Tuesday, January 25, 2022

ಭಿಕ್ಷುಕ

photo courtesy: Google


ಆ ಮುದಿ ಭಿಕ್ಷುಕ ಪ್ರತಿ ಗುರುವಾರ ರವಿಯ ಅಂಗಡಿಯ ಎದುರು ಬಂದು ಭಿಕ್ಷೆಗೆ ನಿಲ್ಲುತ್ತಿದ್ದ, ಉಪಕಾರಬುದ್ಧಿಯುಳ್ಳ ರವಿಗೆ ಯಾಕೋ ಅವನನ್ನು ನೋಡಿ ಕರುಣೆ ಮೂಡುತ್ತಿತ್ತು ಹಾಗು ಅವನು ಬದಿಯ ಹೋಟೆಲಿನಿಂದ ಅವನಿಗೆ ಊಟ ಆರ್ಡರ್ ಮಾಡಿ ತಿನಿಸುತ್ತಿದ್ದ, ಅವರ ಮಧ್ಯೆ ಯಾವುದೇ ಸಂಭಾಷಣೆ ಇರುತ್ತಿರಲಿಲ್ಲ ಆದರೆ ಪ್ರತಿ ಗುರುವಾರ ಇದೆ ಒಂದು ರೂಢಿಯಾಗಿ ಹೋಯಿತು, ಆ ಭಿಕ್ಷುಕ ಬರುತ್ತಿದ್ದ ರವಿ ಬದಿಯ ಹೋಟೆಲಿನಿಂದ ಊಟ ತರಿಸಿ ಅವನಿಗೆ ಕೊಡುತ್ತಿದ್ದ.

ಕೋವಿಡ್‌ ಸಮಯದಲ್ಲಿ ರವಿ ವ್ಯಾಪಾರ ಇಲ್ಲದೆ ವ್ಯಾಪಾರದಲ್ಲಿ ತುಂಬಾ ನಷ್ಟ ಅಬುಭಾವಿಸಿದ, ಅಂಗಡಿಯ ಬಾಡಿಗೆ ಕೊಡಲು ಸಹ ಅವನಿಂದ ಅಸಾಧ್ಯವಾಯಿತು.

ಬಾಡಿಗೆ ಕೊಡದೆ ಅಂಗಡಿ ಮಾಲೀಕ ಅವನಿಗೆ ನೋಟೀಸ್ ಕೊಟ್ಟು ಅಂಗಡಿ ಖಾಲಿ ಮಾಡಲು ಒಂದು ತಿಂಗಳ ಸಮಯ ಕೊಟ್ಟ, ರವಿಗೆ ಇನ್ನು ಅಂಗಡಿ ಬಿಡುವುದಲ್ಲದೆ ಬೇರೆ ದಾರಿ ಇರಲಿಲ್ಲ.

ಆ ಗುರುವಾರ ಸಹ ಆ ಮುದಿ ಭಿಕ್ಷುಕ ಬಂದು ರವಿಯ ಅಂಗಡಿಯ ಎದುರು ನಿಂತ, ರವಿ ಆ ಕಷ್ಟದಲ್ಲಿಯೂ ಬದಿಯ ಹೋಟೆಲಿನಿಂದ ಆತನಿಗೆ ಊಟ ತಂದು ಕೊಟ್ಟು "ಅಜ್ಜ ಇದು ನನ್ನಿಂದ ನಿಮಗೆ ಅಂತಿಮ ಊಟ, ಬರುವ ಗುರುವಾರ ಈ ಅಂಗಡಿಯಲ್ಲಿ ನಾನು ಇರಲ್ಲ, ರವಿಯಿಂದ ಊಟ ತೆಗೆದುಕೊಂಡು ಮುದುಕ ಕಣ್ಣೆತ್ತಿ ರವಿಯನ್ನು ನೋಡಿ ಕೇಳಿದ "ಸಾರ್ ನಿಮಗೆ ಒಂದು ಕೇಳಲ?" 

ರವಿ "ಏನು? ಹಣ ಒಂದು ಕೇಳ್ಬೇಡಿ, ನನ್ನ ಪರಿಸ್ಥಿತಿ ಮೊದಲೇ ಗಂಭೀರವಾಗಿದೆ, ಅಂಗಡಿ ಖಾಲಿ ಮಾಡುತ್ತಿದ್ದೇನೆ, ತುಂಬಾ ನಷ್ಟ ಅನುಭವಿಸಿದೆ ಈ ಕೋವಿಡ್‌ ಬಂದು, ಇದ್ದ ಹಣವೆಲ್ಲಾ ನೀರಾಯಿತು, ಈಗ ಈ ಅಂಗಡಿಗೆ ಇನ್ನು ಬಂಡವಾಳ ಮಾಡಲಿಕ್ಕೆ ಹಣ ಇಲ್ಲ, ಮೇಲಿಂದ ಆರು ತಿಂಗಳ ಬಾಡಿಗೆ ಬಾಕಿ ಉಂಟು" ಎಂದು ರವಿ ತನ್ನ ಮನಸ್ಸಲ್ಲಿದ್ದ ಗೋಳು ಹೇಳಿಯೇ ಬಿಟ್ಟ ಆ ಭಿಕ್ಷುಕನ ಮುಂದೆ.

ರವಿಯ ಮಾತು ಕೇಳಿ ಭಿಕ್ಷುಕ ತನ್ನ ಚೀಲಕ್ಕೆ ಕೈ ಹಾಕಿ ಒಂದು ಗಂಟು ತೆಗೆದು ರವಿಯ ಕೈಯಲ್ಲಿಟ್ಟ. 

ರವಿ ಆಶ್ಚರ್ಯದಿಂದ "ಏನಿದು?"

ಭಿಕ್ಷುಕ "ಇದರಲ್ಲಿ ಒಂದೂವರೆ ಲಕ್ಷ ಹಣ ಇದೆ, ಇದು ನಿಮಗೆ, ನನ್ನ ಹೆಸರು ವೆಂಕಟೇಶ, ಮೂರು ವರುಷದಿಂದ ಮನೆಯಿಂದ ಹೊರ ಬಿದ್ದ ನಂತರ ನಾನು ಅಲ್ಲಿ ಇಲ್ಲಿ ನಲಿಯುತ್ತಿದ್ದೇನೆ, ಇದ್ದ ಒಬ್ಬನೇ ಒಬ್ಬ ಮಗನಿಗೆ ಅವನ ಸಂಸಾರದಲ್ಲಿ ನಾನು ಅವನಿಗೆ ಬೇಡವಾದೆ, ಒಂದು ದಿನ ತಾಳ್ಮೆ ಕಳೆದು ನನಗೆ ಹೇಳಿಯೇ ಬಿಟ್ಟ ಇನ್ನು ನಿಮ್ಮ ಭಾರ ಹೊಯ್ಯಲು ನನ್ನಿಂದಾಗದು ಎಂದು, ತುಂಬಾ ದುಃಖಿತನಾದೆ, ಅವನ ಅಮ್ಮ ಮೊದಲೇ ನನ್ನನ್ನು ಬಿಟ್ಟು ದೇವರ ಮನೆ ಸೇರಿಬಿಟ್ಟಿದಳು, ಈ ಆಘಾತದಿಂದ ಏನೂ ತೋಚದೆ ಅಲ್ಲಿ ಇಲ್ಲಿ ನಲಿದೆ, ಈಗ ಅಭ್ಯಾಸ ಆಗಿಹೋಯಿತು, ಒಬ್ಬರಿಗೆ ನಾವು ಬೇಡವೆಂದ ಮೇಲೆ ಅವರೊಟ್ಟಿಗೆ ಇದ್ದು ಸಹ ಏನು ಪ್ರಯೋಜನ, ಬಿಡಿ ಆ ವಿಷಯ, ನಾನು ಕೆಲಸದಲ್ಲಿದ್ದಾಗ ಕಷ್ಟ ಸಮಯಕ್ಕೆಂದು ಯಾರಿಗೂ ಹೇಳದೆ ಒಂದು ಲಕ್ಷ ರೂಪಾಯಿ ಫಿಕ್ಸೆಡ್ ಡೆಪೋಸಿಟಲ್ಲಿ ಇಟ್ಟಿದೆ, ಮನೆ ಬಿಟ್ಟ ಮೇಲೆ ಯಾವುದರಲ್ಲೂ ಆಸಕ್ತಿ ಇಲ್ಲದೇ ಈ ವಿಷಯ ಗೊತ್ತಿದ್ದೂ ಸಹ ನಾನು ಹೋಗಲೇ ಇಲ್ಲ ತೆಗಯಲಿಕ್ಕೆ, ಮಗನಿಗೆ ಅದರ ಬಗ್ಗೆ ಹೇಳುತ್ತಿದ್ದಾರೆ, ಅದನ್ನೂ ನುಂಗಿ ಬಿಡುತ್ತಿದ್ದ, ಕಳೆದ ಗುರುವಾರ ನಾನು ಬಂದಾಗ ನಿಮ್ಮ ಮತ್ತು ನಿಮ್ಮ ಮಾಲಕರ ಸಂಭಾಷಣೆ ಕೇಳಿದೆ, ಕೂಡಲೇ ಬ್ಯಾಂಕ್ ಹೋಗಿ ಆ ಹಣ ಕೊಂಡು ಬಂದೆ, ಇದು ಅದೇ ಹಣ, ಇದರಿಂದ ನೀವು ನಿಮ್ಮ ವ್ಯಾಪಾರ ಸರಿ ಮಾಡಿಕೊಳ್ಳಿ, ನನಗೆ ಈಗ ಈ ಹಣ ವ್ಯರ್ಥ. 

ರವಿ "ಆದರೆ ಅಜ್ಜ ಈ ಹಣ ನಿಮ್ಮದು ಹಾಗು ನಿಮ್ಮ ಮಗ ಇದರ ಹಕ್ಕುದಾರ".

"ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ಗುರುವಾರ ಕೇಳದೆ ನನಗೆ ಅನ್ನ ನೀಡಿದ ನೀವೇ ನನ್ನ ನಿಜವಾದ ಮಗ, ನನ್ನ ನಿರ್ಧಾರ ಸರಿಯಾಗಿದೆ, ಬರುವ ಗುರುವಾರ ಬರುತ್ತೇನೆ" ಎಂದು ಹೇಳಿ ಹೊರಟೇಬಿಟ್ಟರು ವೆಂಕಟೇಶ್ ಎಂಬ ಮಹಾನುಭಾವ. ರವಿ ವಿಸ್ಮಯದಿಂದ ಅವರು ಹೋಗುವುನೋದನ್ನು ನೋಡಿತ್ತಿದ್ದ, ಹಿಂದಿಂದ ಅವನಿಗೆ ಅವನ ಇಷ್ಟ ದೇವರು ಸಾಯಿಬಾಬ ಹೋಗುತ್ತಿರುವಂತೆ ಕಂಡು ಬಂತು. 


by ಹರೀಶ್ ಶೆಟ್ಟಿ, ಶಿರ್ವ

Sunday, January 23, 2022

ಭಾವನಾತ್ಮಕ ವಂಚನೆ

 "ನಾನು ಸುಮಾ, ನನ್ನ ವಯಸ್ಸು ೨೨, ನನ್ನ ಅಪ್ಪ ಕೆಲವು ದಿನದಿಂದ ಅರೋಗ್ಯ ಸರಿ ಇಲ್ಲದೆ ನರಳುತ್ತಿದ್ದಾರೆ, ಮನೆಯಲ್ಲಿ ಅಪ್ಪ ಒಬ್ಬರೇ ದುಡಿಯುತ್ತಿದ್ದ ಕಾರಣ ಮನೆಯ ಖರ್ಚು ಹೇಗೋ ಸಾಗುತಿತ್ತು, ಆದರೆ ಈಗ ಅವರು ಹಾಸಿಗೆ ಹಿಡಿದ ನಂತರ ಮನೆಯ ಪರಿಸ್ಥಿತಿ ಗಂಭೀರವಾಗಿದೆ, ನಾನು ಕಾಲೇಜ್ ಮುಗಿಸಿ ಕೆಲಸ ಸಿಗದೇ ಮನೆಯಲ್ಲೇ ಇದ್ದೇನೆ, ಸದ್ಯ ಯಾವುದೇ ಆದಾಯ ಇಲ್ಲದೆ ನಾವು ತುಂಬಾ ಕಷ್ಟದಲ್ಲಿದ್ದೇವೆ, ಆ ಕಾರಣ ನಾವು ಅವರನ್ನು ಆಸ್ಪತ್ರೆ ಸೇರಿಸುವ ಸ್ಥಿತಿಯಲ್ಲೂ ಇಲ್ಲ, ಅಪ್ಪನ ಚಿಕೆತ್ಸೆಗೆ ಸುಮಾರು ಮೂರು ಲಕ್ಷ ಖರ್ಚು ಆಗುತ್ತದೆಯೆಂದು ಡಾಕ್ಟರ್ ತಿಳಿಸಿದ್ದಾರೆ, ದಯಮಾಡಿ ತಾವೆಲ್ಲರೂ ನನಗೆ ಸಹಾಯ ಮಾಡಿ  ಈ ಸಂಕಟದಿಂದ ಪಾರು ಮಾಡಬೇಕೆಂದು ನಿಮ್ಮೆಲ್ಲರಿಂದ ಬೇಡಿಕೊಳ್ಳುವೆ, ನನ್ನ ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ವಿವರಗಳನ್ನು ಈ ವಿಡಿಯೋದಲ್ಲಿ ಹಾಕಿದ್ದೇನೆ ಹಾಗು ಅಪ್ಪನ ರಿಪೋರ್ಟ್ ಕಾಪಿ, ಫೋಟೋ ಸಹ ಹಾಕಿದ್ದೇನೆ, ದಯಮಾಡಿ ಸಹಕರಿಸಿ" ಎಂದು ಕಣ್ಣೀರು ಬಿಡುತ್ತಿದ್ದ ಆ ಸುಮಾ ಎಂಬ ಹುಡುಗಿಯ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ನೋಡಿ ರವಿಗೆ ತುಂಬಾ ಬೇಸರವಾಯಿತು ಹಾಗು ಇವಳಿಗೆ ಸಹಾಯ ಮಾಡಲೇಬೇಕೆಂಬ ನಿರ್ಧಾರಕ್ಕೆ ಬಂದ.

ರವಿ ಕೂಡಲೇ ಬ್ಯಾಂಕಿಂಗೆ ಹೋಗಿ ಹುಡುಗಿ ವಿಡಿಯೋದಲ್ಲಿ ತಿಳಿಸಿದ ಅಕೌಂಟಿಗೆ ೫೦೦೦ ರೂಪಾಯಿ ರವಾನಿಸಿದ ಹಾಗು ತಾನು ಒಂದು ಒಳ್ಳೆ ಕೆಲಸ ಮಾಡಿದೆಯೆಂದು ತೃಪ್ತಿ ಪಡೆದ.

ರವಿ ಬ್ಯಾಂಕಿನ ಬದಿಯಲ್ಲಿದ್ದ ಚಾ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದಾಗ ಹಠಾತ್ತಾಗಿ ಕಾಕತಾಳೀಯವಾಗಿ ಏನೋ ಅವನಿಗೆ ವಿಡಿಯೋದಲ್ಲಿದ್ದ ಆ ಹುಡುಗಿ ಸುಮಾ ಕಂಡು ಬಂದಳು, ಅವಳು ಒಂದು ರಿಕ್ಷಾದಿಂದ ಇಳಿದು ಬ್ಯಾಂಕಿನ ಎಟಿಎಂ ಕಡೆ ಹೋಗುತ್ತಿದ್ದಳು, ರವಿ ಅವಳನ್ನು ಮಾತನಾಡಿಸಿ ತಾನು ಮಾಡಿದ ಸಹಾಯದ ಬಗ್ಗೆ ಹೇಳಬೇಕೆಂದು ಯೋಚಿಸುವಷ್ಟರಲ್ಲಿ ಆ ಹುಡುಗಿ ಬ್ಯಾಂಕ್ ಎಟಿಎಂನಿಂದ ಹೊರ ಬಂದು ಪುನಃ ಆ ರಿಕ್ಷಾದಲ್ಲಿ ಕುಳಿತು ಹೊರಟುಬಿಟ್ಟಳು. ರವಿ ಅವಸರ ಅವಸರದಲ್ಲಿ ಒಂದು ರಿಕ್ಷಾ ಮಾಡಿ ಅವಳನ್ನು ಹಿಂಬಾಲಿಸಿದ, ಒಂದು ೧೫ ನಿಮಿಷದ ನಂತರ ಅವಳ ರಿಕ್ಷಾದವ ತನ್ನ ರಿಕ್ಷಾ ಒಂದು ಹಳೆಯ ಮನ ಎದುರು ನಿಲ್ಲಿಸಿದ, ಹುಡುಗಿ ರಿಕ್ಷಾದವನಿಗೆ ಹಣ ಪಾವತಿಸಿ ಮನೆಯೊಳಗೇ ಹೋದಳು, ರವಿ ಸಹ ಬೇಗ ಬೇಗ ತನ್ನ ರಿಕ್ಷಾದವನಿಗೆ ಹಣ ಪಾವತಿಸಿ ಅವಳನ್ನು ಹಿಂಬಾಲಿಸಿದ, 

ರವಿ ಗೇಟ್ ಬಳಿ ಹೋದಾಗ ಹುಡುಗಿ ಮನೆಯೊಳಗೇ ಹೋಗಿಬಿಟ್ಟಿದ್ದಳು, ಮನೆ ಬಾಗಿಲು ತೆರೆದಿತ್ತು, ರವಿ ಮನೆಯೊಳಗೇ ಹೋಗಲೆಂದು ಯೋಚಿಸುವಾಗ ಒಳಗಿನಿಂದ ಮಾತನಾಡುವ ಸ್ವರ ಕೇಳಿ ಅಲ್ಲೇ ನಿಂತು ಬಿಟ್ಟ, ಒಳಗಿನಿಂದ ಅವಳ ಮಾತು ಕೇಳಿ ಬಂತು "ಮೂವತ್ತು ಸಾವಿರ ಬಂದಿತ್ತು, ೨೫ ಸಾವಿರ ಏಟಿಎಂನಿಂದ ತೆಗೆದೆ"

ನಂತರ ಒಂದು ಗಂಡಸಿನ ಸ್ವರ ಕೇಳಿ ಬಂತು"ಗುಡ್, ನಿನ್ನೆಯ ಹಣ ಸೇರಿಸಿ ಮೂರು ಲಕ್ಷ ಮೂವತೈದು ಸಾವಿರ ಈ ತನಕ ಒಟ್ಟಾಗಿದೆ, ನೋಡಿದೀಯ ನನ್ನ ಪ್ಲಾನಿನ ಮ್ಯಾಜಿಕ್" ಎಂದು ನಕ್ಕ ಸ್ವರ.

ಪುನಃ ಅವಳ ಸ್ವರ ಕೇಳಿ ಬಂತು "ಹೌದು, ಎರಡೇ ದಿನದಲ್ಲಿ ಇಷ್ಟು ಹಣ ಬಂತಲ್ಲ, ನಾವು ಎರಡು ವರ್ಷ ದುಡಿದರೂ ಇಷ್ಟು ಹಣ ಸಿಗಲಿಕ್ಕಿಲ್ಲ, ಆದರೆ ರಾಜು, ಯಾರಿಗಾದರೂ ಗೊತ್ತಾದರೆ ನಾವು ವಿಡಿಯೋದಲ್ಲಿ ಹಾಕಿದ ಅಪ್ಪನ ಫೋಟೋ ನೀನೆ ಎಂದು, ನೀನು ಮುದುಕನ ವೇಷ ಬದಲಾಯಿಸಿ ಹಾಕಿದದ್ದೆಂದು, ಯಾರದರೂ ನಾವು ಕೊಟ್ಟ ಮೊಬೈಲ್ ನಂಬರಿಗೆ ಕಾಲ್ ಮಾಡಿ ಅದು ಇದು ಎಂದು ಹಲವು ಪ್ರಶ್ನೆ ಕೇಳಿದರೆ, ಮತ್ತೆ ಬ್ಯಾಂಕಿಂಗೆ ಹೋಗಿ ಅಕೌಂಟ್ ಬಗ್ಗೆ ವಿಚಾರಿಸಿದರೆ"

ಅದಕ್ಕೆ ರಾಜು ಎಂಬ ಗಂಡಸು "ನೀನು ಟೆನ್ಶನ್ ಮಾಡಬೇಡ ಪ್ರಿಯೆ, ಕೇವಲ ಇನ್ನು ಎರಡೇ ದಿವಸ ಸಂಭಾಳಿಸು, ಕಾಲ್ ಬಂದರೆ ಬೇಸರದ ಸ್ವರದಲ್ಲಿ ಮಾತನಾಡು, ಯಾರಾದರೂ ಹೆಚ್ಚು ವಿಚಾರಿಸಿದರೆ ಬುದ್ಧಿವಂತಿಕೆಯಿಂದ ಉತ್ತರಿಸು, ಇಲ್ಲದೆ ಕಾಲ್ ಡಿಸ್ಕನೆಕ್ಟ್ ಮಾಡಿಬಿಡು, ಎರಡು ದಿನದಲ್ಲಿ ಇನ್ನು ಹಣ ಒಟ್ಟಾಗುತ್ತದೆ, 

ಆ ನಂತರ ಈ ಮೊಬೈಲ್ ನಂಬರ್ ಡಿಸ್ಕನೆಕ್ಟ್ ಮಾಡಿಬಿಡುವ ಹಾಗು ಬ್ಯಾಂಕ್ ಅಕೌಂಟ್ ಖಾಲಿ ಮಾಡಿ ಕ್ಲೋಸ್ ಮಾಡಿಬಿಡುವ, ನಂತರ ಬೇರೆ ಊರು ಬೇರೆ ಪ್ಲಾನು, ಹಹಹಹ" 

ಹುಡುಗಿ " ಹಹಹಹ, ನೀನು ಜೀನಿಯಸ್ ರಾಜು"ಎಂದು ಇಬ್ಬರ ಜೋರು ಜೋರು ನಗುವ ಸ್ವರ ಕೇಳಿ ಬಂತು.

ಹೊರಗೆ ನಿಂತ ರವಿ ಕಕ್ಕಾಬಿಕ್ಕಿಯಾಗಿ ಅವರ ಸಂಭಾಷಣೆ ಕೇಳುತ್ತಿದ್ದ. 


by ಹರೀಶ್ ಶೆಟ್ಟಿ,ಶಿರ್ವ

Saturday, January 22, 2022

ಆತ್ಮೀಯ ಸಂಬಂಧ

 

Photo courtesy: Google

ಕಾಂವ್, ಕಾಂವ್", 

ಆ ಕಾಗೆಯ ವಿಚಿತ್ರ ಕೂಗು ಇಡೀ ಪರಿಸರದಲ್ಲಿ ಕೇಳಿ ಬರುತಿತ್ತು.

ರವಿವಾರದ ದಿವಸ ಆರಾಮವಾಗಿ ಬೆಳಿಗ್ಗೆ ಚಾ ಕುಡಿಯುತ್ತಾ ದಿನಪತ್ರಿಕೆ ಓದುತ್ತಿದ್ದ ಗಣೇಶ ಆ ಕಾಗೆಯ ಕೂಗಿನಿಂದ ಬೇಸತ್ತು, ಹೆಂಡತಿ ಮಾಲತಿಯನ್ನು ಕರೆದು "ಹೇ ಮಾಲತಿ ಏನಿದು ಆ ಪಕ್ಕದ ಮನೆಯ ಕಿಟಕಿಯಲ್ಲಿ ಆ ಕಾಗೆ ಹೀಗೆ ಕಿರುಚುತ್ತಿದೆ? ಒಮ್ಮೆ ಅಟ್ಟಿಬಿಡು ಆಚೆ ಅದನ್ನು"

ಮಾಲತಿ " ಹೌದ್ರಿ ನಾನು ಸಹ ಕೇಳ್ತ ಇದ್ದೇನೆ, ಅದು ನಮ್ಮ ಪಕ್ಕದ ಗಂಗೂ ಆಂಟಿಯ ಮನೆಗೆ ದಿನನಿತ್ಯ ಬರುವ ಕಾಗೆ, ಗಂಗೂ ಆಂಟಿ ದಿನ ಅದಕ್ಕೆ ತಿಂಡಿ ಕೊಟ್ಟು ಅದರ ಬುದ್ಧಿ ಕೆಡಿಸಿದ್ದಾರೆ, ಇವತ್ತೇನೋ ಅವರಿಗೆ ಎದ್ದೇಳಲು ತಡವಾದಂತೆ ಕಾಣುತ್ತದೆ".

"ಹ್ಮ್, ಜನರಿಗೆ ಏನೇನೋ ಹವ್ಯಾಸ, ಇತರರಿಗೆ ಕಷ್ಟ" ಎಂದು ಗಣೇಶ ಕೋಪದಿಂದ ಮುಖ ತಿರುಚಿ ಪುನಃ ದಿನಪತ್ರಿಕೆ ಓದಲಾರಂಭಿಸಿದ.

ಆದರೆ ಈಗ ಕಾಗೆ ಅವರ ಮನೆ ಕಿಟಕಿಯ ಹತ್ತಿರ ಸಹ ಹಾರಾಡುತ್ತ ಬಂದು ವಿಚಿತ್ರವಾಗಿ ಕೂಗಲಾರಂಭಿಸಿತು.

ಗಣೇಶನಿಗೆ ಸಿಟ್ಟು ನೆತ್ತಿಗೇರಿತು, "ಅಯ್ಯೋ ಮಾಲತಿ ಓಡಿಸೋ ಅದನ್ನು, ಸುಮ್ಮನೆ ರವಿವಾರದ ದಿವಸ ಸಹ ಶಾಂತಿಯಿಂದ ಕೂತುಕೊಳ್ಳುವ ಹಾಗೆ ಇಲ್ಲ.

"ರೀ ತಡೆಯಿರಿ", ನಾನು ನೋಡುತ್ತೇನೆ ಎಂದು ಕಾಗೆಯನ್ನು ಓಡಿಸಲು ಮಾಲತಿ ಕಾಗೆಯತ್ತ ಹೋದಾಗ, ಅವಳಿಗೆ ಕಾಗೆಯ ಕಣ್ಣು ಏನೋ ಹೇಳುತ್ತಿದ್ದಂತೆ ಬಾಸವಾಯಿತು. ಅವಳು ಅಲ್ಲೇ ನಿಂತು ಗಣೇಶನಿಗೆ 'ರೀ ನನಗೆ ಏನೋ ಸರಿ ಕಾಣುತ್ತಿಲ್ಲ, ಈ ಕಾಗೆ ಅಂತಹದಲ್ಲ, ಗಂಗೂ ಆಂಟಿ ಇದರ ಜೊತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ, ದಿನ ಇದಕ್ಕೆ ತಿಂಡಿ ಕೊಟ್ಟು ಇದರ ಜೊತೆ ಒಂದೊಂದು ಗಂಟೆ ಮಾತಾನಾಡುತ್ತಾರೆ. ಗಂಗೂ ಆಂಟಿ ಕಾಗೆಯ ಇಷ್ಟು ಕೂಗು ಕೇಳಿ ನಿದ್ರಿಸಲು ಸಾಧ್ಯನೇ ಇಲ್ಲ. ಪಾಪ.... ಒಬ್ಬರೇ ಇರುವುದು ಅವರು, ಇದ್ದ ಒಬ್ಬ ಮಗ ಸಪರಿವಾರ ಪರದೇಶ ಸೆಟ್ಲ್ ಆದ ಮೇಲೆ ಈಚೆ ಮುಖ ಮಾಡಲಿಲ್ಲ, ಪಾಪ ಇವತ್ತು ಏನೋ ಅವರಿಗೆ ಸೌಖ್ಯವಿಲ್ಲ ಕಾಣುತ್ತದೆ , ನಾನು ಅವರ ಮನೆಗೆ ಹೋಗಿ ನೋಡಿ ಬರುತ್ತೇನೆ" ಎಂದು ಹೇಳಿ ಹೊರಗೆ ಪಕ್ಕದ ಮನೆಯತ್ತ ಹೋದಳು.

ಆದರೆ ಗಂಗೂ ಆಂಟಿಯ ಮನೆಯ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ, ಮಾಲತಿ ಪುನಃ ತನ್ನ ಮನೆಗೆ ಓಡಿ ಬಂದು ಗಣೇಶನಿಗೆ "ರೀ ಸ್ವಲ್ಪ ಬನ್ನಿ, ಏನೋ ಅನಾಹುತ ಆಗಿದಂತೆ ಕಾಣುತ್ತದೆ, ಗಂಗೂ ಆಂಟಿ ಬಾಗಿಲು ತೆರೆಯುತಿಲ್ಲ.


ಈಗ ಗಣೇಶ ಸಹ ಸ್ವಲ್ಪ ಚಿಂತಿತನಾಗಿ ಗಂಗೂ ಆಂಟಿಯ ಮನೆಗೆ ಓಡಿದ ಆದರೆ ಎಷ್ಟು ಬೆಲ್ ಬಾಗಿಲು ಬಾರಿಸಿದರೂ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಎಲ್ಲಾ ಮನೆಯವರು ಸಹ ಅಲ್ಲಿ ಒಟ್ಟಾದರು, ಗಣೇಶ ಮತ್ತು ಅವರೆಲ್ಲರ ಮಧ್ಯೆ ಈಗ ಏನು ಮಾಡುವುದು ಎಂದು ವಿಚಾರ ವಿಮರ್ಶೆ ನಡೆಯಿತು, ಅಂತಿಮವಾಗಿ ಅವರು ಬಾಗಿಲು ಮುರಿಯುವ ನಿರ್ಧಾರಕ್ಕೆ ಒಪ್ಪಿಕೊಂಡರು, ಕಾಗೆ ಈಗಲೂ ಕೂಗುತ್ತಲೇ ಇತ್ತು.


ಬಾಗಿಲು ಮುರಿಯಲಾಯಿತು, ಒಮ್ಮೆಲೇ ಎಲ್ಲರು ಒಳಗೆ ನುಗ್ಗಿದರು, ಒಳಗೆ ಹಾಸಿಗೆಯ ಮೇಲೆ ಶಾಂತಚಿತ್ತ ಮಲಗಿದರು ಗಂಗೂ ಆಂಟಿ, ಮಲಗಿದಲ್ಲೇ ಅವರು ಮೃತ್ಯುಗೆ ಶರಣಾಗಿದ್ದರು, ಮುಖದ ಮೇಲೆ ವೇದನೆಯ ಭಾವ ಇತ್ತು, ಅವರ ಕೈ ಅವರ ಎದೆಯ ಮೇಲೆ ಇತ್ತು ಹಾಗು ಕೈಯಲ್ಲಿ ಮಗನ ಫೋಟೋ ಹಿಡಿದಿದ್ದರು, ಬದಿಯ ಮೇಜಲ್ಲಿ ಒಂದು ಬಟ್ಟಲಲ್ಲಿ ಧಾನ್ಯ ಇಟ್ಟಿತ್ತು, ಬಹುಶ ಬೆಳಿಗ್ಗೆ ಕಾಗೆಗೆ ಕೊಡಲೆಂದೋ ಏನೋ, ಅದನ್ನು ನೋಡಿ ಮಾಲತಿ ಕಿಟಕಿಯತ್ತ ನೋಡಿದ್ದಳು, ಅಲ್ಲಿ ಒಳಗೆ ಇಣುಕುತ್ತಿದ್ದ ಕಾಗೆಯ ಕಣ್ಣಲ್ಲಿ ಅವಳಿಗೆ ನೀರು ಕಂಡು ಬಂತು, ಕಾಗೆ ಈಗ  ಕೂಗುತ್ತಿರಲಿಲ್ಲ, ಅದು ಮೌನವಾಗಿತ್ತು.



by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...