Saturday, November 12, 2011

ಮೊದಲ ಟೆಲಿಫೋನ್(ದೂರವಾಣಿ)

ಶ್ರೀಹರಿಯ ಊರಿನ ಸಾಹುಕಾರರ ಮನೆಯಲ್ಲಿ ಊರಿನ ಮೊದಲ ಟೆಲಿಫೋನ್(ದೂರವಾಣಿ) ಬಂದಿತ್ತು.

ಆ ದಿವಸ ಶ್ರೀಹರಿಯ ಶಾಲೆಯಲ್ಲಿ ವಿಜ್ಞಾನ ಮಾಷ್ಟ್ರು ಟೆಲಿಫೋನ್(ದೂರವಾಣಿ) ಬಗ್ಗೆ ಮಕ್ಕಳಿಗೆ ತಿಳಿಸಿ "ನಾಳೆ ನಾವು ಸಾಹುಕಾರರ ಮನೆಗೆ ನಿಮೆಗೆಲ್ಲರಿಗೆ ಫೋನ್ ನೋಡಲು ಕೊಂಡು ಹೋಗುತಾ ಇದ್ದೇವೆ, ಎಲ್ಲ ಮಕ್ಕಳು ತಪ್ಪದೆ ನಾಳೆ ಬೆಳ್ಳಿಗೆ ೧೦ ಗಂಟೆಗೆ ಹಾಜರಾಗಿ" ಎಂದು ಹೇಳಿದರು.

ಎಲ್ಲ ಮಕ್ಕಳಿಗೆ ಸಂತೋಷವೇ ಸಂತೋಷ, ಎಲ್ಲರು ಫೋನ್ ನೋಡಲು ಉತ್ಸುಕರಾಗಿದ್ದರು,  ಶ್ರೀಹರಿಯು ತುಂಬಾ ಉತ್ಸುಕನಾಗಿದ್ದ.

ಮಾರನೆ ದಿವಸ ಎಲ್ಲ ಮಕ್ಕಳು ೧೦ ಗಂಟೆಗೆ ಶಾಲೆಯ ಗ್ರೌಂಡ್ ಲ್ಲಿ ಸೇರಿದರು. ವಿಜ್ಞಾನ ಮಾಷ್ಟ್ರು ಎಲ್ಲ ಮಕ್ಕಳನ್ನು ಸಾಲು ಸಾಲಾಗಿ ನಿಲ್ಲಿಸಿ ನಂತರ "ನೀವೆಲ್ಲರೂ ನನ್ನ  ಹಿಂದೆ ಹಿಂದೆ ಬನ್ನಿ" ಎಂದು ಹೇಳಿದರು.

ಮಕ್ಕಳೆಲ್ಲರು ನಡೆಯುತ್ತಲೇ ಪಕ್ಕದ ಮೂಲೆಯಲ್ಲಿದ ಸಾಹುಕಾರರ ಮನೆಗೆ ಬಂದರು. ಸಾಹುಕಾರರು ಅವರ ಅಂಗಳದಲ್ಲಿ ಆರಾಮವಾಗಿ ಕೂತು ಕೊಂಡು ಚಹಾದ ಒಟ್ಟಿಗೆ ವಾರ್ತಾ ಪತ್ರಿಕೆ ಓದುತ್ತಿದ್ದರು.

ಅವರನ್ನು  ಕಂಡು " ಒಹ್ ಮಾಷ್ಟ್ರೆ ...ಬನ್ನಿ ಬನ್ನಿ , ಈ ಫೋನ್ ಬಂದ ದಿವಸದಿಂದ ಒಂದು ಗಳಿಗೆ ಪುರುಸೊತ್ತು ಇಲ್ಲರಿ, ಯಾರದರೊಂದು ಬರುತ್ತಲೇ ಇದ್ದಾರೆ ಇದನ್ನು ನೋಡಲು, ನೀವೂ ಬನ್ನಿ , ಆದರೆ ಒಂದು ವಿಷಯ ಅದನ್ನು ಯಾರೂ ಮುಟ್ಟ ಬಾರದು, ಈ ಮಕ್ಕಳಿಗೆ ಮೊದಲೇ ಹೇಳಿ" ಎಂದು ಸಾಹುಕಾರರು ಮೊದಲೇ ಎಚ್ಚರಿಸಿದರು.

ಅದಕ್ಕೆ ಮಾಷ್ಟ್ರು "ಆಯಿತು ಸಾಹುಕಾರರೇ, ಆದರೆ ಒಂದು ನಿವೇಧನೆ ಈ ಮಕ್ಕಳ ನಾಯಕಲಾದ ಯಶೋದ ಅವಳಿಗೆ ಮಾತ್ರ ಸ್ವಲ್ಪ ರಿಸಿವರ್ ಎತ್ತಿ "ಹಲೋ " ಎಂದು ಹೇಳಲು ಬಿಡ ಬೇಕೆಂದು ವಿನಂತಿ " ಎಂದು ಕೇಳಿದರು.

ಅದಕ್ಕೆ ಸಾಹುಕಾರರು "ಆಗಲಿ ಆದರೆ ಬೇರೆ ಯಾರೂ ಮುಟ್ಟುವಂತಿಲ್ಲ, ಜಾಗ್ರತೆ ವಹಿಸಿ" ಎಂದು ಹೇಳಿದರು .

ಮಾಷ್ಟ್ರು ನಮಗೆ ನೋಡಿ "ನೀವು ಯಾರೂ ಫೋನ್ ಮುಟ್ಟ ಬಾರದು, ದೂರದಿಂದಲೇ ನೋಡಿ ಬರಬೇಕು , ಯಶೋದ ನಿನಗೆ ಕೇವಲ ಫೋನಿನ ರಿಸಿವರ್ ಎತ್ತಿ  ನೀ "ಹಲೋ" ಎಂದು ಹೇಳ ಬಹುದು, ನೀ ಮುಂದೆ ಬಾ" ಎಂದು ಹೇಳಿದರು.

ಯಶೋದ ಸಾಲಿನ ಮುಂದೆಯೇ ಇದ್ದಳು,  ಅವರೆಲ್ಲರೂ ಸಾಹುಕಾರರ ಮನೆಯ ಒಳಗೆ ಹೋದರು. ಮನೆ ತುಂಬಾ ಸುಂದರವಾಗಿತ್ತು, ಎಲ್ಲ ವಸ್ತುಗಳನ್ನು ಶಿಸ್ತಿನಿಂದ  ಇಟ್ಟಿದರು, ಫೋನ್ ಒಂದು ಟೇಬಲ್ ಮೇಲೆ ಇಟ್ಟಿದರು, ಕಪ್ಪು ಬಣ್ಣದ ಫೋನಿನ ಮೇಲೆ ಬಹಳ ಸುಂದರವಾದ ಬಟ್ಟೆಯ ಕವರ್ ಹಾಕಿದರು.

ಮಾಷ್ಟ್ರು "ಯಶೋದ ಬಾ ಮುಂದೆ , ಯಶೋದ ಮುಂದೆ ಬಂದು ಟೆಲಿಫೋನ್ ಹತ್ತಿರ ಹೋಗಿ  ಬಹಳ ಖುಷಿಯಿಂದ ಅದರ ರಿಸಿವರ್ ಎತ್ತಿ "ಹಲೋ" ಎಂದು ಹೇಳಿದಳು, ಅವಳಿಗೆ ಸಂತೋಷವೇ ಸಂತೋಷ, ಎಲ್ಲ ಮಕ್ಕಳು ಅವಳನ್ನು ಆಶ್ಚರ್ಯ ಹಾಗು ಮತ್ಸರದಿಂದ ನೋಡುತ್ತಿದ್ದರು, ಅವರಿಗೆ ಫೋನ್ ಮುಟ್ಟಲಿಕ್ಕೆ ಸಿಗುದಿಲ್ಲ ಎಂದೇನೋ, ಇದರ ನಂತರ ಇತರ ಮಕ್ಕಳೆಲ್ಲರೂ ಸಾಲು ಸಾಲಾಗಿ ಹೋಗಿ ಫೋನ್ ನೋಡಿ ನೋಡಿ ಬಂದರು, ಶ್ರೀಹರಿಯು ನೋಡಿ ಬಂದ.

ಮೊದಲ ಸಲ ಫೋನ್ ನೋಡಿ ಬಂದ ನಂತರ ಎಲ್ಲ ಮಕ್ಕಳಿಗೆ ಒಂದು ಹೊಸ ಅನುಭವ ಒಟ್ಟಿಗೆ ಸಂತೋಷ.

by  ಹರೀಶ್ ಶೆಟ್ಟಿ, ಶಿರ್ವ

Thursday, November 10, 2011

ನೆನಪು

ನೆನಪುಗಳನ್ನು ಹಿಂದೆ ಬಿಟ್ಟು ನಾನು ಓಡಿ ಓಡಿ ಬಂದೆ........
ಗಮ್ಯಸ್ಥಾನ ತಲುಪುತಲೇ ನೆನಪನ್ನು ಮನದ ಅಂಗಳದಲ್ಲಿ ಕಂಡೆ.....
by ಹರೀಶ್ ಶೆಟ್ಟಿ, ಶಿರ್ವ

ಸತ್ಯ ಸುಳ್ಳು

ಯಾರನ್ನು ನಂಬುವುದು
ಯಾರನ್ನು ದೂರುವುದು
ಸತ್ಯ ಇಂದು ಇಲ್ಲದಿದ್ದರೆ
ನಾಳೆ ಹೊರ ಬೀಳುವುದು

ಕಟ್ಟಿದ ಮನೆಯಲ್ಲಿ ಹೋಗಿ ನೀ ಇರುವೆ
ತನ್ನ ಮನೆಯೆಂದು ನೀ ಹೆಮ್ಮೆಯಿಂದ ಹೇಳುವೆ
ಒಂದಲ್ಲ ಒಂದು ದಿವಸ ಈ ಮನೆ ಬಿಳಲಿದೆ
ಹೊಸ ಕಟ್ಟಡ ನಿರ್ಮಾಣ ಆಗಲಿದೆ

ನೀನೇಕೆ ಬೇರೆಯವರ ಮುಖವನ್ನು ಹೊರುವೆ
ಅವರ ನಂಬಿಕೆಯನ್ನು ಕಳೆಯುವೆ
ಸುಳ್ಳು ಸತ್ಯವನ್ನು ನುಂಗಲಾರದು
ಸತ್ಯದ ಪತಾಕೆ ಎಂದಿಗೂ ಬೀಳಲಾರದು

ಮನುಜನಿಂದ ತಪ್ಪು ಆಗುವುದು ಸಹಜ
ತಪ್ಪು ಮಾಡಿಯೂ ವಾದಿಸುವವನು ನಿರ್ಲಜ
ಮುಳ್ಳ ಸೇತುವೆಯಲ್ಲಿ ಯಾರೂ ನಡೆಯಲಾರರು
ಕೊಳೆತ ರಕ್ತ ಹರಿದ ನಂತರ ಗಾಯ ಒಣಗಲಾರದು
by ಹರೀಶ್ ಶೆಟ್ಟಿ, ಶಿರ್ವ

Wednesday, November 9, 2011

ನೀನು ಬಿಟ್ಟು ಹೋದ ನಂತರ

ನೀನು ಬಿಟ್ಟು ಹೋದ ನಂತರ
ನಾನು ಕವಿಯಾದೆ

ಪ್ರೀತಿಸುವೆ ನಿನ್ನನ್ನು ಎಂದು ಹೇಳಲು 
ವರುಷ ವರುಷ ನಾ ಕಳೆದೆ
ಇಂದು ನಾ ಪದಗಳ ದಾಸನಾದೆ

ಮಳೆಯ ಹನಿಯಲಿ ನೆನೆದು
ನಿನ್ನ ಒಟ್ಟಿಗೆ ನದಿಯನ್ನು ದಾಟಿದ ನೆನಪು
ಇಂದು ಸ್ವತಹ ಕಣ್ಣೀರ ಕಡಲಾದೆ

ಹಸಿರು ಬಯಲಲ್ಲಿ ಅಳೆದು
ನಿನ್ನ ಒಟ್ಟಿಗೆ ಮರದ ಅಡಿಯಲ್ಲಿ ಸಮಯ ಕಳೆದು
ಇಂದು ನಾನು ಒಣಗಿದ ಬಯಲಾದೆ

ನಿನ್ನ ರೂಪ ಗುಣವನ್ನು ಮೆಚ್ಚಿ ನಾ ನನ್ನನ್ನೇ ಮರೆತೆ
ಮಧ್ಯೆ ಹಾದಿಯಲಿ ನೀನು ನನ್ನನ್ನು ಬಿಟ್ಟು ಹೋದೆ
ಇಂದು ನೀನು ಕೇವಲ ನನ್ನ ಕವಿತೆಯಲ್ಲಿಯೇ ಉಳಿದೆ
by ಹರೀಶ್ ಶೆಟ್ಟಿ, ಶಿರ್ವ

Tuesday, November 8, 2011

ತಂಬಿ

ತಂಬಿ
---------
ಶ್ರೀಹರಿಗೆ ಸಿನಿಮಾ ನೋಡುವ ತುಂಬಾ ಚಟ,  ವಾರದಲ್ಲಿ ೨/೩ ಸಿನಿಮಾ ನೋಡದಿದ್ದರೆ ಅವನಿಗೆ ಏನೋ ಕಳೆದಂತೆ ಆಗುತ್ತಿತ್ತು.

ಶ್ರೀಹರಿಯ ತಂದೆ ಹೋಟೆಲ್ ನಡೆಸುತ್ತಿದ್ದರು, ಶ್ರೀಹರಿ ತಂದೆಯ ಒತ್ತಾಯಕ್ಕೆ ದಿವಸಕ್ಕೊಮ್ಮೆ ಅಲ್ಲಿ ಹೋಗಿ ಬಲು ಹಾಜರಿ ನೀಡಿ ಬರುತ್ತಿದ್ದ, ಶ್ರೀಹರಿಯ ತಂದೆಯ ಹೋಟೆಲಲ್ಲಿ  ಒಬ್ಬ ಹೊಸ ತಮಿಳ್ ಹುಡುಗ ಚಹಾ ಮಾಡುವ ಕೆಲಸ್ಸಕ್ಕೆ ಸೇರಿದ, ಎಲ್ಲರೂ ಅವನನ್ನು ತಂಬಿ ಎಂದು ಕರೆಯುತ್ತಿದ್ದರು.

ಆ ಹುಡುಗನಿಗೂ ತಮಿಳ್ ಸಿನಿಮಾ ಅಂದರೆ ಪಂಚ ಪ್ರಾಣ, ಹಿಂದಿ ಸಿನಿಮಾವೂ ನೋಡುತ್ತಿದ್ದ, ಶ್ರೀಹರಿ  ಬಂದ ಕೂಡಲೇ ಅವನಿಗೆ ಶ್ರೀಹರಿಯ  ಹತ್ತಿರ ಸಿನಿಮಾದ ಬಗ್ಗೆ ಮಾತನಾಡುವುದೇ ಕೆಲಸ, ಆ ಹುಡುಗ ತಮಿಳ್ ನಟ ಎಂ.ಜಿ.ರಾಮಚಂದ್ರನ್  ಅವರ ಬಹಳ ದೊಡ್ಡ ಅಭಿಮಾನಿ, ಬಹಳ ದೊಡ್ಡ ಭಕ್ತನೆಂದು ಹೇಳ ಬಹುದು, ವಿಚಿತ್ರ ಏನೆಂದರೆ ಅವನು ಅವನ ಪೆಟ್ಟಿಗೆಯಲ್ಲಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಇಟ್ಟು ಅವರಿಗೆ ದಿನಾಲೂ ನಾಲ್ಕಾಣೆಯ ಹೂವಿನ ಮಾಲೆ ಹಾಕಿ ಪೂಜಿಸುತ್ತಿದ್ದ.

ಅವಾಗ ಮಾಟುಂಗ ಮುಂಬೈಯಲ್ಲಿ  ಸಿಟಿ ಲೈಟ್ ಎಂಬ ಹಳೆ ಸಿನಿಮಾ ಮಂದಿರ ಇತ್ತು, ಅಲ್ಲಿ ಬೆಳ್ಲಿಗೆಯ ಶೋ ದಲ್ಲಿ ಎಂ.ಜಿ.ರಾಮಚಂದ್ರನ್ ಅವರ ಸಿನಿಮಾ ಬಂದರೆ ವಾರದ ೭ ದಿವಸ ಅವನಿಗೆ ಬೆಳ್ಳಿಗೆ ಲೇಟ್ ಡ್ಯೂಟಿ ಕೊಡಬೇಕೆಂದು ತಂಬಿ ಕೆಲಸ ಸೇರುವ ಮುಂಚೆಯೇ ಶ್ರೀಹರಿಯ ತಂದೆ ಹತ್ತಿರ ಷರತ್ತು ಇಟ್ಟಿದ,  ಶ್ರೀಹರಿಯ ತಂದೆ ಕೆಲಸಕ್ಕೆ ಜನ ಸಿಗದ ಕಾರಣ ಆ ಷರತ್ತಕ್ಕೆ ಒಪ್ಪಿದರು ಹಾಗು ಅವನ ಎಂ.ಜಿ.ರಾಮಚಂದ್ರನ್ ಮೇಲೆ ಇರುವ ಭಕ್ತಿಯನ್ನು ಅರಿತು ಎಂ.ಜಿ.ರಾಮಚಂದ್ರನ್  ಸಿನಿಮಾ ಬಂದರೆ ಹೇಗಾದರೂ ಹೊಂದಿಸಿ ನಡೆಯುತ್ತಿದ್ದರು.

ಹೀಗೆಯೇ ಒಂದು ದಿವಸ ಶಾಲೆಯಿಂದ ಬಂದ ನಂತರ ಶ್ರೀಹರಿ ಹೋಟೆಲಿಗೆ ಹೋದ, ಅಲ್ಲಿ ಡ್ಯೂಟಿ'ಯಲ್ಲಿ  ತಂಬಿ ಇರಲಿಲ್ಲ, ಅವನು ಅವನ ತಂದೆ ಹತ್ತಿರ ತಂಬಿಯ ಬಗ್ಗೆ ಕೇಳಿದ, ತಂದೆ "ಆಯೇ ಡ್ಯೂಟಿ'ಡ್  ಇಜ್ಜೆ, ಉಳಯಿ ಬುಲ್ಪೊಂದು ಉಲ್ಲೇ "(ಅವನು ಡ್ಯೂಟಿಯಲ್ಲಿಲ್ಲ, ಒಳಗೆ ಅಳುತ್ತಿದ್ದಾನೆ ).

ಶ್ರೀಹರಿ ಆಶ್ಚರ್ಯದಿಂದ "ದ್ಯಾಗ್'? (ಯಾಕೆ?). ಅದಕ್ಕೆ ಅವನ ತಂದೆ "ಆಯೇ ಎಂ.ಜಿ.ರಾಮಚಂದ್ರನ್  ತೀರ್ ಪೋಯೇತಾ...ಆಯ್ಕ " (ಅವ ಎಂ.ಜಿ.ರಾಮಚಂದ್ರನ್ ಸತ್ತನಲ್ಲ, ಅದಕ್ಕೆ ). 

ಅವರ ಮಾತು ಕೇಳಿ ಶ್ರೀಹರಿ ಒಳಗೆ ಸ್ಟಾಫ್ ರೂಂಗೆ ಓಡಿದ, ಅಲ್ಲಿ ತಂಬಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಎದುರಲ್ಲಿ ಕೂತುಕೊಂಡು ದುಃಖಿ ದುಃಖಿಸಿ ಅಳುತ್ತಿದ್ದ,  ಶ್ರೀಹರಿಯನ್ನು  ನೋಡಿ ಇನ್ನು ಜೋರು ಜೋರಲ್ಲಿ ಅಳಲಾರಂಭಿಸಿದ, ಶ್ರೀಹರಿಗೆ ಅವನಿಗೆ ಹೇಗೆ ಸಮಾಧಾನ ಹೇಳಲಿ ಎಂದು ತೋಚಲಿಲ್ಲ, ಆದರೂ ಅವನು ಸ್ವಲ್ಪ ಸಮಯ ಅವನ ಬದಿಯಲ್ಲಿ ಕುಳಿತು ಹಿಂತಿರುಗಿದ.

ಇದರ ನಂತರ ೧೫ ದಿವಸ ತಂಬಿ ಕೆಲಸ ಮಾಡದೆ ಹೀಗೆಯೇ ದುಃಖದಲ್ಲಿ ಬಿದ್ದಿದ್ದ , ಶ್ರೀಹರಿಯ ತಂದೆ ಕಡೆಗೆ ಸೋತು ಅವನನ್ನು ಅವನ ಊರಿಗೆ ಕಳುಹಿಸಿದರು.

by ಹರೀಶ್ ಶೆಟ್ಟಿ, ಶಿರ್ವ

ಹುಲ್ಲು ಮಂಜಿನ ಮಿಲನ

ಹಸಿರು ಹುಲ್ಲ ಮೇಲೆ
ಮಂಜಿನ ಹನಿಗಳ ನರ್ತನ
ಆದರೆ ಅವುಗಳ ಬಾಳು ಕೆಲವೇ ಕ್ಷಣ

ಭಾಗ್ಯದ ಅನನ್ಯ ಪ್ರೇಮ ಬಂಧನ
ಹುಲ್ಲಿಗೆ ಕೊಡುತಿವೆ ಜೀವನ
ಸುಂದರ ಅದ್ಭುತ ವಿಲಕ್ಷಣ

ಹುಲ್ಲಿಗೆ ಆನಂದ ಉಲ್ಲಾಸ ಉತ್ತೇಕನ
ಮಂಜಿನ ಅಲ್ಪಾವಧಿಯ ಮಿಲನ
ಅಪ್ಪಿ ತಬ್ಬಿ ಹೆಚ್ಚು ಗಳಿಗೆ ಒಟ್ಟಿಗೆ ಇರುವ ಮನ

ಸೂರ್ಯನ ಬಿಸಿಲ ತ್ವರೆತನ
ಹುಲ್ಲು ಮಂಜಿಗೆ ಕಂಪನ
ಎಷ್ಟು ಕಷ್ಟದಾಯಕ ಈ ವಿಚ್ಛೇದನ
by  ಹರೀಶ್ ಶೆಟ್ಟಿ, ಶಿರ್ವ

Monday, November 7, 2011

ಸಾಧಾರಣ ಪ್ರೇಮಿ

ನಾನು ರಾಮನಲ್ಲ
ಆದರೂ ಸೀತೆಯಂತೆ ನಿನ್ನಿಂದ ಅಗ್ನಿ ಪರೀಕ್ಷೆ ಮಾಡಿಸಲಾರೆ

ನಾನು ಕೃಷ್ಣನಲ್ಲ
ಆದರೂ ರಾಧೆಯಂತೆ ನಿನ್ನನ್ನು ವಿರಹ ಅಗ್ನಿಯಲ್ಲಿ ಸುಡಲು ಬಿಡಲಾರೆ

ನಾನು ಯುಧಿಷ್ಟರನಲ್ಲ
ಆದರೂ ದ್ರೌಪದಿಯನ್ನು ಜೂಜಿನಲ್ಲಿ ಸೋತಂತೆ ನಾ ನಿನ್ನನ್ನು ಸೋಲಲಾರೆ

ನಾನೊಬ್ಬ ಸಾಧಾರಣ ಪ್ರೇಮಿ
ನಿನ್ನ ಪ್ರೀತಿಗಾಗಿ ನಾ ಯಾವುದೂ ಪರೀಕ್ಷೆ ಕೊಡಲು ಸಿದ್ಧ
ನಿನ್ನ ಪ್ರೀತಿಯ ಜಾಲದಲಿ ಇಡಿ ಜೀವನ ನಿನ್ನ ವಶದಲ್ಲಿರಲು ಸಿದ್ಧ
ನಿನ್ನ ಪ್ರೀತಿಯಲಿ ತನ್ನನ್ನು ತಾನೇ ಸೋಲಲು ಸಿದ್ದ 
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ