Tuesday, October 4, 2022

ಅಮ್ಮ ಸಿದ್ಧಿಧಾತ್ರಿ



ಪರಮಾನಂದಮಯಿ ದೇವಿ, ಪರಮ ಶಕ್ತಿಶಾಲಿ,

ಕಷ್ಟ ನಿವಾರಣಿ ಮಾತೆ,

ಅಮ್ಮ ಸಿದ್ಧಿಧಾತ್ರಿ ನಮೋಸ್ತುತೆ,


ಭವಸಾಗರ ತರಿಣಿ ಸಿಂಹವಾಹಿನಿ,

ಕಮಲಸ್ಥಿತೇ ಸಿದ್ಧಿಧಾತ್ರಿ ಯಶಸ್ವಿನಿ,

ಶಂಖ ಚಕ್ರ ಗದ ಪದ್ಮ ಹಸ್ತೇ, 

ಅಮ್ಮ ಸಿದ್ಧಿಧಾತ್ರಿ ನಮೋಸ್ತುತೆ...


ನಿರಾಕಾರ ಆದಿಶಕ್ತಿ,

ವೈಭವ ಮಹಿಮೆಯ ಮೂಲಶಕ್ತಿ,

ಪರಿಪೂರ್ಣತೆ ನೀಡುವ ದೇವತೆ,

ಅಮ್ಮ ಸಿದ್ಧಿಧಾತ್ರಿ ನಮೋಸ್ತುತೆ....


ಧರ್ಮಾರ್ಥಕಮಾ ಪ್ರದಾಯಿಣಿ,

ಮಹಾಮೋಹ ವಿನಾಶಿನಿ,

ಮೋಕ್ಷದಾಯಿನಿ ಸಿದ್ಧಿದಾಯಿನಿ ಮಾತೆ,

ಅಮ್ಮ ಸಿದ್ಧಿಧಾತ್ರಿ ನಮೋಸ್ತುತೆ...


ಓಂ ದೇವಿ ಸಿದ್ಧಿಧಾತ್ರಿಯೈ ನಮಃ||


by ಹರೀಶ್ ಶೆಟ್ಟಿ,ಶಿರ್ವ

Monday, October 3, 2022

ಅಮ್ಮ ಮಹಾಗೌರಿ



ದುರ್ಗಾಷ್ಟಮಿಯ ಪಾವನ ದಿವಸ,

ಬನ್ನಿ, ಅಮ್ಮ ಮಹಾಗೌರಿಯ ಮಾಡುವ ಸ್ವಾಗತ,


ಸುಂದರ ಆಕರ್ಷಣೀಯ ಮುಖ ಲಕ್ಷಣ,

ಸರಳ ಸೌಮ್ಯ ಸ್ವಭಾವ,

ಬರುವಳು ಶ್ವೇತಾಂಬರಧಾರಿಣಿ ಚೈತನ್ಯಮಯ ದೇವಿ ಮಾತಾ,

ಬನ್ನಿ, ಅಮ್ಮ ಮಹಾಗೌರಿಯ ಮಾಡುವ ಸ್ವಾಗತ...


ದುರ್ಗಾದೇವಿಯ ಎಂಟನೇ ಶಕ್ತಿ,

ಗಣೇಶನ ಅಮ್ಮ ಪಾರ್ವತಿಯ ರೂಪ ಸತ್ತ್ವ,

ಬರುವಳು ಗೂಳಿ ಮೇಲೆ ಕುಳಿತು ಅನ್ನಪೂರ್ಣ ದೇವಿ ಮಾತಾ,

ಬನ್ನಿ, ಅಮ್ಮ ಮಹಾಗೌರಿಯ ಮಾಡುವ ಸ್ವಾಗತ...


ಸುಖ ಶಾಂತಿಧಾತ್ರಿ,

ಧನ ಧಾನ್ಯ ಪ್ರದಾಯಿನಿ,

ಬರುವಳು ಶಾರದೀಯ ಎಂಟನೇ ದಿವಸ ಢಮರು ವಾದ್ಯ ಪ್ರಿಯ ಮಾತಾ, ಬನ್ನಿ,

ಅಮ್ಮ ಮಹಾಗೌರಿಯ ಮಾಡುವ ಸ್ವಾಗತ..


ಓಂ ದೇವಿ ಮಹಾಗೌರಿಯೇ ನಮಃ||


by ಹರೀಶ್ ಶೆಟ್ಟಿ, ಶಿರ್ವ

Sunday, October 2, 2022

ತಾಯಿ ಕಾಲರಾತ್ರಿ



ಭಯಂಕರಿ ಶುಭಂಕರಿ,

ಭದ್ರಕಾಳಿ ಮಾತೃಸ್ವರೂಪಿಣಿ,

ಧರ್ಮದ ರಕ್ಷಿಣಿ,

ತಾಯಿ ಕಾಲರಾತ್ರಿ ನಮೋ ನಮಃ...


ಭೀಭತ್ಸ್ಯವಾದ ರೂಪಿಣಿ,

ಗಾಡಾಂಧಕಾರದಂತ ಶರೀರಾಣಿ,

ದುಷ್ಟರಿಗೆ ದುಸ್ವಪ್ನ ನೀ,

ತಾಯಿ ಕಾಲರಾತ್ರಿ ನಮೋ ನಮಃ...


ಭಕ್ತರಿಗೆ ಶುಭಫಲಧಾರಿಣಿ,

ಅಧರ್ಮರರಿಗೆ ಮಹಾಕೋಪಿನಿ,

ಪಾಪ ವಿಘ್ನ ನಾಶಿನಿ,

ತಾಯಿ ಕಾಲರಾತ್ರಿ ನಮೋ ನಮಃ...


ತ್ರಿನೇತ್ರಿಯ ಚತುರ್ಭುಜ,

ಗಾರ್ಧಭವಾಹಿನಿ, 

ಶನಿಗ್ರಹದ ಅಧಿಪತಿ ನೀ,

ತಾಯಿ ಕಾಲರಾತ್ರಿ ನಮೋ ನಮಃ...


ರಕ್ತಬೀಜಾಸುರನ ಸಂಹಾರಿಣೀ,

ಅವನ ರಕ್ತ ಕುಡಿದು ನಲಿದೆ ನೀ,

ರಕ್ಕಸರ ಪಾಲಿಗೆ ಅಗ್ನಿಯ ಜ್ವಾಲೆ ನೀ,

ತಾಯಿ ಕಾಲರಾತ್ರಿ ನಮೋ ನಮಃ...


ಓಂ ಶ್ರೀ ದೇವೀ ಕಾಲರಾತ್ರೈ ನಮಃ||


by ಹರೀಶ್ ಶೆಟ್ಟಿ, ಶಿರ್ವ

Saturday, October 1, 2022

ಕಾತ್ಯಾಯಿನಿ ದೇವಿ



ನವದುರ್ಗೆಯ ಆರನೇ ಅವತಾರ,

ಕಾತ್ಯಾಯಿನಿ ದೇವಿ ನಿನಗೆ ನಮಸ್ಕಾರ,

ನವದುರ್ಗೆಯ...


ಪ್ರಕಾಶಮಾನ ದೈವಿಕ ರೂಪ,

ಶಕ್ತಿಯ ಸ್ವರೂಪ,

ನೆಚ್ಚಿನ ದೇವತೆ ನೀನು ನಮ್ಮೆಲ್ಲರ,

ಸ್ವರ್ಣವರ್ಣ ನಾನಾಲಂಕಾರ ಭೂಷಿತ ಕಾತ್ಯಾಯಿನಿ ದೇವಿ ನಿನಗೆ ನಮಸ್ಕಾರ,

ನವದುರ್ಗೆಯ...


ಕಮಲ ಒಂದು ಕೈಯಲ್ಲಿ,

ಖಡ್ಗ ಇನ್ನೊಂದು ಕೈಯಲ್ಲಿ ,

ಭಕ್ತರಿಗೆ ಆಶಿರ್ವಾದ ನೀಡುವ ಮುದ್ರೆ ಹೊಂದಿದೆ ನಿನ್ನ ಇನ್ನೆರಡು ಕರ,

ಸಿಂಹಾರೂಢ ಚತುರ್ಭುಜ ಕಾತ್ಯಾಯಿನಿ ದೇವಿ ನಿನಗೆ ನಮಸ್ಕಾರ,

ನವದುರ್ಗೆಯ...


ದೃಷ್ಟಿಯಲ್ಲಿ ಕಾಂತಿ,

ಯುದ್ಧದಲ್ಲಿ ಪರಿಣತಿ,

ಮಹಿಷಾಸುರನ ಮಾಡಿದೆ ನೀನು ಸಂಹಾರ,

ಯುದ್ಧದ ದೇವತೆ ಕಾತ್ಯಾಯಿನಿ ದೇವಿ ನಿನಗೆ ನಮಸ್ಕಾರ,

ನವದುರ್ಗೆಯ...


ಓಂ ಶ್ರೀ ಸಿಂಹಾರೂಢ ದೇವಿ,

ಓಂ ಶ್ರೀ ಮಹಿಷಾಸುರ ಮರ್ದಿನಿ,

ಓಂ ಶ್ರೀ ದೇವಿ ಕಾತ್ಯಾಯಿನ್ಯೈ ನಮ||


by ಹರೀಶ್ ಶೆಟ್ಟಿ, ಶಿರ್ವ

Friday, September 30, 2022

ಸ್ಕಂದ ಮಾತೆ



ತೆರೆದಿದೆ ಬಾಗಿಲು,

ಬಾ ಮನೆಯೊಳಗೇ ಮಾತೆ, ಭಕ್ತಿ ಭಾವದಿಂದ ಕರೆಯುತ್ತಿರುವೆ ನಿನಗೆ,

ಬಾ ಮನೆಯೊಳಗೇ ಮಾತೆ, ತೆರೆದಿದೆ.....


ಪ್ರೀತಿಯ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿರುವಂತೆ,

ನನಗೂ ನಿನ್ನ ಮಮತೆ ನೀಡು ಮಾತೆ,

ನನ್ನಲಿರುವ ಕಲ್ಮಶ ಅಳಿಸಿ ನನ್ನ ದೈವತ್ವವನ್ನು ಪೋಷಿಸು ಮಾತೆ,

ತೆರೆದಿದೆ.....


ನಿನ್ನ ಈ ಅವತಾರ ರೂಪವನ್ನು ಪೂಜಿಸುವವರು ಕಷ್ಟಮುಕ್ತರಾಗುವರು,

ನಿನ್ನ ಆಶೀರ್ವಾದದೊಟ್ಟಿಗೆ ಮಗ ಸ್ಕಂದನ ಆಶೀರ್ವಾದವನ್ನೂ ಪಡೆಯುವರು,

ಎಲ್ಲರೂ ನಿನ್ನ ಕೃಪೆಗೆ ಪಾತ್ರರಾಗುವರು,

ತೆರೆದಿದೆ.....


ಶುದ್ಧ ಮನಸ್ಸಿನಿಂದ ಕರೆಯುತ್ತಿರುವೆ ನನ್ನ ಮನೆಗೆ ಮಾತೆ,

ಬಂದು ನಮ್ಮೆಲ್ಲರನ್ನೂ ಅನುಗ್ರಹಿಸು ಮಾತೆ,

ಸುಖ ಸಂಪತ್ತು ಶಾಂತಿ ಸಮೃದ್ಧಿ ನೀಡಿ ಹರಸು ಮಾತೆ,

ತೆರೆದಿದೆ....


ಓಂ ಶ್ರೀ ಸಿಂಹವಾಹಿನಿ,

ಓಂ ಶ್ರೀ ಪದ್ಮಾಸನ ದೇವಿ,

ಓಂ ದೇವಿ ಸ್ಕಂದಮಾತಾಯೈ ನಮಃ||


by ಹರೀಶ್ ಶೆಟ್ಟಿ, ಶಿರ್ವ

Thursday, September 29, 2022

ಕೂಷ್ಮಂಡಾ ದೇವಿ



ನೋಡಿ ಬಂದಳು,

ಅಮ್ಮ ಬಂದಳು,

ಮಂದಹಾಸ ಬೀರುತಾ,

ತನ್ನ ತೇಜಸ್ಸು ಚೆಲ್ಲುತಾ,

ಅಮ್ಮ ಕೂಷ್ಮಂಡಾ ದೇವಿ ಬಂದಳು..


ಬನ್ನಿ, ಅಮ್ಮನ ಆರಾಧನೆ ಮಾಡುವ,

ಅಜ್ಞಾನದ ಅಂಧಕಾರ ದೂರ ಮಾಡುವ,

ನೋಡಿ ವಿವೇಕದ ಉಡುಗೊರೆ ತಂದಳು,

ಜ್ಞಾನದ ಬೆಳಕಾಗಿ ಬಂದಳು,

ನೋಡಿ ಬಂದಳು....


ದೋಷ ಕ್ಲೇಷ ಇನ್ನು ದೂರವಾಗುವುದು,

ರೋಗ ತಾಪ ಇನ್ನು ದೂರವಾಗುವುದು,

ನೋಡಿ ತನು ಮನದಲಿ ಚೈತನ್ಯ ತುಂಬಲು ಬಂದಳು,

ಆರೋಗ್ಯದ ಹೊನಲಾಗಿ ಬಂದಳು,

ನೋಡಿ ಬಂದಳು....


ಸೂರ್ಯನಿಗೆ ಅಧಿಪತಿ ಇವಳು,

ಜಗದ ಸೃಷ್ಟಿಗೆ ಕಾರಣ ಇವಳು,

ನೋಡಿ ಸರ್ವರಿಗೆ ಅಭಯ ನೀಡಲು ಬಂದಳು,

ವ್ಯಾಘ್ರವಾಹಿನಿ ಅಷ್ಟಭುಜಾದೇವಿ ಬಂದಳು,

ನೋಡಿ ಬಂದಳು....


ಜಯ ಜಯ ವ್ಯಾಘ್ರವಾಹಿನಿ,

ಜಯ ಜಯ ಅಷ್ಟಭುಜಾದೇವಿ,

ಓಂ ಶ್ರೀ ದೇವೀ ಕೂಷ್ಮಾಂಡೈ ನಮಃ!!



byಹರೀಶ್ ಶೆಟ್ಟಿ, ಶಿರ್ವ

Wednesday, September 28, 2022

ದೇವಿ ಚಂದ್ರಘಂಟ



ಚಂಡಿಕಾ ನೀನು, 
ರಣಚಂಡಿ ನೀನು,
ದುರ್ಗೆಯ ಮೂರನೇ ಅವತಾರವೇ ನೀನು,
ಮಸ್ತಕದಲ್ಲಿ ಅರ್ಧಚಂದ್ರ ಧರಿಸಿದವಳು ದೇವಿ ಚಂದ್ರಘಂಟ ನೀನು.....

ಚಿನ್ನದ ಮೈಬಣ್ಣ,
ದಶ ಕೈಗಳು ನಿನ್ನ,
ಎಲ್ಲಾ ಕೈಗಳಲ್ಲೂ ಶಸ್ತ್ರ ನಿನ್ನ,
ದುಷ್ಟ ಶಕ್ತಿಗಳ ಸಂಹಾರಕ್ಕೆ ಸದಾ ಸಿದ್ಧವಾಗಿರುವ ಸಿಂಹವಾಹಿನಿ ನೀನು,
ಚಂಡಿಕಾ ನೀನು.....

ಕರುಣಾಳು ನೀನು,
ಉಪಕಾರಿ ನೀನು,
ಸದಾ ತೆರೆದೇ ಇರುವುದು ನಿನ್ನ ಮೂರನೇ ಕಣ್ಣು,
ಸಕಲ ಜೀವಿಗಳಿಗೆ ಸುಖ ಸಂಪತ್ತು ಸಮೃದ್ಧಿ ನೀಡುವ ಆದಿಶಕ್ತಿ ನೀನು,
ಚಂಡಿಕಾ ನೀನು.....

ಓಂ ಶ್ರೀ ದೇವಿ ಚಂಡಿಕಾ ನಮಃ,
ಓಂ ಶ್ರೀ ದೇವಿ ರಣಚಂಡಿ ನಮಃ,
ಓಂ ಶ್ರೀ ದೇವಿ ಚಂದ್ರಘಂಟಾಯೈ ನಮಃ॥

by ಹರೀಶ್ ಶೆಟ್ಟಿ, ಶಿರ್ವ 

Tuesday, September 27, 2022

ಅಮ್ಮ ಬ್ರಹ್ಮಚಾರಿಣಿ

 


ಕಂಡೆ ಕಂಡೆ ನಾ ಕಂಡೆ, 

ಅದ್ಭುತ ದೃಶ್ಯವನು ಕಂಡೆ,

ಅಮ್ಮ ಬ್ರಹ್ಮಚಾರಿಣಿಯ ಸುಂದರ ರೂಪವನು ಕಂಡೆ,


ಎಂಥ ಆಹ್ಲಾದಕರ ನೋಟಾ,

ಶಾಂತಿಯ ಸ್ವರೂಪ,

ಅಮ್ಮ ಬ್ರಹ್ಮಚಾರಿಣಿ ನಿನಗೆ ನನ್ನ ವಂದನೆ,

ಕಂಡೆ ಕಂಡೆ ನಾ ಕಂಡೆ...


ಒಂದು ಕೈಯಲ್ಲಿ ಜಪಮಾಲಾ,

ಇನ್ನೊಂದು ಕೈಯಲ್ಲಿ ಕಮಂಡಲ,

ನವದುರ್ಗೆಯ ಎರಡನೇ ರೂಪವಾದ ದೇವಿ ನಿನಗೆ ನಮಸ್ಕಾರ,

ಕಂಡೆ ಕಂಡೆ ನಾ ಕಂಡೆ...


ನಮೋ ನಮೋ ಶ್ರೀ ದೇವಿ,

ನಮೋ ನಮೋ ಶ್ರೀ ಅಮ್ಮ,

ಓಂ ದೇವಿ ಬ್ರಹ್ಮಚಾರಿಣ್ಯೈ ನಮೋ ನಮಃ 


by ಹರೀಶ್ ಶೆಟ್ಟಿ, ಶಿರ್ವ

Monday, September 26, 2022

ನವರಾತ್ರಿಯ ಆಗಮನ




ನವರಾತ್ರಿಯ ಆಗಮನ, 

ಸಂತಸದ ಈ ಕ್ಷಣ, 

ಕಲಶ ಸ್ಥಾಪನೆಯ ಈ ದಿನ, 

ಶೈಲಪುತ್ರಿ ದೇವಿಗೆ ನಮನ, 

ಜಯ ಜಯ ಆದಿಶಕ್ತಿ, 

ಜಯ ಜಯ ವೃಷರುಧ


by ಹರೀಶ್ ಶೆಟ್ಟಿ, ಶಿರ್ವ 


ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

Friday, July 15, 2022

ಹಳೆಯ ಮನೆ



ಹಳೆಯ ಮನೆಯ ಪಾವಿತ್ರವೂ ಕಡಿಮೆಯಾಗದು ಎಂದೂ,

ಮನೆಯಲ್ಲಿ ಇದ್ದಾರೆ ದೈವ ದೇವರು, 


ಎಲ್ಲೆಲ್ಲಿ ಇದ್ದರೇನು, 

ನೆನಪು ಕಾಣೆಯಾಗದು ಎಂದೂ, 

ಊರ ಮಣ್ಣು ಎಳೆಯುವುದು ಹೃದಯ ಮನಸ್ಸು,


ಹಣ ಕಾಸು ಎಷ್ಟಾದರೇನು,

ಮನೆ ಸಂಪತ್ತು ಎಷ್ಟಿದ್ದರೇನು,

ಹುಟ್ಟು ಮನೇಕ್ಕಿಂತ ಬೇರೇನಿಲ್ಲ ಮೇಲು, 


ಹೊಟ್ಟೆ ಪಾಡಿಗಾಗಿ ನೆಲೆಸೆ ಅಲ್ಲಿಲ್ಲಿ, 

ಸಂಸಾರದ ಜವಾಬ್ಧಾರಿ ಎಲ್ಲರಲ್ಲಿ,

ಆದರೆ ನೆಮ್ಮದಿ ಕೇವಲ ಹುಟ್ಟು ಮನೆಯಲ್ಲಿ, 

ಸುಖ ನಿದ್ರೆ ಕೇವಲ ಹಳೆ ಮನೆಯ ಜಗುಲಿಯಲ್ಲಿ,


ಹಳೆ ಮನೆಯ ಎಲ್ಲ ವಸ್ತು,

ಬಾಲ್ಯದ ಸ್ಮೃತಿಯ ಕಟ್ಟು,

ಮರೆಯಲಾಗದು ಎಂದೆಂದೂ,

ನೆನಪಾಗಿ ಹರಿಯುವುದು ಕಣ್ಣೀರು,


ಹಳೆಯ ಮನೆಯ ಪಾವಿತ್ರವೂ ಕಡಿಮೆಯಾಗದು ಎಂದೂ,

ಮನೆಯಲ್ಲಿ ಇದ್ದಾರೆ ದೈವ ದೇವರು, 


by ಹರೀಶ್ ಶೆಟ್ಟಿ, ಶಿರ್ವ

Friday, February 18, 2022

ತಾಯಿ ಮಕ್ಕಳು


Photo courtesy: Google


"ಹೇಗಿದ್ದೀರಿ ದೊಡ್ಡಕ್ಕ?" ಮಂಜಣ್ಣ ದೊಡ್ಡಕ್ಕನ ಮನೆಯೊಳಗೆ ಪ್ರವೇಶ ಮಾಡುತ ಕೇಳಿದರು.

ಒಳಗೆ ನೆಲ ಒರೆಸುತ್ತಿದ್ದ ಸುಮಾರು ೭೭ ವಯಸ್ಸಿಸ್ನ ದೊಡ್ಡಕ್ಕ "ಓ ಮಂಜು, ಬಾ ಬಾ". 

ಮಂಜಣ್ಣ"ಏನಕ್ಕ!! ಈ ವಯಸ್ಸಿನಲ್ಲಿಯೂ ನಿಮಗೆ ಇದೆಲ್ಲ ಕೆಲಸ ಮಾಡಬೇಕಾಗುತ್ತದೆ, ನಿಮಗೆ ಐದು ಮಕ್ಕಳಿದ್ದು ಏನು ಪ್ರಯೋಜನ??". 

ದೊಡ್ಡಕ್ಕ" ಬಿಡು ಮಂಜು, ಅವರೆಲ್ಲಿದರೆ ಇಲ್ಲಿ ಕೆಲಸ ಮಾಡಲಿಕ್ಕೆ, ಇಲ್ಲಿ ಇರುತ್ತಿದ್ದರೆ ನನಗೆ ಕೆಲಸ ಮಾಡಲಿಕ್ಕೆ ಬಿಡುತ್ತಾರಾ" ದೊಡ್ಡಕ್ಕ ಒಂದು ಉದಾಸೀನ ಸ್ವರದಲ್ಲಿ ಹೇಳಿದರು. 

ಮಂಜಣ್ಣ "ಸುಮ್ಮನೆ ಯಾಕೆ ನೀವು ನಿಮ್ಮ ಮಕ್ಕಳ ಪರವಾಗಿ ಮಾತನಾಡುತ್ತಿದ್ದಿರಿ, ನನಗೆ ಎಲ್ಲಾ ತಿಳಿದಿದ್ದ ವಿಷಯ, ಮೊನ್ನೆ ನಮ್ಮೂರಿನ ಉತ್ಸವಕ್ಕೂ ಯಾರೂ ಬರಲಿಲ್ಲ, ಸೀನು ಒಬ್ಬನನ್ನು ಬಿಟ್ಟು ನಿಮ್ಮ ಬೇರೆ ನಾಲ್ಕು ಮಕ್ಕಳು ಊರಿಗೆ ಬರದೆ ಇಂದಿಗೆ ನಾಲ್ಕೈದು ವರುಷ ಆಗಿರಬೇಕು, ಈ ಸಲ ಸೀನು ಸಹ ಬರಲಿಲ್ಲ".


ದೊಡ್ಡಕ್ಕ "ಇಲ್ಲ ಮಂಜು, ಸೀನುಗೆ ನಾನು ಹೇಳಲು ಮರೆತೆ ಉತ್ಸವದ ಬಗ್ಗೆ, ನನಗೆ ಫೋನ್ ಮಾಡಿ ಬೈದ, ಯಾಕೆ ನೀನು ಉತ್ಸವದ ಬಗ್ಗೆ ಹೇಳಲಿಲ್ಲ, ನಾನು ಬರುತ್ತಿದೆಯಲ್ಲವೆಂದು, ನನ್ನದ್ದೇ ತಪ್ಪಾಯಿತು, ಹೇಳಲು ಮರೆತೆ, ಮತ್ತೆ ಉಷಾ, ಲತಾ, ಮೋಹಿನಿ ಅವರಳಿಗೆಲ್ಲ ಅವರವರ ಪರಿವಾರ ಇದ್ದ ಮೇಲೆ ಎಲ್ಲಿ ಅವರಿಗೆ ಸಮಯ ಸಿಗುತ್ತದೆ ಊರಿಗೆಲ್ಲ ಬರಲಿಕ್ಕೆ, ಮತ್ತೆ ದೊಡ್ಡವ ಮಹೇಶನಿಗೆ ಅವನ ಮಕ್ಕಳು ಹಣ ಕೊಟ್ಟರೆ ಬರಬೇಕು, ಇಲ್ಲಾದರೆ ರಿಟೈರ್ಡ್ ಮನುಷ್ಯ ಎಲ್ಲಿಂದ ಹಣದ ವ್ಯವಸ್ಥೆ ಮಾಡಿ ಬರುವುದು, ಜೀವನಪೂರ್ತಿ ಅವನ ಎರಡು ಮಕ್ಕಳಿಗೋಸ್ಕರ ದುಡಿದ, ಈಗ ಪಾಪ ಅವನು ಯಾವುದಕ್ಕೂ ಅವರ ಮುಖ ನೋಡಬೇಕು".

ಮಂಜಣ್ಣ "ಆದರೆ ಅಕ್ಕ ತಾಯಿಯನ್ನು ನೋಡುವುದು ಅವರ ಕರ್ತವ್ಯ ತಾನೇ, ನೀವೊಬ್ಬರೇ ಇಲ್ಲಿ ಎಷ್ಟು ಕಷ್ಟದಿಂದ ತನ್ನ ದಿನ ಕಳೆಯುತ್ತಿದ್ದಿರಿಯೆಂದು ನಾವೆಲ್ಲಾ ನೋಡುದಿಲ್ಲವೇ, ಸ್ವಲ್ಪಾದರೂ ಜವಾಬ್ದಾರಿ ಬೇಕು ತಾನೇ". 

ದೊಡ್ಡಕ್ಕ "ಬಿಡು ಮಂಜು, ನೀವೆಲ್ಲ ನೆರೆಹೊರೆಯವರು ಇದ್ದಿರಲ್ಲ ನನ್ನ ಸಹಾಯಕ್ಕೆ, ನನಗೇನು ಕಷ್ಟ, ಬೇಕಾದಾಗ ಎಲ್ಲ ಹಣ ಕಳಿಸುತ್ತಾರೆ ಅವರೆಲ್ಲ ನನಗೆ". 

ಮಂಜಣ್ಣ "ಕೇವಲ ಹಣ ಸಾಕಾಗುತ್ತದೆಯಾ ಅಕ್ಕ, ಇನ್ನು ಈ ಮುದಿವಯಸ್ಸಿನಲ್ಲಿ ಹೇಗೆ ಸಾಧ್ಯ ಒಬ್ಬಂಟಿ ಜೀವನ ಕಳೆಯುವುದು, ನಿಮನ್ನು ನೋಡಿ ನನಗೆ ಕಣ್ಣೀರು ಬರುತ್ತದೆ, ಮಕ್ಕಳಾಗಿ ಅವರಿಗೆ ಯಾವುದೇ ಭಾವನೆ ಇಲ್ಲವೇ, ಕೇವಲ ಬಾಯಿಯಿಂದ ಅಮ್ಮ ಅಮ್ಮಯೆಂದು ಹೇಳಿದರೆ ಸಾಲದು, ಜವಾಬ್ದಾರಿ ವಯಿಸುವ ಇಚ್ಛೆ ಇರಬೇಕು".

ದೊಡ್ಡಕ್ಕ "ಫೋನ್ ಮಾಡುತ್ತಿರುತ್ತಾರೆ ಮಂಜು ಅವರು, ಮತ್ತೆ ಕಷ್ಟ ಆದರೆ ಕೆಲಸಕ್ಕೇ ಒಂದು ಜನ ಇಡುಯೆಂದು ಹೇಳುತ್ತಾರೆ, ಆದರೆ ಇಲ್ಲಿ ಕೆಲಸಕ್ಕೆ ಜನ ಎಲ್ಲಿ ಸಿಗುತ್ತಾರೆ, ಬಿಡು ಹೇಗೋ ಇಷ್ಟು ದಿನ ಜೀವನ ಸಾಗಿ ಹೋಯಿತು, ನಮ್ಮ ದೈವ ದೇವರಿದ್ದಾರೆ ನನ್ನನ್ನು ರಕ್ಷಿಸಲು".

ಮಂಜಣ್ಣ "ಹಾಗೆಲ್ಲ ಹೇಳಿದರೆ ಹೇಗೆ ಅಕ್ಕ, ಭಾವ ತೀರಿ ಹೋದ ನಂತರ ಎಷ್ಟು ಕಷ್ಟಪಟ್ಟು ನೀವು ಮಕ್ಕಳನ್ನು ಬೆಳೆಸಿದ್ದೀರಿ ಎಂದು ನನಗೆ ತಿಳಿದಿಲ್ಲವೆ, ಈಗ ನಿಮಗೆ ಅಗತ್ಯ ಇದ್ದಾಗ ಅವರು ಹೀಗೆ ಮಾಡಬಹುದೇ? ಈಗ ದೇವರ ದಯೆಯಿಂದ ಕೈಕಾಲು ಸರಿ ಇದೆ, ನಾಳೆ ಒಂದು ವೇಳೆ ಕೈಕಾಲು ಬಿದ್ದರೂ ಸಹ ಕೆಲಸಕ್ಕೆ ಜನ ನೋಡುಯೆಂದು ಹೇಳುತ್ತಾರಾ? ಉಪದೇಶ, ಸಲಹೆಗಳು ಎಲ್ಲ ಬೇಡ ಹೇಳಿ ಅವರಿಗೆ" ಎಂದು ಕೋಪದಿಂದ ಮಂಜಣ್ಣ ನುಡಿದರು.

ಮಂಜು ಹೇಳುವುದೆಲ್ಲ ಸರಿ ಎಂದು ತಿಳಿದರೂ ದೊಡ್ಡಕ್ಕ "ಬಿಡು ಮಂಜು, ನನ್ನದು ಇದ್ದದೆ, ನೀನೇಳು ಕೆಲಸ ಆಯ್ತಾ ನಿನ್ನ?".

ಮಂಜಣ್ಣ "ಇಲ್ಲ ಅಕ್ಕ ಎಲ್ಲಿ, ತೆಂಗಿನ ಕಾಯಿ ಕೊಯ್ಯಲು ಬರುತ್ತೇನೆ ಎಂದು ತೋಮ ಹೇಳಿದ್ದ, ಬೇವರ್ಸಿ ರಲೇ ಇಲ್ಲ, ಫೋನ್ ಮಾಡಿದ್ದಾರೆ ಫೋನ್ ಎತ್ತುದಿಲ್ಲ, ಇವರಿಗೆಲ್ಲ ಚರ್ಬಿ ಏರಿದೆ, ಕೇಳಿದಷ್ಟು ಹಣ ಸಿಗುತ್ತದೆಯಲ್ಲ". 

ದೊಡ್ಡಕ್ಕ "ಹೌದು ಮಂಜು, ನಮ್ಮ ಮರದಿಂದ ಸಹ ಕೊಯ್ಯಲಿಕ್ಕಿತ್ತು, ಉಷಾ ಮೊನ್ನೆ ಫೋನ್ ಮಾಡಿ ಕೇಳುತ್ತಿದ್ದಳು 'ಏನು ಈ ಸಲ ನೀನು ತೆಂಗಿನಕಾಯಿ ಕಳಿಸಲೇ ಇಲ್ಲ ಎಂದು', ಬಸ್ ದವನಿಗೆ ಹೇಳಿ ಇಟ್ಟಿದಾಳೆ ಅಂತೇ, ಆದರೆ ಈ ತೋಮನ ಭರವಸೆಯಲ್ಲಿ ಇದ್ದರಾಯಿತು". 

ಮಂಜಣ್ಣ "ಉಷಾಳಿಗೆ ಹೇಳಿ ಅಕ್ಕ, ಮುಂಬೈಯಲ್ಲಿ ತೆಂಗಿನಕಾಯಿ ಸಿಗುತ್ತದೆಯೆಂದು, ನಾಚಿಗೆ ಇಲ್ಲ ಇವರಿಗೆ, ನಿಮಗೆ ಕೋಪ ಬರಬಹುದು ಅಕ್ಕ, ಆದರೆ ಇವರಿಗೆ ಬಂದಾಗಾಯೆಲ್ಲ ಕೇವಲ ಉಪದೇಶ ಕೊಟ್ಟು, ಇಲ್ಲಿಂದ ಸಾಮಾನು ಹೊಯ್ಯುವುದಲ್ಲದೆ, ನಿಮ್ಮ ಸ್ವಲ್ಪ ಸಹ ಚಿಂತೆ ಇಲ್ಲ, ನಿಮ್ಮ ಮಕ್ಕಳಲ್ಲಿ ನಿಮ್ಮ ಒಂದು ಗುಣ ಸಹ ಇಲ್ಲ, ಬರುತ್ತೇನೆ ನಾನು" ಎಂದು ಹೇಳಿ ಕೋಪದಿಂದ ಹೊರಟರು.

ಮಂಜಣ್ಣ ಹೋದ ಮೇಲೆ ದೊಡ್ಡಕ್ಕ ಒಂದು ನಿಟ್ಟುಸಿರು ಬಿಡುತ್ತಾ ಪುನಃ ತನ್ನ ಕೆಲಸ ಮುಂದುವರಿಸಿ ಯೋಚಿಸಲಾರಂಭಿಸಿದರು "ಈ ಮಂಜುನಿಗೆ ಹೇಗೆ ಹೇಳಲಿ ಈಗೀಗ ಮಕ್ಕಳ ಫೋನ್ ಬರುವುದು ಸಹ ಕಡಿಮೆ ಆಗಿದೆಯೆಂದು, ಹಣ ಬರದೆ ವರುಷ ಆಯಿತೆಂದು, ಯಾವಾಗಲೊಮ್ಮೆ ಸೀನು ಕಳಿಸಿದ್ದಾರೆ ಕಳಿಸುತ್ತಾನೆ ಅಷ್ಠೆಯೆಂದು, ಫೋನ್ ಸಹ ಯಾವಾಗಲೊಮ್ಮೆ ಮಾಡಿದರೆ ಅವನೇ ಮಾಡುವುದೆಂದು, ಗೊತ್ತು ಬದುಕು ಈಗ ಕಷ್ಟವಾಗುತ್ತಿದೆ ನನ್ನ, ಆದರೆ ಏನು ಮಾಡುವುದು, ಯಾರಿಗೆ ಹೇಳುವುದು ನನ್ನನ್ನು ನೋಡಿಯೆಂದು, ಯಾವಾಗಲೊಮ್ಮೆ ಜ್ವರ ಬಂದರೆ ಮದ್ದು ತರಲು ನೆರೆಹೊರೆಯವರ ಮುಖ ನೋಡಬೇಕಾಗುತ್ತದೆ, ಮಕ್ಕಳಿಗೆ ಫೋನ್ ಮಾಡಿ ತಿಳಿಸಿದರೆ ಸಿಗುವುದು ಕೇವಲ ಸಲಹೆ ಹಾಗೂ ತಾತ್ಕಾಲಿಕವಾಗಿ ಸ್ವಲ್ಪ ಹಣ, ಅವರವರ ಕರ್ತವ್ಯದ ಅರಿವು ಅವರಿಗೆ ಯಾಕೆ ಇಲ್ಲ, ಇರಬೇಕಲ್ಲ? ಮಕ್ಕಳ ಮದುವೆ ಮಾಡಿದಾಗ, ಅವರ ಉನ್ನತಿ ನೋಡುತ್ತಿದ್ದಾಗ, ಅವರ ಸಂಸಾರ ಬೆಳೆಯುತ್ತಿದ್ದಾಗ ಪ್ರತಿ ಹಂತದಲ್ಲೂ ಅನಿಸುತಿತ್ತು ಈಗ ನನ್ನ ಜೀವನದ ಕಷ್ಟ ದೂರವಾಗುತ್ತದೆ ಎಂದು, ಆದರೆ ದೇವರು ಆ ದಿನ ಕರುಣಿಸಲೇ ಇಲ್ಲವಲ್ಲ" ಯೋಚಿಸುತ್ತಿರುವ ದೊಡ್ಡಕ್ಕನ ಕಣ್ಣಿನಿಂದ ಧಾರಾಳಾವಾಗಿ ಕಣ್ಣೀರು ಹರಿಯುತ್ತಿತ್ತು.

ಹೊರಗೆ ಕೊಟ್ಟಿಗೆಯಿಂದ ಬಹುಶ ಹಸಿವಿಂದ ಹಸು "ಅಂಬಾ ಅಂಬಾ" ಎಂದು ಕೂಗುತಿತ್ತು, ಆ ಹಸುವಿನ ಸ್ವರ ಕೇಳಿ ಯೋಚನೆಯಿಂದ ಹೊರ ಬಂದರು ತಾಯಿ ಎಂಬ ಮಹಾನ್  ಉದಾರ ಹೃದಯದ ಜೀವಿ ದೊಡ್ಡಕ್ಕ, ನಿಧಾನವಾಗಿ ಅವರು ಹಸುವಿನ ಕೊಟ್ಟಿಗೆಯ ಕಡೆ  ಹೆಜ್ಜೆ ಇಟ್ಟರು. 


by ಹರೀಶ್ ಶೆಟ್ಟಿ, ಶಿರ್ವ

Monday, February 14, 2022

ಸತ್ಕರ್ಮದ ಫಲ



ಕಿಕ್ಕಿರಿದು ತುಂಬಿದ ಬಸ್ಸಲ್ಲಿ ರಾಜಪ್ಪ ಹೇಗೋ ಹತ್ತಿದರು, ಬಸ್ ಹತ್ತಿದ ನಂತರ ಒಂದು ಕೈಯಿಂದ ಜೇಬಿನಿಂದ ಕರವಸ್ತ್ರ ತೆಗೆದು ಮುಖದ ಬೆವರನ್ನು ಒರೆಸುತ್ತಾ ಕಂಡಕ್ಟರ್ ಬಂದ ಕೂಡಲೇ ಚಿಲ್ಲರೆ ಹಣ ಕೊಟ್ಟು ಟಿಕೆಟ್ ಪಡೆದುಕೊಂಡರು. 

ಒಂದು ಸ್ಟಾಪ್ ಪಾಸ್ ಆದ ನಂತರ ಅವರಿಗೆ ಸೀಟ್ ಸಿಕ್ಕಿತು, ಸೀಟಲ್ಲಿ ಕೂತು "ಅಯ್ಯಪ್ಪ" ಎನ್ನುತ ಅವರು ಕಣ್ಣು ಮುಚ್ಚ್ಕೊಂಡು ಮನೆಯ ಸ್ಥಿತಿಯ ಬಗ್ಗೆ ಯೋಚಿಸಲಾರಂಭಿಸಿದರು, ಮನೆಯ ದುರಾವಸ್ಥೆಯ ದೃಶ್ಯ, ಹಾಸಿಗೆ ಹಿಡಿದ ಹೆಂಡತಿ ಭಾಗ್ಯಮ್ಮ, ವಿಧವೆ ಸೊಸೆ ಸುಮಾಳ  ದೀನಯ ಸ್ಥಿತಿ, ಹಸಿವೆಯಿಂದ ಅಳುತ್ತಿರುವ ಎರಡು ವರ್ಷದ ಮೊಮ್ಮಗ, ಮುಚ್ಚಿದ ಕಣ್ಣಿನಿಂದಲೇ ಕಣ್ಣೀರು ಹರಿದು ಬಂತು. 

ಎಲ್ಲ ಒಳ್ಳೆಯೇ ನಡೆಯುತಿತ್ತು ಜೀವನದಲ್ಲಿ, ಆದರೆ ಮುಂಬೈಯಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ  ಮಗ ಸುದೀಪ ಅಕಸ್ಮಾತಾಗಿ ಕಾರ್ ಅಪಘಾತದಲ್ಲಿ ತೀರಿ ಹೋದ ನಂತರ ಅವರೆಲ್ಲರ ಬದುಕು ದುಃಖದ ಸಾಗರದಲ್ಲಿ ತೇಲಿ ಹೋಯಿತು, ಆದಾಯ ಇಲ್ಲದೆ ಮನೆಯ ಸ್ಥಿತಿ ದಿನದಿಂದ ದಿನ ದಯನೀಯ ಆಗುತ್ತಾ ಹೋಯಿತು. ಸ್ವಲ್ಪ ದಿವಸ ರಾಜಪ್ಪನವರು ಅಲ್ಲಿಂದ ಇಲ್ಲಿಂದ ಹಾಗು ಇದ್ದ ಹಣದಿಂದ ಮನೆಯ ಖರ್ಚು ನಡೆಸಿದರು, ಆದರೆ ಈಗ ಸ್ಥಿತಿ ಗಂಭೀರವಾಗಿತ್ತು, ಮನೆಯಲ್ಲಿ ಅಡುಗೆ ಸಾಮಾನು ಮುಗಿದು ಉಪವಾಸ ಇರುವ ಪರಿಸ್ಥಿತಿ ಉಂಟಾಯಿತು, ಕಡೆಗೆ ರಾಜಪ್ಪನವರಿಗೆ ಇನ್ನು ಹೀಗೆಯೇ ಕೂತುಕೊಂಡರೆ ಆಗಲ್ಲ, ಏನಾದರೂ ಮಾಡಬೇಕಾಗುತ್ತದೆ ಎಂದು ಹೊರಗೆ ಹೋಗಲು ನಿರ್ಣಯಿಸಿದ್ದರು.

ವಯಸ್ಸಾದರೂ ಈಗ ಅವರ ಮೇಲೆ ಒಂದು ಜವಾಬ್ದಾರಿ ಬಂದಿತ್ತು, ಹೇಗಾದರೂ ನಿಭಾಯಿಸಬೇಕು, ಹೊರಗೆ ಪೇಟೆಗೆ ಹೋಗಲು ಬಸ್ಸಿಗೆ ಹಣ ಬೇಕು, ಆದರೆ ಸದ್ಯ ಮನೆಯಲ್ಲಿ ಅಷ್ಟು ಸಹ ಹಣ ಇರಲಿಲ್ಲ, ಮನೆಯ ಮೂಲೆ ಮೂಲೆಯಲ್ಲಿ ಹುಡುಕಿದ ನಂತರ ಅವರಿಗೆ ಸಾಯಿಬಾಬನವರ ಫೋಟೋದ ಹಿಂದೆ ಬಸ್ಸಿನ ಟಿಕೆಟಿಗೋಸ್ಕರ ಬೇಕಾಗುವಷ್ಟು ಚಿಲ್ಲರೆ ಹಣ ಸಿಕ್ಕಿತು, ಬಹುಶ ಈ ಸಲ ಮಗ ಊರಿಗೆ ಬಂದಾಗ ಕೈ ಮುಗಿಯುವಾಗ ಇಟ್ಟಿರಬೇಕು, ಸಣ್ಣ ವಯಸ್ಸಿನಿಂದಲೇ ಮಗನಿಗೆ ಸಾಯಿಬಾಬಾನ ಮೇಲೆ ಒಂದು ವಿಶೇಷ ಪ್ರೀತಿ, ತುಂಬಾ ನಂಬುತ್ತಿದ್ದ ಅವರನ್ನು, ಮನೆಯಲ್ಲಿದ್ದ ಈ ಫೋಟೋ ಸಹ ಅವನು ಶಿರ್ಡಿ ಹೋದಾಗ ತಂದದ್ದು, ಬಾಲಕನಿದ್ದಾಗ ಸುದೀಪ ಒಂದೊಂದು ಗಂಟೆ ಸಾಯಿಬಾಬಾನ ಜೊತೆ ಮಾತನಾಡುತ್ತಿದ್ದ, ರಾಜಪ್ಪನವರು ಅದಕ್ಕೆ "ಏನು ಆ ಮುದುಕನ ಜೊತೆ ಅಷ್ಟು ಮಾತನುಡುವೆ" ಎಂದು ತಮಾಷೆ ಮಾಡುತ್ತಿದ್ದರು.

ಮಗನ ನೆನಪಾಗಿ ಪುನಃ ರಾಜಪ್ಪನವರ ಕಣ್ಣು ತೇವವಾಯಿತು, ಮನೆಯಿಂದ ಹೊರ ಬೀಳುವಾಗ ಹಾಸಿಗೆಯಲ್ಲಿ ಮಲಗಿದ ಹೆಂಡತಿಯ ಕಡೆ ನೋಡಿದರು, ಹೆಂಡತಿ ಗಂಡನ ಅಸಹಾಯಕತೆ ನೋಡಿ ಕಣ್ಣೀರು ಬಿಟ್ಟಳು.

"ಪೇಟೆ, ಪೇಟೆ" ಎಂಬ ಕಂಡಕ್ಟರ್ ಸ್ವರ ಕೇಳಿ ರಾಜಪ್ಪನವರು ಯೋಚನೆಯಿಂದ ಹೊರ ಬಂದು ಬಸ್ಸಿನಿಂದ ಕೆಳಗೆ ಇಳಿದರು, ಅವರಿಗೆ ಎಲ್ಲಿಗೆ ಹೋಗುವುದು ಯಾರಿಂದ ಹಣ ಕೇಳುವುದು ಒಂದು ಗೊತ್ತಾಗುತ್ತಿರಲಿಲ್ಲ, ಸಾಮಾನು ಕೊಡುವ ಕಾಮತರ ಅಂಗಡಿಗೆ ಹೋಗಲು ಮುಜುಗುರವಾಗುತಿತ್ತು, ಮೊದಲೇ ಅವರ ಹಣ ಕೊಡಲು ಬಾಕಿಯಿತ್ತು, ಇನ್ನು ಸಾಮಾನು ಕೊಡಿ ಎಂದು ಹೇಗೆ ಹೇಳಲಿ, ಆ ಸಾಹಸ ರಾಜಪ್ಪನವರಲ್ಲಿ ಇರಲಿಲ್ಲ. ಅವರು ಪೇಟೆಯ ಸರ್ಕಲ್ ನಲ್ಲಿದ್ದ ಬೆಂಚಿನ ಮೇಲೆ ಹೋಗಿ ಕುಳಿತರು.

ಏನು ಮಾಡುವುದು ಯಾರ ಹತ್ತಿರ ಹಣ ಕೇಳುವುದು ಎಂದು ಯೋಚಿಸುವಾಗ ಒಬ್ಬ ಯುವಕ ಅವರ ಹತ್ತಿರ ಬಂದ.

"ಸರ್, ಏನು ಸರ್, ಹೀಗೆ ನಿಮ್ಮ ಪರ್ಸ್ ಬಸ್ಸಲ್ಲಿ ಬಿಟ್ಟು ಹೋಗುತ್ತಿದ್ದೀರಿ, ನಾನು ನೋಡಿದಕ್ಕೆ ಆಯಿತು, ಬೇಗನೆ ಇಳಿದು ನಿಮ್ಮ ಹಿಂದೆ ಬಂದೆ, ಬೇರೆ ಯಾರು ಆಗಿದ್ದರೆ ನಿಮ್ಮ ಪರ್ಸ್ ಹೀಗೆ ಇಲ್ಲಿ ಇಳಿದು ಕೊಡುತ್ತಿರಲಿಲ್ಲ, ಸುಮ್ಮನೆ ನನಗೆ ಇಲ್ಲಿ ಇಳಿಯಬೇಕಾಯಿತು, ಇನ್ನು ಪುನಃ ಬೇರೆ ಬಸ್ ಹತ್ತಬೇಕು, ತೆಗೆದುಕೊಳ್ಳಿ ನಿಮ್ಮ ಪರ್ಸ್" ಎಂದು ರಾಜಪ್ಪ ಮಾತಾಡುವ ಮೊದಲೇ ಆ ಯುವಕ ಅವರ ಕೈಯಲ್ಲಿ ಪರ್ಸ್ ಕೊಟ್ಟು ಹೋಗಿಯೇ ಬಿಟ್ಟ, ರಾಜಪ್ಪ ಕಕ್ಕಾಬಿಕ್ಕಿ ಅವಸ್ಥೆಯಲ್ಲಿ ಅವನು ಕೊಟ್ಟ ಪರ್ಸನ್ನು ನೋಡುತ್ತಿದ್ದರು. 

ನಡುಗುವ ಕೈಯಿಂದ ಅವರು ಪರ್ಸ್ ತೆರೆದು ನೋಡಿದ್ದರು, ಪರ್ಸಲ್ಲಿ ಚಿಕ್ಕ ಸಾಯಿಬಾಬಾನ ಫೋಟೋ ಇತ್ತು ಹಾಗು ಒಳಗೆ ೨೦೦೦ ರೂಪಾಯಿಯ ಹಲವಾರು ನೋಟುಗಳಿದ್ದವು, ನಡುಗುವ ಕೈಯಿಂದಲೇ ರಾಯರು ರೂಪಾಯಿ ಲೆಕ್ಕ ಮಾಡಿದರು, ಸುಮಾರು ೫೦ ನೋಟುಗಳಿದ್ದವು ಎರಡು ಸಾವಿರ ರೂಪಾಯಿಯ, ಪರ್ಸಲ್ಲಿ ಬೇರೆ ಯಾವುದೇ ವಸ್ತು ಇರಲಿಲ್ಲ,ಯಾರದಾಗಿರಬಹುದು ಈ ಪರ್ಸ್? ಹುಡುಗ ಸಹ ಹೋಗಿಯೇ ಬಿಟ್ಟ, ಇಷ್ಟೊಂದು ಹಣ ಯಾರದ್ದು? ಇದು ಸಾಯಿಬಾಬಾನ ಚಮತ್ಕಾರವೇ?, ಛೆ! ಛೆ! ಹಾಗೆಲ್ಲ ಏನು,  ಈ ಕಾಲದಲ್ಲಿ ಹಾಗೇನು ಸಂಭವವಿಲ್ಲ, ಏನು ಮಾಡಲಿ ಈಗ? ಪೊಲೀಸ್ ಸ್ಟೇಷನ್ ಹೋಗಿ ಕೊಡಲೇನು, ಛೆ! ಬೇಡ ಅವರು ಈ ಹಣವನ್ನು ತಿಂದು ಬಿಡಬಹುದು, ಇಲ್ಲ ಇಲ್ಲ, ಎಲ್ಲಾ ಪೊಲೀಸರು ಹಾಗೆ ಇರುವುದಿಲ್ಲ, ಒಳ್ಳೆ ಆಫೀಸರ್ ಸಹ ಇದ್ದಾರೆ, ರಾಜಪ್ಪರ ಕಣ್ಣ ಮುಂದೆ ಪುನಃ ಮನೆಯ ದೃಶ್ಯ ಓಡಲಾರಂಭಿಸಿತು, ಪುನಃ ಯೋಚನೆ ಬದಲಾಯಿತು, ಹೇಗೋ ಹಣ ಬಂದಿದೆ ಇದರಿಂದ ಕಾಮತರ ಎಲ್ಲಾ ಸಾಲ ಕೊಟ್ಟು ಉಳಿದ ಹಣದಿಂದ ಆದಾಯಗೋಸ್ಕರ ಯಾವುದೇ ಚಿಕ್ಕಪುಟ್ಟ ವ್ಯಾಪಾರ ಮಾಡಬಹುದು, ರಾಜಪ್ಪ ಗೊಂದಲದಲ್ಲಿ ಬಿದ್ದರು, ಹೌದು, ಎಲ್ಲ ಕಷ್ಟ ದೂರವಾಗುತ್ತದೆ ಎಂದು ದೀರ್ಘವಾಗಿ ಯೋಚಿಸಿ ಅವರು ಕಾಮತರ ಅಂಗಡಿಯತ್ತ ಹೆಜ್ಜೆ ಇಟ್ಟರು. ಆದರೆ ಈ ತನಕ ಯಾವುದೇ ದುಷ್ಕಾರ್ಯ ಮಾಡದ ರಾಜಪ್ಪನವರ ಮನಸ್ಸು ಇದಕ್ಕೆ ಒಪ್ಪಲಿಲ್ಲ, ಅವರ ಹೆಜ್ಜೆ ತಂತಾನೆ ಪೊಲೀಸ್ ಸ್ಟೇಷನ್ ಕಡೆಗೆ ಸಾಗಿತು.

ಪೊಲೀಸ್ ಸ್ಟೇಷನ್ ನಲ್ಲಿ ಡ್ಯೂಟಿಯಲ್ಲಿ ಇನ್ಸ್ಪೆಕ್ಟರ್ ರಾವ್ ಇದ್ದರು, ರಾಜಪ್ಪ ಅವರ ಹತ್ತಿರ ಎಲ್ಲ ವಿಷಯ ತಿಳಿಸಿ ಆ ಪರ್ಸನ್ನು ಅವರಿಗೆ ಒಪ್ಪಿಸಿದರು, ಇನ್ಸ್ಪೆಕ್ಟರ್ ರಾವ್ ರಾಜಪ್ಪನವರನ್ನು ಆಶ್ಚರ್ಯದಿಂದ ನೋಡುತ್ತಾ ಅವರ ಎಲ್ಲ ವಿವರ ಬರೆದು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು, ಬಹುಶ ಈ ಕಾಲದಲ್ಲೂ ಇಂತಹ ಮನುಷ್ಯರಿರುತ್ತಾರಾ ಎಂದು ಯೋಚಿಸುತ್ತಿರಬೇಕು.

ಎಲ್ಲಾ ಪ್ರಕ್ರಿಯೆ ಮುಗಿದ ನಂತರ ರಾಜಪ್ಪ ಪೊಲೀಸ್ ಸ್ಟೇಷನ್ ನಿಂದ ಹೊರಗೆ ಬಂದರು. 

ಸ್ವಲ್ಪ ಹೊತ್ತು ಪುನಃ ಸರ್ಕಲ್ಲಿನ ಆ ಬೆಂಚಿನಲ್ಲಿ ಕುಳಿತು ಯೋಚಿಸುತ ಅವರು ನೇರ ಕಾಮತರ ಅಂಗಡಿಗೆ ಹೋದರು. 

ಹಿಂಜರಿಯುತ್ತಲೇ ರಾಜಪ್ಪ ಕಾಮತರಿಗೆ ಮನೆಗೆ ಸ್ವಲ್ಪ ಸಾಮಾನು ಬೇಕೆಂದು ಕೇಳಿದರು, ಕಾಮತರು ಕನ್ನಡಕ ಕೆಳಗೆ ಮಾಡಿ ಅವರನ್ನು ನೋಡುತ್ತಾ " ರಾಯರೇ ಮೊದಲೇ ಇಪ್ಪತ್ತೆರಡು ಸಾವಿರ ಬಾಕಿಯಿದೆ"

ರಾಜಪ್ಪ" ಈ  ಒಂದು ಸಲ ಕೊಡಿ, ಮುಂದಿನ ವಾರ ಹಣದ ವ್ಯವಸ್ಥೆ ಮಾಡಿ ಎಲ್ಲ ಹಣ ಕೊಟ್ಟು ಬಿಡುತ್ತೇನೆ ಕಾಮತರೇ".

ಹಳೆ ವ್ಯಾವರಿಕ ಸಂಬಂಧ ಹಾಗು ರಾಜಪ್ಪನ ಮನೆಯ ಎಲ್ಲ ವಿಷಯ ತಿಳಿದ ಕಾಮತರು ತನ್ನ ಹುಡುಗನನ್ನು ಕರೆದು "ಮಂಜು, ರಾಯರ ಸಾಮಾನು ಬರೆದು ಎಲ್ಲ ಸಾಮಾನು ಅವರ ಮನೆಗೆ ಕೊಟ್ಟು ಬಾ" ಹಾಗು ಕಾಮತರು ರಾಜಪ್ಪನವರಿಗೆ "ರಾಯರೇ ಅಲ್ಲಿ ಹೋಗಿ ಲಿಸ್ಟ್ ಬರೆಸಿ, ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಸಾಮಾನು ಮನೆಗೆ ತಲುಪಿಸುತ್ತೇನೆ".

ನಿಟ್ಟುಸಿರು ಬಿಡುತ್ತಾ ರಾಜಪ್ಪನವರು ಕಾಮತರಿಗೆ ಧನ್ಯವಾದ ಸಲ್ಲಿಸಿ ಹಾಗು ಸಾಮಾನು ಬರೆಸಿ ಮನೆಗೆ ಹೋಗಲು ಬಸ್ ಸ್ಥಾನದತ್ತ ಹೆಜ್ಜೆ ಇಟ್ಟರು.

ರಾಜಪ್ಪನವರು ಮನೆಗೆ ತಲುಪಿದಾಗ ಮನೆಯಲ್ಲಿ ಒಬ್ಬ ಯುವಕ ಕುಳಿತಿದ್ದ, ರಾಜಪ್ಪನವರು ಅವನನ್ನು ಆಶ್ಚರ್ಯದಿಂದ ನೋಡುತ್ತಿದ್ದಾಗ, ಅವರ ಸೊಸೆ "ಅಪ್ಪ, ಇವರು ಮುಂಬೈಯಿಂದ ಬಂದಿದ್ದಾರೆ, ಏನೋ ಇನ್ಶೂರೆನ್ಸ್ ಬಗ್ಗೆ ಹೇಳುತ್ತಿದ್ದಾರೆ". 

ಆಗ ಆ ಯುವಕ "ನಮಸ್ಕಾರ ಸರ್, ನನ್ನ ಹೆಸರು ವಿಶ್ವಾಸ, ಮುಂಬೈಯಿಂದ ಬಂದಿದ್ದೇನೆ, ನಾನೊಬ್ಬ ಇನ್ಶೂರೆನ್ಸ್ ಏಜೆಂಟ್, ಕಳೆದ ವಾರ ನಿಮ್ಮ ಮಗ ಸುದೀಪನ ಕಂಪನಿಗೆ ಹೋಗಿದ್ದೆ, ಆಗ ಅವನ ವಿಷಯ ಕೇಳಿ ತುಂಬಾ ಬೇಜಾರಾಯಿತು, ನಾವು ಒಳ್ಳೆ ಸ್ನೇಹಿತರಾಗಿದ್ದೆವು, ಅವನ ವಿಷಯ ಕೇಳಿ ನನಗೆ ತುಂಬಾ ಆಘಾತವಾಯಿತು. ಸರ್ ಮುಂಬೈಯಲ್ಲಿದ್ದಾಗ ಸುದೀಪ ನನ್ನ ಒತ್ತಾಯದ ಮೇರೆಗೆ ನನ್ನಿಂದ ಎರಡು ಇನ್ಶೂರೆನ್ಸ್ ಪಾಲಿಸಿ ಮಾಡಿಸಿದ್ದ ಹಾಗು ನಾಮಿನಿ ಆಗಿ ಒಂದರಲ್ಲಿ ಅವನ ತಾಯಿಯ ಹಾಗು ಇನ್ನೊಂದರಲ್ಲಿ ಅವನ ಪತ್ನಿಯ ಹೆಸರು ಬರೆಸಿದ್ದ, ಸರ್ ನಿಮಗೆ ಈ ಇನ್ಶೂರೆನ್ಸ್ ನ ವಿಷಯ ಗೊತ್ತಿರಲಿಕ್ಕೆ ಇಲ್ಲ ಹಾಗು ನಿಮಗೆ ತಿಳಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ಕೂಡಲೇ ಇಲ್ಲಿಗೆ ಬಂದೆ, ಸರ್ ಐದು ಐದು ಲಕ್ಷದ ಎರಡು ಪಾಲಿಸಿ ಮಾಡಿಸಿದ್ದ ಅವನು, ಅದರ ಕ್ಲೇಮ್ ಪೇಪರ್ ತಂದಿದ್ದೇನೆ, ಈ ಕ್ಲೇಮ್ ಪೇಪರಲ್ಲಿ ಬರೆಯಲು ಅಮ್ಮನ ಹಾಗು ಅವನ ಪತ್ನಿಯ ಬ್ಯಾಂಕ್ ಡೀಟೇಲ್ಸ್ ಬೇಕು ಹಾಗು ಅವರ ಸಹಿ ಬೇಕು, ಒಂದು ೧೫ ದಿವಸದಲ್ಲಿ ಅವರ ಅಕೌಂಟಿಗೆ ಐದು ಐದು ಲಕ್ಷ ಅಮೌಂಟ್ ಟ್ರಾನ್ಸ್ಫರ್ ಆಗುತ್ತದೆ" ಎಂದು ಹೇಳಿ ರಾಜಪ್ಪನವರಿಗೆ ಕ್ಲೇಮ್ ಪೇಪರ್ ಕೊಟ್ಟ.

ರಾಜಪ್ಪನವರು ಅವನ ಮಾತು ಕೇಳಿ ಆಶ್ಚರ್ಯ ಹರುಷದಿಂದ ಅವನನ್ನು ತಬ್ಬಿಕೊಂಡರು "ಮಗ ನಿನಗೆ ತಿಳಿದಿಲ್ಲ ನೀನಿಂದು ದೇವಧೂತನಾಗಿ ನಮ್ಮ ಈ ಮನೆಗೆ ಬಂದಿದೆಯೆಂದು, ಹೇಗೆ ನಿನಗೆ ಹೇಳಲಿ, ನಮ್ಮಲ್ಲಿ ಬಂದಿದ ನಿನಗೆ ಒಂದು ಚಹಾ ಮಾಡಿ ಕುಡಿಸಲೆಂದರೆ ಮನೆಯಲ್ಲಿ ಈಗ ಸಾಮಾನು ಇಲ್ಲ, ಹೇಳಲು ಬೇಸರವಾಗುತ್ತಿದೆ, ನಮ್ಮನ್ನು ಕ್ಷಮಿಸು ಮಗ".

ಅದಕ್ಕೆ ವಿಶ್ವಾಸ "ಅದರ ಏನು ಅಗತ್ಯವಿಲ್ಲ ಅಂಕಲ್, ಅದೆಲ್ಲ ಬಿಡಿ, ಒಂದು ವಿಷಯ ಹೇಳಲು ಮರೆತೆ, ನಾನು ಅವನಿಂದ ಅಡ್ವಾನ್ಸ್ ಆಗಿ ಇಪ್ಪತ್ತು ಸಾವಿರ ರೂಪಾಯಿ ಕಂತು ತುಂಬಿಸಲು ತೆಗೆದುಕೊಂಡಿದ್ದೆ, ಆದರೆ ಡ್ಯುಡೇಟ್ ಬರುವ ಮುಂಚೆನೇ ಈ ದುರಂತ ನಡೆದು ಹೋಯಿತು, ಇನ್ನು ಆ ಕಂತು ತುಂಬಿಸುವ ಅಗತ್ಯವಿಲ್ಲ" ಎಂದು ತನ್ನ ಬ್ಯಾಗಿನಿಂದ ಇಪ್ಪತ್ತು ಸಾವಿರ ತೆಗೆದು ರಾಜಪ್ಪನ ಕೈಯಲ್ಲಿಟ್ಟ"

ರಾಜಪ್ಪನವರು "ಮಗ, ನಿನಗೆ ಹೇಗೆ ಧನ್ಯವಾದ ಸಲ್ಲಿಸಲಿಯೆಂದು ಅರ್ಥವಾಗುತ್ತಿಲ್ಲ".

"ಅದೇನು ಬೇಡ ಅಂಕಲ್, ನಾನೂ ನಿಮ್ಮ ಮಗನ ಹಾಗೆಯೇ" ಎಂದು ಹೇಳಿ ರಾಜಪ್ಪನವರಿಂದ ಭಾಗ್ಯಮ್ಮ ಮತ್ತು ಸುಮಳ ಬ್ಯಾಂಕ್ ಡೀಟೇಲ್ಸ್ ಬರೆಸಿ, ಸಹಿ ಮಾಡಿಸಿ, ಅವರ ಆಶೀರ್ವಾದ ಪಡೆದು ವಿಶ್ವಾಸ ಮನೆಯಿಂದ ತೆರಳಿದ.

ರಾಜಪ್ಪ, ಭಾಗ್ಯಮ್ಮ ಹಾಗು ಸುಮಳ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತು.

ರಾಜಪ್ಪ ಮನೆಯಲ್ಲಿದ್ದ ಮಂದಹಾಸ ಬೀರುತ್ತಿರುವ ಸಾಯಿಬಾಬಾನ ಫೋಟೋದ ಹತ್ತಿರ ಹೋಗಿ ಅಡ್ಡ ಬಿದ್ದರು.

by ಹರೀಶ್ ಶೆಟ್ಟಿ, ಶಿರ್ವ


Thursday, February 10, 2022

ನೈತಿಕತೆ

 


ರಘು ಆ ಮಸೀದಿ, ದೇವಾಲಯದ ಬದಿಯಲ್ಲಿ ಹೂ ಹಾರದ ಅಂಗಡಿ ಇಟ್ಟ್ಕೊಂಡಿದ್ದ, ಅವನ ಪಕ್ಕದಲ್ಲಿಯೇ ನಫೀಸಾ ಮತ್ತು ರಾಜು ಇಬ್ಬರು ಭಿಕ್ಷೆ ಬೇಡಲು ಕುಳಿತುಕೊಳ್ಳುತ್ತಿದ್ದರು.

ಈ ಕಡೆ ದೇವಾಲಯ ಆ ಕಡೆ ಮಸೀದಿ, ಒಳ್ಳೆ ಭಿಕ್ಷೆ ಸಿಗುತ್ತಿತ್ತು ಅವರಿಗೆ, ಆದರೆ ಎರಡು ದಿನದಿಂದ ಅವರು ಭಿಕ್ಷೆ ಬೇಡಲು ಬರಲೇ ಇಲ್ಲ, ಅವರು ಕುಳಿತುಕೊಳ್ಳುವ ಜಾಗ ಖಾಲಿ ಇತ್ತು. 

ರಘುಗೆ ಇದು ಸ್ವಲ್ಪ ಆಶ್ಚರ್ಯವೆನಿಸಿತು, ಒಂದು ದಿವಸ ಸಹ ತಪ್ಪದೆ ಬರುವ ಇವರಿಬ್ವರು ಎಲ್ಲಿಗೆ ಹೋಗಿರಬಹುದೆಂದು. 

ಆಗ ಅವನು ಎದುರಿನಿಂದ ರಾಜು ಬರುವುದನ್ನು ನೋಡಿದ, ಅವನ ಕೈಯಲ್ಲಿ ಕೇಸರಿ ಶಾಲು ಇತ್ತು, ರಘು ಅವನಿಗೆ ಕೇಳಬೇಕೆಂದಾಗ, ಅವನು ನಫೀಸಾ ಸಹ ಬರುವುದನ್ನು ಕಂಡ, ಇಬ್ಬರು ಅವರ ಜಾಗಕ್ಕೆ ಬಂದಾಗ "ಏನು ರಾಜು, ನಫೀಸಾ ಎಲ್ಲಿಗೆ ಹೋಗಿದ್ದಿರಿ ಎರಡು ದಿವಸ?". 

ಅದಕ್ಕೆ ರಾಜು "ಐದಾರೂ ಜನ ಬಂದಿದ್ದರು ಅಣ್ಣ, ಹಣದ ಆಸೆ ಕೊಟ್ಟರು ನನಗೆ, ಸ್ವಲ್ಪ ಹಣದ ಆಸೆಗೆ ಅವರು ಕೊಟ್ಟ ಈ ಕೇಸರಿ ಶಾಲು ಧರಿಸಿದ್ದೆ, ಕುತ್ತಿಗೆ ಬಿಗಿದಂತಾಯಿತು ಅಲ್ಲಿಯ ಸ್ಥಿತಿ ನೋಡಿ, ವಾಪಸ್ ಬಂದೆ, ಬೇಡ ಇದೆಲ್ಲ, ನಾನು ಸರಿ, ನನಗಿಲ್ಲಿ ಸಿಗುವ ಭಿಕ್ಷೆ ಸಾಕೆನಿಸಿತು." ಎಂದು ರಾಜು ಆ ಕೇಸರಿ ಶಾಲು ಬದಿಗಿಟ್ಟ. 

ರಘು " ನಫೀಸಾ ನೀನು?" ನಫೀಸಾ "ಅಣ್ಣ, ನನಗೂ ಅವರು ಬುರ್ಖಾ, ಹಿಜಾಬ್ ಕೊಟ್ಟಿದ್ದರು, ಅದನ್ನು ಧರಿಸಿ ಯಾಕೋ ಉಸಿರು ಕಟ್ಟಿದಂತಾಯಿತು ಪರಸ್ಪರ ನಮ್ಮವರ ಮಧ್ಯದಲ್ಲೇ ಜಗಳ ನೋಡಿ, ವಾಪಸ್ ಬಂದೆ, ಅಂತಹ ಹಣ ಬೇಡ, ಇಲ್ಲಿ ಸಿಗುವ ಭಿಕ್ಷೆಯೆ ಒಳಿತೆನಿಸಿತು". 

ಅವರ ಮಾತು ಕೇಳಿ ರಘು ಒಂದು ಉಸಿರೆಳೆದು ಆಕಾಶದತ್ತ ನೋಡಿದ. 


by ಹರೀಶ್ ಶೆಟ್ಟಿ, ಶಿರ್ವ


Tuesday, January 25, 2022

ಭಿಕ್ಷುಕ

photo courtesy: Google


ಆ ಮುದಿ ಭಿಕ್ಷುಕ ಪ್ರತಿ ಗುರುವಾರ ರವಿಯ ಅಂಗಡಿಯ ಎದುರು ಬಂದು ಭಿಕ್ಷೆಗೆ ನಿಲ್ಲುತ್ತಿದ್ದ, ಉಪಕಾರಬುದ್ಧಿಯುಳ್ಳ ರವಿಗೆ ಯಾಕೋ ಅವನನ್ನು ನೋಡಿ ಕರುಣೆ ಮೂಡುತ್ತಿತ್ತು ಹಾಗು ಅವನು ಬದಿಯ ಹೋಟೆಲಿನಿಂದ ಅವನಿಗೆ ಊಟ ಆರ್ಡರ್ ಮಾಡಿ ತಿನಿಸುತ್ತಿದ್ದ, ಅವರ ಮಧ್ಯೆ ಯಾವುದೇ ಸಂಭಾಷಣೆ ಇರುತ್ತಿರಲಿಲ್ಲ ಆದರೆ ಪ್ರತಿ ಗುರುವಾರ ಇದೆ ಒಂದು ರೂಢಿಯಾಗಿ ಹೋಯಿತು, ಆ ಭಿಕ್ಷುಕ ಬರುತ್ತಿದ್ದ ರವಿ ಬದಿಯ ಹೋಟೆಲಿನಿಂದ ಊಟ ತರಿಸಿ ಅವನಿಗೆ ಕೊಡುತ್ತಿದ್ದ.

ಕೋವಿಡ್‌ ಸಮಯದಲ್ಲಿ ರವಿ ವ್ಯಾಪಾರ ಇಲ್ಲದೆ ವ್ಯಾಪಾರದಲ್ಲಿ ತುಂಬಾ ನಷ್ಟ ಅಬುಭಾವಿಸಿದ, ಅಂಗಡಿಯ ಬಾಡಿಗೆ ಕೊಡಲು ಸಹ ಅವನಿಂದ ಅಸಾಧ್ಯವಾಯಿತು.

ಬಾಡಿಗೆ ಕೊಡದೆ ಅಂಗಡಿ ಮಾಲೀಕ ಅವನಿಗೆ ನೋಟೀಸ್ ಕೊಟ್ಟು ಅಂಗಡಿ ಖಾಲಿ ಮಾಡಲು ಒಂದು ತಿಂಗಳ ಸಮಯ ಕೊಟ್ಟ, ರವಿಗೆ ಇನ್ನು ಅಂಗಡಿ ಬಿಡುವುದಲ್ಲದೆ ಬೇರೆ ದಾರಿ ಇರಲಿಲ್ಲ.

ಆ ಗುರುವಾರ ಸಹ ಆ ಮುದಿ ಭಿಕ್ಷುಕ ಬಂದು ರವಿಯ ಅಂಗಡಿಯ ಎದುರು ನಿಂತ, ರವಿ ಆ ಕಷ್ಟದಲ್ಲಿಯೂ ಬದಿಯ ಹೋಟೆಲಿನಿಂದ ಆತನಿಗೆ ಊಟ ತಂದು ಕೊಟ್ಟು "ಅಜ್ಜ ಇದು ನನ್ನಿಂದ ನಿಮಗೆ ಅಂತಿಮ ಊಟ, ಬರುವ ಗುರುವಾರ ಈ ಅಂಗಡಿಯಲ್ಲಿ ನಾನು ಇರಲ್ಲ, ರವಿಯಿಂದ ಊಟ ತೆಗೆದುಕೊಂಡು ಮುದುಕ ಕಣ್ಣೆತ್ತಿ ರವಿಯನ್ನು ನೋಡಿ ಕೇಳಿದ "ಸಾರ್ ನಿಮಗೆ ಒಂದು ಕೇಳಲ?" 

ರವಿ "ಏನು? ಹಣ ಒಂದು ಕೇಳ್ಬೇಡಿ, ನನ್ನ ಪರಿಸ್ಥಿತಿ ಮೊದಲೇ ಗಂಭೀರವಾಗಿದೆ, ಅಂಗಡಿ ಖಾಲಿ ಮಾಡುತ್ತಿದ್ದೇನೆ, ತುಂಬಾ ನಷ್ಟ ಅನುಭವಿಸಿದೆ ಈ ಕೋವಿಡ್‌ ಬಂದು, ಇದ್ದ ಹಣವೆಲ್ಲಾ ನೀರಾಯಿತು, ಈಗ ಈ ಅಂಗಡಿಗೆ ಇನ್ನು ಬಂಡವಾಳ ಮಾಡಲಿಕ್ಕೆ ಹಣ ಇಲ್ಲ, ಮೇಲಿಂದ ಆರು ತಿಂಗಳ ಬಾಡಿಗೆ ಬಾಕಿ ಉಂಟು" ಎಂದು ರವಿ ತನ್ನ ಮನಸ್ಸಲ್ಲಿದ್ದ ಗೋಳು ಹೇಳಿಯೇ ಬಿಟ್ಟ ಆ ಭಿಕ್ಷುಕನ ಮುಂದೆ.

ರವಿಯ ಮಾತು ಕೇಳಿ ಭಿಕ್ಷುಕ ತನ್ನ ಚೀಲಕ್ಕೆ ಕೈ ಹಾಕಿ ಒಂದು ಗಂಟು ತೆಗೆದು ರವಿಯ ಕೈಯಲ್ಲಿಟ್ಟ. 

ರವಿ ಆಶ್ಚರ್ಯದಿಂದ "ಏನಿದು?"

ಭಿಕ್ಷುಕ "ಇದರಲ್ಲಿ ಒಂದೂವರೆ ಲಕ್ಷ ಹಣ ಇದೆ, ಇದು ನಿಮಗೆ, ನನ್ನ ಹೆಸರು ವೆಂಕಟೇಶ, ಮೂರು ವರುಷದಿಂದ ಮನೆಯಿಂದ ಹೊರ ಬಿದ್ದ ನಂತರ ನಾನು ಅಲ್ಲಿ ಇಲ್ಲಿ ನಲಿಯುತ್ತಿದ್ದೇನೆ, ಇದ್ದ ಒಬ್ಬನೇ ಒಬ್ಬ ಮಗನಿಗೆ ಅವನ ಸಂಸಾರದಲ್ಲಿ ನಾನು ಅವನಿಗೆ ಬೇಡವಾದೆ, ಒಂದು ದಿನ ತಾಳ್ಮೆ ಕಳೆದು ನನಗೆ ಹೇಳಿಯೇ ಬಿಟ್ಟ ಇನ್ನು ನಿಮ್ಮ ಭಾರ ಹೊಯ್ಯಲು ನನ್ನಿಂದಾಗದು ಎಂದು, ತುಂಬಾ ದುಃಖಿತನಾದೆ, ಅವನ ಅಮ್ಮ ಮೊದಲೇ ನನ್ನನ್ನು ಬಿಟ್ಟು ದೇವರ ಮನೆ ಸೇರಿಬಿಟ್ಟಿದಳು, ಈ ಆಘಾತದಿಂದ ಏನೂ ತೋಚದೆ ಅಲ್ಲಿ ಇಲ್ಲಿ ನಲಿದೆ, ಈಗ ಅಭ್ಯಾಸ ಆಗಿಹೋಯಿತು, ಒಬ್ಬರಿಗೆ ನಾವು ಬೇಡವೆಂದ ಮೇಲೆ ಅವರೊಟ್ಟಿಗೆ ಇದ್ದು ಸಹ ಏನು ಪ್ರಯೋಜನ, ಬಿಡಿ ಆ ವಿಷಯ, ನಾನು ಕೆಲಸದಲ್ಲಿದ್ದಾಗ ಕಷ್ಟ ಸಮಯಕ್ಕೆಂದು ಯಾರಿಗೂ ಹೇಳದೆ ಒಂದು ಲಕ್ಷ ರೂಪಾಯಿ ಫಿಕ್ಸೆಡ್ ಡೆಪೋಸಿಟಲ್ಲಿ ಇಟ್ಟಿದೆ, ಮನೆ ಬಿಟ್ಟ ಮೇಲೆ ಯಾವುದರಲ್ಲೂ ಆಸಕ್ತಿ ಇಲ್ಲದೇ ಈ ವಿಷಯ ಗೊತ್ತಿದ್ದೂ ಸಹ ನಾನು ಹೋಗಲೇ ಇಲ್ಲ ತೆಗಯಲಿಕ್ಕೆ, ಮಗನಿಗೆ ಅದರ ಬಗ್ಗೆ ಹೇಳುತ್ತಿದ್ದಾರೆ, ಅದನ್ನೂ ನುಂಗಿ ಬಿಡುತ್ತಿದ್ದ, ಕಳೆದ ಗುರುವಾರ ನಾನು ಬಂದಾಗ ನಿಮ್ಮ ಮತ್ತು ನಿಮ್ಮ ಮಾಲಕರ ಸಂಭಾಷಣೆ ಕೇಳಿದೆ, ಕೂಡಲೇ ಬ್ಯಾಂಕ್ ಹೋಗಿ ಆ ಹಣ ಕೊಂಡು ಬಂದೆ, ಇದು ಅದೇ ಹಣ, ಇದರಿಂದ ನೀವು ನಿಮ್ಮ ವ್ಯಾಪಾರ ಸರಿ ಮಾಡಿಕೊಳ್ಳಿ, ನನಗೆ ಈಗ ಈ ಹಣ ವ್ಯರ್ಥ. 

ರವಿ "ಆದರೆ ಅಜ್ಜ ಈ ಹಣ ನಿಮ್ಮದು ಹಾಗು ನಿಮ್ಮ ಮಗ ಇದರ ಹಕ್ಕುದಾರ".

"ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ಗುರುವಾರ ಕೇಳದೆ ನನಗೆ ಅನ್ನ ನೀಡಿದ ನೀವೇ ನನ್ನ ನಿಜವಾದ ಮಗ, ನನ್ನ ನಿರ್ಧಾರ ಸರಿಯಾಗಿದೆ, ಬರುವ ಗುರುವಾರ ಬರುತ್ತೇನೆ" ಎಂದು ಹೇಳಿ ಹೊರಟೇಬಿಟ್ಟರು ವೆಂಕಟೇಶ್ ಎಂಬ ಮಹಾನುಭಾವ. ರವಿ ವಿಸ್ಮಯದಿಂದ ಅವರು ಹೋಗುವುನೋದನ್ನು ನೋಡಿತ್ತಿದ್ದ, ಹಿಂದಿಂದ ಅವನಿಗೆ ಅವನ ಇಷ್ಟ ದೇವರು ಸಾಯಿಬಾಬ ಹೋಗುತ್ತಿರುವಂತೆ ಕಂಡು ಬಂತು. 


by ಹರೀಶ್ ಶೆಟ್ಟಿ, ಶಿರ್ವ

Sunday, January 23, 2022

ಭಾವನಾತ್ಮಕ ವಂಚನೆ

 "ನಾನು ಸುಮಾ, ನನ್ನ ವಯಸ್ಸು ೨೨, ನನ್ನ ಅಪ್ಪ ಕೆಲವು ದಿನದಿಂದ ಅರೋಗ್ಯ ಸರಿ ಇಲ್ಲದೆ ನರಳುತ್ತಿದ್ದಾರೆ, ಮನೆಯಲ್ಲಿ ಅಪ್ಪ ಒಬ್ಬರೇ ದುಡಿಯುತ್ತಿದ್ದ ಕಾರಣ ಮನೆಯ ಖರ್ಚು ಹೇಗೋ ಸಾಗುತಿತ್ತು, ಆದರೆ ಈಗ ಅವರು ಹಾಸಿಗೆ ಹಿಡಿದ ನಂತರ ಮನೆಯ ಪರಿಸ್ಥಿತಿ ಗಂಭೀರವಾಗಿದೆ, ನಾನು ಕಾಲೇಜ್ ಮುಗಿಸಿ ಕೆಲಸ ಸಿಗದೇ ಮನೆಯಲ್ಲೇ ಇದ್ದೇನೆ, ಸದ್ಯ ಯಾವುದೇ ಆದಾಯ ಇಲ್ಲದೆ ನಾವು ತುಂಬಾ ಕಷ್ಟದಲ್ಲಿದ್ದೇವೆ, ಆ ಕಾರಣ ನಾವು ಅವರನ್ನು ಆಸ್ಪತ್ರೆ ಸೇರಿಸುವ ಸ್ಥಿತಿಯಲ್ಲೂ ಇಲ್ಲ, ಅಪ್ಪನ ಚಿಕೆತ್ಸೆಗೆ ಸುಮಾರು ಮೂರು ಲಕ್ಷ ಖರ್ಚು ಆಗುತ್ತದೆಯೆಂದು ಡಾಕ್ಟರ್ ತಿಳಿಸಿದ್ದಾರೆ, ದಯಮಾಡಿ ತಾವೆಲ್ಲರೂ ನನಗೆ ಸಹಾಯ ಮಾಡಿ  ಈ ಸಂಕಟದಿಂದ ಪಾರು ಮಾಡಬೇಕೆಂದು ನಿಮ್ಮೆಲ್ಲರಿಂದ ಬೇಡಿಕೊಳ್ಳುವೆ, ನನ್ನ ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ವಿವರಗಳನ್ನು ಈ ವಿಡಿಯೋದಲ್ಲಿ ಹಾಕಿದ್ದೇನೆ ಹಾಗು ಅಪ್ಪನ ರಿಪೋರ್ಟ್ ಕಾಪಿ, ಫೋಟೋ ಸಹ ಹಾಕಿದ್ದೇನೆ, ದಯಮಾಡಿ ಸಹಕರಿಸಿ" ಎಂದು ಕಣ್ಣೀರು ಬಿಡುತ್ತಿದ್ದ ಆ ಸುಮಾ ಎಂಬ ಹುಡುಗಿಯ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ನೋಡಿ ರವಿಗೆ ತುಂಬಾ ಬೇಸರವಾಯಿತು ಹಾಗು ಇವಳಿಗೆ ಸಹಾಯ ಮಾಡಲೇಬೇಕೆಂಬ ನಿರ್ಧಾರಕ್ಕೆ ಬಂದ.

ರವಿ ಕೂಡಲೇ ಬ್ಯಾಂಕಿಂಗೆ ಹೋಗಿ ಹುಡುಗಿ ವಿಡಿಯೋದಲ್ಲಿ ತಿಳಿಸಿದ ಅಕೌಂಟಿಗೆ ೫೦೦೦ ರೂಪಾಯಿ ರವಾನಿಸಿದ ಹಾಗು ತಾನು ಒಂದು ಒಳ್ಳೆ ಕೆಲಸ ಮಾಡಿದೆಯೆಂದು ತೃಪ್ತಿ ಪಡೆದ.

ರವಿ ಬ್ಯಾಂಕಿನ ಬದಿಯಲ್ಲಿದ್ದ ಚಾ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದಾಗ ಹಠಾತ್ತಾಗಿ ಕಾಕತಾಳೀಯವಾಗಿ ಏನೋ ಅವನಿಗೆ ವಿಡಿಯೋದಲ್ಲಿದ್ದ ಆ ಹುಡುಗಿ ಸುಮಾ ಕಂಡು ಬಂದಳು, ಅವಳು ಒಂದು ರಿಕ್ಷಾದಿಂದ ಇಳಿದು ಬ್ಯಾಂಕಿನ ಎಟಿಎಂ ಕಡೆ ಹೋಗುತ್ತಿದ್ದಳು, ರವಿ ಅವಳನ್ನು ಮಾತನಾಡಿಸಿ ತಾನು ಮಾಡಿದ ಸಹಾಯದ ಬಗ್ಗೆ ಹೇಳಬೇಕೆಂದು ಯೋಚಿಸುವಷ್ಟರಲ್ಲಿ ಆ ಹುಡುಗಿ ಬ್ಯಾಂಕ್ ಎಟಿಎಂನಿಂದ ಹೊರ ಬಂದು ಪುನಃ ಆ ರಿಕ್ಷಾದಲ್ಲಿ ಕುಳಿತು ಹೊರಟುಬಿಟ್ಟಳು. ರವಿ ಅವಸರ ಅವಸರದಲ್ಲಿ ಒಂದು ರಿಕ್ಷಾ ಮಾಡಿ ಅವಳನ್ನು ಹಿಂಬಾಲಿಸಿದ, ಒಂದು ೧೫ ನಿಮಿಷದ ನಂತರ ಅವಳ ರಿಕ್ಷಾದವ ತನ್ನ ರಿಕ್ಷಾ ಒಂದು ಹಳೆಯ ಮನ ಎದುರು ನಿಲ್ಲಿಸಿದ, ಹುಡುಗಿ ರಿಕ್ಷಾದವನಿಗೆ ಹಣ ಪಾವತಿಸಿ ಮನೆಯೊಳಗೇ ಹೋದಳು, ರವಿ ಸಹ ಬೇಗ ಬೇಗ ತನ್ನ ರಿಕ್ಷಾದವನಿಗೆ ಹಣ ಪಾವತಿಸಿ ಅವಳನ್ನು ಹಿಂಬಾಲಿಸಿದ, 

ರವಿ ಗೇಟ್ ಬಳಿ ಹೋದಾಗ ಹುಡುಗಿ ಮನೆಯೊಳಗೇ ಹೋಗಿಬಿಟ್ಟಿದ್ದಳು, ಮನೆ ಬಾಗಿಲು ತೆರೆದಿತ್ತು, ರವಿ ಮನೆಯೊಳಗೇ ಹೋಗಲೆಂದು ಯೋಚಿಸುವಾಗ ಒಳಗಿನಿಂದ ಮಾತನಾಡುವ ಸ್ವರ ಕೇಳಿ ಅಲ್ಲೇ ನಿಂತು ಬಿಟ್ಟ, ಒಳಗಿನಿಂದ ಅವಳ ಮಾತು ಕೇಳಿ ಬಂತು "ಮೂವತ್ತು ಸಾವಿರ ಬಂದಿತ್ತು, ೨೫ ಸಾವಿರ ಏಟಿಎಂನಿಂದ ತೆಗೆದೆ"

ನಂತರ ಒಂದು ಗಂಡಸಿನ ಸ್ವರ ಕೇಳಿ ಬಂತು"ಗುಡ್, ನಿನ್ನೆಯ ಹಣ ಸೇರಿಸಿ ಮೂರು ಲಕ್ಷ ಮೂವತೈದು ಸಾವಿರ ಈ ತನಕ ಒಟ್ಟಾಗಿದೆ, ನೋಡಿದೀಯ ನನ್ನ ಪ್ಲಾನಿನ ಮ್ಯಾಜಿಕ್" ಎಂದು ನಕ್ಕ ಸ್ವರ.

ಪುನಃ ಅವಳ ಸ್ವರ ಕೇಳಿ ಬಂತು "ಹೌದು, ಎರಡೇ ದಿನದಲ್ಲಿ ಇಷ್ಟು ಹಣ ಬಂತಲ್ಲ, ನಾವು ಎರಡು ವರ್ಷ ದುಡಿದರೂ ಇಷ್ಟು ಹಣ ಸಿಗಲಿಕ್ಕಿಲ್ಲ, ಆದರೆ ರಾಜು, ಯಾರಿಗಾದರೂ ಗೊತ್ತಾದರೆ ನಾವು ವಿಡಿಯೋದಲ್ಲಿ ಹಾಕಿದ ಅಪ್ಪನ ಫೋಟೋ ನೀನೆ ಎಂದು, ನೀನು ಮುದುಕನ ವೇಷ ಬದಲಾಯಿಸಿ ಹಾಕಿದದ್ದೆಂದು, ಯಾರದರೂ ನಾವು ಕೊಟ್ಟ ಮೊಬೈಲ್ ನಂಬರಿಗೆ ಕಾಲ್ ಮಾಡಿ ಅದು ಇದು ಎಂದು ಹಲವು ಪ್ರಶ್ನೆ ಕೇಳಿದರೆ, ಮತ್ತೆ ಬ್ಯಾಂಕಿಂಗೆ ಹೋಗಿ ಅಕೌಂಟ್ ಬಗ್ಗೆ ವಿಚಾರಿಸಿದರೆ"

ಅದಕ್ಕೆ ರಾಜು ಎಂಬ ಗಂಡಸು "ನೀನು ಟೆನ್ಶನ್ ಮಾಡಬೇಡ ಪ್ರಿಯೆ, ಕೇವಲ ಇನ್ನು ಎರಡೇ ದಿವಸ ಸಂಭಾಳಿಸು, ಕಾಲ್ ಬಂದರೆ ಬೇಸರದ ಸ್ವರದಲ್ಲಿ ಮಾತನಾಡು, ಯಾರಾದರೂ ಹೆಚ್ಚು ವಿಚಾರಿಸಿದರೆ ಬುದ್ಧಿವಂತಿಕೆಯಿಂದ ಉತ್ತರಿಸು, ಇಲ್ಲದೆ ಕಾಲ್ ಡಿಸ್ಕನೆಕ್ಟ್ ಮಾಡಿಬಿಡು, ಎರಡು ದಿನದಲ್ಲಿ ಇನ್ನು ಹಣ ಒಟ್ಟಾಗುತ್ತದೆ, 

ಆ ನಂತರ ಈ ಮೊಬೈಲ್ ನಂಬರ್ ಡಿಸ್ಕನೆಕ್ಟ್ ಮಾಡಿಬಿಡುವ ಹಾಗು ಬ್ಯಾಂಕ್ ಅಕೌಂಟ್ ಖಾಲಿ ಮಾಡಿ ಕ್ಲೋಸ್ ಮಾಡಿಬಿಡುವ, ನಂತರ ಬೇರೆ ಊರು ಬೇರೆ ಪ್ಲಾನು, ಹಹಹಹ" 

ಹುಡುಗಿ " ಹಹಹಹ, ನೀನು ಜೀನಿಯಸ್ ರಾಜು"ಎಂದು ಇಬ್ಬರ ಜೋರು ಜೋರು ನಗುವ ಸ್ವರ ಕೇಳಿ ಬಂತು.

ಹೊರಗೆ ನಿಂತ ರವಿ ಕಕ್ಕಾಬಿಕ್ಕಿಯಾಗಿ ಅವರ ಸಂಭಾಷಣೆ ಕೇಳುತ್ತಿದ್ದ. 


by ಹರೀಶ್ ಶೆಟ್ಟಿ,ಶಿರ್ವ

Saturday, January 22, 2022

ಆತ್ಮೀಯ ಸಂಬಂಧ

 

Photo courtesy: Google

ಕಾಂವ್, ಕಾಂವ್", 

ಆ ಕಾಗೆಯ ವಿಚಿತ್ರ ಕೂಗು ಇಡೀ ಪರಿಸರದಲ್ಲಿ ಕೇಳಿ ಬರುತಿತ್ತು.

ರವಿವಾರದ ದಿವಸ ಆರಾಮವಾಗಿ ಬೆಳಿಗ್ಗೆ ಚಾ ಕುಡಿಯುತ್ತಾ ದಿನಪತ್ರಿಕೆ ಓದುತ್ತಿದ್ದ ಗಣೇಶ ಆ ಕಾಗೆಯ ಕೂಗಿನಿಂದ ಬೇಸತ್ತು, ಹೆಂಡತಿ ಮಾಲತಿಯನ್ನು ಕರೆದು "ಹೇ ಮಾಲತಿ ಏನಿದು ಆ ಪಕ್ಕದ ಮನೆಯ ಕಿಟಕಿಯಲ್ಲಿ ಆ ಕಾಗೆ ಹೀಗೆ ಕಿರುಚುತ್ತಿದೆ? ಒಮ್ಮೆ ಅಟ್ಟಿಬಿಡು ಆಚೆ ಅದನ್ನು"

ಮಾಲತಿ " ಹೌದ್ರಿ ನಾನು ಸಹ ಕೇಳ್ತ ಇದ್ದೇನೆ, ಅದು ನಮ್ಮ ಪಕ್ಕದ ಗಂಗೂ ಆಂಟಿಯ ಮನೆಗೆ ದಿನನಿತ್ಯ ಬರುವ ಕಾಗೆ, ಗಂಗೂ ಆಂಟಿ ದಿನ ಅದಕ್ಕೆ ತಿಂಡಿ ಕೊಟ್ಟು ಅದರ ಬುದ್ಧಿ ಕೆಡಿಸಿದ್ದಾರೆ, ಇವತ್ತೇನೋ ಅವರಿಗೆ ಎದ್ದೇಳಲು ತಡವಾದಂತೆ ಕಾಣುತ್ತದೆ".

"ಹ್ಮ್, ಜನರಿಗೆ ಏನೇನೋ ಹವ್ಯಾಸ, ಇತರರಿಗೆ ಕಷ್ಟ" ಎಂದು ಗಣೇಶ ಕೋಪದಿಂದ ಮುಖ ತಿರುಚಿ ಪುನಃ ದಿನಪತ್ರಿಕೆ ಓದಲಾರಂಭಿಸಿದ.

ಆದರೆ ಈಗ ಕಾಗೆ ಅವರ ಮನೆ ಕಿಟಕಿಯ ಹತ್ತಿರ ಸಹ ಹಾರಾಡುತ್ತ ಬಂದು ವಿಚಿತ್ರವಾಗಿ ಕೂಗಲಾರಂಭಿಸಿತು.

ಗಣೇಶನಿಗೆ ಸಿಟ್ಟು ನೆತ್ತಿಗೇರಿತು, "ಅಯ್ಯೋ ಮಾಲತಿ ಓಡಿಸೋ ಅದನ್ನು, ಸುಮ್ಮನೆ ರವಿವಾರದ ದಿವಸ ಸಹ ಶಾಂತಿಯಿಂದ ಕೂತುಕೊಳ್ಳುವ ಹಾಗೆ ಇಲ್ಲ.

"ರೀ ತಡೆಯಿರಿ", ನಾನು ನೋಡುತ್ತೇನೆ ಎಂದು ಕಾಗೆಯನ್ನು ಓಡಿಸಲು ಮಾಲತಿ ಕಾಗೆಯತ್ತ ಹೋದಾಗ, ಅವಳಿಗೆ ಕಾಗೆಯ ಕಣ್ಣು ಏನೋ ಹೇಳುತ್ತಿದ್ದಂತೆ ಬಾಸವಾಯಿತು. ಅವಳು ಅಲ್ಲೇ ನಿಂತು ಗಣೇಶನಿಗೆ 'ರೀ ನನಗೆ ಏನೋ ಸರಿ ಕಾಣುತ್ತಿಲ್ಲ, ಈ ಕಾಗೆ ಅಂತಹದಲ್ಲ, ಗಂಗೂ ಆಂಟಿ ಇದರ ಜೊತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ, ದಿನ ಇದಕ್ಕೆ ತಿಂಡಿ ಕೊಟ್ಟು ಇದರ ಜೊತೆ ಒಂದೊಂದು ಗಂಟೆ ಮಾತಾನಾಡುತ್ತಾರೆ. ಗಂಗೂ ಆಂಟಿ ಕಾಗೆಯ ಇಷ್ಟು ಕೂಗು ಕೇಳಿ ನಿದ್ರಿಸಲು ಸಾಧ್ಯನೇ ಇಲ್ಲ. ಪಾಪ.... ಒಬ್ಬರೇ ಇರುವುದು ಅವರು, ಇದ್ದ ಒಬ್ಬ ಮಗ ಸಪರಿವಾರ ಪರದೇಶ ಸೆಟ್ಲ್ ಆದ ಮೇಲೆ ಈಚೆ ಮುಖ ಮಾಡಲಿಲ್ಲ, ಪಾಪ ಇವತ್ತು ಏನೋ ಅವರಿಗೆ ಸೌಖ್ಯವಿಲ್ಲ ಕಾಣುತ್ತದೆ , ನಾನು ಅವರ ಮನೆಗೆ ಹೋಗಿ ನೋಡಿ ಬರುತ್ತೇನೆ" ಎಂದು ಹೇಳಿ ಹೊರಗೆ ಪಕ್ಕದ ಮನೆಯತ್ತ ಹೋದಳು.

ಆದರೆ ಗಂಗೂ ಆಂಟಿಯ ಮನೆಯ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ, ಮಾಲತಿ ಪುನಃ ತನ್ನ ಮನೆಗೆ ಓಡಿ ಬಂದು ಗಣೇಶನಿಗೆ "ರೀ ಸ್ವಲ್ಪ ಬನ್ನಿ, ಏನೋ ಅನಾಹುತ ಆಗಿದಂತೆ ಕಾಣುತ್ತದೆ, ಗಂಗೂ ಆಂಟಿ ಬಾಗಿಲು ತೆರೆಯುತಿಲ್ಲ.


ಈಗ ಗಣೇಶ ಸಹ ಸ್ವಲ್ಪ ಚಿಂತಿತನಾಗಿ ಗಂಗೂ ಆಂಟಿಯ ಮನೆಗೆ ಓಡಿದ ಆದರೆ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಎಲ್ಲಾ ಮನೆಯವರು ಸಹ ಅಲ್ಲಿ ಒಟ್ಟಾದರು, ಗಣೇಶ ಮತ್ತು ಅವರೆಲ್ಲರ ಮಧ್ಯೆ ಈಗ ಏನು ಮಾಡುವುದು ಎಂದು ವಿಚಾರ ವಿಮರ್ಶೆ ನಡೆಯಿತು, ಅಂತಿಮವಾಗಿ ಅವರು ಬಾಗಿಲು ಮುರಿಯುವ ನಿರ್ಧಾರಕ್ಕೆ ಒಪ್ಪಿಕೊಂಡರು, ಕಾಗೆ ಈಗಲೂ ಕೂಗುತ್ತಲೇ ಇತ್ತು.


ಬಾಗಿಲು ಮುರಿಯಲಾಯಿತು, ಒಮ್ಮೆಲೇ ಎಲ್ಲರು ಒಳಗೆ ನುಗ್ಗಿದರು, ಒಳಗೆ ಹಾಸಿಗೆಯ ಮೇಲೆ ಶಾಂತಚಿತ್ತ ಮಲಗಿದರು ಗಂಗೂ ಆಂಟಿ, ಮಲಗಿದಲ್ಲೇ ಅವರು ಮೃತ್ಯುಗೆ ಶರಣಾಗಿದ್ದರು, ಮುಖದ ಮೇಲೆ ವೇದನೆಯ ಭಾವ ಇತ್ತು, ಅವರ ಕೈ ಅವರ ಎದೆಯ ಮೇಲೆ ಇತ್ತು ಹಾಗು ಕೈಯಲ್ಲಿ ಮಗನ ಫೋಟೋ ಹಿಡಿದಿದ್ದರು, ಬದಿಯ ಮೇಜಲ್ಲಿ ಒಂದು ಬಟ್ಟಲಲ್ಲಿ ಧಾನ್ಯ ಇಟ್ಟಿತ್ತು, ಬಹುಶ ಬೆಳಿಗ್ಗೆ ಕಾಗೆಗೆ ಕೊಡಲೆಂದೋ ಏನೋ, ಅದನ್ನು ನೋಡಿ ಮಾಲತಿ ಕಿಟಕಿಯತ್ತ ನೋಡಿದ್ದಳು, ಅಲ್ಲಿ ಒಳಗೆ ಇಣುಕುತ್ತಿದ್ದ ಕಾಗೆಯ ಕಣ್ಣಲ್ಲಿ ಅವಳಿಗೆ ನೀರು ಕಂಡು ಬಂತು, ಕಾಗೆ ಈಗ  ಕೂಗುತ್ತಿರಲಿಲ್ಲ, ಅದು ಮೌನವಾಗಿತ್ತು.



by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...