Photo courtesy: Google
"ಹೇಗಿದ್ದೀರಿ ದೊಡ್ಡಕ್ಕ?" ಮಂಜಣ್ಣ ದೊಡ್ಡಕ್ಕನ ಮನೆಯೊಳಗೆ ಪ್ರವೇಶ ಮಾಡುತ ಕೇಳಿದರು.
ಒಳಗೆ ನೆಲ ಒರೆಸುತ್ತಿದ್ದ ಸುಮಾರು ೭೭ ವಯಸ್ಸಿಸ್ನ ದೊಡ್ಡಕ್ಕ "ಓ ಮಂಜು, ಬಾ ಬಾ".
ಮಂಜಣ್ಣ"ಏನಕ್ಕ!! ಈ ವಯಸ್ಸಿನಲ್ಲಿಯೂ ನಿಮಗೆ ಇದೆಲ್ಲ ಕೆಲಸ ಮಾಡಬೇಕಾಗುತ್ತದೆ, ನಿಮಗೆ ಐದು ಮಕ್ಕಳಿದ್ದು ಏನು ಪ್ರಯೋಜನ??".
ದೊಡ್ಡಕ್ಕ" ಬಿಡು ಮಂಜು, ಅವರೆಲ್ಲಿದರೆ ಇಲ್ಲಿ ಕೆಲಸ ಮಾಡಲಿಕ್ಕೆ, ಇಲ್ಲಿ ಇರುತ್ತಿದ್ದರೆ ನನಗೆ ಕೆಲಸ ಮಾಡಲಿಕ್ಕೆ ಬಿಡುತ್ತಾರಾ" ದೊಡ್ಡಕ್ಕ ಒಂದು ಉದಾಸೀನ ಸ್ವರದಲ್ಲಿ ಹೇಳಿದರು.
ಮಂಜಣ್ಣ "ಸುಮ್ಮನೆ ಯಾಕೆ ನೀವು ನಿಮ್ಮ ಮಕ್ಕಳ ಪರವಾಗಿ ಮಾತನಾಡುತ್ತಿದ್ದಿರಿ, ನನಗೆ ಎಲ್ಲಾ ತಿಳಿದಿದ್ದ ವಿಷಯ, ಮೊನ್ನೆ ನಮ್ಮೂರಿನ ಉತ್ಸವಕ್ಕೂ ಯಾರೂ ಬರಲಿಲ್ಲ, ಸೀನು ಒಬ್ಬನನ್ನು ಬಿಟ್ಟು ನಿಮ್ಮ ಬೇರೆ ನಾಲ್ಕು ಮಕ್ಕಳು ಊರಿಗೆ ಬರದೆ ಇಂದಿಗೆ ನಾಲ್ಕೈದು ವರುಷ ಆಗಿರಬೇಕು, ಈ ಸಲ ಸೀನು ಸಹ ಬರಲಿಲ್ಲ".
ದೊಡ್ಡಕ್ಕ "ಇಲ್ಲ ಮಂಜು, ಸೀನುಗೆ ನಾನು ಹೇಳಲು ಮರೆತೆ ಉತ್ಸವದ ಬಗ್ಗೆ, ನನಗೆ ಫೋನ್ ಮಾಡಿ ಬೈದ, ಯಾಕೆ ನೀನು ಉತ್ಸವದ ಬಗ್ಗೆ ಹೇಳಲಿಲ್ಲ, ನಾನು ಬರುತ್ತಿದೆಯಲ್ಲವೆಂದು, ನನ್ನದ್ದೇ ತಪ್ಪಾಯಿತು, ಹೇಳಲು ಮರೆತೆ, ಮತ್ತೆ ಉಷಾ, ಲತಾ, ಮೋಹಿನಿ ಅವರಳಿಗೆಲ್ಲ ಅವರವರ ಪರಿವಾರ ಇದ್ದ ಮೇಲೆ ಎಲ್ಲಿ ಅವರಿಗೆ ಸಮಯ ಸಿಗುತ್ತದೆ ಊರಿಗೆಲ್ಲ ಬರಲಿಕ್ಕೆ, ಮತ್ತೆ ದೊಡ್ಡವ ಮಹೇಶನಿಗೆ ಅವನ ಮಕ್ಕಳು ಹಣ ಕೊಟ್ಟರೆ ಬರಬೇಕು, ಇಲ್ಲಾದರೆ ರಿಟೈರ್ಡ್ ಮನುಷ್ಯ ಎಲ್ಲಿಂದ ಹಣದ ವ್ಯವಸ್ಥೆ ಮಾಡಿ ಬರುವುದು, ಜೀವನಪೂರ್ತಿ ಅವನ ಎರಡು ಮಕ್ಕಳಿಗೋಸ್ಕರ ದುಡಿದ, ಈಗ ಪಾಪ ಅವನು ಯಾವುದಕ್ಕೂ ಅವರ ಮುಖ ನೋಡಬೇಕು".
ಮಂಜಣ್ಣ "ಆದರೆ ಅಕ್ಕ ತಾಯಿಯನ್ನು ನೋಡುವುದು ಅವರ ಕರ್ತವ್ಯ ತಾನೇ, ನೀವೊಬ್ಬರೇ ಇಲ್ಲಿ ಎಷ್ಟು ಕಷ್ಟದಿಂದ ತನ್ನ ದಿನ ಕಳೆಯುತ್ತಿದ್ದಿರಿಯೆಂದು ನಾವೆಲ್ಲಾ ನೋಡುದಿಲ್ಲವೇ, ಸ್ವಲ್ಪಾದರೂ ಜವಾಬ್ದಾರಿ ಬೇಕು ತಾನೇ".
ದೊಡ್ಡಕ್ಕ "ಬಿಡು ಮಂಜು, ನೀವೆಲ್ಲ ನೆರೆಹೊರೆಯವರು ಇದ್ದಿರಲ್ಲ ನನ್ನ ಸಹಾಯಕ್ಕೆ, ನನಗೇನು ಕಷ್ಟ, ಬೇಕಾದಾಗ ಎಲ್ಲ ಹಣ ಕಳಿಸುತ್ತಾರೆ ಅವರೆಲ್ಲ ನನಗೆ".
ಮಂಜಣ್ಣ "ಕೇವಲ ಹಣ ಸಾಕಾಗುತ್ತದೆಯಾ ಅಕ್ಕ, ಇನ್ನು ಈ ಮುದಿವಯಸ್ಸಿನಲ್ಲಿ ಹೇಗೆ ಸಾಧ್ಯ ಒಬ್ಬಂಟಿ ಜೀವನ ಕಳೆಯುವುದು, ನಿಮನ್ನು ನೋಡಿ ನನಗೆ ಕಣ್ಣೀರು ಬರುತ್ತದೆ, ಮಕ್ಕಳಾಗಿ ಅವರಿಗೆ ಯಾವುದೇ ಭಾವನೆ ಇಲ್ಲವೇ, ಕೇವಲ ಬಾಯಿಯಿಂದ ಅಮ್ಮ ಅಮ್ಮಯೆಂದು ಹೇಳಿದರೆ ಸಾಲದು, ಜವಾಬ್ದಾರಿ ವಯಿಸುವ ಇಚ್ಛೆ ಇರಬೇಕು".
ದೊಡ್ಡಕ್ಕ "ಫೋನ್ ಮಾಡುತ್ತಿರುತ್ತಾರೆ ಮಂಜು ಅವರು, ಮತ್ತೆ ಕಷ್ಟ ಆದರೆ ಕೆಲಸಕ್ಕೇ ಒಂದು ಜನ ಇಡುಯೆಂದು ಹೇಳುತ್ತಾರೆ, ಆದರೆ ಇಲ್ಲಿ ಕೆಲಸಕ್ಕೆ ಜನ ಎಲ್ಲಿ ಸಿಗುತ್ತಾರೆ, ಬಿಡು ಹೇಗೋ ಇಷ್ಟು ದಿನ ಜೀವನ ಸಾಗಿ ಹೋಯಿತು, ನಮ್ಮ ದೈವ ದೇವರಿದ್ದಾರೆ ನನ್ನನ್ನು ರಕ್ಷಿಸಲು".
ಮಂಜಣ್ಣ "ಹಾಗೆಲ್ಲ ಹೇಳಿದರೆ ಹೇಗೆ ಅಕ್ಕ, ಭಾವ ತೀರಿ ಹೋದ ನಂತರ ಎಷ್ಟು ಕಷ್ಟಪಟ್ಟು ನೀವು ಮಕ್ಕಳನ್ನು ಬೆಳೆಸಿದ್ದೀರಿ ಎಂದು ನನಗೆ ತಿಳಿದಿಲ್ಲವೆ, ಈಗ ನಿಮಗೆ ಅಗತ್ಯ ಇದ್ದಾಗ ಅವರು ಹೀಗೆ ಮಾಡಬಹುದೇ? ಈಗ ದೇವರ ದಯೆಯಿಂದ ಕೈಕಾಲು ಸರಿ ಇದೆ, ನಾಳೆ ಒಂದು ವೇಳೆ ಕೈಕಾಲು ಬಿದ್ದರೂ ಸಹ ಕೆಲಸಕ್ಕೆ ಜನ ನೋಡುಯೆಂದು ಹೇಳುತ್ತಾರಾ? ಉಪದೇಶ, ಸಲಹೆಗಳು ಎಲ್ಲ ಬೇಡ ಹೇಳಿ ಅವರಿಗೆ" ಎಂದು ಕೋಪದಿಂದ ಮಂಜಣ್ಣ ನುಡಿದರು.
ಮಂಜು ಹೇಳುವುದೆಲ್ಲ ಸರಿ ಎಂದು ತಿಳಿದರೂ ದೊಡ್ಡಕ್ಕ "ಬಿಡು ಮಂಜು, ನನ್ನದು ಇದ್ದದೆ, ನೀನೇಳು ಕೆಲಸ ಆಯ್ತಾ ನಿನ್ನ?".
ಮಂಜಣ್ಣ "ಇಲ್ಲ ಅಕ್ಕ ಎಲ್ಲಿ, ತೆಂಗಿನ ಕಾಯಿ ಕೊಯ್ಯಲು ಬರುತ್ತೇನೆ ಎಂದು ತೋಮ ಹೇಳಿದ್ದ, ಬೇವರ್ಸಿ ಬರಲೇ ಇಲ್ಲ, ಫೋನ್ ಮಾಡಿದ್ದಾರೆ ಫೋನ್ ಎತ್ತುದಿಲ್ಲ, ಇವರಿಗೆಲ್ಲ ಚರ್ಬಿ ಏರಿದೆ, ಕೇಳಿದಷ್ಟು ಹಣ ಸಿಗುತ್ತದೆಯಲ್ಲ".
ದೊಡ್ಡಕ್ಕ "ಹೌದು ಮಂಜು, ನಮ್ಮ ಮರದಿಂದ ಸಹ ಕೊಯ್ಯಲಿಕ್ಕಿತ್ತು, ಉಷಾ ಮೊನ್ನೆ ಫೋನ್ ಮಾಡಿ ಕೇಳುತ್ತಿದ್ದಳು 'ಏನು ಈ ಸಲ ನೀನು ತೆಂಗಿನಕಾಯಿ ಕಳಿಸಲೇ ಇಲ್ಲ ಎಂದು', ಬಸ್ ದವನಿಗೆ ಹೇಳಿ ಇಟ್ಟಿದಾಳೆ ಅಂತೇ, ಆದರೆ ಈ ತೋಮನ ಭರವಸೆಯಲ್ಲಿ ಇದ್ದರಾಯಿತು".
ಮಂಜಣ್ಣ "ಉಷಾಳಿಗೆ ಹೇಳಿ ಅಕ್ಕ, ಮುಂಬೈಯಲ್ಲಿ ತೆಂಗಿನಕಾಯಿ ಸಿಗುತ್ತದೆಯೆಂದು, ನಾಚಿಗೆ ಇಲ್ಲ ಇವರಿಗೆ, ನಿಮಗೆ ಕೋಪ ಬರಬಹುದು ಅಕ್ಕ, ಆದರೆ ಇವರಿಗೆ ಬಂದಾಗಾಯೆಲ್ಲ ಕೇವಲ ಉಪದೇಶ ಕೊಟ್ಟು, ಇಲ್ಲಿಂದ ಸಾಮಾನು ಹೊಯ್ಯುವುದಲ್ಲದೆ, ನಿಮ್ಮ ಸ್ವಲ್ಪ ಸಹ ಚಿಂತೆ ಇಲ್ಲ, ನಿಮ್ಮ ಮಕ್ಕಳಲ್ಲಿ ನಿಮ್ಮ ಒಂದು ಗುಣ ಸಹ ಇಲ್ಲ, ಬರುತ್ತೇನೆ ನಾನು" ಎಂದು ಹೇಳಿ ಕೋಪದಿಂದ ಹೊರಟರು.
ಮಂಜಣ್ಣ ಹೋದ ಮೇಲೆ ದೊಡ್ಡಕ್ಕ ಒಂದು ನಿಟ್ಟುಸಿರು ಬಿಡುತ್ತಾ ಪುನಃ ತನ್ನ ಕೆಲಸ ಮುಂದುವರಿಸಿ ಯೋಚಿಸಲಾರಂಭಿಸಿದರು "ಈ ಮಂಜುನಿಗೆ ಹೇಗೆ ಹೇಳಲಿ ಈಗೀಗ ಮಕ್ಕಳ ಫೋನ್ ಬರುವುದು ಸಹ ಕಡಿಮೆ ಆಗಿದೆಯೆಂದು, ಹಣ ಬರದೆ ವರುಷ ಆಯಿತೆಂದು, ಯಾವಾಗಲೊಮ್ಮೆ ಸೀನು ಕಳಿಸಿದ್ದಾರೆ ಕಳಿಸುತ್ತಾನೆ ಅಷ್ಠೆಯೆಂದು, ಫೋನ್ ಸಹ ಯಾವಾಗಲೊಮ್ಮೆ ಮಾಡಿದರೆ ಅವನೇ ಮಾಡುವುದೆಂದು, ಗೊತ್ತು ಬದುಕು ಈಗ ಕಷ್ಟವಾಗುತ್ತಿದೆ ನನ್ನ, ಆದರೆ ಏನು ಮಾಡುವುದು, ಯಾರಿಗೆ ಹೇಳುವುದು ನನ್ನನ್ನು ನೋಡಿಯೆಂದು, ಯಾವಾಗಲೊಮ್ಮೆ ಜ್ವರ ಬಂದರೆ ಮದ್ದು ತರಲು ನೆರೆಹೊರೆಯವರ ಮುಖ ನೋಡಬೇಕಾಗುತ್ತದೆ, ಮಕ್ಕಳಿಗೆ ಫೋನ್ ಮಾಡಿ ತಿಳಿಸಿದರೆ ಸಿಗುವುದು ಕೇವಲ ಸಲಹೆ ಹಾಗೂ ತಾತ್ಕಾಲಿಕವಾಗಿ ಸ್ವಲ್ಪ ಹಣ, ಅವರವರ ಕರ್ತವ್ಯದ ಅರಿವು ಅವರಿಗೆ ಯಾಕೆ ಇಲ್ಲ, ಇರಬೇಕಲ್ಲ? ಮಕ್ಕಳ ಮದುವೆ ಮಾಡಿದಾಗ, ಅವರ ಉನ್ನತಿ ನೋಡುತ್ತಿದ್ದಾಗ, ಅವರ ಸಂಸಾರ ಬೆಳೆಯುತ್ತಿದ್ದಾಗ ಪ್ರತಿ ಹಂತದಲ್ಲೂ ಅನಿಸುತಿತ್ತು ಈಗ ನನ್ನ ಜೀವನದ ಕಷ್ಟ ದೂರವಾಗುತ್ತದೆ ಎಂದು, ಆದರೆ ದೇವರು ಆ ದಿನ ಕರುಣಿಸಲೇ ಇಲ್ಲವಲ್ಲ" ಯೋಚಿಸುತ್ತಿರುವ ದೊಡ್ಡಕ್ಕನ ಕಣ್ಣಿನಿಂದ ಧಾರಾಳಾವಾಗಿ ಕಣ್ಣೀರು ಹರಿಯುತ್ತಿತ್ತು.
ಹೊರಗೆ ಕೊಟ್ಟಿಗೆಯಿಂದ ಬಹುಶ ಹಸಿವಿಂದ ಹಸು "ಅಂಬಾ ಅಂಬಾ" ಎಂದು ಕೂಗುತಿತ್ತು, ಆ ಹಸುವಿನ ಸ್ವರ ಕೇಳಿ ಯೋಚನೆಯಿಂದ ಹೊರ ಬಂದರು ತಾಯಿ ಎಂಬ ಮಹಾನ್ ಉದಾರ ಹೃದಯದ ಜೀವಿ ದೊಡ್ಡಕ್ಕ, ನಿಧಾನವಾಗಿ ಅವರು ಹಸುವಿನ ಕೊಟ್ಟಿಗೆಯ ಕಡೆ ಹೆಜ್ಜೆ ಇಟ್ಟರು.
by ಹರೀಶ್ ಶೆಟ್ಟಿ, ಶಿರ್ವ