Tuesday, February 26, 2013

ಇನ್ನೊಬ್ಬ ದೇವದಾಸ


ಇನ್ನೊಬ್ಬ ದೇವದಾಸ
_____________
ಕಳ್ಳನೊಬ್ಬ ಗೋಡೆಯ ಹಿಂದೆ ಅವಿತುಕೊಂಡಿದ್ದ.

ಆಗ ಒಬ್ಬ ತನ್ನದೇ ಗುಂಗಿನಲ್ಲಿ ಬರುವುದನ್ನು ಕಂಡ.

ಕಳ್ಳ ಗೋಡೆಯ ಹಿಂದೆಯಿಂದ ಬಂದು , ಅವನನ್ನು ನಿಲ್ಲಿಸಿ.

"ಹೇ , ನಿನ್ನಲ್ಲಿದ್ದದೆಲ್ಲ ಬೇಗ ಈಚೆ ಕೊಡು " ಕಳ್ಳ ಅವನಿಗೆ ಬೆದರಿಸಿದ.

ಅವನು " ನನ್ನದು ಏನಿದೆ ಇಲ್ಲಿ, ಎಲ್ಲ ನಿನ್ನದೇ, ಹೇಳು ಏನು ಬೇಕು"?

ಕಳ್ಳ " ಹೆಚ್ಚು ಚಾಲಕಿ ಬೇಡ, ಬೇಗ ಈ ನಿನ್ನ ಗಡಿಯಾರ ನನಗೆ ಕೊಡು "

ಅವನು "ನನ್ನ ಸಮಯ ಅವಳು ಹೋದ ದಿನವೇ ನಿಂತು ಹೋಗಿತ್ತು, ಇದರ ಉಪಯೋಗ ನನಗೆ ಹೇಗೂ ಇಲ್ಲ, ನೀನೆ ತೆಗೆದುಕೊಳ್ಳು ಮಹರಾಯ" ಎಂದ.

ಕಳ್ಳ " ಕೇವಲ ಇದು ಸಾಲದು, ಈ ನಿನ್ನ ಬ್ಯಾಗಲ್ಲಿ ಏನಿದೆ, ಬೇಗ ಕೊಡು "?

ಅವನು "ಇದರಲ್ಲಿಯೇ, ಹ್ಮ್ಮ್ "ಅವನು ನಕ್ಕ.... ವಿಚಿತ್ರ ನಗು ಅವನದ್ದು, ಹೇಳಿದ " ಈ ಬ್ಯಾಗಲ್ಲಿ ಅವಳು ಬರೆದ ಪತ್ರಗಳಿವೆ, ಹೇಗೋ ನಾನು ಇದನ್ನು ಸಮುದ್ರಕ್ಕೆ ಬಿಸಾಡಲು ಹೋಗುತ್ತಿದ್ದೇನೆ, ನೀನೆ ತೆಗೆದುಕೊಳ್ಳು"ಎಂದ.

ಕಳ್ಳ "ಏನೋ ನಿನ್ನ ರಾಮಾಯಣ, ಬೇಗ ಈಚೆ ತಾ, ಎಂದು ಅವನ ಬ್ಯಾಗ್ ಎಳೆದು ಅದರಲ್ಲಿ ನೋಡಿದ, ಅದರಲ್ಲಿ ಕಾಗದದ ಗಂಟಲ್ಲದೆ ಬೇರೆ ಏನೂ ಇರಲಿಲ್ಲ, ಕಳ್ಳ ಕೋಪದಿಂದ  " ನೀನೊಬ್ಬ ಭಗ್ನ ಪ್ರೇಮಿ, ಇನ್ನು ಬೇಗ ನಿನ್ನ ಪರ್ಸ್ ತೆಗೆ" ಎಂದು ಕಿರುಚಿದ.

ಅವನು " ಈ ಪರ್ಸ್ ಲ್ಲಿ ಏನಿದೆ ಮಹರಾಯ , ಇದರಲ್ಲಿ ಕೇವಲ ಅವಳ ಚಿತ್ರ ಇದೆ, ಹೇಗೋ ಅವಳ ಚಿತ್ರ ನನ್ನ ಹೃದಯ, ಮನಸ್ಸಲ್ಲಿ ಶಾಶ್ವತವಾಗಿ ನೆಲೆಸಿದೆ, ನೀನೆ  ತೆಗೆದುಕೊಳ್ಳು" ಎಂದು ಹೇಳಿ ಪರ್ಸ್ ತೆಗೆದು ಕಳ್ಳನಿಗೆ ನೀಡಿದ.

ಕಳ್ಳ ಪರ್ಸ್ ಅವನಿಂದ ತೆಗೆದುಕೊಂಡು ನೋಡಿದ ಅದರಲ್ಲಿ ಒಂದು ಹೆಂಗಸಿನ ಚಿತ್ರ ಅಲ್ಲದೆ ಒಂದು ನಾಕಾಣೆ ಸಹ ಇರಲಿಲ್ಲ, ಕಳ್ಳನ ಕೋಪ ನೆತ್ತಿಗೇರಿತು.

ಕಳ್ಳ " ನೀನೊಬ್ಬ ಯಾವ ಊರಿನ ಬಿಕನಾಸಿ ಮಾರಾಯ, ನಿನ್ನಂತವರೂ ಈ ಲೋಕದಲ್ಲಿ ಇದ್ದಾರೆಯೇ ".

ಅವನು " ನಾನೆಲ್ಲಿದ್ದೇನೆ ,ಇಲ್ಲಿ ಇರುವುದು ಕೇವಲ ನನ್ನ ಶರೀರ, ನನ್ನದೆಲ್ಲ ಅವಳು ನನ್ನನ್ನು ಬಿಟ್ಟು ಹೋಗುವಾಗ ಅವಳೊಟ್ಟಿಗೆ ಹೋಗಿದೆ".

ಕಳ್ಳ " ಐಯ್ಯೊ........  ನೀನೊಬ್ಬ ದೇವದಾಸ, ನನ್ನ ದಿನ ಹಾಳಾಯಿತು, ಇಲ್ಲಿ ಸಿಕ್ಕಿದೆ ನನಗೆ ಮೇಲೆ ಸಿಗ ಬೇಡ ".

ಅವನು "ಆಗಲಿ , ಒಂದು ನೂರು ರೂಪಾಯಿ ಕೊಟ್ಟು ಹೋಗು,  ಒಂದು ಪೆಗ್ ಶರಾಬು ಕುಡಿದು ಅವಳನ್ನು ಮರೆಯಲು ಪ್ರಯತ್ನಿಸುವೆ".

ಕಳ್ಳ ಬೆಚ್ಚಿ ಬಿದ್ದ.

by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...