Sunday 14 September 2014

ಈದ್ ಜಾತ್ರೆ ಭಾಗ - ೫


ಈದ್ ಜಾತ್ರೆ
ಭಾಗ - ೫

ಎಷ್ಟು ಒಳ್ಳೆಯ ಹುಡುಗ, ಇವರ ಆಟಿಕೆಗಳಿಗೆ ಯಾರು ತಾನೇ ಇವರನ್ನು ಕೊಂಡಾಡುವರು? ದೊಡ್ಡವರ ಆಶಿರ್ವಾದ ನೇರ ಅಲ್ಲಾನಲ್ಲಿಗೆ ಹೋಗುತ್ತದೆ ಮತ್ತೆ ಬೇಗನೆ ನೆರವೇರುತ್ತದೆ. ನಾನು ಇವರ ದುಷ್ಟ ವರ್ತನೆ ಯಾಕೆ ಸಹಿಸಲಿ? ಬಡವನೇ ಆಗಲಿ ಆದರೆ ಯಾರಿಂದ ಏನನ್ನು ಕೇಳಲು ಹೋಗುವುದಿಲ್ಲ ಅಲ್ಲವೇ. ಒಂದಾನೊಂದು ದಿನ ಅಬ್ಬಜಾನ್ ಬರುವರು ತಾನೇ, ಅಮ್ಮಿಜಾನ್ ಸಹ ಬರುವಳು, ನಂತರ ಇವರ ಹತ್ತಿರ ಕೇಳುತ್ತೇನೆ, ಎಷ್ಟು ಆಟಿಕೆ ಬೇಕೆಂದು, ಒಬ್ಬೊಬ್ಬನಿಗೆ ಒಂದೊಂದು ಚೀಲ ಆಟಿಕೆ ಕೊಡುವೆ ಹಾಗು ತೋರಿಸುವೆ ಗೆಳೆಯರ ಒಟ್ಟಿಗೆ ಹೇಗೆ ವ್ಯವಹಾರ ಮಾಡಬೇಕೆಂದು. ಇದಲ್ಲ ಒಂದು ಪೈಸೆಯ ಪೇಡ ತೆಗೊಂಡು ತೋರಿಸಿ ತೋರಿಸಿ ತಿನ್ನುವುದು. ಈಗ ಎಲ್ಲರು ನಗುವರು ಹಮೀದ್ ಚಿಮ್ಮಟ ಖರೀದಿ ಮಾಡಿದ್ದಾನೆ ಎಂದು, ನಗಲಿ! ಅವರ ಬಾಯಾಗೆ ಹುಳ ಬೀಳಲಿ!

ಅವನು ಅಂಗಡಿಯವನಿಗೆ ಕೇಳಿದ "ಈ ಚಿಮ್ಮಟ ಎಷ್ಟಕ್ಕೆ?"

ಅಂಗಡಿಯವನು ಅವನನ್ನು ನೋಡಿದ, ಅವನ ಒಟ್ಟಿಗೆ ಯಾರೂ ಇರದಿದ್ದನ್ನು ನೋಡಿ "ಇದು ನಿನ್ನ ಕೆಲಸದಲ್ಲ ಮಾರಾಯ!"

"ನಿನಗೆ ಇದು ಮಾರಲಿಕ್ಕೆ ಇದೆಯಾ, ಇಲ್ಲವ?"

"ಮಾರಲಿಕ್ಕೆ ಯಾಕೆ ಇಲ್ಲ, ಅದಕ್ಕೆ ತಾನೇ ಇಟ್ಟದ್ದು"

"ಮತ್ಯಾಕೆ ಹೇಳುವುದಿಲ್ಲ, ಇದಕ್ಕೆ ಎಷ್ಟು ಕ್ರಯ ಅಂತ?"

"ಆರು ಪೈಸೆ"

ಹಮೀದನಿಗೆ ನಿರಾಸೆ ಮೂಡಿತು.

ಅವನ ಮುಖ ನೋಡಿ ಅಂಗಡಿಯವನು "ಸರಿ, ಐದು ಪೈಸೆ ಕೊಡು, ಬೇಕಾದರೆ ಕೊಂಡೋಗು, ಇಲ್ಲಾದರೆ ಇರಲಿ."

ಹಮೀದ್ ಹೃದಯ ಗಟ್ಟಿ ಮಾಡಿ "ಮೂರು ಪೈಸೆಗೆ ಕೊಡುವೆಯ?"

ಹೀಗೆ ಹೇಳಿ ಅವನು ಈಗ ಅಂಗಡಿಯವನು ಬಯ್ಯುತ್ತಾನೆ ಎಂದು ಮುಂದೆ ಹೋಗಲಾರಂಭಿಸಿದ, ಆದರೆ ಅಂಗಡಿಯವನು ಏನು ಹೇಳಲಿಲ್ಲ, ಚಿಮ್ಮಟ ತೆಗೆದು ಅವನ ಕೈಯಲ್ಲಿ ಇಟ್ಟ, ಹಮೀದ್ ಬೇಗನೆ ತನ್ನಲ್ಲಿದ್ದ ಮೂರು ಪೈಸೆ ಅವನಿಗೆ ಕೊಟ್ಟ. ಹಮೀದ್ ಆ ಚಿಮ್ಮಟವನ್ನು ಹೀಗೆ ತನ್ನ ಭುಜದಲ್ಲಿ ಇಟ್ಟ ಅಂದರೆ ಯಾವುದೇ ಬಂದೂಕಿನ ಹಾಗೆ ಹಾಗು ತುಂಬಾ ಆಕರ್ಷಕವಾಗಿ ನಡೆದು ತನ್ನ ಸಂಗಡಿಗರು ಇದ್ದಲ್ಲಿ ಬಂದ, ಸ್ವಲ್ಪ ಕೇಳುವ ಈಗ ಇವರು ಏನು ಪ್ರತಿಕ್ರಿಯಿಸುತ್ತಾರೆ ಅಂತ.

ಮೋಹಸಿನ್ ನಗುತ್ತ "ಈ ಚಿಮ್ಮಟ ಯಾಕೆ ತಂದೆ ಮೂರ್ಖ, ಇದರ ಏನು ಮಾಡುವೆ?"

ಹಮೀದ್ " ಸ್ವಲ್ಪ ನಿನ್ನ 'ನೀರು ವಾಹಕ' ಕೆಳಗೆ ಬೀಳಿಸು, ಎಲ್ಲ ಅದರ ಎಲುಬು ಚೂರು ಚೂರಾಗುತ್ತದೆ, ಏನು ಉಳಿಯುತ್ತದೆ."

ಮೆಹಮೂದ್ "ಅಂದರೆ ಈ ಚಿಮ್ಮಟ ನಿನ್ನ ಆಟಿಕೆಯ?"

ಹಮೀದ್ "ಆಟಿಕೆ ಯಾಕೆ ಅಲ್ಲ, ಈಗ ಭುಜದ ಮೇಲೆ ಇಟ್ಟಿದ್ದೆ, ಬಂದೂಕು ಆಯಿತುಕೈಯಲ್ಲಿ ಇಟ್ಟೆ, ಸನ್ಯಾಸಿಯರ ಬಾರಿಸುವ ಚಿಮ್ಮಟ ಆಯಿತು, ಈ ಚಿಮ್ಮಟದಿಂದ ಒಂದು ಏಟು ಇಟ್ಟರೆ ನಿಮ್ಮ ಈ ಎಲ್ಲ ಆಟಿಕೆಗಳ ಜೀವ ಹೋಗಬಹುದು, ನಿಮ್ಮ ಆಟಿಕೆಯಿಂದ ಎಷ್ಟು ಬೇಕಾದರೂ ಪ್ರಯತ್ನಿಸಿ ನನ್ನ ಚಿಮ್ಮಟವನ್ನು ಏನು ಮಾಡಲಾಗದು, ನನ್ನ ವೀರ ಸಿಂಹ ಈ ಚಿಮ್ಮಟ."

ಸಮ್ಮಿ ಕಠಾರಿ ತೆಗೆದುಕೊಂಡಿದ್ದ, ಹಮೀದನಿಂದ ಪ್ರಭಾವಿತನಾಗಿ "ನನ್ನ ಕಠಾರಿಯಿಂದ ಬದಲಾಯಿಸುವೆಯ, ಇದು ಎರಡಾಣೆಯ?"

ಹಮೀದ್ ಅವನ ಕಠಾರಿಯನ್ನು ಉಪೇಕ್ಷೆಯಿಂದ ನೋಡಿದ "ನನ್ನ ಈ ಚಿಮ್ಮಟ ಬೇಕಾದರೆ ನಿನ್ನ ಕಠಾರಿಯ ಹೊಟ್ಟೆ ಹರಿದು ಬಿಡಬಹುದು, ಸ್ವಲ್ಪ ಚರ್ಮ ಸುತ್ತಿದೆ ಅಷ್ಟೇ, ಸ್ವಲ್ಪ ನೀರು ಬಿದ್ದರೆ ಮುಗಿಯುವುದು, ನನ್ನ ಚಿಮ್ಮಟ ಧೈರ್ಯವಂತ, ಬೆಂಕಿಯಲ್ಲಿ, ನೀರಲ್ಲಿ, ಬಿರುಗಾಳಿಯಲ್ಲಿ ಎಲ್ಲಿ ಬೇಕಾದರೂ ನಿಲ್ಲುವ ಸಾಮರ್ಥ್ಯ ಇದೆ ಇದರಲ್ಲಿ.

ಚಿಮ್ಮಟ ಎಲ್ಲರನ್ನೂ ಮೋಹಿಸಿತು, ಆದರೆ ಈ ಹಣ ಯಾರಲ್ಲಿ ಇತ್ತು? ಮತ್ತು ಈಗ ಜಾತ್ರೆಯಿಂದ ಎಷ್ಟೋ ದೂರ ಬಂದು ಆಗಿದೆ, ಯಾವಾಗ ತಾನೇ ಒಂಬತ್ತು ಗಂಟೆ ಆಗಿದೆ, ಈಗಂತೂ ಬಿಸಿಲು ಸಹ ಹೆಚ್ಚಾಗುತ್ತಿದೆ, ಮನೆಗೆ ಹೋಗುವ ಅವಸರ, ತಂದೆಯಿಂದ ಹೇಳಿದರೂ ಚಿಮ್ಮಟ ಸಿಗಲಿಕ್ಕಿಲ್ಲ, ಹಮೀದ್ ತುಂಬಾ ಚಾಣಾಕ್ಷ, ಅದಕ್ಕೆ ದುಷ್ಟ ತನ್ನ ಹಣ ಉಳಿಸಿ ಇಟ್ಟಿದ್ದ.

ಈಗ ಬಾಲಕರ ಎರಡು ತಂಡ ನಿರ್ಮಾಣವಾಯಿತು. ಒಂದರಲ್ಲಿ ಮೋಹಸಿನ್, ಮೆಹಮೂದ್, ನೂರೆ ಮತ್ತು ಸಮ್ಮಿ ಇದ್ದ, ಎರಡನೇ ತಂಡದಲ್ಲಿ ಕೇವಲ ಹಮೀದ್, ಸಶಸ್ತ್ರ. ಸಮ್ಮಿ ವಿದ್ರೋಹ ಮಾಡಿದ, ಬಂದು ಹಮೀದನ ತಂಡಕ್ಕೆ ಸೇರಿದ, ಆದರೆ ಮೋಹಸಿನ್, ಮಹಮೂದ್, ನೂರೆ ಹಮೀದಕ್ಕಿಂತ ಪ್ರಾಯದಲ್ಲಿ ಎರಡು ಎರಡು ವರ್ಷ ದೊಡ್ಡವರಾದರೂ ಹಮೀದನ ಆಕ್ರಮಣದಿಂದ ಭಯಭೀತರಾಗಿದ್ದರು. ಅವನ ಹತ್ತಿರ ನ್ಯಾಯದ ಬಲ ಇತ್ತು ಹಾಗು ನೀತಿಯ ಶಕ್ತಿ, ಒಂದು ಕಡೆ ಮಣ್ಣಿದೆ ಅಂದರೆ ಇನ್ನೊಂದು ಕಡೆ ಕಬ್ಬಿಣ ಹಾಗು ಅದು ತನ್ನನ್ನು ಶಕ್ತಿಶಾಲಿ ಎಂದು ಘೋಷಿಸುತ್ತಿದೆ, ಅದು ಅಜೇಯ, ಘಾತಕ. ಒಂದು ವೇಳೆ ಸಿಂಹ ಬಂದರೆ ನೀರು ವಾಹಕ ಮಹಾಶಯ  ಕಕ್ಕಬಿಕ್ಕಿಯಾಗುವನು, ಸಿಪಾಯಿ ಮಹಾಶಯ ಬಂದೂಕು ಬಿಟ್ಟು ಓಡಿ ಹೋಗುವನು, ವಕೀಲ ಸಾಹೇಬ ವಾದ ಬಿಟ್ಟು ಅದರ ಮುಂದೆ ಕುಣಿಯಲಾರಂಭಿಸುವನು, ಆದರೆ ಶಕ್ತಿಶಾಲಿ ಚಿಮ್ಮಟ, ಈ ಭಾರತ ವೀರ ಸಿಂಹದ ಕುತ್ತಿಗೆಯ ಮೇಲೆ ಸವಾರಿ ಮಾಡಿ ಅದರ ಕಣ್ಣು ಕಿತ್ತುಕೊಳ್ಳುವುದು.

ಆದರೂ ಮೋಹಸಿನ್ ಸ್ವಲ್ಪ ಮೆಲ್ಲ ಧ್ವನಿಯಲ್ಲಿ "ಆದರೆ ಅದಕ್ಕೆ ನೀರು ತುಂಬಿಸಲು ಸಾಧ್ಯವಿಲ್ಲವಲ್ಲ?"

ಹಮೀದ್ ಚಿಮ್ಮಟ ಎತ್ತಿಕೊಂಡು  "ನೀರು ವಾಹಕನಿಗೆ ಒಂದು ಸಲ ಬಯ್ದರೆ, ಅವನು ಓಡಿ ಹೋಗಿ ನೀರು ತಂದು ದ್ವಾರಕ್ಕೆ ಹಾಕಿ ಹೋಗುವನು."

ಮೋಹಸಿನ್ ಸೋಲನ್ನು ಒಪ್ಪಿಕೊಂಡ, ಆದರೆ ಮಹಮೂದ್ "ಒಂದು ವೇಳೆ ನಿಮ್ಮನ್ನು ಹಿಡಿದು ಬಿಟ್ಟರೆ, ನ್ಯಾಯಾಲಯದಲ್ಲಿ ವಕೀಲನ ಕಾಲ ಮುಂದೆ ಕುಳಿತು ಬೇಡುತ್ತಿರುವೆ."

ಹಮೀದನಿಗೆ ಮಹಮೂದನ ಪ್ರಬಲ ತರ್ಕಕ್ಕೆ ಉತ್ತರ ನೀಡಲಾಗಲಿಲ್ಲ, ಅವನು "ನಮ್ಮನ್ನು ಯಾರು ಹಿಡಿಯಲಿಕ್ಕೆ ಬರುತ್ತಾರೆ?"

ಮಹಮೂದ್ ದರ್ಪದಿಂದ "ನನ್ನ ಸಿಪಾಯಿ ಬಂದೂಕಧಾರಿ."

ಹಮೀದ್ "ಪಾಪ, ಈ ಸಿಪಾಯಿ ನಮ್ಮ ಭಾರತ ವೀರನನ್ನು ಹಿಡಿಯುವುದ, ಆಗಲಿ ಬನ್ನಿ, ಸ್ವಲ್ಪ ಕುಸ್ತಿ ಮಾಡೋಣ, ಇದರ ಮುಖ ನೋಡಿಯೇ ಓಡಿ ಹೋಗುವನು, ಹಿಡಿಯುವುದು ಹೇಗೆ."

ಮೋಹಸಿನನಿಗೆ ಹೊಸ ಏಟು ಹೊಳೆಯಿತು "ನಿನ್ನ ಚಿಮ್ಮಟದ ಮುಖ ದಿನಾಲೂ ಬೆಂಕಿಯಲ್ಲಿ ಸುಡುವುದು."

ಅವನು ಎನಿಸಿದ ಹಮೀದನಿಗೆ ಇದರ ಉತ್ತರ ಕೊಡಲು ಆಗದು ಎಂದು, ಆದರೆ ಅದಾಗಲಿಲ್ಲ "ಬೆಂಕಿಯಲ್ಲಿ ಧೈರ್ಯವಂತರೆ ಹಾರುವುದು ಮಹಾಶಯ, ನಿಮ್ಮ ಈ ವಕೀಲ, ಸಿಪಾಯಿ, ನೀರು ವಾಹಕ ಹೆಂಗಸರಂತೆ ಮನೆಯೊಳಗೇ ಅವಿತು ಕುಳಿತುಕೊಳ್ಳುವರು, ಬೆಂಕಿಯಲ್ಲಿ ಆ ಕೆಲಸ ಇದೆ ಅಂದರೆ ಅದನ್ನು ಕೇವಲ ಈ ಭಾರತ ವೀರನೆ ಮಾಡಬಲ್ಲ."

ಮಹಮೂದ್ ಇನ್ನೊಮ್ಮೆ ಪ್ರಯತ್ನಿಸಿದ "ವಕೀಲ ಸಾಹೇಬ ಕುರ್ಚಿಯಲ್ಲಿ ಕುಳಿತುಕೊಳ್ಳುವನು, ನಿನ್ನ ಈ ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು?"

ಮಹಮೂದನ ಈ ತರ್ಕ ನೂರೆ ಮತ್ತು ಸಮ್ಮಿಗೆ ಸಹ ಹಿಡಿಯಿತುಎಷ್ಟು ಸರಿ ಮಾತು ಹೇಳಿದ್ದಾನೆ ಮಹಮೂದ್ ಮೀಯಾ, ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು.

ಹಮೀದನಿಗೆ ಯಾವುದೇ ಸರಿಯಾದ ಉತ್ತರ ಸಿಗಲಿಲ್ಲ, ಅದಕ್ಕೆ ಅವನು ಒಟ್ಟಾರೆ ವಾದ ಮಾಡಲು ಶುರು ಮಾಡಿದ "ನನ್ನ ಚಿಮ್ಮಟ ಅಡುಗೆಮನೆಯಲ್ಲಿ ಇರಲಾರದು, ಅದು ವಕೀಲನ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಹಾಗು ಎಲ್ಲ ಕಾನೂನುಗಳನ್ನು ಆ ವಕೀಲನ ಹೊಟ್ಟೆಗೆ ಹಾಕಿ ಬಿಡುವುದು." ಮಾತು ಯಾರಿಗೂ ಹಿಡಿಯಲಿಲ್ಲ, ಆದರೆ ಕಾನೂನುಗಳನ್ನು ವಕೀಲನ ಹೊಟ್ಟೆಗೆ ಹಾಕುವ ಮಾತು ಕೇಳಿ ಆ ಎಲ್ಲ ಧೀರರು ಬೆರಗಾದರು. ಈ ಮಾತಿಗೆ  ಏನು ಅರ್ಥವಿರಲಿಲ್ಲ, ಆದರೆ ಒಂದು ಹೊಸತನ ಇತ್ತು, ಮಕ್ಕಳನ್ನು ಚಕಿತಗೊಳಿಸಿತು. ಅವರೆಲ್ಲ ಶರಣಾದರು, ಹಮೀದ್ ಗೆದ್ದಿದ, ಈಗ ಅವನ ಚಿಮ್ಮಟ ಭಾರತ ವೀರ ಎಂದು ಇದರಲ್ಲಿ ಮೋಹಸಿನ್, ಮಹಮೂದ್ , ನೂರೆ, ಸಮ್ಮಿ ಇವರಿಗೆ ಯಾವುದೇ ಆಕ್ಷೇಪಣೆ ಇರಲಿಲ್ಲ.


(ಮುಂದುವರಿಯುವುದು)

 ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

2 comments:

  1. ಚಿಮ್ಮಟದ ಈ ಭಾಗವನ್ನು ಓದಿದ್ದೆ, ಆದರೆ ನಾನು ಹಾಕಿದ ಕಾಮೆಂಟು ಆದೇಲ್ಲೋ ತಲೆ ತಪ್ಪಿಸಿಕೊಂಡಂತಿದೆ ಸಾರ್. ಕ್ಷಮೆ ಇರಲಿ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete