Friday, September 30, 2022

ಸ್ಕಂದ ಮಾತೆ



ತೆರೆದಿದೆ ಬಾಗಿಲು,

ಬಾ ಮನೆಯೊಳಗೇ ಮಾತೆ, ಭಕ್ತಿ ಭಾವದಿಂದ ಕರೆಯುತ್ತಿರುವೆ ನಿನಗೆ,

ಬಾ ಮನೆಯೊಳಗೇ ಮಾತೆ, ತೆರೆದಿದೆ.....


ಪ್ರೀತಿಯ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿರುವಂತೆ,

ನನಗೂ ನಿನ್ನ ಮಮತೆ ನೀಡು ಮಾತೆ,

ನನ್ನಲಿರುವ ಕಲ್ಮಶ ಅಳಿಸಿ ನನ್ನ ದೈವತ್ವವನ್ನು ಪೋಷಿಸು ಮಾತೆ,

ತೆರೆದಿದೆ.....


ನಿನ್ನ ಈ ಅವತಾರ ರೂಪವನ್ನು ಪೂಜಿಸುವವರು ಕಷ್ಟಮುಕ್ತರಾಗುವರು,

ನಿನ್ನ ಆಶೀರ್ವಾದದೊಟ್ಟಿಗೆ ಮಗ ಸ್ಕಂದನ ಆಶೀರ್ವಾದವನ್ನೂ ಪಡೆಯುವರು,

ಎಲ್ಲರೂ ನಿನ್ನ ಕೃಪೆಗೆ ಪಾತ್ರರಾಗುವರು,

ತೆರೆದಿದೆ.....


ಶುದ್ಧ ಮನಸ್ಸಿನಿಂದ ಕರೆಯುತ್ತಿರುವೆ ನನ್ನ ಮನೆಗೆ ಮಾತೆ,

ಬಂದು ನಮ್ಮೆಲ್ಲರನ್ನೂ ಅನುಗ್ರಹಿಸು ಮಾತೆ,

ಸುಖ ಸಂಪತ್ತು ಶಾಂತಿ ಸಮೃದ್ಧಿ ನೀಡಿ ಹರಸು ಮಾತೆ,

ತೆರೆದಿದೆ....


ಓಂ ಶ್ರೀ ಸಿಂಹವಾಹಿನಿ,

ಓಂ ಶ್ರೀ ಪದ್ಮಾಸನ ದೇವಿ,

ಓಂ ದೇವಿ ಸ್ಕಂದಮಾತಾಯೈ ನಮಃ||


by ಹರೀಶ್ ಶೆಟ್ಟಿ, ಶಿರ್ವ

Thursday, September 29, 2022

ಕೂಷ್ಮಂಡಾ ದೇವಿ



ನೋಡಿ ಬಂದಳು,

ಅಮ್ಮ ಬಂದಳು,

ಮಂದಹಾಸ ಬೀರುತಾ,

ತನ್ನ ತೇಜಸ್ಸು ಚೆಲ್ಲುತಾ,

ಅಮ್ಮ ಕೂಷ್ಮಂಡಾ ದೇವಿ ಬಂದಳು..


ಬನ್ನಿ, ಅಮ್ಮನ ಆರಾಧನೆ ಮಾಡುವ,

ಅಜ್ಞಾನದ ಅಂಧಕಾರ ದೂರ ಮಾಡುವ,

ನೋಡಿ ವಿವೇಕದ ಉಡುಗೊರೆ ತಂದಳು,

ಜ್ಞಾನದ ಬೆಳಕಾಗಿ ಬಂದಳು,

ನೋಡಿ ಬಂದಳು....


ದೋಷ ಕ್ಲೇಷ ಇನ್ನು ದೂರವಾಗುವುದು,

ರೋಗ ತಾಪ ಇನ್ನು ದೂರವಾಗುವುದು,

ನೋಡಿ ತನು ಮನದಲಿ ಚೈತನ್ಯ ತುಂಬಲು ಬಂದಳು,

ಆರೋಗ್ಯದ ಹೊನಲಾಗಿ ಬಂದಳು,

ನೋಡಿ ಬಂದಳು....


ಸೂರ್ಯನಿಗೆ ಅಧಿಪತಿ ಇವಳು,

ಜಗದ ಸೃಷ್ಟಿಗೆ ಕಾರಣ ಇವಳು,

ನೋಡಿ ಸರ್ವರಿಗೆ ಅಭಯ ನೀಡಲು ಬಂದಳು,

ವ್ಯಾಘ್ರವಾಹಿನಿ ಅಷ್ಟಭುಜಾದೇವಿ ಬಂದಳು,

ನೋಡಿ ಬಂದಳು....


ಜಯ ಜಯ ವ್ಯಾಘ್ರವಾಹಿನಿ,

ಜಯ ಜಯ ಅಷ್ಟಭುಜಾದೇವಿ,

ಓಂ ಶ್ರೀ ದೇವೀ ಕೂಷ್ಮಾಂಡೈ ನಮಃ!!



byಹರೀಶ್ ಶೆಟ್ಟಿ, ಶಿರ್ವ

Wednesday, September 28, 2022

ದೇವಿ ಚಂದ್ರಘಂಟ



ಚಂಡಿಕಾ ನೀನು, 
ರಣಚಂಡಿ ನೀನು,
ದುರ್ಗೆಯ ಮೂರನೇ ಅವತಾರವೇ ನೀನು,
ಮಸ್ತಕದಲ್ಲಿ ಅರ್ಧಚಂದ್ರ ಧರಿಸಿದವಳು ದೇವಿ ಚಂದ್ರಘಂಟ ನೀನು.....

ಚಿನ್ನದ ಮೈಬಣ್ಣ,
ದಶ ಕೈಗಳು ನಿನ್ನ,
ಎಲ್ಲಾ ಕೈಗಳಲ್ಲೂ ಶಸ್ತ್ರ ನಿನ್ನ,
ದುಷ್ಟ ಶಕ್ತಿಗಳ ಸಂಹಾರಕ್ಕೆ ಸದಾ ಸಿದ್ಧವಾಗಿರುವ ಸಿಂಹವಾಹಿನಿ ನೀನು,
ಚಂಡಿಕಾ ನೀನು.....

ಕರುಣಾಳು ನೀನು,
ಉಪಕಾರಿ ನೀನು,
ಸದಾ ತೆರೆದೇ ಇರುವುದು ನಿನ್ನ ಮೂರನೇ ಕಣ್ಣು,
ಸಕಲ ಜೀವಿಗಳಿಗೆ ಸುಖ ಸಂಪತ್ತು ಸಮೃದ್ಧಿ ನೀಡುವ ಆದಿಶಕ್ತಿ ನೀನು,
ಚಂಡಿಕಾ ನೀನು.....

ಓಂ ಶ್ರೀ ದೇವಿ ಚಂಡಿಕಾ ನಮಃ,
ಓಂ ಶ್ರೀ ದೇವಿ ರಣಚಂಡಿ ನಮಃ,
ಓಂ ಶ್ರೀ ದೇವಿ ಚಂದ್ರಘಂಟಾಯೈ ನಮಃ॥

by ಹರೀಶ್ ಶೆಟ್ಟಿ, ಶಿರ್ವ 

Tuesday, September 27, 2022

ಅಮ್ಮ ಬ್ರಹ್ಮಚಾರಿಣಿ

 


ಕಂಡೆ ಕಂಡೆ ನಾ ಕಂಡೆ, 

ಅದ್ಭುತ ದೃಶ್ಯವನು ಕಂಡೆ,

ಅಮ್ಮ ಬ್ರಹ್ಮಚಾರಿಣಿಯ ಸುಂದರ ರೂಪವನು ಕಂಡೆ,


ಎಂಥ ಆಹ್ಲಾದಕರ ನೋಟಾ,

ಶಾಂತಿಯ ಸ್ವರೂಪ,

ಅಮ್ಮ ಬ್ರಹ್ಮಚಾರಿಣಿ ನಿನಗೆ ನನ್ನ ವಂದನೆ,

ಕಂಡೆ ಕಂಡೆ ನಾ ಕಂಡೆ...


ಒಂದು ಕೈಯಲ್ಲಿ ಜಪಮಾಲಾ,

ಇನ್ನೊಂದು ಕೈಯಲ್ಲಿ ಕಮಂಡಲ,

ನವದುರ್ಗೆಯ ಎರಡನೇ ರೂಪವಾದ ದೇವಿ ನಿನಗೆ ನಮಸ್ಕಾರ,

ಕಂಡೆ ಕಂಡೆ ನಾ ಕಂಡೆ...


ನಮೋ ನಮೋ ಶ್ರೀ ದೇವಿ,

ನಮೋ ನಮೋ ಶ್ರೀ ಅಮ್ಮ,

ಓಂ ದೇವಿ ಬ್ರಹ್ಮಚಾರಿಣ್ಯೈ ನಮೋ ನಮಃ 


by ಹರೀಶ್ ಶೆಟ್ಟಿ, ಶಿರ್ವ

Monday, September 26, 2022

ನವರಾತ್ರಿಯ ಆಗಮನ




ನವರಾತ್ರಿಯ ಆಗಮನ, 

ಸಂತಸದ ಈ ಕ್ಷಣ, 

ಕಲಶ ಸ್ಥಾಪನೆಯ ಈ ದಿನ, 

ಶೈಲಪುತ್ರಿ ದೇವಿಗೆ ನಮನ, 

ಜಯ ಜಯ ಆದಿಶಕ್ತಿ, 

ಜಯ ಜಯ ವೃಷರುಧ


by ಹರೀಶ್ ಶೆಟ್ಟಿ, ಶಿರ್ವ 


ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

Friday, July 15, 2022

ಹಳೆಯ ಮನೆ



ಹಳೆಯ ಮನೆಯ ಪಾವಿತ್ರವೂ ಕಡಿಮೆಯಾಗದು ಎಂದೂ,

ಮನೆಯಲ್ಲಿ ಇದ್ದಾರೆ ದೈವ ದೇವರು, 


ಎಲ್ಲೆಲ್ಲಿ ಇದ್ದರೇನು, 

ನೆನಪು ಕಾಣೆಯಾಗದು ಎಂದೂ, 

ಊರ ಮಣ್ಣು ಎಳೆಯುವುದು ಹೃದಯ ಮನಸ್ಸು,


ಹಣ ಕಾಸು ಎಷ್ಟಾದರೇನು,

ಮನೆ ಸಂಪತ್ತು ಎಷ್ಟಿದ್ದರೇನು,

ಹುಟ್ಟು ಮನೇಕ್ಕಿಂತ ಬೇರೇನಿಲ್ಲ ಮೇಲು, 


ಹೊಟ್ಟೆ ಪಾಡಿಗಾಗಿ ನೆಲೆಸೆ ಅಲ್ಲಿಲ್ಲಿ, 

ಸಂಸಾರದ ಜವಾಬ್ಧಾರಿ ಎಲ್ಲರಲ್ಲಿ,

ಆದರೆ ನೆಮ್ಮದಿ ಕೇವಲ ಹುಟ್ಟು ಮನೆಯಲ್ಲಿ, 

ಸುಖ ನಿದ್ರೆ ಕೇವಲ ಹಳೆ ಮನೆಯ ಜಗುಲಿಯಲ್ಲಿ,


ಹಳೆ ಮನೆಯ ಎಲ್ಲ ವಸ್ತು,

ಬಾಲ್ಯದ ಸ್ಮೃತಿಯ ಕಟ್ಟು,

ಮರೆಯಲಾಗದು ಎಂದೆಂದೂ,

ನೆನಪಾಗಿ ಹರಿಯುವುದು ಕಣ್ಣೀರು,


ಹಳೆಯ ಮನೆಯ ಪಾವಿತ್ರವೂ ಕಡಿಮೆಯಾಗದು ಎಂದೂ,

ಮನೆಯಲ್ಲಿ ಇದ್ದಾರೆ ದೈವ ದೇವರು, 


by ಹರೀಶ್ ಶೆಟ್ಟಿ, ಶಿರ್ವ

Friday, February 18, 2022

ತಾಯಿ ಮಕ್ಕಳು


Photo courtesy: Google


"ಹೇಗಿದ್ದೀರಿ ದೊಡ್ಡಕ್ಕ?" ಮಂಜಣ್ಣ ದೊಡ್ಡಕ್ಕನ ಮನೆಯೊಳಗೆ ಪ್ರವೇಶ ಮಾಡುತ ಕೇಳಿದರು.

ಒಳಗೆ ನೆಲ ಒರೆಸುತ್ತಿದ್ದ ಸುಮಾರು ೭೭ ವಯಸ್ಸಿಸ್ನ ದೊಡ್ಡಕ್ಕ "ಓ ಮಂಜು, ಬಾ ಬಾ". 

ಮಂಜಣ್ಣ"ಏನಕ್ಕ!! ಈ ವಯಸ್ಸಿನಲ್ಲಿಯೂ ನಿಮಗೆ ಇದೆಲ್ಲ ಕೆಲಸ ಮಾಡಬೇಕಾಗುತ್ತದೆ, ನಿಮಗೆ ಐದು ಮಕ್ಕಳಿದ್ದು ಏನು ಪ್ರಯೋಜನ??". 

ದೊಡ್ಡಕ್ಕ" ಬಿಡು ಮಂಜು, ಅವರೆಲ್ಲಿದರೆ ಇಲ್ಲಿ ಕೆಲಸ ಮಾಡಲಿಕ್ಕೆ, ಇಲ್ಲಿ ಇರುತ್ತಿದ್ದರೆ ನನಗೆ ಕೆಲಸ ಮಾಡಲಿಕ್ಕೆ ಬಿಡುತ್ತಾರಾ" ದೊಡ್ಡಕ್ಕ ಒಂದು ಉದಾಸೀನ ಸ್ವರದಲ್ಲಿ ಹೇಳಿದರು. 

ಮಂಜಣ್ಣ "ಸುಮ್ಮನೆ ಯಾಕೆ ನೀವು ನಿಮ್ಮ ಮಕ್ಕಳ ಪರವಾಗಿ ಮಾತನಾಡುತ್ತಿದ್ದಿರಿ, ನನಗೆ ಎಲ್ಲಾ ತಿಳಿದಿದ್ದ ವಿಷಯ, ಮೊನ್ನೆ ನಮ್ಮೂರಿನ ಉತ್ಸವಕ್ಕೂ ಯಾರೂ ಬರಲಿಲ್ಲ, ಸೀನು ಒಬ್ಬನನ್ನು ಬಿಟ್ಟು ನಿಮ್ಮ ಬೇರೆ ನಾಲ್ಕು ಮಕ್ಕಳು ಊರಿಗೆ ಬರದೆ ಇಂದಿಗೆ ನಾಲ್ಕೈದು ವರುಷ ಆಗಿರಬೇಕು, ಈ ಸಲ ಸೀನು ಸಹ ಬರಲಿಲ್ಲ".


ದೊಡ್ಡಕ್ಕ "ಇಲ್ಲ ಮಂಜು, ಸೀನುಗೆ ನಾನು ಹೇಳಲು ಮರೆತೆ ಉತ್ಸವದ ಬಗ್ಗೆ, ನನಗೆ ಫೋನ್ ಮಾಡಿ ಬೈದ, ಯಾಕೆ ನೀನು ಉತ್ಸವದ ಬಗ್ಗೆ ಹೇಳಲಿಲ್ಲ, ನಾನು ಬರುತ್ತಿದೆಯಲ್ಲವೆಂದು, ನನ್ನದ್ದೇ ತಪ್ಪಾಯಿತು, ಹೇಳಲು ಮರೆತೆ, ಮತ್ತೆ ಉಷಾ, ಲತಾ, ಮೋಹಿನಿ ಅವರಳಿಗೆಲ್ಲ ಅವರವರ ಪರಿವಾರ ಇದ್ದ ಮೇಲೆ ಎಲ್ಲಿ ಅವರಿಗೆ ಸಮಯ ಸಿಗುತ್ತದೆ ಊರಿಗೆಲ್ಲ ಬರಲಿಕ್ಕೆ, ಮತ್ತೆ ದೊಡ್ಡವ ಮಹೇಶನಿಗೆ ಅವನ ಮಕ್ಕಳು ಹಣ ಕೊಟ್ಟರೆ ಬರಬೇಕು, ಇಲ್ಲಾದರೆ ರಿಟೈರ್ಡ್ ಮನುಷ್ಯ ಎಲ್ಲಿಂದ ಹಣದ ವ್ಯವಸ್ಥೆ ಮಾಡಿ ಬರುವುದು, ಜೀವನಪೂರ್ತಿ ಅವನ ಎರಡು ಮಕ್ಕಳಿಗೋಸ್ಕರ ದುಡಿದ, ಈಗ ಪಾಪ ಅವನು ಯಾವುದಕ್ಕೂ ಅವರ ಮುಖ ನೋಡಬೇಕು".

ಮಂಜಣ್ಣ "ಆದರೆ ಅಕ್ಕ ತಾಯಿಯನ್ನು ನೋಡುವುದು ಅವರ ಕರ್ತವ್ಯ ತಾನೇ, ನೀವೊಬ್ಬರೇ ಇಲ್ಲಿ ಎಷ್ಟು ಕಷ್ಟದಿಂದ ತನ್ನ ದಿನ ಕಳೆಯುತ್ತಿದ್ದಿರಿಯೆಂದು ನಾವೆಲ್ಲಾ ನೋಡುದಿಲ್ಲವೇ, ಸ್ವಲ್ಪಾದರೂ ಜವಾಬ್ದಾರಿ ಬೇಕು ತಾನೇ". 

ದೊಡ್ಡಕ್ಕ "ಬಿಡು ಮಂಜು, ನೀವೆಲ್ಲ ನೆರೆಹೊರೆಯವರು ಇದ್ದಿರಲ್ಲ ನನ್ನ ಸಹಾಯಕ್ಕೆ, ನನಗೇನು ಕಷ್ಟ, ಬೇಕಾದಾಗ ಎಲ್ಲ ಹಣ ಕಳಿಸುತ್ತಾರೆ ಅವರೆಲ್ಲ ನನಗೆ". 

ಮಂಜಣ್ಣ "ಕೇವಲ ಹಣ ಸಾಕಾಗುತ್ತದೆಯಾ ಅಕ್ಕ, ಇನ್ನು ಈ ಮುದಿವಯಸ್ಸಿನಲ್ಲಿ ಹೇಗೆ ಸಾಧ್ಯ ಒಬ್ಬಂಟಿ ಜೀವನ ಕಳೆಯುವುದು, ನಿಮನ್ನು ನೋಡಿ ನನಗೆ ಕಣ್ಣೀರು ಬರುತ್ತದೆ, ಮಕ್ಕಳಾಗಿ ಅವರಿಗೆ ಯಾವುದೇ ಭಾವನೆ ಇಲ್ಲವೇ, ಕೇವಲ ಬಾಯಿಯಿಂದ ಅಮ್ಮ ಅಮ್ಮಯೆಂದು ಹೇಳಿದರೆ ಸಾಲದು, ಜವಾಬ್ದಾರಿ ವಯಿಸುವ ಇಚ್ಛೆ ಇರಬೇಕು".

ದೊಡ್ಡಕ್ಕ "ಫೋನ್ ಮಾಡುತ್ತಿರುತ್ತಾರೆ ಮಂಜು ಅವರು, ಮತ್ತೆ ಕಷ್ಟ ಆದರೆ ಕೆಲಸಕ್ಕೇ ಒಂದು ಜನ ಇಡುಯೆಂದು ಹೇಳುತ್ತಾರೆ, ಆದರೆ ಇಲ್ಲಿ ಕೆಲಸಕ್ಕೆ ಜನ ಎಲ್ಲಿ ಸಿಗುತ್ತಾರೆ, ಬಿಡು ಹೇಗೋ ಇಷ್ಟು ದಿನ ಜೀವನ ಸಾಗಿ ಹೋಯಿತು, ನಮ್ಮ ದೈವ ದೇವರಿದ್ದಾರೆ ನನ್ನನ್ನು ರಕ್ಷಿಸಲು".

ಮಂಜಣ್ಣ "ಹಾಗೆಲ್ಲ ಹೇಳಿದರೆ ಹೇಗೆ ಅಕ್ಕ, ಭಾವ ತೀರಿ ಹೋದ ನಂತರ ಎಷ್ಟು ಕಷ್ಟಪಟ್ಟು ನೀವು ಮಕ್ಕಳನ್ನು ಬೆಳೆಸಿದ್ದೀರಿ ಎಂದು ನನಗೆ ತಿಳಿದಿಲ್ಲವೆ, ಈಗ ನಿಮಗೆ ಅಗತ್ಯ ಇದ್ದಾಗ ಅವರು ಹೀಗೆ ಮಾಡಬಹುದೇ? ಈಗ ದೇವರ ದಯೆಯಿಂದ ಕೈಕಾಲು ಸರಿ ಇದೆ, ನಾಳೆ ಒಂದು ವೇಳೆ ಕೈಕಾಲು ಬಿದ್ದರೂ ಸಹ ಕೆಲಸಕ್ಕೆ ಜನ ನೋಡುಯೆಂದು ಹೇಳುತ್ತಾರಾ? ಉಪದೇಶ, ಸಲಹೆಗಳು ಎಲ್ಲ ಬೇಡ ಹೇಳಿ ಅವರಿಗೆ" ಎಂದು ಕೋಪದಿಂದ ಮಂಜಣ್ಣ ನುಡಿದರು.

ಮಂಜು ಹೇಳುವುದೆಲ್ಲ ಸರಿ ಎಂದು ತಿಳಿದರೂ ದೊಡ್ಡಕ್ಕ "ಬಿಡು ಮಂಜು, ನನ್ನದು ಇದ್ದದೆ, ನೀನೇಳು ಕೆಲಸ ಆಯ್ತಾ ನಿನ್ನ?".

ಮಂಜಣ್ಣ "ಇಲ್ಲ ಅಕ್ಕ ಎಲ್ಲಿ, ತೆಂಗಿನ ಕಾಯಿ ಕೊಯ್ಯಲು ಬರುತ್ತೇನೆ ಎಂದು ತೋಮ ಹೇಳಿದ್ದ, ಬೇವರ್ಸಿ ರಲೇ ಇಲ್ಲ, ಫೋನ್ ಮಾಡಿದ್ದಾರೆ ಫೋನ್ ಎತ್ತುದಿಲ್ಲ, ಇವರಿಗೆಲ್ಲ ಚರ್ಬಿ ಏರಿದೆ, ಕೇಳಿದಷ್ಟು ಹಣ ಸಿಗುತ್ತದೆಯಲ್ಲ". 

ದೊಡ್ಡಕ್ಕ "ಹೌದು ಮಂಜು, ನಮ್ಮ ಮರದಿಂದ ಸಹ ಕೊಯ್ಯಲಿಕ್ಕಿತ್ತು, ಉಷಾ ಮೊನ್ನೆ ಫೋನ್ ಮಾಡಿ ಕೇಳುತ್ತಿದ್ದಳು 'ಏನು ಈ ಸಲ ನೀನು ತೆಂಗಿನಕಾಯಿ ಕಳಿಸಲೇ ಇಲ್ಲ ಎಂದು', ಬಸ್ ದವನಿಗೆ ಹೇಳಿ ಇಟ್ಟಿದಾಳೆ ಅಂತೇ, ಆದರೆ ಈ ತೋಮನ ಭರವಸೆಯಲ್ಲಿ ಇದ್ದರಾಯಿತು". 

ಮಂಜಣ್ಣ "ಉಷಾಳಿಗೆ ಹೇಳಿ ಅಕ್ಕ, ಮುಂಬೈಯಲ್ಲಿ ತೆಂಗಿನಕಾಯಿ ಸಿಗುತ್ತದೆಯೆಂದು, ನಾಚಿಗೆ ಇಲ್ಲ ಇವರಿಗೆ, ನಿಮಗೆ ಕೋಪ ಬರಬಹುದು ಅಕ್ಕ, ಆದರೆ ಇವರಿಗೆ ಬಂದಾಗಾಯೆಲ್ಲ ಕೇವಲ ಉಪದೇಶ ಕೊಟ್ಟು, ಇಲ್ಲಿಂದ ಸಾಮಾನು ಹೊಯ್ಯುವುದಲ್ಲದೆ, ನಿಮ್ಮ ಸ್ವಲ್ಪ ಸಹ ಚಿಂತೆ ಇಲ್ಲ, ನಿಮ್ಮ ಮಕ್ಕಳಲ್ಲಿ ನಿಮ್ಮ ಒಂದು ಗುಣ ಸಹ ಇಲ್ಲ, ಬರುತ್ತೇನೆ ನಾನು" ಎಂದು ಹೇಳಿ ಕೋಪದಿಂದ ಹೊರಟರು.

ಮಂಜಣ್ಣ ಹೋದ ಮೇಲೆ ದೊಡ್ಡಕ್ಕ ಒಂದು ನಿಟ್ಟುಸಿರು ಬಿಡುತ್ತಾ ಪುನಃ ತನ್ನ ಕೆಲಸ ಮುಂದುವರಿಸಿ ಯೋಚಿಸಲಾರಂಭಿಸಿದರು "ಈ ಮಂಜುನಿಗೆ ಹೇಗೆ ಹೇಳಲಿ ಈಗೀಗ ಮಕ್ಕಳ ಫೋನ್ ಬರುವುದು ಸಹ ಕಡಿಮೆ ಆಗಿದೆಯೆಂದು, ಹಣ ಬರದೆ ವರುಷ ಆಯಿತೆಂದು, ಯಾವಾಗಲೊಮ್ಮೆ ಸೀನು ಕಳಿಸಿದ್ದಾರೆ ಕಳಿಸುತ್ತಾನೆ ಅಷ್ಠೆಯೆಂದು, ಫೋನ್ ಸಹ ಯಾವಾಗಲೊಮ್ಮೆ ಮಾಡಿದರೆ ಅವನೇ ಮಾಡುವುದೆಂದು, ಗೊತ್ತು ಬದುಕು ಈಗ ಕಷ್ಟವಾಗುತ್ತಿದೆ ನನ್ನ, ಆದರೆ ಏನು ಮಾಡುವುದು, ಯಾರಿಗೆ ಹೇಳುವುದು ನನ್ನನ್ನು ನೋಡಿಯೆಂದು, ಯಾವಾಗಲೊಮ್ಮೆ ಜ್ವರ ಬಂದರೆ ಮದ್ದು ತರಲು ನೆರೆಹೊರೆಯವರ ಮುಖ ನೋಡಬೇಕಾಗುತ್ತದೆ, ಮಕ್ಕಳಿಗೆ ಫೋನ್ ಮಾಡಿ ತಿಳಿಸಿದರೆ ಸಿಗುವುದು ಕೇವಲ ಸಲಹೆ ಹಾಗೂ ತಾತ್ಕಾಲಿಕವಾಗಿ ಸ್ವಲ್ಪ ಹಣ, ಅವರವರ ಕರ್ತವ್ಯದ ಅರಿವು ಅವರಿಗೆ ಯಾಕೆ ಇಲ್ಲ, ಇರಬೇಕಲ್ಲ? ಮಕ್ಕಳ ಮದುವೆ ಮಾಡಿದಾಗ, ಅವರ ಉನ್ನತಿ ನೋಡುತ್ತಿದ್ದಾಗ, ಅವರ ಸಂಸಾರ ಬೆಳೆಯುತ್ತಿದ್ದಾಗ ಪ್ರತಿ ಹಂತದಲ್ಲೂ ಅನಿಸುತಿತ್ತು ಈಗ ನನ್ನ ಜೀವನದ ಕಷ್ಟ ದೂರವಾಗುತ್ತದೆ ಎಂದು, ಆದರೆ ದೇವರು ಆ ದಿನ ಕರುಣಿಸಲೇ ಇಲ್ಲವಲ್ಲ" ಯೋಚಿಸುತ್ತಿರುವ ದೊಡ್ಡಕ್ಕನ ಕಣ್ಣಿನಿಂದ ಧಾರಾಳಾವಾಗಿ ಕಣ್ಣೀರು ಹರಿಯುತ್ತಿತ್ತು.

ಹೊರಗೆ ಕೊಟ್ಟಿಗೆಯಿಂದ ಬಹುಶ ಹಸಿವಿಂದ ಹಸು "ಅಂಬಾ ಅಂಬಾ" ಎಂದು ಕೂಗುತಿತ್ತು, ಆ ಹಸುವಿನ ಸ್ವರ ಕೇಳಿ ಯೋಚನೆಯಿಂದ ಹೊರ ಬಂದರು ತಾಯಿ ಎಂಬ ಮಹಾನ್  ಉದಾರ ಹೃದಯದ ಜೀವಿ ದೊಡ್ಡಕ್ಕ, ನಿಧಾನವಾಗಿ ಅವರು ಹಸುವಿನ ಕೊಟ್ಟಿಗೆಯ ಕಡೆ  ಹೆಜ್ಜೆ ಇಟ್ಟರು. 


by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ