ಚಾ, ತಿಂಡಿ ಆದ ನಂತರ ಎಲ್ಲರೂ ತನ್ನ ತನ್ನ ಸ್ನಾನ ಮುಗಿಸಿ ತನ್ನ ತನ್ನ ಕೆಲಸದಲ್ಲಿ ನಿರತರಾದರು, ಕೆಲವರು ಪೇಟೆಗೆ ಹೋದರು. ಸುಮಾ ಚಿಕ್ಕಮನವರೊಟ್ಟಿಗೆ ಅಮ್ಮನನ್ನು ಸ್ನಾನ ಮಾಡಿಸಿ, ಅವರಿಗೆ ತಿಂಡಿ, ಚಾ ಕೊಟ್ಟು ನಂತರ ಅವರಿಗೆ ಆರಾಮ ಮಾಡಲು ಹೇಳಿದ್ದಳು,  ಪ್ರಯಾಣದಲ್ಲಿ ಸೋತು ಹೋದ ಕಾರಣ ಅಮ್ಮ ಬೇಗನೆ ನಿದ್ದೆಗೆ ಹೋದರು.

ಮಧ್ಯಾಹ್ನ ರಮೇಶನ ಅಣ್ಣ ದಿರೇಶ ಬಂದ ಕೂಡಲೇ ರಮೇಶ ಅವನಿಂದ ಹೋಮ್ ನರ್ಸ್ ಬಗ್ಗೆ ಕೇಳಿದ, ಅದಕ್ಕೆ ಅವನು "ನಾನು ಕೆಲವರಿಗೆ ಕೇಳಿದೆ ಆದರೆ ಯಾರೂ ಇಷ್ಟು ದೂರ ಒಳಗೆ ಹಳ್ಳಿಗೆ ಬರಲು ಕೇಳುವುದಿಲ್ಲ, ಆದರೆ ನನ್ನ ಪರಿಚಯದವರು ಒಬ್ಬರಿದ್ದಾರೆ, ತುಂಬಾ ಬಡವರು,ಅವರು  ಅವರ ಮಗಳನ್ನು ಕಳಿಸಲು ರೆಡಿ ಇದ್ದಾರೆ, ಅವಳು ನರ್ಸ್ ಅಲ್ಲ, ಆದರೆ ಮನೆಯಲ್ಲಿ ಈ ತರಹ ಕೆಲಸ ಮಾಡಿದ್ದಾಳೆ, ಅಮ್ಮನ ಚಾಕರಿ ಎಲ್ಲ ಮಾಡುತ್ತಾಳೆ, ಊಟ ತಿಂಡಿ ಕೊಟ್ಟು ಸಂಬಳ ೮೦೦೦ ಕೊಡಬೇಕಂತೆ,  ಈಗ ನೀನು ಹೇಳು ಏನು ಮಾಡಬೇಕು, ಒಪ್ಪಿಗೆ ಇದ್ದರೆ ಈಗಲೇ ಫೋನ್ ಮಾಡಿ ಕರೆಸುತ್ತೇನೆ".

ರಮೇಶ "ಎಂಟು ಸಾವಿರ ಹೆಚ್ಚಲ್ಲವೇ"?

ಅದಕ್ಕೆ ದಿರೇಶ "ಅರೆ... ನಿನಗೆ ಈ ಊರಿನ ಕಥೆ ಗೊತ್ತಿಲ್ಲ, ಇಲ್ಲಿ ಯಾರೂ ಕೆಲಸಕ್ಕೆ ಸಿಗುವುದಿಲ್ಲ, ಇದು ನಮ್ಮ ಅದೃಷ್ಟ ಒಳ್ಳೆದಿದೆ ಅದಕ್ಕೆ ಅವರು ಅವರ ಮಗಳನ್ನು ಕಳುಹಿಸುತ್ತಿದ್ದಾರೆ, ಮತ್ತೆ ನೀನೆ ಯೋಚಿಸು" ಎಂದು ಹೇಳಿದ.

ಅದಕ್ಕೆ ಅಲ್ಲೇ ಇದ್ದ ಉಷಾ ಚಿಕ್ಕಮ್ಮನವರು "ಹೌದು ರಮೇಶ, ದಿರೇಶ ಹೇಳುವುದು ಸರಿ, ಇಲ್ಲಿ ಕೆಲಸಕ್ಕೆ ಜನನೇ ಸಿಗುವುದಿಲ್ಲ, ತುಂಬಾ ಕಷ್ಟ, ಅವಳನ್ನೇ ಕರೆಸು ಇಲ್ಲಾದರೆ ಬೇರೆ ಯಾರೂ ನಂತರ ಸಿಗದಿದ್ದರೆ ಕಷ್ಟ ಆಗುತ್ತದೆ".

ಈ ಬಗ್ಗೆ ತುಂಬಾ ಚರ್ಚೆ ಮಾಡಿದ ನಂತರ ರಮೇಶನಿಗೆ ಬೇರೆ ಯಾವುದೇ ಮಾರ್ಗ ಕಾಣದೆ  ಅಮ್ಮನ ಚಾಕರಿ ಮಾಡಲು ದಿರೇಶ ಹೇಳಿದ ಹುಡುಗಿಯನ್ನೇ ಕರೆಯಲು ನಿರ್ಧಾರ ಮಾಡಿದ.

(ಮುಂದುವರಿಯುತ್ತದೆ)


by  ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ : ಗೂಗಲ್ 

Sunday, February 16, 2020

ವೃದ್ಧಾಶ್ರಮ ೧೩


ಸುಮಾ ಮತ್ತು ಕೂಲಿ ತಳ್ಳಿ ಬರುತ್ತಿದ್ದ ಬಂಡಿಯನ್ನು ನೋಡಿ ರಮೇಶ ಆಶ್ಚರ್ಯದಿಂದ "ಇದೇನು"?

ಸುಮಾ "ಇಲ್ಲಿಯ ಸ್ಟೇಷನಲ್ಲಿ ವೀಲ್ ಚೇರ್ ಇಲ್ಲ, ಅದಕ್ಕೆ ಬೇರೆ ದಾರಿ ಇಲ್ಲದೆ ಈ ಕೂಲಿಗೆ  ಬಂಡಿ  ತರಲಿಕ್ಕೆ ಹೇಳಿದೆ, ಇದರಲ್ಲಿ ಅಮ್ಮನನ್ನು ಕೂರಿಸಿ ರಿಕ್ಷಾ ಸ್ಟಾಂಡ್ ತನಕ ಹೋಗುವ"

ರಮೇಶ "ಒಹ್!!!....ಆದರೆ ಇದರಲ್ಲಿ ಹೇಗೆ"?

ಸುಮಾ "ಮತ್ತೇನು ಮಾಡುವುದು, ಹೇಗೂ ಅಮ್ಮನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕಲ್ಲ".

ರಮೇಶ "ಓ.ಕೆ.. ಕೆ".

ತುಂಬಾ ಪ್ರಯತ್ನದ ನಂತರ ಅಮ್ಮನನ್ನು ಆ ಬಂಡಿಯ ಮೇಲೆ ಕೂರಿಸಲಾಯಿತು ಹಾಗು ಅದೇ ಬಂಡಿಯಲ್ಲಿ ಸಾಮಾನು ಸಹ ಇಟ್ಟಾಯಿತು. ರಮೇಶ ಬಂಡಿಯಲ್ಲಿ ಕೂತಿದ ಅಮ್ಮನನ್ನು ಹಿಡಿದಿಟ್ಟಿದ್ದ ಹಾಗು ಸುಮಾ ನಿದ್ದೆಯಲ್ಲಿದ್ದ ಆತೀಶನನ್ನು ಎತ್ತಿ ಹಿಡಿದುಕೊಂಡಳು.

ಕೂಲಿ ನಿಧಾನವಾಗಿ ಬಂಡಿ ತಳ್ಳಿಕೊಂಡು ಹೋದ, ಆದರೂ ಅಮ್ಮ ಅಲ್ಲಾಡುತ್ತಿದ್ದರು, ರಮೇಶ ಬೀಳಬಾರದೆಂದು ಅವರನ್ನು ಹಿಡಿದಿಟ್ಟಿದ್ದ, ಹೇಗೋ ಅವರು ರಿಕ್ಷಾ ಸ್ಟಾಂಡ್ ತನಕ ಮುಟ್ಟಿದರು. 

ಅಲ್ಲಿ ನಿಂತಿದ್ದ ಜನರೆಲ್ಲಾ ಆಶ್ಚರ್ಯದಿಂದ ಅವರನ್ನು ನೋಡಲಾರಂಭಿಸಿದರು, ರಿಕ್ಷಾದವರು "ರಿಕ್ಷಾ ಬೇಕಾ, ರಿಕ್ಷಾ ಬೇಕಾ" ಎಂದು ಹಿಂದೆ ಬಿದ್ದರು, ರಮೇಶ ಅವರಿಗೆ "ಇಲ್ಲ ರಿಕ್ಷಾದಲ್ಲಿ ಇವರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಕಾರ್ ಬೇಕು" ಎಂದ. ಆಗ ಒಬ್ಬಾತ "ಸಾರ್, ನನ್ನ ಹತ್ತಿರ ಕಾರ್ ಇದೆ, ಈಗ ತರುತ್ತೇನೆ" ಎಂದ.

ರಮೇಶ್ ಸಮಯದ ಅವಶ್ಯಕತೆ ಅರಿತು ಏನೂ ಚರ್ಚೆ ಮಾಡದೆ  ಅವನಿಗೆ  "ಹ್ಮ್ಮ್" ಎಂದ.

ಆಗ ಸುಮಾ ರಮೇಶನಿಗೆ "ಕೇಳಿತಾ, ಇವರ ಒಂದು ಸಾವಿರ ಕೊಡಿ".

ರಮೇಶ  "ಯಾರದ್ದು"?

ಸುಮಾ "ಈ ಕೂಲಿಯ ಬಂಡಿಯ ಬಾಡಿಗೆ".

ಅದಕ್ಕೆ ರಮೇಶ "ಏನು, ಒಂದು ಸಾವಿರನ".

ಸುಮಾ ಮುಖ ಚಿಕ್ಕ ಮಾಡಿ "ಕೊಡಿ, ನಾನು ಒಪ್ಪಿಕೊಂಡಿದ್ದೇನೆ" ಎಂದಳು.

ರಮೇಶ ಆ ಕೂಲಿಗೆ "ಏನಣ್ಣ, ಇಷ್ಟೊಂದು ಹಣನ"?

ಕೂಲಿ " ನಾನು ಮೊದಲೇ ಹೇಳಿದ್ದೇನೆ ಸಾರ್" ಎಂದ.

ಉಪಾಯವಿಲ್ಲದೆ ರಮೇಶ ಅವನಿಗೆ ಒಂದು ಸಾವಿರ ರೂಪಾಯಿ ಕೊಟ್ಟ ಮತ್ತು ಕಾರ್ ಬರುವ ತನಕ ಕಾಯಲಿಕ್ಕೆ ಹೇಳಿದ.

ಸುಮಾ ರಮೇಶನಿಗೆ "ಕಾರ್ ಬಾಡಿಗೆ ಎಷ್ಟು ಕೇಳಿದ್ದೀರಾ?, ಇಲ್ಲಾದರೆ ಅವನು ಸಹ ಇವನಂತೆ ಬಾಯಿಗೆ ಬಂದ ಬಾಡಿಗೆ ಹೇಳಬಹುದು" 

ರಮೇಶ ಸೋತು ಹೋಗಿದ್ದ ಹಾಗೆ "ಇರಲಿ.....  ನೀನು ಮೊದಲು ಕೇಳಿ ಸಹ ಏನಾಯಿತು, ಕಡೆಗೆ ಒಂದು ಸಾವಿರ ಕೊಡಬೇಕಾಯಿತಲ್ಲ". 

ಸುಮಾ ಕೋಪದಿಂದ ರಮೇಶನನ್ನು ದುರುಗುಟ್ಟಿ ನೋಡಿದಳು, ಅದನ್ನು ನೋಡಿ  ರಮೇಶ ಆಚೆ ಈಚೆ ನೋಡಲಾರಂಭಿಸಿದ. 

ಕಾರ್ ಬಂದ ಕೂಡಲೇ ಎಲ್ಲರು ಸೇರಿ ಅಮ್ಮನನ್ನು ಬಂಡಿಯಿಂದ ಮೆಲ್ಲನೇ ಇಳಿಸಿ ಕಾರಲ್ಲಿ ಕೂರಿಸಿದರು, ನಂತರ ಸುಮಾ ಅತೀಶನೊಟ್ಟಿಗೆ ಅಮ್ಮನ ಬದಿಯಲ್ಲಿ ಕುಳಿತಳು,  ರಮೇಶ  ಕಾರಲ್ಲಿ ಸಾಮಾನು ಇಟ್ಟು ಸ್ವತಃ ಕುಳಿತ ನಂತರ ರಮೇಶ್ ಡ್ರೈವರ್ ನಿಗೆ ತನ್ನ ಹಳ್ಳಿಯ ಹೆಸರೇಳಿದ ಹಾಗು  ಕಾರ್ ರಮೇಶ ಹಳ್ಳಿಯ ಮನೆಯತ್ತ ಸಾಗಿತು.

ಜೀವನ ಅಂದರೆ ಹೀಗೆಯೇ ಸುಖ ದುಃಖ, ಕಷ್ಟ ನಷ್ಟ, ಹತಾಶೆ  ನಿರಾಶೆ, ನೋವು ನಲಿವು......., ಕತ್ತಲೆ ಕವಿದು ಬೆಳಕಾಗುತ ಬಂದಿತು, ಸೂರ್ಯ ಉದಯಿಸಿ ತನ್ನ ಬೆಳಕು ಹೊರಸೂಸುತ್ತಿದ್ದ, ಕಾರಿನ ರೇಡಿಯೋದಲ್ಲಿ ಹಿಂದಿ ಹಾಡು ಬರುತ್ತಿತ್ತು "ಯೇ  ಜೀವನ್ ಹೈ , ಇಸ್  ಜೀವನ್ ಕ ಯಹಿ ಹೈ.... ಯಹಿ ಹೈ ರಂಗ್ ರೂಪ್ , ಥೊಡೆ  ಘಮ್ ಹೈ.....  ಥೊಡೆ  ಖುಷಿಯಾ...... ಯಹಿ ಹೈ....  ಯಹಿ ಹೈ ಚಾವ್ ಧೂಪ್....... ".  

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

ಸಿದ್ಧಿದಾತ್ರಿ