Friday, 30 September, 2011

ಕ್ಷಣಿಕ ವ್ಯಾಮೋಹ

ಅರಳುವ ಮುನ್ನ
ಹೂವಿನ ಮೊಗ್ಗನ್ನು 
ಕೈಯಿಂದ ಉಜ್ಜಿ 
ಅದರ ಬಾಳನ್ನು ಮುಗಿಸಿ
ಕೈ ಸುಗಂಧಿಸುವವನೇ

ಅದರ ಸುಗಂಧ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಹಣಕಾಗಿ ಹೆಣವಾಗಿ
ದೂರ ಇದ್ದು ಬಾಳಿ
ಮಮತೆಯ ಕೊಂದು
ಮಗುವನ್ನು ದೂರ ಇಟ್ಟು
ನೊಂದುವ ತಾಯಿಯೇ

ಹಣದ ಈ ಮಾಯೆ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಆಡಿ ನಲಿದಾಡಿ
ಅಲ್ಲಿ ಇಲ್ಲಿ ಓಡುವ
ಕೋಳಿಯನ್ನು ಕೊಂದು
ಅದರ ಸಾರನ್ನು
ರುಚಿಸುವವನೇ

ಅದರ ಸವಿ ರುಚಿ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ತನ್ನ ಸ್ವಾರ್ಥಕ್ಕಾಗಿ
ಮಿತ್ರ ಎಂದು ಹೇಳಿ
ಮುಗ್ಧ ಜೀವಿಯನ್ನು
ಬಲು ಸುಲಭವಾಗಿ
ಮೂರ್ಖ ಮಾಡುವವನೇ

ನಿನ್ನ ಸ್ವಾರ್ಥದ ಲಾಭ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಮರವನ್ನು ಕಡಿದು
ನಿಸರ್ಗವನ್ನು ಬೆತ್ತಲೆ ಮಾಡಿ
ತನ್ನ ಮನೆಯನ್ನು
ಸುಂದರವಾಗಿ 
ಅಲಂಕರಿಸುವವನೇ

ಆ  ಪೀಠೋಪಕರಣಗಳು 
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

ನಾನು ಸಣ್ಣ ಹಕ್ಕಿ

ನಾನು ಸಣ್ಣ ಹಕ್ಕಿ
ನನಗೆ ಹಾರಲು ಬಿಡಿ

ಗೂಡಿನ ಏಕಾಂತ ಬಂಧನ
ನನ್ನ ಮನಸ್ಸನು ಕಟ್ಟಿದೆ
ನನಗೆ ಮನದ ಆಸೆ ಪೂರೈಸಲು ಬಿಡಿ

ಹೊರ ಪ್ರಪಂಚ ನೋಡಲು
ನನ್ನ ಕಣ್ಣು ಹಂಬಲಿಸುತಿದೆ
ನನಗೆ ನಿಸರ್ಗದ ಸೌಂದರ್ಯ ನೋಡಲು ಬಿಡಿ

ರೆಕ್ಕೆ ನನ್ನ ಬೆಳೆದಿದೆ
ತನ್ನ ರೂಪವ ಪಡೆದಿದೆ
ನನಗೆ ರೆಕ್ಕೆಯನ್ನು ಬಿಡಿಸುವ ಅವಕಾಶ ಕೊಡಿ

ಆಕಾಶ ನನ್ನನ್ನು ಕರೆಯುತಿದೆ
ತನ್ನ ತೋಳು ತೆರೆದು ನನ್ನನ್ನು ಕಾಯುತಿದೆ
ನನಗೆ ಆಕಾಶದ ಎತ್ತರ ಅಳೆಯಲು ಕೊಡಿ

ನಾನು ಸಣ್ಣ ಹಕ್ಕಿ
ನನಗೆ ಹಾರಲು ಬಿಡಿ
by ಹರೀಶ್ ಶೆಟ್ಟಿ, ಶಿರ್ವ

Thursday, 29 September, 2011

ಕವಿ

ಅವರು ದೊಡ್ಡ ಕವಿ
ನಾನೊಬ್ಬ ದಡ್ಡ ಕವಿ

ಅವರಲಿ ಪದಗಳ ಭಂಡಾರ
ನನಗೆ ಕೆಲವೇ ಪದಗಳ ಆಧಾರ

ಅವರ ಕಾವ್ಯ ಅರ್ಥ ಮಾಡುವವರು ವಿರಳ
ನನ್ನ ಕಾವ್ಯ ಸಾಧರಣ ಸರಳ

ಅವರ ಕಾವ್ಯದಲಿ ಲಹರಿಗಳು
ನನ್ನ ಕಾವ್ಯದಲಿ ವಾಕ್ಯಗಳು

ಅವರ ಕವನದಲಿ ಭಾವಗಳ ಒಳಾರ್ಥ
ನನ್ನ ಭಾವನೆಗಳೆಲ್ಲ ವ್ಯರ್ಥ

ಅವರ ಕವಿತೆಗೆ ತುಂಬಾ ವಿಮರ್ಶಕರು
ನನಗೆ ಕವಿತೆಗೆ ಕೇವಲ ದರ್ಶಕರು

ಅವರ ಪ್ರತಿಕ್ರಿಯೆಗೆ  ಬಹಳ ಬೆಲೆ
ನನ್ನ ಪ್ರತಿಕ್ರಿಯೆಗೆ ಇಲ್ಲ ಬೆಲೆ

ಅವರು ದೊಡ್ಡ ಕವಿ
ನಾನೊಬ್ಬ ದಡ್ಡ ಕವಿ
by ಹರೀಶ್ ಶೆಟ್ಟಿ, ಶಿರ್ವ

ನೋವು

ಎಲ್ಲರಿಗೂ ನೋವು ಇದೆ ಈ ಜಗದಲಿ
ನಿನ್ನ ನೋವನ್ನು ಯಾರಿಗೆ ಹೇಳುವೆ ಇಲ್ಲಿ
ಅವರ ನೋವು ಇದೆ ಅವರಲಿ
ಇದೇ ಅವಸ್ಥೆ ಎಲ್ಲರ ಮನೆಯಲಿ

ಹೇಳುವೆ ನೀ ತನ್ನ ಕಥೆ ಎಲ್ಲರಲಿ 
ಅವರೂ ಮುಳುಗಿದ್ದಾರೆ ಅವರ ವ್ಯಥೆಯಲಿ
ಇದ್ದಾರೆ ಅವರು ನೋವಿನ ಮದ್ದಿನ ಹುಡುಕಾಟದಲಿ
ನಿನ್ನ ಕಥೆ ಕೇಳುವ ಶಕ್ತಿ ಇಲ್ಲ ಅವರ ಕಿವಿಯಲಿ

ನಗಬೇಡ ನೀ ಅನ್ಯರ ತೊಂದರೆಯಲಿ
ಮರೆತು ನಿನ್ನ ನೋವ ಬೆರೆ ನೀ ಅನ್ಯರ ನೋವಲಿ
ಆಧಾರವಾಗು ನೀ ಅವರ ಕಷ್ಟದಲಿ
ನಿನ್ನ ಅನುಕಂಪವ ಮರೆಯಲಾರರು ಅವರು ಜೀವನದಲಿ

ನಿನ್ನ ನೋವನ್ನು ಮರೆಯಲು ಕಲಿ
ಸಹಾಯ ಮಾಡು ಅನ್ಯರ ದುಃಖದಲಿ
ಅವರಿಗೆ ಸುಖ ನೀಡಿ ಸಂತೋಷದಲಿ ನೀ ನಲಿ
ಇದರಿಂದ ಸುಖ ಶಾಂತಿ ನೆಲೆಯುವುದು ನಿನ್ನ ಜೀವನದಲಿ
by ಹರೀಶ್ ಶೆಟ್ಟಿ, ಶಿರ್ವ

Wednesday, 28 September, 2011

ದ್ರೌಪದಿಯ ಯಾಚನೆ

ಕೃಷ್ಣ ಕೃಷ್ಣ
ಎಲ್ಲಿದೆ ನೀ ಕೃಷ್ಣ
ಕರೆಯುತ್ತಿದ್ದಾಳೆ ನಿನ್ನ ಗೆಳತಿ
ಬೇಗ ಬಾ ಕೃಷ್ಣ

ನೋಡು ನೋಡು
ದುಃಶಾಸನನ ದುಸ್ಸಾಹಸ
ತಂದಿದ್ದಾನೆ ಈ ಸಭಾಭವನಕ್ಕೆ
ಎಳೆದು ನನ್ನ ಕೂದಲ

ನೋಡು ನೋಡು
ಅಟ್ಟಹಾಸ ಹಾಕುತ್ತಿದ್ದ ದುರ್ಯೋಧನನನ್ನು
ಕಿರು ನಗೆಯಿಂದ ನೋಡುತ್ತಿದ್ದ
ಅವನ ಗೆಳೆಯ ಕರ್ಣನನ್ನು

ನೋಡು ನೋಡು
ಜೂಜಲ್ಲಿ ನನ್ನನ್ನು ಸೋತ
ಪಾಂಡವರ  ತಳಮಳ
ತಲೆ ತಗ್ಗಿಸಿ ಕೂತಿದ್ದಾರೆ ನಿಶ್ಚಲ

ನೋಡು ನೋಡು
ತುಟಿ ಹೊಲಿದು ಕುಳಿತ
ಕೌರವ ರಾಜ ಧೃತರಾಷ್ಟ್ರರ
ಪುತ್ರ ಮೋಹದ ಜಾಲ

ನೋಡು ನೋಡು
ಭೀಷ್ಮ ಪಿತಾಮಹರನ್ನು
ಅಧರ್ಮವನ್ನು ಅಲಕ್ಷಿಸಿ
ತಿಳಿಸುತ್ತಿದ್ದಾರೆ ಧರ್ಮದ ಬಲ

ನೋಡು ನೋಡು
ವಿಧುರರ ಮನಸ್ಥಿತಿ
ಅವರ ಮಾತು ನೀತಿಯನ್ನು
ಕೇಳುವವರಿಲ್ಲ ಈ ಸಭೆಯಲಿ

ನೋಡು ನೋಡು
ದುಃಶಾಸನ ದುಸ್ಸಾಹಸ
ನನ್ನ ಸೀರೆಯ ಎಳೆಯುತ್ತಿದ್ದಾನೆ
ನನ್ನನ್ನು ನಗ್ನ ಮಾಡಲು ಆತುರನಾಗಿದ್ದಾನೆ

ಮೂಕದರ್ಶಕರಾಗಿದ್ದಾರೆ ಎಲ್ಲರು
ನನ್ನ ಪ್ರಶ್ನೆಗೆ ಉತ್ತರ
ನೀಡುವವರು ಇಲ್ಲ ಯಾರೂ
ಬೇಗ ಬಾ ಕೃಷ್ಣ ನನ್ನನ್ನು ರಕ್ಷಿಸು ಕೃಷ್ಣ

ಕೃಷ್ಣ ಕೃಷ್ಣ
ಎಲ್ಲಿದೆ ನೀ ಕೃಷ್ಣ
ಕರೆಯುತ್ತಿದ್ದಾಳೆ ನಿನ್ನ ಗೆಳತಿ
ಬೇಗ ಬಾ ಕೃಷ್ಣ
ಬೇಗ ಬಾ ಕೃಷ್ಣ ನನ್ನನ್ನು ರಕ್ಷಿಸು ಕೃಷ್ಣ
by  ಹರೀಶ್ ಶೆಟ್ಟಿ , ಶಿರ್ವ

Tuesday, 27 September, 2011

ಮುಂಜಾನೆಯ ಭರವಸೆ

ಹೂವೇ, ತೆರೆ ನಿನ್ನ ದಳಗಳನ್ನು 
ಮೆಲ್ಲ ಮೆಲ್ಲನೆ
ಕರೆ ನಿಸರ್ಗದ ಸೌಂದರ್ಯವನ್ನು 
ಮೆಲ್ಲ ಮೆಲ್ಲನೆ
ಸೆರೆ ಮಾಡು ಬ್ರಹ್ಮಾಂಡವನ್ನು 
ಮೆಲ್ಲ ಮೆಲ್ಲನೆ
ನಿಜ ಮಾಡು  ಕನಸಿನ ಭರವಸೆಯನ್ನು 
ಮೆಲ್ಲ ಮೆಲ್ಲನೆ
ಪಡೆ ನಿತ್ಯ ಹೊಸ ಬಾಳನ್ನು 
ಮೆಲ್ಲ ಮೆಲ್ಲನೆ
ಉದುರಿಸು ಜೀವನದ ರಸವನ್ನು 
ಮೆಲ್ಲ ಮೆಲ್ಲನೆ
ನೋಡು ಮುಂಜಾನೆಯ ಮಂಜು ಕರಗುವುದನ್ನು 
ಮೆಲ್ಲ ಮೆಲ್ಲನೆ
ಇಬ್ಬನಿಯ ಹನಿಯಿಂದ ನಿನ್ನ ಮೈ ಬೆವರಿ ಚೆಲ್ಲು ಪರಿಮಳವನ್ನು 
ಮೆಲ್ಲ ಮೆಲ್ಲನೆ
by ಹರೀಶ್ ಶೆಟ್ಟಿ, ಶಿರ್ವ

ಮನಸ್ಸೇ ನೀನು ಅದ್ಭುತ

ಮನಸ್ಸೇ ನೀನು ಅದ್ಭುತ
ನಿನ್ನಿಂದಲೇ ಸುಖ, ನಿನ್ನಿಂದಲೇ ದುಃಖ
ನಿನ್ನಿಂದಲೇ ಆಸೆ , ನಿನ್ನಿಂದಲೇ ದುರಾಸೆ
ನಿನ್ನಿಂದಲೇ ಕೋಪ, ನಿನ್ನಿಂದಲೇ ತಾಪ

ಮನಸ್ಸೇ ನೀನು ಅದ್ಭುತ
ನಿನ್ನಿಂದ ಸಂಸಾರ, ನಿನ್ನಿಂದ ಮೋಕ್ಷ
ನಿನ್ನಿಂದ  ಸ್ವರ್ಗ, ನಿನ್ನಿಂದ ನರಕ
ನಿನ್ನಿಂದ ಬಂಧನ,ನಿನ್ನಿಂದ ಮುಕ್ತ

ಮನಸ್ಸೇ ನೀನು ಅದ್ಭುತ
ನೀನೇ ಬೆಳಕು, ನೀನೇ ಅಂಧಕಾರ
ನೀನೇ ಜನ್ಮ , ನೀನೇ ಮೃತ್ಯು
ನೀನೇ ಪಾಪ , ನೀನೇ ಪುಣ್ಯ

ಮನಸ್ಸೇ ನೀನು ಅದ್ಭುತ
ನಿನ್ನದೇ ಲೀಲೆ,ನಿನ್ನದೇ ಕಲ್ಪನೆ
ನಿನ್ನದೇ ಆಚಾರ, ನಿನ್ನದೇ ವಿಚಾರ
ನಿನ್ನದೇ ಗೆಲುವು ,ನಿನ್ನದೇ ಸೋಲು
by ಹರೀಶ್ ಶೆಟ್ಟಿ, ಶಿರ್ವ

Monday, 26 September, 2011

ಶಾಂತಿ

ನಾನು ಕೇಳಿದೆ ಶಾಂತಿಗೆ
" ಎಲ್ಲಿ ಹೋದರು ನಿನ್ನ ವಾಸ ಕಾಣುದಿಲ್ಲ
ನಿನ್ನನ್ನು ಹುಡುಕಲು ಹಲವರು ಅಲ್ಲಿ ಇಲ್ಲಿ ಅಲೆದರು
ನಿನಗಾಗಿ ತಪ್ಪಸ್ಸು ಮಾಡಿ ಸೋತರು
ನಿನ್ನ ನೆಲೆ ಎಲ್ಲಿ?
ಶಾಂತಿ ಹೇಳಿತು ನಕ್ಕು
"ನನ್ನ ನೆಲೆ ನಿನ್ನಲ್ಲಿಯೇ
ನಿನ್ನ  ಹೃದಯದಲ್ಲಿ
ನಿನ್ನ ಅಹಂ ಅಳಿಸಿದರೆ 
ನಿನ್ನ ಆಸೆ ನಿಲ್ಲಿಸಿದರೆ
ನಿನ್ನ ಹೃದಯದಲಿ ಪ್ರೀತಿಯನ್ನು ನೆಲೆಸಿದರೆ
ನಿನ್ನ ಆತ್ಮದಲಿ ಸಂತೋಷ ತುಂಬಿಸಿದರೆ
ನನ್ನನ್ನು ನೀನು ನಿನ್ನಲ್ಲಿಯೇ ಕಾಣುವೆ
ನಿನ್ನ ಮನೆಯಲ್ಲಿಯೇ ನಾ ನೆಲೆಸುವೆ"
by ಹರೀಶ್ ಶೆಟ್ಟಿ, ಶಿರ್ವ

ವಿಚ್ಛೇದನ

ಇಬ್ಬರೂ ನಿಂತಿದರು
ಅವನು ಆ ಕಡೆ, ಇವಳು ಈ ಕಡೆ
ಚಿಕ್ಕ ಮಗು ಪಕ್ಕದಲಿ ಕೂತಿದ

ಅವನ ಮುಖ ಬಾಡಿತು
ಅವನು ಚಿಂತಿತನಾಗಿದ್ದ
ಅವನ ಮನಸ್ಸಲಿ ವೇದನೆ

ಅವಳು ನನ್ನನ್ನು ಬಿಟ್ಟು ಹೋಗುವಳೇ?
ಅವಳು ನನ್ನಿಂದ ಪ್ರತ್ಯೇಕವಾಗುವುವಳೇ ?
ಅವಳು ನನ್ನನ್ನು ಕ್ಷಮಿಸಲಾರಳೇ ?

ಅವಳ ಮನಸ್ಸಲಿ ಕೋಪ 
ಅವಳು ಮೌನವಾಗಿದ್ದಳು
ಅವಳ ಮನಸ್ಸಿಗೆ ನೋವು

ಯಾವುದಕ್ಕೂ ಒಂದು ಮಿತಿ ಇಲ್ಲವೇ ?
ನಾನೇನು ಒಂದು ಗೊಂಬೆಯೇ ?
ನನ್ನದು ಅಸ್ಥಿತ್ವವಿಲ್ಲವೇ ?

ಚಿಕ್ಕ ಮಗು ಎದ್ದು ಅವರಲ್ಲಿ ಬಂದ
ಅಮ್ಮ ನನಗೆ ನೀನು ಬೇಕು
ಅಪ್ಪ ನನಗೆ ನೀನೂ ಬೇಕು

ಇಬ್ಬರೂ ಒಬ್ಬರನೊಬ್ಬರನ್ನು ನೋಡಿದರು
ನಾವು ಮಾಡುವುದು ಸರಿಯೇ ?
ನಮ್ಮಿಂದ ನಮ್ಮ ಮಗುವಿಗೆ ಶಿಕ್ಷೆ ಸರಿಯೇ ?

ನಮ್ಮ ತಪ್ಪಿಗೆ ನಮ್ಮ ಮಗನೆ ಹೊಣೆ ?
ನಮ್ಮ ನಿರ್ಣಯದಿಂದ ಆಗುವುದು ಅವನ ಭವಿಷ್ಯದ ಕೊನೆ
ಬೇಡ ಬೇಡ ನಮಗೆ ಈ ವಿಚ್ಛೇದನೆ ?
by ಹರೀಶ್ ಶೆಟ್ಟಿ, ಶಿರ್ವ

Sunday, 25 September, 2011

ನನಗೆ ಸುಧಾಮನಾಗುವ ಇಚ್ಛೆ

ನನಗೆ ಸುಧಾಮನಾಗುವ ಇಚ್ಛೆ
ನನಗೆ ಬೇಡ ಕೃಷ್ಣನ ಪಟ್ಟ

ನನಗೆ ಬೇಡ ಮೊಸರು
ನನಗೆ ಬೇಡ ಹಾಲು
ನನಗಿಲ್ಲ ಇದನೆಲ್ಲ ತಿನ್ನುವ ಆಸೆ

ನನಗೆ ಬೇಡ ಅರಮನೆ
ನನಗೆ ಬೇಡ ವಜ್ರ ವೈಡೂರ್ಯ
ನನಗಿಲ್ಲ ಕಿರೀಟದ ಬಯಕೆ

ನನಗೆ ಬೇಡ ರಾಧೆ
ನನಗೆ ಬೇಡ ಸುಭದ್ರಾ ,ಸತ್ಯಭಾಮ
ನನಗಿಲ್ಲ ಪ್ರೀತಿಯ ಅಭಿಲಾಷೆ

ನನಗೆ ಬೇಕು ಕೃಷ್ಣನ ಮೈತ್ರಿ
ನನಗೆ ಬೇಕು ಕೃಷ್ಣನ ಭಕ್ತಿ
ನನಗೆ ಕೃಷ್ಣನ ದಾಸನಾಗುವ ಆಸೆ

ನನಗೆ ಸುಧಾಮನಾಗುವ ಇಚ್ಛೆ
ನನಗೆ ಬೇಡ ಕೃಷ್ಣನ ಪಟ್ಟ
by ಹರೀಶ್ ಶೆಟ್ಟಿ, ಶಿರ್ವ

ಶಾಲೆಯ ದಿನಗಳು

ನೆನಪಾಗುತ್ತದೆ ಆ ಶಾಲೆಯ ದಿನಗಳು
ಮರೆಯಲಾರದ ಹಲವು ಪ್ರಸಂಗಗಳು
ಜೀವನದ ಪ್ರಮುಖ ಆ ಕ್ಷಣಗಳು

ಬಹುಮೂಲ್ಯ ಸೊತ್ತು ಆ ನೆನಪುಗಳು
ನಿಚ್ಚಳ ನಿಷ್ಕಪಟ ಮನಗಳು
ಪವಿತ್ರ ಪಾವನ ಸಂಭಂದಗಳು

ಅಮೂಲ್ಯ ಶಾಲೆಯ ಗೆಳೆತನಗಳು 
ಸುಂದರ ಸಿಹಿ ನೆನಪಿನ ಕಟ್ಟುಗಳು
ಮುಗ್ಧ  ಹೃದಯಗಳ ಬಂಧನಗಳು 

ಗೊತ್ತಿಲ್ಲ ಅವರಿಗೆ ಧರ್ಮಗಳು 
ಗೊತ್ತಿಲ್ಲ ಅವರಿಗೆ ಜಾತಿಗಳು 
ಗೊತ್ತಿಲ್ಲ ಅವರಿಗೆ ಸಮಾಜದ ಪರಂಪರೆಗಳು

ಜೀವನದಲಿ ಆಯಿತು ಬದಲಾವಣೆಗಳು
ದೂರವಾದರು ಎಲ್ಲ ಗೆಳೆಯರ ತಂಡಗಳು
ಅವರ ಅವರ ಜೀವನದ ಪ್ರತ್ಯೇಕ ಗುರಿಗಳು

ಆದರೆ ಈಗಲೂ ಅವರು ಸಿಕ್ಕಿದರೆ ಪರಮಾನಂದ
ಅವರನ್ನು ಕಂಡರೆ ಎಲ್ಲಿಲ್ಲದ ಆನಂದ
ಆ ಶಾಲೆಯ ದಿನಗಳೇ ಬಲು ಚಂದ
by  ಹರೀಶ್ ಶೆಟ್ಟಿ, ಶಿರ್ವ

Saturday, 24 September, 2011

ವಾಸ

ನನ್ನ
ಹೃದಯದಲಿ ನಿನ್ನದೇ
ವಾಸವಿತ್ತು
ಈಗಲೂ......
ತುಂಡಾದ ಹೃದಯದಲಿ
ನಿನ್ನದೇ ವಾಸ
by ಹರೀಶ್ ಶೆಟ್ಟಿ, ಶಿರ್ವ

ಸಂಕ್ಷಿಪ್ತ

ಸಂಕ್ಷಿಪ್ತ
--------------
ಹುಟ್ಟು ಸಾವು
ಇದರ ಮಧ್ಯೆ ಇರುವ ಅವಧಿಯೇ ಜೀವನ ಕಥಾ
ಒಳ್ಳೆ ಮನುಷ್ಯನಾಗಿ ಬಾಳುವವನಿಗೆ ಗೆಲುವು ನಿಶ್ಚಿತ
ದುಷ್ಟ ಪ್ರಕೃತಿಯುಳ್ಳ ಮನುಷ್ಯನಿಗೆ ಸೋಲು ಖಂಡಿತ
ಇದೇ ಜೀವನದ ಸಂಕ್ಷಿಪ್ತ
by ಹರೀಶ್ ಶೆಟ್ಟಿ, ಶಿರ್ವ

Friday, 23 September, 2011

ಕಳ್ಳ ಕವಿ

ಭಾವನೆಗಳು ಕೇಳಿತು ಕವಿಯನ್ನು
"ನೀ ಕದಿಯುವೆ ಯಾವಾಗಲು ನನ್ನನ್ನು
ಮನಸ್ಸಲಿ ಸಾಕಿ ಬೆಳೆಸಿ ಚೆಲ್ಲುವೆ ಹಾಳೆಯಲಿ ಅದನ್ನು
ಹೇಳು ಏಕೆ ನೀ ಕದಿಯುವೆ ನನ್ನನ್ನು ?

ಕವಿ ಹೇಳಿದ ನಕ್ಕು
"ಎಲೈ ಮನಸ್ಸಲಿ ಹುಟ್ಟುವ  ಭಾವನೆಯೇ
ನಿನ್ನ ಜನ್ಮ ಆಗುವುದು ನನ್ನಿಂದಲೇ
ನೀನು ಬೆಳೆಯುವೆ ನನ್ನ ಮನಸ್ಸಲಿ
ನಿನ್ನನ್ನು ಹಾಳೆಯಲಿ ಸುಂದರವಾಗಿ ಬರೆದು
ಅನುಭವದ ಮಾತನ್ನು ಹಂಚುವೆ ಎಲ್ಲರಲ್ಲಿ
ಅದನ್ನು ಓದಿ ಜನರು ಆನಂದಿಸಲಿ , ನಗಲಿ, ಅಳಲಿ
ನನ್ನಿಂದ ತಿಳಿಯಲಿ ಜೀವನದ ಹಲವು ಸತ್ಯವನ್ನು
ನನ್ನಿಂದಲೂ ಜನರು ಪಡೆಯಲಿ ಕಿಂಚಿತ ಜ್ಞಾನವನ್ನು "
by ಹರೀಶ್ ಶೆಟ್ಟಿ, ಶಿರ್ವ

ಜೀವನ

ಎಲ್ಲಿದೆ ನನ್ನ ಜೀವನ
ಹುಡುಕಿ ಹುಡುಕಿ ಸೋತು ಹೋದೆ
ಸಿಕ್ಕಿದು ಕೇವಲ ಸಂಸಾರದ ಬಂಧನ
ನನ್ನನ್ನು ನಾನು ಹುಡುಕುತ
ಕಳೆದೆ ಈ ಜೀವನ
ಕಾಣಲಿಲ್ಲ ನನ್ನನ್ನು ಈ ಜೀವನದ ಪ್ರಯಾಣದಲಿ
ಕಂಡೆ ನಾ ನನಗೆ ಬೇಕಾಗುವ ಜೀವನ ಕೇವಲ ಕನಸಲಿ
ಕಳೆಯಿತು ಎಲ್ಲ ಜೀವನ ಕನಸು ನನಸಾಗುವ ಆಸೆಯಲಿ
by ಹರೀಶ್ ಶೆಟ್ಟಿ, ಶಿರ್ವ

ಹಕ್ಕಿಗಳು

ಚಿಲಿಪಿಲಿ ಚಿಲಿಪಿಲಿ ಹಕ್ಕಿಗಳು
ಹಾಡುತಿವೆ ಹಾಡುತಿವೆ

ಪಿಳಿ ಪಿಳಿ ಕಣ್ಣನ್ನು ತೆರೆದು
ನೋಡುತಿವೆ ನೋಡುತಿವೆ

ಅಲ್ಲಿ ಇಲ್ಲಿ ಹಾರಿ ಆಹಾರ
ಹುಡುಕುತಿವೆ ಹುಡುಕುತಿವೆ

ಮುಂಜಾನೆ ಆಯಿತೆಂದು ಸೂಚನೆ
ಕೊಡುತಿವೆ ಕೊಡುತಿವೆ

ಮುಂಜಾನೆಯ ಶುಭಾಶಯಗಳ
ನೀಡುತಿವೆ ನೀಡುತಿವೆ
by ಹರೀಶ್ ಶೆಟ್ಟಿ, ಶಿರ್ವ

Wednesday, 21 September, 2011

ಯುವ ಚಿಂತನೆ

ನನಗೆ ಬೇರೆ ಯಾರು ?
ನೀವಿಲ್ಲದೆ ನಾನು ಯಾರು?
ಪ್ರೀತಿಯಲಿ ಏಕೆ ಕರಾರು ?

ನಿಮ್ಮಿಂದಲೇ ನನ್ನ ಜನ್ಮ ಅಲ್ಲವೇ ?
ನೀವೇ ನನ್ನ ಬಾಳಿನ ದೇವರಲ್ಲವೇ?
ಸ್ವಲ್ಪ ನನ್ನ ತಪ್ಪನ್ನು ಸಹಿಸಬೇಕಲ್ಲವೇ? 

ಕೋಪ ನಿಮಗೆ ಬರುದಿಲ್ಲವೇ ?
ವಿಚಾರದಲಿ ಮತಬೇಧ ಸಹಜವಲ್ಲವೇ ?
ನಿಮ್ಮಲ್ಲಿ ಯಾವುದೇ ದೋಷಗಳಿಲ್ಲವೇ  ?

ನಿಮ್ಮ ಪ್ರತಿ ಮಾತಿಗೆ ನಾ ಒಪ್ಪೋಲ್ಲ
ನಿಮ್ಮದೇ ಕೇಳಬೇಕೆಂದು ಏನು ನಿಯಮವಿಲ್ಲ
ನನ್ನ ಮಾತೂ ನೀವು ಕೇಳಬೇಕಲ್ಲವೇ?

ನೀವು ತಿಳಿದಂತೆ ನಾನು ಇನ್ನೂ ಸಣ್ಣ ಬಾಲಕನಲ್ಲ 
ಹೌದು ,ಪ್ರಪಂಚದ ಕೆಲ ವ್ಯವಹಾರಗಳು ನನಗೆ ಇನ್ನೂ ತಿಳಿದಿಲ್ಲ
ಆದರೆ ನೀವು ನನಗೆ ಸಹಕರಿಸ ಬೇಕಲ್ಲವೇ ?

ನನ್ನನ್ನು ಸ್ವಲ್ಪ ಅರ್ಥ ಮಾಡಿ ಕೊಳ್ಳಿ
ನಾನು ಮಾಡುವ  ಕಾರ್ಯವನ್ನು ಸ್ವಲ್ಪ ನಂಬಿ
ನಿಮ್ಮ ಸಂತೋಷವೇ ನನ್ನ ಗುರಿ ಆಲ್ಲವೇ ?
by  ಹರೀಶ್ ಶೆಟಿ, ಶಿರ್ವ

ಒತ್ತಡ

ಒತ್ತಡ ಒತ್ತಡ
ಎಲ್ಲಿ ನೋಡಿದರು ಒತ್ತಡ

ಗಂಡನಿಗೆ ಹೆಂಡತಿಯ ಒತ್ತಡ
ಹೆಂಡತಿಗೆ ಗಂಡನ ಒತ್ತಡ
ಮಕ್ಕಳಿಗೆ ವಿದ್ಯಾಬ್ಯಾಸದ ಒತ್ತಡ
ಇದೇ ದಾಂಪತ್ಯ ಜೀವನದ ಒತ್ತಡ

ಪೊಲೀಸರಿಗೆ ಕಳ್ಳರ ಒತ್ತಡ
ಕಳ್ಳರಿಗೆ ಕಾನೂನಿನ ಒತ್ತಡ
ಕಾನೂನಿಗೆ ಸರಕಾರದ ಒತ್ತಡ
ಇದೇ ನಮ್ಮ ಪೋಲೀಸ ಖಾತೆಯ ಒತ್ತಡ

ರಾಜಕಾರಣಿಯರಿಗೆ ಚುನಾವಣೆಯ ಒತ್ತಡ
ಗೆದ್ದು  ಬಂದ ಮೇಲೆ ಮಂತ್ರಿ ಆಗುವ ಒತ್ತಡ
ಮಂತ್ರಿ ಆದ ಮೇಲೆ ಭ್ರಷ್ಟಾಚಾರದ ಒತ್ತಡ
ಇದೇ ನಮ್ಮ ಸರಕಾರದ ಒತ್ತಡ

ಡಾಕ್ಟರರಿಗೆ ರೋಗಿಗಳ ಒತ್ತಡ
ರೋಗಿಗಳಿಗೆ ರೋಗದ ಒತ್ತಡ
ಮದ್ದು ತಿಂದು ಬದುಕುವ ಒತ್ತಡ
ಇದೇ ನಮ್ಮ ಆಸ್ಪತ್ರೆಯ ಒತ್ತಡ

ಜನ್ಮ ಮರಣದ  ಮಧ್ಯೆ ಇದ್ದ ಅವದಿಯಲಿ ಎಷ್ಟೊಂದು ಒತ್ತಡ
ಆದರು ಮನುಜ ಕಟ್ಟುತ್ತಾನೆ ಕನಸಿನ ಕಟ್ಟಡ
ಬೇಕೇ ಈ ಎಲ್ಲ ಒತ್ತಡ ?
ಒಂದು ದಿವಸ ತುಂಡಾಗಲಿದೆ ಕಟ್ಟಿದ ಎಲ್ಲ ಕಟ್ಟಡ
by  ಹರೀಶ್ ಶೆಟ್ಟಿ, ಶಿರ್ವ

Tuesday, 20 September, 2011

ಕಲ್ಲೊಂದು ಬಿದ್ದಿತು

ಕಲ್ಲೊಂದು ಬಿದ್ದಿತು
ನಾಲ್ಕು ರಸ್ತೆಯ ಮಧ್ಯದಲಿ

ಪುಟ್ಟ ಹುಡುಗನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅಲ್ಲಿ ಇಲ್ಲಿ ಎಸೆದು ಆಡಿಕೊಂಡ
ಆಡುತ ಆಡುತ ಕಾಲಿನಿಂದ ಮುಂದೂಡಿ
ನಲಿಯುತ ಕುಣಿಯುತ ಹೊರಟು ಹೋದ

ಭಕ್ತ ನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅದರಲ್ಲಿ ಅವನು ದೇವರನ್ನು ಕಂಡ
ಭಕ್ತಿ ಭಾವದಿಂದ ಅದನ್ನು ತೊಳೆದು ಪೂಜಿಸಿ
ತೃಪ್ತನಾಗಿ ಸಂತೋಷದಿಂದ ಹೊರಟು ಹೋದ

ಜ್ಞಾನಿ ಒಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಇದು ಬಹುಮೂಲ್ಯ ಕಲ್ಲೆಂದು ಕೊಂಡ
ಅದನ್ನು ಮೂಸಿ ನೋಡಿ ವಾಸನೆಯಿಂದ ಎಸೆದು
ನೊಂದು ಕೊಂಡು ಹೊರಟು ಹೋದ

ಮೂರ್ಖನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅದನ್ನು ಅವನು ಕತ್ತೆಯ ಕುತ್ತಿಗೆಗೆ ಕಟ್ಟಿ ಕೊಂಡ
ಅದರಲ್ಲಿ ಕುಳಿತು ಮೆರವಣಿಗೆಯಿಂದ
ನಗು ನಗುತ ಹೊರಟು ಹೋದ
by ಹರೀಶ್ ಶೆಟ್ಟಿ ,ಶಿರ್ವ

Monday, 19 September, 2011

ಭಾರ ಹಗುರ

ನಿನ್ನಲ್ಲಿ
ದ್ವೇಷ
ತುಂಬಿ
ನೀ
ಆದೆ
ತುಂಬಾ
ಭಾರ
ಅದಕ್ಕೆ .....
ನನ್ನ
ದೃಷ್ಟಿಯಲಿ
ನೀ
ಆದೆ
ತುಂಬಾ
ಹಗುರ
by  ಹರೀಶ್ ಶೆಟ್ಟಿ, ಶಿರ್ವ

ದೂರ

ನನ್ನಿಂದ
ದೂರ
ಇರು
ಎಂದು
ಹೇಳಿದಕ್ಕೆ
ಇಷ್ಟೇ
ಸಿಟ್ಟು ...
ನಿಜವಾಗಿ
ದೂರ
ಹೋದೆ
ಅಲ್ಲವೇ
ನನ್ನನ್ನು
ಬಿಟ್ಟು
by ಹರೀಶ್ ಶೆಟ್ಟಿ, ಶಿರ್ವ

ಪ್ರಕೃತಿಯ ಕೋಪ

ಪ್ರಕೃತಿಯ ಕೋಪ
ಇದು ವಿನಾಶ ಸೂಚಕ
ಪ್ರವಾಹ, ಬರ, ಕ್ಷಾಮ,ಭೂಕಂಪ
ಕೋಪಿಸಿದರೆ ಇಲ್ಲ ಅನುಕಂಪ

ಪ್ರಕೃತಿ ನಮಗೆ ನೀಡುವಾಗ
ಆ ಕೊಡುಗೆಗೆ ನಮ್ಮಲ್ಲಿಲ್ಲ ಪಾತ್ರೆ ಆಗ
ಮಳೆಯಿಂದಾಯಿತು ನಮಗೆ ಉಪಕಾರ
ಸಾಧನೆ ಇಲ್ಲದೆ ಅದೂ ಕಸಿದುಕೊಂಡಿತು ನಮ್ಮ ಆಹಾರ

ಕಾಡಿನಲ್ಲಿ ಇಲ್ಲ ಮರಗಳು
ವಾಹನದ ವಿಷಪೂರಿತ ಹೊಗೆಗಳು
ಕಾರ್ಖಾನೆಯಿಂದ ನದಿಗೆ ಸೇರುವ ಕಸಗಳು
ಪರಮಾಣು ಪರೀಕ್ಷೆಯಿಂದ ಹೊರಡುವ ವಿಷಗಳು

ಮನುಷ್ಯನ ಸ್ವಾರ್ಥದ ಪರಿಣಾಮ
ಮಾನವನ ಮೂರ್ಖತನದಿಂದ ಆಗುತಿದೆ ಅಧರ್ಮ
ತಪ್ಪಿದೆ ಪ್ರಕೃತಿಯ ಸಂತುಲನ
ಹೆಚ್ಚಾಗುವ ಉಷ್ಣದಿಂದ ಏರುತಿದೆ ತಾಪಮಾನ

ಪ್ರಕೃತಿಯೇ ನಮ್ಮ ಜೀವನ
ಹಾಳು ಮಾಡಬೇಡಿ ಪರ್ಯಾವರಣ
ಕೆಡಿಸ ಬೇಡಿ ನಿಸರ್ಗದ ವಾತಾವರಣ 
ಪ್ರಕೃತಿಯನ್ನು ರಕ್ಷಿಸುವುದೇ ನಮ್ಮ ಧರ್ಮ
by ಹರೀಶ್ ಶೆಟ್ಟಿ, ಶಿರ್ವ

Sunday, 18 September, 2011

ಪ್ರೀತಿಯ ಸೀಮೆ

ಹೇಗೋ
ನಿನ್ನಿಂದ ಪ್ರೀತಿ ಆಯಿತು
ಮರೆತೆ ಎಲ್ಲ
ಜೀವನ ಬದಲಾಯಿತು

ನಿನ್ನ ಸಹವಾಸ
ನನ್ನ ಸ್ವಭಾವವಾಯಿತು 
ದಿನ ರಾತ್ರಿ
ನಿನ್ನದೇ ಸ್ಮರಣೆ ಆಯಿತು

ಮೆಲ್ಲ ಮೆಲ್ಲನೆ  
ನಿನ್ನ ಕಪಟ ನೀತಿ ಶುರುವಾಯಿತು
ಆದರೆ ಪ್ರೀತಿಯಲಿ
ನನ್ನ ಮನ ಸೋತಾಯಿತು

ದೇಹಕ್ಕೆ ದೇಹ ಸೇರಿತು
ಕೌಮಾರ್ಯ ಮಲಿನವಾಯಿತು
ಪ್ರೀತಿ  ತನ್ನ
ಪರಮ ಸೀಮೆ ದಾಟಿ ಆಯಿತು

ಕೆಲವು ಸಮಯ ಪ್ರೀತಿಯ
ಇದೇ ಆಟವಾಯಿತು
ಜೀವ ಮನಸ್ಸಿಗೆ 
ಇದೇ ಇಷ್ಟವಾಯಿತು

ನಂತರ ಪ್ರೀತಿ ಉಳಿಯಲಿಲ್ಲ
ಸಹವಾಸ ಕಡಿಮೆ ಆಯಿತು
ಪ್ರೀತಿಯ ಸ್ಥಾನದಲಿ
ಕೇವಲ ಔಪಚಾರಿಕತೆ ಉಳಿಯಿತು
by  ಹರೀಶ್ ಶೆಟ್ಟಿ, ಶಿರ್ವ

ಸವಾಲು

ಮಗನೇ
ನಿನ್ನ
ನನ್ನ
ಮಧ್ಯೆ
ಯಾವ
ಸವಾಲು...
ನಿನ್ನಿಂದ
ಸೋತರು
ಅದು
ನನ್ನದೇ
ಗೆಲುವು
by ಹರೀಶ್ ಶೆಟ್ಟಿ ಶಿರ್ವ

Saturday, 17 September, 2011

ಮಳೆ

ನನ್ನ
ಕಣ್ಣಿರ ಮಳೆ
ಮುಗಿದ
ಮೇಲೆ
ಹೋಗು
ಪ್ರಿಯೆ.....
ಈಗ
ಹೇಗೆ
ಹೋಗುವಿ
ಮಳೆ
ತುಂಬಾ
ಇದೆ
--------
ನಿನ್ನ
ಪ್ರೀತಿಯ
ಮಳೆ
ಸತತ
ನನ್ನ
ಮೇಲೆ
ಬೀಳುತಿತ್ತು....
ನನ್ನದೇ
ಹೃದಯ
ಭೂಮಿ
ಬಂಜರವಾಗಿತ್ತು
ನನಗೆ
ಅರಿವಿರಲಿಲ್ಲ
----------
ಯಾರೋ
ಕೇಳಿದರು
ನೀ
ನೋಡಿದಿಯೇ
ಮಳೆ
ಜೋರಾದ  ?
ನಾನು
ಹೇಳಿದೆ
ಹೌದು
ನನ್ನ
ಅಗಲಿಕೆಯಿಂದ
ನನ್ನ
ಪ್ರೇಯಸಿಯ
ಕಣ್ಣಿಂದ
ಸುರಿದ
ಕಣ್ಣಿರ
ಮಳೆಯೇ
ಜೋರಾದ

by ಹರೀಶ್ ಶೆಟ್ಟಿ, ಶಿರ್ವ

ಸಂಹಾರ

ಇನ್ನು
ಬೇಡ
ನನಗೆ
ನಿನ್ನ
ಯಾವುದೇ
ಉಪಕಾರ...
ನಿನ್ನ
ಪ್ರೀತಿಯ
ಅಪಕಾರದಿಂದಲೇ
ಆಗಿದೆ
ನನ್ನ
ಸಂಹಾರ
by ಹರೀಶ್ ಶೆಟ್ಟಿ, ಶಿರ್ವ

ಎಳೆ ವಯಸ್ಸಿನ ಪ್ರೇಮ

ಆಚೆ ನಿನ್ನ ಮನೆ
ಈಚೆ ನನ್ನ ಮನೆ
ಜಗಳದಿಂದ ಪ್ರಾರಂಭವಾಗಿ
ಪ್ರೀತಿ ಆಯಿತು ಸುಮ್ಮನೆ

ಕೈಯ ಕಂಗಳ ಸನ್ನೆ
ಮೊದಲ ಪ್ರೀತಿಯ ಪ್ರಚೋದನೆ
ಮೋಜು ಮೋಜಿನಲ್ಲಿ ಆಡಿ ಓಡಿ
ಪ್ರೀತಿ ಏರಿತು ಮೆಲ್ಲನೆ

ಮುಗ್ಧ ಪ್ರೇಮದ ತಿಳಿಗೇಡಿತನೆ
ಕಟ್ಟು ಕನಸಿನ ಅರಮನೆ
ಸ್ವಪ್ನ ಲೋಕದಲಿ ತೇಲಿ
ಪ್ರೀತಿ ಮೆರೆಯುವ ಕಲ್ಪನೆ

ಸಮಾಜದ ದ್ವೇಷ, ಅಡಚಣೆ
ಪೋಷಕರ ಬಲ ಬಂಧನೆ 
ಎಳೆ ವಯಸ್ಸಿನ ಪ್ರೇಮ ಪ್ರಮಾದವೆಂದು
ಪ್ರೀತಿ ತಲುಪಿತು ಕೊನೆ
by ಹರೀಶ್ ಶೆಟ್ಟಿ , ಶಿರ್ವ

Friday, 16 September, 2011

ಪ್ರೀತಿಯಲಿ

ಅವನ
ಹೃದಯ
ಚೂರು ಚೂರಾಯಿತೆಂದು
ಕೇಳಿ
ಆಗಲಿಲ್ಲ
ನನಗೆ
ಆಘಾತ
ನನಗೀಗ....
ಯಾರಾದರು
ಪ್ರೀತಿಯಲಿ
ಯಶಸ್ವಿಯಾದರೆ
ಆಗುತ್ತದೆ
ಆಶ್ಚರ್ಯ 
by ಹರೀಶ್ ಶೆಟ್ಟಿ, ಶಿರ್ವ

Thursday, 15 September, 2011

ಕಳೆದುಕೊಂಡ ಪ್ರೀತಿ

ನಿನ್ನನ್ನು
ನಾ
ಪ್ರೀತಿಸುವುದಿಲ್ಲ
ನಮ್ಮಲ್ಲಿ
ಕೇವಲ
ಸ್ನೇಹ ಇರಲಿ 
ಎಂದು
ಹೇಳಿದಕ್ಕೆ
ನೀ
ಸಂತೋಷದಿಂದ
ಒಪ್ಪಿಕೊಂಡೆ
ಆದರೆ .......
ನಿನ್ನ
ಕಿರು ನಗೆಯ
ಹಿಂದೆ
ಅಡಗಿದ
ನೋವನ್ನು
ನಾ
ಕಾಣದೆ ಹೋದೆ
by  ಹರೀಶ್ ಶೆಟ್ಟಿ, ಶಿರ್ವ

ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಆದೇ ಊರು
ಅದೇ ಜನರು
ಅದೇ ಕಾಡು, ಗುಡ್ಡೆ, ಮರಗಳು
ಅದೇ ಬಯಲು
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಆಡಿ ಓಡಿ ಕುಣಿದಾಡಿದ ಊರು
ನಕ್ಕು ನಲಿದು ಅಲೆದಾಡಿದ ಊರು
ಓದಿ ವಿದ್ಯೆ ಪಡೆದ ಊರು
ಹುಟ್ಟಿ ಬೆಳೆದು ಯೌವನ ಪಡೆದ ಊರು
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ನನಗ್ಯಾಕೆ ಎಲ್ಲರೂ ಹೊಸಬನಂತೆ ನೋಡುತ್ತಿದ್ದಾರೆ ?
ಯಾಕೆ ಆಶ್ಚರ್ಯದ ನೋಟ ನೀಡುತ್ತಿದ್ದಾರೆ ?
ಯಾಕೆ ನನ್ನನ್ನು ಮನೆಯೊಳಗೇ ಕರೆಯುವುದಿಲ್ಲ?
ಯಾಕೆ ನನಗೆ ಬೆಲ್ಲ ನೀರು ಕೊಡುವುದಿಲ್ಲ ?
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಊರಿನಿಂದ ದೂರ ಹೋಗಿ ಎನನ್ನು ಪಡೆದೆ
ಅನಾಮಿಕ ವಸ್ತುಗಾಗಿ ಸುಖ ಶಾಂತಿ ಸೋತೆ
ಇಂದು ನನ್ನವರು ನನ್ನವರಲ್ಲ
ನನ್ನನ್ನು ಬಲ್ಲವರು ಯಾರೂ ಇಲ್ಲ
ಆದರೆ ನಾನೇಕೆ ಇಲ್ಲಿ ಅಪರಿಚಿತ ?

ಹಳೆ ಮಿತ್ರರೆಲ್ಲ ಅಲ್ಲಿ ಇಲ್ಲಿ, ಇಲ್ಲ ಯಾರೂ ಊರಲ್ಲಿ
ಕಾಗೆ  ವಿಲಾಪಿಸುತಿದೆ ಒಣ ಬಯಲಲ್ಲಿ
ಅಲ್ಪ ಪಕ್ಷಿಗಳು ಕೂಗುತ್ತಿದ್ದಾರೆ ಮರದಲ್ಲಿ
ಭಯಾನಕ ಶಾಂತತೆ ಪಸರಿದೆ ಕಾಡಲ್ಲಿ
ಆದರೆ ನಾನೇಕೆ ಇಲ್ಲಿ ಅಪರಿಚಿತ ?
by  ಹರೀಶ್ ಶೆಟ್ಟಿ, ಶಿರ್ವ

Wednesday, 14 September, 2011

ತುಂಬಿ ಬಂದ ಕಣ್ಣು

ನೀನೆ
ಹೇಳುತ್ತಿದ್ದಿ
ಅಲ್ಲವೇ 
ಕಣ್ಣು ತುಂಬಾ
ನೋಡು
ನನ್ನನ್ನೆಂದು
ಈಗ
ಕಣ್ಣು ತುಂಬಿ
ಬರುತ್ತದೆ 
ಆದರೆ
ನೀನು
ಕಾಣುವುದಿಲ್ಲ
by ಹರೀಶ್ ಶೆಟ್ಟಿ, ಶಿರ್ವ

ದೂರವಾಣಿಯ ವ್ಯಥೆ

ದೂರವಾಣಿಗೆ ಇಂದು ವ್ಯಥೆ
ಯಾರಿಲ್ಲ ಈಗ ಅದರ ಜೊತೆ
ಕೂಡುವ ಧೂಳಿಗಿಲ್ಲ ಕೊರತೆ
ಮುಗಿಯಿತಂತೆ ಅದರ ಕಥೆ

ಮೊಬೈಲು ಈಗ ಎಲ್ಲರ ಜತೆ
ಮೊಬೈಲು ಮೇಲೆ ಎಲ್ಲರ ಮಮತೆ
ಹೊಸ ಹೊಸ ಮಾಡೆಲ್ ಗಳ ಸಂತೆ
ಮೊಬೈಲ್ ಇಲ್ಲದವನಿಗೆ ಇಲ್ಲ ಗೌರವ ಅಂತೆ

ಹುಡಿಗಿಯರ ಅನುರಾಗ ಮೊಬೈಲಿಗೆ
ಹುಡುಗರ ಹುಚ್ಚು ಮೊಬೈಲಿಗೆ
ಜನ ಜನರ ವೋಟು ಮೊಬೈಲಿಗೆ
ಸಿಕ್ಕುವ ಮುತ್ತು , ಪ್ರೀತಿ ಈಗ ಎಲ್ಲ ಮೊಬೈಲಿಗೆ

ದೂರವಾಣಿಯ ಸಮಯ ಮುಗಿದಂತೆ ಈಗ
ದೂರವಾಣಿಗೆ ಕೇವಲ ಮುದಿ ಜನರ ಆಸರೆ ಈಗ
ಅವರೂ ಕೋಪದಿಂದ ಬಡಿಯುತ್ತಾರೆ ಅದಕ್ಕೀಗ
ಅವರಿಗೂ ಬೇಕು ಹೊಸ ಮೊಬೈಲ್ ಈಗ
by  ಹರೀಶ್ ಶೆಟ್ಟಿ, ಶಿರ್ವ

Tuesday, 13 September, 2011

ಸ್ನೇಹ

ನಿನ್ನನ್ನು ಮರೆಯಲು
ನಿನ್ನಿಂದ ದೂರ ಹೋದೆ
ಎಷ್ಟು ದೂರ ಹೋದೇನೋ
ಅಷ್ಟು ನೀ ಹೆಚ್ಚು ನೆನಪಾದೆ

ಪುನಃ ಸೋತು ಕರೆಯುತಿ
ಎಂದು ತುಂಬಾ ಕಾದೆ
ಪ್ರೀತಿ ತುಂಬಿದ ಹೃದಯದ
ಮೇಲೆ ಕುಳಿತು ನೀ ನನ್ನನ್ನು ಪರೀಕ್ಷಿಸಿದೆ

ಕೋಪ ತಾಪ ಮರೆತು
ಸ್ನೇಹವನ್ನು ಹೊರ ತಂದೆ
ಅಹಂ ದೂರ ಮಾಡಿ
ನಾ ಹಿಂತಿರುಗಿ ಓಡಿ ಬಂದೆ
by  ಹರೀಶ್ ಶೆಟ್ಟಿ, ಶಿರ್ವ

Monday, 12 September, 2011

ಪ್ರೀತಿಗಾಗಿ

ಬೇಡ ಪ್ರಿಯೆ ಬೇಡ ಇದು ಸರಿಯಲ್ಲ
ಪ್ರೀತಿಯನ್ನು ಹೀಗೆ ಗೆಲ್ಲುವುದಾದರೆ
ಪ್ರೀತಿ ಮಾಡುವ ಹಕ್ಕು ನಮಗಿಲ್ಲ

ನಮ್ಮ ಪೋಷಕರಾದ ಅವರು ನಮ್ಮನ್ನು
ಪ್ರೀತಿ ಮಮತೆಯಿಂದ ಸಾಕಿದ್ದಾರೆ
ನಮಗಾಗಿ ಹಲವು ಕನಸನ್ನು ಕಂಡು
ನನಾಸಾಗುವುದೆಂದು  ಕಾಯುತ್ತಿದ್ದಾರೆ
ಇನ್ನು ನಾವು ಸುಖವಾಗಿ ಇರುವೆವು
ಎಂಬ ಭವಿಷ್ಯದ ಸುಂದರ ಯೋಚನೆಯಲಿ ಮುಳುಗಿದ್ದಾರೆ 

ಪ್ರೀತಿಗಾಗಿ ತಂದೆಯ ವಾತ್ಸಲ್ಯ, ತಾಯಿಯ
ಮಮತೆಯನ್ನು ಕೊಲ್ಲುವುದು ಸರಿಯಲ್ಲ
ನಮ್ಮ ಮುಂದಿನ ಹೊಸ ಬಾಳಿಗಾಗಿ
ಹಳೆ ಮನೆಯನ್ನು ತ್ಯಜಿಸುವುದು ಸರಿಯಲ್ಲ   
ಅವರ ಕನಸಿನ ದೇವಾಲಯವನ್ನು ಮುರಿದು
ನಮ್ಮ ಪ್ರೀತಿಯ ಅರಮನೆ ಕಟ್ಟುವ ಹಕ್ಕು ನಮಗಿಲ್ಲ

ಬಾ ನಾವು ನಮ್ಮ ಪ್ರೀತಿಯನ್ನು
ಹೃದಯದ ಕೋಣೆಯಲ್ಲಿ ಅಡಗಿಸೋಣ
ತಂದೆ ತಾಯಿಯ ಖುಷಿಗಾಗಿ
ನಾವು ನಮ್ಮ ಪ್ರೀತಿಯ ಬಲಿದಾನ ಮಾಡೋಣ
ಪ್ರೀತಿಯಲಿ ಕಳೆದ ಅಮೋಘ ಕ್ಷಣಗಳ
ನೆನಪಿನೊಂದಿಗೆ ಈ ಜೀವನವನ್ನು ಕಳೆಯೋಣ
by ಹರೀಶ್ ಶೆಟ್ಟಿ, ಶಿರ್ವ      

ಋಣಿ

ನೀ ತೋರಿದ
ಅಪ್ರತಿಮ ಪ್ರೀತಿಗೆ
ನಾ
ಸೋತು ಹೋದೆ
ಸಂಪತ್ತು ಇಲ್ಲದೆ ನಾ
ಆದೆ
ಧಣಿ
ಆದರೆ...
ನಿನ್ನ
ಈ ಪ್ರೀತಿಯ ಉಪಕಾರ
ನಾ ಈಗ ತೀರಿಸಲಾರೆ
ಇನ್ನು ಸದಾ
ನಾ ನಿನ್ನ
ಋಣಿ
by ಹರೀಶ್ ಶೆಟ್ಟಿ, ಶಿರ್ವ

ಹೊಸ ಪೀಳಿಗೆ

ನಾನು ಹೇಳಿದೆ  ಮನಸ್ಸಿಗೆ
ಸ್ವಲ್ಪ ವಿಚಾರ ಮಾಡು ಇನ್ನು
ಪ್ರಪಂಚ ಬದಲಾಗಿದೆ
ನೀನೂ ಬದಲಾಗು ಇನ್ನು

ಮರೆತು ಬಿಡು ಹಳೆ ರೂಡಿ ಪರಂಪರೆಯನ್ನು
ತೆರೆ ಮನಸ್ಸಿನ ಬಾಗಿಲನ್ನು
ನಮ್ಮ ಸಾಕಿದ  ಮಕ್ಕಳವರು
ಅವರ ಒಟ್ಟಿಗೆ ನಡೆ ಇನ್ನು 

ಹಿಂದೆ ಮುಂದೆ ನೋಡು ಸ್ವಲ್ಪ
ತೆರೆ ನಿನ್ನ ಕಣ್ಣು ಇನ್ನು
ನಮ್ಮ ಕರ್ತವ್ಯ ಮುಗಿದಿದೆ
ಹೊಸ ಪೀಳಿಗೆಯಲ್ಲಿ ಸೇರು ಇನ್ನು

ಪ್ರತಿ ಪೀಳಿಗೆ ವಿದ್ರೋಹಿ ಇರುತ್ತದೆ
ಜ್ಞಾಪಿಸಿಕೋ ನಿನ್ನ ಯುವ ವಯಸ್ಸನ್ನು
ಅವರ ರಕ್ತ ಕುದಿಯುವುದು ಸಹಜ
ಅವರ ಕೇಳುವ ಹಕ್ಕನ್ನು ಕೊಡು ಇನ್ನು

ವಿಚಾರದಲ್ಲಿ ಮತ ಬೇದ ಇರುವುದು ಸಹಜ
ಹೊಸ ಪೀಳಿಗೆಯವರೊಂದಿಗೆ ಜಗಳ ನಿಲ್ಲಿಸು ಇನ್ನು
ಜೀವನದ ಚಕ್ರ ಹೀಗೆಯೇ ತಿರುಗಲಿದೆ
ತಿಳಿದುಕೋ ಸೃಷ್ಟಿಯ ಈ ನಿಯಮವನ್ನು

ನಾನು ಹೇಳಿದೆ  ಮನಸ್ಸಿಗೆ
ಸ್ವಲ್ಪ ವಿಚಾರ ಮಾಡು ಇನ್ನು
by  ಹರೀಶ್ ಶೆಟ್ಟಿ, ಶಿರ್ವ

Sunday, 11 September, 2011

ಎಲ್ಲರೂ ಅನನ್ಯ

ನಾನೊಂದು ಗುಲಾಬಿ ಹೂವು
ನನ್ನದೊಂದು ರೂಪ
ನನ್ನದೇ ಒಂದು ಸ್ವರೂಪ
ನನ್ನದೊಂದು ಸುಗಂಧ
ಮಲ್ಲಿಗೆಯ ಪರಿಮಳ ಹರಡು ಎಂದರೆ
ನನ್ನಿಂದ ಸಾಧ್ಯವೇ ?

ನಾನೊಂದು ಸಣ್ಣ ಮೀನು
ನನ್ನದೊಂದು ಆಕಾರ
ನನ್ನದೇ ಒಂದು ಪ್ರಕಾರ
ನನ್ನದೊಂದು ವೇಗ
ದೊಡ್ಡ ಮೀನಿನ ಗತಿಯಿಂದ ಈಜು ಎಂದರೆ
ನನ್ನಿಂದ ಸಾಧ್ಯವೇ ?

ನಾನೊಂದು ಪುಟ್ಟ ಹರಿಯುವ ನದಿ
ನನ್ನದೊಂದು ಪ್ರಯಾಣ
ನನ್ನದೇ ಒಂದು ತಾಣ
ನನ್ನದೊಂದು ಪ್ರವಾಸ
ಸಮುದ್ರದಂತೆ ವಿಶಾಲವಾಗಿ ಹರಿ ಎಂದರೆ
ನನ್ನಿಂದ ಸಾಧ್ಯವೇ ?

ನಾನೊಬ್ಬ ಸಾಧಾರಣ ಕವಿ
ನನ್ನದೊಂದು ಚಿಂತನೆ
ನನ್ನದೇ ಒಂದು ವಿಚಾರ
ನನ್ನದೊಂದು ಶೈಲಿ
ಮಹಾನ ಕವಿಗಳಂತೆ ಬರೆ ಎಂದರೆ
ನನ್ನಿಂದ ಸಾಧ್ಯವೇ ?

ಎಲ್ಲರ ಬೇರೆ ಬೇರೆ ಉದ್ದೇಶ 
ಹಲವು ತರಹದ ಸನ್ನಿವೇಶ
ಅವರವರ ಗುಣ, ಸಾಮರ್ಥ್ಯ
ಎಲ್ಲವೂ ಉತ್ತಮ, ಗಣ್ಯ
ಎಲ್ಲವೂ, ಎಲ್ಲರೂ ಅನನ್ಯ 
by ಹರೀಶ್ ಶೆಟ್ಟಿ, ಶಿರ್ವ

Friday, 9 September, 2011

ಪೋಸ್ಟ್ ಮ್ಯಾನ್

ಕೇಳಿದೆ ನಾ ಪೋಸ್ಟ್ ಮ್ಯಾನ್ ನಿಗೆ
"ನಿನ್ನ ಉಪಕಾರ ಯಾರೂ ಮರೆಯಲಾರರು
ನಿನ್ನ ಕೆಲಸ ಯಾರೂ ಮಾಡಲಾರರು
ನಿನಗಾಗಿ ಜನರೆಲ್ಲಾ  ಕಾಯುತ್ತಿದ್ದರು
ನಿನ್ನನ್ನು ಮನೆಯ ಸದಸ್ಯನಂತೆ ಕಾಣುತ್ತಿದ್ದರು
ನೀನು ತಂದ ಪತ್ರವನ್ನು ಓದಿ ನಗುತ್ತಿದ್ದರು, ಅಳುತ್ತಿದ್ದರು
ಓದಲು ಬರದವರು ನಿನ್ನಿಂದ ಓದಿಸುತ್ತಿದ್ದರು 
ಸುಖ ದುಃಖವನ್ನು ಹಂಚುವ ನೀನು ಎಲ್ಲಿ ಕಣ್ಮರೆಯಾಗಿದೆ
ಈಗ ನಿನ್ನನ್ನು ಕಾಣುವುದೇ ಅಪರೂಪ ಆಗಿದೆ
ಏನು ಕಾರಣ ಇದರ ಹಿಂದೆ"

ಪೋಸ್ಟ್ ಮ್ಯಾನ್ ಹೇಳಿದ ನಕ್ಕು
"ಪ್ರಪಂಚದ ಗತಿ ವೇಗವಾಗಿದೆ
ನನ್ನ ಕಣ್ಮರೆಯಾಗುವುದಕ್ಕೆ ಇದೆ ಕಾರಣವಾಗಿದೆ
ಹೋಗಲಿ ಬಿಡು ಇದನೆಲ್ಲ
ಇದರಿಂದ ಕಲಿಯಲಿದೆ ಶಿಕ್ಷಣೆ ನಮಗೆಲ್ಲ
ಜೀವನದಲ್ಲಿ ಬದಲಾವಣೆ ಆಗುವುದು ಸಹಜ
ಕಾಲ ಬದಲಾದಂತೆ ಬದಲಾಗುತ್ತಾನೆ ಮನುಜ
ಆ ಸಮಯದ ಜನರಿಗೆ ಪತ್ರವೇ ಮಜಾ
ಈಗಿನ ಮಕ್ಕಳಿಗೆ ಪತ್ರ ಬರೆಯುದೆಂದರೆ ಆಗಿದೆ ಸಜಾ
ಸಮಯ ಬದಲಾಗಿದೆ
ಜನರಲ್ಲಿ ಸಮಯ ಇಲ್ಲದಾಗಿದೆ
ಮೊಬೈಲ್ , ಎಸ್ ಎಂ ಎಸ್ ಗಳ ಚಲನವಾಗಿದೆ
ಇಂಟರ್ನೆಟ್, ಇಮೇಲ್ ಗಳ ರಾಜ್ಯವಾಗಿದೆ
ಜನರು ಪತ್ರ ಬರೆಯುವುದೇ ಅಪರೂಪವಾಗಿದೆ"
by ಹರೀಶ್ ಶೆಟ್ಟಿ, ಶಿರ್ವ 

ವಾರ್ತಾ ದಿನ ಪತ್ರಿಕೆಯ ಜ್ಞಾನ

ಕೇಳಿದೆ ನಾ ವಾರ್ತಾ ದಿನ ಪತ್ರಿಕೆಗೆ
"ದಿನಾಲೂ ಮುಂಜಾನೆ ಜನರು ನಿನ್ನನ್ನು ಕಾಯುತ್ತಾರೆ
ನಿನ್ನನ್ನು ಓದಿ ದೇಶ ವಿದೇಶದ ಸುದ್ದಿಯನ್ನು ತಿಳಿಯುತ್ತಾರೆ 
ಆದರೆ ಸಂಜೆ ಆದಾಗಲೇ ನಿನ್ನನ್ನು ಅಲ್ಲಿ ಇಲ್ಲಿ ಬಿಸಾಕಿ ಬಿಡುತ್ತಾರೆ 
ನಂತರ ನಿನ್ನನ್ನು ಗುಜರಿ ಅಂಗಡಿಯಲ್ಲಿ ಮಾರಿ ಬಿಡುತ್ತಾರೆ
ನಿನಗಿಲ್ಲವೇ ಬೇಸರ ?
ಏನು ನಿನ್ನ ಅಪೇಕ್ಷೆ ?
ಏಕೆ ನಿನಗೆ ಈ ಶಿಕ್ಷೆ ?

ವಾರ್ತಾ ದಿನ ಪತ್ರಿಕೆ ಹೇಳಿತು ನಕ್ಕು
"ನನಗಿಲ್ಲ ಏನೂ ಅಪೇಕ್ಷೆ,
ಇದರಲ್ಲಿ ಎಂಥ ಶಿಕ್ಷೆ
ಯಾರೂ ಅಳಿಸಲಾರರು ನನ್ನಲ್ಲಿ ಮುದ್ರಿಸಿದ ಅಕ್ಷರವನ್ನ
ಯಾರೂ ಕೊಡಲಾರರು ನಾ ಕೊಡುವ ಜ್ಞಾನವನ್ನ
ಜನರು ಗುಜರಿ ಅಂಗಡಿಗೆ ಸೇರಿಸಿ ಬಿಡುತ್ತಾರೆ ನನ್ನನ್ನ
ಇದರಿಂದ ತಿಳಿದುಕೋ ನೀ ಒಂದು ಜ್ಞಾನದ ಮಾತನ್ನ
ಏನು ಮಾಡುವಿ ಪಡೆದು ರೂಪ ರಂಗ ಸೌಂದರ್ಯವನ್ನ
ಸೌಂದರ್ಯ ಯೌವನ ರಚಿಸದು ನಿನ್ನ ಜೀವನವನ್ನ   
ಈಗಲೇ ಕಾಪಾಡಿಕೋ ನಿನ್ನ ಅಂತ್ಯ ಸಮಯವನ್ನ
ನನ್ನಂತೆ ಮಾಡಿಕೋ ಸರಳ ನಿನ್ನ ಮನಸ್ಸನ್ನ
ಸುಖ ದುಃಖ ಜ್ಞಾನವನ್ನು ಹಂಚಿ ಪಡೆ ಸಂತೋಷವನ್ನ
ಮಾಡು ಸಾರ್ಥಕ ನಿನ್ನ ಜೀವನವನ್ನ"  
by ಹರೀಶ್ ಶೆಟ್ಟಿ, ಶಿರ್ವ

Thursday, 8 September, 2011

ಇದು ಮನೆಯೇ ?

ಇದು ಮನೆಯೇ ?
ನಾಲ್ಕು ಗೋಡೆಗಳ
ಎರಡು ಕಿಡಕಿಗಳ
ಒಂದು ಬಾಗಿಲಿನ

ಇದು ಮನೆಯೇ ?
ಎರಡು ಜೀವಗಳ
ಬೇರೆ ಬೇರೆ ನೀತಿಗಳ
ಪ್ರತ್ಯೇಕ ವ್ಯವಾಹಾರಗಳ

ಇದು ಮನೆಯೇ ?
ಅಸ್ವಾಭಾವಿಕ ಏಕಾಂತಗಳ
ಭಯಾನಕ ಮೌನಗಳ
ಕತ್ತೆಲೆಯ ಕೋಣೆಗಳ

ಇದು ಮನೆಯೇ ?
ಹೊರಗಿನ ಊಟಗಳ
ಉರಿಯದ ಒಲೆಗಳ
ತೀರದ ಹಸಿವೆಗಳ

ಇದು ಮನೆಯೇ ?
ಪ್ರೀತಿ ಇಲ್ಲದ ಹೃದಯಗಳ
ಸುಳ್ಳು ಅನುಮಾನಗಳ
ಮುಗಿಯದ ಅಹಂಕಾರಗಳ

ಇದು ಮನೆಯೇ ?
ಕರುಣೆ  ಇಲ್ಲದ  ಮನಸ್ಸುಗಳ
ರೋಗಿ ಶರೀರಗಳ
ಅತೃಪ್ತ ಆತ್ಮಗಳ
by  ಹರೀಶ್ ಶೆಟ್ಟಿ, ಶಿರ್ವ

Wednesday, 7 September, 2011

ನಿರೀಕ್ಷೆ

ಆಸೆಯಿಂದ
ನಿನ್ನನ್ನು  ನಿರೀಕ್ಷಿಸುತ 
ಸಂಜೆಯ ಕಳೆದೆ
ಅಳು ಬರದೆ
ಸೋತು
ಜೋರಾಗಿ
ನಕ್ಕು ಬಿಟ್ಟೆ

ಆಶ್ಚರ್ಯದಿಂದ
ನನ್ನನ್ನು ಎಲ್ಲರು
ನೋಡಲಾರಂಬಿಸಿದರು
ನಾಚಿಗೆಯಿಂದ
ನಾ ಅಲ್ಲಿಂದ
ಬೇಗ ಬೇಗನೆ
ಜಾಗ ಬಿಟ್ಟೆ  
by ಹರೀಶ್ ಶೆಟ್ಟಿ, ಶಿರ್ವ 

ಬಾಂಬ್ ಸ್ಪೋಟ

ಇನ್ನೊಂದು ಬಾಂಬ್ ಸ್ಪೋಟ
ಮುಗಿಯಿತು ಇನ್ನೊಂದು ಸಂಸಾರದ ಆಟ

ಕಷ್ಟದಿಂದ ಕಲಿತು ವಕೀಲನಾದ ಅವನು
ತಂದೆ ತಾಯಿಯ ಆಶಿರ್ವಾದ ಪಡೆದ ಅವನು
ಪ್ರಥಮ ಕೇಸಿಗಾಗಿ ಹೊರಟ ಅವನು
ಹಾಯ್ ಕೋರ್ಟ್ ಗೆ ಕಾಲಿಟ್ಟ ಅವನು
ಜೀವನದ ಕೇಸೇ ಸೋತ ಅವನು

ಸಾಕಿ ಬೆಳೆಸಿದ ಮಗ ಇನ್ನೂ ಇಲ್ಲ
ತಂದೆ ತಾಯಿಯ ಕರುಳು ಇನ್ನಿಲ್ಲ
ಅವರ ದುಃಖಕ್ಕೆ ಮಿತಿ ಇಲ್ಲ
ಸಿಗುವ ಸರಕಾರದ ಹಣ ಬೇಕಿಲ್ಲ
ಅವರಿಗೆ ಅವರ ಮಗ ಬೇಕು ಬೇರೇನಿಲ್ಲ

ಜೀವನ ಒಂದು ಜೂಜಿನ ಆಟವಾಗಿದೆ
ಮನುಷ್ಯನ ಜೀವನಕ್ಕೆ ಮೌಲ್ಯವಿಲ್ಲದಾಗಿದೆ
ಅಲ್ಲಲ್ಲಿ ಬಿದ್ದು ಸಾಯುವವರ ಸಂಖ್ಯ ಹೆಚ್ಚಾಗಿದೆ
ಭ್ರಷ್ಟಾಚಾರದ ಹಾಸಿಗೆಯಲಿ ಸರಕಾರ ಮಲಗಿದೆ
ಪೋಲೀಸರ ಕೆಲಸ ಲಂಚದ ಹೊಟ್ಟೆಯ ಪಾಲಾಗಿದೆ
by  ಹರೀಶ್ ಶೆಟ್ಟಿ . ಶಿರ್ವ

Tuesday, 6 September, 2011

ಸಮಯ

ಅವನಲ್ಲಿ ದೋಷ ಕಾಣುವುದೇ ?
ಅವನು ಗತದಲಿ
ಮಾಡಿದ
ಉಪಕಾರ
ನೆನಪಿಲ್ಲವೇ

ಹೂವು ತನ್ನ ಸುಗಂಧ ಬಿಡುವುದೇ?
ಅವನು ನೀಡಿದ
ಭರವಸೆಯ
ಸುಗಂಧದ ಪರಿಮಳ
ನೆನಪಿಲ್ಲವೇ

ಕಷ್ಟ ಸಮಯ ಇಷ್ಟು ಬೇಗ ಮರೆಯುವುದೇ ?
ನಮ್ಮ
ಕಷ್ಟದಲಿ ಸಹಾಯ ಮಾಡಿದ
ಆತನ
ಉದಾರ ಹೃದಯವನ್ನು
ಕೆಣಕುವುದೇ

ಒಳ್ಳೆ ಸಮಯ ಸದಾ ಉಳಿಯುವುದೇ ?
ಅವನ
ಒಳ್ಳೆ ಸಮಯದಲಿ
ನಮ್ಮ ದುಃಖವನ್ನು ಅಳಿಸಿ
ಸುಖ ಕೊಟ್ಟ
ಆ ಮಹಾನುಭಾವನಿಗೆ
ಕಷ್ಟ ಬಂದಾಗ
ನಾವು ಮುಖ ತಿರುಗಿಸುವುದೇ

ಉಪಕಾರ ಮಾಡಿದವರ ಋಣ ತೀರಿಸುವುದು ಬೇಡವೇ ?
ಉಪಕಾರ ಮಾಡಿದವರಿಗೆ
ಈ ತರಹ
ಅಪಕಾರ ಮಾಡುವುದು
ಸರಿಯೇ?

by ಹರೀಶ್ ಶೆಟ್ಟಿ, ಶಿರ್ವ

ಸೋತ ಪ್ರೇಮ

ಮನೆಯ ಬಿಟ್ಟು ಏನು ಮಾಡಲಿ
ಸಂಜೆಯ ಸಮಯ ಪ್ರಯಾಣ ಮಾಡಿ ಏನು ಮಾಡಲಿ

ನಿನಗೆ ಬಿಡುವಿಲ್ಲವೆಂದು ಅರಿಯುವೆ
ನಾ ಬರುವೆನೆಂದು ಮಾಹಿತಿ ಕೊಟ್ಟು ಏನು ಮಾಡಲಿ 

ನಕ್ಷತ್ರಗಳೇ  ಹೊಂದಿ ಬರುವುದಿಲ್ಲ
ಗಳಿಸಿ ಸೂರ್ಯ ಚಂದ್ರವನ್ನು ಏನು ಮಾಡಲಿ

ಆ ಪ್ರಯಾಣಿಕನಿಗೆ  ಬಿಸಿಲಿನ ಹುಚ್ಚು
ನೆರಳನ್ನು ನೀಡುವ ಮರವನ್ನು ಏನು ಮಾಡಲಿ

ಧೂಳು ಆರಂಭ ಹಾಗು ಅಂತ್ಯವಾಗಿದೆ
ಕಣಗಳ ಆಭರಣಗಳನ್ನು ಮಾಡಿ ಏನು ಮಾಡಲಿ

ತನ್ನ ಮಾರ್ಗವನ್ನು ಮೊದಲೇ ನಿರ್ಧರಿಸಿದೆ ನೀ
ನಿನ್ನ ಹೃದಯದಲ್ಲಿ ಮನೆ ಮಾಡಿ ಏನು ಮಾಡಲಿ

ಪ್ರೀತಿಯು ಎಲ್ಲ ಶಿಷ್ಟಾಚಾರಗಳನ್ನು ಕಲಿಸಿತು
ಸುಂದರಿಯರೊಂದಿಗೆ  ಕೌಶಲ್ಯ ತೋರಿಸಿ ಏನು ಮಾಡಲಿ
(ಪರ್ವೀನ್ ಶಕೀರ್ ಅವರ ಉರ್ದು ಕವಿತೆಯಿಂದ)
by  ಹರೀಶ್ ಶೆಟ್ಟಿ , ಶಿರ್ವ

Monday, 5 September, 2011

ಗುರುಗಳ ಉಪಕಾರ

ನಂಬಿದೆ ನಾ ನನ್ನ ಗುರುಗಳನ್ನ
ಅನುಸರಿಸಿದೆ ಅವರು ಕೊಟ್ಟ ಶಿಕ್ಷಣೆಗಳನ್ನ
ತಿಳಿಸಿದರು ಸತ್ಯ ಸುಳ್ಳಿನ ಭೇದವನ್ನ
ತೋರಿಸಿದರು ಸುಕರ್ಮದ ಹಾದಿಯನ್ನ
ತಿದ್ದಿದರು ನಾ ಮಾಡಿದ ತಪ್ಪನ್ನ

ಗುರುಗಳ ರೂಪದಲ್ಲಿ ಕಂಡೆ ನಾ ತಾಯಿಯನ್ನ
ಗುರುಕುಲದಲ್ಲಿ ಕಂಡೆ ನಾ ನನ್ನ ಮನೆಯನ್ನ
ಮರೆಯಲಾರೆ ಜ್ಞಾನ ಕೊಟ್ಟ ಆ ದೇವರನ್ನ

ನೆನಪಿಸುವೆ ಅವರು ಕೊಟ್ಟ ಪೆಟ್ಟಿನ ಪ್ರಸಾದವನ್ನ
ನುಡಿಯುವೆ ಅವರು ನುಡಿದ ಮಾತನ್ನ
ಪಾಲಿಸುವೆ ಅವರು ಕೊಟ್ಟ ವಿದ್ಯದಾನವನ್ನ

ಶಿಲ್ಪಿಯಾಗಿ ರಚಿಸಿದರು ನನ್ನ ಜೀವನವನ್ನ
ತೋರಿಸಿ ಕೊಟ್ಟರು ಕೇವಲ ಸತ್ಯದ ಮಾರ್ಗವನ್ನ
ನೆನೆಯುವೆ ಸದಾ ನಿಮ್ಮ ಉಪಕಾರವನ್ನ
ಸ್ವೀಕರಿಸಿ ಗುರುಗಳೇ ನನ್ನ  ಕೋಟಿ ಕೋಟಿ ನಮನವನ್ನ
ಹೇಗೆ ತೀರಿಸಲಿ ನೀವು ಮಾಡಿದ ತ್ಯಾಗದ ಗುರುದಕ್ಷಿಣೆಯನ್ನ
by  ಹರೀಶ್ ಶೆಟ್ಟಿ, ಶಿರ್ವ

Sunday, 4 September, 2011

ದೇವರ ಮಕ್ಕಳು

ಅವಳು ಅವಳ ಯೌವನದಲ್ಲಿದ್ದಳು
ಬಾಲಕಿಯಿಂದ ಹೆಣ್ಣಾದಳು 
ಸುಂದರ ರೂಪ ,ಉದ್ದ ಕೇಶ ,ಅದ್ಭುತ ಕಂಗಳು

ಆದರೆ ಅವಳು ಈಗಲೂ ಪುಟ್ಟ ಮಕ್ಕಳಂತೆ
ಬುದ್ದಿ ಬೆಳೆಯದೆ ಅವಳೊಂದು ಮಗುವಿನಂತೆ
ಅವಳಿಗಿಲ್ಲ ಯಾವುದೇ ಭಯ ,ಚಿಂತೆ

ಸದಾ ಅವಳ ತುಟಿಯಲ್ಲಿ ಮುಗ್ದ ನಗೆ
ಅವಳೆಂದರೆ ತುಂಬಾ ಇಷ್ಟ ನನಗೆ
ಅವಳಿಗೂ ತುಂಬಾ ಪ್ರೀತಿ ನನ್ನ ಬಗೆ

ಅವಳಿಗಿಷ್ಟ ನನ್ನನ್ನು ನೋಡಿ ಕೀಟಲೆ ಮಾಡುವುದು
ಜೋರಾಗಿ ಕೂಗಿ ಕರೆಯುವುದು
ಚಪ್ಪಾಳೆ ತಟ್ಟಿ ಕಿಲಕಿಲನೆ ನಗುವುದು

ನನ್ನ ಹೃದಯ ಅಳುತ್ತಿತ್ತು ನೋಡಿ ಅವಳನ್ನು
ನೋವಾಗುತ್ತಿತ್ತು ಕಂಡು ಅವಳ ಮುಗ್ದತೆಯನ್ನು 
ಜೀವನ ಕಳೆಯುತ್ತಿದ್ದಳು ಅವಳು ಮರೆತು ಜೀವನವನ್ನು

ಅವಳ ತಂದೆ ತಾಯಿಯವರು ಅವಳ ಬಾಳಿನ ದೇವರು
ಅವಳಿಗಾಗಿಯೇ ಜೀವಿಸುತ್ತಿದ್ದರು ಅವರಿಬ್ಬರೂ
ಮಮತೆ, ವಾತ್ಸಲ್ಯದಿಂದ ಅವಳನ್ನು ಸಾಕುತ್ತಿದ್ದರು

ಇವಳಂತ ಮಕ್ಕಳಿಗೆ  ಕನಸ್ಸಿಲ್ಲವೇ ?
ಇವಳಂತ ಮಕ್ಕಳಿಗೆ ಮನಸ್ಸಿಲ್ಲವೇ?
ಇವಳಂತ ಮಕ್ಕಳಿಗೆ ಯಾಕೆ ಈ ಶಿಕ್ಷೆ ?

ನನ್ನ ದೇವರಲ್ಲಿ ಒಂದೇ ಬೇಡಿಕೆ
ಕೊಡ ಬೇಡ ಇಂತಃ ಕಷ್ಟ ಯಾರಿಗೂ 
ಬುದ್ದಿ, ವಿಧ್ಯಾ ಕೊಟ್ಟು ಕಾಪಾಡು ಎಲ್ಲಾ ಮಕ್ಕಳಿಗೂ
by ಹರೀಶ್ ಶೆಟ್ಟಿ, ಶಿರ್ವ

Saturday, 3 September, 2011

ಹೊಸ ಜೀವನ

ಮನಸ್ಸಲಿ ತಂಗಾಳಿ ಬೀಸಿದಂತಾಯಿತು
ಹೊಸ ಜೀವನದ ಶುಭಾರಂಭವಾಯಿತು

ಅಂಧಕಾರದಲ್ಲಿತ್ತು ನನ್ನ ಜೀವನ
ಕಣ್ಣಿರಿನಿಂದ ಕರಗುತ್ತಿತ್ತು ನನ್ನ ಯೌವನ
ಎಲ್ಲ ದ್ವಾರ ಮುಚ್ಚಿ ಹೋಗಿತ್ತು ನನ್ನ ಬದುಕಿನ

ಸೋತು ಹೋಗಿದೆ ಮನಸ್ಸು ನೊಂದು ನೊಂದು
ಅರಳಿತು ಆಸೆ ಆಕಾಂಕ್ಷೆಯ ಹೂವೊಂದು  
ಅವನು ದೇವರಂತೆ ನನ್ನ ಜೀವನದಲ್ಲಿ ಬಂದು

ಭಯ ,ಶಂಕೆ, ಹರ್ಷದ ಭಾವನೆ ಮನಸ್ಸಲಿ
ಕಾಲಿಟ್ಟೆ ಭಕ್ತಿಯಿಂದ ಅವನ ಮನೆಯ ಬಾಗಿಲಲಿ
ಪಡೆದೆ ಆಶೀರ್ವಾದ ನನ್ನ ಬಾಳಿನ ದೇವರಲಿ

ಮರೆಯುವೆ ಇನ್ನೂ ಕಳೆದ ದಿವಸಗಳ
ಒಬ್ಬಂಟಿಯಾಗಿ ಬದುಕಿ ಪಡೆದ ಕಷ್ಟಗಳ
ವಿಧವೆ ಎಂಬ ನೋವು ತರುವ ಕರೆಗಳ 

ಕನಸುಗಳೆಲ್ಲ ಪುನರ್ಜೀವಿತ ಆಯಿತು
ಬದುಕು ಒಂದು ಹಾದಿಗೆ ತಲುಪಿತು
ಹೊಸ ಜೀವನದ ಶುಭಾರಂಭವಾಯಿತು
by ಹರೀಶ್ ಶೆಟ್ಟಿ, ಶಿರ್ವ

Friday, 2 September, 2011

ವಿಧವೆ

ಬಿಟ್ಟು ಹೋದ ಜೀವನದಲ್ಲಿ ಕತ್ತಲೆಯನ್ನು
ಕುಂಕುಮವ ಒರಸಿ ಬತ್ತಲೆ ಹಣೆಯನ್ನು
ಎಲ್ಲ ಬಣ್ಣವ ಕಸಿದು ಬಣ್ಣರಹಿತ ಶ್ವೇತವನ್ನು

ಕಣ್ಣಿರಿಲ್ಲದೆ ಬತ್ತಿ ಹೋದ ಕಂಗಳನ್ನು
ತುಂಡು ತುಂಡಾಗಿ ಅಳುತ್ತಿದ್ದ ಬಳೆಗಳನ್ನು
ಕೊನೆ ಉಸಿರೆಳೆದು ಮುರಿಯುವ ಕನಸನ್ನು

ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂಬಂಧಿಕರನ್ನು
ಸಾಂತ್ವನ ಕೊಟ್ಟು ಮರೆಯಾಗುವ ಗೆಳೆಯರನ್ನು
ದೂರ ಸರಿಸಿ ತನ್ನ ಪಾಡಿಗೆ ಹೋಗುವ ಜನರನ್ನು

ಈಗ ನಾನು ಏಕಾಂಕಿ
ಕಾಣದಾಗಿದೆ ಜೀವನದ ಹಾದಿ
ಹೇಳಲಿಕ್ಕೆ ಜಗವೆಲ್ಲ ನಮ್ಮವೇ
ಸಾಗಿಸುತ್ತಿದ್ದೇನೆ  ಜೀವನ ಒಬ್ಬಳೇ
ದುಷ್ಟ ಸಭ್ಯ ಜನರಿಂದ ಕಾಪಾಡುತ್ತಿದ್ದೇನೆ ನನ್ನ ಮಾನ 
ಬೆತ್ತಲೆ  ಸಮಾಜದಲ್ಲಿ ನನ್ನಂತ ವಿಧವೆಗೆ ಇಲ್ಲ ಸ್ಥಾನ  
by ಹರೀಶ್ ಶೆಟ್ಟಿ, ಶಿರ್ವ

Thursday, 1 September, 2011

ಗಣಪ ನನಗೆ ಲಡ್ಡು ಕೊಡು

ಗಣಪ ನನಗೆ ಲಡ್ಡು ಕೊಡು
ಲಡ್ಡು  ಕೊಡು ಲಡ್ಡು  ಕೊಡು

ಒಂದಲ್ಲ ಎರಡು ಕೊಡು
ಲಡ್ಡು ಕೊಡು ಲಡ್ಡು ಕೊಡು

ಮೂಷಕನಿಗೂ ಒಂದು ಕೊಡು
ಲಡ್ಡು ಕೊಡು ಲಡ್ಡು ಕೊಡು

ಬೇರೆಲ್ಲ ತಿಂಡಿ ನೀನೇ ಇಡು
ಲಡ್ಡು ಕೊಡು ಲಡ್ಡು ಕೊಡು

ಎಲ್ಲ ಲಡ್ಡು ನನಗೆ ಬಿಡು
ಲಡ್ಡು ಕೊಡು ಲಡ್ಡು ಕೊಡು 

ಗಣಪ ನನಗೆ ಲಡ್ಡು ಕೊಡು
ಲಡ್ಡು  ಕೊಡು ಲಡ್ಡು  ಕೊಡು
by ಹರೀಶ್ ಶೆಟ್ಟಿ, ಶಿರ್ವ