Thursday, 15 September, 2011

ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಆದೇ ಊರು
ಅದೇ ಜನರು
ಅದೇ ಕಾಡು, ಗುಡ್ಡೆ, ಮರಗಳು
ಅದೇ ಬಯಲು
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಆಡಿ ಓಡಿ ಕುಣಿದಾಡಿದ ಊರು
ನಕ್ಕು ನಲಿದು ಅಲೆದಾಡಿದ ಊರು
ಓದಿ ವಿದ್ಯೆ ಪಡೆದ ಊರು
ಹುಟ್ಟಿ ಬೆಳೆದು ಯೌವನ ಪಡೆದ ಊರು
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ನನಗ್ಯಾಕೆ ಎಲ್ಲರೂ ಹೊಸಬನಂತೆ ನೋಡುತ್ತಿದ್ದಾರೆ ?
ಯಾಕೆ ಆಶ್ಚರ್ಯದ ನೋಟ ನೀಡುತ್ತಿದ್ದಾರೆ ?
ಯಾಕೆ ನನ್ನನ್ನು ಮನೆಯೊಳಗೇ ಕರೆಯುವುದಿಲ್ಲ?
ಯಾಕೆ ನನಗೆ ಬೆಲ್ಲ ನೀರು ಕೊಡುವುದಿಲ್ಲ ?
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಊರಿನಿಂದ ದೂರ ಹೋಗಿ ಎನನ್ನು ಪಡೆದೆ
ಅನಾಮಿಕ ವಸ್ತುಗಾಗಿ ಸುಖ ಶಾಂತಿ ಸೋತೆ
ಇಂದು ನನ್ನವರು ನನ್ನವರಲ್ಲ
ನನ್ನನ್ನು ಬಲ್ಲವರು ಯಾರೂ ಇಲ್ಲ
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಹಳೆ ಮಿತ್ರರೆಲ್ಲ ಅಲ್ಲಿ ಇಲ್ಲಿ, ಇಲ್ಲ ಯಾರೂ ಊರಲ್ಲಿ
ಕಾಗೆ  ವಿಲಾಪಿಸುತಿದೆ ಒಣ ಬಯಲಲ್ಲಿ
ಅಲ್ಪ ಪಕ್ಷಿಗಳು ಕೂಗುತ್ತಿದ್ದಾರೆ ಮರದಲ್ಲಿ
ಭಯಾನಕ ಶಾಂತತೆ ಪಸರಿದೆ ಕಾಡಲ್ಲಿ
ಆದರೆ ನಾನೇಕೆ ಇಲ್ಲಿ ಅಪರಿಚಿತ ?
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment