Monday, June 23, 2014

ಹಿಜಡಾ-೪

ಹಿಜಡಾ-೪

ಮಧ್ಯಾಹ್ನದ ಸಮಯ, ಮೋಹನನ ಕಚೇರಿಯಲ್ಲಿ ಹೆಚ್ಚಿನ ಕೆಲಸಗಾರರು ಊಟಕ್ಕೆ ಹೋಗಿದ್ದರು, ರಿಸೆಪ್ಶನ್ ಕೌಂಟರಲ್ಲಿ ರಿಸೆಪ್ಶನಿಸ್ಟ್ ಊಟದ ನಂತರ ಕುಳಿತು ಮ್ಯಾಗಜಿನ್ ಓದುತ್ತಿದ್ದಳು, ಆಗ ಅಲ್ಲಿಗೆ ಜೋನಮ್ಮ ಹಾಗು ಬಾನಮ್ಮ ಬಂದರು, ಜೋನಮ್ಮನ ಕೈಯಲ್ಲಿ ಒಂದು ಚೀಲ ಇತ್ತು. ಅವರನ್ನು ನೋಡಿ ಆಶ್ಚರ್ಯ ಪಟ್ಟ ರಿಸೆಪ್ಶನಿಸ್ಟ್ "ಯಾರು ನೀವು? ಏನಾಗಬೇಕಿತ್ತು?" ಎಂದು ಕೇಳಿದಳು.

ಜೋನಮ್ಮ "ಏನೆ, ಕಾಣುವುದಿಲ್ಲವೇ ನಾವು ಯಾರೆಂದು, ಹೋಗು ನಿನ್ನ ಮೇಡಂ ರಜನಿ ಇದ್ದರಲ್ಲ ಅವರಿಗೆ ಹೇಳು ನಾವು ಸಿಗಲಿಕ್ಕೆ ಬಂದಿದ್ದೇವೆಯೆಂದು."

ರಿಸೆಪ್ಶನಿಸ್ಟ್ "ಆದರೆ ಈಗ ತಾನೇ ಅವರು ತನ್ನ ಊಟ ಮುಗಿಸಿದ್ದಾರೆ, ನೀವು ಸ್ವಲ್ಪ ಹೊತ್ತು ವೇಟ್ ಮಾಡಿ."

ಬಾನಮ್ಮ "ಅಯ್ಯೋ, ಹುಚ್ಚೆ ನಿನಗೆ ಅರ್ಥವಾಗುವುದಿಲ್ಲವೆ, ನಮಗೆ ಅರ್ಜೆಂಟ್ ಕೆಲಸ ಇದೆಯೆಂದು, ಬೇಗ ಹೋಗಿ ಹೇಳ್ತಿಯೋ ಅಥವಾ ನಾವೇ ಒಳಗೆ ನುಗ್ಗ ಬೇಕೇ".

ರಿಸೆಪ್ಶನಿಸ್ಟ್ "ಆಯಿತು, ಆಯಿತು ನಾನು ಹೋಗಿ ಹೇಳುತ್ತೇನೆ." ಎಂದು ಹೇಳಿ ಭಯ ಪಟ್ಟ ರಿಸೆಪ್ಶನಿಸ್ಟ್ ಅವಸರವಾಗಿ ರಜನಿಯ ಕ್ಯಾಬಿನತ್ತ ಹೋದಳು.

ರಜನಿಯ ಕ್ಯಾಬಿನಲ್ಲಿ ಅತಿ ಸುಂದರಿಯಾಗಿದ್ದ ರಜನಿ ಆರಾಮವಾಗಿ ತನ್ನ ಚೇರಲ್ಲಿ ಕುಳಿತ್ತಿದ್ದಳು.

ರಿಸೆಪ್ಶನಿಸ್ಟ್ ಬಂದು "ಮೇಡಂ, ನಿಮ್ಮನ್ನು ಭೇಟಿಯಾಗಲು ಎರಡು ಹಿಜಡಾಗಳು ಬಂದ್ದಿದ್ದಾರೆ."

ರಜನಿ ಆಶ್ಚರ್ಯದಿಂದ "ಯಾರು?"

ರಿಸೆಪ್ಶನಿಸ್ಟ್ "ಹಿಜಡಾಗಳು ಮೇಡಂ, ನಿಮ್ಮತ್ರ ಅರ್ಜೆಂಟ್ ಕೆಲಸ ಇದೆಯಂತೆ."

ರಜನಿ "ಯಾರವರು?"

ರಿಸೆಪ್ಶನಿಸ್ಟ್ "ನನಗೆ ಗೊತ್ತಿಲ್ಲ ಮೇಡಂ"

ರಜನಿ "ನೀನು ಕೇಳಲಿಲ್ಲವೇ?"

ರಿಸೆಪ್ಶನಿಸ್ಟ್ "ಕೇಳಿದೆ ಮೇಡಂ, ಆದರೆ ಅವರು ತುಂಬಾ ಜೋರಿದ್ದಾರೆ, ನನ್ನನ್ನು ಒತ್ತಾಯ ಮಾಡಿ ನಿಮಗೆ ಹೇಳಲಿಕ್ಕೆ ಕಳಿಸಿದ್ದಾರೆ."

ರಜನಿಯ ಮುಖದಲಿ ಚಿಂತೆಯ ರೇಖೆ ಕಂಡು ಬಂತು. ಆದರೆ ಏನೋ ಯೋಚಿಸಿ "ಆಗಲಿ ಅವರನ್ನು ಒಳಗೆ ಕಳುಹಿಸು."

(ಮುಂದುವರಿಯುವುದು)

by ಹರೀಶ್ ಶೆಟ್ಟಿ, ಶಿರ್ವ


Sunday, June 22, 2014

ಹಿಜಡಾ- ೩

ಹಿಜಡಾ- ೩
--------

"ಹೇ ಮೋಹನ" ಜೋನಮ್ಮನ ಜೋರಾಗಿ ಕಿರುಚುವ ಸ್ವರ ಕೇಳಿ ಸಂಗಮ್ಮ ಭೂತಕಾಲದಿಂದ ವರ್ತಮಾನ ಕಾಲಕ್ಕೆ ಮರಳಿ ಬಂದಳು, ಸಂಗಮ್ಮನ ಕರೆ ಕೇಳಿ ಬಂದ ಜೋನಮ್ಮ ಹಾಗು ಬಾನಮ್ಮ ಅಲ್ಲೇ ಬಾಗಿಲ ಹಿಂದೆ ಮೋಹನ ಹಾಗು ಸಂಗಮ್ಮನ ನಡು ನಡೆದ ಎಲ್ಲ ಸಂಭಾಷಣೆ ಕೇಳಿ ತಡೆಯಲಾರದೆ ಒಳಗೆ ಬಂದಿದ್ದರು.

"ಹೇ ಮೋಹನ, ಏನಾಯಿತೇ ನಿನಗೆ, ನೀನು ನಮ್ಮನ್ನೆಲ್ಲ ಬಿಟ್ಟು ನಮ್ಮಿಂದ ದೂರವಾಗುವೇಯಾ, ನಮ್ಮನ್ನೆಲ್ಲ ಮರೆತು ಬಿಡುವೇಯಾ?" ಎಂದು ಜೋನಮ್ಮ ಮೋಹನನ ಶರ್ಟ್ ಹಿಡಿದು ಜೋರಾಗಿ ಅತ್ತು ಬಿಟ್ಟಳು.

ಬಾನಮ್ಮ ಮೋಹನನಿಗೆ "ಅಯ್ಯೋ ಮೋಹನ, ಸ್ವಲ್ಪದರೂ ಯೋಚಿಸು ಮೋಹನ, ಇಂತಹದೆಲ್ಲ ನಿರ್ಣಯ ಇಷ್ಟು ಬೇಗ ತೆಗೆದುಕೊಳ್ಳಬೇಡ, ಇಷ್ಟು ಬೇಗ ನಮ್ಮನ್ನು ದೂರ ಮಾಡಬೇಡ."

"ನನ್ನ ಹತ್ತಿರ ಬೇರೆ ದಾರಿಯಾದರೂ ಏನಿದೆ ಬಾನಮ್ಮ, ನಾನು ಅವಳನ್ನು ಪ್ರೀತಿಸುತ್ತೇನೆ, ಅವಳನ್ನು ಬಿಟ್ಟು ಬಿಟ್ಟರೆ ನನ್ನ ಬದುಕು ಹಾಳಾಗಬಹುದು" ಎಂದು ಮೆಲ್ಲನೆ ನುಡಿದ.

ಮೌನ ಕುಳಿತ ಸಂಗಮ್ಮ ಇದ್ದಕ್ಕಿದ್ದಂತೆ "ಆಯಿತು ಮೋಹನ, ಹೋಗು ನಿನ್ನ ಇಷ್ಟ ಪ್ರಕಾರ ಮದುವೆಯಾಗು, ಹೋಗು ನಿನ್ನ ಬದುಕು ಇದರಿಂದಲೇ ಸುಗಮವಾಗುತ್ತದೆ ಅಂದರೆ ನನಗೇನು ಅಡ್ಡಿ ಇಲ್ಲ."

"ಅಮ್ಮ ನನಗೆ ಗೊತ್ತು ನಿಮಗೆಲ್ಲ ಬೇಸರ......"

ಅವನ ಮಾತನ್ನು ಕಡಿದು ಸಂಗಮ್ಮ ಮಧ್ಯದಲ್ಲೇ "ಹೊರಡು ಇನ್ನು, ನಿನಗೆ ಲೇಟ್ ಆಗಬಹುದು."

ಜೋನಮ್ಮ ಮತ್ತು ಬಾನಮ್ಮ ಸಂಗಮ್ಮನನ್ನು ಆಶ್ಚರ್ಯದಿಂದ ನೋಡುತ್ತಿದ್ದರು, ಸಂಗಮ್ಮನ  ಈ ವಿಚಿತ್ರ ವ್ಯವಹಾರ ಅವರಿಗೆ ಅರ್ಥವಾಗಲಿಲ್ಲ.

ಅವಿವೇಕಿ ಮೋಹನ ನಡೆದೇ ಬಿಟ್ಟ.

ಅವನು ಹೋದ ನಂತರ ಕೆಲವು ಕ್ಷಣ ಅಲ್ಲಿ ಮೌನ ಆವರಿಸಿತು.

"ಇದೇನು ಸಂಗಮ್ಮ, ಯಾಕೆ ಹೀಗೆ ವರ್ತಿಸಿದ್ದೆ? ನಮಗೇನು ಅರ್ಥವಾಗಲಿಲ್ಲ, ಎಷ್ಟೊಂದು ಪ್ರೀತಿಯಿಂದ ಸಾಕಿ ಇಂದು ಅವನು ಒಂದೇ ಕ್ಷಣದಲ್ಲಿ ಅವನು ನಮ್ಮನ್ನು ತ್ಯಜಿಸಿದನಲ್ಲವೇ, ನಮ್ಮ ಪ್ರೀತಿಯಲ್ಲಿ ಏನು ಕೊರತೆ ಇತ್ತು ಸಂಗಮ್ಮ?" ಜೋನಮ್ಮನ ಕಣ್ಣಿನಿಂದ ಧಾರಾಳವಾಗಿ ಕಣ್ಣೀರು ಹರಿಯುತ್ತಿತ್ತು.

"ನನಗೆ ಇಂತಹದೆಲ್ಲ ನಡೆಯಬಹುದೆಂದು ಮೊದಲೇ ಅರಿವಿತ್ತು ಜೋನಮ್ಮ, ನಾವೆಲ್ಲಾ ತ್ಯಜಿಸಲು ಹುಟ್ಟಿದ್ದೇವೆ ಜೋನಮ್ಮ, ಮೊದಲು ಮನೆಯಿಂದ ತ್ಯಜಿಸಲಾದೆವು ನಂತರ ಈ ಕ್ರೂರಿ ಸಮಾಜ ನಮ್ಮನ್ನು ತ್ಯಜಿಸಿತು, ಇಂದು ಮುದ್ದಾಗಿ ಸಾಕಿದ ನಮ್ಮ ಮಗನೆ ನಮ್ಮನ್ನು ತ್ಯಜಿಸಿದ, ನಾವು ಹಿಜಡಾ ಜೋನಮ್ಮ, ಹಿಜಡಾ ನಾವು" ಎಂದು ಜೋರಾಗಿ ಅತ್ತಳು ಸಂಗಮ್ಮ.

ಬಾನಮ್ಮ ಜೋನಮ್ಮ ಮತ್ತು ಸಂಗಮ್ಮನನ್ನು ಅಪ್ಪಿಕೊಂಡು ಅಳಲಾರಂಭಿಸಿದಳು.

(ಮುಂದುವರಿಯುವುದು)



by ಹರೀಶ್ ಶೆಟ್ಟಿ, ಶಿರ್ವ

ಪರಿಣಾಮ

ಹಾದಿಯಲ್ಲಿರುವ 
ಮುಳ್ಳುಗಳು ಕಾಲಿಗೆ ಚುಚ್ಚುತ್ತಿವೆ 
ದೋಷ ನೀಡಲಾರೆ 
ನಿರ್ಲಕ್ಷಿಸಿದ ಫಲ ಅದು 
---
ಊದುಬತ್ತಿಯ ಸುಗಂಧ 
ಎಲ್ಲೆಡೆ 
ಅದರಡಿಯಲಿ
ಭಸ್ಮದ ರಾಶಿ 
---
ಅವನ
ಬಂಡಿ ವೇಗದಲಿ
ಧೂಳು
ರಸ್ತೆಯಲಿ ನಿಲ್ಲಿದ
ಜನರ ಮುಖದಲಿ
---
ಅವನು ಗಾಯಗೊಂಡ
ರಕ್ತ ಸೋರುತ್ತಿತ್ತು
ಮದ್ದಿನ ಬದಲು
ಸುತ್ತ ಮುತ್ತದ ಜನರೆಲ್ಲಾ
ಉಪದೇಶ ನೀಡುತ್ತಿದ್ದರು
---
ಇಟ್ಟ ಒಂದು ಹೆಜ್ಜೆ
ತಪ್ಪು ಬಿತ್ತೆಂದು
ಗಾಬರಿ ಯಾಕೆ
ಮುಂದೆ
ತಪ್ಪು ಸುಧಾರಿಸುವ
ಅನೇಕ ಅವಸರ ಬರುತ್ತದೆ
---
ರೋಗ ಗುಣವಾಗಬೇಕಾದರೆ
ಕಹಿ ಔಷದಿ
ನೀಡಲೇ ಬೇಕು
ಧೈರ್ಯ ಇಟ್ಟಿರಿ
ಬೇಗನೆ
ರೋಗ ಮುಕ್ತವಾಗುವಿರಿ

by ಹರೀಶ್ ಶೆಟ್ಟಿ, ಶಿರ್ವ

Thursday, June 19, 2014

ಹಿಜಡಾ- ೨

ಹಿಜಡಾ- ೨
--------

ಎಲ್ಲರು ಹೊರಗೆ ಹೋದ ನಂತರ ಸಂಗಮ್ಮ ಮೋಹನನಿಗೆ "ಏನು ಮೋಹನ, ಏನು ವಿಷಯ"?

"ಅಮ್ಮ, ಹೇಗೆ ಹೇಳುವುದು" ಎಂದು ಹೇಳಿ ಮೋಹನ ಸ್ವಲ್ಪ ವ್ಯಾಕುಲನಾದ.

"ಏನಂತಹ ಪ್ತಾಮುಖ್ಯವಾದ ವಿಷಯ, ಹಣ ಬೇಕೇ?"

"ಇಲ್ಲಮ್ಮ, ಹಾಗೇನಿಲ್ಲ, ಅಮ್ಮ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತೇನೆ?"

"ಅಯ್ಯೋ ಹೌದೆ, ಸಂತೋಷದ ವಿಷಯ, ಯಾರವಳು?" ಎಂದು ಕೇಳಿದ ಸಂಗಮ್ಮನ ಮುಖ ಅರಳಿತು.

"ಅಮ್ಮ, ಅವಳ ಹೆಸರು ರಜನಿ ಹಾಗು ಅವಳು ನನ್ನೊಟ್ಟಿಗೆ ನನ್ನ ಆಫೀಸ್'ಲ್ಲಿ ಕೆಲಸ ಮಾಡುತ್ತಾಳೆ."

"ಹೌದೆ, ಹಾಗಾದರೆ ಏನು ಯೋಚಿಸಿದೆ ನೀನು?"

"ಅಮ್ಮ, ನಾನು ಅವಳೊಟ್ಟಿಗೆ ಮದುವೆ ಆಗ ಬೇಕೆಂದಿದ್ದೇನೆ."

"ಹೌದೆ ಸಂತೋಷ, ಹೇ ಜೋನಮ್ಮ, ಬಾನಮ್ಮ ಬೇಗ......"

"ಅಮ್ಮ, ಅಮ್ಮ ಅವರನ್ನು ಈಗ ಕರೆಯಬೇಡಿ , ಪ್ಲೀಸ್."

"ಯಾಕೋ ಇಷ್ಟು ಸಂತೋಷದ ವಿಷಯ, ಇನ್ನು ನಿನ್ನ ಮದುವೆಗೆ ಎಷ್ಟೆಲ್ಲ ಕೆಲಸ ಮಾಡಲಿಕ್ಕಿದೆ, ಅವರಿಗೆ ಈ ವಿಷಯ ಕೇಳಿ ತುಂಬಾ ಸಂತೋಷ ಆಗಬಹುದು"

"ಆದರೆ ಅಮ್ಮ...."

"ಏನು, ಆದರೆ?"

"ಅಮ್ಮ, ರಜನಿಗೆ ನಾನು ನನ್ನ ಎಲ್ಲ ವಿಷಯ ತಿಳಿಸಿದೆ, ನನ್ನ ವಿಷಯ ಕೇಳಿ ಅವಳು ಚಿಂತಿತಲಾದಳು, ಅವಳು ನಮ್ಮ ಮದುವೆಗೆ ಒಂದೇ ಸ್ಥಿತಿಯಲ್ಲಿ ಒಪ್ಪಿದ್ದಾಳೆ..... ಅದೇನಂದರೆ..... ಅದೇನಂದರೆ ನೀವೆಲ್ಲ ನಮ್ಮ ಮದುವೆಗೆ ಬರಬಾರದು ಹಾಗು ಮದುವೆಯ ನಂತರ ನಿಮ್ಮತ್ರ ಯಾವುದೇ ಸಂಬಂಧ ಇಡಬಾರದೆಂದು ". 

ಯಾಕೋ ಇದನ್ನೆಲ್ಲಾ ಕೇಳಿ ಸಂಗಮ್ಮ ಆಶ್ಚರ್ಯ ಪಡಲಿಲ್ಲ, ಅವಳಿಗೆ ಭವಿಷ್ಯದಲ್ಲಿ ಇಂಥಹ ಸ್ಥಿತಿ ಬರಬಹುದು ಎಂದು ತಿಳಿದಿತ್ತೋ ಏನೋ, ಆದರೆ ಅವಳಿಗೆ ಮೋಹನನ ಮೇಲೆ ತುಂಬಾ ವಿಶ್ವಾಸವಿತ್ತು, ತುಂಬಾ ಧೈರ್ಯದಿಂದ ಎಲ್ಲವನ್ನು ಕೇಳಿ "ಹಾಗಾದರೆ ನೀನೇನು ವಿಚಾರ ಮಾಡಿದೆ?"

"ಅಮ್ಮ , ನಾನು ಅವಳನ್ನು ಮದುವೆ ಆಗ ಬೇಕೆಂದಿದ್ದೇನೆ."

ಸಂಗಮ್ಮ ಅವನ ಮಾತು ಕೇಳಿ ಬೆರಗಾದಳು, ಬೇಡವೆಂದರೂ ಕಣ್ಣ ಕೊನೆಯಿಂದ ಕಣ್ಣೀರು  ಹರಿದು ಬಿತ್ತು, ಈ ಆಘಾತ ಅವಳನ್ನು ೨೫ ವರ್ಷದ ಹಿಂದೆಗೆ ಕೊಂಡೊಯ್ಯಿತು.

ರಾತ್ರಿಯ ಸಮಯ, ಜೋರು ಮಳೆ.

೨೦ ವರ್ಷ ಹರೆಯದ ಸಂಗಮ್ಮ ತನ್ನ ಹಿಜಡಾ ಸಮುದಾಯದ ಹಿರಿಯ ಮುಖ್ಯಸ್ಥ ಮರಿಯಮ್ಮ ಹಾಗು ಇತರ ಸಂಗಡಿಗರ ಜೊತೆ ಆ ದಿವಸದ ಕಾರ್ಯಗಳನ್ನೆಲ್ಲ ಮುಗಿಸಿ ಬರುತ್ತಿದ್ದರು, ಮರಿಯಮ್ಮ ಮುಂದೆ ಮುಂದೆ ಅವಸರದಿಂದ ನಡೆಯುತ್ತಿದ್ದಳು, ಸಂಗಮ್ಮ ಸ್ವಲ್ಪ ಹಿಂದೆಯೇ ಇದ್ದಳು, ಹಾಗೆಯೇ ನಡೆಯುತ್ತಿದ್ದಾಗ ಸಂಗಮ್ಮನಿಗೆ ರಸ್ತೆಯ ಬದಿಯಲ್ಲಿ ಇಟ್ಟಿದ ಕಸದ ಬುಟ್ಟಿಯಲ್ಲಿ ಒಂದು ಮಗು ಕೂಗುವ ಶಬ್ದ ಕೇಳಿತು, ಅವಳು ಕಸದ ಬುಟ್ಟಿಯ ಬಳಿಗೆ ಹೋಗಿ ನೋಡಿದಳು "ಅಯ್ಯೋ ದೇವ, ಮರಿಯಮ್ಮ ನೋಡು ಮಗು ಇಲ್ಲಿ" ಎಂದು ಅದನ್ನು ಎತ್ತಿದಳು, ಎಲ್ಲರೂ ಬಳಿ ಬಂದು ಸೇರಿದರು.

ಮರಿಯಮ್ಮ "ಹೇ ಮುಂಡೆಬಿಡು ಇದನ್ನು ನಿನಗೇನೂ ಹುಚ್ಚು ಆಗಿದೆಯ ಏನು."

ಸಂಗಮ್ಮ " ಆದರೆ ಮರಿಯಮ್ಮ, ಚಿಕ್ಕ ನವ ಜನಿತ ಮಗು, ಪಾಪ".

ಮರಿಯಮ್ಮ " ಹಾಗಾದರೆ ಏನು ಮಾಡುವೆ ನೀನು ಇದರ, ನಮಗೆಯೇ ಇಲ್ಲಿ ಗತಿ ಇಲ್ಲ, ಬಿಡು ಇದನ್ನು"

ಸಂಗಮ್ಮ "ಬೇಡ ಮರಿಯಮ್ಮ, ಮಳೆ ಜೋರಾಗಿದೆ, ಪಾಪ ಇಲ್ಲಿಯೇ ಇದ್ದರೆ ಇದು ಸತ್ತು ಹೋಗಬಹುದು, ನಾವು ಇದನ್ನು ನಮ್ಮ  ಠಿಕಾನೆಗೆ ಕರೆದುಕೊಂಡು ಹೋಗುವ".

ಮರಿಯಮ್ಮ ಕೋಪದಿಂದ "ಹೇ ಹುಚ್ಚೆ, ನಿನ್ನ ಸ್ವತಹದ್ದು ಠಿಕಾನೆ ಇಲ್ಲ, ಮೇಲಿಂದ ಈ ಮಗು, ಅದರ ಮೇಲೆ ಪೋಲಿಸರ ಭಯ, ಬಿಡು ಇದನ್ನು"

ಸಂಗಮ್ಮ " ಬೇಡ ಮರಿಯಮ್ಮ, ಜೋನಮ್ಮ, ಬಾನಮ್ಮ ನೀವು ಹೇಳಿರೋ ಈ ಮರಿಯಮ್ಮನಿಗೆ" ಎಂದು ಜೋರಿನಿಂದ ಅಳಲಾರಂಭಿಸಿದಳು.

ಸಂಗಮ್ಮನ ಜತೆಗಾರರಾದ ಜೋನಮ್ಮ, ಬಾನಮ್ಮ ಮುಂದೆ ಬಂದು "ಮರಿಯಮ್ಮ, ಹೋಗಲಿ ಬಿಡು ಅವಳ ಮನಸ್ಸಿದ್ದರೆ ಇರಲಿ ಈ ಮಗು ನಮ್ಮೊಟ್ಟಿಗೆ ". 

ಸಂಗಮ್ಮನನ್ನು ಅಳುವುದನ್ನು ನೋಡಿ ಮರಿಯಮ್ಮಳ ಹೃದಯ ಕರಗಿತು "ನೋಡು ಸಂಗಮ್ಮ ನೀನು ಈ ಮಗು ಸಾಕುವೆ ಅಂದರೆ ನನಗೇನು ಅಡ್ಡಿ ಇಲ್ಲ ಆದರೆ ಇದರ ಪೂರ್ಣ ಜವಾಬ್ದಾರಿ ನಿನ್ನದೇ, ಪೋಲಿಸ್'ದವರ ಏನು ತಂಟೆ ಇದ್ದರೆ ಅದನ್ನು ಕೇವಲ ನಾನು ನೋಡಿಕೊಳ್ಳುವೆ, ಬೇರೆ ಮಗುವನ್ನು ಸಾಕುವ ಎಲ್ಲ ಜವಾಬ್ದಾರಿ ನಿನ್ನದೇ ."

ಇದನ್ನು ಕೇಳಿ ಸಂಗಮ್ಮ, ಜೋನಮ್ಮ ಹಾಗು ಬಾನಮ್ಮನ ಮುಖ ಸಂತೋಷದಿಂದ ಅರಳಿತು.

ಸಂಗಮ್ಮ "ಆಯಿತು ಆಯಿತು ಮರಿಯಮ್ಮ" ಒಟ್ಟಿಗೆ  ಜೋನಮ್ಮ ಹಾಗು ಬಾನಮ್ಮ ಸಹ ಸಂತಸದಿಂದ ಸಂಗಮ್ಮನ ಜತೆ ಸ್ವರ ಸೇರಿಸಿದರು.

(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

Wednesday, June 18, 2014

ಗೌತಮ್ ಬುದ್ಧ (೪)

ಗೌತಮ್ ಬುದ್ಧ (೪)

ಸುಂದರ ಪತ್ನಿ ಹಾಗು ನವ ಜನಿತ ಮಗು ಹಾಗು ಕಪಿಲವಸ್ತು ಎಂಬ ರಾಜ್ಯದ ಮೋಹ ಬಿಟ್ಟು ಸಿದ್ಧಾರ್ಥ ತಪ್ಪಸ್ಸು ಮಾಡಲು ಹೊರಟ, ಅವನು ರಾಜಗೃಹಕ್ಕೆ ಬಂದ, ಅಲ್ಲಿ ಅವನು ಭಿಕ್ಷೆ ಬೇಡಿದ, ಹಾಗೆಯೇ ಅವನು ತಿರುಗುತ ತಿರುಗುತ ಅಲಾರ್ ಕಾಲಂ ಮತ್ತು ಉದ್ದಕ್ ರಾಮಪುತ್ರದ ಹತ್ತಿರ ಮುಟ್ಟಿದ, ಅಲ್ಲಿ ಅವನು ಯೋಗ ಸಾಧನೆ ಕಲಿತ, ಧ್ಯಾನದಲ್ಲಿ ಏಕಾಗ್ರತೆ ಹೇಗೆ ಪಡೆಯುವುದು ಅದೂ ಕಲಿತ, ಆದರೆ ಅವನಿಗೆ ಸಂತೋಷ ಸಿಗಲಿಲ್ಲ, ಅವನು ನಂತರ ಉರುವೇಲಾ ಮುಟ್ಟಿದ, ಅಲ್ಲಿ ಹೋಗಿ ಅನೇಕ ವಿಧದ ತಪ್ಪಸ್ಸು ಮಾಡಲಾರಂಭಿಸಿದ.

ಸಿದ್ಧಾರ್ಥ ಮೊದಲಂತೂ ಕೇವಲ ಎಳ್ಳು ಅನ್ನ ತಿಂದು ತಪ್ಪಸ್ಸು ಮಾಡುತ್ತಿದ್ದ, ಆದರೆ ನಂತರ ಅವನು ಯಾವುದೇ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ, ಅವನ ಶರೀರ ಕ್ಷೀಣವಾಯಿತು, ಸತತ ಆರು ವರ್ಷ ತಪ್ಪಸ್ಸು ಮಾಡಿ ಸಹ ಅವನು ಯಶಸ್ಸು ಪಡೆಯಲಿಲ್ಲ,  ಅವನ ತಪಸ್ಸು ಸಫಲವಾಗಲಿಲ್ಲ.

ಒಂದು ದಿನ ಕೆಲವು ಸ್ತ್ರೀಯರು ಯಾವುದೇ ನಗರದಿಂದ ಬರುವಾಗ ಸಿದ್ಧಾರ್ಥ ತಪ್ಪಸ್ಸು ಮಾಡುವ ಸ್ಥಾನದಿಂದ ದಾಟಿ ಹೋಗುತ್ತಿದ್ದರು, ಅವರ ಯಾವುದೇ ಪದ್ಯ ಹಾಡುತ್ತಿದ್ದರು, ಅವರ ಒಂದು ಗೀತೆ ಸಿದ್ಧಾರ್ಥನ ಕಿವಿಗೆ ಬಿತ್ತು, ಅದರ ಅರ್ಥ ಹೀಗಿತ್ತು "ವೀಣೆಯ ತಂತಿಯನ್ನು ಸಡಿಲು ಬಿಡಬೇಡ, ಸಡಿಲು ಬಿಟ್ಟರೆ ಅದರಿಂದ ಶ್ರುತಿಬದ್ಧ ಧ್ವನಿ ಬಾರದು, ಆದರೆ ತಂತಿಯನ್ನು ಇಷ್ಟು ಸಹ ಬಿಗಿಯಬೇಡಿ, ಇಲ್ಲಾದರೆ ಅದು ಮುರಿಯಬಹುದು." ಸಿದ್ಧಾರ್ಥನಿಗೆ ಅವರ ಮಾತು ಹಿಡಿಸಿತು, ಅವನಿಗೆ ತಿಳಿಯಿತು ನಿಯಮಿತ ಆಹಾರ ಪೋಷಣ ಹಾಗು ಸಂತೃಪ್ತಿಯಿಂದಲೇ ಯೋಗ ಧೃಢವಾಗುತ್ತದೆ, ಅತಿ ಯಾವುದರಲ್ಲೂ ಒಳ್ಳೆಯದಲ್ಲ,ಮಧ್ಯಮ ಮಾರ್ಗವೇ ಯಾವುದೇ ಸಿದ್ಧಿ ಪಡೆಯಲು ಉತ್ತಮವೆಂದು.

ವೈಶಾಖ ಹುಣ್ಣಿಮೆಯ ಘಟನೆ ಇದು, ಸುಜಾತ ಎಂಬ ಹೆಂಗಸಿಗೆ ಪುತ್ರ ರತ್ನ ಪ್ರಾಪ್ತಿಯಾಯಿತು, ಪುತ್ರ ಪ್ರಾಪ್ತಿಗಾಗಿ ಅವಳು ಆಲದಮರ ಪೂಜೆಯ ಸಂಕಲ್ಪ ಮಾಡಿಕೊಂಡಿದ್ದಳು, ಅವಳು ಸಂಕಲ್ಪ ಪೂರ್ಣಗೊಳಿಸಲು ಚಿನ್ನದ ಬಟ್ಟಲಲ್ಲಿ ಹಾಲಿನ ಪಾಯಸ ಇಟ್ಟು ಆಲದಮರದ ಬಳಿ ಬಂದಳು, ಸಿದ್ಧಾರ್ಥ ಅಲ್ಲಿಯೇ ಧ್ಯಾನದಲ್ಲಿ ಕುಳಿತ್ತಿದ್ದ, ಸುಜಾತಳಿಗೆ ಅನಿಸಿತು ಇದು ವೃಕ್ಷ ದೇವತೆಯೇ ಅವಳಿಗೆ ದರ್ಶನೆ ನೀಡಲು ಶರೀರ ರೂಪದಲ್ಲಿ ಬಂದಿದ್ದಾರೆ ಎಂದು, ಸುಜಾತ ತುಂಬಾ ಗೌರವ ನಿಷ್ಠೆಯಿಂದ ಸಿದ್ಧಾರ್ಥನಿಗೆ ಪಾಯಸ ಕೊಟ್ಟಳು ಹಾಗು ಹೇಳಿದಳು "ನನ್ನ ಬಯಕೆ ಪೂರ್ಣವಾದಂತೆ ನಿಮ್ಮ ಸಹ ಬಯಕೆ ಪೂರ್ಣವಾಗಲಿ."

ಅದೇ ರಾತ್ರಿ ಸಿದ್ಧಾರ್ಥ ಧ್ಯಾನದಲ್ಲಿದ್ದಾಗ ಅವನಿಗೆ ಸತ್ಯದ ಅರಿವಾಯಿತು, ಅವನು ಪ್ರಜ್ಞಾಶೂನ್ಯ ಅವಸ್ಥೆಗೆ  ತಲುಪಿದ ಹಾಗು ತನ್ನ ತಪ್ಪಸ್ಸಿನಲ್ಲಿ ಯಶಸ್ವಿಯಾದ, ಯಾವ ವೃಕ್ಷದ ಅಡಿಯಲ್ಲಿ ಸಿದ್ಧಾರ್ಥನಿಗೆ ಜ್ಞಾನೋದಯ ಆಯಿತೋ ಆ ವೃಕ್ಷದ ಹೆಸರು ಭೋಧಿ ವೃಕ್ಷ  ಎಂದು ಹಾಗು ಈ ಘಟನೆ ನಡೆದ ಆ ಸ್ಥಾನದ ಹೆಸರು ಭೋದಗಯಾ ಎಂದು, ಇದು ಕ್ರಿಸ್ತ ಪೂರ್ವ ೫೨೮ ವರ್ಷದ ಮುಂಚಿನ ಘಟನೆ, ಆ ಸಮಯ ಸಿದ್ಧಾರ್ಥ ೩೫ ವಯಸ್ಸಿನ ಯುವಕನಾಗಿದ್ದ, ಬುದ್ಧ ದೇವರು ೪ ವಾರ ತನಕ ಆ ಭೋಧಿ ವೃಕ್ಷದ ಕೆಳಗೆ ಧ್ಯಾನಸ್ಥರಾಗಿ ಕುಳಿತ್ತಿದ್ದರು, ಅವರು ಧರ್ಮ ಸ್ವರೂಪದ ಬಗ್ಗೆ ಚಿಂತನೆ ಮಾಡುತ್ತಾ ಇದ್ದರು ಹಾಗು ಇದರ ನಂತರ ಅವರು ಧರ್ಮೋಪದೇಶ ನೀಡಲು ಹೊರಟರು.

ಸಿದ್ಧಾರ್ಥನಿಗೆ ನಿಜ ಜ್ಞಾನೋದಯ ಆದಾಗ ಅದೇ ವರ್ಷ ಆಷಾಡದ ಹುಣ್ಣಿಮೆಯ ದಿವಸ ಬುದ್ಧ ದೇವರು ಮೃಗದಾವಕ್ಕೆ (ವರ್ತಮಾನದಲ್ಲಿ ಸಾರನಾಥ) ತಲುಪಿದರು, ಅಲ್ಲಿಯೇ ಅವರು ತನ್ನ ಪ್ರಥಮ ಧರ್ಮೋಪದೇಶ ನೀಡಿದ್ದರು,  ಬುದ್ಧ ದೇವರು ಜನರಿಗೆ ಮಧ್ಯಮ ಮಾರ್ಗ ಅಳವಡಿಸಿಕೊಳ್ಳಲು ಹೇಳಿದ್ದರು, ದುಃಖ, ಅದರ ಕಾರಣ ಹಾಗು ಅದರ ನಿವಾರಣೆ ಗೋಸ್ಕರ ಅಷ್ಟಾಂಗಿಕ ಮಾರ್ಗ ಸೂಚಿಸಿದ್ದರು, ಅಹಿಂಸೆಯ ಮೌಲ್ಯ ತಿಳಿಸಿದ್ದರು, ಯಜ್ಞ ಹಾಗು ಪಶು ಬಲಿಯ ನಿಂದನೆ ಮಾಡಿದ್ದರು.

೮೦ ನೇ ವಯಸ್ಸಿನ ತನಕ ಬುದ್ಧ ದೇವರು ತನ್ನ ಧರ್ಮದ ಸ್ಪಷ್ಟ ಸರಳ ಲೋಕಭಾಷೆಯಲ್ಲಿ ಪಾಲಿಯಲ್ಲಿ ಪ್ರಚಾರ ಮಾಡಿದ್ದರು, ಅವರ ನೇರ ಸತ್ಯ ನುಡಿ ಜನರನ್ನು ಸೆಳೆಯುತ್ತಿತ್ತುಜನರು ಬಂದು ಅವರಿಂದ ದೀಕ್ಷೆ ಪಡೆಯಲು ಬರಲಾರಂಭಿಸಿದ್ದರು.

ಬೌದ್ಧ ಧರ್ಮ ಎಲ್ಲರ ಗೋಸ್ಕರ ತೆರೆದಿತ್ತು, ಅಲ್ಲಿ ಎಲ್ಲ ರೀತಿಯ ಮನುಷ್ಯರಿಗೆ ಸ್ವಾಗತವಿತ್ತು, ಪುಣ್ಯಾತ್ಮ , ಪಾಪಿ, ಗೃಹಸ್ಥ, ಬ್ರಾಹ್ಮಣ, ಬ್ರಹ್ಮಚಾರಿ ಎಲ್ಲರಿಗೂ ಅಲ್ಲಿಯ ದ್ವಾರ ತೆರೆದಿತ್ತು. ಜಾತಿ ಪಂಥ, ಮೇಲು ಕೀಳು ಯಾವುದೇ ಭೇದ ಭಾವ ಇರಲಿಲ್ಲ ಅವರಲ್ಲಿ.

(ಮುಗಿಯಿತು)

ಆಧಾರ : ಕೇಳಿದ್ದು/ಓದಿದ್ದು


by ಹರೀಶ್ ಶೆಟ್ಟಿ ,ಶಿರ್ವ

ಹಿಜಡಾ- ೧

ಹಿಜಡಾ- ೧
--------

"ಏಕೆ, ಏಕೆ ಇಂದಿಷ್ಟು ಕಡಿಮೆ ಕಲೆಕ್ಷನ್, ನೀನು ದಿನದಿಂದ ದಿನ ಸುಸ್ತು ಆಗುತ್ತ ಹೋಗುತ್ತಿದ್ದಿ ಜೋನಮ್ಮ" ಎಂದು ಸಂಗಮ್ಮ ರೇಗಿದಳು.

"ಏನು ಮಾಡಲಿ ಸಂಗಮ್ಮ, ಬೇರೆ ಏರಿಯದವರು ನಮ್ಮ ಏರಿಯಕ್ಕೆ ಬಂದು ಕಲೆಕ್ಷನ್ ಮಾಡಿ ಹೋಗುತ್ತಾರೆ, ನಾವು ಏರಿಯ ಕವರ್ ಮಾಡಲು ಹೋದಾಗ ಎಲ್ಲರೂ "ಈಗ ತಾನೇ ಕೊಂಡು ಹೋದರು ಎಂದು ಹೇಳುತ್ತಾರೆ" ಜೋನಮ್ಮ ಸಂಕಟದಿಂದ ಉತ್ತರಿಸಿದಳು.

"ಯಾರವರು ಮುಂಡೆ ಮಕ್ಕಳು?" ಸಂಗಮ್ಮ ಕಿರುಚಿದಳು.

"ಅವರೇ ಸಂಗಮ್ಮ, ಮಲ್ಲೇಶ್ವರ ಏರಿಯದ ಜಾನಮ್ಮ ಗ್ಯಾಂಗ್ ದವರು" ಎಂದು ಜೋನಮ್ಮ ಕೋಪದಿಂದ ಉಸಿರೆಲೆದಳು.

"ಅವರಿಗೆ ಒಳ್ಳೆ ಬುದ್ಧಿ ಕಲಿಸುವೆ, ಸ್ವಲ್ಪ ತಾಳು" ಎಂದಳು ಸಂಗಮ್ಮ.

ಅದೊಂದು ಹಿಜಡಾ ಸಮುದಾಯದವರ ಗುಂಪು, ಅಲ್ಲಿಯ ಮುಖ್ಯಸ್ಥೆ ಒಂದು ೪೫ ಹರೆಯದ ಸಂಗಮ್ಮ, ಇದು ದಿನದ ಹಣ ಸಂಗ್ರಹಣೆ ಅಂದರೆ ಅವರ ವ್ಯವಸಾಯದ ಲೆಕ್ಕಾಚಾರದ ಸಮಯ, ಅದಕ್ಕೆ ಅಲ್ಲಿ ೧೫/೨೦ ಹಿಜಡಾಗಳ ಉಪಸ್ಥಿತಿ ಇತ್ತು ಹಾಗು ಸಂಗಮ್ಮ ಎಲ್ಲರಿಂದ ಆ ದಿನದ ಲೆಕ್ಕಾಚಾರ ಕೇಳುತ್ತಿದ್ದಳು.

ಜೋಗಪ್ಪ, ಹಿಜಡಾ, ಖೋಜಾ ಮುಂತಾದ ಹೆಸರುಗಳಿಂದ ಕರೆಯಲ್ಪಡುವವರ ಬದುಕು ಹೀಗೆಯೇ, ಸಣ್ಣ ವಯಸ್ಸಿನಲ್ಲಿ ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಹೊಂದಿದವರು, ಮನೆ ಸಂಬಂಧಿಕರಿಂದ ದೂರವಾಗಿ ಈ ಸಮುದಾಯಕ್ಕೆ ಬಂದು ಸೇರುತ್ತಿದ್ದರು, ಅವರ ಭಾವಗಳೆಲ್ಲ ಸಹಜವಾದದ್ದು, ಆದರೆ ಯೋಗ್ಯ ಸಮಾಜದವರು ಎಂದೆನ್ನುವವರು ಅವರನ್ನು ಹೀನವಾಗಿ, ಅಸಹ್ಯವಾಗಿ ಹಾಗು ತಾತ್ಸಾರದಿಂದ ನೋಡುತ್ತಿದ್ದರು.

ಮೇಲಿನ ಸಂಭಾಷಣೆ ನಡೆಯುತ್ತಿರುವಾಗಲೇ ಬಾನಮ್ಮ ಬಂದು "ಸಂಗಮ್ಮ, ನಿನ್ ಮಗ ಬಂದಿದ್ದಾನೆ ಕಣೋ" ಎಂದು ಜೊತೆಯಲಿ ಬಂದ ೨೩-೨೪ ಹರೆಯದ ಸುಂದರ ಯುವಕನನ್ನು ಪ್ರೀತಿಯಿಂದ ನೋಡಿದಳು, ಅಲ್ಲಿದ್ದ ಇತರ ಹಿಜಡಾಗಳ ಮುಖದಲ್ಲೂ ಸಂತೋಷದ ಭಾವ ಮೂಡಿತು. 

ಸಂಗಮ್ಮನ ಮುಖದಲಿ ಹರ್ಷ ಮೂಡಿತು  "ಏನೇ ಮೋಹನ, ತಿಳಿಸದೇ ಬಂದೆಯಲ್ಲ,  ಪತ್ರ ಗಿತ್ರ ಏನಿಲ್ಲ, ಕೆಲಸಕ್ಕೆ ರಜೆ ಹಾಕಿ ಬಂದೆಯ?”

ಮೋಹನ "ಹೌದಮ್ಮ , ರಜೆ ಹಾಕಿ ಬಂದೆ, ನಿಮ್ಮತ್ರ ಸ್ವಲ್ಪ ಮಾತಾಡ್ಲಿಕ್ಕಿತ್ತು".

ಸಂಗಮ್ಮ "ಏನು ವಿಷಯ?”

ಮೋಹನ್ "ಅಮ್ಮ ನನಗೆ ನಿಮ್ಮತ್ರ ಒಂಟಿಯಾಗಿ ಮಾತನಾಡಲಿಕ್ಕಿದೆ."

ಸಂಗಮ್ಮ "ಇಲ್ಲಿ ಎಲ್ಲ ನಮ್ಮವರೇ, ಹೇಳು"

ಮೋಹನ್ "ಇಲ್ಲಮ್ಮ ಪ್ಲೀಸ್"

ಸಂಗಮ್ಮ ಏನೋ ವಿಷಯ ಇರಬೇಕೆಂದು ತಿಳಿದು ಎಲ್ಲರಿಗೆ ಈಷಾರೆ ಮಾಡಿದ್ದಳು, ಅದನ್ನು ನೋಡಿ ಎಲ್ಲರೂ ಹೊರಗೆ ನಡೆದರು.

(ಮುಂದುವರಿಯುವುದು)

by ಹರೀಶ್ ಶೆಟ್ಟಿ, ಶಿರ್ವ 

ಹನಿ ಹನಿ ಇಬ್ಬನಿ

ಹಸಿರು ಹುಲ್ಲಿನ ಮೇಲೆ 
ಹನಿ ಹನಿ ಇಬ್ಬನಿ
ಶ್ವೇತ 
ಮೌನ 
ಮುತ್ತಿನಂತೆ 
ಸುಗಮ ತಂಗಾಳಿ 
ಮುಂಜಾವದ ಉಲ್ಲಾಸ 
ದೂರ ಪರ್ವತದ ಹಿಂದೆ
ರವಿಯ ಉಜ್ವಲ ಕಿರಣ 
ಮೆಲ್ಲ ಮೆಲ್ಲನೆ 
ಹೊರ ಹೊಮ್ಮಿ
ಧರತಿಯ ಮಿಲನಕ್ಕೆ ಸಿದ್ಧವಾಗಿದೆ

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ