Sunday, September 14, 2014

ಶೂನ್ಯತೆ

ಪರಿಸ್ಥಿತಿ ಸ್ವಲ್ಪ
ಸುಧಾರಿಸಿದೆ ಅಷ್ಟೇ
ಆ ಮಟ್ಟಿಗೆ
ಬರಲಿಲ್ಲ ಇನ್ನು ಈ ಬದುಕು

ಮನೆ ಮಠ
ಹೊನ್ನು ಸಿಂಗಾರ
ಮೇಲಿಂದ ಅಚ್ಚುಕಟ್ಟು
ಒಳಗೆ ಗೋಡೆ ಬಿರುಕು

ಸಭೆ ಸತ್ಕಾರ
ಕರೆ ಉಡುಗೊರೆ
ಮೃಷ್ಟಾನ್ನ ಭೋಜನ
ಹೃದಯದಲಿ ಹುಡುಕು

ದಾನ ಬಕುತಿ
ತನ್ನದೇ ಮುಖಸ್ತುತಿ
ಸುಂದರ ಮೇಲ್ನೋಟ
ತ್ಯಜಿಸಲಾಗದ ಮನಸ್ಸ ಕೊಳಕು

ಜನಜಂಗುಳಿ ಸುತ್ತಮುತ್ತ
ಅನುಭೂತಿ ಏಕಾಂತ
ಗೋಚರಿಸದ ಶೂನ್ಯತೆ
ದಿನನಿತ್ಯ ಅಭಾವದ ಶೋಕು

by ಹರೀಶ್ ಶೆಟ್ಟಿ,ಶಿರ್ವ 

Saturday, September 13, 2014

ಈದ್ ಜಾತ್ರೆ ಭಾಗ - ೪

ಈದ್ ಜಾತ್ರೆ
ಭಾಗ - ೪


ನಮಾಜ್ ಮುಗಿಯಿತು, ಜನರು ಪರಸ್ಪರರನ್ನು ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು, ಬಳಿಕ ಮಿಠಾಯಿ ಹಾಗು ಆಟಿಕೆಯ ಅಂಗಡಿಗಳನ್ನು ಜನರು ಮುತ್ತಿಕೊಂಡರು, ಗ್ರಾಮೀಣರ ಈ ತಂಡ ಈ ವಿಷಯದಲ್ಲಿ ಬಾಲಕರಿಂದ ಕಡಿಮೆಯೇನು ಉತ್ಸಾಹದಲ್ಲಿ ಇರಲಿಲ್ಲ, ಇದು ನೋಡಿ ತಿರುಗು ತೊಟ್ಚಿಲ, ಒಂದು ಪೈಸೆ ಕೊಟ್ಟು ಕುಳಿತುಕೊಳ್ಳಿ, ಕೆಲವೊಮ್ಮೆ ಆಕಾಶದಲ್ಲಿ ತೇಲಿದಂತೆ ಬಾಸವಾಗುವುದು, ಕೆಲವೊಮ್ಮೆ ಭೂಮಿಗೆ ಬಿದ್ದಂತೆ ಬಾಸವಾಗುವುದು. ಇದು ತಿರುಗುವ ಚಕ್ರಮರದ ಆನೆ, ಕುದುರೆ, ಒಂಟೆ ಯಾವುದರಲ್ಲೂ ಬೇಕಾದರೆ ಒಂದು ಪೈಸೆ ಕೊಟ್ಟು ಸವಾರಿ ಮಾಡಿ, ಮಹಮೂದ್, ಮೋಹಸಿನ, ನೂರೆ ಮತ್ತು ಸಮ್ಮಿ ಕುದುರೆ ಮತ್ತು ಒಂಟೆಯ ಮೇಲೆ ಕುಳಿತು ಕೊಳ್ಳುತ್ತಾರೆ, ಹಮೀದ್ ದೂರ ನಿಂತು ನೋಡುತ್ತಿದ್ದಾನೆ, ಅವನ ಹತ್ತಿರ ಕೇವಲ ಮೂರು ಪೈಸೆ ಇದೆ, ಸ್ವಲ್ಪವೇ ಕ್ಷಣ ಆ ತಿರುಗುವ ಚಕ್ರದ ಮೇಲೆ ಕುಳಿತು ಸುತ್ತು ಬರಲು ಬಳಿ ಇದ್ದ ಹಣದ ಮೂರರ ಒಂದು ಪಾಲು ಕೊಡಲು ಅವನಿಗೆ ಇಷ್ಟವಿರಲಿಲ್ಲ.

ಎಲ್ಲರು ತಿರುಗುವ ಚಕ್ರದಿಂದ ಕೆಳಗೆ ಇಳಿದರು, ಈಗ ಆಟಿಕೆ ಖರೀದಿ ಮಾಡುವ, ಎಲ್ಲರು ಆಟಿಕೆ ಅಂಗಡಿಯತ್ತ ನಡೆದರು, ಬಗೆ ಬಗೆಯ ಆಟಿಕೆಗಳು, ಸಿಪಾಯಿ, ಸಾಧು, ಮಡಿವಾಳ, ನೀರು ವಾಹಕ, ವಕೀಲ, ಗಿಳಿ, ಬೆಕ್ಕು ವಾಹ! ನಾಯಿ ಸುಂದರ ಸುಂದರ ಆಟಿಕೆಗಳು, ಮಹಮೂದ್ ಸಿಪಾಯಿ ತೆಗೆದುಕೊಂಡ, ಖಾಕಿ ಗಣವೇಶ ಹಾಗು ಕೆಂಪು ಮುಂಡಾಸು, ಹೀಗೆ ಅನಿಸುತ್ತದೆ ಈಗಲೇ ಕವಾಯತು ಮಾಡುತ್ತಾ ಬರುತ್ತಿದ್ದಂತೆ,  ಮೋಹಸಿನನಿಗೆ ನೀರು ವಾಹಕ ಇಷ್ಟವಾಯಿತು, ಸೊಂಟ ಬಾಗಿ ಭುಜದ ಮೇಲೆ ಮಡಕೆ ಇಟ್ಟು ಒಂದು ಕೈಯಿಂದ ಅದನ್ನು ಹಿಡಿದು ಬರುತ್ತಿದ್ದಂತೆ, ಎಷ್ಟು ಸಂತೋಷದಲ್ಲಿದ್ದಾನೆ, ಬಹುಶಃ ಯಾವುದೇ ಗೀತೆ ಹಾಡುತ್ತಿದ್ದಂತೆ, ನೂರೆನಿಗೆ ವಕೀಲ ಇಷ್ಟವಾಯಿತು, ಎಷ್ಟು ಜ್ಞಾನ ಬೆಳಗುತ್ತಿದೆ ಮುಖದಲ್ಲಿ, ಕಪ್ಪು ಕೋಟ್, ಬಿಳಿ ಪ್ಯಾಂಟ್, ಪ್ಯಾಂಟಿನ ಜೇಬಲ್ಲಿ ಒಂದು ಗಡಿಯಾರ, ಸುವರ್ಣ ಚೈನ್, ಒಂದು ಕೈಯಲ್ಲಿ ಕಾನೂನಿನ ಪುಸ್ತಕ ಹಿಡಿದು, ಹೀಗೆ ಅನಿಸುತ್ತದೆ ಈಗ ತಾನೇ ಕೋರ್ಟಲ್ಲಿ ವಾದ ಮಾಡಿ ಬರುತ್ತಿದ್ದಂತೆ, ಇದೆಲ್ಲ ಎರಡು ಎರಡು ಪೈಸೆಯ ಆಟಿಕೆಗಳು, ಹಮೀದನ ಹತ್ತಿರ ಒಟ್ಟಿಗೆ ಕೇವಲ ಮೂರು ಪೈಸೆ ಇದೆ, ಇಷ್ಟು ಬೆಲೆಬಾಳುವ ಆಟಿಕೆ ಹೇಗಂತ ತೆಗೆದುಕೊಳ್ಳಲಿ? ಆಟಿಕೆ ಕೈಯಿಂದ ಬಿದ್ದರೆ ಚೂರು ಚೂರಾಗುವುದು, ಸ್ವಲ್ಪ ನೀರು ಬಿದ್ದರೆ ಅದರ ಎಲ್ಲ ರಂಗು ಹೋಗುವುದು, ಇಂತಹ ಆಟಿಕೆಯ ಅವನೇನು ಮಾಡಲಿ, ಏನು ಪ್ರಯೋಜನ?

ಮೋಹಸಿನ್ ಹೇಳುತ್ತಾನೆ "ನನ್ನ ನೀರು ವಾಹಕ ದಿನಾಲೂ ಬಂದು ನೀರು ಕೊಡುತ್ತಾನೆ ಹಗಲು ಸಂಜೆಗೆ."

ಮಹಮೂದ್ "ನನ್ನ ಸಿಪಾಯಿ ಮನೆಯ ಕಾವಲು ಇಡುವನು, ಯಾರು ಕಳ್ಳ ಬಂದರೆ ಕೂಡಲೇ ಬಂದೂಕಿನಿಂದ ಫಾಯರ್ ಮಾಡುವನು."

ನೂರೆ "ನನ್ನ ವಕೀಲ ತುಂಬಾ ಕೇಸ್ ವಹಿಸಿ ತುಂಬಾ ಕಾಸು ಗಳಿಸುವನು."

ಸಮ್ಮಿ "ನನ್ನ ಮಡಿವಾಳ ದಿನ ನನ್ನ ಬಟ್ಟೆ ಒಗೆಯಲು ಬರುವನು."

ಹಮೀದ್ ಆಟಿಕೆಗಳನ್ನು ನಿಂದಿಸುತ್ತಾನೆ "ಮಣ್ಣಿನ ತಾನೇ, ಬಿದ್ದರೆ ಚೂರು ಚೂರಾಗುವುದು" ಆದರೂ ತುಂಬಾ ಆಸೆಯಿಂದ ಆ ಆಟಿಕೆಗಳನ್ನು ನೋಡುತ್ತಿದ್ದ ಹಾಗು ಅದನ್ನು ಒಂದು ಸಲ ಕೈಯಿಂದ ಮುಟ್ಟಿ ಸ್ವಲ್ಪ ಸಮಯ ಹಿಡಿಯಲು ಬಯಸುತ್ತಿದ್ದ, ಅವನ ಕೈ ಸ್ವಯಂಪ್ರೇರಿತವಾಗಿ ಮುಂದೆ ಸಾಗಿತು, ಆದರೆ ಮಕ್ಕಳು ಅಷ್ಟು ಉದಾರ ಇರುವುದಿಲ್ಲ, ವಿಶೇಷವಾಗಿ ಅವರ ಹೊಸ ಆಸಕ್ತಿಯ ಸಂಧರ್ಭದಲ್ಲಿ, ಹಮೀದನ ಆಸೆ ಆಸೆಯಾಗಿಯೇ ಉಳಿಯಿತು.

ಆಟಿಕೆಯ ನಂತರ ಮಿಠಾಯಿ ಅಂಗಡಿ ಬರುತ್ತದೆ, ಯಾರು ಗುಲಾಬ್ ಜಾಮೂನ್ ತೆಗೆದುಕೊಂಡರು, ಯಾರು ಹಲ್ವಾ, ಯಾರು ಪೇಡ ಎಲ್ಲರು ಮೋಜಿನಿಂದ ತಿನ್ನುತ್ತಿದ್ದಾರೆ, ಹಮೀದ್ ಪಾಪ ಈ ತಂಡದಿಂದ ಪ್ರತ್ಯೇಕ ಇದ್ದಾನೆ, ನಿರ್ಭಾಗ್ಯ ಅವನ ಹತ್ತಿರ ಕೇವಲ ಮೂರು ಪೈಸೆ ಇರುವುದು, ಯಾಕೆ ಏನಾದರು ಖರೀದಿ ಮಾಡಿ ತಿನ್ನುವುದಿಲ್ಲ? ಆಸೆಯಿಂದ ಎಲ್ಲರ ಕಡೆ ನೋಡುತ್ತಾನೆ. 

ಮೋಹಸಿನ್ "ಹಮೀದ್ ತೆಗೋ ಪೇಡ, ಎಷ್ಟು  ಸುಗಂಧಿತ."

ಹಮೀದನಿಗೆ ಸಂಶಯ ಮೂಡಿತು, ಇದು ಕ್ರೂರ ವಿನೋದ ಅಷ್ಟೇ, ಮೋಹಸಿನ್ ಅಷ್ಟೇನೂ ಉದಾರ ಅಲ್ಲ, ಆದರೆ ಇದನ್ನು ತಿಳಿದು ಸಹ ಹಮೀದ್ ಅವನ ಹತ್ತಿರ ಹೋಗುತ್ತಾನೆ, ಮೋಹಸಿನ್ ತಟ್ಟೆಯಿಂದ ಒಂದು ಪೇಡ ತೆಗೆದು ಹಮೀದನತ್ತ ತನ್ನ ಕೈ ಮುಂದೆ ಸಾಗಿಸುತ್ತಾನೆಹಮೀದ್ ಕೈ ಚಾಚುತ್ತಾನೆ, ಮೋಹಸಿನ್ ತಟ್ಟನೆ ಪೇಡ ತೆಗೆದು ತನ್ನ ಬಾಯಿಯಲ್ಲಿ ಇಡುತ್ತಾನೆ, ಮಹಮೂದ್, ನೂರೆ , ಸಮ್ಮಿ ಎಲ್ಲರೂ ಚಪ್ಪಾಳೆ ತಟ್ಟಿ ತುಂಬಾ ನಗುತ್ತಾರೆ, ಹಮೀದ್ ನಾಚಿಕೆಯಿಂದ ದೂರ ಸರಿಯುತ್ತಾನೆ.

ಮೋಹಸಿನ್ "ಆಗಲಿ, ಈ ಸಲ ಖಂಡಿತ ಕೊಡುತ್ತೇನೆ ಹಮೀದ್, ಅಲ್ಲಾ ಆಣೆ, ಬಾ."

ಹಮೀದ್ "ನೀನೆ ಇಟ್ಟಿರು, ನನ್ನ ಹತ್ತಿರ ಏನು ಹಣ ಇಲ್ಲವೇ."

ಸಮ್ಮಿ "ಮೂರು ಪೈಸೆ ತಾನೇ ಇರುವುದು, ಮೂರು ಪೈಸೆಯಿಂದ ಏನೇನನ್ನು ತೆಗೆದುಕೊಳ್ಳುವೆ?"

ಮಹಮೂದ್ "ನನ್ನಿಂದ ಗುಲಾಬ್ ಜಾಮೂನ್ ತೆಗೆದುಕೊಂಡು ಹೋಗು ಹಮೀದ್, ಮೋಹಸಿನ್ ತುಂಬಾ ದುಷ್ಟನಾಗಿದ್ದಾನೆ."

ಹಮೀದ್ "ಮಿಠಾಯಿ ಅಷ್ಟೇನೂ ಮಹಾ, ಪುಸ್ತಕದಲ್ಲಿ ಇದರ ಬಗ್ಗೆ ಎಷ್ಟು ಕೆಟ್ಟ ಬರೆದಿದ್ದಾರೆ."

ಮೋಹಸಿನ್ "ಆದರೆ ಮನಸ್ಸಲ್ಲಿ ನೀನು ಹೇಳುತ್ತಿರಬಹುದು, ಕೊಟ್ಟರೆ ತಿಂದು ಬಿಡುವೆ ಎಂದು, ತನ್ನ ಪೈಸೆ ಯಾಕೆ ತೆಗೆಯುವುದಿಲ್ಲ?"

ಮಹಮೂದ್ "ಎಲ್ಲ ತಿಳಿದಿದ್ದೇನೆ ಇವನ ಕುತಂತ್ರ, ನಮ್ಮ ಎಲ್ಲ ಹಣ ಮುಗಿದಾಗ, ನಮಗೆ ತೋರಿಸಿ ತೋರಿಸಿ ತಿನ್ನುವನು."

ಮಿಠಾಯಿ ಅಂಗಡಿಯ ನಂತರ ಕಬ್ಬಿಣದ ಅಂಗಡಿ, ನಕಲಿ ಧಾತುವಿನ ಒಡವೆಗಳ ಅಂಗಡಿ, ಮಕ್ಕಳಿಗೆ ಇಲ್ಲಿ ಏನು ಆಕರ್ಷಣೆ ಇರಲಿಲ್ಲ, ಅವರೆಲ್ಲರು ಮುಂದೆ ಸಾಗಿದರು, ಹಮೀದ್ ಕಬ್ಬಿಣದ ವಸ್ತುವಿನ ಅಂಗಡಿಯಲ್ಲಿ ನಿಲ್ಲುತ್ತಾನೆ. ಅಲ್ಲಿ ಕಬ್ಬಿಣದ ಅನೇಕ ರೀತಿಯ ಚಿಮ್ಮಟಗಳನ್ನು ಇದ್ದವು, ಅವನಿಗೆ ಅಜ್ಜಿಯ ಬಳಿ ಚಿಮ್ಮಟ ಇಲ್ಲ ಎಂಬುವುದು ಜ್ಞಾಪಕ ಆಯಿತು, ತವೆಯ ಮೇಲಿಂದ ಚಪಾತಿ ತೆಗೆಯುವಾಗ ಅವಳ ಕೈ ಸುಟ್ಟು ಹೋಗುತ್ತದೆ, ಈ ಚಿಮ್ಮಟ ತೆಗೆದುಕೊಂಡು ಹೋದರೆ ಅಜ್ಜಿಗೆ ಎಷ್ಟು ಸಂತೋಷವಾಗಬಹುದು, ಮತ್ತೆ ಅವಳ ಬೆರಳುಗಳು  ಯಾವಗಲು ಸುಡುವುದಿಲ್ಲ, ಮನೆಯಲ್ಲಿ ಒಂದು ಕೆಲಸದ ವಸ್ತು ಬರುತ್ತದೆ, ಆಟಿಕೆಯ ಏನು ಪ್ರಯೋಜನ? ವ್ಯರ್ಥ ಹಣ ಹಾಳಾಗುತ್ತದೆ, ಸ್ವಲ್ಪ ಸಮಯದ ಮೋಹ, ನಂತರ ಆ ಆಟಿಕೆಯನ್ನು ಯಾರು ಕಣ್ಣು ಎತ್ತಿ ಸಹ ನೋಡುವುದಿಲ್ಲ, ಮನೆಗೆ ತಲುಪುವ ತನಕ ಅದು ಮುರಿದು ಹೋಗುವುದು. ಚಿಮ್ಮಟ ಎಷ್ಟು ಕೆಲಸದ ವಸ್ತು, ಚಪಾತಿ ತವೆಯಿಂದ ಕೆಳಗಿಳಿಸಿ, ಒಲೆಯಲ್ಲಿ ಬಿಸಿ ಮಾಡಿ, ಯಾರಾದರು ಗೆಂಡ ಕೇಳಲು ಬಂದರೆ, ತಟ್ಟನೆ ಅದರಿಂದ ತೆಗೆದು ಕೊಡಿ, ಅಮ್ಮನಿಗೆ ಪಾಪ ಎಲ್ಲಿ ಅಷ್ಟು ಸಮಯ ಮಾರುಕಟ್ಟೆ ಬರಲು ಮತ್ತು ಹಣ ಸಹ ಎಲ್ಲಿ ಇರುತ್ತದೆ, ದಿನನಿತ್ಯ ಅವಳ ಕೈ ಸುಟ್ಟು ಹೋಗುತ್ತದೆ.

ಹಮೀದನ ಸಂಗಡಿಗರು ಮುಂದೆ ಹೋಗಿ ಬಿಟ್ಟಿದ್ದಾರೆ, ಎಲ್ಲರು ಜ್ಯೂಸು ಅಂಗಡಿಯಲ್ಲಿ ನಿಂತು ಜ್ಯೂಸು ಕುಡಿಯುತ್ತಿದ್ದಾರೆ, ನೋಡಿ ಎಷ್ಟು ದುಷ್ಟರು, ಅಷ್ಟು ಮಿಠಾಯಿ ತೆಗೊಂಡರು, ಆದರೆ ಒಂದು ತುಂಡು ಸಹ ನನಗೆ ಕೊಡಲಿಲ್ಲ, ಮೇಲಿಂದ ಹೇಳುತ್ತಾರೆ ನಮ್ಮೊಟ್ಟಿಗೆ ಆಡು ಎಂದು, ನನ್ನ ಈ ಕೆಲಸ ಮಾಡು, ಆ ಕೆಲಸ ಮಾಡು, ಈಗ ಯಾರಾದರು ಯಾವುದೇ ಕೆಲಸ ಮಾಡಲು ಹೇಳಿದರೆ, ನಂತರ ನೋಡುವೆ, ತಿನ್ನಲಿ ಮಿಠಾಯಿ, ಬಾಯಿ ಕೊಳೆಯುತ್ತದೆ, ಬೊಕ್ಕೆಗಳಾಗುತ್ತದೆ, ತನ್ನಂತಾನೆ ನಾಲಿಗೆ ರುಚಿಮಯ ಆಗುತ್ತದೆ, ನಂತರ ಮನೆಯಲ್ಲಿ ಕಳ್ಳತನ ಮಾಡುವರು, ಪೆಟ್ಟು ತಿನ್ನುವರು. ಪುಸ್ತಕದಲ್ಲೇನು ಸುಳ್ಳು ಬರೆದಿದ್ದಾರ, ನನ್ನ ನಾಲಿಗೆ ಯಾಕೆ ಹಾಳಾಗುತ್ತದೆ, ಅಮ್ಮ ನಾನು ಚಿಮ್ಮಟ ತಂದುದನ್ನು ನೋಡಿ ಓಡಿ ಬಂದು ನನ್ನ ಕೈಯಿಂದ ತೆಗೆದು ಕೊಳ್ಳುವಳು ಮತ್ತೆ ಹೇಳುವಳು "ನನ್ನ ಮುದ್ದು ಮಗ ನನಗೋಸ್ಕರ ಚಿಮ್ಮಟ ತಂದಿದ್ದಾನೆ."
(ಮುಂದುವರಿಯುವುದು)

 ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Thursday, September 11, 2014

ಈದ್ ಜಾತ್ರೆ ಭಾಗ - ೩


ಭಾಗ - ೩


ಇದು ಪೋಲಿಸ್ ಲೈನ್, ಇಲ್ಲಿ ಎಲ್ಲ ಪೊಲೀಸರು ಕವಾಯತು ಮಾಡುತ್ತಾರೆ, ರೈಟ್ ಟರ್ನ್, ಫಾಯರ್ ಫೋ ಫೋ, ರಾತ್ರಿಗೆ ತಿರುಗಿ ತಿರುಗಿ ಕಾವಲು ನೀಡುತ್ತಾರೆ, ಇಲ್ಲಾದರೆ ಕಳ್ಳತನ ಆದರೆ, ಮೋಹಸಿನ್ ವಿರೋಧಿಸಿದ "ಏನು, ಈ ಪೊಲೀಸರು ಕಾವಲು ನೀಡುತ್ತಾರ? ಹಾಗಾದರೆ ನಿನಗೆ ತುಂಬಾ ಗೊತ್ತಿದೆ, ಮೀಯಾ ಇವರು ಸ್ವತಃ ಕಳ್ಳತನ ಮಾಡುತ್ತಾರೆ, ನಗರದಲ್ಲಿ ಎಷ್ಟು ಕಳ್ಳ, ದರೋಡೆಕೋರರು ಇದ್ದಾರಲ್ಲ, ಎಲ್ಲರು ಬೀದಿಗೆ ಬಂದು ಇವರಿಗೆ "ಜಾಗರೂಕರಾಗಿರಿ, ನಮ್ಮನ್ನು ನೋಡಿಯೂ ನೋಡದೆ ಹಾಗೆ ಹೋಗುತ್ತಿರಿ" ಎಂದು ಹೇಳುತ್ತಾರೆ, ಅವಾಗ ತಾನೇ ಇವರ ಹತ್ತಿರ ಅಷ್ಟು ಹಣ ಬರುತ್ತದೆ. ನನ್ನ ಮಾವ ಒಂದು ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಇದ್ದಾರೆ, ೧೨ ರೂಪಾಯಿ ತಿಂಗಳು ಸಂಬಳ ಬರುತ್ತದೆ, ಆದರೂ ೫೦ ರೂಪಾಯಿ ಮನೆಗೆ ಕಳಿಸುತ್ತಾರೆ, ಅಲ್ಲಾ ಆಣೆ! ಒಂದು ಸಲ ನಾನು ಕೇಳಿದ್ದೆ "ಮಾವ, ನೀವು ಇಷ್ಟೆಲ್ಲಾ ಹಣ ಎಲ್ಲಿಂದ ಪಡೆಯುತ್ತೀರಿ?”  ನಗುತ್ತಲೇ ಉತ್ತರಿಸಿದರು "ಮಗ, ಅಲ್ಲಾ ನೀಡುತ್ತಾರೆ", ಮತ್ತೆ ಸ್ವತಃ ಮಣಮಣ ಹೇಳ್ಕೊಂಡರು "ನಾವು ಬಯಸಿದರೆ ಒಂದು ದಿನದಲ್ಲಿ ಲಕ್ಷಗಟ್ಟಲೆ ಸಂಪಾದಿಸಬಹುದು, ಆದರೆ ನಾವು ಅಷ್ಟೇ ತೆಗೆದುಕೊಳ್ಳುತ್ತೇವೆ ಅಂದರೆ ಅಪಕೀರ್ತಿಯೂ ಬರದಂತೆ ಹಾಗು ಕೆಲಸ ಸಹ ಹೋಗದಂತೆ."

ಹಮೀದ್ ಕೇಳಿದ "ಇವರು ಕಳ್ಳತನ ಮಾಡಿಸುತ್ತಾರೆ, ಹಾಗಾದರೆ ಇವರಿಗೆ ಯಾರು ಹಿಡಿಯುವುದಿಲ್ಲವೇ?"

ಮೋಹಸಿನ್ ಅವನ ಮುದ್ದುತನಕ್ಕೆ ದಯೆ ತೋರಿಸಿ ಹೇಳಿದ "ಅಯ್ಯೋ ಹುಚ್ಚ, ಇವರನ್ನು ಯಾರು ಹಿಡಿಯುತ್ತಾರೆ! ಹಿಡಿಯುವವರು ಇವರು ಸ್ವತಃ ತಾನೇ, ಆದರೆ ಅಲ್ಲಾ ಇವರಿಗೆ ತುಂಬಾ ಶಿಕ್ಷೆ ನೀಡುತ್ತಾನೆ, ಕಳ್ಳತನದ ಹಣ ನೀರು ಪಾಲಾಗುತ್ತದೆ, ಅತಿ ಆಸೆ ಗತಿ ಕೆಡಿಸಿತು ಅಂದ ಹಾಗೆ, ಸ್ವಲ್ಪ ದಿನದ ಮುಂಚೆಯೇ ಮಾವನ ಮನೆಗೆ ಬೆಂಕಿ ತಗುಲಿ ಅವರ ಎಲ್ಲ ಒಡವೆ ಮನೆಯಲ್ಲಿರುವ ದವಸ, ಧಾನ್ಯಗಳೆಲ್ಲವೂ ಸುಟ್ಟು ಹೋಯಿತು, ಒಂದು ಪಾತ್ರೆ ಸಹ ಉಳಿಯಲಿಲ್ಲ, ಎಷ್ಟೋ ದಿನ ಮರದ ಅಡಿಯಲ್ಲಿ ಮಲಗಿದರು, ಅಲ್ಲಾ ಆಣೆ, ಮರದ ಅಡಿಯಲ್ಲಿ! ಮತ್ತೆ ಅದೆಲ್ಲಿಂದಲೋ ಒಂದು ನೂರು ರೂಪಾಯಿ ಸಾಲ ಪಡೆದ ನಂತರವೇ ಪಾತ್ರೆ ಎಲ್ಲ ಬಂತು."

ಹಮೀದ್ "ನೂರು ಐವತ್ತರಿಂದ ಹೆಚ್ಚು ಇರುತ್ತದೆಯ?"

ಮೋಹಸಿನ್  "ಎಲ್ಲಿ ಐವತ್ತು ಎಲ್ಲಿ ಒಂದು ನೂರು, ಐವತ್ತು ಅಂದರೆ ಒಂದು ಚೀಲ ಅಷ್ಟೇ, ಆದರೆ ನೂರು ಎರಡು ಚೀಲದಲ್ಲೂ ಬಾರದು."

ಈಗ ಮಸೀದಿ ಹೋಗುವ ಜನಜಂಗುಳಿ ಕಾಣಲಾರಂಭಿಸಿತು. ಒಂದರಿಂದ ಒಂದು ಜನ ಹೊಳಪುಳ್ಳ ವಸ್ತ್ರಗಳನ್ನು ಧರಿಸಿದವರು. ಕೆಲವರು ಕುದುರೆ ಗಾಡಿಯಲ್ಲಿ, ಕೆಲವರು ಮೋಟರಲ್ಲಿ, ಎಲ್ಲ ಸುಗಂಧದ್ರವ್ಯದಿಂದ ಸುಗಂಧಿತ, ಎಲ್ಲರ ಮನಸ್ಸಲ್ಲೂ ಉತ್ಸಾಹ. ಗ್ರಾಮೀಣರ ಈ ತಂಡ ತಮ್ಮ ದಾರಿದ್ರ್ಯ ಮರೆತು ಸಂತೋಷ ಧೈರ್ಯದಿಂದ ಮಗ್ನ ನಡೆಯುತ್ತಿದ್ದರು, ಮಕ್ಕಳಿಗೆ ನಗರದ ಪ್ರತಿಯೊಂದು ವಸ್ತು ವಿಶಿಷ್ಟವಾಗಿತ್ತು, ಯಾವ ವಸ್ತುವನ್ನು ನೋಡಿದರೂ, ದುರುಗುಟ್ಟಿ ನೋಡುತ್ತಿರುತ್ತಿದ್ದರು, ಹಿಂದೆಯಿಂದ ಹಾರ್ನ್ ಬಾರಿಸುವ ಶಬ್ದ ಕೇಳಿದರೂ ಚೇತರಿಸುತ್ತಿರಲಿಲ್ಲ, ಹಮೀದ್ ಅಂತೂ ಮೋಟರಿನ ಕೆಳಗೆ ಬರುತ್ತಾ ಬರುತ್ತಾ ಬಚಾವಾದ.

ಇದ್ದಕ್ಕಿದ್ದಂತೆ ಮಸೀದಿ ಕಾಣಲಾರಂಭಿಸಿತು, ಮೇಲೆ ಹುಣಿಸೆಹಣ್ಣಿನ ವೃಕ್ಷಗಳ ದಟ್ಟವಾದ ನೆರಳು, ಕೆಳಗೆ ಸುಸಜ್ಜಿತ ನೆಲ, ಅದರ ಮೇಲೆ ಹಾಸಿದ ಅಲಂಕರಿತ ವಸ್ತ್ರ ಹಾಗು ರೋಜ ಇಟ್ಟವರ ಸಾಲು ಒಂದರ ಹಿಂದೆ ಒಂದು ಎಂದು ಅದೆಷ್ಟೋ ದೂರ ತನಕ ಹೋಗಿದೆ ಅಂದರೆ ಹಾಸಿದ ವಸ್ತ್ರದ ಆಚೆ ಸಹ ಜನರು ಸಾಲಾಗಿ ನಿಲ್ಲಿದ್ದಾರೆ. ಹೊಸಬರು ಬಂದವರು ಹಿಂದೆ ಹಿಂದೆ ಸಾಲಾಗಿ ನಿಲ್ಲುತ ಹೋಗುತ್ತಾರೆ, ಮುಂದೆ ಜಾಗ ಇಲ್ಲ, ಇಲ್ಲಿ ಯಾರು ಸಂಪತ್ತು ಶ್ರೇಣಿ ನೋಡುವುದಿಲ್ಲ, ಇಸ್ಲಾಂನ ದೃಷ್ಟಿಯಲ್ಲಿ ಎಲ್ಲರು ಸಮಾನರೆ, ಈ ಗ್ರಾಮೀಣರು ವಜು ಮಾಡಿ (ಕೈ ಕಾಲು ತೊಳೆದು ಶುದ್ಧ ಆಗುವ ಕ್ರಮ) ಹಿಂದೆ ನಿಂತರು, ಎಷ್ಟು ಸುಂದರ ಕಾರ್ಯಾಚರಣೆ, ಎಷ್ಟು ಸುಂದರ ವ್ಯವಸ್ಥೆ, ಲಕ್ಷಗಟ್ಟಲೆ ತಲೆ ಒಟ್ಟಿಗೆ ಭಕ್ತಿಯಿಂದ ಬಾಗುತ್ತದೆ, ಮತ್ತೆ ಎಲ್ಲರು ಒಟ್ಟಿಗೆ ನಿಲ್ಲುತ್ತಾರೆ, ಒಟ್ಟಿಗೆ ತಲೆ ಬಾಗುತ್ತದೆ ಮತ್ತು ಒಟ್ಟಿಗೆ ನಿಲ್ಲುತ್ತಾರೆ, ಪುನಃ ಒಟ್ಟಿಗೆ ತಲೆ ಬಾಗುತ್ತದೆ ಮತ್ತು ಒಟ್ಟಿಗೆ ನಿಲ್ಲುತ್ತಾರೆ, ಈ ಕ್ರಿಯೆ ಎಷ್ಟೋ ಸಲ ಆಗುತ್ತದೆ, ಲಕ್ಷಗಟ್ಟಲೆ ವಿದ್ಯುತ್ತ್ ದೀಪಗಳು ಒಟ್ಟಿಗೆ ಪ್ರದೀಪ್ತವಾಗಿ ಮತ್ತೆ ನಂದುವ ಹಾಗೆ, ಈ ಕ್ರಮ ಹೀಗೆಯೇ ನಡೆಯುತ್ತಿರುತ್ತದೆ, ಎಷ್ಟು ಅಪೂರ್ವ ದೃಶ್ಯವಾಗಿತ್ತು, ಇದರ ಸಾಮೂಹಿಕ ಕಾರ್ಯವಿಸ್ತಾರಣೆ ಹಾಗು ಅಪರಿಮಿತತೆ ಹೃದಯದಲ್ಲಿ ಶ್ರದ್ಧೆ, ಹೆಮ್ಮೆ, ಆತ್ಮಾನಂದ ತುಂಬುತ್ತದೆ, ಅಂದರೆ ಸೋದರಿಕೆಯ ಈ ವಿಧಿ ಈ ಎಲ್ಲ ಆತ್ಮಗಳನ್ನು ಒಂದೇ ದಾರದಲ್ಲಿ ಪೋಣಿಸಿದಂತೆ.

(ಮುಂದುವರಿಯುವುದು)

ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Wednesday, September 10, 2014

ಬದುಕ ಬಂಡಿ

ಬಂಡಿ
ಸಾಗುವುದಿಲ್ಲ
ಅದರಲ್ಲಿ
ತುಂಬಾ ಭಾರವನ್ನು
ತುಂಬಿದ್ದರೆ
ನಮ್ಮ ಬದುಕು ಸಹ
ಹಾಗೆಯೇ ಗೆಳತಿ
ಸಂಶಯ, ದುರಹಂಕಾರ
ಹಠ, ಮೌನ, ಕ್ರೋಧಗಳ
ಭಾರ ನಮ್ಮ ಬದುಕಲಿ
ತುಂಬಿದರೆ
ಬದುಕ ಬಂಡಿ ಸಾಗದು
ವಿಶ್ವಾಸ ಪ್ರೀತಿ
ಕಾಳಜಿಯ ತೂಕ
ತುಂಬಾ ಹಗುರ
ಅದನ್ನೇ ತುಂಬಿಸಿ
ಸಾಗಿದರೆ
ಜೀವನ ಸುಗಮ

by ಹರೀಶ್ ಶೆಟ್ಟಿ,ಶಿರ್ವ  

ಪ್ರೀತಿ ಎಂಬ ಸಸಿ

ಪ್ರೀತಿ
ಎಂಬ ಸಸಿ
ಯಾವಗಲು
ಮರವಾಗಿಯೇ ಬೆಳೆಯುತ್ತದೆ
ಗೆಳತಿ
ವೈಮನಸ್ಸಿನ
ಬಿರುಗಾಳಿಯಿಂದ
ಅದು ಕಿಂಚಿತ ನಡುಗಬಹುದು
ಆದರೆ
ಅದಕ್ಕೆ ಯಾವ ರೀತಿಯ
ಹಾನಿಯಾಗದು
ಇದು ಖಚಿತ

by ಹರೀಶ್ ಶೆಟ್ಟಿ,ಶಿರ್ವ  

ತಪ್ಪಿಗೆ ಕ್ಷಮೆ ಇಲ್ಲ

ಇಲ್ಲಿ
ತಪ್ಪಿಗೆ ಕ್ಷಮೆ ಇಲ್ಲ
ಗೆಳತಿ
ಕ್ಷಮಿಸಲು ಅವರು
ನಮ್ಮವರಲ್ಲ
ಆದರೆ ನೀನು
ತಪ್ಪಾಗದಂತೆ ನೋಡಿಕೊಳ್ಳು
ತನ್ನನ್ನು ತಾನೇ ಸುಧಾರಿಸಿಕೊಳ್ಳು
ಬಂದವರನ್ನು ಸ್ವಾಗತಿಸು
ಬರದವರನ್ನು ಮನಸ್ಸಿಂದ ಆಚೆ ತಳ್ಳು

by ಹರೀಶ್ ಶೆಟ್ಟಿ,ಶಿರ್ವ 

ಈದ್ ಜಾತ್ರೆ ಭಾಗ - ೨

ಭಾಗ - ೨


ಊರಿನಿಂದ ಹೊರಟಿತು ನಡೆದುಕೊಂಡು ಸವಾರಿ, ಮಕ್ಕಳ ಜೊತೆ ಹಮೀದ್ ಸಹ ಹೋಗುತ್ತಿದ್ದ, ಕೆಲವೊಮ್ಮೆ ಎಲ್ಲ ಮಕ್ಕಳು ಓಡಿ ಹೋಗಿ ಎಲ್ಲರಿಂದ ಮುಂದೆ ಬಂದು ಮತ್ತೆ ಜೊತೆಯಲ್ಲಿ ಬಂದವರನ್ನು ಕಾಯುತ ಯಾವುದೇ ಮರದ ಅಡಿಯಲ್ಲಿ ನಿಲ್ಲುತ್ತಿದ್ದರು, ಯಾಕೆ ಈ ಹಿರಿಯರು ಇಷ್ಟು ಮೆಲ್ಲ ನಡೆಯುತ್ತಾರೆ, ಹಮೀದನ ಮನಸ್ಸಲ್ಲಿ ತಳಮಳ, ಹಮೀದ್ ಕಾಲಲ್ಲಿ ರೆಕ್ಕೆ ಸೇರಿಸಿದಂತೆ ನಡೆಯುತ್ತಿದ್ದ. 

ನಗರದ ದ್ವಾರ ಬಂತು, ಹಾದಿಯ ಎರಡು ಬದಿಯಲ್ಲಿ ಶ್ರೀಮಂತರ ಸುಂದರ ತೋಟಗಳಿದ್ದವು, ಮರಗಳಲ್ಲಿ ಮಾವಿನ ಹಣ್ಣು, ಪೇರಳೆ ಹಣ್ಣು ತುಂಬಿದವು, ಕೆಲವು ಮಕ್ಕಳು ಸಣ್ಣ ಕಲ್ಲು ಎಸೆದು ಹಣ್ಣು ತುಂಡು ಮಾಡಲು ಪ್ರಯತ್ನಿಸಿದರು, ಆಗ ಒಳಗಿನಿಂದ ಮಾಲಿ ಬಂದು ಅವರ ಹಿಂದೆ ಬಿದ್ದ, ಮಕ್ಕಳು ನಗು ನಗುತ ಓಡಿದರು, ಮಾಲಿ ಸೋತು ನಿಂತ. ಮಕ್ಕಳಿಗೆ ಗಮ್ಮತ್ತು "ಹೇಗೆ ಮಾಲಿಗೆ ಸತಾಯಿಸಿದೆವು" ಎಂದು.

ದೊಡ್ಡ ದೊಡ್ಡ ಕಟ್ಟಡ ಬರಲಾರಂಭಿಸಿತು, ಕೋರ್ಟ್, ಕಾಲೇಜ್, ಕ್ಲಬ್. ಎಲ್ಲ ಮಕ್ಕಳಲ್ಲಿ ವಿವಿಧ ಜಿಜ್ಞಾಸೆ.

ಈ ಕಾಲೇಜಲ್ಲಿ ಎಷ್ಟು ಮಕ್ಕಳು ಕಲಿಯುತ್ತಿರಬಹುದು? ಎಲ್ಲ ಮಕ್ಕಳಲ್ಲ, ದೊಡ್ಡವರು ಕಲಿಯುವುತ್ತಾರೆ,ಅವರ ದೊಡ್ಡ ದೊಡ್ಡ ಮೀಸೆ ಇರುತ್ತದೆ, ಹೌದ! ಇಷ್ಟು ದೊಡ್ದವರಾಗಿಯೂ ಕಲಿಯುತ್ತಿದ್ದಾರ? ಯಾರಿಗೆ ಗೊತ್ತು ಯಾವಾಗ ತನಕ ಕಲಿಯುತ್ತಾರೆ ಎಂದು ಮತ್ತೆ ಅಷ್ಟು ಕಲಿತು ಏನು ಮಾಡುತ್ತಾರೆಂದು? ಹಮೀದನ ಮದ್ರಸದಲ್ಲಿ ಕೇವಲ ಮೂರು ನಾಲ್ಕು ಮಕ್ಕಲ್ಲಿದ್ದರು, ಅದು ಸಹ ಅವನಿಂದ ದೊಡ್ಡವರು, ಏನೂ ಪ್ರಯೋಜನದವರಲ್ಲ, ದಿನನಿತ್ಯ ಪೆಟ್ಟು ತಿನ್ನುತ್ತಿದ್ದರು, ಕೆಲಸ ಕಳ್ಳರು, ಇಲ್ಲಿ ಸಹ ಅವರಂತವರೆ ಇರಬಹುದ?

ಅಬ್ಬಾ ಎಷ್ಟು ದೊಡ್ಡ ಕ್ಲಬ್, ಇಲ್ಲಿ ಏನು ಜಾದು ಆಗುತ್ತದ? ನಾನು ಕೇಳಿದ್ದೇನೆ, ಇಲ್ಲಿ ಸತ್ತವರ ತಲೆಬುರುಡೆ ಓಡುತ್ತದೆ, ದೊಡ್ಡ ದೊಡ್ಡ ಪ್ರದರ್ಶನ ಆಗುತ್ತದೆ, ಇಲ್ಲ, ಅಲ್ಲಿ ಎಲ್ಲರಿಗೆ ಪ್ರವೇಶ ಇಲ್ಲ, ಅಲ್ಲಿ ಸಂಜೆ ಸಾಹೇಬರು ಬಂದು ಆಡುತ್ತಾರೆ, ದೊಡ್ಡ ದೊಡ್ಡ ಸಾಹೇಬರು, ಮೀಸೆ ಗಡ್ಡದವರು ಮತ್ತು ಅವರ ಹೆಂಗಸರು ಕೂಡ ಆಡುತ್ತಾರೆ, ಹೌದ!  ನನ್ನ ಅಮ್ಮಿಗೆ ಇದನ್ನು ಕೊಟ್ಟರೆ, ಏನು ಹೇಳುತ್ತಾರೆ ಇದಕ್ಕೆ "ಬ್ಯಾಟ್" ಅವರಿಗೆ ಎತ್ತಲಿಕ್ಕೆ ಆಗಲಿಕ್ಕಿಲ್ಲ, ತಿರುಗಿಸಿದಾಗ ಬೀಳಬಹುದು.

ಮೆಹಮೂದ್ "ಅಲ್ಲಾ ಆಣೆ, ನಮ್ಮ ಅಮ್ಮಿಜಾನ್'ನವರಿಗೆ ಕೊಟ್ಟರೆ ಅವರ ಕೈ ಕಂಪಿಸಬಹುದು”.

ಮೋಹಸಿನ್ "ಅಷ್ಟೇನೂ ಕಷ್ಟ ಇಲ್ಲ, ಕೈಯಿಂದ ಕಲ್ಲು ತಿರುಗಿಸಿ ಅದೆಷ್ಟೋ ಕಿಲೋ ಗೋದಿ ಹಿಟ್ಟು ತೆಗೆಯುತ್ತಾರೆ, ಸ್ವಲ್ಪ ಬ್ಯಾಟ್ ಹಿಡಿದರೆ ಕೈ ಕಂಪಿಸುತ್ತದೇನು , ನೂರಾರು ಕೊಡ ನೀರು ದಿನನಿತ್ಯ ತೆಗೆಯುತ್ತಾರೆ, ಐದು ಕೊಡ ನಿನ್ನ ಎಮ್ಮೆಯೇ ಕುಡಿಯುತ್ತದೆ, ಈ ಸಾಹೇಬರ ಮ್ಯಾಡಂನವರಿಗೆ ಒಂದು ಕೊಡ ನೀರು ತೆಗೆಯಲಿಕ್ಕೆ ಹೇಳಿದರೆ, ಅವರ ಕಣ್ಣ ಮುಂದೆ ಕತ್ತಲು ಕವಿಯಬಹುದು".

ಮೆಹಮೂದ್ "ಆದರೆ ಅವರು ಓಡುವುದಿಲ್ಲವಲ್ಲಜಿಗಿಯುವುದಿಲ್ಲವಲ್ಲ, ಕುಣಿಯುವುದಿಲ್ಲವಲ್ಲ".

ಮೋಹಸಿನ್ " ಹೌದು, ಅದು ಸಾಧ್ಯವಿಲ್ಲ, ಆದರೆ ಅಂದು ನನ್ನ ಹಸು ಸಾಹುಕಾರನ ಹೊಲದಲ್ಲಿ ಮೇಯುತ್ತಿತ್ತು, ನನ್ನ ಅಮ್ಮಿಜಾನ್ ಇಷ್ಟು ಜೋರಿನಿಂದ ಓಡಿದರು ಅಂದರೆ ನನಗೆ ಸಹ ಅವರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ, ಸತ್ಯ".

ಸವಾರಿ ಮುಂದೆ ಸಾಗಿತು, ಮಿಠಾಯಿಗಳ ಅಂಗಡಿ ಶುರುವಾಯಿತು, ಅದೆಷ್ಟು ಮಿಠಾಯಿ, ಇಷ್ಟೆಲ್ಲಾ ಮಿಠಾಯಿ ಯಾರು ತಿನ್ನುತ್ತಾರೆ? ನೋಡಲ್ಲ ಒಂದು ಒಂದು ಅಂಗಡಿಯಲ್ಲಿ ನೂರು ನೂರು ಕಿಲೋ ಮಿಠಾಯಿ ಇರಬಹುದು, ಕೇಳಿದ್ದೇನೆ ರಾತ್ರಿಗೆ ಭೂತ ಪ್ರೇತ ಬಂದು ಖರೀದಿ ಮಾಡುತ್ತದೆ ಅಂತ, ಅಬ್ಬಜಾನ್ ಹೇಳುತ್ತಿದ್ದರು ರಾತ್ರಿಗೆ ಒಂದು ಮನುಷ್ಯ ಎಲ್ಲ ಅಂಗಡಿಗೆ ಹೋಗುತ್ತಾರೆ ಹಾಗು ಎಷ್ಟು ಮಿಠಾಯಿ ಉಳಿದಿದ್ದೆಯೋ ಎಲ್ಲವನ್ನು ಖರೀದಿ ಮಾಡುತ್ತಾನೆ, ನಮ್ಮಂತೆ ಸತ್ಯದ ರೂಪಾಯಿ ಕೊಟ್ಟು.

ಹಮೀದನಿಗೆ ನಂಬಿಕೆ ಆಗಲಿಲ್ಲ "ಭೂತ ಪ್ರೇತರಿಗೆ ಇಂತಹ ರೂಪಾಯಿ ಎಲ್ಲಿಂದ ಸಿಗುತ್ತದೆ?"

ಮೋಹಸಿನ್ " ಭೂತ ಪ್ರೇತರಿಗೆ ರೂಪಾಯಿಯ ಏನು ಕೊರತೆ? ಯಾವ ಖಜಾನೆಯಲ್ಲಿ ಬೇಕಾದರೂ ಹೋಗಬಹುದು, ಯಾವ ಬಾಗಿಲು ಸಹ ಅವರನ್ನು ತಡೆಯಲು ಸಾಧ್ಯವಿಲ್ಲ, ವಜ್ರ ಬಂಗಾರ ಸಹ ಅವರ ಹತ್ತಿರ ಇರುತ್ತದೆ, ಯಾರಿಂದ ಅವರು ಪ್ರಸನ್ನವಾಗುತ್ತಾರೋ, ಅವರಿಗೆ ಎಷ್ಟು ಬೇಕಾದರೂ ಕೊಡುತ್ತಾರೆ, ಈಗ ಇಲ್ಲಿದ್ದರೆ ಐದು ನಿಮಿಷದಲ್ಲಿ ಕಲ್ಕತ್ತಾ ಮುಟ್ಟುತ್ತಾರೆ."

ಹಮೀದ್ ಪುನಃ ಕೇಳಿದ " ಭೂತ ತುಂಬಾ ದೊಡ್ದದಿರುತ್ತದೆಯಾ?"

ಮೋಹಸಿನ್ "ಒಂದೊಂದು ತಲೆ ಆಕಾಶದಷ್ಟು ದೊಡ್ಡದಿರುತ್ತದೆ ಮಹಾಶಯ, ಏನಂತ ತಿಳಿದಿದ್ದಿ, ನೆಲದ ಮೇಲೆ ನಿಂತರೆ ತಲೆ ಆಕಾಶಕ್ಕೆ ತಾಗಬಹುದು, ಆದರೆ ಅವರ ಇಷ್ಟ ಬೇಕಾದರೆ ಒಂದು ಲೋಟೆಯಲ್ಲಿ ಧುಮುಕಿ ಕುಳಿತುಕೊಳ್ಳುತ್ತಾರೆ."

ಹಮೀದ್ "ಜನರು ಹೇಗೆ ಅವರನ್ನು ಸಂತೋಷಗೊಳಿಸುತ್ತಾರೆ, ನನಗೆ ಯಾರು ಆ ಮಂತ್ರ ತಿಳಿಸಿದರೆ ಒಂದು ಭೂತವನ್ನು ನಾನೂ ಸಂತೋಷಗೊಳಿಸುವೆ."

ಮೋಹಸಿನ್ "ಈಗ ಇದು ನನಗೆ ಗೊತ್ತಿಲ್ಲ, ಆದರೆ ಕೇಳಿದ್ದೇನೆ ಸಾಹುಕಾರನ ವಶದಲ್ಲಿ ಅದೆಷ್ಟೋ ಭೂತ ಪ್ರೇತಗಳಿವೆ, ಯಾವುದೇ ವಸ್ತು ಕದ್ದು ಹೋದರೆ, ಸಾಹುಕಾರ ಅದರ ಪತ್ತೆ ಹಚ್ಚಿ ಕಳ್ಳನ ಹೆಸರು ಹೇಳುತ್ತಾರೆ, ಜುಮರಾತಿಯ ಕರು ಆ ದಿನ ಕಳೆದು ಹೋಯಿತು, ಮೂರು ದಿನ ಆಘಾತದಲ್ಲಿದ್ದ, ಎಲ್ಲಿಯೂ ಸಿಗದಾಗ ಸಾಹುಕಾರನ ಬಳಿ ಹೋದ, ಸಾಹುಕಾರ ಕೂಡಲೇ ಹೇಳಿದ "ಅದು ಕೊಟ್ಟೆಯಲ್ಲಿ ಇದೆಯೆಂದು, ಅಲ್ಲೇ ಸಿಕ್ಕಿತ್ತು, ಭೂತ ಬಂದು ಎಲ್ಲ ಜಗತ್ತಿನ ಸುದ್ಧಿ ಅವರಿಗೆ ಕೊಡುತ್ತದೆ."

ಈಗ ಹಮೀದನಿಗೆ ತಿಳಿಯಿತು ಸಾಹುಕಾರನ ಬಳಿ ಹೇಗೆ ಅಷ್ಟು ಸಂಪತ್ತು ಹಾಗು ಹೇಗೆ ಅಷ್ಟು ಮಾನ ಇದೆಯೆಂದು.

ಸವಾರಿ ಮುಂದೆ ಸಾಗಿತು.

(ಮುಂದುವರಿಯುವುದು)

ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ